ಸೂರ್ಯ ಕೀರ್ತಿ
೧.
ಮುಂಜಾನೆ ಕುಡಿದು ಬಿದ್ದ
ಎಲೆಗಳಿಗೆ ತಮ್ಮ ಮನೆಗಳು ತಿಳಿದಿಲ್ಲ
ರುಚಿಯಿರದ ಮಳೆಗೆ ಬಾಯಿ ತೆರೆದು
ನಿಂತ ಚಾತಕಪಕ್ಷಿಗಳಿಗೆ ಜೋತಿಷ್ಯ ಗೊತ್ತಿಲ್ಲ!
ಮೊಗ್ಗುಗಳಾದ ಪಾರಿಜಾತದ ಹೂಗಳು
ಬಾಯಿಬೀರಿದು ತಣ್ಣನೆಯ ರಾತ್ರಿಗಾಗಿ
ಕಾಯುತಿವೆ!
ಹರಿಯುವ ನದಿಗಳ ಕಾಲುಗಳು ಕೈಗೆ ಬಾಯಿಗೆ
ಸಿಗದೆ ಓಡಾಡುತಿವೆ, ಅತ್ತಿಂದಿತ್ತ ಇತ್ತಿಂದತ್ತ!
ಎಲ್ಲೆಲೋ ಮಧುಪಾನವ ಸವಿದ ಕೋಗಿಲೆಗಳು
ಹಾಡುತಿವೆ ಸೋಬಾನೆ ಪದವ,
ಇಕೋ ಈ ಕಡೆ ಗಿಳಿಗಳ ಹಿಂಡು ಮೆಲ್ಲುತಿವೆ
ರಾಗಿ,ಜೋಳದ ತೆನೆಗಳ.

ಕುಡಿಯುವುದೊಂದಿದೆಯಲ್ಲ ಪ್ರೀತಿಯೆಂಬ
ಹೂವು ಅರಳದವರೆಗೂ ವೈನೂ ಕೂಡಾ
ಕಲ್ಮಶದ ನೀರು!
ಉಗಿದಷ್ಟು ಪ್ರೇಮದ ಬುಗ್ಗೆ ಆಗಾಗ
ಕುಡಿಸುತ್ತದೆ ಒಂದಿಷ್ಟು ನೀರು ಮತ್ತು ಪ್ರೀತಿ!
೨.
ಆ ಊರಿನ ಹುಡುಗಿಯರೆಲ್ಲರೂ
ಕುಡಿದು ಕುಣಿಯುತ್ತಾರೆ
ಆದರೆ; ಈ ಊರಿನ ಹುಡುಗರೆಲ್ಲ
ಸುರಪಾನ, ಮದ್ಯಪಾನದ ದಾಸರಾಗಿ ಜೂಜಾಡುತ್ತಾರೆ ತಮ್ಮ ಮಕ್ಕಳು , ಹೆಂಡಿರ
ಮಾರುತ್ತಾರೆ!
ದಾರಿ ದಾರಿಯುದ್ದಕ್ಕೂ ಕುಡಿಯುತ್ತಾರೆ
ಕಂಠ ಹರಿದು ಊರ್ಬಾಗಿಲು ಆಗುವಂತೆ,
ಇನ್ನು ಕುಡಿಯುತ್ತಾರೆ
ಧರ್ಮದ ಅಮಲು ಮತ್ತು ಅಫೀಮು!

ಕುಡಿಯುವುದು ಹಕ್ಕಿಯ ಹಾಡಿಗೆ ಸ್ಪಂದಿಸುವುದಿಲ್ಲ ನಿಜ, ಆದರೆ ಹಾಡುವ ಹಕ್ಕಿಯ ಕತ್ತನ್ನು
ಹಿಸುಕಬಾರದು!
ಕುಡಿಯುತ್ತಾರೆ ಕುಡಿಯುತ್ತಲೇ ಇರುತ್ತಾರೆ
ಆಗಾಗ ಬೇಕಾದ ಧರ್ಮದ
ರಕ್ತರಸವನ್ನೋ ಅಥವಾ ಕೊಲ್ಲುವ
ರಾಮರಸವನ್ನೋ ಯಾರಿಗೂ ಕಾಣದಂತೆ
ಕುಡಿಸುತ್ತಾರೆ, ಕುಡಿಯುತ್ತಾರೆ!
ಏನೇನೋ ಕುಡಿದ ಈ ದೇಹಕ್ಕೆ ಪ್ರೀತಿ ರಸವೇ
ಸೇರುವುದಿಲ್ಲ,
ಸೇರುವುದಾದರೆ ಮತ್ತೊಬ್ಬರನ್ನು ಹಿಂಸಿಸುವ
ದ್ವೇಷಿಸುವ, ಸಾಯಿಸುವ
ಮಜ್ಜೆಮಾಂಸಗಳ ಕಡೆದು ಕುದಿಸಿ
ಕುಡಿಯುತಿದ್ದಾರೆ ರಕ್ತ ವೈನೂಗಳ!





ಚೆನ್ನಾಗಿದೆ