ದಿ ಇನ್ ಫೇಮಸ್ ಮ್ಯಾನ್

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

“ನೀವು ಜನಪ್ರಿಯರಾದಷ್ಟು ಜನರಿಗೆ ಹತ್ತಿರವಾಗುತ್ತೀರಿ ಮತ್ತು ಜನರಿಂದ ಅಷ್ಟೇ ದೂರಾಗುತ್ತೀರಿ ” ಎಂದು ಆ ಅಜ್ಜಿ, ನಾನು ಈ ವ್ಯಕ್ತಿಯ ಬಳಿ ಬರುವ ಮುಂಚೆ ಹೇಳಿ ಕಳಿಸಿದ್ದು ಯಾಕೆ ಎಂದು ಇನ್ನೂ ಸ್ಪಷ್ಟವಾಗಿರಲಿಲ್ಲ. ಆತನಿಗೆ ಸುಮಾರು ಎಪ್ಪತ್ತು ವರ್ಷವಾಗಿರಬಹುದು. ಆತನ ಸಂದರ್ಶನಕ್ಕಾಗಿ ನಾನು ಖರ್ಚು ಮಾಡಿದ್ದ ಸಮಯ ಮತ್ತು ಹಣ ಅಷ್ಟಿಷ್ಟಲ್ಲ. ಕಳೆದ ನಲವತ್ತು ವರ್ಷಗಳಿಂದ ಆತನನ್ನು ಹುಡುಕಿ ನನ್ನ ಹಾಗೆಯೇ ಅದೆಷ್ಟು ಜನ ಅಲೆದಿದ್ದರೋ ಲೆಕ್ಖವಿಲ್ಲ. ಯಾರಿಗೂ ಆತ ಎಲ್ಲಿದ್ದಾನೆಂಬುದೇ ತಿಳಿದಿರಲಿಲ್ಲ.‌ ಆದರೂ ಅವನ ಬಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಆಗಾಗ ಸುದ್ದಿಗಳು ಬಿತ್ತರವಾಗುತ್ತಲೇ ಇರುತ್ತಿದ್ದವು. ಕಳೆದ ನಲವತ್ತು ವರ್ಷಗಳಿಂದ ಈತ ಸುದ್ದಿಯಲ್ಲಿದ್ದನಾದರೂ ಅವನೆಲ್ಲಿದ್ದಾನೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೂ ಅವನ‌ ಬಗ್ಗೆ ಆಗಾಗ ಸುದ್ದಿ ಮಾಡಲು ಇದ್ದ ಕಾರಣ ವಿಚಿತ್ರವಾದುದು. 

ಸುಮಾರು ನಲವತ್ತು ವರ್ಷಗಳ ಹಿಂದೆ ಅವನು ತನ್ನ ಯವ್ವನದ ದಿನಗಳಲ್ಲಿ ಸುದ್ದಿಯಾಗಿ ಜನಪ್ರಿಯನಾದದ್ದು ತನ್ನಲ್ಲಿದ್ದ ಒಂದು ವಿಶೇಷ ನ್ಯೂನತೆಯಿಂದಾಗಿ. ಅದೇನೆಂದರೆ, ಇದ್ದಕ್ಕಿದ್ದಂತೆ ಒಂದು ದಿನ ಬೆಳಗ್ಗೆ ಎದ್ದುವನು ತನ್ನ ಅಮ್ಮನನ್ನು ‘ನೀನು ಯಾರು ?’ ಎಂದು ಕೇಳಿದ. ಅದು ತಮಾಷೆಯಾಗಿರದೆ ಮರು ದಿನ ಅಪ್ಪನನ್ನು ‘ನೀನು ಯಾರು ?’ ಎಂದು ಕೇಳಿದ. ಎರಡೇ ದಿನಕ್ಕೆ ಅಪ್ಪ ಅಮ್ಮ ಇಬ್ಬರೂ ಅವನ ಸ್ಮೃತಿಯಲ್ಲಿ ಇಲ್ಲದಾಗಿದ್ದರು. ಯಾರು ಎಷ್ಟೇ ತಿಳಿಸಿ ಹೇಳಿದರೂ ಅವನು ಮರೆತವರ ಬಗ್ಗೆ ಅವನಿಗೆ ಏನೊಂದೂ ನೆನಪಿಗೆ ಬರುತ್ತಿರಲಿಲ್ಲ.

ಅಪ್ಪ, ಅಮ್ಮಂದಿರನ್ನು ಎರಡು ದಿನಕ್ಕೆ ಮರೆತ ಅವನದ್ದೇನು ಜಾಣ ಮರೆವೋ  ಅಥವಾ ವೈರಾಗ್ಯವೋ ಆಗಿರಲಿಲ್ಲ. ಬದಲಿಗೆ ಆ ನಂತರ ಅವನು ಪ್ರತೀ ದಿನಕ್ಕೆ ಒಬ್ಬರನ್ನು ಮರೆಯುತ್ತಾ ಹೋಗ ತೊಡಗಿದ. ಆಶ್ಚರ್ಯವೆಂದರೆ ಪ್ರತೀ ದಿನವೂ ಒಬ್ಬ ಹೊಸಬರನ್ನು ಮರೆಯುತ್ತಿದ್ದ. ಹಾಗಂತ ಈ ಹಿಂದೆ ಮರೆತವರು ಒಂದು ದಿನದ ನಂತರವೇನು ಅವನಿಗೆ ನೆನಪಿಗೆ ಬರುತ್ತಿರಲಿಲ್ಲ. ಒಮ್ಮೆ ಮರೆತವನನ್ನು ಮತ್ತೆ ಯಾವ ಕಾರಣಕ್ಕೂ ನೆನಪಿಸಿಕೊಳ್ಳಲು ಅವನಿಗೆ ಆಗುತ್ತಿರಲಿಲ್ಲ.

ಆರಂಭದಲ್ಲಿ ಅವನ ತಂದೆ ತಾಯಿಗಳು ಅನೇಕ ಆಸ್ಪತ್ರೆಗಳಿಗೆ ಅವನನ್ನು ಕರೆದುಕೊಂಡು ಹೋದರು. ಆದರೆ ಇದು ಯಾವ ಮೆಡಿಕಲ್ ಟರ್ಮ್ಸ್ ಗೂ ಸಿಗದ ಸನ್ನಿವೇಶವಾಗಿತ್ತು. ಅಪ್ಪ ಅಮ್ಮ ತುಂಬಾ ನೋವಿನಿಂದ ಕೈ ಚೆಲ್ಲಬೇಕಾಯಿತು. ವಯಸ್ಸಾದ ಮೇಲೆ ಕೆಲವರಿಗೆ ಮರೆವಿನ ಖಾಯಿಲೆ ಬರುವುದು ಸಾಮಾನ್ಯ. ಆದರೆ ಇವನು ಇನ್ನೂ ಮೂವತ್ತರ ಆಸುಪಾಸಿನಲ್ಲಿದ್ದವ.‌ ಅಲ್ಲದೆ ದಿನಕ್ಕೊಬ್ಬರಂತೆ ಮರೆಯುತ್ತಿದ್ದಾನೆ. ಅಲ್ಲದೆ ಮರೆತವರು ಮತ್ತೆ ಅವನಿಗೆ ಎಂದೂ ನೆನಪಿಗೆ ಬರುವುದಿಲ್ಲ. 

ಈ ವಿಷಯ ಊರಿನವರಿಗೆಲ್ಲ ಗೊತ್ತಾದ ಮೇಲೆ ಅವನೊಂದಿಗೆ ಎಲ್ಲಾ ರೀತಿಯ ವ್ಯವಹಾರಗಳನ್ನು ಜನ ನಿಲ್ಲಿಸಿಬಿಟ್ಟರು. ದಿನಕ್ಕೊಬ್ಬರಂತೆ ಇವನು ಮರೆಯುತ್ತಾ ಹೋದರೆ ಅವರಾದರೂ ಏನು ಮಾಡಿಯಾರು ಪಾಪ. ಯಾವಾಗ ಮನೆಯವರನ್ನು ಮರೆತಾಗಿ, ಊರಿನ ಜನರಲ್ಲಿ ಒಬ್ಬೊಬ್ಬರನ್ನು ಮರೆಯಲು ಯತ್ನಿಸಿದನೋ ಆಗ ಸುದ್ದಿ ಗುಟ್ಟಾಗಿ ಉಳಿಯಲಿಲ್ಲ. ಇದೊಂದು ವಿಶೇಷ ಸುದ್ದಿಯಾಗಿ ‘ಮರೆವ ಮನುಷ್ಯ’ , ‘ದಿನಕ್ಕೊಬ್ಬರನ್ನು ಮರೆವ ಮಾನವ’, ‘ಮರೆಗುಳಿ ಮನುಷ್ಯ’ ಎಂದೆಲ್ಲ ಏನೇನೋ ಸುದ್ದಿಗಳು ಪತ್ರಿಕೆಗಳಲ್ಲಿ ಬಂದವು. ಅನೇಕ ಪತ್ರಕರ್ತರು , ಟಿವಿಯವರು ಅವನ ಸಂದರ್ಶನ ಮಾಡಲೆಂದು ಬಂದರು.‌ ಅವನು ಏನೇನೂ ಉತ್ತರಿಸುತ್ತಿರಲಿಲ್ಲ. ಆದರೂ ಅವರಿವರಿಂದ ಕೇಳಿದ್ದನ್ನೇ ಅವರು ಸಂದರ್ಶನವಾಗಿ ಪ್ರಕಟಿಸುತ್ತಿದ್ದರು. ಅದಕ್ಕೆ‌ ಸಂಬಂಧಪಟ್ಟಂತೆ ತಜ್ಞ ವೈದ್ಯರೂ ಮತ್ತು ಸೋಷಿಯಲ್ ಸೈಂಟಿಸ್ಟ್ ಗಳ ಅಭಿಪ್ರಾಯವನ್ನೂ ಅದರ ಜೊತೆಯಲ್ಲಿ ಹಾಕಿರುತ್ತಿದ್ದರು. ಹೀಗೆ ಪ್ರಕಟವಾದದ್ದನ್ನೆಲ್ಲ ಅವನ ಮುಂದೆ ಯಾರಾದರೂ ತಂದಿಟ್ಟರೆ ಅವನು ಏನೂ ಪ್ರತಿಕ್ರಿಯಿಸುತ್ತಿರಲಿಲ್ಲ. ತನ್ನ ಫೋಟೋ ನೋಡಿ ಅದೊಂದು ಮಾತ್ರ ಗುರುತಿಸಿದಂತೆ ನಗುತ್ತಿದ್ದ.

ದಿನಕ್ಕೊಬ್ಬರಂತೆ ಮರೆಯುತ್ತಾ ಹೋಗಿ ಆ ಊರಿನಲ್ಲಿ‌ ಅವನಿಗೆ ಯಾರ ನೆನಪೂ ಉಳಿಯಲಿಲ್ಲ. ಆದರೆ ಅವನ ಅಪ್ಪ ಅಮ್ಮ ಮಾತ್ರ ಅವನನ್ನು ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಎಂದಾದರೊಂದು ದಿನ ಸರಿ ಹೋದಾನು ಎಂಬ ನಂಬಿಕೆ ಅವರದ್ದಾಗಿತ್ತು. ಆದರೆ ಅವನು ಒಂದು ದಿನ ಹೋಗಿಯೇ ಬಿಟ್ಟ. ಪದೇ ಪದೇ ತನ್ನನ್ನು ನೋಡಲು ಬೇರೆ ಊರುಗಳಿಂದೆಲ್ಲ ಬರುವ ಜನ , ಸಂದರ್ಶಿಸಲು ಬರುವ ಪತ್ರಕರ್ತರು, ಸಾಂತ್ವನ ಮತ್ತು ಬುದ್ದಿ ಹೇಳಲು ಬರುವ ಸಂಬಂಧಿಕರು, ತಮ್ಮ ನೆನಪು ಇದೆಯೋ ಇಲ್ಲವೋ ಎಂದು ತಿಳಿಯಲು ಬರುವ ಗೆಳೆಯರು ಮತ್ತು ಇವನಿಗೆ ಹುಚ್ಚು ಹಿಡಿದಿದೆ ಎಂದು ರೇಗಿಸಲು ಬರುವ ಊರಿನ ಚಿಕ್ಕ ವಯಸ್ಸಿನ ಹುಡುಗರು – ಇವರನ್ನೆಲ್ಲ ನೋಡಿ ತಾನು ಅಜ್ಞಾತವಾಗಬೇಕೆಂಬ ನಿರ್ಧಾರ ಮಾಡಿ ಊರು ಬಿಟ್ಟು ಹೋದ. ಅವನ ಅಪ್ಪ ಅಮ್ಮ ತುಂಬಾ ಸಂಕಟ ಪಟ್ಟುಕೊಂಡರು. ಮಗ ಎಂಥವನೇ ಆದರೂ ಹೆತ್ತವರಿಗೇನು ಹೊರೆಯಾಗುತ್ತಿರಲಿಲ್ಲ. ಆದರೆ ಅವನು ತಾನು ಯಾರಿಗೂ ಸಿಗಬಾರದು ಮತ್ತು ತನ್ನ ಬಗ್ಗೆ ಏನೂ ಗೊತ್ತಿಲ್ಲದ ಜಾಗಕ್ಕೆ ಹೋಗಿ ಇದ್ದು ಬಿಡಬೇಕೆಂದುಕೊಂಡು ಹೊರಟ. 

ಎಲ್ಲಿಗೆ ಹೋದಾನು? ಯಾವ ಕೆಲಸಕ್ಕೆ ಸೇರಿಯಾನು? ಯಾವುದಾದರೂ ಊರು ಸೇರಿದರೆ ಮತ್ತೆ ಅಲ್ಲಿ ಪರಿಚಯ ಆದವರನ್ನು ಒಬ್ಬೊಬ್ಬೊರನ್ನೇ ಮರೆಯುತ್ತಾ ಹೋಗಬೇಕಾಗುತ್ತದೆ. ಹಾಗಾಗಿ ಅವನು ಯಾವ ಕೆಲಸಕ್ಕೂ ಸೇರುವಂತಿರಲಿಲ್ಲ.‌ ಆದರೆ ಬದುಕಬೇಕಲ್ಲ. ಬದುಕಿಗಾಗಿ ಭಿಕ್ಷುಕನಾಗುವ ತೀರ್ಮಾನಕ್ಕೆ ಬಂದ. ಯಾರನ್ನೂ ನೆನಪಿಟ್ಟುಕೊಳ್ಳುವ ಅಗತ್ಯ ಆಗ ಅವನಿಗೆ ಬರಲಿಲ್ಲ‌. ಎಲ್ಲೆಲ್ಲೋ ಭಿಕ್ಷೆ ಬೇಡಿಕೊಂಡು ಬದುಕಿದ. ಬರೋಬ್ಬರಿ ನಲವತ್ತು ವರ್ಷ ಭಿಕ್ಷೆ ಬೇಡುತ್ತಾ ಬದುಕಿದವನಿಗೆ ತನ್ನ ಜೀವನದಲ್ಲಿ ಇದುವರೆಗೆ ಬಂದು ಹೋದ ಯಾರ ನೆನಪೂ ಇರಲಿಲ್ಲ. ಈಗಂತೂ ಯಾರ ನೆನಪಿನ ಹಂಗೂ ಅವನಿಗೆ ಬೇಕಿರಲಿಲ್ಲ. ಭಿಕ್ಷೆ ಹಾಕಿದವರು ಭಿಕ್ಷುಕ ತಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂದೇನೂ ಬಯಸುವುದಿಲ್ಲವಲ್ಲ … 

ಈಗ ನಾನು ಅವನೆದರು ಕೂತು ಅವನನ್ನು ಸಂದರ್ಶನ ಮಾಡಲು ಹೋದರೆ ಅವನು ಮಾಮೂಲಿನಂತೆ ಭಿಕ್ಷೆಗಾಗಿ ಕೈ ಚಾಚಿದ. ‘ನನಗೆ ನಿಮ್ಮ ಬಗ್ಗೆ ಅನೇಕ ವಿಷಯಗಳು ಗೊತ್ತಿವೆ. ನಿಮ್ಮನ್ನು ಸಂದರ್ಶಿಸಲು ಬಂದಿದ್ದೇನೆ. ಆದರೆ ಇದಕ್ಕೆ ಏನು ಕಾರಣ‌ ಎಂದು ಪತ್ತೆ ಹಚ್ಚುವುದು ನನ್ನ ಉದ್ದೇಶ. ಇದರ ಹಿಂದಿನ ರಹಸ್ಯವನ್ನು ನಾನು ಜಗತ್ತಿಗೆ ತಿಳಿಸಬೇಕು ದಯವಿಟ್ಟು ನನ್ನೊಂದಿಗೆ ಮಾತಾಡಿ’ ಎಂದು ಅಂಗಲಾಚಿಕೊಂಡ. ಆದರೆ ಆ ವೃದ್ಧ ಏನೂ ಮಾತಾಡಲಿಲ್ಲ.‌

ತಾನೊಬ್ಬ ವಿಶೇಷ ಕಾರಣಕ್ಕೆ ಸುದ್ದಿಯಲ್ಲಿರುವ ಮನುಷ್ಯ ಎಂಬುದನ್ನೂ ಆತ ಮರೆತುಬಿಟ್ಟಿದ್ದನೋ ಏನೋ … ಅವನನ್ನು ಎಷ್ಟು ಹೊತ್ತು ಪೀಡಿಸಿದರೂ ಏನೂ ಪ್ರಯೋಜನವಿಲ್ಲ ಎಂದರಿತ ನಾನು ನಮ್ಮ ಪತ್ರಿಕೆಯಲ್ಲಿ ಅವನ ಬಗ್ಗೆ ಪ್ರಕಟವಾದ ಸುದ್ದಿ ಓದಿ , ನನಗೆ ಕರೆ ಮಾಡಿ ಅವನು ಇದ್ದ ಜಾಗದ ಸುಳಿವು ನೀಡಿದ್ದ ಆ ಅಜ್ಜಿಯ ಬಳಿಗೇ ಹೋದೆ. 

*        *          *         * 

‘ನೀವು ಹೇಳಿದ ಜಾಗಕ್ಕೆ ಹೋಗಿದ್ದೆ. ಅವರು ಇದ್ದರು’ ಎಂದೆ. 

‘ಹೌದಾ! ನಾನು ಅವರ ಬಗ್ಗೆ ತುಂಬಾ ಸರಿ ಪೇಪರಲ್ಲಿ ಓದಿದ್ನಲ್ಲಪ. ಮೊನ್ನೆ ದೇವಸ್ಥಾನಕ್ಕೆ ಹೋದಾಗ ಹೊರಗೆ ಭಿಕ್ಷೆ ಹಾಕೋವಾಗ ನೋಡಿದೆ. ಅವರೇ ಅನ್ನಿಸ್ತು ಅದಕ್ಕೆ ನಿನಗೆ ಕಾಲ್ ಮಾಡಿ ಹೇಳಿದೆ. ಜನ ಅವನನ್ನ ಸತ್ತೇ ಹೋಗಿದ್ದಾನೆ ಅನ್ಕೊಂಡಿದ್ದಾರಲ್ವ ಅದ್ಕೆ ಹೇಳಿದೆ‌’ ಎಂದ ಅಜ್ಜಿಯ ಮುಂದಿನ ಪ್ರಶ್ನೆ, ‘ನಿಮಗೆ ಎಲ್ಲಾ ಹೇಳಿದ್ನಾ ಅವನು? ಏನಂತೆ ಅವನ ಕಥೆ ? ಅವನ “ಮರೆವಿ”ನ ಹಿಂದಿನ ನಿಜವಾದ ಕಥೆ ಏನಂತೆ ? …

‘ಇಲ್ಲ ಅಜ್ಜಿ , ಅದನ್ನೇ ಪತ್ತೆ ಮಾಡಬೇಕು ಅಂತ ನಾನು ಹೋಗಿದ್ದು. ಆದರೆ ಅವರು ಏನೂ ಮಾತಾಡ್ಲೆ ಇಲ್ಲ. ಹಾಗೂ ತಮಗಿರುವ ಆ ಮರೆವಿನ ವೈಚಿತ್ರದ ಬಗ್ಗೆಯೂ ಅವರಿಗೆ ಮರೆತು ಹೋಗಿರಬಹುದು’ ಎಂದೆ. 

ಅಜ್ಜಿ ಸ್ವಲ್ಪ ಕಸಿವಿಸಿಗೊಂಡರು. 

‘ನೀವು ಮತ್ತೆ ಯಾವುದೇ ಪತ್ರಿಕೆಯವರಿಗೆ ಈ ಬಗ್ಗೆ ಹೇಳ್ಬೇಡಿ. ನಾನೇ ಇನ್ನೊಂದೆರೆಡು ಸರಿ ಪ್ರಯತ್ನ ಮಾಡ್ತೀನಿ ‘ ಎಂದು ಹೇಳಿ ಹೊರಡಲುನುವಾದೆ. 

ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಜ್ಜಿ ನನ್ನನ್ನು ಮನೆಯೊಳಗೆ ಬರುವಂತೆ ಸನ್ನೆ ಮಾಡಿದರು. ಹೋದೆ. 

‘ನಲವತ್ತು ವರ್ಷಗಳ ಹಿಂದೆ ಅವನಿಗೆ ಮರೆಯುವುದನ್ನು ಕಲಿ ಅಂದದ್ದು ನಾನೇ ಕಣಪ್ಪ’ ಎಂದು ಗದ್ಗದಿತ ಧ್ವನಿಯಲ್ಲಿ ಹೇಳಿತು. 

ನಾನು ಮಾತಾಡಲಿಲ್ಲ. ಅಜ್ಜಿಗೆ ಎಲ್ಲವೂ ಗೊತ್ತಿದೆ ಎಂಬುದು ನನ್ನರಿವಿಗೆ ಬಂತು. 

‘ನಾವಿಬ್ಬರೂ ಪ್ರೀತಿಸುತ್ತಿದ್ದದ್ದು ಬೇರೆ ಯಾರಿಗೂ ಗೊತ್ತಿರಲಿಲ್ಲ.‌ ಅಷ್ಟೊಂದು ಗೌಪ್ಯವಾಗಿಟ್ಟಿದ್ವಿ. ಆದರೆ ನಮ್ಮ ಮನೆಯಲ್ಲಿ ಬೇರೆ ಹುಡುಗನನ್ನು ತೋರಿಸಿ ಇವನನ್ನೇ ಮದ್ವೆ ಆಗಬೇಕು ಅಂದ್ರು. ಆಗೆಲ್ಲ ಈಗಿನವರ ಹಾಗೆ ಮನೆಯವರನ್ನು ಧಿಕ್ಕರಿಸಿ ಹೋಗಿ ಮದ್ವೆ ಆಗೋದು ಅಷ್ಟು ಸುಲಭದ ಮಾತಾಗಿರಲಿಲ್ಲ ಕಣಪ್ಪ.‌ ನಾನೂ ಬಹಳ ಅತ್ತೆ. ಯಾರಿಗೂ ಹೇಳಿಕೊಳ್ಳಲಿಲ್ಲ. ಹಾಗಾಗಿ ಅವನನ್ನು ಭೇಟಿಯಾಗಿ ವಿಷಯ ತಿಳಿಸಿದೆ’ 

‘ಅಜ್ಜಿ, ಈ ಜಗತ್ತಲ್ಲಿ ಈ ಥರ ಪ್ರೀತಿಸಿದವರನ್ನೇ ಮದುವೆಯಾಗಲು ಸಾಧ್ಯವಾಗದವರು ಬೇಕಾದಷ್ಟು ಜನ ಇದ್ದಾರೆ ಅಲ್ವ ? ಆದರೆ ಈ ಥರ ಖಾಯಿಲೆ ಇವರಿಗೆ ಮಾತ್ರ ಬಂದಿರೋದು’ 

‘ಅದು ಖಾಯಿಲೆ ಅಲ್ಲ ಕಣಪ್ಪ. ನಾನು ಅವನಿಗೆ,

ನೀನು ಮರೆಯುವುದನ್ನು ಕಲಿಯಲೇಬೇಕು. ನನ್ನನ್ನು ಮರೆತು ನೀನೂ ಮದುವೆಯಾಗು ಎಂದು ಹೇಳಿದ್ದೆ. ಅವನು ಅವತ್ತು ಹೇಳಿದ್ದ ‘ನಿನ್ನ ಮರೆತಮೇಲೆ ನನಗೆ ನೆನಪಿಟ್ಟುಕೊಳ್ಳುವುದಕ್ಕಾದರೂ ಏನಿದೆ ಈ ಜಗತ್ತಿನಲ್ಲಿ ?’ ಎಂದು. ಇದೆಲ್ಲ ಯವ್ವೌನದ ಅತಿರೇಕ. ಒಂದೆರೆಡು ವರ್ಷವಾದ ಮೇಲೆ ಸರಿ ಹೋಗುತ್ತಾನೆ ಎಂದುಕೊಂಡೆ . ಆದರೆ ಅವಾಗಲೇ ಅವನ ಬಗ್ಗೆ ಮೊದಲ ಸುದ್ದಿ ಪೇಪರಿನಲ್ಲಿ ಬಂತು. ಅವನ ಬಗ್ಗೆ ಏನೇನೋ ಬರೆದಿದ್ದರು. ನಾನು ಏನೂ ಮಾಡದ, ಯಾರೊಂದಿಗೂ ಈ ಬಗ್ಗೆ ಮಾತನಾಡದ ಅಸಾಹಯಕ ಸ್ಥಿತಿಯಲ್ಲಿದ್ದೆ. ಅದೆಷ್ಟೋ ಬಾರಿ ಇದಕ್ಕೆಲ್ಲ ಕಾರಣ ನಾನೇ ಅಂದುಕೊಂಡು ಹಿಂಸೆ ಅನುಭವಿಸಿದ್ದೇನೆ. ಅವನು ಊರು ಬಿಟ್ಟ ಅಂದಮೇಲಂತೂ ಯಾರೂ ಅವನನ್ನು ನೋಡಿಕೊಳ್ಳದೆ ಹೇಗಿರುತ್ತಾನೋ ಎಂದು ತಳಮಳಗೊಂಡಿದ್ದೆ. ಇಷ್ಟು ದೀರ್ಘ ಸಮಯದ ನಂತರ ಮೊನ್ನೆ ದೇವಸ್ಥಾನದಲ್ಲಿ ಅವನನ್ನು ಭಿಕ್ಷುಕನಾಗಿ ನೋಡಿದೆ. ಅವನ ಬಗ್ಗೆ ಎಲ್ಲ ಹೇಳಿ ಬಿಡಬೇಕು ನಿಮ್ಮ ಬಳಿ ಅಂತಾನೆ ಕಾಲ್ ಮಾಡಿದೆ. ಆದರೆ ಯಾಕೋ ಧೈರ್ಯ ಬರಲಿಲ್ಲ. ಅದಕ್ಕೆ ನೀವೇ ಹೋಗಿ ವಿಚಾರಿಸಿ ಎಂದೆ. ಆದರೆ ಈಗಲೂ ನಿಮ್ಮ ಬಳಿ ಇದನ್ನು ಹೇಳದೆ ಹೋದರೆ ನನಗೆ ನಾನು ಮೋಸ ಮಾಡಿಕೊಂಡಂತಾಗುತ್ತದೆ ಎಂದು ಭಾವಿಸಿ ಇದನ್ನೆಲ್ಲ ಹೇಳಿದೆ. ದಯವಿಟ್ಟು ಇದನ್ನು ನೀವು ಪತ್ರಿಕೆಯಲ್ಲಿ ಬರೆಯಬಾರದು’ ಎಂದು ಅಜ್ಜಿ ಆತನ ಮರೆವಿನ ಹಿಂದಿನ ರಹಸ್ಯವನ್ನು ಬಿಡಿಸಿಟ್ಟಿತ್ತು. 

‘ ಇಲ್ಲ ಅಜ್ಜಿ‌. ನಾನು ಈ ರಹಸ್ಯವನ್ನು ಯಾವ ಕಾರಣಕ್ಕೂ ಬರೆಯುವುದಿಲ್ಲ. ನಾನಿನ್ನು ಹೊರಡುತ್ತೇನೆ’ ಎಂದೆ. 

ಅಜ್ಜಿ ಕೂತ ಕುರ್ಚಿಯ ಹಿಂಭಾಗದಲ್ಲಿ ಗೋಡೆಯ ಮೇಲಿದ್ದ ಫೋಟೋವೊಂದು ಅಜ್ಜಿಯ ಯಜಮಾನರ ಮರಣ ವಾರ್ತೆಯನ್ನೂ ನನಗೆ ದಾಟಿಸಿತ್ತು. ಅಲ್ಲಿಂದ ಹೊರಟು ಸೀದಾ ಆಫಿಸಿಗೆ ಹೋಗಿ ಮರುದಿನದ ಪತ್ರಿಕೆಗೆ ‘ಮಹಾ ಮರೆವಿನ ಮನುಷ್ಯ ಇನ್ನು ನೆನಪು ಮಾತ್ರ’ ಎಂಬ ಶೀರ್ಷಿಕೆಯಡಿಯಲ್ಲಿ ಆತ ಈಗಾಗಲೇ ಸತ್ತಿದ್ದಾನೆ ಎಂದು ಸುಳ್ಳು ಸುದ್ದಿ ಬರೆದಿಟ್ಟು ಬಂದೆ. 

ಮರುದಿನ ಪತ್ರಿಕೆಯ ಸುದ್ದಿ ಓದಿದ ಅಜ್ಜಿ ಕಾಲ್ ಮಾಡಿತು. ಭಯದಿಂದಲೇ ಕಾಲ್ ರಿಸೀವ್ ಮಾಡಿದೆ. 

‘ಸರಿಯಾಗಿ ಸುದ್ದಿ ಮಾಡಿದ್ದಿಯಪ್ಪ. ಇನ್ನಾದರೂ ಅವನು ಈ ಎಲ್ಲಾ ಸುದ್ದಿಗಳಿಂದ ಮುಕ್ತನಾದ್ರೆ ಸಾಕು’ ಎಂದಿತು. 

‘ಅಜ್ಜಿ, ದೇವಸ್ಥಾನದಲ್ಲಿ ಆತ ನಿಮ್ಮನ್ನು ಗುರುತು ಹಿಡಿಯಲಿಲ್ಲವೆ ? ಅವನಿಗೆ ನಿಮ್ಮ ನೆನಪಿರಲಿಲ್ಲವೆ ?’ ಎಂದು ಕೇಳಿದೆ . 

‘ಇಲ್ಲಪ್ಪ. ಅವನು ಈ ಜಗತ್ತಿನಲ್ಲಿ ಮರೆತ ಮೊದಲ ವ್ಯಕ್ತಿ ನಾನೇ. ಅವನ ಜಗತ್ತಿನ ಮೊದಲ ಮರೆವು ಕೂಡ ನಾನೇ. ಹಾಗಾಗಿ ಅವನಿಗೆ ನನ್ನ ನೆನಪೂ ಇರಲಿಲ್ಲ’ ಎನ್ನುತ್ತಾ ಕಾಲ್ ಕಟ್ ಮಾಡಿತ್ತು ಅಜ್ಜಿ. 

ನಾನು ಮತ್ತೆ ಅವನನ್ನು ನೋಡಲು ದೇವಸ್ಥಾನದ ಬಳಿ ಹೋಗಿದ್ದೆ. ಆತ ಅಲ್ಲಿರಲಿಲ್ಲ… ಅವನಿಗೆ ಯಾವ ಜಾಗವೂ ನೆನಪಿರುವುದಿಲ್ಲ… ಅವನ ಜಗತ್ತಿಗೆ ನಾವ್ಯಾರೂ ಹೋಗಲೂ ಆಗುವುದಿಲ್ಲ … 

‘ Forgetfulness is a blessing ‘ ಎಂಬ ಮಾತು ಹುಟ್ಟುವುದರ ಹಿಂದೆ ಇಂಥವೇ ಎಷ್ಟು ಕಥೆಗಳಿರಬಹುದು ಎಂದು ನೆನದು ನಿರ್ಭಾವುಕನಾದೆ… 

December 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ತುಂಬಾ ಆಸಕ್ತಿದಾಯಕವಾದ ಕತೆ. ಇಷ್ಟವಾಯಿತು

    ಪ್ರತಿಕ್ರಿಯೆ
  2. Kiran Bhat

    ಮರೆವು ಒಂದು ವರ ಅಂತ ನಮ್ ಶಾಲೆ ಮಾಸ್ತರು ಆಗಾಗ ಹೇಳ್ತಿದ್ರು. ನಾವು ಪಾಠಗಳನ್ನ ಮರೆಯೋದ್ರಿಂದ ವ್ಯಂಗ್ಯ ಮಾಡ್ತಾರೆ ಅಂತ ಆಗ ಅಂದ್ಕೊಂಡಿದ್ದೆ…..
    ತುಂಬ ಚೆನ್ನಾಗಿ ಬರೀತೀರಿ ನೀವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: