ಸೂಜಿಮೊನೆಯೂರುವ ಜಾಗವನ್ನೂ ಪಾಂಡವರಿಗೆ ಕೊಡೆ

ಅಲ್ಲೆಲ್ಲಿಂದಲೋ ಕಣ್ಣು ತಂದರು, ಇನ್ನೆಲ್ಲಿಂದಲೋ ಕೈ –ಕಾಲು, ಮತ್ತೆಲ್ಲಿಂದಲೋ ಮುಖ-ತಲೆಕೂದಲು… ಇವನ್ನೆಲ್ಲ ಜೋಡಿಸಿ ಅವರು ಮನುಷ್ಯನ ಬೊಂಬೆ ಮಾಡುತ್ತಿದ್ದಾರೆಂದು ಜನ ಅಂದುಕೊಂಡಿದ್ದರು.

ಆದರೆ ಆಗುತ್ತಿರುವುದು ರಾಕ್ಷಸನ ಬೊಂಬೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ –

ನಮ್ಮ ದೇಶದ ಕ್ರಷಿ ವ್ಯವಸ್ಥೆಯ ಸುಧಾರಣೆಗಾಗಿ ಹಾಲೀ ಕೇಂದ್ರ ಸರಕಾರ ಮಾಡುತ್ತಿರುವ “Bits and pieces” ಯೋಜನೆಗಳನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸಿ ಎಂದು ಕೇಳಿದರೆ ಹೆಚ್ಚಿನಂಶ ಮೇಲಿನಂತೆ ವಿವರಿಸಬೇಕಾಗುತ್ತದೆ.

ಈ ಬಾರಿ, ಬಜೆಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ಒಟ್ಟು ಬಜೆಟಿನ 15.35 ಶೇಕಡಾ ಭಾಗವನ್ನು ಕ್ರಷಿ ಮತ್ತು ಅದರ ಪೂರಕ ಚಟುವಟಿಕೆಗಳಿಗೆ ಮೀಸಲಿಟ್ಟಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ. ಕ್ರಷಿಗೆ ಸಂಬಂಧಿಸಿದಂತೆ ಸರ್ಕಾರ ಪ್ರಕಟಿಸಿರುವ ಕೆಲವು ಪ್ರೋತ್ಸಾಹಕ ಯೋಜನೆಗಳು ಹೀಗಿವೆ:

* ಕ್ರಷಿ, ಬೀಜ ಸುಧಾರಣೆ, ಉಗ್ರಾಣ, ಕೋಲ್ಡ್ ಸ್ಟೋರೇಜ್  ಕ್ಷೇತ್ರಗಳಲ್ಲಿ 100% ವಿದೇಶಿ ನೇರ ಹೂಡಿಕೆಗೆ ಅವಕಾಶ

* ಬೆಲೆ ಏರಿಳಿತದಲ್ಲಿ ರೈತರ ಹಿತಾಸಕ್ತಿ ರಕ್ಷಣೆಗಾಗಿ ಕ್ರಷಿ ಭೂಮಿ ಗುತ್ತಿಗೆ ನೀಡಲು ಅವಕಾಶ (contract farming)

* ಆಹಾರ ಭದ್ರತೆ ಮಿಷನ್ ಅಡಿ ದ್ವಿದಳ ಧಾನ್ಯಗಳ ಬೆಳೆಗೆ ವಿಪುಲ ಪ್ರೋತ್ಸಾಹ

*PMGSY  ಯೋಜನೆಯಡಿ ಹಳ್ಳಿಮೂಲೆಯ ಕ್ರಷಿಭೂಮಿಗಳಿಗೆ ರಸ್ತೆ ಸಂಪರ್ಕ

* ಕ್ರಷಿ ಉತ್ಪನ್ನ ರಫ್ತಿಗೆ ಪ್ರೋತ್ಸಾಹ ಯೋಜನೆ

* ಕ್ರಷಿ ಸಾಲ, ವಿಮೆ, ಕ್ರಷಿ ಸಂಶೋಧನೆಗಳಿಗೆ ಪ್ರೋತ್ಸಾಹ

* APMC ಕಾನೂನಿನಲ್ಲಿ ಬದಲಾದ ಪರಿಸ್ಥಿತಿಗೆ ತಕ್ಕಂತೆ ಅಮೂಲಾಗ್ರ ಬದಲಾವಣೆ

* ದೊಡ್ಡ ಕ್ರಷಿ ಆದಾಯಕ್ಕೆ ಆದಾಯ ತೆರಿಗೆ ಪ್ರಸ್ತಾಪ.

ಈ ಎಲ್ಲ ಬಿಂದುಗಳು ಒಂದೊಂದಾಗಿ ಕಂಡಾಗ ಓಹೋ ದೇಶದ ಕ್ರಷಿಯ ಬಗ್ಗೆ ಸರಕಾರ ಎಷ್ಟೊಂದು ಪ್ರೀತಿ ತೋರಿಸುತ್ತಿದೆ ಅನ್ನಿಸದಿರದು. ಆದರೆ, ಈ ಬಿಂದುಗಳನ್ನೆಲ್ಲ ಒಟ್ಟುಸೇರಿಸಿ, ಒಂದು ಚಿತ್ರವನ್ನಾಗಿ ನೋಡುವುದಕ್ಕೆ ಪೂರಕ ಆಗಬಲ್ಲ ಇನ್ನೊಂದಿಷ್ಟು ಮಾಹಿತಿಗಳು ಇಲ್ಲಿವೆ:

ಗುಜರಾತಿನಲ್ಲಿ ಬಹುರಾಷ್ಟ್ರೀಯ ಪೆಪ್ಸಿಕೊ ಮತ್ತು SAB ಮಿಲ್ಲರ್ ಸಂಸ್ಥೆಗಳು ಕ್ರಮವಾಗಿ ನೆಲಗಡಲೆ ಮತ್ತು ಬಾರ್ಲಿ ಬೆಳೆಗೆ ಕ್ರಷಿಭೂಮಿ ಗುತ್ತಿಗೆ ಪಡೆಯುವ (contract farming) ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಲಾಭ ಗಳಿಸಿವೆ. ಅಲ್ಲಿನ ಮುಖ್ಯಮಂತ್ರಿಗಳಾಗಿದ್ದವರೇ ಈಗ ದೇಶದ ಪ್ರಧಾನಿ ಆಗಿರುವುದರಿಂದ ಈ ಯಶಸ್ಸಿಗೆ ಈಗ ಹೊಸ ಕೋಡು ಮೂಡಿದೆ.

ಅದಾನಿ ವಿಲ್ಮರ್ ಲಿಮಿಟೆಡ್, ರಿಲಯನ್ಸ್ ಫ್ರೆಷ್, ಕಾರ್ಗಿಲ್ ಇಂಡಿಯಾ ಪ್ರೈ ಲಿ., ಪೆಪ್ಸಿ ಫುಡ್ಸ್ ಇಂಡಿಯಾ, ಐಟಿಸಿ-ಐಬಿಡಿ, ನೆಸ್ಲೆ ಇಂಡಿಯಾ, ಅಪಾಚಿ, ಹಿಂದೂಸ್ಥಾನ್ ಲಿವರ್ ಎಂಬ ಹೆಸರಿನ ಕಂಪನಿಗಳು (ಇನ್ನೂ ಹಲವು ಕಂಪನಿಗಳು ಸೇರಿದಂತೆ) ಸರಕಾರದ ಈ ಹೊಸ ಕ್ರಷಿ ನೀತಿಯ ಫಲಾನುಭವಿಗಳಾಗಲು ತುದಿಗಾಲಲ್ಲಿ ನಿಂತಿವೆ. ನೇಗಿಲು ಹೊತ್ತ ರೈತನ ಬದಲು ಟ್ರಾಕ್ಟರ್ ಚಲಾಯಿಸುವ ಕಂಪನಿ ಸಿಬ್ಬಂದಿ ಸಿದ್ಧರಾಗಿದ್ದಾರೆ.

ಸ್ವಾತಂತ್ರ್ಯ ಸಿಕ್ಕಿದಾಗ ತೀರಾ ಹಿಂದುಳಿದಿದ್ದ ದೇಶದ ಕ್ರಷಿರಂಗ 60-80ರ ದಶಕದ ವೇಳೆಗೆ ಕ್ರಷಿ ಸಂಶೋಧನೆಗಳ ಕಾರಣದಿಂದಾಗಿ ಆಹಾರ ಸ್ವಾವಲಂಬನೆಯತ್ತ ದಾಪುಗಾಲು ಇಡತೊಡಗಿತು. ಹಸಿರು ಕ್ರಾಂತಿ ಫಲ ಕೊಟ್ಟಿತು. ಮುಂದೆ 1980-2000ದ ಅವಧಿಯಲ್ಲಿ ಉದಾರೀಕರಣ ನೀತಿ ಕ್ರಷಿರಂಗದಲ್ಲಿ ಉತ್ಪಾದನೆ ಹೆಚ್ಚಳಕ್ಕೆ, ಲಾಭ ಹೆಚ್ಚಳಕ್ಕೆ ಕಾರಣವಾಯಿತು. ಆದರೆ, ದುರದ್ರಷ್ಟವಶಾತ್, ಈ ಲೆಕ್ಕಾಚಾರಗಳೆಲ್ಲ ದಳಾಲಿಗಳನ್ನು ದಾಟಿ ರೈತನನ್ನು ತಲುಪಲೇ ಇಲ್ಲ.

ಕ್ರಷಿ ಉತ್ಪಾದನೆಯಲ್ಲಿ ದೇಶ ಕಾಗದದ ಮೇಲೆ ಲಾಭದ ಲೆಕ್ಕಾಚಾರ ತೋರಿಸುತ್ತಿರುವಂತೆಯೇ ಇನ್ನೊಂದೆಡೆ ಬೆಳೆ ನಷ್ಟ, ಸಾಲ ಕಟ್ಟಲಾಗದ ಸಂಕಷ್ಟಗಳಿಗೆ ತುತ್ತಾದ ರೈತ ನೇಣಿಗೆ ಕೊರಳೊಡ್ಡುತ್ತಲೇ ಇದ್ದಾನೆ. ಈ ರೀತಿ ರೈತರು ಕಡಿಮೆಯಾದಂತೆಲ್ಲ, ಹಳ್ಳಿಗಳ ಆ ರೈತನ ಮಕ್ಕಳು-ಕುಟುಂಬ ಕಂಪ್ಯೂಟರ್ ಕೂಲಿಗಳಾಗಿ ಪಟ್ಟಣ ತಲುಪಿದಂತೆಲ್ಲ, ಹಡಿಲುಬಿದ್ದ ಖಾಲಿ ಇರುವ ಫಲವತ್ತಾದ ಭೂಮಿಗಳು ವ್ಯಾಪಾರಸ್ಥರಿಗೆ ಹಸಿಹಸಿ ದುಡ್ಡಾಗಿ ಕಾಣತೊಡಗಿವೆ.

ಕ್ರಷಿಯ ಗುಜರಾತಿ ಮಾಡೆಲ್ ಈಗ ದೇಶದ ಮಾಡೆಲ್ ಆಗಿದ್ದು, ರೈತ ತನ್ನದೇ ನೆಲದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಸಂಬಳಕ್ಕೆ ಕೂಲಿಯಾಗಿ ದುಡಿಯಲಿದ್ದಾನೆ.

ತಮಾಷೆಯೆಂದರೆ, ಭಾರತೀಯರಿಗೆ ನೆಲದ ಮೇಲಿನ ಆಸೆ ದೊಡ್ಡದು. ಅದರ ತುತ್ತತುದಿ ಎಂದರೆ, ಕ್ರಷ್ಣ ಸಂಧಾನಕ್ಕೆಂದು ಬಂದಾಗ ಸುಯೋಧನ ಅವನಿಗೆ ಪಾಂಡವರು ಕೇಳಿದ ಐದು ಗ್ರಾಮಗಳನ್ನು ಬಿಡು, ಒಂದು ಸೂಜಿಮೊನೆಯನ್ನೂ ಊರುವಷ್ಟು ಜಾಗ ಕೊಡೆ. ಬೇಕಾದ್ದು ಮಾಡಿಕೊಳ್ಳಿ ಅನ್ನುತ್ತಾನೆ – ಹಾಗಂತ ಯಕ್ಷಗಾನದಲ್ಲಿ ನಾವು ಕೇಳಿದ್ದೇವೆ; ನಮ್ಮ ನಮ್ಮ ಊರುಗಳ ನ್ಯಾಯಾಲಯದಲ್ಲಿ ನೆಲದ ತಗಾದೆಯ ಕೇಸುಗಳೆಷ್ಟಿದ್ದವು ಎಂಬುದನ್ನೂ ಕಂಡಿದ್ದೇವೆ.

ನೆಲದ ಮೇಲೆ ಇಷ್ಟೊಂದು ಪ್ರೀತಿ ಇರುವ ಜನ ಈಗ ಯಾವುದೋ ಸಮ್ಮೋಹಿನಿಗೆ ಸಿಕ್ಕಂತೆ ತಮ್ಮ ನೆಲವನ್ನು ಕಾಂಟ್ರಾಕ್ಟ್ ಫಾರ್ಮಿಂಗ್ ಗೆ ಬಿಟ್ಟುಕೊಟ್ಟು, ತಾವು  ತಮ್ಮದೇ ನೆಲದಲ್ಲಿ ಸಂಬಳದ ಆಳುಗಳಾಗಿ ಕೆಲಸಮಾಡುವುದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ ಅನ್ನಿಸುತ್ತಿದೆ. ಅಷ್ಟರ ಮಟ್ಟಿಗಿದು ಅಚ್ಛೇದಿನ!

ಹೆಚ್ಚುವರಿ ಓದಿಗಾಗಿ:

https://www.ibef.org/download/ Agriculture_March_20171.pdf

‍ಲೇಖಕರು avadhi

April 27, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Asha R Viswanath

    ಮಣ್ಣ ಮೇಗಣ ತಾತ್ಸಾರ ಅಚ್ಛೆ ದಿನ್ ಕಂಡಂತೆ!ತುಂಬಾ ಚೆನ್ನಾದ ವಿಶ್ಲೇಷಣೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: