ಕುದಿ ಎಸರು; ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ..

ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ. 

 ಆ ಕೃತಿ ‘ಕುದಿ ಎಸರು’ 

ಈ ಬಗ್ಗೆ ‘ಅವಧಿ’ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು.

ರಾಜಾರಾಂ ತಲ್ಲೂರು ಅವರ ಅಭಿಪ್ರಾಯಕ್ಕೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದಾರೆ 

ಪ್ರತಿಭಾ ನಂದಕುಮಾರ್

ಲಕ್ಷ್ಮೀಪತಿ ಕೋಲಾರ ಅವರ ವಿದ್ವತ್ತು ಮತ್ತು ಸೃಜನಶೀಲತೆಯ ಬಗ್ಗೆ ನನಗೆ ಮೆಚ್ಚುಗೆ ಇದೆ.

ಅದನ್ನು ಮೊದಲು ಹೇಳಿಬಿಡುತ್ತೇನೆ. ಆದರೆ ಒಂದೊಂದು ಸಲ ಅವರು ಎಲ್ಲವೂ ಪೊಲಿಟಿಕಲಿ ಕರೆಕ್ಟ್ ಆಗಿ ಇರಬೇಕು ಎಂದು ಅಪೇಕ್ಷಿಸುವುದರ ಬಗ್ಗೆ ನನಗೆ ಗೊಂದಲವಿದೆ.

ವಿಜಯಮ್ಮ ಅವರ ‘ಕುದಿ ಎಸರು’ ಕೃತಿಯ ಬೆನ್ನುಡಿಯಲ್ಲಿ ಅವರು ಹೇಳಿದ ಒಂದು ಮಾತು ನನ್ನನ್ನು ಬಹಳ ಕಾಡಿದೆ. “ಆಘಾತದ ಸಂಗತಿಯೇನೆಂದರೆ, ಬಹುಶಃ ಸಂಪ್ರದಾಯಗಳ ಮಿತಿಗೊಳಪಟ್ಟ ಅವರ ಸೀಮಿತ ಪ್ರಪಂಚದಲ್ಲಿ ಈ ಸಮಾಜದ ಬ್ರಾಹ್ಮಣೇತರ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವೇ ಗೈರುಹಾಜರಾಗಿರುವುದು!” ಮುಂದುವರಿದು ಅವರು ಹೀಗೆ ವಿವರಿಸುತ್ತಾರೆ “ಹಾಗೆ ನೋಡಿದರೆ ತಳಸ್ತರದ ಮಹಿಳೆಯರು ತಮ್ಮ ಹಸಿವು ದಾರಿದ್ರ್ಯಗಳ ನಡುವೆಯೂ ಕೊಂಚ ಸ್ವತಂತ್ರರು ಮತ್ತು ಸುಖಿಗಳು.”

‘ಅವಧಿ’ಯಲ್ಲಿ ಪ್ರತಿಕ್ರಿಯಿಸುತ್ತಾ ರಾಜಾರಾಮ್ ತಲ್ಲೂರು ಅವರು ಲಕ್ಷ್ಮೀಪತಿಯವರ ಮಾತನ್ನು ಉಲ್ಲೇಖಿಸಿ ಅದಕ್ಕೆ ಇನ್ನೊಂದು ಮಾತು ಸೇರಿಸಿದ್ದಾರೆ “ತೀರಾ ಅಪರೂಪಕ್ಕೆ ಅವರು ಕಾಣಿಸಿಕೊಂಡದ್ದೂ ಮೇಲುಜಾತಿಗಳವರ ಹಾಸಿಗೆಯಲ್ಲೇ…”.

ಎರಡೂ ಅಭಿಪ್ರಾಯಗಳು ಅವರವರ ವೈಚಾರಿಕ ಮಿತಿಗಳನ್ನು ಕುರಿತು ಹೇಳುತ್ತವೆ ಎಂದು ನನಗನ್ನಿಸುತ್ತದೆ.

ಎಲ್ಲರ ಬದುಕಿನಲ್ಲೂ ಸಮಾಜದ ಸಕಲೆಂಟು ಜಾತಿಗಳ ಬಹುದೊಡ್ಡ ವೈವಿಧ್ಯಮಯ ಸಮಾಜವು ಇದ್ದೇ ಇರುತ್ತದೆ (ಅಂದರೆ ಅದರಿಂದ ಗಾಢ ಪರಿಣಾಮ ಬೀರಿರುತ್ತದೆ) ಎನ್ನುವ ಪೂರ್ವ ನಿಶ್ಚಿತ ತೀರ್ಮಾನದಿಂದ ಹೊರಟು ಒಂದು ಆತ್ಮಕಥೆಯನ್ನು ಅವಲೋಕಿಸುವುದು ಎಷ್ಟು ಸರಿ? ಜೊತೆಗೆ ಅವರು ನಿರ್ಧರಿಸಿರುವ ತಳಸ್ತರದ ಹೆಂಗಸರ “ಕೊಂಚ ಸ್ವಾತಂತ್ರ್ಯ ಮತ್ತು ಸುಖ” ಯಾವುದು? ಅದರ ಪರಿಕಲ್ಪನೆ ಏನು ಎಂದು ಕೇಳಬೇಕೆನಿಸುತ್ತದೆ.

ಒಂದು ಮಹಿಳೆಯ ಬದುಕನ್ನು ಹೀಗೆ ಜಡ್ಜ್ಮೆಂಟ್ ಮಾಡುವುದನ್ನು ಸಮಾಜ ಇನ್ನೂ ಬಿಟ್ಟಿಲ್ಲ. ಆತ್ಮಕಥನಗಳಲ್ಲೂ ಮಹಿಳೆ ಮೀಸಲಾತಿಯ ಅಂಶಗಳನ್ನು ತಂದು ಸಕಲೆಂಟು ಜಾತಿಗಳ ಹಾಜರಾತಿ ಇದ್ದಿದ್ದರೆ ಬದುಕು ಬೇರೆಯ ತರಹ ಇರುತ್ತಿತ್ತು ಎನ್ನುವ ಧ್ವನಿಯನ್ನು ವ್ಯಕ್ತಪಡಿಸುವುದೇ ಎಷ್ಟು ಸರಿ? ಇನ್ನು ರಾಜಾರಾಮ್ ಅವರು ಏನನ್ನು ಹೇಳಲು ಯತ್ನಿಸಿದರು ಎಂದು ಗೊತ್ತಾಗುತ್ತಿಲ್ಲ. ಆದರೆ ಅಲ್ಲಿ ಸಕಾರಾತ್ಮಕಕ್ಕಿಂತ ನಕಾರಾತ್ಮಕ ಧ್ವನಿಯೇ ಹೆಚ್ಚು ಕೇಳಿಸುತ್ತಿದೆ. ಬದುಕಿಗೆ ಸಿಲಬಸ್ ಇಲ್ಲ ಸಾರ್.

ಈ ಬಗ್ಗೆ ಇನ್ನಷ್ಟು ವಿಚಾರಗಳನ್ನು ನಂತರ ಲೇಖನವಾಗಿ ಬರೆಯುತ್ತೇನೆ.

‍ಲೇಖಕರು avadhi

April 28, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸುಧಾ ಚಿದಾನಂದಗೌಡ

    “ಕೊಂಚ ಸ್ವಾತಂತ್ರ್ಯ ಮತ್ತು ಸುಖ”
    ಪ್ರಯಷಃ ಇದು ಆರ್ಥಿಕ ಮತ್ತು ಲೈಂಗಿಕ ಸ್ವಾತಂತ್ರ್ಯಗಳನ್ನೇ ದೃಷ್ಟಿಯಾಗಿಟ್ಟುಕೊಂಡು ಹೇಳಿರಲಿಕ್ಕೂ ಸಾಕು ಎಂದು ಊಹಿಸಬಹುದು.

    ಬಹುತೇಕ ಹೆಣ್ಣುಮಕ್ಕಳು ಸಿಕ್ಕಿಹಾಕಿಕೊಳ್ಳುವುದು ಹಣ ಮತ್ತು ಸಖ್ಯದ ವಿಷಯದಲ್ಲೇ. ಮೇಲ್ವರ್ಗಗಳ ಸಂಪ್ರದಾಯಸ್ಥರಲ್ಲಿ ಇರುವ ಶೀಲದ ಬಗೆಗಿನ ಪರಿಕಲ್ಪನೆ ತಳವರ್ಘದವರಿಗಿಂತ ಭಿನ್ನ ಎಂಬುದನ್ನೂ ಅನೇಕರ ಬರವಣಿಗೆಗಳಲ್ಲಿ ಗಮನಿಸಿದ್ದೇನೆ. ಗಂಡನೇ ದೈವವಾಗಿದ್ದಾಗಲೂ ಪರಪುರುಷರ ಸಂಗ ಮಾಡಿದವರನ್ನು ಹಗುರವಾಗಿ ತೆಗೆದುಕೊಳ್ಳುವವರು, ಅದೇನೂ ಕ್ಷಮಿಸಲಾರದ ಅಪರಾಧವಲ್ಲವೆಂದು ಪರಿಗಣಿಸುವವರೂ ತಳವರ್ಗದಲ್ಲಿ
    ಹೆಚ್ಚು ಕಾಣಸಿಗುತ್ತಾರೆ. ಆದರೆ ಇದನ್ನೇ ಸುಖ ಎನ್ನಬಹುದೇ..?

    ಇನ್ನು ದುಡಿದೇ ಉಣ್ಣಬೇಕಾದ ಅನಿವಾರ್ಯತೆಯೂ ತಳವರ್ಗದ ಮಹಿಳೆಯರಿಗೆ ಎಷ್ಟೋ ಬಾರಿ ಅನಿವಾರ್ಯ. ಹಾಗೆ ದುಡಿದಿದ್ದನ್ನೂ ಅನೇಕ ಬಾರಿ ಗಂಡನೋ, ಮಕ್ಕಳೋ ಕಸಿದುಕೊಳ್ಳುವುದೂ ಕೂಡಾ ಕಂಡುಬಾರದ್ದೇನಲ್ಲ. ಸಂಪಾದಿಸಿಯೂ ಊಟಕ್ಕೆ ತತ್ವಾರವಿರುವ ಻ನೇಕ ಹೆಣ್ಣುಮಕ್ಕಳು ಕಾಣಸಿಗುತ್ತಾರೆ.. ಇದನ್ನು ಸ್ವಾತಂತ್ರ್ಯ ಎನ್ನಬಹುದೇ..?

    “ಮೇಲುಜಾತಿಗಳವರ ಹಾಸಿಗೆಯಲ್ಲೇ…”. ಎಂಬುದಂತೂ ತುಂಬಾ ಕ್ರೂರವಾದ ವಾಕ್ಯ.
    ಹೆಣ್ಣುಗಂಡು ಇಷ್ಟಪಟ್ಟೋ ಮತ್ತಾವ ಲಾಭದ ಕಾರಣಕ್ಕೋ ಜೊತೆಯಾದರೆ ಅದನ್ನೂ ವರ್ಗಭೇದದ ದೃಷ್ಟಿಯಿಂದ ನೋಡುವುದು ತೀರ ಅನ್ಯಾಯ. ಈ ರೀತಿಯ ಜಡ್ಜಮೆಂಟ್ ನ್ನು ಇಷ್ಟು ಸುಲಭಕ್ಕೆ ಪುರುಷ ದೃಷ್ಟಿಕೋನ ಮಾತ್ರ ಕೊಡಬಲ್ಲುದೇನೋ.. ಇವೆಲ್ಲ ಮನೋಭಾವಗಳು ಬದಲಾಗುವುದು ಯಾವಾಗ..?

    ವೈವಿಧ್ಯಮಯ ಸಮಾಜ ಗೈರಾಗುವುದು ಗಂಡಸರ ಬರವಣಿಗೆಯಲ್ಲೂ ಆಗಬಹುದು.
    ಸೀಮಿತ ವಲಯದ ಬದುಕು ಹೀಗೆ ಮನುಷ್ಯರನ್ನು ಮಿತಗೊಳಿಸುವ ಸಾಧ್ಯತೆಗಳಿವೆ. ವಿಶಾಲ ದೃಷ್ಟಿಕೋನದ ಗ್ರಹಿಕೆಯ ಕೊರತೆ ಹೆಣ್ಣುಗಂಡು ಇಬ್ಬರಲ್ಲೂ ಇರಬಹುದಲ್ಲವೇ..? ಇಲ್ಲಿ ಲಕ್ಷ್ಮೀಪತಿ ಕೋಲಾರ ಅವರು ವಿಜಯಮ್ಮನವರ ಬಗ್ಗೆ ಬರೆಯುತ್ತಿರುವುದರಿಂದ ಇದನ್ನು ಮಹಿಳೆಯರಿಗೇ ಹೇಳಿದ್ದಾರೆ ಎಂಬ ಭಾವನೆ ಬರಬಹುದು, ಅಷ್ಟೇ.

    ಪ್ರತಿಕ್ರಿಯೆ
  2. Anonymous

    “ತೀರಾ ಅಪರೂಪಕ್ಕೆ ಅವರು ಕಾಣಿಸಿಕೊಂಡದ್ದೂ ಮೇಲುಜಾತಿಗಳವರ ಹಾಸಿಗೆಯಲ್ಲೇ…”. ಎಂಬುದು ಜನರಲ್ ಹೇಳಿಕೆ ಅಲ್ಲ. ಅದು ಕೇವಲ ಈ ಪುಸ್ತಕದ ಒಳಗಿನ ಚೌಕಟ್ಟಿಗೆ ಸೀಮಿತವಾದದ್ದು ಮತ್ತು ಅದು ಕ್ರೌರ್ಯ ಅನ್ನಿಸಿದ್ದರಿಂದಲೇ ಉಲ್ಲೇಖಿಸಿದ್ದು. ಜೊತೆಗೆ, ಅವಧಿ ಇಲ್ಲಿ ಪ್ರಕಟಿಸಿರುವ ನನ್ನ ಫೇಸ್ ಬುಕ್ ಟಿಪ್ಪಣಿಯು ಪುಸ್ತಕ ಓದಿದ ತಕ್ಷಣ ನನಗೆ ಹೊಳೆದ ಸಂಗತಿಗಳೇ ಹೊರತು ಏನನ್ನೋ ಉದ್ದೇಶಪೂರ್ವಕವಾಗಿ ಹೇಳಹೊರಟ ಹೇಳಿಕೆ ಅಲ್ಲವೇ ಅಲ್ಲ. ಬದುಕಿಗೆ ಸಿಲಬಸ್ ಇಲ್ಲ ನಿಜ. ಆದರೆ ಒಂದು ಆತ್ಮಕತೆಯು ನಡೆದುಹೋಗಿರುವ ಒಂದು ಬದುಕಿನ ಸಿಲಬಸ್ ನ್ನು ಓದುಗನಿಗೆ ತೆರೆದು ತೋರಿಸುತ್ತದೆ. ಸಹಜವಾಗಿಯೇ ಅಲ್ಲಿ ಏನೇನು ಎಷ್ಟೆಷ್ಟು ಇತ್ತೆಂಬ ಲೆಕ್ಕಾಚಾರ ಓದುಗನಿಗೆ ಅವನ ಮಿತಿಯಲ್ಲಿ ಸಿಗುತ್ತದೆ ಅಲ್ಲವೇ? ಅಂತಹದೇ ಒಂದು ಓದುಗ ಪ್ರತಿಕ್ರಿಯೆ ಟಿಪ್ಪಣಿ ಅದು. – ರಾಜಾರಾಂ ತಲ್ಲೂರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: