ಅವರಿಲ್ಲ..

ರಾಘವನ್ ಚಕ್ರವರ್ತಿ 

೧೯೭೯ ಇರಬೇಕು.

’ಬಬ್ರುವಾಹನ’ ಬಿಡುಗಡೆಯಾಗಿತ್ತು.

ನಾವು ಬೇಸಿಗೆ ರಜೆಗಾಗಿ ಕೆ.ಆರ್.ನಗರದಲ್ಲಿ ತಾತನ ಮನೆಯಲ್ಲಿದ್ದೆವು. ಮೈಸೂರು ರಸ್ತೆಯಲ್ಲಿನ ಚೌಕಳ್ಳಿ ಯಲ್ಲಿ ’ಗಣೇಶ’ ಹೆಸರಿನ ಟೆಂಟ್ ಇತ್ತು. ಅಣ್ಣಾವ್ರ ಹುಚ್ಚು ಆರಂಭವಾಗಿದ್ದ ಕಾಲ. ಟೆಂಟಿನ ಒಂದಿಬ್ಬರು ಜಟಕಾವೊಂದರಲ್ಲಿ ’ಕನ್ನಡ ಕಲಾಭಿಮಾನಿಗಳೇ..ಇದೇ ನಿಮ್ಮ ಚೌಕಳ್ಳಿ ಗಣೇಶ ಚಿತ್ರಮಂದಿರದಲ್ಲಿ ನಟಸಾರ್ವಭೌಮ, ರಸಿಕರ ರಾಜ…..(ಸುಮಾರು ಒಂದೈವತ್ತು ಬಿರುದು ಬಾವಲಿಗಳು:-)  ಡಾ.ರಾಜಕುಮಾರ್ ರ ಬಬ್ರುವಾಹನ ಚಿತ್ರ ನೋಡಲು ಮರೆಯದಿರಿ..ಮರೆತು ನಿರಾಶರಾಗದಿರಿ’ ಎಂದು ಮೈಕಿನಲ್ಲಿ ಕೂಗುತ್ತಾ ಕೆ.ಆರ್.ನಗರದ ಬೀದಿಗಳಲ್ಲಿ ಸುತ್ತುತ್ತಿದ್ದರು.

ನಾವು ಸುಮಾರು ದೂರ ಅವರನ್ನು ಹಿಂಬಾಲಿಸಿ ಈ ಚಿತ್ರ ನೋಡಿಯೇ ಬಿಡಬೇಕೆಂದು ಸಂಕಲ್ಪಿಸಿ ಮನೆ ಸೇರಿದೆವು.

ಮಾರನೇ ದಿನ ಮಧ್ಯಾಹ್ನದ ಮ್ಯಾಟಿನಿಗೆ ಸಂಭ್ರಮದಿಂದ ದೊಡ್ಡ ಪಟಾಲಂ ಒಂದಿಗೆ ಒಂಥರಾ ವಿಚಿತ್ರ ಆವೇಶದಿಂದ ಟೆಂಟ್ ಸೇರಿದೆವು. ಚಿತ್ರ ಆರಂಭವಾದ ಕೆಲವು ಕ್ಷಣಗಳಲ್ಲೇ ತೆರೆಯ ಮೇಲೆ ಅಣ್ಣಾವ್ರ ಆಗಮನವಾಯಿತು. ಕಿವಿಗಡಚಿಕ್ಕುವ ಶಿಳ್ಳೆ,ಚಪ್ಪಾಳೆ, ಟೆಂಟ್ ಒಳಗಿನ ಧೂಳು, ಜನರ ಅರಚಾಟಗಳ ನಡುವೆ ಅಣ್ಣಾವ್ರು ಮೊದಮೊದಲು ಹೇಳಿದ ಮಾತುಗಳು ಸರಿಯಾಗಿ ಕೇಳಿಸಲೇ ಇಲ್ಲ (ದಶಕಗಳ ನಂತರ ವಿ.ಸಿ.ಡಿ.ಯಲ್ಲಿ ಚಿತ್ರವನ್ನು ನೋಡುವವರೆಗೂ). ಅಣ್ಣಾವ್ರು ’ಶಬ್ದವೇದಿ’ ತಂತ್ರದಿಂದ ಹುಲಿಯನ್ನು ಹೊಡೆದುರುಳಿಸಿ ಸರೋಜಾದೇವಿಯವರಿಗೆ ’ಇವಾಗ ಹೋಗಿ ನೋಡು..ಹುಲಿ ಸತ್ ಬಿದ್ದಿರುತ್ತೆ’ ಎಂದಾಗ ನಮಗೆಲ್ಲಾ ಅಚ್ಚರಿ. ಅರ್ಜುನನಲ್ಲೇ ಅಣ್ಣಾವ್ರು ಕಾಣತೊಡಗಿದ್ದರು.

ಚಿತ್ರ ಸಾಂಗವಾಗಿ ಸಾಗಿತು. ಯುದ್ಧಾರಂಭವಾಯಿತು. ಬಬ್ರುವಾಹನ ’ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ’ ಎಂದು ಹೇಳುವಷ್ಟರಲ್ಲಿ ಪವರ್ ಕಟ್. ಮೈ ಎಲ್ಲಾ ಹತ್ತಿಕೊಂಡ ಅನುಭವ. ಸುಮಾರು ಒಂದು ವರ್ಷದ ಹಿಂದೆ ಇದೇ ಟೆಂಟಿನಲ್ಲಿ ’ಬೆಸುಗೆ’ ನೊಡಿದ್ದೆವು. ಶ್ರೀನಾಥ್ ’ಬೆಸುಗೆ.ಬೆಸುಗೆ..’ ಎಂದು ಒಂದ್ ಹತ್ಸಲ ಹೇಳುವಷ್ಟರಲ್ಲಿ ಹೀಗೆಯೇ ಕರೆಂಟ್ ಹೋಗಿತ್ತು. ಒಂದೈದ್-ಹತ್ತುನಿಮಿಷದ ನಂತರ ಕರೆಂಟ್ ಬಂದು ಶ್ರೀನಾಥ್ ತಮ್ಮ ’ಬೆಸುಗೆ’ ಮುಂದುವರೆಸಿದ್ದರು.

ಈ ಬಾರಿ ಹಾಗಾಗಲಿಲ್ಲ. ಜನರೇಟರ್ ಇಟ್ಟುಕೊಳ್ಳುವಷ್ಟು ಅನುಕೂಲವಿಲ್ಲದ ಟೆಂಟಿನಾತ ’ಇವತ್ ಅಷ್ಟೇ’ ಎಂದು ಬಿಡುವುದೇ? ಶಪಿಸುತ್ತ ಸಿನಿಮಾದ ಡೈಲಾಗ್ ಗಳನ್ನು ಮೆಲುಕು ಹಾಕುತ್ತಾ ಮನೆ ಕಡೆ ಹೊರಟೆವು. ’ದೊಡ್ಡವರು ಏಕಾಂತದಲ್ಲಿರುವುದು ಎಂದರೇನು..ಅವರು ಶಸ್ತ್ರಾಗಾರದಲ್ಲೇ ಏಕೆ ಏಕಾಂತದಲ್ಲಿರಬೇಕು.. ಹಾಗಿದ್ದಾಗ ಚಿಕ್ಕವರು ಏಕಲ್ಲಿಗೆ ಹೋಗಬಾರದು’. ಹೀಗೆ ಹಲವು ಜಿಜ್ಞಾಸೆಗಳೊಂದಿಗೆ ಮನೆ ಸೇರಿದೆವು.

ಮಾರನೇ ದಿನ ಅದೇ ಜಟಕಾ..ಅದೇ ಅಣ್ಣಾವ್ರ ಬಿರುದು ವಾಚನ. ನಾವೊಂದು ಮೂರ್ನಾಲ್ಕು ಮಂದಿ ಜಟಾಕಾ ಒಳಗೆ ಅತಿಕ್ರಮಿಸಿದೆವು. ಆತ ಮೈಕಿನಲ್ಲೇ ’ಏಯ್ ಯಾರದು ..ಇಳ್ಕೊಳ್ಳಿ’ ಎಂದು ಅರಚಿದ. ’ರ್ರೀ..ನಿನ್ನೆ ಕರೆಂಟ್ ಹೋಗ್ಬಿಡ್ತಲ್ಲಾ..ಇವತ್ ತಿರುಗಿ ನಮ್ಮನ್ನೆಲ್ಲಾ ಬಿಡ್ರಿ’ ಎಂದು ಅವನಿಗೆ ಸಮನಾಗಿ ಅರಚಿದೆವು. ಮೈಕ್ ಆಫ಼್ ಮಾಡಿದ ಆತ ’ಇಳೀತ್ ತ್ತಾ ಇರಿ’ ಎಂದು ಗದರಿದ. ನಮ್ಮ ಜೊತೆಯಾತ ಗೌತಮ್, ’ರ್ರೀ, ಯಾರು ತಿಳಿಯರು ಹಾಡ್ ವರೆಗೂ ಹೊರಗಿರ್ತೀವಿ..ಆಮೇಲ್ ಬಿಡ್ರಿ’ ಎಂದು ಕೂಗು ಹಾಕಿದ. ’ಓಯ್ತಾ ಇರಿ’ ಎಂಬ ಆದೇಶ ಬಂತು. ನಿರಾಶರಾಗಿ ಮನೆಕಡೆ ’ಓ’ದೆವು.

ಅಣ್ಣಾವ್ರು ಒಂಥರಾ ನಮ್ಮ ಮನೆಯವರೇ ಆಗಿಬಿಟ್ಟಿದ್ದರು. ’ಶಂಕರ್ ಗುರು’ವಿನ ತ್ರಿಪಾತ್ರ (ತಮಿಳಿಗೆ ರೀಮೇಕ್ ಆಗಿ ಶಿವಾಜಿ ಗಣೇಶನ್ ರಿಗೆ ಮರುಜೀವ ನೀಡಿದ ಚಿತ್ರ), ’ಹುಲಿ ಹಾಲಿನ ಮೇವಿ’ನ ಕ್ಲೈಮಾಕ್ಸಿನ ಕತ್ತಿವರಸೆ, ಮೂಕವಾಗಿಸಿತ್ತು. ’ಎರಡು ಕನಸಿ’ನ ಸನ್ನಿವೇಶವೊಂದರಲ್ಲಿ ಅಶ್ವಥ್ ಅಣ್ಣಾವ್ರ ಕೈ ಹಿಡಿದು ’ಲೋ ರಾಮು..ಇದು ಕೈ ಅಲ್ಲ..ಕಾಲು ಅಂತ ತಿಳ್ಕೊಳೊ’ ಎಂದು ಗದ್ಗತಿತರಾದಾಗ ಅಣ್ಣಾವ್ರು ಮನೋಜ್ಞವಾಗಿ ಪ್ರತಿಕ್ರಿಯಿಸುವ ರೀತಿ ಇನ್ನೂ ಮರೆತಿಲ್ಲ. ಅವರು ಅಭಿನಯದ ಮೇಲೆ, ಭಾಷೆಯ ಮೇಲೆ ಸಾಧಿಸಿದ ಹಿಡಿತ, ಇಂದಿನ ತಲೆಮಾರಿನವರಾರಿಗೂ ಸಾಧ್ಯವಾಗಲಾರದು.

೧೯೮೨..ನಾವು ಗೌರಿಬಿದನೂರು ಸೇರಿದ್ದೆವು. ಅಲ್ಲಿನ ’ಅಭಿಲಾಶ್’ ಚಿತ್ರಮಂದಿರದವರು ನಡೆಸುತ್ತಿದ್ದ ’ಜಿಲ್ಲಾಮಟ್ಟದ ಸಾಮಾನ್ಯ ಜ್ಞಾನ (??) ಸ್ಪರ್ಧೆ’ಯಲ್ಲಿ ಬಹುಮಾನ ಬಂದಿತ್ತು. ’ಚಲಿಸುವ ಮೋಡಗಳು’ ಬಿಡುಗಡೆಯಾಗಿದ್ದ ಕಾಲ. ತೆಲುಗಿನ ಮತ್ತಿನಲ್ಲಿದ್ದ (ಇಂದಿಗೂ ಸಹ) ಗೌರಿಬಿದನೂರಿನಲ್ಲಿ ಈ ಚಿತ್ರ ೫೦ ದಿನ ಓಡಿ ಅಚ್ಚರಿ ಮಾಡಿತ್ತು. ಶಾಲೆಯ ಪ್ರಾರ್ಥನೆ ಗೊತ್ತಿಲ್ಲದ್ದವರಿಗೂ ’ಕಾಣದಂತೆ ಮಾಯವಾದನು’ ಬಾಯಿಪಾಠವಾಗಿತ್ತು. ೫೦ ದಿನದ ಸಂಭ್ರಮಾಚರಣೆಯಲ್ಲಿ ಬಹುಮಾನ ವಿನಿಯೋಗ ಮಾಡಬೇಕೆಂದು ಅಭಿಲಾಶ್ ನವರು ನಿರ್ಧರಿಸಿದ್ದರು. ಮುಖ್ಯ ಅತಿಥಿ ಅಣ್ಣಾವ್ರೇ ಎಂದು ತಿಳಿದಾಗ ಆಕಾಶಕ್ಕೇ ಹಾರಿಬಿಟ್ಟೆವು.

ಆ ದಿನ ಬಂದಿತು. ಅಭಿಲಾಶ್ ಥೀಯೇಟರ್ ನಲ್ಲೇ ಭಾರಿ ಸಮಾರಂಭ. ಎಚ್.ಆರ್.ವಿ ಮೇಷ್ಟ್ರೊಂದಿಗೆ ಬಹುಮಾನ ವಿಜೇತರು ಮೊದಲ ಸೀಟಿನಲ್ಲಿ. ಅಣ್ಣಾವ್ರು ತಮ್ಮ ಪರಿವಾರ (ಪಾರ್ವತಮ್ಮ, ಚಿನ್ನೇಗೌಡ್ರು, ಸರಿತಾ, ಇನ್ನೊಂದಷ್ಟು ಜನ..) ದೊಂದಿಗೆ ಆಗಮಿಸಿದಾಗ ನಮ್ಮನ್ನು ನಾವೇ ನಂಬಲಾಗದ ಸ್ಥಿತಿ. ಅವರಿಂದಲೇ ಬಹುಮಾನ ವಿನಿಯೋಗ. ಬಹುಮಾನ ನೀಡಿ ಅಣ್ಣಾವ್ರು ಕೈ ಕುಲುಕಿದರು. ಅಭಿಲಾಶ್ ಚಿತಮಂದಿರದವರು ಭಗವದ್ಗೀತೆಯ ಫಲಕದ ಮೇಲೆ ’ಕರ್ಮಯೋಗಿ ಡಾ.ರಾಜ್’ ಎಂದು ಕೆತ್ತಿಸಿ ಅಣ್ಣಾವ್ರಿಗಿ ನೆನಪಿನ ಕಾಣಿಕೆ ನೀಡಿದರು.

ಅಣ್ಣಾವ್ರ ಮುಖದಲ್ಲಿನ ಕೃತಜ್ಞತಾಭಾವ ಕಣ್ಣಿಗೆ ಕಟ್ಟಿದೆ. ’ನೋಡಿ ನೋಡಿ ಇಲ್ಲಿ ತಮಾಶೇನಾ…ಅಲ್ಲಾ..ನಾನ್ ಯಾವ ಸೀಮೆ ಯೋಗಿ’ ಎಂದು ತಮ್ಮ ಟಿಪಿಕಲ್ ಶೈಲಿಯಲ್ಲಿ ನಕ್ಕಿದ್ದರು. ಸರಿತಾ (ತಮಿಳಿನಲ್ಲಿ ಬರೆದುಕೊಂಡು ಬಂದಿದ್ದ) ಕನ್ನಡದಲ್ಲಿ ಏನೋ ಉಲಿದರು. ಪುನೀತ್ (ಆಗಿನ್ನೂ ಲೋಹಿತ್) ಬರದಿದ್ದದ್ದು ಜನರಿಗೆ ತುಂಬಾ ನಿರಾಶೆಯಾಗಿತ್ತು. ನಮ್ಮ ಪಕ್ಕದಲ್ಲಿ ಮೊದಲ ಸಾಲಿನಲ್ಲೇ ಕುಳಿತ್ತಿದ್ದ ಮಾಕಂ ಶ್ರೀನಿವಾಸ ಶೆಟ್ಟರು ’ಲೋಹಿತ್ ರಾಲೇದಾ’ ಎಂದು ಕಿರುಚಿ ಕೇಳಿದ್ದರು.

ಅಣ್ಣಾವ್ರಿಗೆ ಸರಿಯಾಗಿ ಕೇಳಿಸಲಿಲ್ಲ. ಪಕ್ಕದಲ್ಯಾರೋ ತಿಳಿಸಿದರು. ’ಇಲ್ಲಾ ಬರ್ಲಿಲ್ಲ..ಸಂಸಾರ ಎಲ್ಲ ಇಲ್ಲೇ ಇದ್ದೆವಲ್ಲಾಪ್ಪಾ..ಹಾಂ’ ಎಂದು ಅಣ್ಣಾವ್ರು ಮೈಕ್ ಮುಂದೆ ನಗುತ್ತಾ ಹೇಳಿದಾಗ ಶಿಳ್ಳೆ-ಚಪ್ಪಾಳೆಗಳು ನೂರ್ಮಡಿಯಾದವು. ಶೆಟ್ಟರಂತೂ (ಮತ್ತಷ್ಟು) ಉಬ್ಬಿಹೋದರು. ’ರೋಟರಿ ಕ್ಲಬ್ ವಾಳ್ಳಿಕಿ ಚೆಪ್ಪಿ ಮೀಕಿ ಸನ್ಮಾನಮ್ ಚೇಪಿಸ್ತಾಮ್ಮ್ ಲೇಂಡಿ’ ಎಂದು ಕೆಲವರು ಕುಚೋದ್ಯ ಮಾಡಿದ್ದರು. ’ಜೇನಿನ ಹೊಳೆಯೋ’ ಗೀತೆಯ ಒಂದೆರಡು ಸಾಲು ಹಾಡಿ ಅಣ್ಣಾವ್ರು ರಂಜಿಸಿದರು.

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ’ಕರ್ನಾಟಕ ರತ್ನ’ ಎಂಬ ಪ್ರಶಸ್ತಿಯನ್ನು ರಾಜಕೀಯ ಕಾರಣಗಳಿಗಾಗಿ ಕೊಡಮಾಡಲು ನಿರ್ಧರಿಸಿದರು. ಮೊದಲು ಅಣ್ಣಾವ್ರೇ ಅದಕ್ಕೆ ಭಾಜನರನಾಗಿ ಮಾಡುವ ಇರಾದೆ ಬಂಗಾರಪ್ಪನವರಿಗಿತ್ತು. ಸೂಕ್ಷ್ಮಗ್ರಾಹಿ ಅಣ್ಣಾವ್ರು ’ಕುವೆಂಪುರವರಿಗಿಂತ ತಾವು ದೊಡ್ಡವರಲ್ಲ. ತಮಗೆ ಈ ಪ್ರಶಸ್ತಿ ಕೂಡದು ಎಂದು ತಮ್ಮ ಬೀಗರೂ ಆಗಿದ್ದ ಬಂಗಾರಪ್ಪನವರಿಗೆ ಇರುಸು-ಮುರುಸು ಮಾಡಿದರು.

ಕೊನೆಗೂ ಅಣ್ಣಾವ್ರ ಸಾತ್ವಿಕ ಹಠವೇ ಗೆದ್ದಿತು. ಲೊಹಿಯಾ-ಸಮಾಜವಾದಗಳನ್ನು (ಬಂಗಾರಪ್ಪನವರಂತೆ) ಓದದ ಅಣ್ಣಾವ್ರು ನಿಜಕ್ಕೂ ಇದನ್ನೆಲ್ಲಾ ಓದಿರುವ (ಅಥವಾ ಓದಿದ್ದೇವೆಂದು ತಿಳಿದುಕೊಂದಿರುವ)ರಿಗಿಂತಾ ಹೆಚ್ಚು ಪ್ರಬುದ್ಧರೂ, ಸೂಕ್ಷ್ಮಗ್ರಾಹಿಯೂ ಆಗಿದ್ದರು. ಅವರ ಮುಗ್ಧತೆಯಲ್ಲಿ ಈ ಎಲ್ಲ ಗುಣಗಳೂ ಹೆಪ್ಪುಗಟ್ಟಿದ್ದವು.

ನಮ್ಮ ಬಂಧು-ಬಳಗವಲ್ಲದ, ನಾವು ಪ್ರತ್ಯಕ್ಷವಾಗಿ ಹೆಚ್ಚು ನೋಡದ ಅಣ್ಣಾವ್ರು ತಮ್ಮ ನೆನಕೆಯಿಂದಲೇ ಮನ ಮುದಗೊಳಿಸುತ್ತಾರೆ. ಇದು ಅವರಂತಹ ವ್ಯಕ್ತಿತ್ವದವತಿಗೆ ಮಾತ್ರ ಸಾಧ್ಯ. ಅವರಿಲ್ಲ ಎಂಬುದು ಮನಸ್ಸಿಗೆ ಬಂದೇ ಇಲ್ಲ. ’ದುರ್ಗಾಸ್ತಮಾನ’ ಓದುತ್ತಿದ್ದಾಗ ಇದು ಸಿನಿಮಾ ಆದರೆ ’ಮದಕರಿ’ ಅವರೇ ಆಗಬೇಕು ಎಂದು ನೆನೆಸಿದ್ದುಂಟು. ಆಗ ತಟ್ಟನೇ ನೆನಪಾಗುತ್ತದೆ..

ಅವರಿಲ್ಲ..

‍ಲೇಖಕರು avadhi

April 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: