‘ಸು’ ಎಂಬ ಕಥನ

ಸಿ ಎಸ್ ಭೀಮರಾಯ

ಡಾ. ಪ್ರಸನ್ನ ಸಂತೇಕಡೂರು ವೈಜ್ಞಾನಿಕ ಕಥೆಗಳ ಲೇಖಕ. ಅವರು ಈಗಾಗಲೇ ‘ಮಾಯಾಪಂಜರ’ ಕಥಾಸಂಕಲನ ಮತ್ತು ‘ಎತ್ತಣ ಅಲ್ಲಮ ಎತ್ತಣ ರಮಣ’ಎಂಬ ಕೃತಿಗಳ ಮೂಲಕ ನಾಡಿನ ಓದುಗರ ಗಮನ ಸೆಳೆದಿದ್ದಾರೆ. ಅಮೆರಿಕಾದಲ್ಲಿ ಹಲವು ವರ್ಷಗಳವರೆಗೆ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಪ್ರಸನ್ನ ಸಂತೇಕಡೂರು ತಮ್ಮ ವೃತ್ತಿನಿರತ ಅನುಭವಲೋಕದ ವಿವರಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವುದರಲ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ‘ಸು’ ಡಾ. ಪ್ರಸನ್ನ ಸಂತೇಕಡೂರು ಅವರ ಚೊಚ್ಚಲ ಕಾದಂಬರಿ. ಚೊಚ್ಚಲ ಕೃತಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಲೋಪದೋಷಗಳಿಗೆ ಹೊರತಲ್ಲದ ಪ್ರಸನ್ನ ಅವರ ಈ ಕಾದಂಬರಿ ಮುಖ್ಯವಾಗಿ ನಮ್ಮ ಗಮನ ಸೆಳೆಯುವುದು ಅದು ಹಿಡಿದಿರುವ ವಿಭಿನ್ನ ಜಾಡಿನಿಂದಾಗಿ. ಲೇಖಕರ ವೈಜ್ಞಾನಿಕ ಮತ್ತು ಜೀವಪರ ಧೋರಣೆಗಳಿಗನುಗುಣವಾಗಿ ನಿಲ್ಲುವ ಈ ಕಿರು ಕಾದಂಬರಿ ಅನೇಕ ಕಾರಣಗಳಿಂದಾಗಿ ಗಮನ ಸೆಳೆಯುವ ಪುಟ್ಟ ಕೃತಿ.

ಪ್ರಸನ್ನರ ‘ಸು’ ಕಾದಂಬರಿಯಲ್ಲಿ ಭಾರತ, ಚೀನಾ, ಟಿಬೆಟ್‌ಗಳ ಚರಿತ್ರೆ, ರಾಜಕೀಯ, ಕ್ಯಾನ್ಸರ್ ರೋಗ, ವಿಜ್ಞಾನಿಗಳ ಸಂಶೋಧನೆ, ಸಾವಿಲ್ಲದ ಜೀವಕೋಶ ಹೆನ್ರಿಯೆಟ್ಟಾ, ಅಲೆಕ್ಸಾಂಡರನ ಕಣ್ಣುಗಳು, ಕಡ್ಲೆ ಕಾಯಿಗೆ ತಗಲುವ ಶಿಲೀಂದ್ರಗಳ ಬಗ್ಗೆ ಕುತೂಹಲ ಹುಟ್ಟಿಸುವ ವಿವರಗಳನ್ನು ಒಳಗೊಂಡ ವೈಜ್ಞಾನಿಕ ವಸ್ತು ವಿಷಯವಿದೆ. ಕ್ಯಾನ್ಸರ್ ರೋಗವನ್ನು ಅರ್ಥಮಾಡಿಕೊಂಡಿರುವ ರೀತಿ, ಅದಕ್ಕೆ ಚಿಕಿತ್ಸೆ ದೊರೆಯತೊಡಗಿದ್ದು, ಅದರಿಂದ ಭಯ ಹುಟ್ಟಿದ್ದು, ರೋಗದ ಹಿಂದೆ ಅವಿತ ರಾಜಕಾರಣ ಇವೆಲ್ಲಕ್ಕೂ ದಾಖಲಿತ ಚರಿತ್ರೆ ಇದೆ.

ಲೇಖಕರು ಸ್ವತಃ ವಿಜ್ಞಾನಿಯಾಗಿರುವುದರಿಂದ ಕ್ಯಾನ್ಸರ್ ರೋಗವನ್ನು ಕುರಿತು ನೀಡುವ ವಿವರಗಳೆಲ್ಲವೂ ಅಧಿಕೃತವಾಗಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅನೇಕರು ತೋರಿರುವ ಅವಿವೇಕಿತನಗಳ ಜೊತೆಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹೊಮ್ಮಿದ ಫಲಿತಾಂಶಗಳನ್ನು ಲೇಖಕರು ದಾಖಲಿಸಿದ್ದಾರೆ. ಈ ರೋಗವನ್ನು ಶಾಶ್ವತವಾಗಿ ಓಡಿಸಲು ಸಾಧ್ಯವೇ ಎಂಬ ಜಿಜ್ಞಾಸೆಗೆ ಮಾತ್ರ ಅವರಿಂದ ಸ್ಪಷ್ಟ ಉತ್ತರ ದೊರೆಯುವುದಿಲ್ಲ. ಪ್ರಸನ್ನರ ಈ ಕಾದಂಬರಿಯು ಇವೆಲ್ಲವನ್ನು ಆಧರಿಸಿಯೇ ಸ್ಪಷ್ಟ ಇತಿಹಾಸವೊಂದನ್ನು ನಿರೂಪಿಸಲು ಹವಣಿಸತೊಡಗುತ್ತದೆ. ಕಥೆಯ ವೈಧ್ಯಕೀಯ ಸಂಶೋಧನೆ ಮತ್ತು ಆಧ್ಯಾತ್ಮಿಕ ಆಯಾಮಗಳು ಸೂಕ್ಷ್ಮವಾಗಿ ಹೆಣೆದು, ಇದು ವಿಶಿಷ್ಟ ಕೃತಿಯಾಗಿ ಹೊಮ್ಮಿದೆ.

‘ಸು’ ಈ ಕಾದಂಬರಿಯ ಕೇಂದ್ರ ವ್ಯಕ್ತಿ. ಅವನ ಪೂರ್ಣ ಹೆಸರು ಝವ್ ಜೊಂಗ್ ಸು. ಚೀನಾದ ಚೀಡಾಂಗ್ ಸಮೀಪದ ಯಾಂಗ್ ಜೀ ನದಿತೀರದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಅವನು ಸ್ನಾತಕೋತ್ತರ ಪದವೀಧರ. ಅವನು ಮದುವೆಯಾಗುವ ಮಿಯಾನ್ ಗರ್ಭಕಂಠದ ಕ್ಯಾನ್ಸರ್‌ಗೆ ಬಲಿಯಾಗುತ್ತಾಳೆ. ಆಮೇಲೆ ಟಿಬೆಟ್ಟಿನಲ್ಲಿ ಅವನು ಮದುವೆ ಮಾಡಿಕೊಳ್ಳುವ ನೊರ್ಝೋಮಳನ್ನು ದೊಡ್ಡ ಕರುಳಿನ ಕ್ಯಾನ್ಸರ್ ಬಲಿ ತೆಗೆದುಕೊಳ್ಳುತ್ತದೆ.

ಆನಂತರ ಅಮೆರಿಕಕ್ಕೆ ಹೋಗುವ ಸು ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡುಹಿಡಿಯಲು ಹೆಚ್ಚಿನ ಸಂಶೋಧನೆ ಮುಂದುವರೆಸುತ್ತಾನೆ. ಸು ವಿಜ್ಞಾನಿ, ಕ್ಯಾನ್ಸರ್ ರೋಗಕ್ಕೆ ಕಾರಣ ಕಂಡುಹಿಡಿಯುವುದು ಅವನ ವಿಶೇಷ ಅಧ್ಯಯನದ ವಸ್ತು. ಕ್ಯಾನ್ಸರ್ ಕುರಿತ ಅಧ್ಯಯನಗಳ ವಿವಿಧ ಮಜಲುಗಳನ್ನು ದಾಟಿಸುವ ಉದ್ದೇಶದಲ್ಲಿ ಸುನ ಅನುಭವಗಳು ಬೆರೆತಿವೆ. ಆಶ್ಚರ್ಯವೆಂದರೆ ಅವನು ಕೂಡ ಲಿವರ್ ಕ್ಯಾನ್ಸರ್‌ಗೆ ತುತ್ತಾಗುವುದು. ಈ ಪಾತ್ರ ಒಂದು ವಿಶಿಷ್ಟ ಸೃಷ್ಟಿ.

ಕಾದಂಬರಿಯಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಪ್ರಕಾಶನ ಪಾತ್ರ ನಿರೂಪಣೆ. ಪ್ರಕಾಶ ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರದವನು. ಕಾದಂಬರಿಯ ಪೂರ್ವಾರ್ಧವನ್ನು ಪ್ರಕಾಶ ತುಂಬಿಬಿಡುತ್ತಾನೆ. ಅವನು ವಿಜ್ಞಾನ ವಿಷಯದ ಸ್ನಾತಕೋತ್ತರ ಪದವೀಧರ. ಕ್ಯಾನ್ಸರ್ ಜೀವಕೋಶಗಳು ಆಹಾರ ಮತ್ತು ಆಮ್ಲಜನಕವಿಲ್ಲದೆ ತಮ್ಮ ಬೆಳವಣಿಗೆಯನ್ನು ಹೇಗೆ ಕುಂಠಿತಗೊಳಿಸುತ್ತವೆ ಎಂಬುದು ಅವನ ಪಿಎಚ್. ಡಿ.ಯ ಸಂಶೋಧನ ವಿಷಯವಾಗಿದೆ.

ಪ್ರಕಾಶ ಈ ಕುರಿತು ಅನೇಕ ಪ್ರಯೋಗಗಳನ್ನು ಕೈಗೊಳ್ಳುತ್ತಾನೆ. ತನ್ನ ಈ ಪ್ರಯೋಗಗಳ ಕುರಿತು ಅವನು ಅನೇಕ ಲೇಖನಗಳನ್ನು ಬರೆದು ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕೆಗಳಲ್ಲಿ ಪ್ರಕಟಿಸುತ್ತಾನೆ. ಅವನ ಈ ಪ್ರತಿಭೆಯನ್ನು ಕಂಡು ಅಮೆರಿಕಾದ ರಿಚ್ಮಂಡ್ ನಗರದ ಹೆಸರಾಂತ ವಿಶ್ವವಿದ್ಯಾಲಯದ ಡಾ. ಆನಂದ ಎಂಬ ಸಹಾಯಕ ಪ್ರಾಧ್ಯಾಪಕರೊಬ್ಬರಿಂದ ಹೆಚ್ಚಿನ ಸಂಶೋಧನೆಗೆ ಆಹ್ವಾನ ಬರುತ್ತದೆ. ಆದ್ದರಿಂದ ಪ್ರಕಾಶ ತನ್ನ ಹೆಂಡತಿ-ಮಕ್ಕಳೊಡನೆ ಅಮೆರಿಕಾಗೆ ಹೋಗುತ್ತಾನೆ. ಅಮೆರಿಕಾದಲ್ಲಿ ಪ್ರಕಾಶನಿಗೆ ಸು ಪರಿಚಯವಾಗುತ್ತಾನೆ. ಸು ಪ್ರಕಾಶನಿಗೆ ಜೀವಕೋಶಗಳನ್ನು ಬೆಳೆಸುವುದನ್ನು ಕಲಿಸುತ್ತಾನೆ; ಪ್ರಕಾಶ ಸಂಶೋಧನೆಯಲ್ಲಿ ಒಳ್ಳೆಯ ಹೆಸರು ಮಾಡುತ್ತಾನೆ. ಅವನು ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕನಾಗಿ ಬಡ್ತಿ ಪಡೆಯುತ್ತಾನೆ.

ಪ್ರಸನ್ನ ಸಂತೇಕಡೂರವರ ‘ಸು’ ಕೃತಿಯನ್ನು ಓದುತ್ತಾ ಹೋದಂತೆ ಸಿದ್ಧಾರ್ಥ ಮುಖರ್ಜಿಯರ ‘ದಿ ಎಂಪರರ್ ಆಫ್ ಆಲ್ ಮ್ಯಾಲಡೀಸ್’ ಕೃತಿ ನೆನಪಿಗೆ ಬರುತ್ತದೆ. ಆಸಕ್ತಿ, ಕುತೂಹಲ, ವಿಷಾದ ಮತ್ತು ರಂಜನೆ ಹೀಗೆ ವಿವಿಧ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಕಾದಂಬರಿ ನಮ್ಮನ್ನು ಒಳಗು ಮಾಡುತ್ತದೆ. ವಿಸ್ತೃತ ಮಾಹಿತಿ ಮತ್ತು ಉತ್ತಮ ರೀತಿಯ ಸಂಶೋಧನೆಯ ವಿವರಗಳು ಈ ಕೃತಿಯಲ್ಲಿವೆ. ಕಾದಂಬರಿ ಉದ್ದಕ್ಕೂ ಕನಸುಗಳು, ಭ್ರಮೆಗಳು ಮತ್ತು ಕಾಕತಾಳೀಯ ಪ್ರಸಂಗಗಳು ಇವೆ; ಟಾಲ್ ಸ್ಟಾಯ್, ರಾಬರ್ಟ್ ಫ್ರಾಸ್ಟ್, ಶೆಲ್ಲಿ ಮೊದಲಾದವರ ಕೃತಿಗಳ ಉಲ್ಲೇಖವಿದೆ.

ಡಾ. ಆನಂದ, ನೊರ್ಬು, ಹೇಲಾ, ಮಿಯಾನ್, ಹೆನ್ರಿಯೆಟ್ರಾ ಲ್ಯಾಕ್ಸ್ ಪಾತ್ರಗಳು ಒಂದಿಷ್ಟು ಗಮನ ಸೆಳೆಯುತ್ತವೆ. ನೀಳ್ಗತೆಯ ಹಾಗೆ ಸರಳ ಹಾಗೂ ನೇರ ನಿರೂಪಣೆಯನ್ನೊಳಗೊಂಡ ‘ಸು’ದ ಕಥೆ ಏಕಪ್ರಕಾರವಾಗಿ ಹರಿದಿದೆ. ಆದರೆ ಭಾಷೆ, ತಂತ್ರ ಮತ್ತು ಶೈಲಿಗಳ ವಿಷಯದಲ್ಲಿ ಎತ್ತಿ ಹೇಳಬಹುದಾದ ಯಾವ ಅಂಶವೂ ಇಲ್ಲದಿರುವುದು ದೊಡ್ಡ ಕೊರತೆ. ಕನ್ನಡ ಸಾಹಿತ್ಯದಲ್ಲಿ ಕೊರತೆಯೆನಿಸಿದ್ದ, ವಿಜ್ಞಾನ-ವೈದ್ಯಕೀಯ ಜಗತ್ತನ್ನು ಹೊಸದಾಗಿ ತೋರಿಸುವ ಹಿನ್ನೆಲೆಯಲ್ಲಿ ಈ ಕಾದಂಬರಿ ಮಹತ್ವದ್ದಾಗುತ್ತದೆ.

‍ಲೇಖಕರು Admin

July 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: