‘ಸು..’ ಅಂದ್ರೆ ಹೆದರಿ ನಡುಗುವವರಿಗೆ ‘ಸುಕ್ರುಂಡೆ’ ಅಂದ್ರೆ…!

ಆರ್ಥಿಕ ವಿಮೆ ಮತ್ತು ಠೇವಣಿ ವಿಮೆ ಮಸೂದೆ 2017 (The Financial Resolution and Deposit Insurance Bill, 2017) ಸುದ್ದಿ ಆಗಿರುವುದು ಕೇವಲ ಒಂದೇ ಕಾರಣಕ್ಕೆ – ಅದು ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರಿಗೆ ಕುತ್ತು ಬರಲಿದೆ ಎಂಬ ಕಾರಣಕ್ಕಾಗಿ. ಆದರೆ, ಅದು ಈ ನೀರ್ಗಲ್ಲು ಗುಡ್ಡೆಯ ತುದಿ ಮಾತ್ರ. ಇಡಿಯ ಗುಡ್ಡೆಯನ್ನು ಕಂಡರೆ ಎದೆಯೊಡೆದೀತು! ಎಚ್ಚರ!!

ದೇಶದ ಆರ್ಥಿಕ  ಪರಿವೇಷವನ್ನೇ ಬದಲಿಸಿ ಬಿಡುವ ಮಸೂದೆ ಇದು. ಇದರ ಕರಡನ್ನು ಸಿದ್ಧಪಡಿಸುವಾಗ ಆರ್ಥಿಕ ತಜ್ನರ, ಸಾರ್ವಜನಿಕರ ಸಲಹೆಗಳನ್ನು ಪಡೆಯುವ ಬದಲು ಹಣಕಾಸು ಸ್ಥಿರತೆ ಮಂಡಳಿ ಮಾಡಿರುವ (FSB) ಶಿಫಾರಸುಗಳನ್ನು ನೇರವಾಗಿ ಅನುಷ್ಠಾನ ಮಾಡುವ ಹುನ್ನಾರ ನಡೆದಿದೆ. ಈ FSBಆರಂಭಗೊಂಡದ್ದಕ್ಕೊಂದು ಹಿನ್ನೆಲೆ ಇದೆ.   2008ರ ಜಾಗತಿಕ ಆರ್ಥಿಕ ಹಿನ್ನಡೆಯ ವೇಳೆ G7ರಾಷ್ಟ್ರಗಳು (ಈಗ G20) ದೊಡ್ಡ ಕಾರ್ಪೋರೇಟ್ ಗಳು-ಬ್ಯಾಂಕುಗಳನ್ನು ಸಂಕಟದಿಂದ ರಕ್ಷಿಸಲು ರೂಪಿಸಿದ ಮಂಡಳಿ ಇದು. ಇದಕ್ಕೆ IMFಆಶೀರ್ವಾದ ಇದೆ.

ಹಣಕಾಸು ಸಂಸ್ಥೆಗಳನ್ನು ಆರೋಗ್ಯವಂತಗೊಳಿಸಲು ಸಹಜ ಹಾದಿ ಎಂದರೆ, ಅಲ್ಲಿ ರಿಕ್ಯಾಪಿಟಲೈಸ್ ಮಾಡಲು ಹಾದಿಗಳ ಬಗ್ಗೆ ಚಿಂತಿಸುವುದು ಮತ್ತು ಸುಸ್ತಿ ಸಾಲಗಳನ್ನು ವಸೂಲು ಮಾಡಲು ಕಠಿಣ ಕ್ರಮ ಕೈಗೊಳ್ಳುವುದು. ಆದರೆ, ಈ ಮಸೂದೆ ಅದಕ್ಕೆ ಬದಲು ಹಣಕಾಸು ಸಂಸ್ಥೆಗಳನ್ನೇ ಚಿಂದಿ ಮಾಡಿ, ಅದರ ಹೊರೆಯನ್ನು ದೇಶದ ನಾಗರಿಕರ ಮೇಲೆ ಹೇರಲು ಹೊರಟಿದೆ.  ದೇಶದ ಬ್ಯಾಂಕುಗಳ ಸುಸ್ತಿದಾರರಲ್ಲಿ 89% ಭಾಗ ದೊಡ್ಡ  ಕಾರ್ಪೋರೇಟ್ ಗಳದು. ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಕೋರ್ಟು ಸುಸ್ತಿದಾರರ ಹೆಸರು ಬಹಿರಂಗಪಡಿಸಲು ಹೇಳಿಯಾಗಿದೆ. ಅದನ್ನು ಮಾಡಿ ವಸೂಲಿ ಕ್ರಮಗಳಿಗೆ ಹೊರಡುವ ಬದಲು ಸರ್ಕಾರ ಬಡಪಾಯಿಗಳ ಬೆನ್ನು ಹತ್ತಿದೆ.

ಮಸೂದೆಯ ಬಗ್ಗೆ

ಇದೇ ಆಗಸ್ಟ್ 10ರಂದು ಲೋಕಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು FRDIಮಸೂದೆ ಮಂಡಿಸಿದರು ಮತ್ತು ಇದು ಬ್ಯಾಂಕು, ವಿಮೆ, ಹಣಕಾಸು ಸಂಸ್ಥೆಗಳಿಗೆ ದಿವಾಳಿಯೇಳುವುದರಿಂದ ರಕ್ಷಣೆ ಕೊಡಲಿದೆ ಎಂದು ಅವರು ಹೇಳಿದರು. ಆರ್ಥಿಕ ದುಸ್ಥಿತಿಯ ಸಮಯದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವುದು, ಹಣಕಾಸಿನ ಶಿಸ್ತು ತರುವುದು, ವಿಫಲ ಬ್ಯಾಂಕುಗಳ ವಿಲೀನದ ಮೂಲಕ ಅವುಗಳ ಸುಧಾರಣೆಗೆ ಸಾರ್ವಜನಿಕ ಹಣ ವ್ಯಯ ಆಗುವುದನ್ನು ತಡೆಯುವುದು ಮತ್ತು ಇದನ್ನೆಲ್ಲ ಸಮಯಬದ್ಧ ಗೊಳಿಸಲು ‘ನಿರ್ಣಯ ಮಂಡಳಿ’ (Resolution Corporation) ರಚಿಸುವುದು ಮಸೂದೆಯ ಉದ್ದೇಶ ಎಂಬುದು ಅವರ ಇಂಗಿತವಾಗಿತ್ತು.

2016-17ಬಜೆಟಿನಲ್ಲೇ ಈ ಬಗ್ಗೆ ಹೇಳಿದ್ದ ಹಣಕಾಸು ಸಚಿವೆ ಜೇಟ್ಲಿ, 2016ಮಾರ್ಚ್ ನಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಅಡಿಷನಲ್ ಕಾರ್ಯದರ್ಶಿ ಅಜಯ್ ತ್ಯಾಗಿ ಅವರ ಅಧ್ಯಕ್ಷತೆಯಲ್ಲಿ ಈ ಮಸೂದೆ ಕರಡು ಸಿದ್ಧಪಡಿಸಲು ಸಮಿತಿ ರಚಿಸಿದ್ದರು. ಸಮಿತಿ ರಚಿಸಿದ ಕರಡಿಗೆ, ಈ ವರ್ಷ ಜೂನ್ ನಲ್ಲಿ ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ಕೇಂದ್ರ ಸಂಪುಟ ಒಪ್ಪಿಗೆ ನಿಡಿತ್ತು. ಮಸೂದೆ ಮಂಡಿಸಲು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದಾಗ ಇದನ್ನುಚರ್ಚಿಸಲು ಸಂಸತ್ತಿನ  ಜಂಟಿ ಸಮಿತಿಗೆ ಒಪ್ಪಿಸಲಾಗಿತ್ತು. ಈಗದು ಮತ್ತೆ ನೆನೆಗುದಿಗೆ ಬಿದ್ದಂತಿದೆ.

ಬ್ಯಾಂಕುಗಳು ಕಂಗಾಲು

ಈ ಕರಡು ಮಸೂದೆಯ ಪ್ರಕಾರ, ಆರೋಗ್ಯ ಕೆಟ್ಟಿರುವ ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳನ್ನು ಬ್ರಿಜ್ ಸೇವಾದಾತರಿಗೆ ಹಸ್ತಾಂತರಿಸಿ, ಬಳಿಕ ಬೇರೆ ಸಂಸ್ಥೆಯ ಜೊತೆ ವಿಲೀನದ ಅಥವಾ ವಿಸರ್ಜಿಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಬ್ರಿಜ್ ಸೇವಾದಾತ ಸಂಸ್ಥೆ ಖಾಸಗಿ ಆಗಿರಬಹುದು. ಅಂದರೆ, ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಖಾಸಗಿಯವರ ಕೈಗೆ ತಟ್ಟೆಯಲ್ಲಿಟ್ಟು ಹಸ್ತಾಂತರಿಸುವ, ಬ್ಯಾಂಕ್ ಗ್ರಾಹಕರ ಠೇವಣಿಗಳಿಗೆ ಎಳ್ಳುನೀರು ಬಿಡುವ ಯೋಜನೆ ಇದು.

ಹಾಗೆ ನೋಡಿದರೆ, ಬ್ಯಾಂಕುಗಳಲ್ಲಿ ಸುಸ್ತಿಸಾಲಗಳಿಗೆ ( NPA) ಕಾರಣ ಸರ್ಕಾರದ ತಪ್ಪು ನೀತಿಗಳು ಮತ್ತು ಬಲಾಢ್ಯರಾದ ಉದ್ದೇಶಪೂರ್ವಕ ಸುಸ್ತಿದಾರರು. ಅವರ ಮೈ ಮುಟ್ಟುವ ಬದಲು, ಸಾರ್ವಜನಿಕರ ಠೇವಣಿಗಳು, ಬ್ಯಾಂಕ್ ಸಿಬ್ಬಂದಿಗಳು, ರೈತರು, ಸಣ್ಣ ಕೈಗಾರಿಕೆಗಳು, ಸಣ್ಣ ವ್ಯವಹಾರಸ್ಥರು, ಉದ್ಯೋಗಸ್ಥರ ಉಳಿತಾಯದ ಹಣದ ಮೇಲೆ ಕಣ್ಣು ಹಾಕುವ ಪ್ರಯತ್ನದಲ್ಲಿರುವಂತಿದೆ ಸರಕಾರ!

ಇಲ್ಲಿ ಸರಕಾರ ಸ್ಥಾಪಿಸಲು ಉದ್ದೇಶಿಸಿರುವ ನಿರ್ಣಯ ಮಂಡಳಿ (Resolution Corporation) ಅತಿಯಾದ ಅಧಿಕಾರ ಉಳ್ಳದ್ದಾಗಿದ್ದು, ರಿಸರ್ವ್ ಬ್ಯಾಂಕ್, ಸೆಂಟ್ರಲ್ ವಿಜಿಲೆನ್ಸ್ ಕಮಿಷನ್, ಸಿ ಬಿ ಐ, ನ್ಯಾಯಾಂಗ ಸೇರಿದಂತೆ ಎಲ್ಲ ನಿಯಂತ್ರಣ ಪ್ರಾಧಿಕಾರಗಳಿಗಿಂತ ಬಲಶಾಲಿ ಆಗಲಿದೆ ಮತ್ತು ಇದು ನೇರವಾಗಿ ಹಣಕಾಸು ಇಲಾಖೆಯ ಅಡಿ ಬರಲಿದೆ!

DICGC ಅಪ್ರಸ್ತುತ

FRDI ಮಸೂದೆ ಜಾರಿಗೆ ಬಂದರೆ, ಠೇವಣಿಗಳ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ನಿಗಮ [Deposit Insurance and Credit Guarantee Corporation” (DICGC)] ಅಪ್ರಸ್ತುತ ಆಗಲಿದೆ.  ಜೊತೆಗೆ, ಆ ಹಣಕಾಸು ಸಂಸ್ಥೆಗೆ ಮರುಜೀವ ಕೊಡುವ ವೇಳೆಗೆ, ಅದರಲ್ಲಿ ಠೇವಣಿ ಹೂಡಿರುವ ಜನರಿಗೆ, ವಿಮಾ ಮೊತ್ತ ದಾಟಿ ಇರುವ ಅವರ ಠೇವಣಿಗಳನ್ನು ಅವರಲ್ಲಿ ಕೇಳದೆ, ಈಕ್ವಿಟಿ ಆಗಿ ಪರಿವರ್ತಿಸಿ, ಅವರನ್ನು ಒತ್ತಾಯಪೂರ್ವಕವಾಗಿ ಬ್ಯಾಂಕಿನ ಶೇರುದಾರರನ್ನಾಗಿಸುವ ಪ್ರಸ್ತಾಪ ಇದೆ.

ಅರ್ಥಾತ್, ಸಾಲ ತಗೊಂಡು ಹಿಡಿಸಿದವರು ಸುರಕ್ಷಿತ; ಬ್ಯಾಂಕಿನಲ್ಲಿ ಠೇವಣಿ ಇಟ್ಟವರು ಆ ತಪ್ಪಿಗಾಗಿ ತಮ್ಮ ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣವನ್ನು ತ್ಯಾಗ ಮಾಡಬೇಕು! ಜನ ಸಾಮಾನ್ಯವಾಗಿ ರಾಷ್ಟ್ರೀಕ್ರತ ಬ್ಯಾಂಕುಗಳಲ್ಲಿ ಠೇವಣಿ ಇಡುವುದು, ಅದಕ್ಕೆ ಸರಕಾರದ ಗ್ಯಾರಂಟಿ ಇರುತ್ತದೆ ಎಂಬ ನಂಬಿಕೆಯಿಂದ. ಆದರೆ, ಈಗ ನಂಬಿಕೆ ಬಿಡಿ,  ಬ್ಯಾಂಕುಗಳ ಬೇಜವಾಬ್ದಾರಿ ಸಾಲ ವಿತರಣೆಗೂ ಠೇವಣಿದಾರನೇ ಈಗ ಜವಾಬ್ದಾರ!!

IMFನಂತಹ ಸಂಸ್ಥೆಗಳ ಮೆದುಳಿನಂತೆ ನಡೆಯುವ ಈ ಪ್ರಕ್ರಿಯೆ ಹೇಗಿರುತ್ತದೆ ಎಂಬುದಕ್ಕೆ ಸೈಪ್ರಸ್ ನ ಈ ಉದಾಹರಣೆ ನೋಡಿ: 2013ಮಾರ್ಚ್ ನಲ್ಲಿ ಬ್ಯಾಂಕ್ ಆಫ್ ಸೈಪ್ರಸ್ ಸಂಕಷ್ಟಕ್ಕೆ ಸಿಲುಕಿದಾಗ, ಒಂದು ಲಕ್ಷ ಯುರೋ ಗಿಂತ ಹೆಚ್ಚಿನ ಮೊತ್ತದ ಠೇವಣಿ ಇಟ್ಟವರು 40% ತ್ಯಾಗಕ್ಕೆ ಸಿದ್ಧರಾಗಬೇಕಾಯಿತು. ಬ್ಯಾಂಕು ಉಳಿಯಿತು, ಅದರ ಠೇವಣಿದಾರರು ಕಳೆದುಕೊಂಡರು!

ಹೇರ್ ಕಟ್!

ಈ ಕರಡು ಮಸೂದೆಯ ಅನ್ವಯ, ಸುಸ್ತಿ ಸಾಲಗಾರರಿಗೆ ಪಾವತಿ ಮಾಡಲು ಅನುಕೂಲ ಮಾಡಿಕೊಡುವುದಕ್ಕೆ, ಅಸಲು ಸಾಲದ ಮೊತ್ತದಲ್ಲೇ ಕಡಿತದ ಕೊಡುಗೆ (ಇದೇ ಹೇರ್ ಕಟ್!) ಕೂಡ ನೀಡಬಹುದು.

ಬ್ಯಾಂಕುಗಳ ವಿಲೀನ

FRDIಮಸೂದೆ ಬ್ಯಾಂಕುಗಳ ವಿಲೀನದ ಬಗ್ಗೆ ಹೇಳುವಾಗ, ಹೀಗೆ ವಿಲೀನದಿಂದ ಬ್ಯಾಂಕುಗಳು ಬಲಗೊಳ್ಳುತ್ತವೆ ಎಂಬ ನಂಬಿಕೆ ಹೊಂದಿದೆ. ಅದು ಸತ್ಯವಾಗಬೇಕಿಲ್ಲ ಎಂಬುದಕ್ಕೆ ನಮ್ಮಲ್ಲೇ ಇತ್ತೀಚೆಗಿನ ಉದಾಹರಣೆ ಇದೆ. ಇದೇ ಎಪ್ರಿಲ್ ಒಂದರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಉಪ ಬ್ಯಾಂಕುಗಳನ್ನು ವಿಲೀನಗೊಳಿಸಿಕೊಂಡು, ಆಸ್ತಿವಹಿಯಲ್ಲಿ ಜಗತ್ತಿನ ಟಾಪ್ 50 ಬ್ಯಾಂಕುಗಳಲ್ಲಿ ಒಂದೆನಿಸಿಕೊಂಡಿತು. ಅದು 37 ಕೋಟಿ ಗ್ರಾಹಕರು ಮತ್ತು 26 ಲಕ್ಷ ಕೋಟಿ ಠೇವಣಿ ಹೊಂದಿತ್ತು. ಆದರೆ, 2018ರ ಮೊದಲ ತ್ರೈಮಾಸಿಕದಲ್ಲಿ SBI ಗುಂಪಿನ ಆಪರೇಟಿಂಗ್ ಲಾಭದಲ್ಲಿ 13.72%  ಇಳಿಕೆ ಆಗಿತ್ತು!

ಇದೆಲ್ಲ ಒಟ್ಟು, ಬ್ಯಾಂಕಿಂಗ್ ಮತ್ತು ವಿಮಾ ವ್ಯವಸ್ಥೆಗಳ ಖಾಸಗೀಕರಣಕ್ಕೆ IMFನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಹುನ್ನಾರದ ಭಾಗವಾಗಿದ್ದು, ಭಾರತೀಯ ಜೀವ ವಿಮಾ ನಿಗಮ (LIC), ಜನರಲ್ ಇನ್ಶೂರೆನ್ಸ್ ನಿಗಮ (GIC)ಯಂತಹ ಸಮಯದ ಪರೀಕ್ಷೆ ಗೆದ್ದಿರುವ ಸಂಸ್ಥೆಗಳೂ ಖಾಸಗೀಕರಣದ ಅಪಾಯ ಎದುರಿಸಬೇಕಾದ ಸ್ಥಿತಿಗೆ ತಲುಪಿವೆ!

‍ಲೇಖಕರು avadhi

December 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: