ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಶ್ರತ ದೊಡ್ಡೇರಿ ಕವಿತೆ – ಬಾಕಿ ಮೊಕ್ತಾ…

ಸುಶ್ರತ ದೊಡ್ಡೇರಿ

ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರು
ಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತ
ಪಡೆವುದ ಮರೆತು ಬಸ್ ಇಳಿದ ದಿನ
ಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗು
ಕಾಡಿರಬಹುದೇ ಆ ಕಂಡಕ್ಟರಿಗೂ ಮರಳಿಸದೆ ಉಳಿದ ಚಿಲ್ಲರೆ?
ಅಥವಾ ನೂರಾರು ಚಿಲ್ಲರೆ ವಿಷಯಗಳ ನಡುವೆ
ಅವನಿಗೆ ಮರೆತೂ ಹೋಗಿರಬಹುದು

ಹಾಗೆ ಮರೆತು ಬಂದುದು ಹಲವು ವಿಷಯ
ದಿನಸಿ ಅಂಗಡಿಯಲ್ಲಿ ತೂಗಿಟ್ಟಿದ್ದ ಸಕ್ಕರೆ
ತರಕಾರಿ ಅಂಗಡಿಯಲ್ಲಿ ಮಡಚಿಟ್ಟಿದ್ದ ಕೊಡೆ
ಮದುವೆಮನೆಯಲ್ಲಿ ಮಾತಾಡಿಸಲೇಬೇಕಿದ್ದ ನೆಂಟ
ಭಾಷಣದ ನಡುವೆ ಮಾಡಬೇಕೆಂದಿದ್ದ ಪ್ರಸ್ತಾಪ
ವಿದಾಯದ ಮೊದಲು ಕೊಡಬೇಕಿದ್ದೊಂದು ಅಪ್ಪುಗೆ

ಮರೆಯುತ್ತವೆ ಮರೆತ ವಿಷಯಗಳೂ ಕಾಲಕ್ರಮೇಣ
ಬಿಡುತ್ತವೆ ಕಾಡುವುದ ಹೊಸಹೊಸ ಕ್ಷಣಪ್ರವಾಹದಲ್ಲಿ
ಕೆಲವು ಪ್ರಮಾದಗಳ ಸರಿಪಡಿಸಲೂ ಬಹುದು

ಏನೆಂದರೆ, ಕೊಂಡಿ ಕಡಿಯಬಾರದಷ್ಟೇ
ಉಸಿರು ಉಳಿದಿರಬೇಕಷ್ಟೇ
ಅಷ್ಟಿದ್ದರೆ ಏನೋ ಭರವಸೆ:
ಮುಂದಿನ ಸಲ ಹೋದಾಗ ಸಿಗಬಹುದು ಮರೆತುದು
ದಿನವೂ ಹೋಗುವ ಅಂಗಡಿಯಲ್ಲವೇ, ಎತ್ತಿಟ್ಟಿರುತ್ತಾನೆ ಸೇಟೂ,
ನಾಳೆ ಅತ್ತ ಹೋದಾಗ ಅವನೇ ಕರೆದು ಕೊಡಬಹುದು
ಸಂತೆಯಲ್ಲಿ ತರಕಾರಿ ಕೊಳ್ಳುವಾಗ ಸಿಗಬಹುದು ಅದೇ ನೆಂಟ
ಅಯ್ಯೋ ಆವತ್ತು ಮಾತಾಡಿಸಬೇಕೆಂದಿದ್ದೆ,
ಊಟವಾದುದೇ ಊರಿಗೆ ಹೋಗುವರಾರೋ ಸಿಕ್ಕರು,
ಕಾರಲ್ಲಿ ನೇರ ಮನೆಗೇ ಹೊಗಬಹುದಲ್ಲಾಂತ ಹೊರಟುಬಿಟ್ಟೆ
ಏನೋ ಒಂದು ಕುಂಟುನೆಪ,
ಹೊರತಳ್ಳಬಹುದು ಜೇಬಿನಿಂದ ನೋಟು ತೆಗೆಯುತ್ತಾ

ಹಾಗೆಯೇ ಆ ರೂಟಿಗೆ ಮತ್ತೆ ಬಂದ ಕಂಡಕ್ಟರೂ
ಮಾತಾಡಲು ಸಿಕ್ಕ ಮತ್ತೊಂದು ವೇದಿಕೆಯೂ
ವಾಟ್ಸಾಪೋ ಈಮೇಲೋ ವೀಡಿಯೋ ಕಾಲೋ
ಹೇಗೋ ಸಾಧಿಸಬಹುದು ಮತ್ತೆ ಸಂಪರ್ಕ
ಸಪ್ತಸಾಗರದಾಚೆಯವರ ಜತೆಗೂ

ಸಿಗಲಾರದಂತೆ ಇಲ್ಲವಾದವರದ್ದೇ ಸಮಸ್ಯೆ
ಆಡಲು ಮರೆತ ಮಾತು ಗಂಟಲಲ್ಲೇ ಉಳಿದುಹೋಗಿ
ಎಷ್ಟು ತಣ್ಣನೆ ನೀರು ಹೊಯ್ದರೂ ಅಲ್ಲಾಡದವರ ನೋಡಿ
ತಡೆಹಿಡಿಯುವುದು ಕೈ ಚಿತೆಗೆ ಯಜ್ಞಕಾಷ್ಠ ಹಾಕುವಾಗ
ವಾಪಸು ಬರುವಾಗಿನ ಮೌನದಲಿ ಅನುರಣಿಸುವುದು
ಈಗ ಮರೆತದ್ದನ್ನು ಮರಳಿಸುವವರು ಯಾರು
ಮರಳಿಸಿದರೆ ಅದನ್ನು ಪಡೆಯುವವರು ಯಾರು

ಕೊನೆಯ ಪತ್ರದ ಕೊನೆಯಲ್ಲವರು ಬರೆದಿದ್ದರು:
ಬಾಕಿ ಮೊಕ್ತಾ.
ಹೊದಿಕೆ ಸರಿಸಿ ಮುಖವನ್ನೇನೋ ತೋರಿಸಿದರು;
ಆದರದು ಪೂರ್ತಿ ಕಪ್ಪುಗಟ್ಟಿತ್ತು.

‍ಲೇಖಕರು avadhi

27 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading