ನಾಲ್ವರು ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!..

ಸಂಕೇತ್ ಗುರುದತ್

ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯ ಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ ವೈ ಎಸ್, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು ಕಾರ್ಟೂನ್ಗಳ ಪ್ರದರ್ಶನ, `ನಗೆ-ಸುಗ್ಗಿ!’

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ಈ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಇದೇ ಜನವರಿ 28ರ ಶನಿವಾರ (ಇಂದು) ಸಂಜೆ 4-30ಕ್ಕೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಆರಂಭಗೊಳ್ಳಲಿದೆ. ನಾಡಿನ ಹಿರಿಯ ಚಿತ್ರಕಲಾವಿದರಾದ ಚಂದ್ರನಾಥ್ ಆಚಾರ್ಯ ಅವರು, `ಅಪರಂಜಿ’ ಹಾಸ್ಯ ಮಾಸ ಪತ್ರಿಕೆಯ ಸಂಪಾದಕರಾದ ಶಿವಕುಮಾರ್ ಅವರು, ಹಿರಿಯ ಹಾಸ್ಯ ಸಾಹಿತಿಗಳಾದ ಭುವನೇಶ್ವರಿ ಹೆಗಡೆ ಅವರು ಹಾಗೂ ಹಿರಿಯ ವ್ಯಂಗ್ಯಚಿತ್ರಕಾರರಾದ ಎಂ ಎನ್ ಸುಬ್ರಹ್ಮಣ್ಯ ಅವರು ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ದಿನವೂ ಹೊರಬೀಳುವ ಸುದ್ದಿಗಳಿಗೆ ಗುದ್ದು, ಟೀಕೆಗಳಿಗೆ ಟಿಪ್ಪಣಿ ಹಾಗೂ ನ್ಯೂಸ್ನ ಹಿಂದಿನ ನಾನ್ಸೆನ್ಸ್, ಹೀಗೆ ದಿನನಿತ್ಯದ ಸರ್ವೇ ಸಾಮಾನ್ಯ ಸಂಗತಿಗಳನ್ನು ಹಾಗೂ ವಾಸ್ತವದ ರಾಜಕೀಯ ಪರಿಸ್ಥಿತಿಯನ್ನು ತಮ್ಮದೇ ಆದ ಶೈಲಿಯಲ್ಲಿ ಪನ್‍ಗಳ ಮೂಲಕ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾ ಬಂದಿದ್ದಾರೆ ಈ ನಾಲ್ವರು! ಹೀಗೆ ರಚಿಸಿದ ವ್ಯಂಗ್ಯಚಿತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಇವರು ಪ್ರದರ್ಶಿಸುತ್ತಿದ್ದಾರೆ.
******
ನಂಜುಂಡಸ್ವಾಮಿ ವೈ ಎಸ್ ವತ್ತನೇ ವರ್ಷದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಪ್ರಿಂಟ್ ಮೀಡಿಯಾದಲ್ಲಿ ವೃತ್ತಿ ಆರಂಭಿಸಿದರು. ಪ್ರವೃತ್ತಿಗಾಗಿ ಕಾರ್ಟೂನ್ ರಚನೆಯನ್ನು ಆಯ್ಕೆ ಮಾಡಿಕೊಂಡರು. `ಹಾಗೇ ಸುಮ್ಮನೆ’ ಎಂಬಂತೆ ರಚಿಸಿದ ಕಾರ್ಟೂನ್ ಹಾಗೂ ಕ್ಯಾರಿಕೇಚರ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರು. ದಿನ ಬೆಳಗಾಗುವುದರೊಳಗೆ ಸ್ವಾಮಿ ಅವರ ರಚನೆಗಳು ಕಾರ್ಟೂನ್ ಕ್ಷೇತ್ರದ ದಿಗ್ಗಜರ ಕಣ್ಣಿಗೆ ಬಿದ್ದು ಪ್ರೋತ್ಸಾಹದ ಹೊಳೆಯೇ ಹರಿಯಿತು. ನಂಜುಂಡ ಸ್ವಾಮಿ ಕನ್ನಡ ಕಾರ್ಟೂನ್ ಕ್ಷೇತ್ರದ ಕಣ್ಮಣಿಯಾದರು. ಎಲ್ಲೆಲ್ಲೂ ಸಂಗೀತವೇ ಎಂಬಂತೆ ಎಲ್ಲೆಲ್ಲೂ ಸ್ವಾಮಿ ಅವರ ಕಾರ್ಟೂನ್-ಕ್ಯಾರಿಕೇಚರ್ಗಳೇ ಹರಿದಾಡಿ ಮುದ ಕೊಡ ಹತ್ತಿವೆ. ನಾಡಿನ ದಿಗ್ಗಜರ ಕ್ಯಾರಿಕೇಚರ್ ರಚನೆಗಳು ಸಾಕಷ್ಟು ದೊಡ್ಡ ಹೆಸರನ್ನು ತಂದಿದೆ.

ಐದಾರು ವರ್ಷಗಳಲ್ಲಿಯೇ ಸಾವಿರಾರು ಕಾರ್ಟೂನ್ಗಳನ್ನೂ, ಕ್ಯಾರಿಕೇಚರ್ಗಳನ್ನೂ ರಚಿಸಲು ನನಗೆ ಸಿಕ್ಕಿರುವ ಪ್ರೋತ್ಸಾಹವೇ ಮುಖ್ಯ ಬಲವಾಗಿದೆ! ಎಲ್ಲಾ ಸಹೃದಯರು ನನ್ನ ಕಾರ್ಟೂನ್ಗಳನ್ನು ಮೆಚ್ಚಿ ಪೂರಕ ಪ್ರತಿಕ್ರಿಯೆ ನೀಡುತ್ತಾ ನನ್ನನ್ನು ತಿದ್ದಿ ಬೆಳೆಸುತ್ತಿದ್ದಾರೆ ಎಂಬುದು ಸ್ವಾಮಿ ಅವರ ಮನದ ಮಾತಾಗಿದೆ. ದೇಶ-ವಿದೇಶಗಳ ಸ್ಪರ್ಧೆಗಳಲ್ಲಿ ಆಯ್ಕೆಯೂ ಆಯ್ತು, ಬಹುಮಾನ, ಪ್ರಶಸ್ತಿಗಳೂ ಬಂತು. ಅಲ್ಲದೇ ಹಲವು ಖ್ಯಾತ ವ್ಯಂಗ್ಯಚಿತ್ರ ಹಾಗೂ ಕ್ಯಾರಿಕೇಚರ್ಗಳ ಸ್ಪರ್ಧೆಗಳಿಗೆ ತೀರ್ಪುಗಾರರೂ ಆದರು!

ದತ್ತಾತ್ರಿ ಎಂ ಎನ್ಮೂಲ ತೀರ್ಥಹಳ್ಳಿ ಸಮೀಪದ ಕಟ್ಟೆಹಕ್ಕಲು. ಬೆಂಗಳೂರಿಗೆ ಬಂದ ಹೊಸತರಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕರೂ ಅಲ್ಲಿ ಹೆಚ್ಚು ದಿನಗಳು ಇರಲಾರಲಿಲ್ಲ. ಆ ಕೆಲಸಕ್ಕೆ `ಗುಡ್ ಬೈ’ ಹೇಳಿ ಹೆಸರಾಂತ ಕಲಾವಿದ ಗುಜ್ಜಾರ್ ಅವರ ಆನಿಮೇಷನ್ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿದರು. `ಅಲ್ಲಿಂದ ತಮ್ಮ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿತು’ ಎನ್ನುವುದು ದತ್ತಾತ್ರಿ ಅವರ ಮನದ ಮಾತು. ಸದ್ಯದಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಯೂ ಐ ಡಿಸೈನರ್ ಆಗಿದ್ದಾರೆ. ಪ್ರವೃತ್ತಿಯಾಗಿ ಕಾರ್ಟೂನ್‍ಗಳನ್ನು ಬರೆಯುತ್ತಾ ಸಾಮಾಜಿಕ ಜಾಲತಾಣದಲ್ಲಿ ಜನನಿತರಾಗಿದ್ದಾರೆ.

`ದಿನನಿತ್ಯದ ಲಘು ಹಾಸ್ಯಗಳು ನನ್ನ ಬಹುತೇಕ ವ್ಯಂಗ್ಯಚಿತ್ರಗಳ ವಿಷಯಗಳಾಗಿವೆ’ ಎನ್ನುತ್ತಾರೆ. ಹೀಗೆ ಹಲವು ವರ್ಷಗಳಿಂದ ತಮ್ಮ ವೃತ್ತಿಯ ಜೊತೆ ಜೊತೆಗೆ ತಮ್ಮಲ್ಲಿನ ವ್ಯಂಗ್ಯಚಿತ್ರ ಬರೆಯುವ ಪ್ರಕ್ರಿಯೆಯನ್ನು ರೂಢಿಸಿಕೊಂಡು ಬಂದಿದ್ದಾರೆ ಅವರೇ ಹೇಳುವಂತೆ `ಬರೆದದ್ದು ಮಾತ್ರ ಬೆರಳೆಣಿಕೆಯಷ್ಟು! ಆದರೆ ಕನ್ನಡಿಗರ ಉದಾರತೆ ಹಾಗೂ ಪ್ರೀತಿಯೇ ನನ್ನನ್ನು ಹೀಗೆ ಹವ್ಯಾಸಿ ವ್ಯಂಗ್ಯಚಿತ್ರಕಾರನನ್ನಾಗಿಸಿದೆ’.

ನಾಗನಾಥ್ ಗೌರೀಪುರ ಊರು ಗೌರೀಪುರ, ನಾಗನಾಥ್ ಜಿ ಎಸ್ ಎಂದೇ ಖ್ಯಾತಿ. ನಮ್ಮ ಕಾಲಘಟ್ಟದ ಮಹಾನ್ ಕಲಾವಿದರಲ್ಲೊಬ್ಬರು. ದಾವಣಗೆರೆಯ ಕಲಾಶಾಲೆಯಲ್ಲಿ ಕಲಾವ್ಯಾಸಂಗ ಮಾಡಿದ್ದಾರೆ. ಹಲವಾರು ಪ್ರಸಿದ್ಧ ಆ್ಯಡ್ ಏಜೆನ್ಸಿಗಳಲ್ಲೂ ಹಾಗೂ ಮಲ್ಟಿಮೀಡಿಯಾಗಳಲ್ಲೂ ಕಲಾವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಚಿತ್ರಕಲಾವಿದರಾಗಿಯೂ ಹಾಗೂ ವ್ಯಂಗ್ಯಚಿತ್ರಕಲಾವಿದರಾಗಿಯೂ ಹೆಸರಾಗಿದ್ದಾರೆ. `ಸುಧಾ’ ವಾರಪತ್ರಿಕೆಯಿಂದ ಆರಂಭಗೊಂಡ ವ್ಯಂಗ್ಯಚಿತ್ರದ ನಂಟು ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸುವಲ್ಲಿಗೆ ಬಂದಿದೆ. ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. `ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

ಎನ್ಜಿಓಗಳಿಗೆ ಹಾಗೂ ಹೊಟೇಲ್‍ಗಳಿಗೆ ಹೆಚ್ಚೆಚ್ಚು ರೇಖಾಚಿತ್ರಗಳನ್ನು ರಚಿಸಿದ್ದಾರೆ. ಹಲವಾರು ಹೊಸ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕಲಾ ಸಾಮಗ್ರಿಗಳನ್ನು ರಚಿಸುತ್ತಿದ್ದಾರೆ. ದೇಶ-ವಿದೇಶದ ವ್ಯಂಗ್ಯಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದಿದ್ದಾರೆ.

ರಘುಪತಿ ಶೃಂಗೇರಿ ಊರು ಶೃಂಗೇರಿ, ರಘುಪತಿ ಶೃಂಗೇರಿ ಎಂದೇ ಖ್ಯಾತಿ! ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲೊಬ್ಬರಾದ ದಿವಂಗತ ಡಾ. ಸತೀಶ್  ಶೃಂಗೇರಿ ಅವರ ಸಹೋದರ. ಮೊದ ಮೊದಲು ಅಣ್ಣನ ನೆರಳಲ್ಲಿಯೇ ಬೆಳೆದರೂ ಆನಂತರ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಮಲ್ಟಿಮೀಡಿಯಾದ ಮೂಲಕ ವೃತ್ತಿಯನ್ನು ಆರಂಭಿಸಿದ ರಘು ಈಗ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ ಆಗಿದ್ದಾರೆ. ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರಕಾರರು.

ನಾಡಿನ ಎಲ್ಲಾ ಮ್ಯಾಗಜೀನ್ಗಳಲ್ಲೂ ಹಾಗೂ ವಿಶೇಷಾಂಕಗಳಲ್ಲೂ ರಘು ಅವರ ಚಿತ್ರಗಳು ಇರಲೇ ಬೇಕು. ನಾಡಿನ ಖ್ಯಾತನಾಮರ ಪುಸ್ತಕಗಳಿಗೆ ಇವರ ರೇಖಾಚಿತ್ರ ಇಲ್ಲವೇ ವ್ಯಂಗ್ಯಚಿತ್ರಗಳ ಛಾಪು ಬೇಕೇ ಬೇಕು. ಪ್ರತಿದಿನವೂ ಎರಡೆರಡು ವ್ಯಂಗ್ಯಚಿತ್ರಗಳನ್ನು ತಪ್ಪದೇ ಬರೆಯುತ್ತಾ ಸಾಮಾಜಿಕ ಜಾಲತಾಣದಲ್ಲಿ ಹೆಸರಾಗಿದ್ದಾರೆ. `ವ್ಯಂಗ್ಯತರಂಗ ಕ್ಯಾರಿಕೇಚರ್ ಸ್ಪರ್ಧೆ’ ಅನ್ನು ನಡೆಸುತ್ತಾ ಅನೇಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಚಂದ್ರಯಾನ ಸಾಧನೆಯು ಕೊಂಚ ಏರುಪೇರಾದ ಸಂದರ್ಭದಲ್ಲಿ `ಇಡೀ ಭಾರತ ನಿಮ್ಮೊಂದಿಗಿದೆ’ ಎಂದು ರಚಿಸಿದ ಚಿತ್ರವಂತೂ ದೇಶದೆಲ್ಲೆಡೆ ಸುದ್ದಿ ಮಾಡಿ ಹರಿದಾಡಿತು. ಈಗ ನಾಡಿನಲ್ಲೆಡೆ ಖ್ಯಾತರಾಗಿ ಸೆಲೆಬ್ರೆಟಿ ಕಲಾವಿದರಾಗಿದ್ದಾರೆ!

ಬೆಂಗಳೂರಿನ ಬಸವನಗುಡಿಯ ಬಿ ಪಿ ವಾಡಿಯಾ ರಸ್ತೆಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಗ್ಯಾಲರಿಯಲ್ಲಿ ಸತತ ಹತ್ತು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಇರುತ್ತದೆ. ಪ್ರವೇಶ ಉಚಿತ! ನಕ್ಕು ಹೊಟ್ಟೆ ಹುಣ್ಣಾಗುವುದು ಖಚಿತ!

‍ಲೇಖಕರು Admin

January 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: