ಸುರೇಶ್ ಕುಲಕರ್ಣಿ ಇನ್ನು ನೆನಪು…

ಹರವೂ ಕೇಸರಿ

ಸುರೇಶ್ ಕುಲಕರ್ಣಿ…
ಇಂದು ತೀರಿಹೋದರೆಂದು ರಹಮತ್ ತರೀಕೆರೆಯವರ ಬರಹದಿಂದ ತಿಳಿಯಿತು. ಸುರೇಶರ ಅಕ್ಕ ವಚ್ಚಕ್ಕಳಲ್ಲಿ – ಧಾರವಾಡ ಆಕಾಶವಾಣಿಯ ವತ್ಸಲಾ ಕುಲಕರ್ಣಿ – ನನ್ನ ಫೋನ್ ನಂಬರ್ ಬಹುಶಃ ಇರಲಿಕ್ಕಿಲ್ಲ. ಇದ್ದರೂ ನನ್ನಷ್ಟು ದೂರಕ್ಕೆ ಫೋನ್ ಮಾಡಿ ತಿಳಿಸಬೇಕೆಂದು ಅವರಿಗೆ ಅನಿಸಿರಲಿಕ್ಕಿಲ್ಲ. ಧಾರವಾಡದ ಗೆಳತಿಗೆ ಫೋನ್ ಮಾಡಿ ಖಾತರಿ ಪಡಿಸಿಕೊಂಡೆ.

ಸುರೇಶ್ ನನ್ನ ಮೊದಲ ಚಿತ್ರ ಭೂಮಿಗೀತದಲ್ಲಿ ಅಭಿನಯಿಸಿದ ನಟ. ಅವರನ್ನು ನಾನು ಮೊದಲು ಕಂಡಿದ್ದು ಕಾರ್ನಾಡರು ನಿರ್ಮಿಸಿದ್ದ ಒಂದು ವಿಡಿಯೋದಲ್ಲಿ. ನಂತರ ಒಳ್ಳೆಯ ಗೆಳೆಯರಾದೆವು. ನನ್ನ ಕೆಲವೇ ಸೀನಿಯರ್ ಗೆಳೆಯರಲ್ಲಿ ಅವರೂ ಒಬ್ಬರು.

ನಾನು ನಿರ್ದೇಶಿಸಿದ ಸರೋಜಿನಿ ಧಾರಾವಾಹಿಯಲ್ಲೂ ನಟಿಸಿದರು. ನಾನು ನಿಜಕ್ಕೂ ಧಾರವಾಡವನ್ನು ತುಸು ವಿಸ್ತಾರವಾಗಿ, ವರ್ಣರಂಜಿತವಾಗಿ ನೋಡಿದ್ದರೆ ಅದು ಸುರೇಶರ ಕಾರುಬಾರಲ್ಲೇ. ಎರಡು ಪೂರ್ತಿ ದಿನ ತನ್ನ ಸ್ಕೂಟರಿನ ಹಿಂದೆ ಕೂರಿಸಿಕೊಂಡು ಧಾರವಾಡದ ಗಲ್ಲಿಗಲ್ಲಿಗಳನ್ನೂ ಸುತ್ತಿಸಿ ತೋರಿಸಿದರು. ಒಂದೊಂದೂ ರಸ್ತೆಯ, ಮೂಲೆಯ, ಕಟ್ಟಡದ ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ಹಿನ್ನೆಲೆಯನ್ನು, ಅದರ ಜೊತೆಗೆ ಅಂಟಿದ್ದ ಸ್ಥಳೀಯ ರಾಜಕಾರಣವನ್ನೂ ಅವರ authentic ಮಾತುಗಳಿಂದಲೇ ಕೇಳಬೇಕು.

ಕನ್ನಡ ಮತ್ತು ಮರಾಠಿ ಭಾಷೆ, ಸಂಸ್ಕೃತಿಗಳ ನಂಟು, ಆ ಎರಡೂ ಜನರ ನಂಟು, ಧಾರವಾಡದಲ್ಲಿನ ಜಾತಿಜಾತಿಗಳ ನಡುವಣ ಸಂಬಂಧಗಳು, ಅವುಗಳ ನಡುವಣ dialectical ಸಾಮ್ಯ ಮತ್ತು ವ್ಯತ್ಯಾಸಗಳು, ಸಾಹಿತಿಗಳ, ಸಂಗೀತಗಾರರ ಪ್ರೀತಿ, ಜಗಳಗಳು ಸುರೇಶರ ಬಾಯಿಂದ ಎಷ್ಟು ಹಾಸ್ಯಲೇಪಿತ ಸರಾಗದಲ್ಲಿ second reflex ನಂತೆ ಬರುತ್ತಿದ್ದವೆಂದರೆ… If there was a man who chose to take his birth, breathe, live every twist and turn, and every tick of the clock of the town, it was unquestionably Suresh Kulkarni ಎನ್ನದೇ ಬೇರೆ ಆಯ್ಕೆಯಿಲ್ಲ. ಇದು ನನ್ನ ಮಟ್ಟಿಗಂತೂ ನಿಜ.

ಬೇಂದ್ರೆಯವರು ನ್ಯೂ ಬಾಂಬೆ ಹೋಟೆಲಿನ ತುಪ್ಪದ ಮಸಾಲೆ ದೋಸೆ ತಿನ್ನುತ್ತಿದ್ದ ಟೇಬಲಿನಲ್ಲೇ ಕುಳ್ಳಿರಿಸಿ ‘ಎರಡು ತುಪ್ಪಾ’ ಎಂದು ಅಜ್ಜನ ಶೈಲಿಯಲ್ಲೇ ಆರ್ಡರ್ ಮಾಡಿ ನನಗೂ ಸುರೇಶ್ ತಿನ್ನಿಸದಿದ್ದರೆ ಬಹುಶಃ ನಾನು ಜೀವಮಾನದಲ್ಲಿ ತಿನ್ನುತ್ತಲೇ ಇರಲಿಲ್ಲ. ನ್ಯೂ ಬಾಂಬೆ ಹೋಟೆಲ ಆನಂತರದ ಮೂರುನಾಲ್ಕು ವರ್ಷಗಳಲ್ಲಿ ಮುಚ್ಚಿಹೋಯಿತು ಕೂಡ.

ಧಾರವಾಡ ತೋರಿಸುವಾಗ ಅವರು ತಮ್ಮ ಬಾಲ್ಯವನ್ನು ಕಳೆದಿದ್ದ ಒಂದು ಚಾಳ್ ಗೂ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಗ ಬೇರೆಯವರು ವಾಸಿಸುತ್ತಿದ್ದರೂ ಸಹ ಅದು ಇನ್ನೂ ತಮ್ಮದೇ ಎನ್ನುವಂತೆ ಅವರಿದ್ದ ಮನೆಯೊಳಕ್ಕೂ ಕರೆದುಕೊಂಡು ಹೋಗಿದ್ದರು. ಆ ವಠಾರದಲ್ಲಿದ್ದ ಸುಮಾರು ಹದಿನೆಂಟು ಇಪ್ಪತ್ತು ಮನೆಗಳ ಅವರಿದ್ದ ಕಾಲದ ಪ್ರತಿ ಸದಸ್ಯರ ಹೆಸರು, ಗುಣವಿಶೇಷ, ಪರಸ್ಪರ ಸಂಬಂಧಗಳನ್ನು ಎಷ್ಟು ರಸವತ್ತಾಗಿ ಹೇಳಿದರೆಂದರೆ, ನೀವೇಕೆ ಈ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಾರದು? ಎಂದು ನಾನು ಕೇಳಿದ್ದೆ. ‘ಥೂ, ಆ ಗಿರೀಶ್ ಸಹಿತ ಹಿಂಗೇ ಹೇಳ್ತಾರ್ರೀ…’ ಎಂದಿದ್ದರು.

ಕಾರ್ನಾಡರ ಧಾರವಾಡದಲ್ಲಿನ ಅಚ್ಚುಮೆಚ್ಚಿನ ಶಿಷ್ಯರೆಂದರೆ ಇವರೇ. ‘ಏ ಸುರೇಶಾ, ಬರದ್ರ ನೀನಾ ಬರೀಬೇಕು ಧಾರವಾಡದ ಚಾಳ್ ಗಳ ಬಗ್ಗೆ. ನೀ ಬರೀಲಿಲ್ಲಂದ್ರ ಮುಂದ ಇನ್ನ್ಯಾರೂ ಇರೂದಿಲ್ಲ ನೋಡು… ನಿನ್ ಜೋಡೀನ ಅದೂ ಸಾಯ್ತದ’ ಎಂದು ಕಾರ್ನಾಡರು ಹೆದರಿಸುತ್ತಾ ಬರೆಯಲು ಹೇಳುತ್ತಲೇ ಇದ್ದರಂತೆ. ಆದರೆ ಸುರೇಶ್ 2003-04 ರ ವರೆಗೂ ಬರೆಯುವ ಬಗ್ಗೆ ಯೋಚಿಸಿರಲೇ ಇಲ್ಲ. ಬರೆಯಲು ಆರಂಭಿಸಿದಾಗ Kesari, I have begun to write on Chawls of Dharwad ಎಂದು ಘೋಷಿಸಿದ್ದರು. ಇನ್ನು ಆರೇಳು ತಿಂಗಳು ಬಿಟ್ಟು ಮತ್ತೊಮ್ಮೆ ಭೇಟಿಯಾದಾಗ ‘ಥೂ ಅದರೌನಾ… ಅದ್ಯಾಕೋ ಬರಿಬೇಕಂದ್ರ ಆಗವಲ್ದು ನೋಡ್ರೀ…’ ಎಂದು ಬಿಟ್ಟೂಬಿಟ್ಟಿದ್ದರು.

ಕೊನೆಗೂ ಬರೆಯಲೇ ಇಲ್ಲ. ಅವರೇನಾದರೂ ಬರೆದು ಮುಗಿಸಿದ್ದಿದ್ದರೆ ಅವರ superlative wit ನಲ್ಲಿ ಪೂರ್ತಿಯಾಗಿ ನಶಿಸಿಹೋಗಿರುವ ಧಾರವಾಡದ ಚಾಳ್ ಸಂಸ್ಕೃತಿ, ಬದುಕಿನ ಬಗೆಗೆ ಒಂದು ಉತ್ತಮ ಇಂಗ್ಲಿಷ್ ಪುಸ್ತಕ ಬಂದಿರುತ್ತಿತ್ತು. ಇಂಗ್ಲಿಷ್ ಮೇಲೆ ಅಷ್ಟು ಒಳ್ಳೆಯ ಹಿಡಿತ, ಲಾಲಿತ್ಯ ಅವರಿಗಿತ್ತು. ಯಾರನ್ನಾದರೂ ಬೈಯಲು ಆರಂಭಿಸಿದರೆಂದರೆ ಆ ಬಾಯಿಂದ ಬರುತ್ತಿದ್ದ ಆ ಜವಾರೀ ಧಾರವಾಡ ಕನ್ನಡದ ಬೈಗಳುಗಳು ಈ ಪರಿಯ ಇಂಗ್ಲಿಷ್ ಮಾತಾಡುವವನಿಂದಲೂ ಬರುತ್ತಿವೆಯೇ ಎಂದು ಗಾಬರಿ ಹುಟ್ಟಿಸುತ್ತಿತ್ತು.

ಧಾರವಾಡದ ಠಾಕೂರ ಫೇಡಾಗೂ ಮಿಶ್ರಾ ಫೇಡಾಗೂ ಇರುವ ವ್ಯತ್ಯಾಸವನ್ನು ತಿಳಿಸಿಕೊಟ್ಟವರೇ ಸುರೇಶ್. ನನ್ನ ಮಗಳು ನದಿ ಇನ್ನೂ ಗರ್ಭದಲ್ಲಿದ್ದಾಗ ಒಮ್ಮೆ ನಾನು ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದೆ. ಸುರೇಶ ಧಾರವಾಡ ರೈಲು ನಿಲ್ದಾಣಕ್ಕೆ ಬಂದು ಠಾಕೂರ ಫೇಡಾ ಕೊಟ್ಟು, ‘ನಿಮಗಲ್ಲ, ಮನೀಗೆ ಒಯ್ಯಿರೀ…’ ಎಂದಿದ್ದರು.
ನನ್ನೊಬ್ಬ ಪ್ರೀತಿಯ ಹಿರಿಯ ಗೆಳೆಯನ ನೆನಪುಗಳು ಅವರು ಕಾಣಿಸಿದ ಅಂಥಾ ಪರಿಯ ಧಾರವಾಡದ ನೆನಪುಗಳಲ್ಲಷ್ಟೇ ಉಳಿಯುತ್ತದೆ.

‍ಲೇಖಕರು Admin

October 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: