ಬಾಬಾ ಬುಡನ್ ಗಿರಿಯಲ್ಲಿ ಕಂಡ ಬೇಸರದ ದೃಶ್ಯಗಳ ಬರಹ…

ಮಮತಾ ಅರಸೀಕೆರೆ

ನಾವು ಯಾವುದೇ ಗಿಡಕ್ಕೆ ಹಾನಿ ಮಾಡಿಲ್ಲ. ಗಿಡವನ್ನು ಕೀಳಲಿಲ್ಲ. ಗಿಡಗಳ ನಡುವಿನ ಕಾಲುದಾರಿಯಲ್ಲಿ ಕುಳಿತು, ನಿಂತು ಫೋಟೊ ತಗೊಂಡ್ವಿ. ಮತ್ತಿದು ಸಂಭ್ರಮದ ಬರಹವಲ್ಲ. ಬಾಬಾ ಬುಡನ್ ಗಿರಿಯಲ್ಲಿ ಕಂಡ ಬೇಸರದ ದೃಶ್ಯಗಳ ಬರಹ.

ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಕುರುಂಜಿ ನೋಡೋಕೆ ಹೋಗಲು ನಿರ್ಧರಿಸಿ ಹೊರಟಾಗಲೇ ತಡವಾಗಿತ್ತು. ಪ್ರವಾಸಕ್ಕೆಂದರೆ ಸದಾ ಸಿದ್ಧವಾಗಿ ನಿಲ್ಲುವ ನಮ್ಮೂರಿನ ವೇಂಕಟೇಶ್ ಸರ್, ಸ್ನೇಹಿತೆ ಮಮತಾ ರಾಣಿ, ವಿಜಯಪುರದಿಂದ ಬಂದಿದ್ದ ಹೇಮಕ್ಕ(ಹೇಮಲತಾ ವಸ್ತ್ರದ), ಸ್ವಾಮಿ ಸರ್, ಅಗ್ರಹಾರ ಕೃಷ್ಣಮೂರ್ತಿ ಸರ್ ಒಟ್ಟಾಗಿ ಕಾರಿನಲ್ಲಿ ಸಂಜೆ ೫ ಕ್ಕೆ ಗಿರಿ ತಲುಪಿದ್ದೆವು. ಮೋಡ ಕವಿದು ಮಂಜು ಗಿರಿಯನ್ನೇ ಆವರಿಸಿತ್ತು. ದಟ್ಟ ಹಿಮ ಗಿರಿಯನ್ನೇ ಕವಿದಂತೆ ಭಾಸ. ತಿರುವಿನ ದಾರಿ, ಪ್ರಪಾತ, ಹಸುರಿನ ಚಾದರ ಹೊದ್ದ ಬೆಟ್ಟಗಳ ಕಾಣುತ್ತ ಹೊರಟರೆ ಸೊಗಸಾದ ದೃಶ್ಯ. (ಬೆಳವಾಡಿ ನಮ್ಮಪ್ಪನ ಊರು. ಚಿಕ್ಕಮಗಳೂರು ನನ್ನ ಜಿಲ್ಲೆಯೆಂಬ ಅಭಿಮಾನ ಕೂಡ)

ಚಿಕ್ಕಮಗಳೂರು ಹತ್ತಿರವಾದಂತೆ ಸಾಲುಗಟ್ಟಿದ, ತೀರಾ ಕಿರಿದಾದ ರಸ್ತೆಯ ಇಕ್ಕೆಲೆಗಳಲ್ಲೂ ನಿಂತ ವಾಹನಗಳು, ಅಲ್ಲಿ ಸೇರಿದ್ದ ಮಂದಿಯ ನಡತೆ, ವರ್ತನೆ, ವ್ಯವಸ್ಥೆ ಕಂಡು ಮನಸು ಆ ಅದ್ಭುತ ಪ್ರಕೃತಿಗಾಗಿ ಮರುಗಿತು.
ಬೆಟ್ಟ ಗುಡ್ಡ ನದಿ ಗಿಡ ಮರ ಕಂಡಾಗ, ಸಹಜವಾಗಿ ಆಗುತ್ತಿದ್ದ ಸಂಭ್ರಮವೇ ಮಾಯವಾಗಿತ್ತು.

ಬಾಬಾಬುಡನ್ ಗಿರಿಯಲ್ಲಿ ೧೨ ವರ್ಷಕ್ಕೊಮ್ಮೆ ಅರಳುವ ನೀಲಿ ಕುರುಂಜಿ ಅರಳಿದೆ ಅನ್ನೊ ಸುದ್ದಿ ತಲುಪಿದ್ದು ತಡವಾಗಿ. ಕಳೆದ ಬಾರಿ ೨೦0೬ ರಲ್ಲಿ ಅರಳಿದ್ದ ಹೂವು ಈ ಬಾರಿ ೧೬ ವರ್ಷದ ನಂತರ ಪುನಃ ಚೆಲುವು ಹೊತ್ತು ಅರಳಿತ್ತು. ಅಷ್ಟೇ.. ದಿನಕ್ಕೆ ೬-೮-೧೦ ಸಾವಿರದಂತೆ ಮಂದಿ ಲಗ್ಗೆಯಿಡಹತ್ತಿದರು. ಇಕ್ಕಟ್ಟಾದ ದಾರಿಯಲ್ಲಿ ವಾಹನಗಳ ಸಾಲು ಸಾಲು… ಸ್ಥಳೀಯ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಣಗಿತಂತೆ. ನಂತರ ಪೋಲೀಸರ ಸುಪರ್ದಿಗೆ ವಹಿಸಿತಂತೆ.

ಈ ಸೊಬಗನ್ನು ಕಾಣಲು ಬೇರೆ ಬೇರೆ ರಾಜ್ಯಗಳಿಂದಲೂ ಮಂದಿ ಬರತೊಡಗಿದರು. ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೂರದ ಉತ್ತರ ಪ್ರದೇಶ, ಪಂಜಾಬಿನಿಂದಲೂ ಜನ ತಂಡೋಪತಂಡವಾಗಿ ಧಾವಿಸಿದ್ದರು.
ಮಂದಿ ಹೂ ರಾಶಿಯನ್ನು ನೋಡಲಷ್ಟೆ ಬಂದಿದ್ದರೆ ಪರವಾಗಿರಲಿಲ್ಲ, ನಂತರವೇ ಶುರುವಾಗಿದ್ದು ಪ್ರಕೃತಿಯ ಮೇಲೆ ಪ್ರಹಾರ. ಎಂದಿನಂತೆ ( ಸಂಪ್ರದಾಯದಂತೆ ..!!!???) ಪ್ಲಾಸ್ಟಿಕ್ ರಾಶಿಯಾಗಿ ಬಿದ್ದಿತು. ನೀರು, ಪಾನೀಯ ಕುಡಿದು ಎಸೆದ ಬಾಟಲ್ ಗಳು, ಪ್ಲಾಸ್ಟಿಕ್ ಕವರ್ ಗಳು, ಮತ್ತಿತರ ಮಾನವ ತ್ಯಾಜ್ಯಗಳು. ನಾವು ಒಂದಿಷ್ಟು ಬಾಟಲ್ ಗಳನ್ನು ಆಯ್ದು ಡಸ್ಟ್ ಬಿನ್ ಗೆ ಚೆಲ್ಲಿದೆವು. ಎಷ್ಟೂಂತ ಆಯೋದು? ರಾಶಿ ಬಿದ್ದಿತ್ತು ಅಲ್ಲಿ.

ಸಾಮಾನ್ಯ ಜ್ಞಾನವೂ ಇಲ್ಲದಂತೆ ಎಲ್ಲೆಂದರಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಪಾರ್ಕಿಂಗ್ ಮಾಡಿದ್ದವು.
ಅದಿರಲಿ, ಹೂ ನೋಡಲು ಬಂದವರು ಕನಿಷ್ಠ ಸೂಕ್ಷ್ಮತೆ ಬಳಸಬಹುದಿತ್ತು. ನಿರ್ದಾಕ್ಷಿಣ್ಯವಾಗಿ ಬೇರು ಸಮೇತ ಹೂ ಕಿತ್ತರು. ಗಿಡ ಕಿತ್ತರು. ನಾನಾ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುವ ಭರದಲ್ಲಿ ಗಿಡಗಳ ಮಧ್ಯೆ ಓಡಾಡಿದರು. ತುಳಿದರು. ಉಜ್ಜಾಡಿದರು.

ಮೋಜಿಗಾಗಿ ಬಂದವರು ಇವರೆಲ್ಲ , ಸಂದರ್ಭದ ಮಹತ್ವ ಅರಿತವರು ಇಂತಹ ಸ್ಥಳಗಳಿಗೆ ಬಂದಾಗ ಕನಿಷ್ಠ ಸೂಕ್ಷ್ಮತೆ ತೋರುವುದಿಲ್ಲ. ನದಿ ತೀರಗಳು, ಪ್ರಾಕೃತಿಕ ಪರಿಸರವನ್ನು ತಮಗೆ ಮನಸಿಗೆ ಬಂದ ಹಾಗೆ ಉಪಯೋಗಿಸಿ ಹಾನಿ ಮಾಡಿಯೆ ಹೋಗುವುದು.

ತೀರಾ ಸಂಕಟವಾದದ್ದು ಆಗ. ನಾವು ಅಲ್ಲಿ ತಲುಪಿದಾಗ ಮಹಿಳೆಯೊಬ್ಬರು ಸಾಕಷ್ಟು ಗಿಡಗಳನ್ನು ಕಿತ್ತು ಕೈ ತುಂಬಾ ಹಿಡಿದಿದ್ದು ಕಂಡು ಹೊಟ್ಟೆ ಉರಿದು ಹೋಯಿತು. ವಿರೋಧಿಸಲು ಇನ್ನೇನು ಬಾಯಿ ತೆಗೆಯೋಣ ಅಂದುಕೊಂಡರೆ ಹಾಗೆ ಗಿಡ ಕೀಳುವ ಬಹಳ ಮಂದಿ ಕಂಡರು. ಮಕ್ಕಳು ಹಠ ಮಾಡುತ್ತಾರೆ ಅಂತ ಹೂಂ ಕಿತ್ತು ಕೊಡುತ್ತಿದ್ದರು.

ಯಾರ್ಯಾರಿಗೇ ಅಂತ ಹೇಳೋದು.?
ಈ ರೀತಿಯ ಪ್ರಸಂಗಗಳಲ್ಲಿ ಒಂದಿಷ್ಟು ಸೂಕ್ತ ವ್ಯವಸ್ಥೆ ಹಾಗೂ ಬಿಗಿ ಬಂದೋಬಸ್ತಿನ ಅಗತ್ಯವಿದೆ ಅನಿಸಿತು.

೧. ಗಿರಿಗೆ ಪ್ರವೇಶವಾಗುವ ಆರಂಭದ ಸ್ಥಳದಲ್ಲೆ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿಯೇ ನಿಲ್ಲಿಸುವಂತಾಗಬೇಕು.
೨.ನಿರ್ವಹಣೆಗಾಗಿ ಕನಿಷ್ಠ ಪ್ರವೇಶ ಶುಲ್ಕ ವಿಧಿಸಬೇಕು
೩ . ರಸ್ತೆಗಳ ಬಲ ಬದಿ ವಾಹನಗಳು ಪಾರ್ಕಿಂಗ್ ಮಾಡುವುದನ್ನು ನಿಷೇದಿಸಬೇಕು.
೪. ನೀಲಿ ಕುರುಂಜಿ ದೀರ್ಘ ಕಾಲದ ನಂತರ ಜರುಗುವ ಪ್ರಕ್ರಿಯೆ. ಇಂತಹ ಸಮಯದಲ್ಲಿ ಗಿಡ, ಹೂ ತುಳಿಯುವುದು, ಕೀಳುವುದನ್ನು ನಿಷೇಧಿಸಬೇಕು, ಕಿತ್ತರೆ ದಂಡ ಹಾಕಬೇಕು.
೫. ದೂರದಿಂದಲೇ ಫೋಟೊ ತೆಗೆದುಕೊಳ್ಳುವ ವ್ಯವಸ್ಥೆಯಾಗಬೇಕು, ಅಥವಾ ಫೋಟೊಗಾಗಿ ಬೇರೆ ವ್ಯವಸ್ಥೆಯಾಗಬೇಕು
೬. ಸಮಯದ ನಿಗದಿಯಾಗಬೇಕು. ದಿನಕ್ಕೆ ಇಂತಿಷ್ಟೇ ವಾಹನಗಳು, ಅಥವಾ ಇಂತಿಷ್ಟು ಸಮಯದಿಂದ ಇಷ್ಟು ಸಮಯದವರೆಗೆ ಮಾತ್ರ ಪ್ರವೇಶ ಎಂದು ನಿಗದಿಯಾಗಬೇಕು.
೭. ಒಮ್ಮೆ ಒಳಹೊಕ್ಕರೆ ಮಂದಿ ಬೆಳಗ್ಗೆಯಿಂದ ಸಂಜೆಯವರೆಗೂ ಅದೇ ಸ್ಥಳದಲ್ಲಿದ್ದು ಬಿಡುತ್ತಾರೆ. ಇಷ್ಟು ಗಂಟೆಯ ಅವಧಿಗೆ ಮಾತ್ರ ತಿರುಗಾಡಿ ಹೊರಬರಬೇಕು ಎಂಬ ಸಮಯ ನಿಗದಿಪಡಿಸಬೇಕು.
೮. ಬಹು ಮುಖ್ಯವಾಗಿ ಪ್ಲಾಸ್ಟಿಕನ್ನು ಆ ಸ್ಥಳದಲ್ಲಿ ನಿಷೇಧಿಸಬೇಕು

ಸಾವಿರಾರು ಮಂದಿ ಧಾವಿಸುವಾಗ ಇತರರಿಗೂ ಸ್ಥಳ ಬೇಕಲ್ಲ. ವಿದೇಶಗಳಲ್ಲಿ ಸಣ್ಣಪುಟ್ಟ ನಿಸರ್ಗ ಸೌಂದರ್ಯ, ಐತಿಹಾಸಿಕ ಸ್ಥಳಗಳಿಗೇ ಎಷ್ಟೊಂದು ಮಹತ್ವ ನೀಡಿ ದುಬಾರಿ ಶುಲ್ಕ ವಿಧಿಸುತ್ತಾರೆ, ಇಲ್ಲಿ ಇಷ್ಟು ಅದ್ಭುತ ಸೊಗಸಿದ್ದರೂ ಕಾಪಾಡಿಕೊಳ್ಳಲು ಏನಡ್ಡಿ?

ಯಾವ್ಯಾವುದೊ ವಿಷಯಕ್ಕೆ ದೊಂಬಿ ಮಾಡಿ, ಜಗಳ ಎಬ್ಬಿಸಿ , ಜನಗಳನ್ನು ಕಿತ್ತಾಡಿಕೊಳ್ಳುವಂತೆ ಮಾಡುವ ಬದಲು ಪರಿಸರ ರಕ್ಷಣೆ ಹಾಗೂ ಆ ಅದ್ಭುತ ವಾತಾವರಣವನ್ನು ರಕ್ಷಿಸಲು ಕೆಲವು ನಿಯಮಗಳನ್ನು ಮಾಡಿದರೂ ಸಾಕು.

‍ಲೇಖಕರು Admin

October 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ತಾವು ಹೇಳಿರುವ ವಿಚಾರ ನಿಜ. ಪರಿಸರವೆಂದು ಬಟ್ಟ, ಪರ್ವತ, ಕಾಡು, ಜಲಪಾತ ಎಂದು ನೋಡಲು ಹೋಗಲೇಬಾರದು ಎನಿಸಿಬಿಡುತ್ತದೆ.
    ಎಲ್ಲಿ ಹೋದರೂ ಇಂತಹ ದುರವಸ್ಥೆ ಕಂಡು ಬೇಸರದ ಗುಣಿತವಾಗುತ್ತದೆ.
    ಕೊಡಗಿನಲ್ಲಿ ಅಬ್ಬಿ ಜಲಪಾತ ನೋಡಲು ಹೋದವನಿಗೆ (೨೦೧೭) ಅಲ್ಲಿ ಜನ‌ ಹಾಕಿದ್ದ ಕಸ ನೋಡಿ ಆಘಾತವಾಗಿತ್ತು.
    ನಿಮ್ಮಂತೆಯೇ ಜಿಲ್ಲಾಧಿಕಾರಿಗಳಿಂದ ಎಲ್ಲರಿಗೂ ನನ್ನ ಬೇಸರ, ಏನು ಬದಲಾಗಬೇಕೆಂದು ಬರೆದೆ. ಏನಾಯಿತೋ ಗೊತ್ತಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: