ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರತ್ಕಲ್ ಸುಬ್ಬರಾಯರೆಂಬ ಚಾರಿತ್ರಿಕ ಪುರುಷ…

ಎಂ ನಾ ಚಂಬಲ್ತಿಮಾರ್

ನನ್ನ ತಲೆ ಮೇಲಿನ ಚಿತ್ರ ಸುರತ್ಕಲ್ ಸುಬ್ಬರಾಯರೆಂಬ ಚಾರಿತ್ರಿಕ ಪುರುಷನದ್ದು, ಅವರು ತಾಳಮದ್ದಳೆ ಅಧ್ಯಕ್ಷ!

ಹೌದು.., ಸುರತ್ಕಲ್ ಸುಬ್ಬರಾಯರೆಂಬ ಪ್ರಖಂಡ ಪಂಡಿತ, ಕನ್ನಡ ವಿದ್ವಾಂಸ ವರ್ತಮಾನದಲ್ಲಿ ಕಲೆ, ಸಾಹಿತ್ಯದ ಫೋಸಿನಲ್ಲಿ ಮೆರೆಯುವ ಆಧುನಿಕ ವಿದ್ವಾಂಸರಿಗೆ ನೂರಕ್ಕೆ ನೂರು ಅಪರಿಚಿತರೇ ಹೌದು..!ಸುರತ್ಕಲ್ ಸುಬ್ಬರಾಯರು ತಾಳಮದ್ದಳೆಗಳ ಅಧ್ಯಕ್ಷರಾಗಿ ತೀರ್ಪು ನೀಡುತ್ತಿದ್ದ ಅಪರೂಪದ ವಿದ್ವಾಂಸರು! ಅರರೇ.. ತಾಳಮದ್ದಳೆಗೂ ಅಧ್ಯಕ್ಷತೆಯೇ? ಹೌದು, ಹಿಂದೆ 1940-60ರ ನಡುವೆ ತಾಳಮದ್ದಳೆಯಲ್ಲಿ ಅಧ್ಯಕ್ಷ ಪದವಿಯಿತ್ತು!.

ಆಗಿನದ್ದು ಇಡೀ ರಾತ್ರಿಯ ಸಮಗ್ರ ಪ್ರಸಂಗದ ತಾಳಮದ್ದಳೆ! ಪೂರ್ಣ ಪ್ರಸಂಗವನ್ನೇ ಆಯುವುದು ರೂಢಿ. ತಾಳಮದ್ದಳೆಯ ಅಧ್ಯಕ್ಷ ಎನಿಸಿಕೊಂಡವ ಆರಂಭದಿಂದ ಅಂತ್ಯದ ತನಕ ಇಡೀ ಕೂಟದ ಸಮಗ್ರ ಮಾತುಕತೆಯನ್ನು ಮೈಯ್ಯೆಲ್ಲ ಕಣ್ಣಾಗಿಸಿ ಕೇಳಬೇಕು. ಕೊನೆಗೆ ಪದ್ಯದ ಭಾವ, ಅರ್ಥಗಾರಿಕೆಯ ವೈಚಾರಿಕತೆ, ಯಾವುದು ಸರಿತಪ್ಪು, ಅರ್ಥಧಾರಿಯ ಪಾತ್ರ ನಿರ್ವಹಣೆಯ ಲೋಪದೋಷಗಳೇನು ಇದನ್ನೆಲ್ಲಾ ಕರಾರುವಕ್ಕಾಗಿ ವಿಮರ್ಶಾ ದೃಷ್ಠಿಯಿಂದ ಕಡೇಯ ಅಧ್ಯಕ್ಷ ಭಾಷಣವೆಂಬ ಮುಕ್ತಾಯದ ವೇಳೆ ನಿರ್ದಾಕ್ಷಿಣ್ಯ., ಮುಲಾಜಿಲ್ಲದೇ ಹೇಳಬೇಕಿತ್ತು.

ಮಂಗಳೂರು ಸುತ್ತುಮುತ್ತಲ ಯಾವುದೇ ಪ್ರಸಿದ್ಧ ತಾರಾಬಳಗದ ತಾಳಮದ್ದಳೆ ಇದ್ದರೂ ಆ ಕಾಲದಲ್ಲಿ ಸುಬ್ಬರಾಯರಿಗೇ ಅಧ್ಯಕ್ಷತೆ ಪೀಠ ಒಲಿಯುತಿತ್ತು. ಏಕೆಂದರೆ ಅವರು ಕನ್ನಡ ಭಾಷಿಕ, ಪೌರಾಣಿಕತೆಯ ಪ್ರಖಂಡ ಪಂಡಿತ. ಬೇರೆ ಯಾರೂ ಸವಾಲಿನ ಈ ಕೆಲಸ ಒಪ್ಪುತ್ತಿರಲಿಲ್ಲ, ಅಂಥ ಯೋಗ್ಯತೆ ಇದ್ದವರೂ ವಿರಳಾತಿವಿರಳ! ಹಾಗೆಂದು ಅವರು ಪಂಡಿತ ಚಿಂತನೆಯ ಮಹದ್ಗ್ರಂಥ ರುಚಿಸಲಿಲ್ಲ. ತಾಳಮದ್ದಳೆಯ ಅಧ್ಯಕ್ಷೀಯತೆಯ ತೀರ್ಪುಗಾರನಾದರೂ ಎಲ್ಲೂ ಅರ್ಥ ಹೇಳಿಲ್ಲ! ಇದೊಂದು ವಿಪರ್ಯಾಸ! ಶ್ರೀಯುತರು 1922ರಿಂದ 40ರ ತನಕ ಕಾಸರಗೋಡು ಬೋರ್ಡು ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು.

ಆಗಿನ್ನೂ ಪ್ರಾಂತ್ಯ ವಿಭಜನೆ ಆಗಿರಲಿಲ್ಲ. ಕಾಸರಗೋಡು ಮದರಾಸು ಪ್ರಾಂತ್ಯದ ಭಾಗವೇ ಆಗಿತ್ತು. ಕನ್ನಡ ನಳನಳಿಸುತಿತ್ತು! ಆ ಕಾಲದಲ್ಲವರು ಒಂದು ತುಂಡು ಭಾಮಿನಿಯನ್ನು ಒಂದು ತಾಸು ವಿಸ್ತರಿಸಿ ವಿವರಿಸುತ್ತಿದ್ದರಂತೆ! ಹೊಸ ಭಾವತಲದ ವ್ಯಾಖ್ಯಾನ ನೀಡುತ್ತಿದ್ದರಂತೆ. ಇಂಥ ಸುಬ್ಬರಾಯರು ಬರೆದ “ಭಕ್ತ ಸಾಮ್ರಾಜ್ಯ” ನಾಟಕದಲ್ಲಿ ಸಾಕ್ಷಾತ್ ಶೇಣಿ ಗೋಪಾಲಕೃಷ್ಣ ಭಟ್ಟರೆಂಬ ಮಾತಿನ ಮಹರ್ಷಿ ಮೊದಲ ಬಾರಿಗೆ ಬಣ್ಣ ಮೆತ್ತಿ, ರಂಗ ಹಂಚಿದ್ದರು! ಮುಂದೆ ಅದೇ ಸುಬ್ಬರಾಯರ ಸುರತ್ಕಲ್ಲಿನ ಮನೆಯಲ್ಲಿ ಶೇಣಿಯವರು ಆತ್ಮೀಯ ಬಂಧುವಿನಂತೆ ಆತಿಥ್ಯ ಪಡೆದು ವಿಶ್ರಾಂತಿಯೂ ಪಡಯುತ್ತಿದ್ದರು.

ಆಗ ಆ ಮನೆಯಂಗಳ ವಿದ್ವತ್ ವಿಚಾರದರ್ಶನಗಳ ಮಹಾಮಂಡಲ ಆಗುತಿತ್ತು! ವಿದ್ವಾಂಸರ ಬಳಗದ ಕೂಟವೇ ನೆರೆಯುತಿತ್ತು..! ಅದೇ ಮನೆಯಂಗಳದಲ್ಲಿ ಅದೇ ಸುಬ್ಬರಾಯರ ಮೆಲುಕಿನೊಂದಿಗೆ ಅವರ ಪಟದ ತಟದಲ್ಲಿ ನಾನು ನಿಂತೆ. ನನಗೆ ಮೈಯ್ಯೆಲ್ಲ ರೋಮಾಂಚನ. ಏಕೆಂದರೆ ಅಂಥವರ ಅರಿವು, ಅನುಭವ, ಸಿದ್ದಿಗಳ ಮುಂದೆ ನಾವು ಶೂನ್ಯ! ಈ ಅರಿವು ಬಹುತೇಕರಿಗೆ ಇಲ್ಲ. ಅದೇ ಈಗಣ ವರ್ತಮಾನದ ಸಮಸ್ಯೆ. 50-60‌‌ರ ದಶಕದಲ್ಲಿ ಅವರ ಮನೆಯೇ ವಿದ್ವತ್ ವಿಚಾರಗೋಷ್ಟಿಯ ವೇದಿಕೆ.

ಎಳೆ ಹರೆಯದಲ್ಲಿ ಕಣ್ಣು ಪಿಳಿಪಿಳಿಸುತ್ತಾ ತದೇಕ ಚಿತ್ತದಿಂದ ಎಲ್ಲ ಗಮನಿಸುತಿದ್ದ ಅದೇ ಸುರತ್ಕಲ್ ಸುಬ್ಬರಾಯರ ಮಗನಿಗೆ ಈಗ 80ರ ಹರೆಯ! ಆದರೆ ಮನಸ್ಸಿಗೆ 30ರ ತಾರುಣ್ಯ, ಲವಲವಿಕೆ!! ಅವರೇ ಸುರತ್ಕಲ್ ವಾಸುದೇವ ರಾವ್.!! 37ರ ಹರೆಯದಲ್ಲಿ ಆಟ ಕೂಟಕ್ಕೆ ಕಾಲೂರಿದ ಅವರು 4 ಸಾವಿರದಷ್ಟು ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದಾರೆ.

800ಕ್ಕೂ ಅಧಿಕ ಆಟದಲ್ಲಿ ವೇಷ ತೊಟ್ಟಿದ್ದಾರೆ. ಪ್ರಸಕ್ತ ಮಹಿಳಾ ತಾಳಮದ್ದಳೆಗೆ ಸ್ಮರಣೀಯ ಕೊಡುಗೆ ನೀಡಿದ ಅವರು ತಾಳಮದ್ದಳೆಗಳ ಅಧ್ಯಕ್ಷ ಸುರತ್ಕಲ್ ಸುಬ್ಬರಾಯರ ಮಗನೆಂದು ಬಹುತೇಕರಿಗೆ ಗೊತ್ತೇ ಇಲ್ಲ…!!! ಯಕ್ಷಗಾನದ ಕುರಿತ ಭರಪೂರ ಮಾತನಾಡುವ ನಾವು ಕಲಾ ಚರಿತ್ರೆಯ ಇತಿಹಾಸ ಹುಡುಕುತ್ತ, ಅದನ್ನೆಲ್ಲ ದಾಖಲಿಸುತ್ತಾ ಮುನ್ನಡೆಯದಿದ್ದರೆ ಹೇಗೆ??? ಇಂಥ ಕೌತುಕಗಳ ಅನ್ವೇಷಣೆಯ ಸುದ್ದಿ ಕತೆಗಳೇ ಕಣಿಪುರ ಮಾಸಪತ್ರಿಕೆಯ ವೈಶಿಷ್ಟ್ಯ, ಆಕರ್ಷಣೆ..

‍ಲೇಖಕರು Admin

11 February, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading