’ಸುರಗಿಯಲ್ಲಿ ಆ ನಗು ಇನ್ನಿಲ್ಲ’ – ಸೂರಿ ಬರೀತಾರೆ

ಇನ್ನು ತುಂಡು ನೆನಪುಗಳಷ್ಟೇ ನನ್ನ ಪಾಲಿಗೆ

ಸೂರಿ

`ಜೋಗಿ, ಇಲ್ಲಿದೆ ತಿದ್ದಿದ ಮುನ್ನುಡಿ. ನಾನು ಓದಿ ಎಂಜಾಯ್ ಮಾಡಿದ ಕಾದಂಬರಿಗೆ ನ್ಯಾಯ ಸಲ್ಲಿಸಿದ್ದೇನೋ ಇಲ್ಲವೋ ತಿಳಿಸು.` ಮಾರನೇ ದಿನ ಮತ್ತೊಂದು ಮೇಲ್, `ಜೋಗಿ, ನಾನು ಬರೆದ ಮುನ್ನುಡಿಯನ್ನು ಸೂರಿ ಓದಿದ್ದಾನೆಯೇ? ಅವನ ಕಾದಂಬರಿಯನ್ನು ಸರಿ ಅರ್ಥದಲ್ಲಿ ಓದಲು ಸಹಾಯವಾಗುತ್ತದೆಂದು ಅನಿಸುತ್ತದೋ ಅವನಿಗೆ? ಯಾವ ಫಾಮರ್ಾಲಿಟೀಸ್ ಬೇಡ.` ಮುನ್ನುಡಿ ಚೆನ್ನಾಗಿದೆ ನನಗೆ ಇಷ್ಟವಾಯಿತು, ಕಾದಂಬರಿಯ ಮೌಲ್ಯ ನಿಮ್ಮ ಮುನ್ನುಡಿಯಿಂದ ಹೆಚ್ಚಿದೆ ಎಂದು ನನಗೆ ನಂಬಿಕೆ ಅಂತ ಬರೆದ ಮಾರನೇ ದಿನ ಇನ್ನೊಂದು ಮೇಲ್. `ಪ್ರಿಯ ಸೂರಿ ನನ್ನ ಮುನ್ನುಡಿ ನಿನಗೆ ಇಷ್ಟವಾಯಿತೆಂದು ತಿಳಿದು ಸಂತೋಷವಾಯಿತು. ಓದುಗನ ಮನಸ್ಸಿನಲ್ಲಿ ಬೆಳೆದುಕೊಳ್ಳುವ ಕಾದಂಬರಿಗೆ ಮುನ್ನುಡಿ ಅಡ್ಡಿಯಾಗಬಾರದೆಂಬ ಕಾಳಜಿ ನನ್ನದು. ಹೆಚ್ಚಿನ ಸ್ಪಷ್ಟತೆಗೆ ಕೆಲವು ಸಾಲುಗಳನ್ನು ತಿದ್ದಿ ಬರೆದಿದ್ದೇನೆ. ಓದಿ ನೋಡು. ಜೋಗಿಗೂ ಕಳಿಸಿದ್ದೇನೆ. ನಿನ್ನ ಕಥೆಗಳನ್ನು ಓದ ಬೇಕು ನಾನು.`
ನಾಲ್ಕು ವರ್ಷಗಳು ತಿಕ್ಕಿ ತೀಡಿದ ನಂತರ ನನ್ನ ಮೊದಲ ಕಾದಂಬರಿ ಬರೆದು ಮುಗಿಸಿಯಾಗಿತ್ತು. ಅದಕ್ಕೆ ಮುನ್ನುಡಿ ಬರೆಸಬೇಕಿತ್ತು. ಯಾರಿಂದ ಅಂತ ಸಾಕಷ್ಟು ತಲೆಕೆಡಿಸಿಕೊಂಡಾಗಿತ್ತು. ಇದರಲ್ಲಿ ತಲೆಕೆಡಿಸಿಕೊಳ್ಳುವಂಥಾದ್ದೇನಿದೆ? ಅಂತ ಸಾಮಾನ್ಯವಾಗಿ ಅನ್ನಿಸಬಹುದು. ಮೊದಲ ಕಾದಂಬರಿಯ ಅಳುಕು ಇದ್ದೇ ಇರುತ್ತದಲ್ಲ? ಕಾದಂಬರಿಯ ಪ್ರತಿ ಹಂತದಲ್ಲೂ ಇಷ್ಟಷ್ಟೇ ಓದಿ, ಕೊನೆಗೊಮ್ಮೆ ಪೂತರ್ಿ ಕಾದಂಬರಿಯನ್ನೂ ಓದಿ ಚೆನ್ನಾಗಿದೆ ಚೆನ್ನಾಗಿದೆ ಎಂದು ಹುರಿದುಂಬಿಸುತ್ತಿದ್ದ ವಿವೇಕ್ ಶಾನಬಾಗ್ ಅನಂತಮೂತರ್ಿಯವರಿಂದ ಯಾಕೆ ಬರೆಯಿಸಬಾರದು ಅಂತ ಕೇಳಿದರು. ಸರಿ, ಮುನ್ನುಡಿ ಬರೆಯುವಿರಾ ಅಂತ ಕೇಳುವುದು ಹೇಗೆ? ಅದೂ ಅಲ್ಲದೇ ನನ್ನಂತಹವನ ಕಾದಂಬರಿಗೆ ಮುನ್ನುಡಿ ಬರೆಯುವ ಅಗತ್ಯವಾದರೂ ಇದೆಯೇ ಅವರಿಗೆ? ಓದಿದ ಕೂಡಲೇ ಚೆನ್ನಾಗಿಲ್ಲ ಅಂದು ಬಿಟ್ಟರೆ ಹೇಗೆ? ಇತ್ಯಾದಿಗಳ ತಾಕಲಾಟಗಳಲ್ಲೇ ಯಾವುದಕ್ಕೂ ಅವರಿಗೆ ಕಾದಂಬರಿ ಕಳಿಸಿ ನೋಡಿ ಅಂತ ಜೋಗಿಗೆ ಹೇಳಿದ್ದೆ. ನಾನೇ ನೇರವಾಗಿ ಕಳಿಸುವ ಧೈರ್ಯವಾಗಲಿಲ್ಲ. ನನ್ನ ಕಾದಂಬರಿಯನ್ನು ಜೋಗಿ ಅವರಿಗೆ ಈ ಮೇಲ್ ಮಾಡಿದ ಮೂರು ದಿನಗಳಲ್ಲಿ ಮೇಲಿನ ಮೇಲ್ ಸರಣಿ ಶುರುವಾದದ್ದು.

ಇಲ್ಲೀವರೆಗೂ ಅವರ ಬರವಣಿಗೆಗಳನ್ನು ಓದುತ್ತಿದ್ದೆ ಅಷ್ಟೇ. ಭೇಟಿಯಾಗಿರಲಿಲ್ಲ, ಮುಖತಃ ಮಾತನಾಡಿರಲಿಲ್ಲ. (ಯಾರೇ ದೊಡ್ಡವರ ಜೊತೆ ಮಾತನಾಡಲು ನನಗೆ ಒಂಥರಾ ಹಿಂಜರಿಕೆಯಿದ್ದೇ ಇರುತ್ತದೆ.) ಈಗ ಇದ್ದಕ್ಕಿದ್ದಂತೇ ಅವರು ನನ್ನ ಜೀವನದಲ್ಲಿ ನುಗ್ಗಿಬಿಟ್ಟಿದ್ದರು. ಅಲ್ಲಿಂದ ಶುರುವಾಯಿತು ಅವರೊಡನೆ ಪುಟ್ಟದಾದ ಒಡನಾಟ. ಅವರೊಂದಿಗೆ ನನ್ನದೇನಿದ್ದರೂ ತುಂಡು ನೆನಪುಗಳ ಸರಮಾಲೆ ಅಷ್ಟೇ. ಖಾಲಿಯಾಗಿದ್ದೇವೆ ಅಥವಾ ಖಾಲಿಯಾಗುತ್ತಿದ್ದೇವೆ ಅನಿಸಿದ ಕ್ಷಣ ಅವರಿಗೆ ಫೋನ್ ಮಾಡುವುದು, ಇಂಥಾ ದಿನ ಬನ್ನಿ ಅಂದ ದಿನ ನಾನೂ ಮತ್ತು ಜೋಗಿ ಅವರ ಡಾಲರ್ಸ್ ಕಾಲನಿ ಮನೆಗೆ ಮಧ್ಯಾಹ್ನದ ಹೊತ್ತಿನಲ್ಲಿ ಹೋಗಿ ಕೂತು ಮಾತನಾಡುವುದು. ಒಂದಿಷ್ಟು ತಿಳಕೊಂಡ ಅನುಭವವಾಗುತ್ತಿತ್ತು. ಇನ್ನೊಂದಿಷ್ಟು ದಿನ ಬದುಕನ್ನು ನಂಬಲು ಒಂದಿಷ್ಟು ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಅಲ್ಲಿಂದ ಹೊರಡುತ್ತಿದ್ದೆವು. ಅವರೊಂದಿಗೆ ಮಾತನಾಡುವುದರಲ್ಲಿ ಒಂದು ಆನಂದವಿರುತ್ತಿತ್ತು. ಅವರೊಂದಿಗೆ ಕೂತು ಹರಟುವುದೂ ಒಂದು ಬೆಚ್ಚನೆಯ ಹಿತವಾದ ಅನುಭವ. ಅವರೆಂದೂ ನಮ್ಮೊಂದಿಗೆ ತಾನೆಲ್ಲಾ ತಿಳಿದವನು ಎನ್ನುವ ಭಾವದಲ್ಲಿ ಮಾತನಾಡುತ್ತಲೇ ಇರಲಿಲ್ಲ. ಒಬ್ಬ ಗೆಳೆಯ ಮಾತನಾಡಿದಂತೆ, ಅಥವಾ ಒಬ್ಬ ಆತ್ಮೀಯ ಮೇಷ್ಟ್ರು ಮಾತನಾಡಿದಂತೆ. ನಿಜಕ್ಕೂ ಹೇಳಬೇಕೆಂದರೆ ನಮ್ಮನ್ನು ತಮ್ಮ ಸಮಾನ ಅಂತ ಪರಿಗಣಿಸಿ ನೋಡುತ್ತಿದ್ದರು, ಮಾತನಾಡುತ್ತಿದ್ದರು. ಕೆಲವೊಮ್ಮೆ ಪ್ರಶ್ನೆಗಳನ್ನು ಕೇಳುತ್ತಿದ್ದರು, ಏಯ್ ಪುತಿನ ಅವರು ಒಂದು ಪದ್ಯದಲ್ಲಿ ಒಂದು ಸಾಲು ಬರೆದಿದ್ದಾರಲ್ಲಾ, ಏನದು, ನೆನಪೇ ಆಗ್ತಾಯಿಲ್ಲ ನೋಡು ಅಂತಾನೋ, ಇನ್ನೇನೋ. ಜೊತೆಯಲ್ಲೇ ಒಂದು ತುಂಟ ನಗು. ನಮಗೆ ಗೊತ್ತು ಈ ಪ್ರಶ್ನೆ ಕೇಳಿದ್ದು ನಮ್ಮ ಆಳ ತಿಳಿದುಕೊಳ್ಳಲು ಅಂತ. ನಾವು (ನನಗಿಂತಾ ಹೆಚ್ಚಾಗಿ ಜೋಗಿ ಇಂತಹ ಉತ್ತರಗಳಿಗೆ ಹೆಸರುವಾಸಿ) ಪ್ರಶ್ನೆಗೆ ಉತ್ತರ ಕೊಟ್ಟೆವೋ, ಮುದ್ದಾಗಿ ನಕ್ಕು, ಎಷ್ಟು ನೆನಪು ನಿನಗೆ ಅಂದು ಮಾತು ಮುಂದುವರೆಸುತ್ತಿದ್ದರು. ಅಚ್ಚರಿಯೆಂದರೆ ತೀರಾ ಕಷ್ಟ ಅನಿಸಿದ್ದನ್ನು ಎಷ್ಟು ಸಲೀಸಾಗಿ ಮನದಟ್ಟು ಮಾಡಿಕೊಡುವ ಅವರ ಮಾತಿನ ರೀತಿ.
ಮುಂದೆ ಎಲ್ಲಾದರೂ ಸಿಗಲಿ, ರಂಗ ಶಂಕರದಲ್ಲೋ, ಯಾವುದೋ ಪುಸ್ತಕ ಸಮಾರಂಭದಲ್ಲೋ ಎಲ್ಲೇ ಆಗಲಿ, ನೋಡಿದ ಕೂಡಲೇ ಗುರುತು ಹಿಡಿದು, ನಕ್ಕು ಮುಂದೆ ಕರೆಸಿಕೊಂಡು, ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದು, ಎದೆಗೆ ಅಪ್ಪಿಕೊಂಡು ಒಂದಿಷ್ಟು ಮಾತನಾಡುತ್ತಿದ್ದರು. ಹಳೆಯ ಗೆಳೆಯ ಅಪರೂಪಕ್ಕೆ ಸಿಕ್ಕಂತೆ. ಅದೇ ನಗು, ಅದೇ ಆತ್ಮೀಯತೆ. ಏನು ಬರೀತಾಯಿದೀಯಾ ಅಂತ ಕೇಳಿ ಅದರ ಬಗ್ಗೆ ಮಾತನಾಡಿ ಹೋಗುತ್ತಿದ್ದರು.
ಅದೊಮ್ಮೆ ರಂಗ ಶಂಕರದಲ್ಲಿ ಸಿಕ್ಕಿದ್ದರು. ಅವರ ಬರ ಕಥೆಯನ್ನಾಧರಿಸಿದ ನಾಟಕದ ಪ್ರದರ್ಶನವಿತ್ತು. ಹೊತ್ತಿಗೆ ಮೊದಲೇ ಬಂದಿದ್ದರಿಂದ ಅಲ್ಲಿನ ಕೆಫೆಯಲ್ಲಿ ಕೂತು ಕಾಫಿ ಮನೆಯಿಂದ ತಂದಿದ್ದ ಇಡ್ಲಿಯನ್ನು ತಿನ್ನತೊಡಗಿದ್ದರು. ಒಂದು ಅಂತರ ರಾಷ್ಟ್ರೀಯ ಪ್ರಾಜೆಕ್ಟಿನ ಸಲುವಾಗಿ ನಾನು ಒಂದಿಷ್ಟು ಟಿಪ್ಪಣಿ ಮಾಡಿಕೊಳ್ಳಬೇಕಿತ್ತು, Dignity by birth ಅನ್ನುವ ವಿಷಯದ ಮೇಲೆ. ಅದನ್ನೇ ಕುರಿತು ಒಂದೆರಡು ಮಾತು ಹೇಳಲು ತೊಡಗಿದರು. ಆದರೆ ಬಂದು ಭೇಟಿಯಾಗುವವರ ಸಂಖ್ಯೆ ಜಾಸ್ತಿಯಾಗಿ ಮನೆಗೆ ಬಾ, ಮಾತಾಡೋಣ ಅಂದರು. ನಾಟಕ ಮುಗಿದ ಮೇಲೆ ಪುನಃ ಭೇಟಿಯಾದರು. ತುಂಬಾ ಸಂತೋಷವಾಗಿತ್ತು ಅವರಿಗೆ. ನಾಟಕ ಸ್ವಲ್ಪ ಜೋರಾಯಿತು ಅಲ್ಲೇನೋ ಅಂದರು ಅಷ್ಟೇ. ಆಗಷ್ಟೇ ನಿಕೋಲಾಯ್ ಗೋಗೋಲನ ಓವರ್ಕೋಟ್ ಕತೆಯನ್ನಾಧರಿಸಿ ಕೋಟಲೆಯೆಂಬರು ಕೋಟು ನೀಡಿದ್ದನ್ನು ಕತೆಯನ್ನು ಮುಗಿಸಿದ್ದೆ. ಅದರಲ್ಲಿ ಅವರ ಕತೆ ಸಂಯೋಗದಿಂದ ವೆಂಕಟರಾವ್ ಎನ್ನುವ ಪಾತ್ರವನ್ನು ನನ್ನ ಕತೆಗೆ ತಂದುಕೊಂಡಿದ್ದೆ. ಅದನ್ನೇ ಹೇಳಿದೆ. ಕತೆಯನ್ನು ಕಳಿಸುತ್ತೇನೆ ಎಂದೆ. ಭಾಳಾ ಕಷ್ಟದ ಕತೆ ಅದು. ಇಡೀ ರಷ್ಯದ ಕಥಾ ಜಗತ್ತು ಆ ಓವರ್ಕೋಟ್ ಕತೆಯಿಂದ ಹುಟ್ಟಿಕೊಂಡಿದ್ದು ಅಂದರು. ಕಳಿಸು ಓದುತ್ತೇನೆ ಅಂದರು. ಕತೆಯನ್ನು ಕಳಿಸಿದೆ. ಓದಿದರೋ ಇಲ್ಲವೋ ತಿಳಿಯಲಿಲ್ಲ. ಮತ್ತೆ ಅದರ ವಿಷಯವೆತ್ತಲು ಧೈರ್ಯ ಬರಲಿಲ್ಲ. ಹಾಗಾಗಿ ಅವರ ಅಭಿಪ್ರಾಯ ತಿಳಿಯಲಿಲ್ಲ.
Dignity by birth ವಿಷಯದ ಬಗ್ಗೆ ಮಾತನಾಡಲು ಬರುತ್ತೇವೆ ಅಂತ ಮೇಲ್ ಮಾಡಿದೆ. ಬನ್ನಿ ಅಂತ ಉತ್ತರ ಬಂದದ್ದೇ ನಾನೂ ಜೋಗಿ ಹೊರಟುಬಿಟ್ಟೆವು. ಮಗನಿಗೆ ಅರ್ಹತೆ ಪ್ರಶ್ನೆಯಿಲ್ಲ. ಮಗನಾಗಿದ್ದರಿಂದ ಅರ್ಹತೆ ಬರತ್ತೆ ಅಂತ ಶುರುವಾಯಿತು ಮಾತು. ಈಗ ಒಬ್ಬ ಶ್ರೇಷ್ಠಿ ಇದ್ದಾನೆ ಅಂತ ಇಟ್ಟುಕೋ, ಅವನ ಮಗನಿಗೆ ವ್ಯಾಪಾರಿ ಆಗುವ ಅರ್ಹತೆ ತಾನೇ ತಾನಾಗಿ ಬರತ್ತೆ. ಅವನಿಗೆ ಯೋಗ್ಯತೆ ಇದೆಯೋ ಇಲ್ಲವೋ ಅದು ಬೇರೆ ಮಾತು. ಈಗ ರಾಜನಾದವನ ಮಗ ರಾಜನಾಗಲು ಹೇಗೆ ಅರ್ಹತೆಯನ್ನು ತಾನೇ ತಾನಾಗಿ ಪಡೆಯುತ್ತಾನೋ ಹಾಗೆ. ಅಲ್ಲಿಂದ ಮಾತು ಹೊರಳಿ, ಹೊರಳಿ ಜಾಬಾಲಿ, ನಚಿಕೇತ, ಮಹಾಭಾರತ, ಭಾರತೀಯ ಜಾತಿ ವ್ಯವಸ್ಥೆ, ಇತ್ಯಾದಿಗಳನ್ನು ಹಾದು ನಾವು ಅಲ್ಲಿಂದ ಹೊರಬಿದ್ದಾಗ ಸುಮಾರು ಒಂದೂವರೆ ತಾಸು ಕಳೆದಿತ್ತು. ನನಗೆ ಬೇಕಾಗಿದ್ದು ಸಿಕ್ಕಿತೇ, ಗೊತ್ತಿಲ್ಲ. ಆದರೆ ನನಗೆ ಬೇಕಾಗಿದ್ದು ಬಹಳ ಸಿಕ್ಕಿತು ಅನಿಸಿತು.

ಒಂದು ನಾಲ್ಕು ವರ್ಷಗಳ ಹಿಂದೆ ಏಳು ಜನ ಜ್ಞಾನಪೀಠ ಪ್ರಶಸ್ತಿ ಪಡೆದವರ (ಕಂಬಾರರಿಗೆ ನಂತರದ ವರ್ಷ ಈ ಪ್ರಶಸ್ತಿ ಬಂತು) ಕೃತಿಗಳನ್ನು ಆಧಾರವಾಗಿಟ್ಟುಕೊಂಡು ರಂಗ ಯುಗಾದಿಯನ್ನು ಯೋಜಿಸಿದ್ದೆ, ರಂಗ ಶಂಕರದಲ್ಲಿ. ಇವರ ಅಕ್ಕಯ್ಯ ನನಗೆ ತುಂಬಾ ಇಷ್ಟವಾದ ಕತೆ. ಅದನ್ನು ಓದುವುದು ಅಂತಾಯಿತು. ದಿನದ ಕೊನೆಯ ಕಾರ್ಯಕ್ರಮವಾಗಿ ಗಿರೀಶ್ ಕಾರ್ನಾಡರು ತಮ್ಮ ಹೂಗಳು ನಾಟಕವನ್ನು ಖುದ್ದಾಗಿ ಓದುವವರಿದ್ದರು. ಹಾಗಾಗಿ ಅಕ್ಕಯ್ಯ ಕತೆಯನ್ನು ನೀವೇ ಓದಿ ಅಂತ ಅನಂತಮೂರ್ತಿಯವರನ್ನು ಕೇಳಿಕೊಂಡೆ. ಒಪ್ಪಿದರು. ಓದುವುದು ಎಂದರೆ ಬರೇ ಓದುವುದು ಎಂದಲ್ಲ, ಒಂದು ರೀತಿಯ ರಂಗ ಪ್ರಸ್ತುತಿಯಾಗಬೇಕು. ಅಲ್ಲಿ ಬರುವ ಪಾತ್ರಗಳಲ್ಲಿ ಒಂದರ ಸಂಭಾಷಣೆಗಳನ್ನು ನಿಮ್ಮ ಜೊತೆಯಲ್ಲಿ ನಾನೂ ಓದುತ್ತೇನೆ. ಹೆಣ್ಣು ಪಾತ್ರದ ಸಂಭಾಷಣೆಗಳನ್ನು ಒಬ್ಬ ನಟಿ ಓದುತ್ತಾರೆ. ಕತೆಯ ಮುಕ್ಕಾಲು ಭಾಗ ಓದು ನಿಮ್ಮದೇ ಅಂತ ಹೇಳಿದೆ. ಒಂದು ಹೊಸ ಪ್ರಯೋಗ, ಇರಲಿ, ಬರುತ್ತೇನೆ ಅಂತ ಒಪ್ಪಿದರು. ನೀವು ಓದಬೇಕಾದ ಭಾಗಗಳನ್ನು ಗುರುತು ಹಾಕಿ ಕೊಡುತ್ತೇನೆ, ಯಾವಾಗ ಕಳಿಸಲಿ ಅಂತ ಕೇಳಿದೆ. ಅವತ್ತೇ ಸ್ವಲ್ಪ ಬೇಗ ಬಂದು ತೊಗೊತೀನಿ ಬಿಡು ಅಂದರು. ಆಗಲೇ ಆರೋಗ್ಯ ಸ್ವಲ್ಪ ಏರುಪೇರಾಗ ತೊಡಗಿತ್ತು. ಕಾರ್ಯಕ್ರಮದ ಹಿಂದಿನ ದಿನ ಬರಲಾಗುವುದಿಲ್ಲ ಕಣೋ, ಸ್ವಲ್ಪ ಆಯಾಸವಾಗತ್ತೆ ಅಂದರು. ಅವರಿಲ್ಲದ ಮೇಲೆ ಅಕ್ಕಯ್ಯನನ್ನು ಓದುವುದು ಹೇಗೆ ಅಂತ ಆ ಕತೆಯನ್ನೇ ಬಿಟ್ಟು, ನಾನೊಬ್ಬನೇ ಸೂರ್ಯನ ಕುದುರೆ ಕತೆ ಓದಿದೆ. ಓದುವಾಗ ರಂಗ ಶಂಕರದಲ್ಲಿ ಗಿರೀಶ್ ಕಾರ್ನಾಡರು ಕೂತಿದ್ದರು, ಹಿಂದಿನ ಸಾಲಿನಲ್ಲಿ. (ನನ್ನ ವಾಚನ ಮುಗಿದ ಮೇಲೆ ಅವರ ನಾಟಕ ವಾಚನವಿತ್ತಲ್ಲ?) ಕಾರ್ಯಕ್ರಮ ಮುಗಿದ ಮೇಲೆ ಕಾರ್ನಾಡರು ಹೇಳಿದರು, ಈ ಕತೆ ಅದೆಷ್ಟು ಡ್ರಾಮಾಟಿಕ್ ಆಗಿದೆ ನೋಡಿ, ಯಾರು ಹೇಗೆ ಓದಿದರೂ ಕತೆಗೆ ಒಂಚೂರೂ ಧಕ್ಕೆ ಬರೋದಿಲ್ಲ, ಎಂಥಾ ಗ್ರೇಟ್ ಕತೆ ಅದು ಅಂತ. ಮಾರನೇ ದಿನ ಅನಂತಮೂರ್ತಿಯವರಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದೆ. ಚೆನ್ನಾಗಿ ಬಂತು ಅಂತ ಒಂದಿಬ್ಬರು ಹೇಳಿದರು ಕಣೋ, ಮಿಸ್ ಮಾಡಿಕೊಂಡೆ ನೋಡು. ಇನ್ನೊಂದು ಸಲ ಖಂಡಿತ ಇದನ್ನು ನೀನು ಅಂದುಕೊಂಡ ಹಾಗೇ ಓದೋಣ ಅಂದರು. ಅವರೊಂದಿಗೆ ಕೂತು ಅವರದ್ದೇ ಕತೆ ಓದುವ ಸರದಿ ನನ್ನದಾಗಲೇ ಇಲ್ಲ.

—-

ಬಹಳ ಹಿಂದೆ, 1982ರ ಸುಮಾರಿನಲ್ಲಿ, ಕೇರಳದ ತಿರುವನಂತಪುರದಲ್ಲಿದ್ದಾಗ ಡಾಕ್ಟರ್ ಅಯ್ಯಪ್ಪ ಪಣಿಕ್ಕರ್ ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದೆ. (ಅದು ಇನ್ನೊಂದು ಬೃಹತ್ ವ್ಯಕ್ತಿತ್ವ, ಥೇಟ್ ಅನಂತಮೂರ್ತಿಯವರಂತೇ. ಅವರೊಂದಿಗೆ ಮಾತನಾಡಿ ಹೊರಬಂದಾಗ ಅದೆಷ್ಟು ಶ್ರೀಮಂತವಾಗುತ್ತಿದ್ದೆವು, ಥೇಟ್ ಅನಂತಮೂರ್ತಿಯವರಂತೇ) ಪಣಿಕ್ಕರ್ ಅವರ ಒಂದು ಪದ್ಯವನ್ನು ‘ನಾಲ್ಕು ಕುದುರೆಗಳು’ ಅಂತ ಕನ್ನಡಕ್ಕೆ ಅನುವಾದಿಸಿ, ರುಜುವಾತಿಗೆ ಕಳಿಸಿದ್ದೆ. ಆಮೇಲೆ ಅದನ್ನು ಮರೆತೂ ಬಿಟ್ಟಿದ್ದೆ. ಈಗ ಒಂದೈದಾರು ವರ್ಷಗಳ ಹಿಂದೆ ವಿವೇಕ್ ಶಾನಬಾಗ್ ಅವರ ಬಹುಮುಖಿ ನಾಟಕವನ್ನು ಸಂಚಯ ತಂಡಕ್ಕೆ ನಿರ್ದೇಶನ ಮಾಡುವ ಸಂದರ್ಭದಲ್ಲಿ ಗೆಳೆಯ ಗಣೇಶ್ ಶೆಣೈ ‘ನಿಮ್ಮದೊಂದು ಪದ್ಯ ನನ್ನ ಹತ್ತಿರ ಇದೆ’ ಅಂತ ಹೇಳಿದರು. ನನಗೆ ಆಶ್ಚರ್ಯ. ನಾನು ಪದ್ಯ ಬರೆದ ನೆನಪಿಲ್ಲ ನನಗೆ. ಮಾರನೇ ದಿನ ಗಣೇಶ್ ಒಂದು ಪ್ರಿಂಟಾದ ಹಾಳೆಯ ಜೆರಾಕ್ಸ್ ಪ್ರತಿ ತಂದು ತೋರಿಸಿದರು. ಅದು ರುಜುವಾತಿನ ಎರಡು ಹಾಳೆಗಳು. ಅದರಲ್ಲಿತ್ತು ನನ್ನ ಮೊದಲ ಅನುವಾದ, ನಾಲ್ಕು ಕುದುರೆಗಳು ಎನ್ನುವ ಪದ್ಯ. ನಿನ್ನೆ ಆ ಝೆರಾಕ್ಸ್ ಪ್ರತಿಯನ್ನು ಮತ್ತೆ ತೆಗೆದು ನೋಡಿದೆ. ರುಜುವಾತಿನಲ್ಲಿ ನನ್ನ ಕವನ, ಅದೂ ನಾನು ಅನುವಾದಿಸಿದ ಮೊದಲ ಕವನ. ಅದೂ ರುಜುವಾತಿನಲ್ಲಿ. ಅದಕ್ಕಿಂತ ಇನ್ನೇನು ಬೇಕು.

ಒಂದು ಮಾತು. ಇದನ್ನು ಬಹಳ ಜಂಭದಿಂದಲೇ ಹೇಳುತ್ತೇನೆ. ಸಂಕೋಚವಿಲ್ಲ. ಇದಕ್ಕೆ ಜೋಗಿಯೂ ಸಾಕ್ಷಿ. ಒಂದೊಮ್ಮೆ ಇಂತಹ ಭೇಟಿಯಲ್ಲಿ ಇದ್ದಕ್ಕಿದ್ದಂತೆ ನನ್ನ ಎನ್ನ ಭವದ ಕೇಡು ಕಾದಂಬರಿ ಮಾತಿನಲ್ಲಿ ಸಿಕ್ಕಿಬಿಟ್ಟಿತು. ‘ಎಷ್ಟು ಚೆನ್ನಾಗಿ ಬರೆದಿದ್ದೀಯಾ ಕಣೋ. ನೀನು ವರ್ಣಿಸೋ ಆ ವಾಸನೆಗಳು ಕಾದಂಬರಿಗೆ ಒಂದು ವಿಶೇಷತೆ ತಂದು ಕೊಟ್ಟಿದೆ ನೋಡು. ನಾನಂತೂ ಭಾಳಾ ಎಂಜಾಯ್ ಮಾಡಿದೆ ನಿನ್ನ ಕಾದಂಬರೀನ್ನ. ನಿನ್ನ ಕತೆ ಓದಬೇಕೂ ನಾನು ಪುರುಸೊತ್ತಾಗ್ತಾ ಇಲ್ಲ. ಈ ಎಲ್ಲಾ ಜಿಲ್ಲೆಗಳಿಗೆ ಒಬ್ಬೊಬ್ಬ ಲೇಖಕನೋ ಕಾದಂಬರೀಕಾರನೋ ಇರ್ತಾನೆ. ನೀನು ದಾವಣಗೆರೆಯ ಕಾದಂಬರಿಕಾರ.’ ಈಗಲೂ ಒಮ್ಮೊಮ್ಮೆ ಆ ಮಾತನ್ನು ನೆನೆಸಿಕೊಂಡು ಮೆಲುಕು ಹಾಕುತ್ತಾ ರೋಮಾಂಚನವನ್ನು ಅನುಭವಿಸುತ್ತೇನೆ.

ಆದರೆ ಇನ್ನು ಡಾಲರ್ಸ್ ಕಾಲೋನಿಯ ಕಡೆ ಹೋಗುವ ಸಂದರ್ಭ ಕಡಿಮೆ. ನಾಗಲಿಂಗ ಹೂವಿನ ಮರಗಳ ನೆರಳಿನಲ್ಲಿ ಹುದುಗಿದ್ದ ಸುರಗಿಯಲ್ಲಿ ಆ ನಗು ಇನ್ನಿಲ್ಲ. ಆ ಹರಟೆಗಳು ಇನ್ನಿಲ್ಲ. ಆಯ್ತು ನಾಳೆ ಬನ್ನಿ ಅನ್ನುವ ಕರೆಯಿಲ್ಲ. ಬಹಳ ಕಳಕೊಂಡಿದ್ದೇವೆ ನಾವು. ಏನನ್ನು ಕಳಕೊಂಡಿದ್ದೇವೆ, ಎಷ್ಟು ಕಳಕೊಂಡಿದ್ದೇವೆ ಎನ್ನುವುದರ ಅರಿವಾದಂತಿಲ್ಲ ನಮಗಿನ್ನೂ.
 

‍ಲೇಖಕರು G

September 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ajit

    ‘ಏನನ್ನು ಕಳಕೊಂಡಿದ್ದೇವೆ, ಎಷ್ಟು ಕಳಕೊಂಡಿದ್ದೇವೆ ಎನ್ನುವುದರ ಅರಿವಾದಂತಿಲ್ಲ ನಮಗಿನ್ನೂ.’. Don’t worry Soory. Very soon the new regime will make us realize that.

    ಪ್ರತಿಕ್ರಿಯೆ
    • Kiran

      What is “new regime”? Sounding pessimistic to me. Or, am I missing the real tone?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: