
ವಿನತೆ ಶರ್ಮ

ಸುಮ್ಮನೆ ಹೀಗೇ ಇರುವುದೆಂದರೆ
ಗುಬ್ಬಚ್ಚಿ ಹಾರಾಡುವುದ ನೋಡುತ್ತಾ ನಿಮಿಷ ಕಳೆಯುವುದು
ಕತ್ತು ಕೊಂಕಿಸುತ್ತಾ ಕಾಳಿಗಾಗಿ ನಮ್ಮನ್ನ ಅರೆಬರೆ ನೋಡುವುದ
ಪರಿಯ ಅನುಕರಿಸುತ್ತಾ ಮತ್ತೆ ಮಗುವಾಗುವುದು.
ಸುಮ್ಮನಿರುವುದೆಂದರೆ
ಶರತ್ಕಾಲದ ಆಗಸವನ್ನು ಪ್ರತಿದಿನವೂ ಧ್ಯಾನಿಸಿ ನಿಮಿಷ ಕಳೆಯುವುದು
ಉದುರುವ ರಂಗುರಂಗಿನ ಎಲೆಗಳ ಬಳುಕು, ಅವು ನೇಯುವ ಚಾಪೆಯ ಚಿತ್ತಾರ
ನೋಡುತ್ತಾ ವರ್ಣ ಭಾಂಡಗಳಲ್ಲಿ ಮುಳುಗೇಳುವ ಕನಸ ಆಸ್ವಾದಿಸುವುದು.
ಸುಮ್ಮನೆ ಹೀಗೇ ಇರುವುದೆಂದರೆ
ಶಾವಂತಿಗೆ ಮೊಗ್ಗು, ಹೂಗಳ ಹಳದಿ-ಹಸಿರು ಕೌದಿಯ ಉದ್ಭವಕ್ಕೆ ಕಾಯುವುದು
ಹಸಿರು ಅಡಗಿ ಹಳದಿ ಉಳಿದ ಮಾಯೆಗೆ ವಾಹ್ ಎನ್ನುವುದು
ಹಳದಿ ಅಳಿದು ಕಂದು ಬಂದಾಗ ಮಾಯೆ-ಮಿಥ್ಯೆಗೆ ನಗುವುದು.
ಹೀಗೇ ಇರುವುದೆಂದರೆ
ದಲಾಯ್ ಲಾಮಾರ ಪಕ್ಕ ಕೂತು ತರಾವರಿ ನಗುಗಳನ್ನ ಅನುಕರಿಸುವುದು
ಪರರ ದಯೆ ಛತ್ರಿಯ ಕೆಳಗಿದ್ದರೂ ನಗುನಗುತ್ತಲೇ ಇರುವ ಆ
ಮನಸು ನನಗೊಂದಿಷ್ಟು ಸಿಗಲಿ ಎಂದು ಬಯಸುವುದು.

ಸುಮ್ಮನಿರುವುದೆಂದರೆ
ಪುಟ್ಟ ಪೋರಿಪೋರಗಳ ದಂಡು ಬಂದು ಹೆಚ್ಚಿಟ್ಟಿದ್ದ ಬೆಂಡೆಕಾಯಿಯ
ಅಂಟುತಲೆಗಳ ಹೆಕ್ಕಿ ಮುಖದ ತುಂಬಾ ಹಚ್ಚಿಕೊಂಡು ಅವು
ಕಳಚದಂತೆ ಜವಾಬ್ದಾರಿಯಿಂದ ಹುಷಾರಾಗಿ ಕಣ್ಣುಗಳಲ್ಲೇ ಮಾತನಾಡುವುದು.
ಹೀಗೇ ಇರುವುದೆಂದರೆ
ಗೋಡೆ ಮೇಲಿನ ಲೊಚಗುಟ್ಟುವ ಹಲ್ಲಿಗೆ, ಮೈ ನೆಕ್ಕುವ ನೊಣಕ್ಕೆ ಬೈಯುವುದು
ನೊಣವ ಹಲ್ಲಿ ನುಂಗಿದಾಗ, ಬಾಗಿಲ ಸಂದಲಿ ಹಲ್ಲಿ ಸತ್ತಾಗ
ಛೆ ಛೇ ಎಂದು ಲೊಚಗುಟ್ಟಿ ಕರ್ಮ ಸಿದ್ಧಾಂತವ ಜಪಿಸುವುದು.
ಹೀಗೇ ಇರುವುದೆಂದರೆ
ವಾಕಿಂಗ್ ಮಾಡುವಾಗ ಮಲ್ಬೆರಿ ಹಣ್ಣು ಕಿತ್ತು ತಿಂದು, ದಾಳಿಂಬೆ ಸೊಗಸ ಹೊಗಳಿ,
ಕರಿಬೇವಿನ ಘಮವ ಹೀರಿ, ಗಿಳಿಗಳ ಸಂವಾದ ಆಲಿಸಿ, ಅಚಾನಕ್ಕಾಗಿ
ಬಿದ್ದ ಮಳೆಯಲಿ ತೊಪ್ಪೆಯಾಗಿ ಇನ್ನೊಂದಿಷ್ಟು ನಡೆಯುವುದು.
ಸುಮ್ಮನೆ ಎಂದರೆ
ಅಬ್ಬೇಪಾರಿ ಜುಬ್ಬಾ, ದೊಗಲೆ ಚೆಡ್ಡಿ ಹಾಕಿಕೊಂಡು ಅಂಗಡಿಗೆ ಕಾಲಿಡುವುದು
ಅಲ್ಲಿದ್ದವರೆಲ್ಲಾ ನಖಶಿಖಾಂತ ನೋಡಿ ಮುಖ ಸಿಂಡರಿಸಿದಾಗ, ಯಾಕ್ರೊಲೇ
ಹೋಂ ಲೆಸ್ ಆಗೋಗಿ, ಎಂದು ಕಿರುಚುವ ಆಸೆಗೆ ಮರುಕ ಹುಟ್ಟುವುದು.
ಇರುವುದೆಂದರೆ
ಇಪ್ಪತ್ತಾರು ವಸಂತಗಳ ಹರೆಯದ ಅವನು ಅವಳಾಗುತ್ತಾ
ಇರುವ ಒಂದು ದಿನ ‘ನನ್ನ ಮೇಕಪ್, ಬ್ರಾ ಬಣ್ಣಕ್ಕೆ ಹೊಂದುವ ನನ್ನ ಫ್ರಾಕ್
ಮತ್ತು ಈ ಶೂಸ್ ನಿನಗಿಷ್ಟವಾಯ್ತೆ,’ ಎಂದಾಗ ನಾನು ನಾಚಿಕೊಳ್ಳುವುದು.
ಹೀಗೇ ಇರುವುದೆಂದರೆ
ನ್ಯಾಚುರಲ್ ಪೇರೆಂಟಿಂಗ್ ಮೀಟಿಂಗ್ನಲ್ಲಿ ಕಂಡದ್ದು ಬೆತ್ತಲೆ ಮಕ್ಕಳು,
ತೆರೆದೆದೆಗೆ ಕಂದನ ಅಂಟಿಸಿಕೊಂಡ ಅಮ್ಮಂದಿರು, ನಾಟಕಶಿಖಾಮಣಿಯಾದ ನಾನು,
ಅಪ್ಪಂದಿರು ಕಂಡಾಪಟ್ಟೆ ಹೊಗಳುತ್ತಿದ್ದ ತೆಂಗಿನೆಣ್ಣೆ, ಅರಿಶಿನ, ಕಡಲೆಹಿಟ್ಟು.

ಸುಮ್ಮನೆ ಇರುವುದೆಂದರೆ
ಎಂಭತ್ತರ ದಡ ಸೇರಿ ನಾನು, ನನ್ನವನು ಪಕ್ಕಪಕ್ಕ ಕೂತು ಕಣ್ಣಕಣ್ಣ ನೋಡಿ
ಸಾವಿರದೊಂದು ನೆನಪುಗಳ ಹೆಕ್ಕಿ ಮೊರದಲಿ ಕೇರಿ ಕೇರಿ
ಕಲ್ಲು-ಮಣ್ಣು-ರಾಗಿ-ಎಳ್ಳು-ನುಚ್ಚು ಎಲ್ಲವೂ ಸೈ ಎನ್ನುವುದು.
ಸುಮ್ಮನೆ ಇರುವುದೆಂದರೆ
ಅಡುಗೆ ಮಾಡುವಾಗ ಸುಮ್ಮನೆ ಗುನುಗುತ್ತಾ ಅದು ಹಾಡಾಗಿ
ರಾಗಗಳ ಹೊತ್ತು ಹಾರುತ್ತಿರುವ ಆಕಾಶ, ಸದಾ ಹಾಡುವ ಸಮುದ್ರ-ಕಾಡು-ಬೆಟ್ಟಗಳ
ಚಿತ್ರ ಮೂಡಿ ಓಡಿಹೋಗಿ ಐಪ್ಯಾಡ್ ಒತ್ತಿ ಹಾಡು ಕೇಳುತ್ತಾ ಕಣ್ಣು ಮುಚ್ಚುವುದು.






ಓದಿಯೂ ಸುಮ್ಮನಿರಲಾಗದು
Thank you, Avadhi!
ಸುಮ್ಮನಿರುವುದೆಂದರೆ ಇದನ್ನೋದಿ ಕಣ್ಣು ಮುಚ್ಚಿ ಮತ್ತೆ ಅದು ಮೂಡಿಸಿದ ಪ್ರತಿಯೊಂದು ಚಿತ್ರವನ್ನು ಬಿಡಿಸಿ ಆನಂದಿಸುವದು. ಬಲು ಸುಂದರ ವಿನತೆ! ಶ್ರೀವತ್ಸ ದೇಸಾಯಿ
ಭಲೇ ವಿನತೆ! ಅದೆಷ್ಟು ಸುಂದರ ವ್ಯಾಪಾರ ಅಲ್ಲಾ ಹೀಗೇ ಸುಮ್ಮನೆ ಇದ್ದು ಮಗುವಾಗಿ ಬಿಡುವುದು! ಮಗುವಿನ ಹೂಮನದ ಒಡೆಯರಾಗೋದು!! ಆನಂದಮಯ ಈ ಜಗ ಆಗ!!ಆದರೆ ಮಳೇಲಿ ತೊಪ್ಪನೇ ನೇಯ್ದು ಸುಮ್ಮನಿರಲಾಗಲ್ಲಾರೀ.ನಾಲ್ಕು ಹೆಜ್ಜೆ ಹಾಕಿ ಹಾಡು ಗುನುಗಲೇ ಬೇಕು.ಅಡಿಗೆ ಮಾಡುವಾಗ ಹಾಡು ಗುನುಗದೇ ಅಡಿಗೆ ಆಗೋದೇ ಇಲ್ಲ.ಒಪ್ಪಿದೆ. ತುಂಬಾ ಮೋಹಕ ಕಲ್ಪನಾ ವಿಲಾಸ!!ಮನದಲೊಂದು ಹಾಡು ಮೂಡಿಸಿದ್ದಕ್ಕೆ ಧನ್ಯವಾದಗಳು ವಿನತೆ.
Thank you all for your lovely comments!
ವಾಹ್ !!!!!!