ಲಾಲಿಸಿದಳು ಮಗನಾ..

ಕೃಷ್ಣ ಗೋಕುಲವನ್ನು ತೊರೆದು ವಾರಗಳೇ ಕಳೆದಿವೆ. ಯಶೋಧೆಯ ಮನೆಯೊಳಗಿನಿಂದ ಮಾತ್ರ ನಿರಂತರವಾಗಿ ತೊಟ್ಟಿಲು ತೂಗುವ ಸದ್ದು ಕೇಳುತ್ತಲೇ ಇದೆ. ಮೊದಮೊದಲು ರೋಹಿಣ ಇವೆಲ್ಲವನ್ನು ಕೆಲವು ಕ್ಷಣಗಳ ಕ್ರಿಯೆಯೆಂದು ನಿರ್ಲಕ್ಷಿಸಿದ್ದಳು. ಆದರೆ ವಾರವಾದರು ನಿಲ್ಲದ ಈ ಜೋಗುಳದ ಜೀಕು ಅವಳನ್ನು ಕಾಡತೊಡಗಿತು. ಯಶೋದೆ ನೊಂದಿದ್ದಾಳೆಂಬುದನ್ನು ಇಡೀ ಗೋಕುಲವೇ ಬಲ್ಲುದು. ಆದರೆ ಎಂಥಹ ಅಗಲಿಕೆಯ ದುಃಖಕ್ಕೂ ಒಂದು ಕೊನೆಯೆಂಬುದಿರುತ್ತದೆ. ಅದು ದೀರ್ಘಕಾಲ ಮುಂದುವರೆದರೆ ಅಪಾಯವೆಂಬುದನ್ನು ರೋಹಿಣ ಬಲ್ಲಳು. ಯಶೋಧೆಗಿಂತ ನಾಲ್ಕಾರು ವರ್ಷ ದೊಡ್ಡವಳು ರೋಹಿಣ . ಬದುಕಿನಲ್ಲಿ ಅನೇಕ ಕಷ್ಟಗಳನ್ನು ಕಂಡುಂಡವಳು. ವಸುದೇವನ ಪತ್ನಿಯಾಗಿಯೂ ನಂದನ ಆಶ್ರಯದಲ್ಲಿ ಅನೇಕ ವರ್ಷಗಳನ್ನು ಕಳೆದವಳು. ಅವಳ ಆಗಮನ ಯಶೋಧೆಗೆ ಪ್ರಿಯವಾದುದೇನೂ ಆಗಿರಲಿಲ್ಲ. ಆದರೂ ಅವಳು ದನಿಯೆತ್ತಿ ಮಾತನಾಡದಷ್ಟು ಸೂಕ್ಷ್ಮ ಸ್ವಭಾವದವಳು. ಅವಳ ಸೂಕ್ಷ್ಮತೆಯೇ ಅವಳಿಗಿಂದು ಉರುಳಾಗಿದೆ. ಏನೇ ಆದರೂ ಕೃಷ್ಣನನ್ನು ಮರೆಯಲಾಗುತ್ತಿಲ್ಲ ಅವಳಿಗೆ. ಹೇಗೆ ಮರೆತಾಳು ಅವಳು? ತನ್ನದೇ ಮಗುವೆಂಬ ಭ್ರಮೆಯಲ್ಲಿ ಹತ್ತಾರು ವರ್ಷಗಳನ್ನು ಕಳೆದಿದ್ದಾಳೆ. ಪುಟ್ಟ ಮಗುವನ್ನು ಎತ್ತಿ ಆಡಿಸಿದ್ದಾಳೆ, ಕಣ್ಣಗೊಂಬೆಯಂತೆ ಜತನ ಮಾಡಿದ್ದಾಳೆ. ಕೃಷ್ಣ ಅವಳ ಮಡಿಲಿಗೆ ಬಂದಾಗಿನಿಂದಲೂ ಅವಳ ಪ್ರಪಂಚವೇ ಅವನಾಗಿದ್ದ. ಇಂದು ಇಡಿಯ ಪ್ರಪಂಚವೇ ಶೂನ್ಯವಾಗಿ ಕಾಣುತ್ತಿದೆ ಅವಳಿಗೆ. ಆ ಶೂನ್ಯತೆಯನ್ನು ಅವಳ ತಾಯಿಹೃದಯ ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿಯೇ ಅವಳು ತೊಟ್ಟಿಲನ್ನು ತೂಗುತ್ತಲೇ ಇದ್ದಾಳೆ. ರೋಹಿಣ ಗೀಗ ಅವಳನ್ನು ತಡೆಯದೇ ವಿಧಿಯಿಲ್ಲ. ದೇವಕಿಯ ಅಂತಃಪುರದೊಳಗೆ ಕಾಲಿಟ್ಟಿದ್ದಾಳೆ ರೋಹಿಣ .

ಇವಳನ್ನು ನೋಡಿಯೂ ನೋಡದಂತೆ ಖಾಲಿ ತೊಟ್ಟಿಲನ್ನು ತೂಗುತ್ತಲೇ ಇದ್ದಾಳೆ ದೇವಕಿ. ರೋಹಿಣ ತೂಗುತ್ತಿದ್ದ ಅವಳ ಕೈಯಲ್ಲಿ ಹಗ್ಗದಿಂದ ಪ್ರಯತ್ನಪಟ್ಟು ಬಿಡಿಸಿದ್ದಾಳೆ. ಅವಳನ್ನು ಅಕ್ಷರಶಃ ಎಳೆದು ತಂದು ಪಲ್ಲಂಗದಲ್ಲಿ ಕೂರಿಸಿದ್ದಾಳೆ. ದೇವಕಿ ನಿರ್ಭಾವುಕಳಾಗಿ ನೆಲವನ್ನು ದಿಟ್ಟಿಸುತ್ತಿದ್ದಾಳೆ. ರೋಹಿಣ ಪ್ರೀತಿಯಿಂದ ಅವಳ ಗಲ್ಲವನ್ನು ಹಿಡಿದೆತ್ತಿದಳು. “ಮರೆತುಬಿಡು ಯಶೋಧಾ. ಎಲ್ಲವನ್ನೂ ಒಂದು ಸುಂದರ ಕನಸೆಂದು ಮರೆತುಬಿಡೋಣ. ನಮ್ಮ ಬದುಕೇನೂ ಇಲ್ಲಿಗೆ ಮುಗಿದು ಹೋಗದು. ಬದುಕು ಕರೆದೊಯ್ಯುವಲ್ಲಿಗಿನ ಹೊಸಪಯಣಕ್ಕೆ ಸಿದ್ಧರಾಗೋಣ.” ಯಶೋಧೆಯ ಶೋಕವೀಗ ಕೋಪವಾಗಿ ಬದಲಾಯಿತು. “ಹಾಂ, ಪಯಣ ಮಾಡುತ್ತಲೇ ಇರೋಣ. ಇಂದು ಇಲ್ಲಿ, ನಾಳೆ ಇನ್ನೆಲ್ಲಿಗೋ? ಪಯಣ ಸುತ್ತಿರುವವರಿಗೆ ಬೇರುಬಿಟ್ಟವರ ಕಷ್ಟ ಅರ್ಥವಾಗದು. ಹರಿವ ನೀರಿಗೆ ದಡದ ಅಳಲನ್ನು ಕೇಳುವ ವ್ಯವಧಾನವೆಲ್ಲಿದೆ? ತಾವು ಮುಂದೆಲ್ಲಿಗೆ ಪ್ರಯಾಣ ಸುವವರಿದ್ದೀರಿ?” ಯಶೋಧೆಯ ಮಾತಿಗೆ ರೋಹಿಣ ಕೋಪಗೊಳ್ಳಲಿಲ್ಲ. ಅವಳ ಕೋಪದ ಕಾರಣವೂ ಸಕಾರಣವಾಗಿಯೇ ಇತ್ತು.

ವಸುದೇವ ದೇವಕಿಯನ್ನು ಮದುವೆಯಾದಾಗಿನಿಂದ ಅವರ ಕಷ್ಟದ ಪರಂಪರೆ ತೆರೆದುಕೊಂಡಿತ್ತು. ದೇವಕಿಯ ಮಗುವಿನಿಂದ ತನ್ನ ಸಾವೆಂದು ತಿಳಿದ ಕಂಸ ಅವರಿಬ್ಬರನ್ನೂ ಸೆರೆಮನೆಯಲ್ಲಿಟ್ಟಿದ್ದ. ಎಂಟನೆಯ ಮಗು ಹುಟ್ಟುವವರೆಗೂ ಅವರನ್ನು ಹಗಲಿರುಳೂ ಕಾಯುವ ಪಣ ತೊಟ್ಟಿದ್ದ. ಅಷ್ಟೇ ಆದರೆ ಅಂತಹ ಚಿಂತೆಯೇನಿರಲಿಲ್ಲ. ದುಷ್ಟ! ಅವರಿವರ ಮಾತಿಗೆಲ್ಲ ಕಿವಿಗೊಟ್ಟ. ಸಾವಿನ ಭಯ ಹಾಗೆಲ್ಲ ಮಾಡಿಸುವುದೋ ಏನೋ? ಹುಟ್ಟಿದ ಎಲ್ಲ ಮಕ್ಕಳನ್ನು ಬಲಿಗೊಡುವ ನಿರ್ಧಾರ ಮಾಡಿದ. ಹಾಲು ಹಸುಳೆಗಳನ್ನು ಹಾಸುಗಲ್ಲಿಗೆ ಬಡಿದು ಸಾಯಿಸುತ್ತಿದ್ದ. ಅಷ್ಟೇ ಅಲ್ಲ. ವಸುದೇವನ ಎಲ್ಲ ಪತ್ನಿಯರ ಮೇಲೂ ಕಣ ್ಣಡತೊಡಗಿದ. ಅವನ ಸೈನಿಕರ ಕಾಟ ಮೇರೆಮೀರಿದಾಗ ತಾನು ಆಶ್ರಯ ಕೋರಿ ನಂದನಲ್ಲಿಗೆ ಬಂದೆ. ಆದರೆ ತಾನು ವಸುದೇವನ ಹೆಂಡತಿಯೆಂಬುದನ್ನು ಯಾರೊಂದಿಗೂ ಹೇಳುವಂತಿರಲಿಲ್ಲ. ಹಾಗಾಗಿ ತನ್ನನ್ನು ನಂದನ ಉಪಪತ್ನಿ ಎಂದೇ ದೇವಕಿ ಭಾವಿಸಿದಳು. ಸವತಿಯನ್ನು ತಂದ ಗಂಡನ ಮೇಲೆ ಮುನಿಸಿಕೊಂಡಿದ್ದಳು. ತನಗೆ ರೂಪದಲ್ಲಾಗಲೀ, ವಯಸ್ಸಿನಲ್ಲಾಗಲೀ ಯಾವುದರಲ್ಲೂ ಸಾಟಿಯಾಗದ ಹೆಣ್ಣೊಬ್ಬಳನ್ನು ತನ್ನ ಗಂಡ ಕರೆತಂದಾಗ ಯಾವ ಹೆಣ್ಣೇ ಆಗಲಿ, ಒಂದು ಕ್ಷಣ ಕಕ್ಕಾಬಿಕ್ಕಿಯಾಗುವುದು ಸಹಜ. ಹಾಗೆಂದು ದೇವಕಿಯ ಮನಸ್ಸು ಕೆಟ್ಟದ್ದಲ್ಲ, ಮಗುವಿನಂಥದ್ದು. ಇದ್ದಕ್ಕಿದ್ದಂತೆ ತಾನು ಬಲರಾಮನನ್ನು ಗರ್ಭದಲ್ಲಿ ಹೊತ್ತಾಗ, ತನಗೇಕೆ ಈ ಸುದ್ದಿಯನ್ನು ಮೊದಲೇ ಹೇಳಿಲ್ಲವೆಂದು ಅದೆಷ್ಟು ಕೋಪಗೊಂಡಿದ್ದಳು! ಆದರೆ ಅಂದು ತಾನ್ಯಾವುದನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಎಲ್ಲವೂ ಗುಟ್ಟಿನಲ್ಲಿಯೇ ನಡೆಯಬೇಕಿತ್ತು. ನನ್ನ ನಿಗೂಢ ನಡಡೆಯನ್ನು ಕ್ಷಮಿಸಿ ತಾಯಂತೆ ನನ್ನ ಆರೈಕೆಯನ್ನು ಮಾಡಿದ್ದಳು. ಬಲರಾಮ ತನ್ನದೇ ಮಗುವೇನೋ ಎಂಬಷ್ಟು ಪ್ರೀತಿಯಿಂದ ಅವನನ್ನು ನೋಡಿಕೊಳ್ಳುತ್ತಿದ್ದಳು. ಹಾಗೆ ಅವನಿಗೆ ವರುಷ ತುಂಬುವುದರೊಳಗೆ ಅವಳ ಗರ್ಭದಲ್ಲಿಯೂ ಪುಟ್ಟ ಜೀವವೊಂದು ಮಿಡುಕಾಡತೊಡಗಿತು. ಆಗ ಅವಳ ಸಂತೋಷವನ್ನು ನೋಡಬೇಕಿತ್ತು. “ಅಕ್ಕಾ, ಇವೆಲ್ಲವೂ ನಿಮ್ಮ ಮಗನ ಆಗಮನದ ಮಾಡಿದ ಮಾಯಕ. ಅವನೊಂದಿಗೆ ನಮ್ಮ ಮನೆಯಲ್ಲಿ ಸಂತೋಷದ ಅಲೆಯೇ ತೇಲಿಬಂತು.” ಎಂದು ಕುಣ ದಾಡಿದ್ದಳು. ನಾನೇ ಅವಳನ್ನು ಸಂತೈಸಿದ್ದೆ. “ಯಶೋದೆ, ಎಲ್ಲವೂ ನಿನ್ನ ಒಳ್ಳೆಯತನದ ಪ್ರತಿಫಲ.” ಅವಳು ನನ್ನ ಕೈಹಿಡಿದು ಗರಗರನೆ ನನ್ನನ್ನು ತಿರುಗಿಸುತ್ತಾ ಹೇಳಿದ್ದಳು. ನೀವು ಸುಮ್ಮನಿರಿ. ನನಗೆ ಗೊತ್ತಿದೆ. ಪುಟ್ಟ ಬಲರಾಮನನ್ನು ನಾನು ಎತ್ತಿಕೊಂಡಾಗಲೆಲ್ಲ ಅವನು ನನ್ನ ಮೈಯನ್ನು ಒದ್ದೆ ಮಾಡುತ್ತಿದ್ದ. ಆಗಲೇ ನನಗೆ ತಿಳಿದಿತ್ತು, ನನಗೂ ಮಗುವನ್ನು ಆಡಿಸುವ ಭಾಗ್ಯ ಸದ್ಯವೇ ಪ್ರಾಪ್ತವಾಗಲಿದೆ ಎಂದು. ಮಗು ಮೈಮೇಲೆ ಮೂತ್ರ ಮಾಡಿದರೆ ಅದು ಬೇಗನೆ ತಾಯಿಯಾಗುವ ಶಕುನ ಎಂದು ನನ್ನಮ್ಮ, ಅಜ್ಜಿ ಎಲ್ಲರೂ ಹೇಳುತ್ತಿದ್ದರು ಗೊತ್ತಾ?” ಅವಳ ಮುಗ್ದತನಕ್ಕೆ ಏನೆನ್ನಬೇಕೆಂದು ತಿಳಿದಿರಲಿಲ್ಲ ರೋಹಿಣ ಗೆ. ಈಗ ಅವಳ ಮಾತು ಅವಳ ಬುದ್ದಿಯ ಸ್ಥಿಮಿತದಲ್ಲಿಲ್ಲ. ಅದಕ್ಕೇ ಹೀಗೆಲ್ಲ ಸಿಡಿಮಿಡಿಗೊಂಡಿದ್ದಾಳೆ.

ರೋಹಿಣ ಅವಳೆದುರು ತಲೆತಗ್ಗಿಸಿ ಕುಳಿತಳು. ತಣ್ಣಗಿನ ದನಿಯಲ್ಲಿ ಹೇಳಿದಳು, “ಬಲರಾಮನೂ ನನ್ನ ಮಗನಲ್ಲ” ಯಶೋದೆ ತಟ್ಟನೆ ತಲೆಯೆತ್ತಿ ರೋಹಿಣ ಯ ಮುಖನೋಡಿದಳು. ರೋಹಿಣ ಮುಂದುವರೆಸಿದಳು, “ನಾನು ನಂದನ ಹೆಂಡತಿಯಲ್ಲ.” ಯಶೋದೆಗೀಗ ತನ್ನ ಸುತ್ತಲೂ ಇರುವ ಲೋಕ ತನ್ನದಲ್ಲ ಎನಿಸತೊಡಗಿತು. ಯಾವುದೋ ನಿಗೂಢವಾದ ಲೋಕವನ್ನು ತನ್ನದೇ ಎಂಬ ಭ್ರಮೆಯಲ್ಲಿ ಬದುಕಿ ಭಾವ. “ಅಂದರೆ……. ನೀನೇನು ಹೇಳುತ್ತಿರುವೆ? ಇಲ್ಲಿ ಯಾವುದು ಸತ್ಯ?” ಯಶೋದೆಯ ಪ್ರಶ್ನೆಗಳಿಗೆ ಉತ್ತರವಾದಳು ರೋಹಿಣ . “ಹೌದು ಯಶೋದೆ, ನಾನು ಮಥುರೆಯಲ್ಲಿ ಸೆರೆಯಲ್ಲಿರುವ ವಸುದೇವನ ಪತ್ನಿ. ನಂದಮಹಾರಾಜರ ಆಶ್ರಯ ಬಯಸಿ ಬಂದೆನಲ್ಲದೇ, ಅವರ ಪತ್ನಿಯಾಗಲು ಅಲ್ಲ. ನಂದನೊಂದಿಗೆ ನನಗೆ ಯಾವ ಸಂಬಂಧವೂ ಇರಲಿಲ್ಲ.” ಯಶೋದೆ ಮತ್ತೆ ಪ್ರಶ್ನೆಯಾದಳು, “ಮತ್ತೆ? ಮಗು ಬಲರಾಮ?” ರೋಹಿಣ ಯೀಗ ದೂರದಲ್ಲಿರುವ ಗಿರಿಯನ್ನು ದಿಟ್ಟಿಸುತ್ತಾ ಹೇಳತೊಡಗಿದಳು, “ಅದು ಇನ್ನೊಂದೇ ಕಥೆ. ಕಂಸ ದೇವಕಿಯ ಮಗುವನ್ನು ಒಂದಾದಮೇಲೊಂದರಂತೆ ಕೊಲ್ಲುತ್ತಲೇ ಹೋದ. ದೇವಕಿಯೂ ಪವಾಡಪುರುಷನನ್ನು ಹೆರುವ ಹಂಬಲದೊಂದಿಗೆ ಹೆರುತ್ತಲೇ ಹೋದಳು. ಆರು ಮಕ್ಕಳನ್ನು ಸಾಲಾಗಿ ಕಳಕೊಂಡ ತಾಯಿಯ ಮನಸ್ಸು ಹೇಗಿದ್ದೀತು ಹೇಳು? ಅವಳು ನಿಧಾನವಾಗಿ ಮಾನಸಿಕ ವಿಭ್ರಾಂತಿಗೆ ಜಾರುತ್ತಿದ್ದಳು. ನೊಂದ ಹೃದಯಕ್ಕೆ ಏನಾದರೂ ಸಾಂತ್ವನ ಬೇಕಿತ್ತು. ಇಲ್ಲವಾದಲ್ಲಿ ಅವಳ ಬದುಕುವುದೇ ದುಸ್ತರವಾಗಿತ್ತು. ಹಾಗಾಗಿ ಎಲ್ಲ ಸೇರಿ ಒಂದು ಯೋಜನೆಯನ್ನು ರೂಪಿಸಿದರು. ನಮ್ಮ ರಾಜ್ಯದಲ್ಲಿ ಗರ್ಭವನ್ನು ತೆಗೆದು ಸಂರಕ್ಷಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡ ಕುಶಲೆಯರಿದ್ದಾರೆ. ಅಂಥವಳೊಬ್ಬಳನ್ನು ದೇವಕಿಯ ಕಾವಲಿಗೆ ಉಪಾಯವಾಗಿ ನಿಯೋಜಿಸಲಾಯಿತು. ನಿಗದಿತವಾದ ದಿನದಂದು ಸುತ್ತಲಿರುವ ಎಲ್ಲರಿಗೂ ಊಟದಲ್ಲಿ ಭಂಗಿಯ ಪಾನಕವನ್ನು ಬಡಿಸಿದ ಆ ಹೆಂಗಸು ಜಾಗ್ರತೆಯಿಂದ ದೇವಕಿಯ ಒಡಲೊಳಗಿನ ಮಗುವನ್ನು ಘೃತದ ಕುಂಭಕ್ಕೆ ವರ್ಗಾಯಿಸಿ, ಆ ಜಾಗದಲ್ಲಿ ಸಣ್ಣ ಮಾಂಸದ ಮುದ್ದೆಯೊಂದನ್ನು ಇಟ್ಟಳು. ಹಾಗಾಗಿಯೇ ದೇವಕಿ ಏಳನೆಯ ಗರ್ಭದಲ್ಲಿ ಜೀವವಿಲ್ಲದ ಮಾಂಸದ ಮುದ್ದೆಯನ್ನು ಹಡೆದಳು. ಅವಳ ಗರ್ಭವನ್ನು ನಂದ ಇಲ್ಲಿಗೆ ತಂದು ನನ್ನ ಹೊಟ್ಟೆಯಲ್ಲಿ ಇರಿಸಿದ. ಹಾಗಾಗಿಯೇ ನಾನು ವಿಚಿತ್ರವೆಂಬಂತೆ ಒಂದೇ ಸಲಕ್ಕೆ ಗರ್ಭಿಣ ಯೆಂದು ಎಲ್ಲರ ಗಮನಕ್ಕೆ ಬಂದುದು. ನೆನಪಿದೆಯೇನು ನಿನಗೆ ಗರ್ಭಿಣ ಯಾದ ವಿಷಯವನ್ನು ನಿನಗೆ ಯಾಕೆ ತಿಳಿಸಲಿಲ್ಲವೆಂದು ನೀನು ಕೋಪಗೊಂಡದ್ದು? ನನಗೆ ತಿಳಿದಿದ್ದರೆ ತಾನೆ ನಿನಗೆ ಹೇಳಲು ಸಾಧ್ಯ?”

ಯಶೋದೆಯೆದುರಿಗೆ ಈಗ ಮತ್ತೆ ಹೊಸದೊಂದು ಲೋಕ ತೆರೆದುಕೊಂಡಿತ್ತು. ಹಾಗಾದರೆ ಬಲರಾಮ ತನ್ನ ಮಗುವಲ್ಲವೆಂದು ರೋಹಿಣ ಗೆ ಮೊದಲೇ ತಿಳಿದಿತ್ತು. ತನ್ನದು ಹಾಗಲ್ಲ, ಕೃಷ್ಣ ತನ್ನ ಮಗುವಲ್ಲವೆಂದು ಕನಸಿನಲ್ಲಾದರೂ ಎಣ ಸದ್ದೆನೆ ತಾನು? ಅದನ್ನೇ ರೋಹಿಣ ಗೂ ಹೇಳಿದಳು, “ಅಕ್ಕಾ, ನಿನಗಾದರೆ ಎಲ್ಲವೂ ಮೊದಲೇ ತಿಳಿದಿತ್ತು. ಅದಕ್ಕೆ ತಕ್ಕ ಮಾನಸಿಕ ತಯಾರಿಯನ್ನು ನೀನು ನಡೆಸಿದ್ದೆ. ನಾನು ಕಣ್ಣನನ್ನು ನನ್ನ ಮಗುವೆಂದು ಸಾಕಿದ್ದೆ. ನಾನು ಹೆರಿಗೆಯ ಬೇನೆ ಕಳೆದು ಕಣ್ತೆರೆದಾಗ ನನ್ನ ಮಡಿಲಿನಲ್ಲಿ ಅವನೇ ಮಲಗಿದ್ದ. ಮೊದಲ ಬಾರಿಗೆ ಆ ನೀಲವರ್ಣದ ಮಗುವನ್ನೆತ್ತಿಕೊಂಡ ಪುಲಕವನ್ನು ಈ ನನ್ನ ತೋಳುಗಳು ಇಂದಿಗೂ ಮರೆತಿಲ್ಲ ನೋಡು. ನೋಡಿಲ್ಲಿ, ನನ್ನ ತೋಳಿನ ರೋಮ, ರೋಮಗಳೂ ಅದರ ನೆನಪಾದಾಗ ಹೇಗೆ ಎದ್ದುನಿಲ್ಲುತ್ತವೆ? ಎಲ್ಲ ಮಕ್ಕಳು ಮೊದಲು ತಾಯಿಯನ್ನು ಕಂಡೊಡನೆ ಅಳುತ್ತವಂತೆ. ನನ್ನ ಕಂದ ಕೃಷ್ಣ ನನ್ನನ್ನು ಕಂಡೊಡನೇ ಮುದ್ದಾಗಿ ನಕ್ಕಿದ್ದ. ನನ್ನ ಕಣ ್ಣನೊಳಗೆ ಇಣುಕಿ ನೋಡು, ಆ ನಗು ಇನ್ನೂ ಅಲ್ಲಿಯೇ ಲಾಸ್ಯವಾಡುತ್ತಿದೆ. ಕಣ್ಣ ನನ್ನ ಮಗನಲ್ಲವೆಂದು ಒಂದು ಗಳಿಗೆ ನಂಬೋಣ. ಆದರೆ ನಾನು ಗರ್ಭಿಣ ಯಾದ್ದು ಸುಳ್ಳೇನು? ನನಗೆ ಮಗು ಹುಟ್ಟಿರಲೇಬೇಕಲ್ಲ? ಎಲ್ಲಿ ಹೋಯಿತು ಹೇಳು ನನ್ನ ಮಗು? ನನಗೆ ಆ ಮಗುವನ್ನಾದರೂ ತಂದುಕೊಡು ಅಕ್ಕಾ” ಯಶೋದೆ ರೋಹಿಣ ಯ ಮಡಿಲಲ್ಲಿ ಮಲಗಿ ಬೋರೆಂದು ಅತ್ತಳು.

ರೋಹಿಣ ಗೆ ಸತ್ಯವೆಲ್ಲವೂ ಗೊತ್ತು. ಆದರೆ ಅದು ತುಂಬಾ ಕ್ರೂರವಾಗಿದೆ. ಅದನ್ನವಳು ಯಶೋದೆಗೆ ಹೇಳಲಾರಳು, ಹೇಳಿದರೆ ಇವಳು ತಡೆದುಕೊಳ್ಳಲಾರಳು. ಅಂದು ಯಶೋದೆಗೆ ಹೆರಿಗೆಯ ಬೇನೆ. ಹೇಳಿಕೇಳಿ ಯಶೋದೆ ಬಹಳ ನಾಜೂಕು ಸ್ವಭಾವದವಳು. ಮಗುವನ್ನು ಹೊರತೆಗೆಯುವುದು ಸಾಹಸದ ಕಾರ್ಯವೇ ಆಗಿತ್ತು. ಆದರೆ ಎಲ್ಲವೂ ಪೂರ್ವನಿಯೋಜಿತವಾಗಿತ್ತು. ನಿಗದಿತ ಸಮಯದಲ್ಲಿ ಎಲ್ಲವೂ ನಡೆದರೆ ಮಾತ್ರವೇ ಯೋಜನೆ ಫಲಿಸುತ್ತಿತ್ತು. ನಿರಂತರ ಪ್ರಯತ್ನದ ನಂತರವೂ ಹೆರಿಗೆ ಸಾಧ್ಯವಾಗಲಿಲ್ಲವಾಗಿ ಅವಳ ಗರ್ಭದೊಡಲನ್ನೇ ಹೊರತೆಗೆಯಲಾಗಿತ್ತು. ಗರ್ಭದಲ್ಲಿದ್ದ ಹೆಣ್ಣುಮಗು ಜೀವಂತವಾಗಿತ್ತು. ಅದನ್ನು ವಸುದೇವನ ಬುಟ್ಟಿಯಲ್ಲಿಟ್ಟು, ಅಲ್ಲಿದ್ದ ನೀಲವರ್ಣದ ಮಗುವನ್ನು ಇವಳ ಮಡಿಲಿನಲ್ಲಿ ಮಲಗಿಸಲಾಯಿತು. ವಸುದೇವ ಲಗುಬಗೆಯಿಂದ ಮಗುವನ್ನು ಹೊತ್ತು ಹೋಗಿದ್ದ. ಹುಟ್ಟಿದ ಮಗು ಹೆಣ್ಣೆಂದು ಅರಿವಾದರೆ ಕಂಸ ಅದನ್ನು ಕೊಲ್ಲಲಾರನೆಂಬ ನಂಬುಗೆಯೊಂದಿಗೆ ನಂದ ತನ್ನ ಮಗುವನ್ನು ವಸುದೇವನಿಗೆ ಹಸ್ತಾಂತರಿಸಿದ್ದ. ಅವನೊಂದಿಗೆ ಹೋದ ನಂದ ಸಂಜೆ ಬರಿಗೈಯಲ್ಲಿ ಮರಳಿ ಬಂದು ಹೇಳಿದ್ದ, “ಎಷ್ಟಾದರೂ ಮಗು ಮಗುವೇ ತಾನೆ? ಜಗನ್ನಿಯಾಮಕನ ನಿರೀಕ್ಷೆಯಲ್ಲಿದ್ದ ಕಂಸ ಹೆಣ್ಣುಮಗುವನ್ನು ಕಂಡು ಕ್ರುದ್ಧನಾಗಿದ್ದ. ವಸುದೇವ, ದೇವಕಿಯರು ಬಗೆಬಗೆಯಾಗಿ ಪ್ರಾರ್ಥಿಸಿದರೂ ಕೇಳದೇ ಮಗುವನ್ನು ಹಿಡಿದುಕೊಂಡು ಹಾಸುಗಲ್ಲಿನತ್ತ ನಡೆದ. ಎಳೆಯ ಮಗುವನ್ನು ಛಿಲ್ಲೆಂದು ಕಲ್ಲಿಗೆ ಹೊಡೆಯುವಾಗ ನನ್ನ ಗಂಡೆದೆಯೂ ನಡುಗಿ ಹೋಯ್ತು. ಏನು ಮಾಡುವುದು ಹೇಳು? ಗೆಳೆಯನಿಗಾಗಲೇ ಮಾತು ಕೊಟ್ಟಾಗಿತ್ತು. ನಾವೆಲ್ಲ ಸೇರಿ ಮಗಳನ್ನು ಬಲಿಗೊಟ್ಟೆವು. ಈ ವಿಷಯವನ್ನು ಎಂದಿಗೂ ಯಶೋದೆಗೆ ಹೇಳುವುದಿಲ್ಲವೆಂದು ಮಾತುಕೊಡು. ತಾಯಿ ಅವಳು. ಅವಳ ಹೃದಯಬಡಿತವೇ ನಿಂತುಹೋದೀತು.”

ಯಶೋದೆಗೀಗ ಸಾಂತ್ವನ ಬೇಕು, ಉತ್ತರವಲ್ಲ ಎಂಬುದನ್ನು ರೋಹಿಣ ಅರಿತಿದ್ದಳು. ಅವಳ ಹೆರಳನ್ನು ನೇವರಿಸುತ್ತಾ ನುಡಿದಳು, “ನೀನು ಮಗಳೊಬ್ಬಳನ್ನು ಹೆತ್ತೆ. ಆದರವಳು ದೇವರಾಗಿದ್ದಾಳೆ. ಕಂಸ ಮಹಾರಾಜ ಅವಳನ್ನೇ ತನ್ನ ವೈರಿಯೆಂದು ಬಗೆದು ಹಾಸುಗಲ್ಲಿಗೆ ಬಡಿಯುವ ಮೊದಲೇ ಆಗಸದಲ್ಲಿ ಹಾರಿಹೋದಳಂತೆ. ಈಗಲ್ಲಿ ದೇವತೆಯಾಗಿ ಮಿಂಚುತ್ತಿದ್ದಾಳೆ.” ಯಶೋದೆ ನಂಬಿದಳು, “ಹೌದೆ? ಆ ದೇವತೆಯ ಹೆಸರೇನು?” ಅಚ್ಛರಿಯಿಂದ ಕಣ್ಣರಳಿಸಿ ಕೇಳುತ್ತಾಳೆ. “ಅವಳನ್ನು ಮಾಯೆಯೆಂದು ಎಲ್ಲರೂ ಪೂಜಿಸುತ್ತಾರೆ. ಅವಳು ಯಾರ ಕೈಗೂ ಸಿಗದವಳು. ಆದರೆ ಎಲ್ಲರ ಕಣ ್ಣಗೂ ಕವಿಯುತ್ತಾಳೆ. ಜಗದ ಮಾಯಕದ ಆಟವಾಡಿಸುವ ದೇವಿಯವಳು. ಮತ್ತೆ ನೀನು ಅವಳನ್ನು ಹೆತ್ತ ಮಹಾತಾಯಿ.” ಯಶೋದೆಯ ಮನಸ್ಸಿಗೀಗ ಸಣ್ಣ ಸಮಾಧಾನ. ತಾನು ದೇವಿಯೊಬ್ಬಳ ತಾಯಿ. ಆದರೂ ಅವಳ ದುಃಖ ನಿಲ್ಲದು. ಮತ್ತೆ ರೋಹಿಣ ಯೊಂದಿಗೆ ಕೇಳುತ್ತಾಳೆ, “ಅಲ್ಲಾ ಅಕ್ಕಾ, ನಾನು ಎಲ್ಲರನ್ನೂ ಯಾಕೆ ದೂರಲಿ? ಈ ಕೃಷ್ಣನಿಗಾದರೂ ಬುದ್ದಿ ಬೇಡವೆ? ನೀನು ಇಂಥವರ ಮಗ ಎಂದಕೂಡಲೇ ಎಲ್ಲವನ್ನೂ ಮರೆತು ಅವರೊಂದಿಗೆ ಓಡಿಬಿಡುವುದೆ? ನನ್ನ ಹೆತ್ತತಾಯಿ ಯಾರೇ ಆಗಿರಲಿ, ನನ್ನನ್ನು ತುತ್ತು ಕೊಟ್ಟು ಬೆಳೆಸಿದವಳು ಈ ನನ್ನಮ್ಮ ಎಂದು ಅಲ್ಲಿಯ ಕೆಲಸವನ್ನು ಮುಗಿಸಿ ಬರುವ ಮಾತನ್ನಾಡಬಾರದೆ? ಶಾಶ್ವತವಾಗಿ ತಾನು ಅಲ್ಲಿಗೇ ಸೆರಿದವನೆಂದು ಹೊರಟುಬಿಡುವುದೆ? ತಾಯ್ತನಕ್ಕೆ ಹೆರಿಗೆಯೊಂದೇ ಅರ್ಹತೆಯೆ? ಹೆರೆದವಳು ಮಗುವಿನ ತಾಯಿಯಾಗಲಾರಳೇನು?” ಯಶೋದೆಯ ಪ್ರಶ್ನೆಯೇನೋ ನ್ಯಾಯವಾದದ್ದೇ. ಆದರೆ ಉತ್ತರ ಅಷ್ಟು ಸುಲಭದ್ದಲ್ಲ.

ರೋಹಿಣ ಯೀಗ ಅವಳನ್ನು ತನ್ನಮಡಿಲಿನಿಂದ ಎತ್ತಿ ಎದುರಲ್ಲಿ ಕೂಡ್ರಿಸಿ ಹೇಳತೊಡಗಿದಳು, “ನೋಡು ಯಶೋದಾ, ಕೃಷ್ನ ನಿನ್ನನ್ನು ಶಾಶ್ವತವಾಗಿ ಬಿಟ್ಟುಹೋದ ಎಂದು ನೀನೇಕೆ ಅಂದುಕೊಳ್ಳುವೆ? ನಿನ್ನೊಂದಿಗೆ ಅವನ ಎಷ್ಟೆಲ್ಲ ನೆನಪುಗಳಿವೆ? ಮಕ್ಕಳು ಅವರನ್ನು ನಾವು ಹೆತ್ತಿರಲಿ ಅಥವಾ ಇಲ್ಲದಿರಲಿ ನಮ್ಮೊಂದಿಗೆ ಇರುವುದೇ ಈ ನೆನಪುಗಳೊಂದಿಗೆ. ಅವನು ನಿನ್ನ ಮಗನೇ ಆಗಿದ್ದರೂ ಸದಾಕಾಲ ನಿನ್ನೊಂದಿಗೆ ಇರಲು ಸಾಧ್ಯವೇನು? ಇವೆಲ್ಲವೂ ಅವರು ಬೆಳೆಯುವವರೆಗಿನ ಕಥೆ ಮಾತ್ರವೆ. ಮುಂದೆ ಅವರ ಬದುಕು ಅವರದು, ನಮ್ಮ ದಾರಿ ನಮ್ಮದು. ಆದರೆ ಹೋದ ನಂತರವೂ ನಮ್ಮ ಚಿತ್ತಭಿತ್ತಿಯಲ್ಲಿ ದಿನವೂ ತೆರೆದುಕೊಳ್ಳುತ್ತಲೇ ಇರುವುದಲ್ಲ ಅವರ ಬಾಲ್ಯದ ಸುಮಧುರ ದೃಶ್ಯಗಳು. ಅವು ಮಾತ್ರವೇ ನಮ್ಮ ಅಮೂಲ್ಯವಾದ ಆಸ್ತಿ. ನಿನಗೆ ಅದರಲ್ಲೇನಾದರೂ ಕೊರತೆಯಿದೆಯೇನು? ಆದರೆ ಆ ದೇವಕಿಯನ್ನೊಮ್ಮೆ ನೆನಪಿಸಿಕೊ. ಒಂದಾದರೂ ನೆನಪುಗಳಿವೆಯೇನು ಅವಳ ಭಾವಕೋಶಗಳಲ್ಲಿ? ಕೃಷ್ಣ ಅವಳ ಮಗುವೆಂದು ಲೋಕ ಹೇಳಬಹುದು, ಆದರೆ ಅವನ ನೆನಪುಗಳ ಸರಮಾಲೆಯೆಂಬ ಅನಘ್ರ್ಯ ಸಂಪತ್ತು ಎಂದೆಂದಿಗೂ ನಿನ್ನಲ್ಲಿಯೇ ಶಾಶ್ವತವಾಗಿದೆ. ಅಂತೆಯೇ ಅವನೊಳಗೂ ಅಮ್ಮನ ಹಂಬಲದೊಂದಿಗೆ ತೆರೆದುಕೊಳ್ಳುವುದು ನಿನ್ನ ನೆನಪೇ ತಾನೆ? ಬೆಳೆದ ಮಕ್ಕಳ ನೆನಪಿನ ಕೋಶದಲ್ಲೆಲ್ಲ ಬಾಲ್ಯದ ನೆನಪೇ ತುಂಬಿತುಳುಕುವುದಂತೆ. ಅಲ್ಲೆಲ್ಲ ನಿನ್ನ ಅಳಿಸಲಾಗದ ನೆನಪುಗಳೇ ತುಂಬಿವೆ. ನಿನ್ನ ಮಡಿಲಿನಲ್ಲಿ ಕಣ್ಣುಬಿಟ್ಟ, ನಿನ್ನ ಅಂಗಳದಲ್ಲಿ ಬೆಳೆದ, ನಿನ್ನ ಮನದೊಳಗೆ ತನ್ನ ತುಂಟಾಟದ ಮನಮೋಹಕ ಚಿತ್ರಗಳನ್ನು ಚಿತ್ರಿಸಿದ. ಅಲ್ಲಿಗೆ ಅವನ ಬಾಲ್ಯ ಮುಗಿಯಿತು. ತನ್ನ ಜೀವನದ ಪಥವನ್ನರಸಿ ಹೊರಟ. ತಿರುಗಿ ನೋಡಿದಾಗಲೆಲ್ಲ ನೀನಲ್ಲದೆ ಅನ್ಯರನ್ನು ನೋಡಲಾಗದು ಅವನಿಗೆ. ಯಾರಿಗೆ ಗೊತ್ತು? ಎಲ್ಲ ಮುಗಿಯುವಾಗ ಹಿಂದಿರುಗಿ ಬಂದಾನು. ಬಂದು ಮತ್ತೆ ನಿನ್ನ ಕಾಲಮೇಲೆ ಮಲಗಿ ಎಲ್ಲ ಕಥೆಯನ್ನು ಹೇಳಿಯಾನು. ಬರಲಿಲ್ಲವೆಂದರೂ ಚಿಂತೆಯೇಕೆ? ಬೇರು ಚಿಗುರನ್ನೆಂದೂ ಹತ್ತಿರ ಕರೆಯದು. ಮೇಲೆ ಮೇಲೆ ಸಾಗಲು ಹೇಳೀತು ಅಷ್ಟೆ. ಆದರ ಚಿಗುರಿನ ನವಿರು ಬೇರಿನದೇ ಕೊಡುಗೆ. ಅದರ ಮಾತು ಬೇರಿನದೇ ಭಾವ. ಕಂದ ಕೃಷ್ಣನನ್ನು ಯಾರೂ ಕಸಿಯಲಾರರು. ಅವನು ಯಾವತ್ತಿದ್ದರೂ ನಿನ್ನ ಮಗ. ಅವನ ಶ್ರೇಯಸ್ಸನ್ನು ಸಂಭ್ರಮಿಸುವುದಷ್ಟೇ ನಮ್ಮ ಭಾಗ್ಯ.”

ಹೌದೆನ್ನಿಸುತ್ತಿದೆ ಯಶೋದೆಗೆ. ಕಟ್ಟಿದ ತೊಟ್ಟಲನ್ನು ಬಿಚ್ಚಿದಳು. ಕೃಷ್ಣನ ಮಕ್ಕಳಿಗೆ ಬೇಕಾದೀತೆಂದು ಜೋಪಾನವಾಗಿ ಅಟ್ಟದ ಮೇಲೆ ಜೋಪಾನವಾಗಿಟ್ಟಳು. ಹಟ್ಟಿಯ ಕಡೆಗೆ ಮುಖಹಾಕದೇ ಎಷ್ಟು ಕಾಲವಾಗಿದೆ. ಮೊದಲು ಅವುಗಳ ಆರೈಕೆ ಮಾಡಬೇಕು. ಇನ್ನು ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲವನ್ನು ಹೆಚ್ಚು, ಹೆಚ್ಚು ತಯಾರಿಸಬೇಕು. ಮಥುರೆಯೇನು ಅಷ್ಟು ದೂರದ ಹಾದಿಯಲ್ಲ. ನಮ್ಮ ಹುಡುಗರಿಗೆ ಹೇಳಿದರೆ ಎಲ್ಲವನ್ನೂ ಕೃಷ್ಣನಿಗೆ ಮುಟ್ಟಿಸಿ ಬಂದಾರು. ಅಲ್ಲೆಲ್ಲ ನಗರದಲ್ಲಿ ಹೈನುಗಳೇ ಸರಿಯಿಲ್ಲವಂತೆ. ಅವನ್ನೆಲ್ಲ ತಿಂದು ಆರೋಗ್ಯ ಕೆಡಿಸಿಕೊಂಡರೆ ಕಷ್ಟ. ಮತ್ತೆ ಆ ಬೃಂದಾವನದ ರಾಧೆಯನ್ನೊಮ್ಮೆ ಮಾತನಾಡಿಸಿ ಬರಬೇಕು. ಪಾಪ, ನನ್ನ ಮಗನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದಾಳೆ. ನನ್ನನ್ನು ರೋಹಿಣ ಸಂತೈಸಿದಂತೆ ಅವಳನ್ನು ನಾನು ಸಂತೈಸಬೇಕು. ಹಾಗೆ ಅವಳಿಗೂ ಒಂದೆರಡು ಹಸುಗಳನ್ನು ಕೊಟ್ಟು ಬರಬೇಕು. ಹಸುಗಳನ್ನು ಸಾಕಿಕೊಂಡಾದರೂ ಬದುಕು ನಡೆಸಲಿ ಆ ಬಡಹುಡುಗಿ. ನಮ್ಮ ಹುಡುಗರಿಗೆಲ್ಲ ಹೇಳಿ ಗೋವರ್ಧನ ಗಿರಿಯಲ್ಲಿ ಒಂದು ಪ್ರಕೃತಿ ಮಂದಿರವನ್ನು ಕಟ್ಟಬೇಕು. ಕೃಷ್ಣ ಹೇಳುತ್ತಿದ್ದಂತೆ ನಮ್ಮನ್ನು ಸಾಕುವ ಗಿರಿ, ಶಿಖರ, ವೃಕ್ಷಗಳೇ ಅಲ್ಲಿ ದೇವರಾಗಬೇಕು. ಹಾಂ, ಆ ಕಾಳಿಂದಿಯ ಮಡುವಿನ ಪಕ್ಕದಲ್ಲಿಯೇ ಪುಟ್ಟ ಕೃಷ್ಣ ಮತ್ತು ಮಾಶೇಷನ ಚಿತ್ರಗಳನ್ನು ಬಿಡಿಸಿಡಬೇಕು. ಕೃಷ್ಣ ದೊಡ್ಡವನಾಗಿ ಬಂದಾಗ ಅವನಿಗೆ ಎಲ್ಲವೂ ನೆನಪಾಗಬೇಕು. ಅಗೋ ಆ ಒರಳಿಗೆ ಕಟ್ಟಿದ ಹಗ್ಗವನ್ನು ನಾನಿನ್ನೂ ಬಿಚ್ಚಿಯೇ ಇಲ್ಲ. ಹಾಗೇ ಇರಲಿ ಅದು, ಕೃಷ್ಣ ಮತ್ತೆ ಬಂದಾಗ ನೊಡಿ ಎಷ್ಟು ನಕ್ಕಾನು?

ನೆನಪುಗಳ ಸರಮಾಲೆಯಲ್ಲಿ ಕರಗಿಹೊದಳು ಯಶೋದೆ. ಹೊಸಜಗತ್ತು ಅವಳೆದುರು ಮತ್ತೆ ತೆರೆದುಕೊಂಡಿತು ಮತ್ತು ಅದನ್ನು ಕೃಷ್ಣ ಮೊದಲಿಗಿಂತ ಗಾಢವಾಗಿ ಆವರಿಸಿಕೊಂಡಿದ್ದ. ಎಲ್ಲ ತಾಯಂದಿರ ಪಾಡು ಇದೇ ಅಲ್ಲವೇನು?

 

‍ಲೇಖಕರು Avadhi

November 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. Ahalya Ballal

    Hmm…

    ಲಲಿತಾ ಸಿದ್ಧಬಸವಯ್ಯನವರ ‘ಧನ್ಯವಾದಗಳು’ ಕವನ ನೆನಪಾಯ್ತು, ಸುಧಾ.
    “ದೇವರೇ
    ನಾವು ನಿನ್ನನ್ನು ಅನುವಾದಿಸುತ್ತಿದ್ದೇವೆ
    ಕ್ಷಣಕ್ಷಣವೂ ನೀನು ಅನುವಾದಗೊಳ್ಳುತ್ತೀಯ
    ಭೂಮಂಡಲದ ಮೇಲಿರುವ ಅಷ್ಟೂ ಭಾಷೆಗಳಲ್ಲಿ
    ಏಕಕಾಲಕ್ಕೆ ಎಲ್ಲೆಡೆಯಲ್ಲಿ
    ಎಲ್ಲ ತಾಯಂದಿರ ಅಪ್ರಕಟಿತ ಸಾಹಿತ್ಯದಲ್ಲಿ…… (ಇನ್ನೂ ಇದೆ)

    ಪ್ರತಿಕ್ರಿಯೆ
    • Sudha Hegde

      ಲಲಿತಾ ಸಿದ್ದಬಸವಯ್ಯನವರ ಕವನ ಸಂಕಲನವನ್ನು ಓದಬೇಕು. ಹೆಸರು ತಿಳಿಸಿ.

      ಪ್ರತಿಕ್ರಿಯೆ
  2. Sarojini Padasalgi

    ನಿಜ ಸುಧಾ, ಬೇರು ಚಿಗುರನ್ನೆಂದೂ ಕೆಳಗೆ ಕರೆಯಲಾಗದು.ಕರೆಯೋದೂ ಇಲ್ಲ.ಅದರ ನವಿರು, ಅದರ ಭಾವ ಎಲ್ಲ ಬೇರಿನದೇ.ಅದೇ ಆ ಬೇರಿಗೆ ಸಂಭ್ರಮ.ನೋಡಿದೀರಾ, ಪಕ್ಕ ಬಲಿತ ಮರೀನ ಹಕ್ಕಿ ಗೂಡಿನಿಂದ ಆಚೆ ದೂಡ್ತದೆ ಹಾರಲು ಕಲಿಸುವ ಸಲುವಾಗಿ.ಅದಕ್ಕೆ ಸಂಕಟ ಆಗದಿರ್ತದಾ?ಆದರೆ ಚಿಗುರು ಮೇಲೆ ಹೋಗಬೇಕಲ್ಲ? ಅದೇ ಅಲ್ಲವೇ ಎಲ್ಲಾ ತಾಯಂದಿರ ಅಳಲು, ಯಶೋದೆಯಂತೆ?
    ನೆನಪುಗಳ ಗುಂಗಿನಲ್ಲಿ, ಕನಸುಗಳ ಆಸರೆಯಲ್ಲಿ ಸಂಭ್ರಮಿಸುವುದು.ಕಣ್ಣನ ಕಾಯ್ವ ಯಶೋದೆ ಪ್ರತಿ ತಾಯಿ ಸುಧಾ.ತುಂಬಾ ಮನತಟ್ಟುವ, ಅರಿಯದೇ
    ಕಣ್ಣು ಹನಿಸುವ ಬರಹ.ಅಭಿನಂದನೆಗಳು, ಕರುಳ ಮೀಟುವ ಲೇಖನಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: