ಸುಮಾ ಆನಂದರಾವ್ ಸರಣಿ: ಎತ್ತಿನ ಗಾಡಿಯ ಪಯಣ

ಅದಾಗಲೇ ತಾತನ ಮನೆಯ ಮೇಲಿನ ಕಟ್ಟೆಗೆ ಐದು ಗಂಟೆಯಿಂದ  ಬಾವಿ ನೀರನ್ನು ಸೇದಿ ಸುರಿದು ತಂಪಾಗಿಸಲು ಪ್ರಯತ್ನಿಸಿದ್ದರು .  ಕಾದ ಬಂಡೆಗಳು ಕಾವನ್ನು ತಮ್ಮೊಳಗೆ ಹುದುಗಿಸಲು ಹೋರಾಟ ನಡೆಸಿದ್ದವು .  

ಮನೆಯ ಹಿಂದಿನ ಆಲದ ಮರದಲ್ಲಿ ಪಕ್ಷಿಸಂಕುಲಗಳು ಚಿಲಿ ಪಿಲಿ ಸದ್ದು ಮಾಡುತ್ತ ಗೂಡನ್ನು ಸೇರಲು ತವಕಿಸುತ್ತಿದ್ದವು .  ಸಂಜೆಯಾಗಿತ್ತು ಪಡುವಣದಿ ರವಿಯು ಮೆಲ್ಲಮೆಲ್ಲನೆ ಜಾರುತ್ತ ದಿನಚರಿಯನ್ನು ಮುಗಿಸಿದ್ದ.

ವಿಶಾಲ ನೀಲ ಗಗನ , ನಕ್ಷತ್ರಗಳ ಹೊಳಪು ಬೆಳಕಿನಾಟ , ಒಂದು ಬಗೆಯ ಪವಿತ್ರ ಶಾಂತಿ ,ಒಳಗಡೆಯಿಂದ ಬಂದ ಕೂಗಿಗೆ ನಾವೆಲ್ಲಾ ಮಕ್ಕಳು ವೃತ್ತಾಕಾರದಿ ಕೈ ತುತ್ತಿಗೆ ಸಿದ್ದವಾಗಿ ಕುಳಿತೆವು .ಅತ್ತೆ ಅಮ್ಮ ಯಾರಾದರೊಬ್ಬರು ತಮ್ಮ ಬಾಲ್ಯದ ಅನುಭವಗಳನ್ನು ಹೇಳುತ್ತಾ ಕೈ ತುತ್ತು ಹಾಕುತ್ತಿದ್ದರು .

ಒಂದೊಂದು ತುತ್ತು ನಮ್ಮ ಕೈ ತುಂಬಿ ಹೋಗಿರುತ್ತಿತ್ತು .ಎಷ್ಟೊಂದು ರುಚಿಯಾಗಿರುತ್ತಿತ್ತು   ಬೆರಗು ಗಣ್ಣಿನಿಂದ ನೋಡುತ್ತಾ ,ಕೇಳುತ್ತ ಒಂದೆರೆಡು ತುತ್ತು ಹೆಚ್ಚಾಗಿಯೇ ತಿಂದು ಕೈ ತೊಳೆದು ಬರುವ ವೇಳೆಗೆಕಟ್ಟೆಯ ಮೇಲೆ ಹಾಸಿಗೆ ಹಾಸಿ ಸಿದ್ಧಪಡಿಸಿರುತ್ತಿದ್ದರು .  

ವಿಶಾಲವಾದ ಕಟ್ಟೆ .ಕಟ್ಟೆಯ ತುಂಬಾ ಹಾಸಿಗೆಗಳು ಹೊದೆಯಲು ದಪ್ಪನೆಯ ಸೊಲ್ಲಾಪುರ ಹೊದಿಕೆಗಳು , ಓಡಿ ಹೋಗಿ ನಮ್ಮ ನಮ್ಮ ಜಾಗ ಹಿಡಿದು ದಿಂಬಿಗೆ ತಲೆ ಇಟ್ಟರೆ ಮುಗಿಯಿತು ಆ ಲೋಕವೇ ಬೇರೆ, ಆಗಸದ ತುಂಬೆಲ್ಲ ಚುಕ್ಕಿಗಳದೇ ಸಾಮ್ರಾಜ್ಯ .

ಒಂದೊಂದು ನಕ್ಷತ್ರಕ್ಕೊಂದೊಂದು ಕಥೆ . ದ್ರುವ ನಕ್ಷತ್ರವನ್ನು ಹುಡುಕುವ ಕಲೆ ನಮಗಾಗಲೇ ಕರಗತವಾಗಿತ್ತು.ನಾಲ್ಕು ನಕ್ಷತ್ರಗಳು ನಾಲ್ಕು ದಿಕ್ಕಿಗೆ ಸಮಾನಾಂತರದಲ್ಲಿದ್ದವು  ಮೂರು ನಕ್ಷತ್ರಗಳು ಬಾಲದಂತೆ ಕಾಣುತ್ತಿದ್ದವು .

ಏಳು ನಕ್ಷತ್ರಗಳೂ ಸೇರಿ ಸಪ್ತರಿಷಿ ಮಂಡಲ ,ಗಾಳಿಪಟದಂತೆ ಗೋಚರಿಸುತ್ತಿತ್ತು .ಕೆಳಗಿನ ಮೂರರ ಮಧ್ಯದ ನಕ್ಷತ್ರದ ಪಕ್ಕದಲ್ಲಿಯೇ ಪುಟ್ಟದಾಗಿ ಮಿನುಗುವುದೇ ದೃವನಕ್ಷತ್ರ . ಪ್ರತಿರಾತ್ರಿಯು ಈ ನಕ್ಷತ್ರ ಇದ್ದಲ್ಲಿಯೇ ಹೇಗೆ ಇರಲು ಸಾಧ್ಯ ?ಏನೇನೊ ಕಲ್ಪನೆಗಳು . ಇದ್ದಕ್ಕಿದ್ದಂತೆ ಒಂದು ನಕ್ಷತ್ರ ಕೆಳಗುರುಳಿದಂತೆ ಕಂಡಾಗ ಕಣ್ಣು ಮುಚ್ಚಿಕೊಳ್ಳುತ್ತಿದ್ದೆವು.

ಕ್ಷಣ ಮಾತ್ರದಲ್ಲಿ ರಾಕೆಟ್ಟೊಂದು ಹೊಗೆ ಉಗುಳುತ್ತಾ ಸಾಗುತ್ತಿತ್ತು ಅದರಲ್ಲಿ ಯಾರಿರಬಹುದು?ಅದು ಎಲ್ಲಿಗೆ ಹೋಗುತ್ತಿರಬಹುದು?ಹೀಗೆ ಪ್ರಶ್ನೆಗಳ ಸರಮಾಲೆ.  ಚಂದ್ರ ಮಾತ್ರ ನಗು ಮೊಗದಿ ಹೊಳೆಯುತ್ತಿದ್ದ .

ಹಿತವಾದ ತಂಗಾಳಿ .ನಮ್ಮೆಲ್ಲೆರ ಮಾತುಕತೆಗಳು ನಗುವಿನ ಅಲೆಗಳು  ಸಾಗಿದಂತೆಲ್ಲ ಪಕ್ಕದ ಕಟ್ಟೆಯ ಮೇಲೆ ಇದ್ದ ಒಂದೇ ಒಂದು ಎತ್ತರದ ತೆಂಗಿನ ಮರಗಾಳಿಗೆ ತೂಗಿ ಬಾಗಿ ತನ್ನ ಕೆಲಸದಲ್ಲಿ ಮಗ್ನವಾಗಿತ್ತು . ಹೊದಿಕೆ ಪೂರ್ತಿ ಹೊದೆದುಕೊಂಡು ನಿದ್ರಾದೇವಿಗೆ ಶರಣಾದೆವು ಮಧ್ಯರಾತ್ರಿ ಎರೆಡು ಗಂಟೆಯಾಗಿರಬಹುದು ,ತಟ್ಟನೆ ಎಚ್ಚರವಾಯಿತು .

ಆಗಸದ ತುಂಬೆಲ್ಲಾ  ಮೇಘಗಳ ಸರಮಾಲೆ ,ಗಂಭೀರ ಮೌನ,ಮೌನ ಮುರಿಯಲು ಸುಯ್ಯನೆ ಬೀಸುವ ಗಾಳಿ ,ವಿದ್ಯುದ್ದೀಪಗಳು ಪಟಪಟನೆ ಆರಿದವು ,ಮುಗಿಲಗಳ ವಿವಿಧ ವೈಚಿತ್ರ ವರ್ಣಮಯ ವಿನ್ಯಾಸ .

ಆಗಸದಿ ಮೆರೆಯುತಿದೆ ಬಣ್ಣಗಳ ಮೆರವಣಿಗೆ ಬೆಳಕಿನಲಿ ಹೊಳೆಯುತಲಿದೆ ದಿಗಂತ ಪಂಕ್ತಿಯ ಮಾಯಾರೇಖೆ ಬೆಳಕು ಹೆಚ್ಚು ಕಮ್ಮಿ ಆದಂತೆಲ್ಲಾ ಬಾವಿ ತೆಂಗಿನಮರ,ಹೊದರು ಗಳು  ಹಿಂದಕ್ಕೂ ಮುಂದಕ್ಕೂ ಚಲಿಸಿದಂತಾಗುತ್ತಿತ್ತು, ಆ ಚಲನೆಗೆ ಮನಸ್ಸು ವಿಶೇಷ ರೂಪಗಳನ್ನು ಕಲ್ಪಿಸುತ್ತಿತ್ತು . 

ಕಗ್ಗತ್ತಲೆ ಭೀಷಣ  ನೀರವತೆ   ಪಟ ಪಟನೆ ಹನಿಗಳು ಉದುರಿದವು,ಎಲ್ಲರು ಎದ್ದು ತಮ್ಮ ತಮ್ಮ ಹಾಸಿಗೆಗಳನ್ನು ಸುತ್ತಿ ಎತ್ತಿ ಮುಗ್ಗರಿಸಿಕೊಂಡು ಹೋಗಿ ಆಟವಾಳಿಗೆಯಲ್ಲಿ ಹಾಕಿ ಕೊಂಡೆವು ,ಮಳೆಯು ತನ್ನ ರಭಸವನ್ನು ಹೆಚ್ಚಿಸಿತ್ತು . 

ನೀರು ಕಾಲಿಗೆ  ಸಿಡಿಯಲು ಪ್ರಾರಂಭಿಸಿತು  ಆದರೂ ನಾವ್ಯಾರು ಒಳಗಡೆ ಹೋಗುತ್ತಿರಲಿಲ್ಲ,ಹಾಸಿಗೆಯನ್ನು ಮುದುರಿ ಹೊದಿಕೆಯನ್ನು ಪೂರ್ತಿ ಹೊದ್ದುಕೊಂಡು ಕಣ್ಣು ಮಾತ್ರ ಕಾಣುವಂತೆ ಮಲಗಿರುತ್ತಿದ್ದೆವು, ಮಳೆಯು ತನ್ನ ಆರ್ಭಟವನ್ನು ಇನ್ನು ಹೆಚ್ಚಿಸಿತ್ತು .

ಹಾಸಿಗೆಯನ್ನು ಅರ್ಧ ಮಡಚಿ ಎದ್ದು ಕುಳಿತುಕೊಂಡೆವು.  ಹೊದಿಕೆಯನ್ನು ಬಿಗಿಗೊಳಸಿ ಭಯಭೀತರಾಗಿ ಮಳೆಯನ್ನೇ ನೋಡುತ್ತಲಿದ್ದೇವೆ, ಇದ್ದಕ್ಕಿದ್ದಂತೆ ಭಯಂಕರ ಶಬ್ದ , ಮಾಳಿಗೆಯೇ  ಬಿದ್ದ ಅನುಭವ ,ಚಟ ಚಟನೆ ಸಿಡಿಲ ಆರ್ಭಟ  ಗುಡುಗು ಮಿಂಚುಗಳ ಹಾವಳಿ .

ನಮ್ಮ ಮನೆಯ ಹಿತ್ತಲಿನ ದೂರದ ಮೂಲೆಯಲ್ಲಿ ಒಂದು ಮುರುಕು ಗೋಡೆಯನ್ನು ತೋರಿಸಿ ಅಮ್ಮ ಅದು ಸಿಡಿಲ ಪ್ರತಾಪಕ್ಕೆ ಮೂಕ ಸಾಕ್ಷಿಯಾಗಿದೆ ಎಂದು ಹೇಳಿದ್ದು ಜ್ಜ್ಞಾಪಿಸಿಕೊಂಡು ನಾವೆಲ್ಲಾ ಅದನ್ನೇ ಮಾತನಾಡಿಕೊಳ್ಳುತ್ತಿದ್ದೆವು .  ಮಣ್ಣಿನ ಮಾಳಿಗೆ , ಜಂತೆಯ ಆಟವಾಳಿಗೆ ಕೆಲವೆಡೆ ಸೋರಲು ಪ್ರಾರಂಭಿಸಿತು ಒಬ್ಬೊಬ್ಬರೇ ಪಡಸಾಲೆಗೆ ಹೋಗಲು ಪ್ರಾರಂಭಿಸಿದರು .

ಆದರೆ ನಾನು ವಿದ್ಯಾ ಮಾತ್ರ ಒಬ್ಬರನ್ನೊಬ್ಬರು ಭದ್ರವಾಗಿ ಹಿಡಿದುಕೊಂಡು ಪಿಳಿ ಪಿಳಿ ಕಣ್ಣು ಬಿಡುತ್ತಾ  ಮಳೆಯ ಅವಾಂತರವನ್ನು ನೋಡುತ್ತಿದ್ದೆವು .  ಒಮ್ಮೆ ಭಯ , ಮತ್ತೊಮ್ಮೆ ಸಂಭ್ರಮ, ಮಗದೊಮ್ಮೆ ಪ್ರಕೃತಿಯ ವೈಚಿತ್ರದ ವಿಸ್ಮಯ  ಹೀಗೆ ನವರಸಗಳನ್ನು ತನ್ನೊಳಗೆ  ಹುದುಗಿಸಿಕೊಂಡ ನಿಸರ್ಗದ ಲೀಲಾವಿನೋದವನ್ನು ಸವಿಯುತ್ತಿದ್ದ ಕ್ಷಣಗಳನ್ನು ಮರೆಯುವುದುಂಟೆ?

 ನಟ್ಟ ನಡು ರಾತ್ರಿ ಎತ್ತಿನಾ ಗಾಡಿಯಲ್ಲಿ ಬೊಮ್ಮಗಟ್ಟೆ ಪಯಣಕ್ಕೆ ನೀವೆಲ್ಲ ಸಿದ್ಧವಾಗಿರುವಿರಾ?

ಬಾಲ್ಯವೇ ಹಾಗೆ ಮುಗ್ದ ಮನೋಹರ ಸ್ನಿಗ್ದ ಸುಂದರ
ಸ್ನೇಹ ಸಡಗರ ಬಾಳು ಹಂದರ

ಒಂದೇ  ಎರೆಡೇ ಆಟಗಳು? ನಿಂತ ಗಾಡಿಯ ನೊಗಕ್ಕೆ ಅತ್ತ ಒಬ್ಬರು , ಇತ್ತ ಒಬ್ಬರು ಕುಳಿತು  ಒಬ್ಬರು ಮೇಲೆ ಹೋದರೆ ಮತ್ತೊಬ್ಬರು ನೆಲಕ್ಕೆ ತಗಲುವ ಹಾಗೆ ಆಡುತ್ತಾ.  

ದಡಮ್ಮ ದಡಿಕೆ ಪಂಚೆ ದಡಿಕೆ ನೆಂಟರು ಬಂದರೆ ಒಂದೇ ಅಡಿಕೆ  ಎಂದು ರಾಗವಾಗಿ ಹೇಳುತ್ತಿದ್ದೆವು.  ಮರದಿಂದ ಮಾಡಿದ ಎದುರು ಬದುರು ಏಳು ಗುಣಿಗಳಿರುವ ಆಟದ ಸಾಧನದಲ್ಲಿ ಹುಣಸೇಬೀಜಗಳನ್ನು  ಹಾಕುತ್ತ ಆಡುವ ಆಟವೇ  ಗೊಟಗುಣಿ . ತಾತನ ಮನೆಯಲ್ಲಿ ಪಗಡೆ ಹಾಸು ದಾಳಗಳು , ಬಣ್ಣ ಬಣ್ಣದ ನಡೆಸುವ ಕಾಯಿಗಳು ಬಹಳ ಸೊಗಸಾಗಿತ್ತು ನಾವು ಅದರಲ್ಲಿ ೩ ಬಗೆಯ ಆಟ ಆಡುತ್ತಿದ್ದೆವು ಇದಕ್ಕಾಗಿ ಸರದಿಯ ಸಾಲಿನಲ್ಲಿ ಕಾಯುತ್ತಿದ್ದೆವು.

ಆಟವಾಳಿಗೆಯಲ್ಲಿ ಜೋಕಾಲಿ ಹಾಕಿಸಿರುತ್ತಿದ್ದರು ,ಅದರಲ್ಲಿ ಕುಳಿತುಕೊಂಡು ಅವ್ವ ಮಾಡಿದಾ ಐದು ಸುತ್ತಿನ ಕೋಡುಬಳೆ ಯನ್ನು ತಿನ್ನುತ್ತಾ ಜೀಕುವ ಮಜವೇ ಬೇರೆ ಕೈಯಲ್ಲಿರುವ ಕೋಡುಬಳೆ ಖಾಲಿಯಾಗುವವರೆಗೆ ಮಾತ್ರ ಅದರಲ್ಲಿ ಕುಳಿತುಕೊಳ್ಳುವ ಅವಕಾಶ. ತಕ್ಷಣ ನಮ್ಮ ಹಿಂದಿನವರಿಗೆ ಬಿಟ್ಟು ಕೊಡಬೇಕಿತ್ತು,ತಾತನ ಮನೆಯ ಪಕ್ಕದಲ್ಲಿ ಅವರ ಸಹೋದರರ ಮತ್ತೆರೆಡು ಮನೆಗಳಿದ್ದವು ಹಾಗಾಗಿ ನಾವೆಲ್ಲ ಸೇರಿದರೆ 15 ರಿಂದ 20 ಮಕ್ಕಳು ಆದು ಮಕ್ಕಳ ಸೈನ್ಯವೇ ಆಗಿರುತ್ತಿತ್ತು.

ಬೆಳಗಿನ ಜಾವ ಬೊಮ್ಮಗಟ್ಟೆಯ ಪಯಣಕ್ಕೆ ಮಧ್ಯಾಹ್ನದಿಂದಲೇ ಸಿದ್ಧತೆ ನಡೆದಿತ್ತು . ತಾತ ಎರೆಡು ಗಾಡಿ ಕಟ್ಟಿಸಿರುತ್ತಿದ್ದರು.  ಕಿರಾಣಿ ಸಾಮಾನಿನಿಂದ ಮೊದಲುಗೊಂಡು ತಂಗಲು ಬೇಕಾಗುವ ಹಾಸಿಗೆ ಹೊದಿಕೆಗಳು ತಿಂಡಿ ತೀರ್ಥ ಎಲ್ಲವೂ ನಮ್ಮಂತೆ ಸಂಭ್ರಮದಿ ಪಯಣದ ಉತ್ಸಾಹದಲ್ಲಿರುತ್ತಿದ್ದವು. ಅಲ್ಲಿ ತಾತ ಅವರ ಸಮಾರಾಧನೆ ಇರುತ್ತಿತ್ತು. 

ಬೊಮ್ಮಗಟ್ಟೆ ನಾಗಸಮುದ್ರದಿಂದ 20 ಮೈಲಿ.  ಸೊಂಡೂರು, ಬಂಡ್ರಿ  ಸಮೀಪ.  ಬಂಡ್ರಿ ನಮ್ಮ ತಂದೆಯವರ ಊರು,  ಆದರೆ ಎಲ್ಲರೂ ಬಳ್ಳಾರಿಯಲ್ಲಿ ವಾಸ. ವ್ಯಾಸರಾಯ ಪ್ರತಿಷ್ಠೆ ಪ್ರಾಣದೇವರ ಸ್ಥಳ ಬೊಮ್ಮಗಟ್ಟೆ ಬಹಳ ಸತ್ಯವಾದ ಸ್ಥಳ .ಐದಾರು ದಿನ  ತೇರಿನ ಕಾರ್ಯಕ್ರಮಗಳು, ನಾವೆಲ್ಲಾ ಅಲ್ಲೇ ಠಿಕಾಣಿ. ದಾರಿಯಲ್ಲಿ ತಿನ್ನಲು ಕರಬೂಜ ಬೀಜಗಳನ್ನು ನಾಲ್ಕು ದಿನ ಮೊದಲೇ ತೊಳೆದು ಒಣಗಿಸಿ ಪುಟ್ಟ ಡಬ್ಬಿಗಳಲ್ಲಿ ತುಂಬಿಸಿಟ್ಟಿರುತ್ತಿದ್ದೆವು.  ರಾತ್ರಿ ಎಲ್ಲರೂ ಬೇಗ ಊಟ ಮುಗಿಸಿ ನಿದ್ರೆಗೆ ಜಾರುತ್ತಿದ್ದೆವು . 

ಸರಿ ರಾತ್ರಿ ಒಂದೂವರೆಗೆನಾವೆಲ್ಲಾ ಎದ್ದು  ಸ್ನಾನಾದಿಗಳನ್ನು ಮುಗಿಸಿ ಹೊರಡಲು ಎರೆಡೂ ವರೆಯಾಗುತ್ತಿತ್ತು.  ಅಬ್ಬಾ ಗಾಡಿಗಳು ಬಿದಿರಿನ ಸವಾರಿಯನ್ನು ಹಾಕಿಕೊಂಡು ಎಷ್ಟೊಂದು ಸುಂದರವಾಗಿ ಅಲಂಕೃತಗೊಂಡಿವೆ! ಬಿಸಿಲು ಮಳೆಯೂ ಮಕ್ಕಳಿಗೆ ತೊಂದರೆಕೊಡಬಾರದೆಂಬ ಕಳಕಳಿ.

ಗಾಡಿಯಲ್ಲಿ ಮಧ್ಯೆಕುಳಿತುಕೊಂಡರೆ ಕ್ಷೇಮ ಎಂಬ ಭಾವನೆಯಿಂದ ಓಡಿ ಹೋಗಿ ಜಾಗ ಕಾಯ್ದಿರುಸುತ್ತಿದ್ದೆವು. ಸವಾರಿಯಲ್ಲಿ  ನಮ್ಮ ಬೆನ್ನಿಗೆ ಸರಿಯಾಗಿ ಕಿಟಿಕಿ ಮಾಡಿಡುತ್ತಿದ್ದರು .ಅದರಲ್ಲಿ ಕರಬೂಜ ಬೀಜದ ಸಿಪ್ಪೆಯನ್ನು ಎಸೆಯಲು ಅನುಕೂಲ ಎಂಬ ಭಾವನೆ .

ಅಂತೂ ಇಂತೂ ಹೊರೆಟೆವು ನೊಗಕ್ಕೆ ಎತ್ತುಗಳನ್ನು ಕಟ್ಟಿ ಪ್ರೀತಿಯಿಂದ ಬೆನ್ನ ಮೇಲೆಸವರಿದರೆ ಸಾಕು ಲಯಬದ್ಧವಾದ ನಡಿಗೆ ಪ್ರಾರಂಭ. ಗಾಡಿಗೆ ಮುಂಭಾರವಾದರೆ ನಾವೆಲ್ಲಾ ಹಿಂದೆಸರಿಯಬೇಕು ,ಹಿಂಭಾರವಾದರೆ ಮುಂದೆ ಜರುಗಬೇಕು   ಪೆಟ್ರಾಮಾಕ್ಸ್ ಲೈಟನ್ನು ಹಿಡಿದ ಆಳು ಮಗ ಗಾಡಿಯ ಮುಂದೆ ನಡೆಯುತ್ತಿದ್ದ. ಗಾಡಿಯವನಿಗೆ ದಾರಿ ತೋರಿಸುವ ಕೆಲಸ ಅವನದಾಗಿತ್ತು . 

 ಅರಣ್ಯ ನಿಬಿಡತಾರವಾದಂತೆಲ್ಲ ಮೆಲ್ಲ ಮೆಲ್ಲನೆ ಮಾತನಾಡತೊಡಗಿದೆವು. ಹೊದರುಗಳ   ನಡುವೆ ದಾರಿಯನ್ನು ಊಹಿಸಿ ನಡೆಯುತ್ತಿವೆ ಎತ್ತುಗಳು.  ಬನಗತ್ತಲು  ಹೆಚ್ಚುತ್ತಿತ್ತು . ಮುಡಿಗೆದರಿ  ನಿಂತ ಹೆಮ್ಮರಗಳ ನಡುವೆ ನೀಲಾಕಾಶ ಸವಾರಿಯ ಸಂದಿಯಿಂದ ಗೋಚರಿಸುತ್ತಿತ್ತು. ತಿಮಿರದೊಡನೆಮೌನವು ಇಮ್ಮಡಿಯಾಯಿತು. ಜೊತೆಗೆ ಒಂದು ವಿಧವಾದ ಭಯವು ಸುತ್ತಲೂ ಸುಳಿದಾಡಿತು.

ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಿದ್ದೆವು . ತೂಕಡಿಸಿದೆವು , ಎಷ್ಟು ಹೊತ್ತು ನಿದ್ರೆ ಮಾಡಿದೆವೋ ತಿಳಿಯದು. ಇದ್ದಕ್ಕಿದ್ದಂತೆ ಗಾಡಿಯವನ ಏರು ದನಿಗೆ ಬೆಚ್ಚಿ ಬಿದ್ದೆವು. ಪಿಳಿ ಪಿಳಿ ಕಣ್ಣುಬಿಡುತ್ತಾ ನೋಡುತ್ತೇವೆ ನಮ್ಮ ಗಾಡಿಯ ಒಂದು ಗಾಲಿಯು ಗುಂಡನ್ನು ಹತ್ತಿ ಇಳಿಯಲುಸಾಹಸ ಪಡುತ್ತಿದೆ, ಎತ್ತುಗಳು ಎಳೆಯಲಾರವು . ಆಳುಗಳು ಗಾಲಿಯನ್ನು ನವಿರಾಗಿ ನೂಕಲಾರಂಭಿಸಿದರು ಮರದ ಗಾಲಿಗಳು ಲಟ  ಲಟ ಸದ್ದುಮಾಡುತ್ತ ಇಳಿದವು. ಗಾಡಿಯೂ ಕಂಪಿಸಿದಂತಾಯಿತು .

ದಾರಿಯ ತುಂಬಾ ಸಣ್ಣ ಸಣ್ಣ ಗುಂಡುಗಳು ಬಂಡೆಗಳು , ಆ ಹಾದಿಯೇ ಹಾಗೇ ಕಠಿಣವಾಗಿತ್ತು ಕಡಿದಾದ ದಾರಿಯಲಿ ಸಾಗುತ್ತಲಿದೆ ಸಾಹಸದ ಪಯಣ.  ಶ್ವಾಸ ನಿಶ್ವಾಸಗಳು ತಿದಿಯೊತ್ತಿದಂತೆ ಕೇಳಿಸುತ್ತಲಿವೆ .

ದೂರದ ಬಯಲಿನಲ್ಲಿ ಇರುಳ  ಹಕ್ಕಿಯೊಂದರ ವಿಕಟ ನಿರ್ಘೋಷ ಕರ್ಕಶವಾಗಿ ಕೇಳಿ ಬಂದು ಭಯವನ್ನು ಭಯಂಕರವನ್ನಾಗಿ ಮಾಡುತ್ತಿತ್ತು . ಕಣ್ಣು ಏನೇನೋ ಮಾಯಾರೂಪಗಳನ್ನು ಕಾಣುತ್ತಿತ್ತು , ಆದರೆ ಮನಸ್ಸು ಅವುಗಳನ್ನೆಲ್ಲ ಖಂಡಿಸಿ ಬಿಸುಟುತ್ತಿತ್ತು . ಜಗತ್ತೆಲ್ಲ ಚಿತ್ರೀಭೂತವಾದ ಮಧುರ ಕವನದಂತಿತ್ತು ,

ದಟ್ಟವಾದ ಕಾಡನ್ನು ಹಿಂದಿಕ್ಕಿ ವನದಂಚಿಗೆ ಬಂದೆವು .ಆಗಲೇ ಆರು ಗಂಟೆಯಾಗಿತ್ತು ಪೂರ್ವ ಪರ್ವತ ಶೃಂಗದಾಚೆ ಅರುಣಾ ಕಿರಣಗಳ ನಲಿವು ಬೆಳಕಿನಾಟ ಸಾಗಿತ್ತು . ಹೊಂಬಣ್ಣದಿ ಹೊಳೆಯುತ್ತಿರುವ ಆಗಸ , ಕೆರೆಯ ಏರಿಯಾ ಮೇಲೆ ಬೆಳೆದಿರುವ ಎತ್ತರವಾದ ಮರಗಳು ,  ಮೆಲ್ಲಗೆ ಬೀಸುವಾ  ಬನದೆಲರು ,  ಪಕ್ಷಿಗಳಾ ಸ್ವರಮೇಳ  ಎಲ್ಲವೂ  ಸುಂದರವಾಗಿತ್ತು ,ಸ್ವರ್ಗೀಯವಾಗಿತ್ತು ,ಒಮ್ಮೊಮ್ಮೆ ರಾಮದುರ್ಗದ ದೇವಸ್ಥಾನದ ಮಂಟಪದಲ್ಲಿ ಅವ್ವ ರುಚಿಯಾದ ಬಿಸಿಯಾದ ಅಡುಗೆ ಮಾಡುತ್ತಿದ್ದಳು , ಪಾಪ ದಣಿದ ಎತ್ತುಗಳಿಗೆ ಆಹಾರ ನೀರು ವಿಶ್ರಾಂತಿ ಮುಗಿದ ನಂತರ ಮುಂದಿನ ಪಯಣ . 

ಹಸಿದ ಹೊಟ್ಟೇಲಿ ಮನೆದೇವರಿಗೆ ಹೋಗುವ ಪರಿಪಾಠ . ಅವ್ವ ಉಪವಾಸ ಬರುತ್ತಿದ್ದಳು.   ಒಂದು  ಗಂಟೆ ಕಳೆದ ನಂತರ  ವಿಶಾಲವಾದ ಕೆರೆ , ಕೆರೆಯ ತುಂಬಾ ನೀರು ನೀರಿನಲಿ ಅರಳಿ ನಿಂತ ಕಮಲ,  ಕಣ್ಣಿಗೆ ರಾರಾಜಿಸಿತೆಂದರೇ  ಬೊಮ್ಮಘಟ್ಟ ಬಂತೆಂದೇ ಅರ್ಥ. 

ರಂಬಳಿಯ ರಮ್ಯ ನೋಟ.  ಆಟಕ್ಕೆನೀವು  ಸಿದ್ದರಾಗಿವಿರ ?

‍ಲೇಖಕರು Avadhi

October 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಫೋಟೋಗಳಿಲ್ಲವೇ ಸುಮಾ? ಚಿತ್ರವತ್ತಾಗಿ
    ಯೇ ಚಿತ್ರಿಸಿದ್ದೀರಿ. ಆದರೂ ಫೋಟೋ ನೋಡುವ ಆಸೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: