ಬಯಲಿಗೆ ಬಿದ್ದು ಗದ್ದೆಗೆ ಹೊರಟೆ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಈಗೊಂದಿಷ್ಟು ದಿನದಿಂದ ಬರವಣಿಗೆಗೆ ಅಂಟಿಕೊಂಡ ಮೇಲೆ ಅದರೊಳಗಿನ ಊರುಕೇರಿ,ಮರ,ರಸ್ತೆ, ಓಣಿ ,ಅಂಗಳಗಳು ದಿನಪೂರ್ತಿ ನನ್ನ ಬೆನ್ನು ಬಿಡದೆ ತಿರುಗುತ್ತಿವೆ.. ಕನಸಿಗೂ ಬಂದು ಕೈ ಮಾಡಿ ಕರೆಯುತ್ತವೆ…ಕರೆ ಮಾಡಿದ ಹಿರಿಯರ ನೆನಕೆಯಲ್ಲಿ ‘ಇಂಥಹುದ್ದೇ ಒಂದು ಹುಬೇಹೂಬು ಹಕ್ಕಿಯೊಂದು ನನ್ನ ಊರಲ್ಲೂ ಕೂಗುತ್ತಿತ್ತು..

ನೀನು ಬರೆದ ಹಾಗೇ ಬಳ್ಳಿಯೊಂದು ಹಬ್ಬಿದ ತಾವು ತಪ್ಪಿಸಿಕೊಂಡು ಬಂದು ನನ್ನೆಡೆಗೆ ಮುಖಮಾಡಿ ಜೋಲುತ್ತಿತ್ತು.’ ಎಂಬ ಸಂತಸ ಬಲಿಯುತ್ತವೆ. ಮೀನು ಮಿಡುಕಾಡಿ ಕೈ ತಪ್ಪಿಸಿ ಹೊಳೆ ಹಳ್ಳಕ್ಕೆ ಜಿಗಿಯುತ್ತದೆ..ಅದಾಗದೇ ತಪ್ಪಿಸಿಕೊಂಡದ್ದಾ..?ಅಥವಾ ನಾನೇ ಅಪ್ರತಿಯಾಗಿ ಕೈ ಜೆಳ್ಳೆ ಮಾಡಿ ಬಿಟ್ಟುಹಾಕಿದ್ದಾ.. ಮಬ್ಬು ಮಬ್ಬು..

ಈ ಮಬ್ಬನ್ನು ನಿಚ್ಚಳವಾಗಿಸಲು ಬರೆದದ್ದನ್ನು ಇನ್ನೊಮ್ಮೆ ಓದುತ್ತೇನೆ.ಇಲ್ಲಿಲ್ಲ ಯಾವುವೂ.. ಅದೋ ಅಲ್ಲಿವೆ..ಪ್ರೀತಿಯಾಗುತ್ತದೆಹತ್ತು ಹೆಜ್ಜೆ ನಡೆದರೆ ಸಿಕ್ಕುವ ಗಂಗಾವಳಿಯ ಮೇಲೆ, ತಪ್ಪಿಸಿಕೊಂಡು ಹೋಗಿ ಬದುಕುತ್ತ, ಬಲಿಯುತ್ತ ಎಂದಾದರೊಂದು ದಿನ ಬೆಸ್ತನ ಬಲೆಗೆ ಸಿಲುಕಿ ನೆಮ್ಮದಿಯ ನಗೆಯಾಗುವ ಮೀನಿನ ಮೇಲೆ..

ಹಾಲಿನಷ್ಟೇ ಬಿಳಿ ಹಲ್ಲುಗಳ ಒಡತಿ, ಹಸಿರ ಮೆದ್ದು ಭತ್ತಕ್ಕೆ ಗೊಬ್ಬರವನ್ನೂ ಕೊಡುವ ಫಳಫಳ ಮೈಯಿನ ಹುಲಿಮನೆ ಮಂಜನ ಎಮ್ಮೆಯ ಮೇಲೆ…ರಸ್ತೆಯಂಚಿಗೆ ನಿಂತು ಬೀಳುವ ನೀರಲ್ಲಿ ಬೊಸಬೊಸ ಮೀವ ಲಾರಿ ಚಾಲಕರ ಏಕಾಗ್ರತೆಯ ಮೇಲೆ…
(ಹಸಿರು ಹಾಳೆಯ ಮೇಲೆ ಮೂಡಲಾರವು ಹೆಜ್ಜೆಬೆಳ್ಳಕ್ಕಿ ಕರೆದದ್ದು ನೆನಪು ಉಂಟೆ? ಹಸಿದ ಹಾದಿಯ ಹಿಡಿದು ಹೋದಾಗ ಕೇಳಿದ್ದುಗುಡಿಯದೋ? ಶಾಲೆಯದೋ?ಯಾವ ಗಂಟೆ?_ ಸುರಂ ಎಕ್ಕುಂಡಿದೂರದ ದಾರಿಗಳು)

ಬೆಳಗು ಮುಗಿದು ಮಧ್ಯಾಹ್ನ ಮುನ್ನುಡಿ ಬರೆವ ಹೊತ್ತಿಗೆ ತಡೆಯದೇ… ಊರ ಹುಡುಕುತ್ತ ದಾರಿ ಹಿಡಿಯುತ್ತೇನೆ…ಚಪ್ಪಲಿ ಕಳೆದುಹೋಗಿ ಸಿಕ್ಕಿದ ಶಾಲೆಗೀಗ ಹೊಸ ಅಕ್ಕೋರು ಬಂದಿದ್ದಾರೆ..ಸ್ವಾಗತಿಸಿ ಕೂರಿಸುತ್ತಾರೆ.. ಇಂಥಾ ಕಾರಣಕ್ಕೆ ಬಂದಿದ್ದೇನೆಂದು ಹೇಳಲು ಲಜ್ಜೆಯಾದಂತಾಗುತ್ತದೆ.. ಹದಿನಾರು ಕೋಣೆಗಳಲ್ಲಿ ನಾಲ್ಕು ಕೋಣೆ ಮಾತ್ರ ತೆರೆಯುವುದಂತೆ ಈಗ..ಬೀಗ ಬಿದ್ದ ಕೋಣೆಯ ಒಳಗೆ ಲಲಿತಕ್ಕೋರು ಅರವತ್ತು ಮಕ್ಕಳ ಕುಳ್ಳಿಸಿ ಪಾಠಮಾಡುತ್ತಿದ್ದಾರೆ.

ಸಣ್ಣಗಿನ ಅಕ್ಷರದಲ್ಲಿ ತಾದಾತ್ಮ್ಯದಲ್ಲಿ ಏನನ್ನೋ ಬರೆಯುತ್ತಿದ್ದಾರೆ ಗೋಡೆಬೋರ್ಡಿನ ಮೇಲೆ..ಮಕ್ಕಳು ಬರೆದುಕೊಂಡಾದ ಮೇಲೆ ಮೇಲಿನ ಐದು ಸಾಲನ್ನು ‘ಉದ್ದಲು’ ಅವರು ಉದ್ದಗಿನ ನನ್ನನ್ನೇ ಕರೆಯುತ್ತಾರೆ..  ನೋಡಿ ಇಲ್ಲಿ ಬೇಕಿದ್ದರೆ.. ನನ್ನದೇ ಪುಟ್ಟ ಚಪ್ಪಲಿ ಹೇಗೆ ನಾನು ಹೊರಗೆ ಬರುವುದನ್ನೇ ಕಾಯುತ್ತ ಕುಳಿತಿದೆ ..

ದಯಮಾಡಿ ಬೀಗ ತೆಗೆಯಿರಿ ಎಂದೆಲ್ಲ ಚೀರಿ ಅಂತಿಮದಲ್ಲಿ ತಲೆತಿರುಗಿ ಕುಸಿದು ಕುಳಿತೆನಂತೆ.. ನೀರು ‘ಸೀಮಿಸಿ’ ಎಚ್ಚರಿಸಿದ ಈಗಿನವರು ಆ ನಂತರ ಮದ್ಯಾಹ್ನದ ಹೊತ್ತಿಗೆ ತಾನು ತಿನ್ನಲೆಂದು ತಂದಿಟ್ಟುಕೊಂಡ ಎರಡು ದೋಸೆಯಲ್ಲಿ ಒಂದನ್ನು ನನಗೆ ಕೊಟ್ಟು ಸಣ್ಣ ಮೋಡಿಬೆಲ್ಲದ ಚೂರನ್ನೂ ಒತ್ತಾಯದಿಂದ ತಿನ್ನಿಸಿ ಸಾವಕಾಶ ಹೋಗು..ಸೀದಾ ಮನೇಗೇ ಹೋಗು ಎಂದೆಲ್ಲ ಹೇಳುತ್ತ ಬೀಳ್ಕೊಟ್ಟರು..

ಅದಾದ ಎರಡು ದಿನದ ಮೇಲೆ ಮಗಳ ಮನೆ ಬಾಂಬೇಯಲ್ಲಿ ಇರುವ ಲಲಿತಕ್ಕೋರು ತಮ್ಮ ಇಲ್ಲಿಯ ಮನೆಯನ್ನು ಕಡಿಮೆ ದುಡ್ಡಿಗೆ ಯಾರಿಗೋ ಮಾರಿದರು ಎಂಬ ಸುದ್ದಿ ಸಿಕ್ಕಿ ಮತ್ತಲ್ಲಿಗೆ ಹೊರಡದಿರಲಿ ಹೇಗೆ..? ಅಕ್ಕೋರು ಕುಳಿತು ಅಬ್ಬಲಿಗೆ ಕಟ್ಟುತ್ತಿದ್ದ ಹೊಸಲಿನ ಎರಡೂ ಮೂಲೆಗೆ ಹೆಸರಿಲ್ಲದ ಗಿಡ ಹುಟ್ಟಿ ಬಲಿತಿದೆ. ಕೀಳಲು ನೋಡಿದರೆ ಬರಲಿಲ್ಲ… ‘ಯಾರದೂ ‘ ಎಂದವರು ಆಚೆಯಮನೆಯವರು..ನಾನು ಇಂತಿಂಥವಳು.. ಲಲಿತಕ್ಕೋರ ಖಾಸಾ ಶಿಷ್ಯೆ ಎಂದೆ.

ವಿಚಿತ್ರವಾಗಿ ನೋಡಿದರು..ಆ ನಂತರವೂ “ಯಾರೋ ಕೊಂಡರಂತಲ್ಲ ಈ ಮನೆಯನ್ನು ಅವರಿಗೆ ಈ ಸಂಪಿಗೆ,ಬಕುಲ,ರಂಜಲ ಮರಗಳನ್ನು ಕಡಿಯದಿರಲು ಹೇಳಿ ದಯವಿಟ್ಟು ..ಅಕ್ಕೋರು ಈ ನೀಲಂ ಮಾವಿನ ಮರದ ಕೆಳಗೆ ಮೀನು ಮಾಡುತ್ತಿದ್ದರು..ನಾನು ಬೆಕ್ಕು ಅಟ್ಟಲು ಕೋಲು ಹಿಡಿದು ಕುಕ್ಕರುಗಾಲಲ್ಲಿ ಅವರ ಮುಂದೆ ಕುಳ್ಳುತ್ತಿದ್ದೆ.. \ಇದೀಗ ಅಸಡಾ ಬಸಡಾ ಬೆಳೆದಿದೆ..

ಹೋಟೇಲು ಗಿಟೇಲು ಮಾಡುವ ಮೋಹದಲ್ಲಿ ಈ ಮರವನ್ನೂ ಕಡಿದುಬಿಟ್ಟಾರು” ಅನ್ನುತ್ತ ಅವರನ್ನೂ ಅಂಗಲಾಚಿದೆನಂತೆ…ಆ ಮನೆಯ ಸುತ್ತ ಇದ್ದ ಮಣ್ಣ ಕಣಕಣದಲ್ಲೂ, ಹುಟ್ಟಿದ ಹುಲ್ಲಿನಲ್ಲೂ ಗೋಡೆಯಿಂದ ಜಾರಿಬಿದ್ದ ಹೊಪ್ಪಳೆಯಲ್ಲೂ ಹಳೆಯದನ್ನು ಹುಡುಕುತ್ತಿದ್ದ ನನಗೆ ಇದು ಗೊತ್ತಾಗಲಿಲ್ಲ..

ಆನಂತರ ಮತ್ತೊಮ್ಮೆ ಅಂಕೋಲೆ ಪೇಟೆಯಲ್ಲಿ ಸಿಕ್ಕಿದ ಅವರು ನನ್ನೆಡೆಗೆ ಕಂಕ ಮಂಕವಾಗಿ ನೋಡಿದರು… “ಮತ್ತೆಲ್ಲ ಆರಾಮಲ್ಲ..?” ಎಂದೆಲ್ಲ ಕೇಳಿ ಏನನ್ನೋ ಖಾತ್ರಿಪಡಿಸಿಕೊಂಡರು.ನಿಮ್ಮ ಸಲುವಾಗಿ ಲಲಿತಕ್ಕೋರ ಮೊಬೈಲು ನಂಬರ್ ತಂದಿದ್ದೇನೆ ಇಕೊಳ್ಳಿ ಎಂದು ಕೊಟ್ಟರು..
ಕೈಯೆಲ್ಲ ನಡುಗಿಸಿಕೊಳ್ಳುತ್ತ ಫೋನ್ ಮಾಡಿದರೆ ಆಕಡೆಯಿಂದ ಮಧ್ಯವರ್ತಿ ಧ್ವನಿಯೊಂದು ಅವರಿಗೀಗ ‘ಅರುಮರು’ ನಿಮ್ಮನ್ನು ಗುರ್ತಿಸಲಾರರು ಎಂದಿತು..

ನೀವು ಯಾರು ಎಂದು ಕೇಳುವ ಕುತೂಹಲವೂ ಈಗಿನವರಿಗಿಲ್ಲ..ತಲೆ ಯಂತ್ರವಾಗುತ್ತಿದೆ.. ಹೃದಯ ಆಮ್ಲಜನಕ ಪಂಪು ಮಾಡಿ ಮಾಡಿ ಸೋತಿದೆ.. ಮಿಡಿಯುವುದೆಲ್ಲ ಆಗಿನ ಕಾಲಕ್ಕಾಯಿತು ಈಗ ಇದೊಂದು ಕೆಲಸ ಸರಿಯಾಗಿ ಮಾಡಿಕೊಂಡರೆ ಸಾಕಾಗಿದೆ ನನಗೆ ಅನ್ನುತ್ತಿದೆ. ಮತ್ತೊಂದು ದಿನ ಬಯಲಿಗೆ ಬಿದ್ದು ಗದ್ದೆಗೆ ಹೊರಟರೆ.. ಸಣ್ಣಗೆ ಮಳೆ.. ಎಲ್ಲ ಸರಿಯಾಗಿದ್ದರೆ ಇದು ಕೊಯ್ಲು ಮುಗಿಯುವ ಹೊತ್ತು..ಭಾದ್ರಪದ ಮುಗಿದು ಆಶ್ವೀಜ ಒಂದು ತಿಂಗಳು ತಡೆದು ಬಂದು ನಿಜ ಆಶ್ವೀಜವಾಗಿ ಎದುರಿಗಿದೆ.

ಮಳೆ ಮುಗಿದಿಲ್ಲ ಇನ್ನೂ… ಪ್ರಕೃತಿ ವಿಕೋಪಕ್ಕೆ ಹೆದರಿ ಈಗಿನವರೆಲ್ಲ ಗಿಡ್ಡ ಕೈಯಿ(ಹುಲ್ಲು)ನ ಜಯ ಭತ್ತ ಹಾಕುತ್ತಾರೆ ಎಂಥಾ ಮಳೆಗೂ ಅಡ್ಡ ಬೀಳದು ಪೈರು.. ಭತ್ತವೂ ಮಿಗಿಲು ಫಸಲು ಬರುತ್ತದೆ ಎಂಬುದಕ್ಕಾಗಿ…ಸತ್ವ ಸಾರ ಯಾರಿಗೂ ಬೇಕಿಲ್ಲ..

ಅಂಗಡಿಯಲ್ಲಿ ಸಿಗುವ ವಿಷಕಾರಿ ಹಸಿರು ಬಣ್ಣಹಾಕಿದ ಕೊತ್ತಂಬರಿ ಕಾಳು ಹಾಗೂ ಸೋಂಪು ಚಂದ ಕಾಣ್ತದೆ ನೋಡಲು.. ಬಹಳ ಪಸಂದು ಮಾಡುತ್ತಾರೆ ಜನ..”ನೀವೇನು ಸಪ್ಪೆಹೊಡೆಯುವ ಬಿಳಿಚಾರು ಹಳೆಯದನ್ನೇ ಕೇಳುತ್ತೀರಿ” ಎನ್ನುತ್ತ ಅಂಕೋಲೆ ಶೆಟ್ಟರು ನಗೆಯಾಡುತ್ತಾರೆ.. 
ಪಾಂಡ್ಯ,ಗೌರಿ,ಮಸೂರಿ,ಗಂಧಸಾಲೆ,ರಾಜಗಾಮೆ,ಮೊರಡ್ಡ,ನೀಲಂಬಡೆ,ತೊನ್ನೂರು,ಜೀರಿಗೆ ಸಣ್ಣ,ಸಿಂಧೂರ ಎಂಬ ಸಾವಿರಾರು ಭತ್ತದ ತಳಿಗಳೆಲ್ಲ ಹೇಳ ಹೆಸರಿಲ್ಲದೆ ನಾಪತ್ತೆಯಾಗಿವೆ..

ಇದೀಗ ಹೀಗೆ ಹಾಳೆ(ಬದು)ಯ ಮೇಲೆ ಹಾಯುತ್ತ ಹೊರಟರೆ ತಲೆ ಬಗ್ಗಿಸಿದ ತೆನೆಗಳಿಗೆಲ್ಲ ನನ್ನ ಕಾಲುಗಳಿಗೆ ಬಡಿಯುವ ಆಟ.. ಅಲ್ಲಲ್ಲಿ ಒಂದೊಂದು ಭತ್ತಕ್ಕೆ ಹೊಟ್ಟೆಯೊಡೆದು ಹಸಿರು ಬೂರಸು ಡುಮ್ಮ ಬಂದು ಕಿತ್ತು ಅದನ್ನು ‘ ಗಂಧ’ ಅಂತ ಹಣೆಗೆ ಇಟ್ಟುಕೊಳ್ಳುತ್ತಿದ್ದ ನೆನಪು..

 ‘ಹೊಸ್ತು'(ಹೊಸತು)ಎಂದು ದೇವ್ತಿ ಮನೆಗೆ,ಬೊಮ್ಮಯ್ಯದ್ಯಾವರ ಗುಡಿಗೆ ಕದಿರು ಕೊಯ್ಯಲು ಬಂದ ‘ತಿಪ್ಪು ನಾರಾಯಣ’ ಈಗ ಗದ್ದೆ ಮಾಡದೇ ನೌಕರಿದಾರ್ತಿ ಆಗಿರುವ ನನಗೂ ಉಡಿ ತುಂಬ ಕದಿರು ಕೊಟ್ಟು ಹೊಸಕ್ಕಿ ಪಾಯಸ ಮಾಡಲು ಹೇಳಿ ಪಾಂಡವ ಹರಿವೆಯ ಗುಲಾಬಿ ಗೊಂಡೆ ಕೊಯ್ದು ಮಾವಿನೆಲೆ ಮುರಿಯುತ್ತಿದ್ದ ನಾನು ವಾಪಸ್ಸು ಬರುವಾಗ…

” ಭೂಮ್ತಾಯಿ”ಎಂದು ಕರೆಯಲ್ಪಡುವ ಅಂಕೋಲೆಯ ಶಾಂತಾದುರ್ಗೆ  ಕೃಷಿಗೆ ಸಂಬಂಧಿಸಿದ,ಕುರಿಕೋಳಿ ಹಬ್ಬವಾದ ಬಂಡಿಹಬ್ಬಕ್ಕೆ ಸಂಬಂಧಿಸಿದ,ವಿವಿಧ ಸಂಪ್ರದಾಯಕ್ಕೆ ಸಂಬಂಧಿಸಿದ ಎಲ್ಲ ಜನರೂ ನಡೆದುಕೊಳ್ಳುವ ದೇವಿ.ಇದು ಬಿಟ್ಟು ಮತ್ತೆ ಆಯಕಟ್ಟಿನ ಕುಂಡೋದರಿ ,ಮಹಮ್ಮಾಯೆ, ಆರ್ಯಾದುರ್ಗೆಯರು..

ಊರಿಗೊಂದು ದೇವ್ತಿ ಮನೆ..ಗಡಿ,ಊರ ಕಾಯುವ ಬೊಮ್ಮಯ್ಯದೇವರು..ಕುಲದೈವ ಎಂಕಟ್ರಮಣ…ಮೇ ತಿಂಗಳಲ್ಲಿ ನಡೆವ ಬಂಡಿಹಬ್ಬದ ಸಮಯದಲ್ಲಿ ದೇವಿಯ ಮುಖವಾಡಿಸೋ ಆಡುಕಟ್ಟೆಯಲ್ಲಿ ಗದ್ದೆ ಉಳುಮೆ ಮಾಡಿ ಸಾಂಕೇತಿಕ ಆರಂಭ ಮಾಡಿದ ನಂತರವೇ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಗದ್ದೆ ಉಳುಮೆ ಆರಂಭ..

ಹಾಗೇ ಹುಬ್ಬಾ ಮಳೆ ನಕ್ಷತ್ರದಲ್ಲಿ ಗದ್ದೆ ಕೊಯಲಿನ ಆರಂಭಕ್ಕೆ ಮುನ್ನುಡಿ ಬರೆವ ಹೊಸ್ತು ಹಬ್ಬದ ಶುರುವಾತು ಕೂಡ ಭೂಮ್ತಾಯಿ ಮನೆಯಲ್ಲಿಯೇ….ನಂತರ ನವರಾತ್ರಿಯ ವೇಳೆಯಲ್ಲಿ ಸುತ್ತಲಿನ ಬಂಡಿಹಬ್ಬ ನಡೆಯುವ ಗ್ರಾಮಗಳಲ್ಲಿ ವಾದ್ಯಘೋಷಗಳೊಂದಿಗೆ ಕಳಸಗಳು ಮೆರವಣಿಗೆ ಹೊರಟು ಆಯಾ ಗ್ರಾಮ ದೇವಿಯ ಸನ್ನಿಧಿಯಲ್ಲಿ ಆಸೀನವಾಗುತ್ತವೆ.

ಗುನಗರು ,ಕಟ್ಟಿಗೆದಾರರು ಆಲಯಕ್ಕೆ ಸಂಬಂಧಿಸಿದ ಗದ್ದೆಗೆ ಹೋಗಿ ಪೈರಿಗೆ ಪೂಜೆಸಲ್ಲಿಸಿ ಭತ್ತದ ತೆನೆ ತಂದು ದೇವಿಯ ಎದುರಿಗಿಟ್ಟು ಪ್ರಸಾದವಾಗಿ ಮನೆಗೆ ಕದಿರು ತರುತ್ತಾರೆ.ಕೃಷಿಕರೂ ಒಯ‌್ಯುತ್ತಾರೆ. ನಂತರ ತಮ್ಮ ತಮ್ಮ ಗದ್ದೆಯಲ್ಲಿ ಪೂಜೆ.ಕದಿರು ಕೊಯ್ಲು ನಡೆಯುತ್ತದೆ..

ತಂದ ಕದಿರನ್ನು ಪಾಂಡವ ಹರಿವೆ ಹೂವಿನೊಂದಿಗೆ ಮಾವಿನೆಲೆಯಲ್ಲಿ ಸೆಣಬಿನ ನಾರಿಂದ ಪೋಣಿಸಿಮುಂಬಾಗಿಲು,ಕೃಷಿಪರಿಕರ,ಕೊಟ್ಟಿಗೆ,ಫಲ ಬಂದ ಮರ,ವಾಹನ, ಮಹೂರ್ತದ ಕಂಬ,ಬಾವಿ ಗಡಗಡೆ ಮುಂತಾದವಕ್ಕೆಲ್ಲ ಕಟ್ಟಿ ಹೊಸ್ತನ್ನು ಬರಮಾಡಿಕೊಳ್ಳುತ್ತಾರೆ..ಆ ದಿನ ಹೊಸ ಅಕ್ಕಿ ಪಾಯಸ ಮನೆಯಲ್ಲಿ..ಸಿಹಿ ಹಾಕುವಂತಿಲ್ಲ ಅದಕ್ಕೆ..ತೆಂಗಿನಕಾಯಿಹಾಲಿನೊಂದಿಗೆ ಹೊಸಕ್ಕಿ ಒಡೆದು ಬೇಯಿಸಿದ್ದು..

ಹಿಂದೆಲ್ಲಬಾಗಿಲಿಗೆ ಈ ಪೈರಿನ ಸರ ಕಟ್ಟುವ ದಿನಗಳಲ್ಲೇ ಮನೆಗೆ ಬಂದ ಜೋಡಿಗುಬ್ಬಿಗಳು ಒಂದೊಂದೇ ಭತ್ತ ‘ಮೋಟಿಸಿ’ತಿಂದು ಗೋಡೆಗಾನಿಸಿದ ಪಟಕ್ಕೆ ಗೂಡು ಕಟ್ಟಿ ಮರಿಮಾಡಿಕೊಂಡು ಹೋಗುವ ಕಾಲವೂ ಆಗಿತ್ತೆಂಬುದು ನೆನಪಿಡುವ ವಿಷಯ..ಮನೆತುಂಬ ಜನ,ಮಕ್ಕಳು ಇದ್ದರೂ ಗುಬ್ಬಿಗಳನ್ನು ಹುಷ್ ಎಂದು ಓಡಿಸುತ್ತಿರಲಿಲ್ಲ ಯಾರೂ…

ಈಗ ಕೊರೋನಾ. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಅಂಕೋಲೆಯ ಬಂಡಿಹಬ್ಬ ಪ್ರಸಕ್ತ ವರ್ಷ ನಡೆಯಲಿಲ್ಲ..ಹುಬ್ಬಾ ಮಳೆ ನಕ್ಷತ್ರದಲ್ಲಿ ಭೂಮ್ತಾಯಿಯಲ್ಲಿ ಹೊಸ್ತು ಹಬ್ಬ ಕೂಡ ಆಗಲಿಲ್ಲ..ನವರಾತ್ರಿಯ ನಡುವಲ್ಲೂ ಮಳೆ ಹೊಯ್ಯುತ್ತಿದೆ..

ಸಂಪ್ರದಾಯ ಬಿಡಲಾಗದ ಕೃಷಿಕ ಅಂಥದ್ದೇನೂ ಸಂಭ್ರಮವಿಲ್ಲದೇ ದೇವಿ ಮುಂದೆ ಕದಿರು ಒಯ್ದಿಟ್ಟು ಬಂದು, ಒಂದು ಕಾಯಿ ಒಡೆಸಿಕೊಂಡು ಬಂದು ಸಾಮಾನ್ಯ ಹಬ್ಬಮಾಡಿದ್ದಾನೆ ಮೊನ್ನೆ.. ಕದಿರ ತೋರಣ ಕಟ್ಟಲಾಗಿದೆ ಬಾಗಿಲಿಗೆ. ಗುಬ್ಬಿಗಳು ಎಲ್ಲಿ ಹೋದವೋ..ಗೂಡು ಕಟ್ಟಲು ಜಾಗವಿಲ್ಲದ ಓರೆಯಾಗಿರದ ಪಟವ ಬಿಟ್ಟು…

October 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಕಿರಣ ಭಟ್

    ಅರೆ, ಹೌದಲ್ಲ. ಹೊಸ್ತು ತರ್ಬೇಕು. ಆದ್ರೆ ಎಲ್ಲಿಂದ? ಈಗ ಗದ್ದೆಗಳೇ ಇಲ್ಲ.
    ಲೇಖನ ಚಲೋ ಇದೆ.

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಒಳ್ಳೆ ಇದೆ ರೇಣುಕಾ ಮೇಡಂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: