ನಿರ್ಮಾಪಕರ ಹುಡುಕಾಟ…!???

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

ಕಥೆ ಬರೆಯುವುದರಷ್ಟೇ ಗಂಭೀರವಾದ ಕೆಲಸ, ನಿರ್ಮಾಪಕರನ್ನು ಹುಡುಕುವುದು. ಯಾವ ಯಾವುದೋ ಕಥೆಗೆಲ್ಲಾ ಯಾರು ಯಾರೋ ನಿರ್ಮಾಪಕರು ಸಿಗುವುದಿಲ್ಲಾ, ಸಿಕ್ಕರೂ ಆ ಸಿನೆಮಾಗಳು ಒಂದೋ ದಡ ಸೇರುವುದಿಲ್ಲಾ, ಸೇರಿದರೂ ಮೊದಲಿಗೆ ಬರೆದುಕೊಂಡ ಕಥೆ, ತೆರೆಯ ಮೇಲೆ ಬಂದಿರುವುದಿಲ್ಲಾ. ಅಷ್ಟರಮಟ್ಟಿಗಿನ ಗುರುತರ ಜವಾಬ್ದಾರಿ ಇರುವ ನಿರ್ಮಾಪಕರನ್ನೇ ಹುಡುಕಿಕೊಳ್ಳಬೇಕಾಗುತ್ತದೆ.

ಆದರೆ ಅದು ಅಷ್ಟು ಸುಲಭದ ಕೆಲಸವಲ್ಲಾ, ಯಾರಿಗೆ ಸಿನೆಮಾ ನಿರ್ಮಾಣದಲ್ಲಿ ಬಂಡವಾಳ ಹೂಡಲು ಆಸಕ್ತಿ ಇರುತ್ತದೆಯೋ ಅವರಿಗೆ, ಅವರದೇ ಆದ ಕಥೆಗಳ ಬಗ್ಗೆ ಅಭಿರುಚಿ ಬೆಳೆಸಿಕೊಂಡಿರುತ್ತಾರೆ. ಅದರಾಚೆಗಿನ ಜಗತ್ತಿನ ಬಗ್ಗೆ ಅವರಿಗೆ ನಂಬಿಕೆ ಇರುವುದಿಲ್ಲಾ. ಸೋ ಕಾಲ್ಡ್ ಸಿನೆಮಾ ಥಿಯರಿಗಳ ಆಚೆಗಿನ ಜಗತ್ತಿನ ಕಥೆಗಳಲ್ಲಿ ಆಸಕ್ತಿ ಇರುವವರು ಸಿನೆಮಾ ನಿರ್ಮಾಣ ಮಾಡುವಷ್ಟು ಆರ್ಥಿಕವಾಗಿ ಸಬಲರಾಗಿರುವುದಿಲ್ಲಾ (ನನ್ನ ಪರಿಚಯದ ವಲಯದಲ್ಲಿ).

ಈಗ ಆಯ್ಕೆ ಮಾಡಿಕೊಂಡಿರುವ ಕಥೆಯನ್ನು ಎಲ್ಲರಿಗೂ ಹೇಳಲು ಬರುವುದಿಲ್ಲ. ಕಾರಣ, ಕಥೆ ಮಹಿಳಾ ಪ್ರಧಾನವಾದದ್ದು ಹಾಗೂ ಹೆಣ್ಣಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದ ಕಥಾ ವಸ್ತುವಾಗಿರುವುದರಿಂದ, ಗಂಡು ಮನಸ್ಥಿತಿಯ, ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ನಿರ್ಮಾಪಕರು ಈ ಕಥೆಯನ್ನು ಬೇರೆ ಮಾದರಿಯ ಸಿನೆಮಾ ಆಗಿ ಗ್ರಹಿಸುವ ಅಪಾಯ ಇರುವುದರಿಂದ, ಸೆನ್ಸಿಬಲ್ ನಿರ್ಮಾಪಕರನ್ನಷ್ಟೇ ಹುಡುಕಬೇಕಿತ್ತು.

ನನ್ನ ಮೊಬೈಲ್ನಲ್ಲಿರುವ ನಿರ್ಮಾಪಕರ ಹೆಸರುಗಳನ್ನೆಲ್ಲಾ ಹುಡುಕುತ್ತಾ ಹೋದೆ. ಅದರಲ್ಲಿ ನನ್ನ ಗ್ರಹಿಕೆಗೆ ಸೆನ್ಸಿಬಲ್ ಅನಿಸಿದ ಒಂದಿಬ್ಬರು ನಿರ್ಮಾಪಕರಿಗೆ ಮೆಸೇಜ್ ಮಾಡಿ, ಅತೀ ಕಡಿಮೆ ಬಡ್ಜೆಟ್ಟಿನಲ್ಲಿ ಸಿನೆಮಾ ಮಾಡಲು ಯೋಚಿಸುತ್ತಿರುವುದಾಗಿಯೂ, ಸಿನೆಮಾ ಮಾಡಲು ಆಸಕ್ತಿ ಇದ್ದರೆ ಎದುರಿಗೆ ಬಂದು ಕಥೆಯ ಎಳೆ ಹೇಳುವುದಾಗಿ ಮೆಸೇಜ್ ಕಳಿಸಿ, ಪ್ರತಿಕ್ರಿಯೆಗಾಗಿ ಕಾಯುತ್ತಾ ಕುಳಿತೆ. ಎರಡು ದಿನ ಯಾರಿಂದಲೂ ಪ್ರತಿಕ್ರಿಯೆ ಬರಲಿಲ್ಲಾ. 

ಮುಂದೇನು, ಯಾರು ಎಂದು ಯೋಚಿಸುತ್ತಿರುವಾಗಲೇ ಒಬ್ಬರು ನಿರ್ಮಾಪಕರ ಕಾಲ್, ಎಲ್ಲಿದ್ದೀರಾ ಮಂಸೋರೆ ಅಂತ ಕೇಳಿದ್ರು, ಸಾರ್ ಸಧ್ಯಕ್ಕೆ ಮನೇಲೆ ಇದೀನಿ ಅಂತ ಹೇಳ್ದೆ, ಸರಿ ಸಂಜೆ ಚಂದ್ರಾಲೇಔಟ್ ಹತ್ರ ಬನ್ನಿ, ಮಾತಾಡೋಣ ಅಂತ ಹೇಳಿದ್ರು, ಈ ಹಿಂದೆ ಎರೆಡು ಮೂರು ಬಾರಿ ಇವರೊಂದಿಗೆ ಬೇರೆ ಬೇರೆ ಕಥೆಗಳನ್ನು ಚರ್ಚಿಸಿದ್ದೆ, ಹಾಗೂ ಆ ವ್ಯಕ್ತಿಗೆ ಕಥೆ ಇಷ್ಟವಾದರೆ ನನಗೆ ಬೇಕಿರುವಷ್ಟು ಹಣ ಹೂಡುವಷ್ಟು ‘ಶಕ್ತ’ರು ಎಂಬ ಅರಿವಿತ್ತು. ಹಾಗಾಗಿ ಇವರ ಬಗ್ಗೆ ಒಂದು ನಂಬಿಕೆ ಬಂದಿದ್ದರಿಂದ, ಸಂಜೆ ಸಿಗುವುದಾಗಿ ಹೇಳಿದೆ.

ಸಂಜೆ ಭೇಟಿಯಾಗಿ ಟೀ, ಕಾಫಿ ವಗೈರೆಗಳ ನಂತರ ಕಥೆಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ. ಕಥೆ ಕೇಳಿ ಅವರಿಗೂ ಥ್ರಿಲ್ ಆಯಿತು. ಬಡ್ಜೆಟ್ ಏನು ಪ್ಲಾನು ಮಾಡಿದೀರಿ ಅಂತ ಕೇಳಿದ್ರು. ನಾನು ಸರ್ ಒಂದು ಇಪ್ಪತ್ತೈದು ಲಕ್ಷದಲ್ಲಿ ಮುಗಿಸೋ ಪ್ಲಾನ್ ಇದೆ ಅಂತ ಹೇಳಿದೆ. ಈ ಹಿಂದೆ ಹದಿನೈದು ಎಂದು ಪ್ಲಾನ್ ಮಾಡಿದ್ದವನು ಏಕಾ ಏಕಿ ಇಪ್ಪತ್ತೈದು ಎಂದು ಹತ್ತು ಲಕ್ಷ ಜಂಪ್ ಆಗಲು ಕಾರಣ ನಮ್ ನಾಗೇಂದ್ರಾ ಅವರೇ.

ಸಂಜೆ ನಿರ್ಮಾಪಕರನ್ನು ಭೇಟಿ ಮಾಡಲು ಹೋಗುವ ಮೊದಲು ಒಂದು ಟೀ ಕುಡಿಯುವ ಆಸೆ ಆಗಿತ್ತು. ಆದರೆ ಅದಾಗಲೇ ಟೀ ಅಂಗಡಿಯಲ್ಲಿ ಸಾಲ ಹನುಮಂತನ ಬಾಲವಾಗಿತ್ತು. ಮತ್ತಷ್ಟು ಉದ್ದ ಬೆಳೆಸುವುದು ಬೇಡ ಎಂದು ನಾಗೇಂದ್ರ ಅವರಿಗೆ ಟೀ ಸ್ಪಾನ್ಸರ್ ಮಾಡಲು ಕೇಳೋಣ, ಹಾಗೇ ನಿರ್ಮಾಪಕರನ್ನು ಭೇಟಿ ಮಾಡುವ ವಿಷಯವನ್ನು ತಿಳಿಸೋಣ ಎಂದು ನಾಗೇಂದ್ರ ಅವರನ್ನು ಭೇಟಿಯಾಗಿದ್ದೆ, ಟೀ ಕುಡಿಯುತ್ತಾ ಅವರಿಗೆ ವಿಷಯ ತಿಳಿಸಿದೆ.

ನಾಗೇಂದ್ರ ಕೇಳಿದರು ಬಡ್ಜೆಟ್ ಎಷ್ಟು ಹೇಳ್ತೀರಾ? ನಾನು, ಅಷ್ಟೇ ಸಾರ್ ಹದಿನೈದು ಸಾರ್ ಅಂತಂದೆ, ಅದಕ್ಕೆ ನಾಗೇಂದ್ರ, ಸಾರ್ ಹದಿನೈದು ಅಂತ ಪ್ರೊಡ್ಯೂಸರ್ ಗೆ ಹೇಳಿದ್ರೆ ಅವರು ಹತ್ತು, ಎಂಟು ಅಂತಾ ಇಳಿಸ್ತಾರೆ. ಸೇಫರ್ ಸೈಡಿಗೆ ಇಪ್ಪತ್ತು ಹೇಳಿ, ಆಗ ಕಡಿಮೆ ಮಾಡಿದ್ರು ನಿಮ್ ಬಡ್ಜೆಟ್ಟಿಗೆ ಬರ್ತಾರೆ ಅಂತ ಬುದ್ಧಿಮಾತು ಹೇಳಿ ಕಳಿಸಿದ್ರು. ನಾನು ಆ ಬುದ್ಧಿಮಾತಿಗೆ ಇನ್ನೈದು ಸೇರಿಸಿ ಹೇಳಿದೆ.

ಆದರೆ ಒಳಗೆ ಢವ ಢವ ಫೀಲಿಂಗ್, ಎಲ್ಲಿ ಜಾಸ್ತಿ ಹೇಳ್ಬಿಟ್ನೋ, ಅಷ್ಟೆಲ್ಲಾ ಬಡ್ಜೆಟ್ ಆಗೋದಿಲ್ಲಾ ಅಂತಾರೋ ಅಂತೆಲ್ಲಾ ಯೋಚ್ನೆ ತಲೇಲಿ ರೌಂಡ್ಸ್ ಹೊಡೀತಿತ್ತು, ಒಂದೆರೆಡು ನಿಮಿಷ ಅವರು ಏನೇನೋ ಲೆಕ್ಕಾಚಾರ ಹಾಕಿ, ಸರಿ ಮಾಡೋಣ ಮಂಸೋರೆ. ಸಧ್ಯಕ್ಕೆ ನನಗೆ ಒಬ್ಬನಿಗೇ ಅಷ್ಟು ಬಡ್ಜೆಟ್ ಅರೇಂಜ್ ಮಾಡೋದಿಕ್ಕಾಗೋದಿಲ್ಲಾ, ಒಂದಿಬ್ಬರು ಕೋ ಇನ್ವೆಸ್ಟರ್ಸ್ ನ ನಾನು ಹುಡುಕ್ತೀನಿ, ಪ್ರೊಡ್ಯೂಸರ್ ನಾನೇ ಇರ್ತೀನಿ.

ಈ ಸಿನೆಮಾ ಮಾಡೋಣ. ನನಗೊಂದು ರಫ್ ಬಡ್ಜೆಟ್ ಕಳಿಸಿ, ಅಂತ ಹೇಳಿದ್ರು. ನನಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಗಾದೆ ಮಾತೇ ನೆನಪಾಗ್ತಿತ್ತು. ಅಷ್ಟೊಂದು ಖುಷಿ, ಮೊದಲ್ನಏ ಮೀಟಿಂಗ್ ಅಲ್ಲೇ ಪ್ರೊಡ್ಯೂಸರ್ ಓಕೆ ಅನ್ನೋದಕ್ಕಿಂತ ಡೈರೆಕ್ಟರ್ಗೆ ಇನ್ನೇನು ಬೇಕು.

ಇಪ್ಪತ್ತೈದು ರಿಟರ್ನ್ ಪ್ಲಾನು ಏನು ಅಂತ ಕೇಳಿದ್ರು, ಸಾರ್, ಇಂಡಿಯಾದಲ್ಲಿ ನಡೆಯೋ ಐದು ಫಿಲಂ ಫೆಸ್ಟಿವಲ್ ಇದೆ, ಆ ಫೆಸ್ಟಿವಲ್ ಸೆಲೆಕ್ಟ್ ಆದ್ರೆ ನಿರ್ಮಾಪಕರಿಗೆ ಹದಿನೆಂಟು ಬರುತ್ತೆ, ಅದರ ಜೊತೆಗೆ ಟಿವಿ ರೈಟ್ಸ್ ಇಲ್ಲಾ ಆನ್ಲೈನ್ ರೈಟ್ಸ್ ಸೇಲ್ ಮಾಡಿದ್ರೆ ಉಳಿದ ಆರು ಬರುತ್ತೆ ಸಾರ್, ಬರೀ ಮಲ್ಟಿಪ್ಲೆಕ್ಸ್ ಅಲ್ಲಿ ಒಂದೆರೆಡು ಸ್ಕ್ರೀನ್ ಅಲ್ಲಿ ರಿಲೀಸ್ ಮಾಡಿದ್ರೆ, ಅಲ್ಲೂ ಸ್ವಲ್ಪ ದುಡ್ಡು ಬರಬಹುದು ಸಾರ್. ಅಂತ ಒಂದೇ ಉಸಿರಿಗೆ ಹೇಳಿದೆ.

ಅವರು ಸರಿ ಮಂಸೋರೆ, ನೀವು ಬಡ್ಜೆಟ್ ಕಳಿಸಿ, ನಾನು ಕೋ ಇನ್ವೆಸ್ಟರ್ಸ್ನ ಹುಡುಕ್ತೀನಿ. ನೆಕ್ಸ್ ಮೀಟಿಂಗಲ್ಲಿ ಉಳಿದ ಡೀಟೈಲ್ಸ್ ಮಾತಾಡೋಣ. ಈ ಸಿನೆಮಾ ನಾನು ಮಾಡೇ ಮಾಡ್ತೀನಿ ಅಂತ ಹೇಳಿ ಮತ್ತೊಂದು ಟೀ ಕೊಡ್ಸಿ ಕಳಿಸಿದ್ರು.

ನಾನು ಮನೆಗೆ ಬರ್ತಾ ಇದ್ದಿದ್ದು ಕೈನೆಟಿಕ್ ಗಾಡಿಯಲ್ಲಿ ಆದರೆ ಮನ್ಸು ದೇಹ ಆಕಾಶದಲ್ಲಿ ಹಾರಾಡುವಷ್ಟು ಗೆಲುವಾಗಿತ್ತು, ಇಷ್ಟು ಬೇಗ ಪ್ರೊಡ್ಯೂಸರ್ ಸಿಕ್ಕಿದ್ದರ ಫಲಿತಾಂಶ ಅದು. ಗಾಡಿಯಲ್ಲಿ ಬರ್ತಾ ಇದ್ದಂಗೆ ಸಂಧ್ಯಾ ಮೇಡಂಗೆ ಕಾಲ್ ಮಾಡಿ ಖುಷಿ ಹಂಚಿಕೊಂಡು, ಬಂದು ನಾಗೇಂದ್ರ ಅವರಿಗೂ ಹೇಳಿ ಅವರ ಅಕೌಂಟಲ್ಲೇ ಟೀ ಕುಡಿದು ಮನೆ ಸೇರಿದೆ.

ನನ್ನ ಮನಸ್ಸೆಲ್ಲಾ ಮುಂದೆ ಶೂಟಿಂಗ್ ಬಗ್ಗೆ ಕನಸು ಕಾಣೋದ್ರಲ್ಲೆ ಕಳೆದುಹೋಗಿತ್ತು. ರಾತ್ರಿ ಎಲ್ಲಾ ಕೂತು, ಹಿಂದೆ ಮುಂದೆ ಮಾಡಿ, ಅಲ್ಲಿ ಕಟ್ ಮಾಡಿ, ಇಲ್ಲಿ ಸೇರಿಸೋದು, ಇಲ್ಲಿ ಕಟ್ ಮಾಡಿ ಅಲ್ಲಿ ಸೇರಿಸಿ ಕೊನೆಗೂ ಇಪ್ಪತ್ತೈದು ಲಕ್ಷಕ್ಕೆ ಬಡ್ಜೆಟ್ ರೆಡಿ ಮಾಡಿ, ನಿರ್ಮಾಪಕರಿಗೂ ಕಳಿಸಿ ಮಲಗುವ ವೇಳೆಗೆ ಬಹುತೇಕ ಮುಂಜಾವಾಗಿತ್ತು.

ಆದರೆ ಆ ಖುಷಿ ಮೂರು ನಾಲ್ಕು ದಿನಗಳ ನಂತರದ ಅದೇ ನಿರ್ಮಾಪಕರ್ ಭೇಟಿಯವರೆಗೆ ಮಾತ್ರ ಎಂಬ ಸಣ್ಣ ಅರಿವೂ ಇರಲಿಲ್ಲಾ.

‍ಲೇಖಕರು ಮಂಸೋರೆ

October 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: