ಭಾಷೆ ಆಡು ಮಾತಿನಲ್ಲಿದ್ದರೆ ಸಾಲದು, ಬರೆಹದಲ್ಲೂ ಇರಬೇಕು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

”ಬರೆಯಿರಿ” ದಿನಕ್ಕೆ ಹತ್ತು ಸಾಲನ್ನಾದರೂ “ಬರೆಯಿರಿ” – ಇದು ಕೂಗು, ಅದರಲ್ಲೂ ಕನ್ನಡದ ಕೂಗು. ಭಾಷೆ ಆಡು ಮಾತಿನಲ್ಲಿದ್ದರೆ ಸಾಲದು, ಬರೆಹದಲ್ಲೂ ಇರಬೇಕು.

ಜೊತೆಗೆ ಈಗಿನ ಡಿಜಿಟಲ್ ಕಾಲದಲ್ಲಿ “ಕಂಪ್ಯೂಟರ್, ಮೊಬೈಲ್” ಇತ್ಯಾದಿಗಳ ಮೂಲಕ ಜಗತ್ತಿನ ಎಲ್ಲೆಡೆಗೆ ಕನ್ನಡದ ಕಂಪು ಹರಿಸುವಲ್ಲಿ ಸಫಲವಾಗುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ, ಬ್ಲಾಗ್‌ಗಳಲ್ಲೂ ಕನ್ನಡವನ್ನು ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕೆ ಕಾಲಕ್ಕೆ ತಕ್ಕಂತೆ ಅವಶ್ಯ ಕಲಿಕೆಯೂ ಅಗತ್ಯವಿದೆ. ನಾವು ಇದರಲ್ಲಿ ಹಿಂದೆ ಬಿದ್ದಿದ್ದೇವೆಯೇ ಎಂಬ ಪ್ರಶ್ನೆಯೇ ಈ ಲೇಖನದ ಮುಖ್ಯಾಂಶ. 

ಹೌದು, ‍ಕಲಿಕೆಯಲ್ಲಿ ಭಾಷೆಯ ಮಟ್ಟಿಗೆ ಹಾಗೂ ತಂತ್ರಜ್ಞಾನದ ಹೊತ್ತಿಗೆ ನಾವು ಬಹಳ ಹಿಂದೆ ಬಿದ್ದಿದ್ದೇವೆ. ಇದು ನನ್ನನ್ನು ಕಾಡಿದ, ಕಾಡುತ್ತಿರುವ ವಿಷಯ. ಕನ್ನಡದ ಕಡತಗಳು ಇಂದಿಗೂ ಆಸ್ಕಿ(‌ASCII) ಫಾರ್ಮ್ಯಾಟ್‌ನಲ್ಲಿ ಸಿದ್ಧಗೊಳ್ಳುತ್ತಿವೆ. ಇದನ್ನು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಶೇಕಡಾ ೯೦ಕ್ಕೂ ಹೆಚ್ಚು ಮಂದಿ ಹೇಳುವುದು “ನುಡಿಯಲ್ಲಿ ಟೈಪಿಸಿದ್ದೇವೆ” ಎಂದು.

ಇಲ್ಲಿ ಮೊದಲಿಗೆ ನಾವು ಎರಡು ತಪ್ಪನ್ನು ಮಾಡುತ್ತಿದ್ದೇವೆ. ಒಂದು – ನುಡಿ ತಂತ್ರಾಂಶ ಏನು ಎಂದು ಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಇರುವುದು. ಎರಡು – ಕನ್ನಡ ಟೈಪಿಸಲು ಏನು ಬೇಕು ಹಾಗೂ ಅದನ್ನು ಪಡೆದುಕೊಳ್ಳುವುದು ಹೇಗೆ ಎಂದು ತಾಂತ್ರಿಕವಾಗಿ ತಿಳಿಯದೇ ಕೆಲಸ ಮಾಡುವುದು. 

ನುಡಿ ತಂತ್ರಾಂಶ ಕನ್ನಡವನ್ನು ಕಂಪ್ಯೂಟರಿನಲ್ಲಿ ಮೂಡಿಸಲು ನಮಗೆ ಅವಶ್ಯಕವಾದ ಫಾಂಟುಗಳನ್ನು, ಕೀಬೋರ್ಡ್ ವಿನ್ಯಾಸದ ಲೇಔಟ್‌ಅನ್ನು, ಜೊತೆಗೆ ನೇರವಾಗಿ ಕನ್ನಡದ ಕಡತಗಳನ್ನು ಸಿದ್ಧ ಪಡಿಸಲು ಅಗತ್ಯವಿರುವ ತಂತ್ರಾಂಶವನ್ನೂ ಜೊತೆಗೆ ನೀಡಿತು. ಇದರಲ್ಲಿ ಕನ್ನಡ ಟೈಪಿಸುವ ಕ್ರಿಯೆಯನ್ನು ನುಡಿಯಲ್ಲಿ ಟೈಪಿಸುವುದು ಎಂದದ್ದಾಯಿತು.

ಆದರೆ ಇದೊಂದೇ ಕನ್ನಡ ಟೈಪಿಸಲು ಇದ್ದ ಸಾಧ್ಯತೆ ಆಗಿರಲಿಲ್ಲ. ಕಾಲಕಾಲಕ್ಕೆ ಬಂದ ಇತರೆ ತಂತ್ರಾಂಶಗಳು, ಸೌಲಭ್ಯಗಳು “ನುಡಿ ಟೈಪಿಸುವದರಲ್ಲಿ” ಮರೆಯಾದವು.  

ನಂತರದ ದಿನಗಳಲ್ಲಿ – ಕನ್ನಡ ಭಾಷಾ ತಂತ್ರಜ್ಞಾನದ ಜಾಗತಿಕ ಬೆಳವಣಿಗೆಗೆ ಅವಶ್ಯವಿರುವ ಯುನಿಕೋಡ್ ಬಳಕೆಯ ಬಗ್ಗೆ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಅಂದಿನ ಕಾಲದ ಡಿಟಿಪಿ ಇತರೆ ತಂತ್ರಾಂಶಗಳಲ್ಲಿ ಯುನಿಕೋಡ್ ಬೆಂಬಲ ಕನ್ನಡಕ್ಕೂ ಸಿಗುವಂತೆ ಒತ್ತಾಯಿಸದೆ, ಕೇವಲ ಸರ್ಕಾರೀ ಕಡತಗಳಲ್ಲಿ “‌UNICODE” ಎನ್ನುವ ಇಂಗ್ಲೀಷ್ ಪದ ಪೆಡಂಬೂತವಾಗಿ ಓಡಾಡಿ, ಹೊರಾಡಿ ಕಡೆಗೆ ಸರ್ಕಾರೀ ಆದೇಶಗಳು ದಿನನಿತ್ಯ ಟೈಪ್ ಆಗುವೆಡೆಗೆ ಬರುವಷ್ಟರಲ್ಲಿ ಲಕ್ಷಾಂತರ/ಕೋಟ್ಯಾಂತರ ಕನ್ನಡ ಕಡತಗಳು ಹಳೆಯ ಆಸ್ಕಿ ಫಾಂಟುಗಳಲ್ಲೇ ಟೈಪ್ ಆಗಿ ಹೋಗಿವೆ, ಈಗಲೂ ಟೈಪ್ ಆಗುತ್ತಲೇ ಇವೆ.

ಇದು ಸರ್ಕಾರದ ಕಡತಗಳ ಕಡೆ ಅಷ್ಟೇ ಆಗಿದ್ದರೆ ಒಂದಷ್ಟು ಸಮಾಧಾನ ಪಟ್ಟುಕೊಳ್ಳಬಹುದಿತ್ತು, ಆದರೆ ಇದು ಇಲ್ಲಿಗೇ ನಿಲ್ಲದೆ ದಿನಬೆಳಗೆದ್ದರೆ ನಾವು ಓದುವ ಪತ್ರಿಕೆ, ಪುಸ್ತಕಗಳು ಇತ್ಯಾದಿಗಳ ಆಂತರ್ಯವನ್ನು ಸೃಷ್ಟಿಸುವ ತಂತ್ರಾಂಶಗಳ ಒಡಲನ್ನು ತುಂಬಿಯೂ ಆಗಿತ್ತು. ಯುನಿಕೋಡ್ ಇಲ್ಲಿ ಮೊಳೆಯಲೇ ಇಲ್ಲ. ಪ್ರಜಾವಾಣಿ ಪತ್ರಿಕೆ ಬಿಟ್ಟರೆ ಡೆಸ್ಕ್ ನಿಂದ ಪ್ರಿಂಟ್‌ಗೆ ಯುನಿಕೋಡ್ ಬಳಸುತ್ತಿದ್ದೇವೆ ಎಂದು ಹೇಳಿದವರೇ ಸಿಗಲಿಲ್ಲ.

ಇತ್ತೀಚಿನ ಕೆಲವರು ಪುಸ್ತಕಗಳನ್ನು ಪ್ರಿಂಟ್ ಮಾಡಲು ಯುನಿಕೋಡ್ ಬಳಸುತ್ತಿರುವುದನ್ನು ಹೇಳಿದರಷ್ಟೇ ನಾವು ಹಳೆಯ ವ್ಯವಸ್ಥೆಗಳನ್ನು ಬಿಟ್ಟು ಜಾಗತಿಕ ಶಿಷ್ಠತೆಗಳನ್ನು ನಮ್ಮ ದಿನನಿತ್ಯದ ಕೆಲಸಗಳಲ್ಲಿ ಬಳಸಲು ಸಾಧ್ಯ ಎಂದು ಅರಿವಿಗೆ ಬರುವುದು. ಫಾಂಟುಗಳ ಕೊರತೆ ಇದೆ ಸರಿ, ಯಾರು ಯಾರಿಗೆ ಕೇಳಿ ಫಾಂಟು ಪಡೆದರು ಎಂಬ ಪ್ರಶ್ನೆಗೆ ಎಲ್ಲರೂ ಹಾಕಿಕೊಳ್ಳುವುದು ಉತ್ತಮ. ಇದಕ್ಕೆ ನನ್ನ ಉತ್ತರ ಬರೆಯುವುದನ್ನು ಮುಂದಿನ ಲೇಖನಕ್ಕೆ ಉಳಿಸಿಕೊಳ್ಳುತ್ತೇನೆ. 

ಇಷ್ಟೆಲ್ಲಾ ರಗಳೆಯ ವಿಷಯವಿದು, ಈ ಲೇಖನವನ್ನು ನೀವು ಈಗ ಓದುತ್ತಿದ್ದರೆ (ಮೊಬೈಲ್‌ನಲ್ಲಿ, ಕಂಪ್ಯೂಟರಿನಲ್ಲಿ ಇತ್ಯಾದಿಗಳಲ್ಲಿ) ಇದು ಯುನಿಕೋಡ್‌ನಲ್ಲಿ ಟೈಪ್ ಆದ ಮಾಹಿತಿ. ನೀವು ಕನ್ನಡದಲ್ಲೇ ನಿಮ್ಮ ಮೊಬೈಲ್ ಮೂಲಕ ಬರೆಯುತ್ತಿದ್ದರೆ ಅದು ಸಾಧ್ಯ ಆಗಿದ್ದು ಯುನಿಕೋಡ್‌ನಲ್ಲಿ. ಇದನ್ನು ಪ್ರಿಂಟ್ ಮಾಡಬಹುದು, ಹಂಚಿಕೊಳ್ಳಬಹುದು. ನಿಮ್ಮ ವಿದೇಶದ ಗೆಳೆಯರೂ ನೇರ ನೋಡಬಹುದು.

– ಹೀಗೆ ಸುಲಭವಾಗಿ ಸಾರಿ ಸಾರಿ ಹೇಳಬಹುದಿತ್ತು. ಕಾಲ ಮೀರಿದೆ. ಆದರೆ ಹಳೆಯ ಆಸ್ಕಿ ಫಾಂಟುಗಳು ಔಟ್‌ಡೇಟೆಡ್ ಆಗಿಲ್ಲ, ಬಳಕೆ ನಿಂತಿಲ್ಲ, ಪರ್ಯಾಯ ಫಾಂಟುಗಳು ಸಿದ್ಧವಿಲ್ಲ… ಇದ್ದರೂ ಅದರ ಮಾಹಿತಿಯ ಮುಕ್ತ ಹಂಚಿಕೆ ಇಲ್ಲ. ಅಡೋಬ್ ನಂತಹ ಕಂಪೆನಿಗಳು ತಮ್ಮ ತಂತ್ರಾಂಶಗಳಲ್ಲಿ ಕನ್ನಡ ಮೂಡಿಸಲು ಅವರದ್ದೇ ಫಾಂಟುಗಳನ್ನು ಸಿದ್ಧ ಪಡಿಸಿದ್ದರೂ, ನಾವು ಅವುಗಳನ್ನು ಬಳಸಲು ಸಿದ್ಧವಿಲ್ಲ.

– ಕಾರಣ ಅದಕ್ಕೆ ಕೊಡಬೇಕಿರುವ ಲೈಸೆನ್ಸ್ ಫೀ/ತಿಂಗಳ ಬಾಡಿಗೆ. ಏಕೆ ಎಂದರೆ – ಎಡಿಟಿಂಗ್ ಇತ್ಯಾದಿಗಳನ್ನು ಪೈರೇಟೆಡ್ ಅಥವಾ ಹಳೆಯ ತಂತ್ರಾಂಶಗಳಲ್ಲಿ ಸಿದ್ಧ ಮಾಡುವುದು ಅಭ್ಯಾಸ ಆಗಿಹೋಗಿದೆ. ‍ಇದರಿಂದ ಎಡಿಟಿಂಗ್/‌ಪ್ರೂಫ್‌ರೀಡಿಂಗ್ ಕೆಲಸಗಳ ಸಂಭಾವನೆಯೂ ಅಷ್ಟಕಷ್ಟೇ – ಈ ಕೆಲಸಗಳನ್ನು ತಾಂತ್ರಿಕವಾಗಿ ಸಾಧ್ಯವಾಗಿಸಲು ಕನ್ನಡದಲ್ಲೇ ಸಾಧ್ಯತೆಗಳನ್ನು ಹುಡುಕಿದರೆ, ಅದನ್ನು ಕೊಂಡು ಬಳಸುವುದು (ನಮ್ಮ ಜನ) ನಿಜವಾ ಎಂಬ ಪ್ರಶ್ನೆ ಹತ್ತಾರು ಜನ ಮೊದಲ ದಿನದಲ್ಲೇ ಕೇಳಿದ್ದೂ ಇದೆ.

ನಾವು ಕಲಿಯುತ್ತೇವೆಯೇ? 

‌ಮುಂದುವರೆಯುತ್ತದೆ…. 

#piracy #standards #security #job #opportunity #kannada #startup 

‍ಲೇಖಕರು ಓಂಶಿವಪ್ರಕಾಶ್

October 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Nagesh Kumar CS

    ಬಹಳ ಸಮಯೋಚಿತವಾಗಿ ಬರೆದಿದ್ದೀರಿ. ಆಸ್ಕಿ ವ್ಯವಸ್ಥೆ ‌‌ಇದೀಗ ನುಡಿ, ೬.೦ ರಲ್ಲಿ ತೆಗೆದುಹಾಕಿ ಪೂರ್ತಿ ಯುನಿಕೋಡ್ ಮಾಡಿದ್ದರಿಂದ ಅದರ ಬಳಕೆದಾರರಿಗೆ ೫.೦ ನುಡಿ ನಾ ಅಥವಾ ೬.೦ ನುಡಿನಾ ಎಂದು ಯೋಚಿಸುವಂತಾಗಿದೆ… ಎಲ್ಲ ದುಡುಕಿ ಮಾಡಿದುದರ ಫಲ, ಯುನಿಕೋಡ್ ಪ್ರಿಂಟ್ ಮಾಧ್ಯಮದಲ್ಲಿ ಪೂರ್ಣವಾಗಿ integrate ಆಗಲೇ ಇಲ್ಲ..

    ಪ್ರತಿಕ್ರಿಯೆ
  2. ಎನ್ ಆರ್ ವಿಶುಕುಮಾರ್

    ನಿಜ. ಓಂ ಪ್ರಕಾಶ್ ದಣಿವರಿಯದ ಕನ್ನಡ ಪ್ರೇಮಿ. ಎಲೆ ಮರೆಯ ಹಣ್ಣಿನಂತೆ ಇರುವ ಅವರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: