ಸುಮಾ ಆನಂದರಾವ್‌ ಸರಣಿ 2 – ಯೂರೋಪಿನ ಕಥನದ ಮತ್ತೊಂದು ಅದ್ಯಾಯ…

ಸುಮಾ ಆನಂದರಾವ್‌

2

ಜೆಕ್  ರಿಪಬಲಿಕ್ ದೇಶದ ರಾಜಧಾನಿಯಾದ ಪ್ರಾಗ್ ಯೂರೋಪಿನ ಪ್ರಮುಖ ಆಕರ್ಷಣೀಯ ನಗರಗಳಲ್ಲೊಂದು. ಪ್ರಾಗ್ ನ ಐತಿಹ್ಯಗಳು ಶ್ರೀಮಂತಭರಿತವಾಗಿವೆ. ಹಾಗಾದರೆ ವೈಟವ ನದಿ ತೀರದ ಈ ನಾಡಿನ ಗತಕಾಲಕ್ಕೊಮ್ಮೆ ಇಳಿದು, ವಾಸ್ತವದ ಅನುಭವವನ್ನು ಹೊಂದಿ ಬರಲು ಹೋಗೋಣವೆ?

ಬರ್ಲಿನ್ ನ್ನಿಂದ ಬಸ್ಸಿನಲ್ಲಿ  ಸುಮಾರು4ಗಂಟೆ  ಪಯಣಿಸಿದ ನಂತರ ಪ್ರಾಗ್ ಸಿಗುತ್ತದೆ ಎಂಬ ಸಂತಸದ ಜೊತೆ bus stand ಗೆ ಹೊರೆಟೆವು. ಒಂದು ನಿಮಿಷವೂ ತಡವಿಲ್ಲದಂತೆ ಸಮಯಕ್ಕೆ ಸರಿಯಾಗಿ ಬಸ್ ಬಂದು ನಿಂತಿತು. ಅದಾಗಲೇ ಸಿರಿ ಬಸ್ ವರ್ಣನೆ ಮಾಡಿದ್ದಳು. ಇದು ವಿಮಾನವೋ ಬಸ್ಸೋ ಎಂಬ ಅನುಮಾನ ಅಷ್ಟೊಂದು ಸುಸಜ್ಜಿತವಾಗಿತ್ತು. ಸೊಗಸಾದ ಆಸನಗಳು ತಲೆ, ಕಾಲುಗಳಿಗೆ ಆರಾಮ ನೀಡಲು ವ್ಯವಸ್ಥೆ , ಮುಂದಿನ ಸೀಟಿನ ಹಿಂಭಾಗಕ್ಕೆ ಟಿ. ವಿ ಸ್ಕ್ರೀನ್, ಯತೇಚ್ಛವಾಗಿ ವೈ , ಫೈ ಆಗಾಗ ಜ್ಯೂಸ್ ವಿತರಣೆ  ಬಾಗಿಲ ಹಿಂಭಾದಲ್ಲಿ  rest room. ಹೀಗೆ ವಿಮಾನದಲ್ಲಿರುವ ಎಲ್ಲ ಸವಲತ್ತುಗಳು ಇವೆ.

ಡಿಸೆಂಬರ್ ತಿಂಗಳ ಚಳಿಗಾಲ. ಸಂಜೆ ನಾಲ್ಕು ಗಂಟೆಗೆಲ್ಲ ಕತ್ತ ಲಾಗುತ್ತಿತ್ತು. ಈ ದೇಶದಲ್ಲಿ ಸೂರ್ಯ ಚಳಿಗಾಲದಲ್ಲಿ ಹೊದ್ದು ಮಲಗಿರುತ್ತಾನೆ. ಆಗೊಮ್ಮೆ ಈಗೊಮ್ಮೆ ಇಣುಕಿದರೆ ಸಂಭ್ರಮವೋ ಸಂಭ್ರಮ. ಅಷ್ಟರಲ್ಲಿ ಮತ್ತೆ ಮರೆಯಾಗುತ್ತಾನೆ. ಈ ಕಣ್ಣಾಮುಚ್ಚಾಲೆ ಆಟವೇ ಪ್ರಕೃತಿಯ ವಿಚಿತ್ರ.

ಒಂದೇ ಹದದಲ್ಲಿ ಸಾಗುತ್ತಲಿದೆ ಬಸ್ಸು ವಿಶಾಲವಾದ ರಸ್ತೆಗಳು , ತಣ್ಣಗೆ ಮೈ ಕೊರೆವ ಚಳಿ, ಇನ್ನು ಮಂಜಿನ ಸಿಂಚನವಾಗಿರಲಿಲ್ಲ. ಅಲ್ಲೆಲ್ಲೋ ದೂರದಲ್ಲಿ ಎಲೆ ಉದುರಿ ನಿಂತ ಗಿಡಗಳ ಮೇಲೆಶ್ವೇತ ವರ್ಣ ಮಸುಕು ಮಸುಕಾಗಿ ಕಂಡ ಹಾಗಾಗುತ್ತಿತ್ತು. ನಾಲ್ಕು ಗಂಟೆ ಪಯಣಿಸಿದ ನಂತರ ಪ್ರಾಗ್ ಸೇರಿದೆವು. ಅಲ್ಲಿಂದ ಎರೆಡು ನಿಮಿಷ ನಡೆದು ನಾವು ಮೊದಲೇ ನಿಗದಿಸಿದ ಬಿ ಅಂಡ್ ಬಿ ತಲುಪಿದೆವು. ಇದೊಂದು ಬಗೆ ಪುಟ್ಟ ಮನೆಯೆಂದೇ ಹೇಳಬಹುದು ಮೂರೂ ಬೆಡ್ ರೂಮ್, ಎಲ್ಲ ರೂಮ್ನಲ್ಲೂ ಟಿ ವಿ ಗಳು ಅಡುಗೆ ಮನೆ ಅಗತ್ಯ ವಸ್ತುಗಳನ್ನು ಇಟ್ಟಿದ್ದರು. ಪೂರ್ತಿ ಮನೆ ರೂಮ್ ಹೀಟರ್ ನ ಕೃಪೆಯಿಂದ ಬೆಚ್ಚಗೆ ಇತ್ತು. ಬೆಳಿಗ್ಗೆ ಎದ್ದು ತಿಂಡಿ ತಯಾರಿಸಿ ತಿಂದು ಪ್ರಾಗ್ ನೋಡಲು ಹೊರೆಟೆವು.

ಮಧ್ಯ ಯುರೋಪಿನಲ್ಲಿರುವ ಪ್ರಾಗ್ ಸುಂದರ, ಐತಿಹಾಸಿಕ ಹಾಗು ಪುರಾತನ  ನಗರ. ಜೆಕ್ ರೆಪಬಲಿಕ್ ನ ರಾಜಧಾನಿ. ಮಧ್ಯ ಯೂರೋಪಿನ ಪ್ರಸಿದ್ಧ ವ್ಯಾಪಾರ ಸ್ಥಳವಾಗಿದೆ. ಯುನೆಸ್ಕೊ ಇಂದ ವಿಶ್ವ ಪಾರಂಪರಿಕ ಕೇಂದ್ರ ಎಂದು ಕರೆಯಲ್ಪಟ್ಟಿದೆ. ನಗರದ ಮಧ್ಯ ವೈಟವ ನದಿ ಹರಿಯುತ್ತದೆ. 14 ನೇ ಶತಮಾನದಲ್ಲಿ ರೋಮ್ ಚಕ್ರಾಧಿಪತಿಗಳ ರಾಜಧಾನಿಯಾಗಿತ್ತು.

ನಾಲ್ಕನೇ ಜಾರ್ಜ್ ನ ಕಾಲದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿತ್ತಂತೆ. ಬಹೆಮಿಯನ್ ಹಾಗು ಪ್ರೊಟೆಸ್ಟೆಂಟ್ ರೆಫಾರ್ಮಶನ್ ಗಳಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ಸುಂದರ ಕಲಾಕೃತಿಗಳಿಂದ, ವಸ್ತುಸಂಗ್ರಹಾಲಯಗಳಿಂದ ತುಂಬಿ ತುಳುಕುತ್ತಿದೆ. ಪ್ರತಿ ವರ್ಷವೂ ೮.೫ ಮಿಲಿಯನ್ ದೇಶವಿದೇಶದ ಜನರನ್ನು ಆಕರ್ಷಿಸುತ್ತಿದೆ. ಚಾರ್ಲ್ಸ್ ಸೇತುವೆ ಕಟ್ಟಿರುವ  ವೈತಾವ ನದಿಯು ಪ್ರಾಗ್ ನ  ಮದ್ಯ ಪ್ರವಹಿಸುತ್ತದೆ. 

1357 ರಲ್ಲಿ ನಾಲ್ಕನೇ ಚಾರ್ಲ್ಸ್ ಕಾಲದಲ್ಲಿ ಪ್ರವಾಹದ ಹಾನಿಗೆ ಒಳಗಾದ ಸೇತುವೆಯನ್ನುಮತ್ತೆ  ಕಟ್ಟಲಾಯಿತು.  15 ನೇ ಶತಮಾನದ ಪ್ರಾರಂಭದಲ್ಲಿ ಮುಗಿಯಲ್ಪಟ್ಟಿತು. 621 ಮೀಟರ್ ಉದ್ದ 10 ಮೀಟರ್ ಅಗಲ ಹೊಂದಿದ ಕಲ್ಲಿನ ಸೇತುವೆಯು 16 ಕಮಾನುಗಳಿಂದ ಮಾಡಲ್ಪಟ್ಟಿದೆ. ಖ್ಯಾತ ಶಿಲ್ಪಿಗಳು ಇದರ ಎರೆಡು ಬದಿಯ ತಡೆಗೋಡೆಯ ಮೇಲೆ 30 ವಿವಿಧ ಬಗೆಯ ಸುಂದರ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ಈ ವಿಗ್ರಹಗಳು ಹಲವಾರು ಬಾರಿ ಪ್ರವಾಹಕ್ಕೆ ತುತ್ತಾದ್ದರಿಂದ ಕೆಲವನ್ನು ವಸ್ತು ಸಂಗ್ರಹಾಲಯಗಳಿಗೆ ಸಾಗಿಸಿದರು ಪ್ರತಿರೂಪಗಳನ್ನು  ನಿರ್ಮಿಸಿದ್ದಾರೆ.

ಎಷ್ಟು ಸುಂದರವಾದ ಸ್ಥಳವೆಂದರೆ ನಾವೇ ಆ ಕಾಲದಲ್ಲಿ ಇದ್ದೇವೇನೋ ಎಂಬ ಭ್ರಮೆ ಉಂಟುಮಾಡುತ್ತವೆ. ಕೋಟೆಯ ವೀಕ್ಷಣೆಗೆ ಸೇತುವೆಯನ್ನು  ಹಾದೇ ಹೋಗಬೇಕು. ಚಳಿಗಾಲವಾದರೂ ನದಿಯಲ್ಲಿ ನೀರಿಗೇನು ಕಡಿಮೆ ಇರಲಿಲ್ಲ. ಇನ್ನು ಬೇಸಿಗೆಯಲ್ಲಿ ಹಿಮ ಕರಗಿ ತುಂಬಿ ಹರಿಯುತ್ತಿತ್ತು. ಸೇತುವೆಯು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಅಲ್ಲಲ್ಲಿ ಸುಂದರ  ವಿಗ್ರಹಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸುವವರು, ಸುಂದರ ನದಿ, ಬೆಟ್ಟದ ಮೇಲೆ ಭವ್ಯವಾದ ಅರಮನೆ, ಆಹಾ ಎಂಥ ಸೌಂದರ್ಯ! ರಾತ್ರಿಯಲ್ಲೊಂತು ದೀಪದ ಬೆಳಕು ಕಣ್ಣು ಕೋರೈಸುತ್ತದೆ.

Prague Castle : ಭವ್ಯವಾದ ನಲವತ್ತೈದು ಎಕರೆಯಷ್ಟು ವಿಸ್ತೀರ್ಣಗೊಂಡ ಈ ಸ್ಥಳವನ್ನು ಸೇರಲು ಸುಮಾರು ಎರೆಡು ಗಂಟೆ ನಡೆದೇ ಸಾಗಬೇಕು.ಇಲ್ಲಿಯ ಒಂದು ವಿಶೇಷವೆಂದರೆ ಪುರಾತನವಾದ ವಿವಿಧ ವಿನ್ಯಾಸದ ಕಾರುಗಳನ್ನು ಅಲಂಕಾರ ಮಾಡಿ ಅವುಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಕರೆದೊಯ್ಯುತ್ತಿದ್ದರು.ಆದರೆ ನಡೆದೇ ನೋಡಿದರೆ ಅದರ ಮಜವೇ ಬೇರೆ. ಹಾಗೆ  ಸಾಗಿದಾಗ ಕೋಟೆ ಸಿಗುವವರೆಗೂ ವಿಶಾಲವಾದ ಮೆಟ್ಟಿಲುಗಳು, ಅಲ್ಲಲ್ಲಿ ಇಳಿಜಾರುಗಳು, ದೂರದಿ ಸೇತುವೆಯ ಸುಂದರವಾದ ದೃಶ್ಯ ಅದ್ಭುತ. ಹಳೆಊರಿಗೂ Castle ಗು ಮಧ್ಯೆ ಸೇತುವೆ ಸಂಪರ್ಕ ಕಲ್ಪಿಸುತ್ತದೆ.

820 A.D ರಲ್ಲಿ ಒಂದು ಸಣ್ಣ ಚರ್ಚನ್ನು ಕಟ್ಟುವ ಮೂಲಕ ಪ್ರಾರಂಭವಾಗಿ 14 ಶತಮಾನದಲ್ಲಿ ನಾಲ್ಕನೇ ಚಾರ್ಲ್ಸ್ ದೊರೆಯ ಕಾಲದಲ್ಲಿ  ಗೋಧಿಕ್ ಶೈಲಿಯಲ್ಲಿ ಅರಮನೆಯ ನಿರ್ಮಾಣ ಪೂರ್ಣಗೊಂಡಿತು. 30 ವರ್ಷಗಳ ಕಾಲ ನಡೆದ ಸ್ವೀಡಿಷ್ ಯುದ್ಧಗಳಲ್ಲಿ ಬಹಳಷ್ಟು ನಾಶ ಹೊಂದಿ  14 ನೇ ಶತಮಾನದಲ್ಲಿ ಮರೆಯ ತೆರೇಸಾ ಪುನರ್ ನಿರ್ಮಾಣ ಮಾಡಿದಳು. ಒಳಗಡೆ ಬೃಹತ್ ಚರ್ಚ್, ಬೇಸಿಗೆ ಅರಮನೆ ಮೂರು ಚಿಕ್ಕ ಅರಮನೆಗಳು,ಬೇಸಿಗೆ ಅರಮನೆಯಲ್ಲಿ ಎತ್ತರವಾದ ಹಜಾರ, ಕೆತ್ತನೆಗಳು ಬಂಗಾರದ ಬಣ್ಣದಿಂದ ಕೂಡಿದ್ದು ಎಲ್ಲರನ್ನು ಮಂತ್ರಮುಗ್ದರನ್ನಾಗಿಸುತ್ತವೆ.

ಅರಮನೆಗೆ ಹೊಂದಿಕೊಂಡಂತೆ ರಾಯಲ್  ಉದ್ಯಾನವನವಿದೆ.ಮುಖ್ಯದ್ವಾರದಲ್ಲಿ ಆಕರ್ಷಕ ಉಡಿಗೆ ತೊಟ್ಟ ಭದ್ರತಾ ಯೋಧರು ನಿಂತಿರುತ್ತಾರೆ. ಇವರು ಪ್ರತಿ ಗಂಟೆಗೊಮ್ಮೆ ಬ್ಯಾಂಡ್ ವಾದ್ಯದ ಪೆರೇಡಿನೊಂದಿಗೆ ಬದಲಾಗುತ್ತಿರುತ್ತಾರೆ. ಸುತ್ತಲೂ ಐದಾರು ಸುಂದರ  ಉದ್ಯಾನವನಗಳಿವೆ. ಕೋಟೆಯ ಉತ್ತರ ಭಾಗದಲ್ಲಿ ಗೋಲ್ಡನ್ ಲೇನ್ ಎಂದು ಕರೆಯಲ್ಪಡುವ ಸಣ್ಣ  ರಸ್ತೆಯ ಎರೆಡು ಬದಿ ರಾಜ ತಾಂತ್ರಿಕವರ್ಗದವರಿಗೆ ನಿರ್ಮಿಸಲ್ಪಟ್ಟ ಮನೆಗಳಿವೆ. ಆ ರಸ್ತೆಯಲ್ಲಿ ನಡೆಯುತ್ತಿದ್ದರೆ ನಾವೇ 15ನೇ ಶತಮಾನದಲ್ಲಿದ್ದಂತೆ ಭಾಸವಾಗುತ್ತದೆ. ಬಣ್ಣ ಬಣ್ಣದ ಮನೆಗಳನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. 

ಇದರ ಮದ್ಯೆ ಅಲ್ಲಲ್ಲಿ ಕ್ರಿಸ್ಮಸ್ ಮಾರ್ಕೆಟ್ಗಳು, ಚಳಿಗಾಲಕ್ಕೆ ರುಚಿಯಾದ ಹಂಗೇರಿಯ ತಿನಿಸುಗಳು,. ವಿಶೇಷವೆಂದರೆ ಬಹಳಷ್ಟು ಸಸ್ಯಾಹಾರಿ ತಿನಿಸುಗಳು ಸಿಗುತ್ತವೆ. ಪ್ರಾಗ್ ನಲ್ಲಿ  ಒಂದು ಬನ್ ಆಕಾರದ ತಿನಿಸನ್ನು ತಯಾರಿಸುವೆದೇ ಚೆನ್ನ. ಉದ್ದನೆಯ ಸಲಾಕೆಗಳಿಗೆ ಬಳೆ ಆಕಾರದಿ ಹಿಟ್ಟನ್ನು ಸುತ್ತಿ ಕೆಂಡದ ಮೇಲೆ ಸುಟ್ಟು ತಯಾರಿಸುವ ಸಿಹಿ ತಿನಿಸು ಬಹಳ ರುಚಿಯಾಗಿರುತ್ತದೆ . ಎಲ್ಲ ಕಡೆಯೂ ಇದರದೇ ಸಾಮ್ರಾಜ್ಯ.

ಯೂರೋಪಿನ ವಿಶೇಷವೇ ಹಾಗೆ ಒಂದೊಂದು ಸ್ಥಳಕ್ಕೆ ಅದರದೇ ಆದ ತಿನಿಸು ಇರುತ್ತದೆ. ಅದು ಮತ್ತ್ಯಾವ ಭಾಗದಲ್ಲೂ ಸಿಗಲಾರದು. ಆದರೆ ಕ್ರಿಸ್ಮಸ್ ಮಾರ್ಕೆಟ್ಟಲ್ಲಿ ಮಾತ್ರ ಅಂದರೆ ಆಸಮಯದಿ ಯೂರೋಪಿನ ಎಲ್ಲ ರೀತಿಯ ತಿನಿಸನ್ನು ಸವಿಯಬಹುದು. ಅಚ್ಚ ಬಿಳಿಯ ಬಟ್ಟೆಯಿಂದ ನಿರ್ಮಿಸಿದ ತಾತ್ಕಾಲಿಕ ಡೇರೆಗಳನ್ನು ನೋಡಿದರೆ ನಮ್ಮ ಜಾತ್ರೆ ನೆನಪಿಗೆ ಬರುತ್ತದೆ. ಅಲ್ಲಲ್ಲಿ ಮೇಲೆ ಕೆಳಗೆ ಸುತ್ತುವ ಬಣ್ಣ ಬಣ್ಣದ ತೊಟ್ಟಿಲುಗಳು, ಒಂದೇ ಎರೆಡೇ?

ಖಗೋಳಗಡಿಯಾರ : ಹಳೆ ನಗರದ ಸಿಟಿ ಹಾಲಿನ ದಕ್ಷಿಣ ಭಾಗದ ಗೋಡೆಗೆ ಅಳವಡಿಸಿರುವ ಈ ಗಡಿಯಾರವನ್ನು 1410ರಲ್ಲಿ ಜಾನ್ ರುಜೆ ಎಂಬುವವನು ನಿರ್ಮಿಸಿ ನಂತರ ಹಲವಾರು ಬಾರಿ ದುರಸ್ತಿ, ಮಾರ್ಪಾಡು ಮಾಡಲ್ಪಟ್ಟಿದೆ. ಆದರೆ 1945ರ ಯುದ್ಧದಲ್ಲಿ ಬಹಳಷ್ಟು ಹಾನಿಯಾಗಿದ್ದು ಮತ್ತೆ ಮೊದಲಿನ ರೀತಿಯೇ ಪುನರ್ ನಿರ್ಮಿಸಲಾಗಿದೆ.

ಈ ಗಡಿಯಾರವು ವಿವಿಧ ಭಾಗಗಳನ್ನು ಹೊಂದಿದೆ. 12ರಾಶಿಗಳನ್ನು ಗುರುತಿಸುವಂತಹ  ಹೊರರಿಂಗು, ಬೇರೆ ಬೇರೆ ಲೋಹದ ಕಡ್ಡಿಗಳ ಮೇಲೆ ನಡೆಯುವ ಚಿಕ್ಕ ವೃತ್ತಾಕಾರದ ಸೂರ್ಯ ಚಂದ್ರರನ್ನು ಕೂರಿಸಿದ್ದಾರೆ. ಎಲ್ಲ ಸಮಯದಲ್ಲೂ ಈ ಗಡಿಯಾರ ಸೂರ್ಯ ಚಂದ್ರರ ಸ್ಥಾನ, ಅವು ಪ್ರತಿದಿನ ಹುಟ್ಟುವ, ಮುಳುಗುವ ಸಮಯ, ಗ್ರಹಣಗಳು ಸಂಭವಿಸುವ ಸಮಯ, ಹಾಗು ಅವಿರುವ ರಾಶಿಗಳು, ಪ್ರಾಗಿನ ಈಗಿನ ಸಮಯ, ಹಿಂದೆ ಇಟಲಿಯ ಆಡಳಿತಕ್ಕೆ ಒಳಪಟ್ಟಕಾಲದ ಸಮಯ  ಎಲ್ಲವನ್ನು ತೋರಿಸುವ ವ್ಯವಸ್ಥೆ ಇದೆ.

ಹಾಗೆ ಕ್ಯಾಲೆಂಡರ್ ತೋರಿಸುವ ಡಯಲ್  ಇದೆ, ಎಷ್ಟು ವ್ಯವಸ್ಥಿತವಾಗಿದೆಯೆಂದರೆ ಅಚ್ಚರಿಯಾಗುತ್ತದೆ, ಇದೆ ಅಲ್ಲದೆ ಪ್ರತಿ ಗಂಟೆಗೊಮ್ಮೆ ಆಯಾ ಸಮಯಕ್ಕೆ ಸರಿಯಾಗಿ ಒಂದು, ಎರೆಡು ಹೀಗೆ ಸಾಕಷ್ಟು ಜೋರಾಗಿಯೇ ಢಣ್ ಢಣ್ ಶಬ್ದ ಕೇಳಿಬರುತ್ತದೆ, ತಕ್ಷಣ ಗಡಿಯಾರದ ಮೇಲಿರುವ ಕಿಂಡಿಯ ಬಾಗಿಲುಗಳು ತೆಗೆದುಕೊಂಡು ಅದರ ಮೂಲಕ 12ದೇವದೂತರ ಪ್ರತಿಮೆಗಳು ಹಾದು  ಹೋಗಿ ನಂತರ ಕಿಂಡಿಯ ಬಾಗಿಲು ಮುಚ್ಚಿಕೊಳ್ಳುತ್ತದೆ.

ಗಡಿಯಾರದ ಎಡಬಲದಲ್ಲಿ 4ಪ್ರತಿಮೆಗಳು ಪ್ರತಿ ಗಂಟೆಗೊಮ್ಮೆ ಚಲನೆ ಹೊಂದುತ್ತವೆ. ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಗರ್ವಿ, ಚಿನ್ನದ ಚೀಲ ಹಿಡಿದಿರುವ ಜಿಪುಣ ಎಡಬದಿಯಲ್ಲಿದ್ದರೆ, ಬಲಬದಿಯಲ್ಲಿ ಸಾವಿನ ಸೂಚಕವಾದ ಅಸ್ಥಿಪಂಜರದ ಪ್ರತಿಮೆ ಇದ್ದು ಅದರ  ಕೈಯಲ್ಲಿ ತಾಸಿಗೊಮ್ಮೆ ಬಾರಿಸುವ ಗಂಟೆ ಇದೆ. ಪ್ರತಿಗಂಟೆಗೊಮ್ಮೆ ನಡೆಯುವ ಸೋಜಿಗವ ವೀಕ್ಷಿಸಲು ಸಾವಿರಾರು ಪ್ರವಾಸಿಗರು ನೆರೆದಿರುತ್ತಾರೆ. ಸಮಯದ ಜೊತೆ ಜೀವನ ಸಾರವನ್ನೇ ಬಿಂಬಿಸುವ ಈ ಗಡಿಯಾರ ನಿಜಕ್ಕೂ ಅದ್ಭುತವಾಗಿದೆ.

ವೆನ್ಸೇಸ್ಲಾಸ್ ಚವ್ಕಾ  ಇದೊಂದು ಪ್ರಾಗಿನ ಹೊಸನಗರದ ಸ್ಥಳ. 750ಮೀಟರ್ ಉದ್ದ, 60ಮೀಟರ್ ಅಗಲವಿರುವ ವಾಣಿಜ್ಯ ಬೀದಿ. ಬೊಹೆಮಿಯ ಡ್ಯೂಕನಾದ ವೇಂಸೆಸ್ಲಾಸ್ ಹೆಸರಿಡಲಾಗಿದೆ. ಎರಡು ಬದಿ ಪ್ರಮುಖ ಹೋಟೆಲ್ಗಳು, ವಾಣಿಜ್ಯ ಕಟ್ಟಡಗಳ ಮದ್ಯೆ ಗುಲಾಬಿ ಉದ್ಯಾನವನ, ಕೊನೆಯಲ್ಲಿ ವೇಂಸೆಸ್ಲಾಸ್ ಪ್ರತಿಮೆ, ಕಾರಂಜಿ ಸುಂದರವಾಗಿದೆ. dancing building ಎಂದು ಕರೆಯಲ್ಪಡುವ ವಾಲು ಕಟ್ಟಡವಿದೆ . ಹೀಗೆ ಇನ್ನು ಹಲವಾರು ಸ್ಥಳಗಳನ್ನು ನೋಡುತ್ತಾ ಸಾಗುವಾಗ ಹಳೆ ನಗರದಲ್ಲಿ ಇಟ್ಟಿಗೆಯಾಕಾರದ ಕಲ್ಲುಗಳನ್ನು ಹೊಂದಿಸಿ ನೂರಾರು ವರ್ಷಗಳಾದರು ದುರಸ್ತಿಗೆ ಬಾರದಂತಹ ರಸ್ತೆಗಳನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲ್ಯಾಘನೀಯವಾಗಿದೆ.

| ಇನ್ನು ನಾಳೆಗೆ |

‍ಲೇಖಕರು Admin

September 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: