ಪಿ ಚಂದ್ರಿಕಾ ಅಂಕಣ- ಆಗ ಒಂದು ಜಿಜ್ಞಾಸೆ ಮೂಡಿತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

12

ಬೆಟ್ಟಂಪಾಡಿಯ ಮನೆ ದಾಟಿ ಒಂದುವರೆ ಕಿಲೋಮೀಟರ್ ದೂರಕ್ಕೆ ಬಂದರೆ ಸೋಮೇಶ್ವರ ಬೀಚ್. ಅಲ್ಲೇ ಸೋಮೇಶ್ವರ ದೇವಸ್ಥಾನ, ಅಲ್ಲಿಯ ಸ್ಥಳ ಪುರಾಣದ ಪ್ರಕಾರ ಈಶ್ವರ ಧರೆಗಿಳಿದಾಗ ತನ್ನ ಪಾದವನ್ನು ಊರಿದ ಜಾಗದಲ್ಲಿ ದೊಡ್ಡದೊಡ್ಡ ಬಂಡೆಗಳಾಗಿವೆ ಎನ್ನುವುದು ಆದ್ದರಿಂದ ಆ ಬಂಡೆಗಳನ್ನು ರುದ್ರ ಪಾದ ಎಂದೇ ಕರೆಯಲಾಗಿದೆ. ಅಲ್ಲಿ ದೇವಸ್ಥಾನ ಎದುರು ದೊಡ್ಡದೊಂದು ಕಲ್ಯಾಣಿ, ಅದನ್ನು ಹಾದು ಸ್ವಲ್ಪ ದೂರದಲ್ಲಿ ದೇವಸ್ಥಾನ ಅದರ ಪಕ್ಕದಲ್ಲಿ ಸಣ್ಣದೊಂದು ಜಾಗ.

ಚಂದ್ರಣ್ಣ ಕರಸೇವೆಯಿಂದ ಬರುವಾಗ ಯಾರೋ ಕೊಟ್ಟರು ಎಂದು ಮಸೀದಿಯ ತುಂಡನ್ನು ಜ್ಞಾಪಕಾರ್ಥಕ್ಕಾಗಿ ತಂದಿರುತ್ತಾನೆ. ಅದು ಅವನಲ್ಲಿ ಪಾಪಪ್ರಜ್ಞೆಯನ್ನು ಹುಟ್ಟು ಹಾಕುತ್ತಿರುತ್ತದೆ. ಕಾಡುವ ಪಾಪ ಪ್ರಜ್ಞೆಯಿಂದ ಬಾವಿಗೆ ಅದನ್ನು ಆ ತುಂಡನ್ನು ಎಸೆದು ನಿರಾಳವಾಗುತ್ತಾನೆ. ನಮ್ಮ ಹುಡುಕಾಟ ಅವನು ಎಸೆಯುವ ಬಾವಿಯದ್ದಾಗಿತ್ತು. ಕಡೆಗೂ ಈ ಬಾವಿ ನಮ್ಮ ಆಯ್ಕೆಯಾಗಿತ್ತು. ಅಲ್ಲಿಗೆ ಯಾರನ್ನೂ ಬಿಡುತ್ತಿರಲಿಲ್ಲ ಕಾರಣ ಬಾವಿಯ ನೀರನ್ನು ಸೋಮೇಶ್ವರನ ಅಭಿಷೇಕಕ್ಕಾಗಿ ಮಾತ್ರ ಬಳಸುತ್ತಿದ್ದರು. ಚಂದ್ರಹಾಸರ ಕೈ ಬಹುದೂರದವರೆಗೂ ಚಾಚಿದ್ದರಿಂದ ಈ ಬಾವಿಯ ಬಳಿಗೆ ಹೋಗುವ ಮೊದಲು ಇದ್ದ ಗೇಟಿನ ಬೀಗದ ಕೈ ನಮ್ಮ ಕೈ ಸೇರಿತ್ತು.

ಸೋಮೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ಬಾವಿಗೆ ಹಾಕಬೇಕಿದ್ದ ಮಣ್ಣಿನ ಇಟ್ಟಿಗೆಯನ್ನು ನಾನು ಮಾಗಡಿಯ ಸಮೀಪದ ನಮ್ಮೂರು ಪುಟ್ಟಯ್ಯನಪಾಳ್ಯದ ಬಿದ್ದು ಹೋಗಿದ್ದ ನಮ್ಮ ಮನೆಯ ಗೋಡೆಯಿಂದ ತೆಗೆದುಕೊಂಡು ಹೋಗಿದ್ದೆ- ಸುಮಾರು ಇನ್ನೂರು ವರ್ಷಗಳ ಹಳೆಯದಾದ ಮನೆಯದು.

ಆ ಗೋಡೆಯ ತುಂಡಿನ ಭಾಗ್ಯ ಎಂಥದ್ದು! ಎಲ್ಲೋ ಇದ್ದ ಮಣ್ಣಿನ ಹೆಂಟೆ ಸೋಮೇಶ್ವರ ದೇಗುಲದ ಬಾವಿಯನ್ನು ಸೇರುವುದು ಎಂದರೇನು? ಅಭಿಷೇಕದ ನೀರಿನ ನಂಟನ್ನು ಪಡೆಯುವುದು ಅಚ್ಚರಿಯಲ್ಲವಾ? ಅದೂ ಮಸೀದಿಯ ತುಂಡೆಂದು ನಾವು ಭಾವಿಸಿದ್ದರೆ, ಅದನ್ನು ಸೋಮೇಶ್ವರ ದೇವಸ್ಥಾನದ ಬಾವಿಗೆ ಹಾಕುವುದು ಎರಡು ಧರ್ಮಗಳ ಸಂಗಮವನ್ನು ಹೇಳುವುದಾ? ಅಥವಾ ಎರಡೂ ದೇವರೂ ಒಂದೇ ಎನ್ನುವುದನ್ನು ಸಾರುವುದಾ? ಹೀಗೇ ನಮ್ಮ ಬದುಕೂ ಅಲ್ಲವಾ? ಎಲ್ಲೋ ಇದ್ದಿದ್ದು ಎಲ್ಲಿಗೋ ಸೇರುವುದು, ಅಲ್ಲಿ ಹೊಸದೊಂದು ಜೀವನ ಆರಂಭಿಸುವುದು ಎಂಥಾ ವಿಚಿತ್ರ ಅಲ್ಲವಾ? ಹೀಗೆ ಮಸೀದಿಯ ಗೋಡೆಯದ್ದೆಂದು ಭಾವಿಸಿದ ಆದರೆ ಮಸೀದಿಯದ್ದಲ್ಲದ ಒಂದು ಇಟ್ಟಿಗೆಯ ತುಂಡು ಇಷ್ಟೆಲ್ಲಾ ಚಿಂತನೆಗಳಿಗೆ ಕಾರಣವಾಗಿ ನಾನು ಮೂಕಳಾಗಿದ್ದೆ.

ರುದ್ರಪಾದಕ್ಕೆ ಹೊಡೆದ ಅಲೆ ಎತ್ತರೆತ್ತರಕ್ಕೆ ಹಾರಿ ಮೇಲೆ ನಿಂತಿದ್ದ ನಮ್ಮನ್ನು ಮುಟ್ಟಲು ತವಕಿಸುತ್ತಿತ್ತು. ಸಣ್ಣ ಮಕ್ಕಳು ಹೋ ಎಂದು ಕೂಗುತ್ತಿದ್ದರೆ ಅವರ ಅಮ್ಮಂದಿರು ಅವುಗಳನ್ನು ಹಿಡಿದುಕೊಳ್ಳಲು ನೋಡುತ್ತಿದ್ದರು. ಹರೆಯದ ಹುಡುಗರು ಅಲೆಯ ಜೊತೆಗೆ ಆಟ ಆಡುವ ಧೈರ್ಯ ತೋರುತ್ತಿದ್ದರು. ಬೀಚ್ ನೋಡಲಿಕ್ಕೆ ತುಂಬಾ ಸುಂದರವಾಗಿ ಕಾಣುತ್ತಿತ್ತು. ನಮಗೆ ಆಗ ಒಂದು ಜಿಜ್ಞಾಸೆ ಮೂಡಿತು.

ಚಂದ್ರಣ್ಣ ಆ ಗೋಡೆಯ ತುಂಡನ್ನು ಬಾವಿಗೆ ಹಾಕಿದರೆ ಆಗುವ ಪರಿಣಾಮಕ್ಕೂ, ಸಂಜೆಯ ಅಸ್ತಮಾನದ ಸೂರ್ಯನಿಗೆ ಎದುರಾಗಿ ಸಮುದ್ರಕ್ಕೆ ಎಸೆಯುವುದರಿಂದ ಹೆಚ್ಚು ಪರಿಣಾಮ ಉಂಟುಮಾಡುತ್ತದಾ? ಎರಡನ್ನೂ ಶೂಟ್ ಮಾಡೋಣ ನಂತರ ಯಾವುದು ಪರಿಣಾಮದಲ್ಲಿ ತೀವ್ರವಾಗುತ್ತೋ ಅದನ್ನೇ ಇರಿಸಿಕೊಳ್ಳೋಣ ಎಂದು ತೀರ್ಮಾನಿಸಿದೆವು. ಅದು ಹಾಗೇ ಆಯಿತು. ಆದರೆ ಬಾವಿಗಿಂತ ರುದ್ರಪಾದ ಮೇಲೆ ನಿಂತು ಸಮುದ್ರಕ್ಕೆ ಆ ತುಂಡನ್ನು ಎಸೆದಿದ್ದು ತುಂಬಾ ಪರಿಣಾಮಕಾರಿಯಾಗಿತ್ತು. ಅದನ್ನೆ ಕಡೆಗೆ ಉಳಿಸಿಕೊಂಡೆವು.

ಕಲ್ಲಾಪುವಿನ ನೇತ್ರಾವತಿ ನದಿಗೆ ಇದ್ದ ಸೇತುವೆ ದಾಟಿದ ತಕ್ಷಣ ಸಿಗುವುದೇ ಡೋರಾ ಮನೆ. ‘ಇದೇ ಹಸೀನಾ ಮನೆ ಅಂತ ಶೂಟ್ ಮಾಡಿದ್ದು’ ಎಂದು ಚಂದ್ರಹಾಸ ತೋರಿಸಿದರು. ರಸ್ತೆಯಿಂದ ಕೆಳಗೆ ಸುಮಾರು ದೂರಕ್ಕೆ ಇಳಿಯಬೇಕು ಮನೆಯ ಮುಂದೆ ಕಟ್ಟಿದ್ದ ನಾಯಿ ಬೊಗಳುತ್ತಿತ್ತು. ಆ ಶಬ್ದಕ್ಕೆ ಹೊರಬಂದು ನಮ್ಮನ್ನು ನೋಡಿ ‘ಯಾರು?’ ಎಂದಳು ಡೋರಾ. ‘ಇದು ಹಸೀನಾ ಸಿನೆಮಾ ಶೂಟ್ ಮಾಡಿತ್ತಲ್ಲ…’ ಎಂದು ಶುರು ಮಾಡಿದ ಚಂದ್ರಹಾಸರ ನೆನಪುಗಳೊಂದಿಗೆ ಡೋರಾ ತನ್ನ ಪಯಣ ಬೆಳೆಸಿದ್ದಳು. ಅವರ ಮಾತುಗಳನ್ನು ಕೇಳಿದ ತಕ್ಷಣ ‘ಓ ಬನ್ನಿ ಅಣ್ಣ’ ಎಂದು ಕರೆದಳು. ಸಣ್ಣ ಮನೆ ಹೊರಗೊಂದು ಜಗುಲಿ ಸ್ವಲ್ಪ ದೂರಕ್ಕೆ ನೇತ್ರಾವತಿ ನದಿ ತುದಿಗೆ ಹಗ್ಗ ಕಟ್ಟಿಸಿಕೊಂಡು ತೇಲಾಡುತ್ತಿದ್ದ ಪುಟ್ಟದೊಂದು ದೋಣಿ.

ಮನೆಯ ಮುಂದೆ ಕೋಳಿಗಳು, ಬಾತುಕೋಳಿಗಳು ಓಡಾಡುತ್ತಿದ್ದವು. ನಾನು ಚಂಚಲಾಗೆ ‘ಇಂಥಾ ಮನೆಯಲ್ಲಿದ್ದರೆ ಎಷ್ಟು ಚೆನ್ನ ಅಲ್ಲವಾ?’ ಎಂದೆ. ‘ನೋಡಲಿಕ್ಕೆ ಚಂದ ಅಷ್ಟೇ, ಇಲ್ಲಿರುವ ಕಷ್ಟ ಅವರಿಗೇ ಗೊತ್ತು ಹುಣ್ಣಿಮೆ ರಾತ್ರಿಯಲ್ಲಿ ನೀರಿನ ಹರಿವು ಹೆಚ್ಚಾದರೆ ಇಲ್ಲೆಲ್ಲಾ ನೀರೇ’ ಎಂದು ನಕ್ಕರು. ಅವರಿಬ್ಬರೂ ಮಾತಾಡುತ್ತಿದ್ದರೆ ನಾವು ಚಂಚಲಾ ಮನೆಯನ್ನು ಒಂದು ಸುತ್ತು ಬಂದೆವು. ಡೋರಾ ಮೂವತ್ತೈದರ ಆಸು ಪಾಸಿನವಳು. ಚೂಡಿದಾರ್ ಹಾಕಿದ್ದಳು. ತುಂಬಾ ಸಣ್ಣ, ಬಣ್ಣವೂ ಕಪ್ಪೇ. ಪಕ್ಕಾ ಮೀನುಗಾಗರ ಹೆಣ್ಣಿನ ಹಾಗಿದ್ದ ಡೋರಾ ಮನೆಯ ಮೇಲೆ ಶಿಲುಬೆಯ ಗುರುತನ್ನು ಹಾಕಿಕೊಂಡಿದ್ದಳು.

ಮನೆಯಲ್ಲಿ ಬೆಳಗ್ಗೆ ಮಾಡಿದ ಮೀನಿನ ವಾಸನೆ ಸಣ್ಣದಾಗಿ ಹರಡಿ ಪದರ‍್ಥದ ಘಮಲನ್ನು ಉಳಿಸಿತ್ತು. ಚಹಾ ಮಾಡುವ ಉತ್ಸಾಹ ಆಕೆಗಿದ್ದರೂ, ಆಗ ತಾನೆ ಊಟ ಮಾಡಿದ್ದರಿಂದ ಕುಡಿಯುವ ಉಮೇದು ನಮಗಿರಲಿಲ್ಲ. ಸಲ್ಮಾಳ ಗಂಡ ಸಾಮಿಲ್ಲ್ನಲ್ಲಿ ಕೆಲಸ ಮಾಡುತ್ತಾನೆ ಎಂದು ಕಥೆಯಲ್ಲಿ ಬರಕೊಂಡಿದ್ದರಿಂದ, ಶೂಟಿಂಗ್‌ಗಾಗಿ ಸಾಮಿಲ್ಲಿನ ಜಾಗವನ್ನು ಪಕ್ಕಾ ಮಾಡಿಕೊಳ್ಳಬೇಕಿತ್ತು. ಎರಡು ಮೂರು ಕಡೆ ಮೊದಲೇ ನೋಡಿಟ್ಟಿದ್ದರೂ ಯಾಕೋ ಅದು ಫೈನಲ್ ಆಗಿರಲಿಲ್ಲ.

| ಇನ್ನು ನಾಳೆಗೆ |

‍ಲೇಖಕರು Admin

September 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: