ಸುಬ್ಬಣ್ಣ ಇನ್ನಿಲ್ಲ ಎನ್ನಲುಂಟೆ?

ಜಿ ಎನ್ ರಂಗನಾಥ ರಾವ್

ಮೊನ್ನೆ, ಸೋಮವಾರ (ಸೆ.೧೨) ಕನ್ನಡ ಹವ್ಯಾಸಿ ರಂಗಭೂಮಿಯ ಹಿರಿಯಣ್ಣ ಸುಬ್ಬಣ್ಣ(೮೫) ಇಹಲೋಕ ತ್ಯಜಿಸಿ ರಂಗಭೂಮಿಯ ಶ್ರೀರಂಗ, ಪರ್ವತವಾಣಿ, ಕರ್ನಾಡ್, ನಾಣಿ, ಪದ್ದಣ್ಣ ಮೊದಲಾದ ನಕ್ಷತ್ರ ಪುಂಜಗಳ ಸಾಲನ್ನು ಸೇರಿಕೊಂಡರು. ರ೦ಗಶ೦ಕರ, ಕಲಾಗ್ರಾಮಗಳ ಇಂದಿನ ಹೊಸ ಪೀಳಿಗೆ ಯಾರು ಈ ಸುಬ್ಬಣ್ಣ ಎಂದು ಕಣ್ಕಣ್ ಬಾಯ್ಬಾಯ್ ಬಿಡಬಹುದು.

ಸುಬ್ಬಣ್ಣ ಕಳೆದ ಶತಮಾನದ ಐವತ್ತರ ದಶಕದಿಂದ ಕೊನೆಯವರೆಗೆ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದ ರಂಗಕರ್ಮಿ. ಸುಬ್ಬಣ್ಣನ ನಿಜನಾಮಧೇಯ ಎಚ್.ವಿ.ವೆಂಕಟಸುಬ್ಬಯ್ಯ ಅಂತ. ಆದರೆ ರಂಗಭೂಮಿ ವಲಯಗಳಲ್ಲಿ ಸುಬ್ಬಣ್ಣನೆಂದೇ ಚಿರಪರಿಚಿತರು.

ವೆಂಕಟಸುಬ್ಬಯ್ಯ ಉರುಫ್ ಸುಬ್ಬಣ್ಣ ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿ೦ದ ರಂಗಕರ್ಮಿ. ಜೊತೆಗೆ ಸೌಂಡ್ ಎಂಜಿನಿಯರಿ೦ಗ್ ಮತ್ತು ನಾಟಕ ಕಲೆಯಲ್ಲಿ ಡಿಪ್ಲೊಮಾ ಪಡೆದು ರಂಗಭೂಮಿ ಸೇವೆಗೆ ಸಂಪೂರ್ಣವಾಗಿ ಸಜ್ಜಾದರು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಮುಖಕ್ಕೆ ಬಣ್ಣಹಚ್ಚುವುದರಿಂದ ಹಿಡಿದು ಅವರು ನಿರ್ವಹಿಸಿದ ಪಾತ್ರಗಳು ಹಲವಾರು. ನಾಟಕ ರಚನೆ, ಅಭಿನಯ, ಪರದೆ ಕಟ್ಟೋದು, ಸ್ಪಾಟ್ ಹಾಕೋದು, ರಂಗ ವಿನ್ಯಾಸ, ನಿರ್ದೇಶನ, ಹೈಸ್ಕೂಲು ಕಾಲೇಜುಗಳ ವಿದ್ಯಾರ್ಥಿಗಳಿಗೆ ನಾಟಕ ಕಲಿಸೋದು ಹೀಗೆ ಹಲವುಹನ್ನೊಂದು ಬಗೆಯಲ್ಲಿ ರಂಗಕರ್ಮದಲ್ಲಿ ಜೀವಮಾನ ಸವೆಸಿದವರು ಸುಬ್ಬಣ್ಣ.

ಬಹುಮುಖ ಪ್ರತಿಭೆಯ ಸುಬ್ಬಣ್ಣನ ಇನ್ನೊಂದು ಮುಖ್ಯ ಕಾಳಜಿ ಎಂದರೆ ಕನ್ನಡ ರಂಗಭೂಮಿಗೆ ಸಂಬ೦ಧಿಸಿದ ಕಾಗದಪತ್ರಗಳು, ಛಾಯಾಚಿತ್ರಗಳು, ಪೋಸ್ಟರುಗಳು, ಕರಪತ್ರಗಳು, ವಸ್ತ್ರಾಲಂಕರಣಗಳು, ಉಪಕರಣ ವಿಶೇಷಗಳು, ನಾಟಕದ ಹಸ್ತಪ್ರತಿಗಳು, ಬ್ರೋಷರುಗಳು, ನಾಟಕ ಪ್ರದರ್ಶನಗಳ ವಿಮರ್ಶೆಗಳು, ರಂಗಭೂಮಿಗೆ ಸಂಬ೦ದಿಸಿದ ಲೇಖನಗಳು,ವರದಿಗಳು ಇತ್ಯದಿಗಳನ್ನು ಸಂಗ್ರಹಿಸಿಡುವುದು ಸುಬ್ಬಣ್ಣ ಹವ್ಯಾಸವಾಗಿತ್ತು. ಇದೊಂದು ರೀತಿಯ ದಾಖಲೀಕರಣ-ಡಾಕ್ಯುಮೆಂಟೇಶನ್.

ನಾಟಕ ಅಕಾಡೆಮಿಯೋ ವಿಶ್ವವಿದ್ಯಾನಿಲಯವೋ ಮಾಡಬೇಕಾದಂಥ ಈ ಕೆಲಸವನ್ನು ಸುಬ್ಬಣ್ಣ ಜೀವಮಾನದುದ್ದಕ್ಕು ಮಾಡಿಕೊಂಡು೮ ಬಂದರು. ಹವ್ಯಾಸವಾಗಿ ಶುರುವಾದದ್ದು ಬರುಬರುತ್ತಾ ಒಂದು ಕಾಯಕವೇ ಆಗಿ ಸುಬ್ಬಣ್ಣ ರಂಗಭೂಮಿಯ ಚಾರಿತ್ರಕ ದಾಖಲಕಾರ ಎನಿಸಿಕೊಂಡರು. ಕನ್ನಡ ರಂಗಭೂಮಿಗೆ ಸಮಬಂಧಿಸಿದ ದ್ದು ಏನಾದರೂ ಬೇಕೆಂದರೆ ಸುಬ್ಭಣ್ಣನನ್ನು ಕೇಳು ಎನ್ನುವಂತಾಯಿತು. ಇನ್ನು ಮನೆಯಲ್ಲೋ ಪತ್ನಿ ಶ್ರಿಮತಿ ಶಾರದಾ ಸ್ವತ: ವೈದ್ಯೆಯಾದರೂ ಗಂಡನ ಈ ಹುಚ್ಚಿ'ಗೆ ಅವರಲ್ಲಿ ಮದ್ದಿರಲಿಲ್ಲ."ನೋಡ್ರೀ ಸುಬ್ಬಣ್ಣನ ಸಂಗ್ರಹ ಮನೆಪೂರ್ತೀ ಆವರಿಸಿಕೊಂಡಿದ್ದು ಕಾಲಿಡಲೂ ಜಾಗವಿಲ್ಲದಂತೆ ಮಾಡಿದ್ದಾರೆ" ಎಂದು ಪರಿತಪಸುವಂತಾಯಿತು.

ಈ ನಮೂನೆಯ ರಂಗಕರ್ಮಿಗೂ ನಾಟಕಕಾರ ಶ್ರೀರಂಗರಿಗೂ ಯಾವಜನ್ಮದ ನಂಟೋ ತಿಳಿಯದು.ಅರವತ್ತರ ದಶಕದಲ್ಲಿ ಸಾಗರದಲ್ಲಿ೯ ಉದಯ ಕಲಾವಿದರು ಎಂಬ ಹವ್ಯಾಸಿನಾಟ ತಂಡವೊAದಿತ್ತು. ಅದರ ಜೀವನಾಡಿ ಶ್ರೀ ಮಾಸೂರ್ ಎಂಬುವರು. ಹಳೆಯ ಮೈಸೂರಿನಲ್ಲಿ ಶ್ರೀರಂಗರ ನಾಟಕಗಳನ್ನು ಮೊದಲು ರಂಗಭೂಮಿಗೆ ತಂದ ಕೀರ್ತಿ ಶ್ರೀ ಮಾಸೂರರದು.ನಂತರ ಶ್ರೀರಂಗರ ನಾಟಕಗಳನ್ನು ಬೆಂಗಳೂರಿನಲ್ಲಿ ಹೆಚ್ಚಾಗಿ ಪ್ರದರ್ಶಿಸಿದ ಖ್ಯಾತಿ ವೆಂಕಟಸುಬ್ಬಯ್ಯನವರದು.ಎAದೇ ಮೈಸೂರಿನ ನಾಟಕಕಾರ ಡಾ.ನರತ್ನರಂಥವರು ಸುಬ್ಬಣ್ಣನನ್ನು ಬೆಂಗಳೂರಿನ ಮಾಸೂರ್’ಎಂದೇ ಕರೆಯುತ್ತಾರೆ.

ಶ್ರೀರಂಗರು ಬೆಂಗಳೂರಿಗೆ ಬಂದು ನೆಲಸಿದ ಮೇಲಂತೂ ಅವರೊಂದಿಗೆ ವೆಂಕಟಸುಬ್ಬಯ್ಯನವರ ನಂಟು ಇನ್ನಷ್ಟು ಗಟ್ಟಿಯಾಗಿ ಅಂಟಿಕೊ೦ಡಿತು. ಖ್ಯಾತ ವಿಮರ್ಶಕ ಜಿ.ಎಸ್.ಆಮೂರರು ವರ್ಣಿಸಿರುವಂತೆ ಸುಬ್ಬಣ್ಣನಿಗೆ ಶ್ರೀರಂಗರಲ್ಲಿ ಆಂಜನೇಯ ಭಕ್ತಿ. ಶ್ರೀರಂಗರ ಕಷ್ಟಸುಖಗಳ ಬಗ್ಗೆ ಕಾಳಜಿಮಾಡುವುದರಿಂದ ಹಿಡಿದು, ಅವರೊಡನೆ ನಾಟಕ ಶಾಲೆಯಲ್ಲಿ ದುಡಿಯುವುದು, ಅವರ ನಾಟಕಗಳ ನಿರ್ದೇಶನ, ಅವರ ಹಸ್ತಪ್ರತಿಗಳ, ದಾಖಲೆಗಳ ಸಂಗ್ರಹ ಮೊದಲಾಗಿ ಹಲವು ರೀತಿಗಳಲ್ಲಿ ಈ ಭಕ್ತಿ' ಪ್ರಕಟಗೊಂಡಿರುವುದು೦ಟು. ಶ್ರೀರಂಗರ ಬಗ್ಗೆ ಒಂದು ವಸ್ತುಸಂಗ್ರಹಾಲಯ ತುಂಬುವಷ್ಟು ಸಾಮಗ್ರಿಯನ್ನು ಕಲೆಹಾಕಿರುವ ಸುಬ್ಬಣ್ಣಶ್ರೀರಂಗಸ೦ಪದ” ಬೃಹತ್ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ೬೨೪ ಪುಟಗಳ ಈ ಬೃಹತ್ ಗ್ರಂಥದಲ್ಲಿ ಶ್ರೀರಂಗರ ಸಾಹಿತ್ಯದ ವಿಮರ್ಶೆ, ವ್ಯಕ್ತಿತ್ವದರ್ಶನ, ಸಾಧನೆ, ಸಂದರ್ಶನಗಳು ಸೇರಿದಂತೆ ವಿಪುಲ ಮಾಹಿತಿ ಇದೆ.

ಕನ್ನಡ ಹವ್ಯಾಸಿ ರಂಗಭೂಮಿಯೂ ನಮ್ಮ ಸುಬ್ಬಣ್ಣನ ಸೇವೆ-ಸಾಧನೆಗಳನ್ನು ಮರೆಯಲಿಲ್ಲ. ಎಂಬತ್ತು ತುಂಬಿದಾಗ ಅಭಿಮಾನಿಗಳು `ನಮ್ಮ ಸುಬ್ಬಣ್ಣ-ರಂಗ ದಾಖಲೆಯ ಹರಿಕಾರ’ ಅಭಿನಂದನಾ ಗ್ರಂಥ ಅರ್ಪಿಸಿ ಕೃತಜ್ಷತೆ ಸಲ್ಲಿಸಿತು. ಕನ್ನಡ ರಂಗಭೂಮಿಯ ಕಟ್ಟಾಳು ಎಚ್.ವಿ.ವೆಂಕಟಸುಬ್ಬಯ್ಯ ಉರುಫ್ ನಮ್ಮೆಲ್ಲರ ಪ್ರೀತಿಯ ಸುಬ್ಬಣ್ಣ ಇನ್ನಿಲ್ಲ.

ಸುಬ್ಬಣ್ಣ ಇನ್ನಿಲ್ಲ ಎನ್ನಲುಂಟೆ? ಅವರು ತಮ್ಮ ಹಿಂದೆ ಬಿಟ್ಟುಹೋಗಿರುವ ಅಪಾರವಾದ ರಂಗಭೂಮಿ ದಾಖಲೆಗಳ ಸಂಗಹದಲ್ಲಿ ಅವರಿದ್ದಾರೆ. ಸುಬ್ಬಣ್ಣನ ಈ ಸಂಗ್ರಹವನ್ನು ಕರ್ನಾಟಕ ನಾಟಕ ಅಖಾಡೆಮಿ ತನ್ನ ಪತ್ರಾಗಾರದ ವಶಕ್ಕೆ ತೆಗೆದುಕೊಂಡು ಜೋಪಾನಮಾಡಬೇಕು.ಅದು ಮುಂದಿನ ಪೀಳಿಗೆಗೆ ಪರಂಪರೆಯ ರಂಗಸ೦ಪದವಾಗಲಿದೆ.

‍ಲೇಖಕರು Admin

September 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನಾರಾಯಣ ರಾಯಚೂರ್

    ಹೌದು ರಂಗನಾಥ ರಾವ್,
    ಸುಬ್ಬಣ್ಣ ಇನ್ನಿಲ್ಲ ಎನ್ನಲಾಗದು.
    ಬಣ್ಣ ಮಾಸದ ಬೆಂಗಳೂರಿನ ಮಾಸೂರ್ ಅವರು.
    ಬೆಳಕನಿತ್ತು ರಂಗ ಬೆಳಗಿದರು.
    ವಸ್ತ್ರ ವಿನ್ಯಾಸ ಮಾಡಿ ಝಗಮಗಿಸಿದವರು.
    ನಟನೆ-ನಿರ್ದೇಶನದ ದರ್ಶನ ವಿತ್ತವರು.
    ಶಿಸ್ತಿನ ಶಿಕ್ಷಕರು; ರಂಗ-
    ದಾಖಲೆಗಳ ಸಂ-ರಕ್ಷಕರು.
    ತುಂಬು ಜೀವನ-ತುಂಬ

    ರಂಗ -ಪ್ರೀತಿಯ ತುಂಬಿ
    ಧಾರೆಯೆರೆದವರು,
    ಧರೆಯತೊರೆದರೂ
    ಸ-ಹೃದಯರ ರಂಗಸ್ಥಳದಲಿ
    ಚಿರ-ಸ್ಥಾಯಿಯಾದವರು

    ನಾರಾಯಣ ರಾಯಚೂರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: