ಸುನಿತಾ ಮೂರಶಿಳ್ಳಿ ಓದಿದ ‘ಅವನಿ’

ಸುನಿತಾ ಮೂರಶಿಳ್ಳಿ

ನೊಂದವರ ನೋವಿಗೆ ಸ್ಪಂದಿಸುತ್ತ, ಪರಿಸರ, ಕೃಷಿಯನ್ನು ಪ್ರೀತಿಸುತ್ತ, ಯಾವತ್ತೂ ಎಲ್ಲರೊಂದಿಗೆ ಸ್ನೇಹಮಯಿ ಆಗಿ ನಡೆದುಕೊಳ್ಳುವ  ಮಾಲತಿ ಹೆಗಡೆ ಅವರ ಇತ್ತೀಚೆಗೆ ಬಿಡುಗಡೆಯಾದ ಕಥೆಗಳ ಸಂಕಲನವೇ “ಅವನಿ”. ಹೆಣ್ಣಿನ ಬದುಕಿನ ವಿಭಿನ್ನ ನೋಟ, ಬಡತನ, ಸಂಘರ್ಷ, ಸಾಮಾಜಿಕ ತಲ್ಲಣಗಳನ್ನು ಅನುಭವಿಸುತ್ತಲೇ ಯೋಗ್ಯ ಬದುಕು ಬದುಕಿ ತೋರಬೇಕೆಂಬ ಅಮಿತ ಜೀವನೋತ್ಸಾಹ, ಅಂತಃಸತ್ವ… ಇವೆಲ್ಲದರ ಮೊತ್ತವೇ “ಅವನಿ”ಯ ತಿರುಳು. 

ಇದು ಹದಿಮೂರು ಕಥೆಗಳ ಸಂಕಲನ. ಹಿರಿಯ ಕಥೆಗಾರರು ಮತ್ತು ಅಂಕಣಕಾರರು ಆಗಿರುವ ಪ್ರೇಮಶೇಖರ್ ಅವರು ತಮ್ಮ ಮುನ್ನುಡಿಯಲ್ಲಿಯೇ ಹೇಳುವಂತೆ “ಕಥಾ ಪಾತ್ರಗಳು ನೈಜವಾಗಬೇಕಾದರೆ ಕಥೆಗಾರ ಅಥವಾ ಕಥೆಗಾರ್ತಿ ಪರಕಾಯ ಪ್ರವೇಶಗೈವ ಅವಶ್ಯಕತೆ ಇದೆ”…. ಅದನ್ನು ಮಾಲತಿ ಹೆಗಡೆಯವರು ಸಮರ್ಥವಾಗಿ ನಿಭಾಯಿಸಿದ್ದಾರೆ’…. ಈ ಮಾತು ಅಕ್ಷರಶಃ ಸತ್ಯ ಎಂದು ಪುಸ್ತಕ ಓದಿದ ನಂತರ ನನಗೂ ಅನ್ನಿಸಿತು.

ಮೊದಲ ಕಥೆಯಾದ “ಮಣ್ಣು” ಕೂಲಿಕಾರ ಮಾದಪ್ಪನ ಹೆಂಡತಿ ಕಲ್ಲವ್ವ ಬಂಜರು ಭೂಮಿಯಲ್ಲಿ ಬೆಳೆ ಬೆಳೆದು ತೋರುವ ಯಶೋಗಾಥೆಯನ್ನು ತುಂಬ ಸಮರ್ಥವಾಗಿ ಪ್ರತಿಪಾದಿಸಿದೆ. ಅಲ್ಲಿ ಎದುರಾಗುವ ಕಷ್ಟಕೋಟಲೆಗಳು, ಕಳೆದುಕೊಂಡ ಮಗಳನ್ನೆ ತೋಟದಲ್ಲಿ ಕಾಣುವ ಕಲ್ಲವ್ವಳ ಪ್ರೀತಿ ಕೊನೆಗೆ “ಹಿಂದಕ್ಕ ಕೂಲಿಕಾರನ ಹೆಂಡತಿ ಅನ್ನಿಸ್ಕೊಂಡಾಕಿ ಈಗ ತ್ವಾಟದ ಯಜಮಾನ್ತಿ ಆಗೀನಿ” ಎಂದು ಹೆಮ್ಮೆಯಿಂದ ಬೀಗುವ ಅವಳ ಸಂತಸ ಓದುಗರಿಗೂ ಆಗದೆ ಇರುವದಿಲ್ಲ.

“ಸಂಕ್ರಮಣ” ಮಾದಪ್ಪ  ಮಾದೇವಿಯಾಗಿ ಪರಿವರ್ತನೆಯಾಗುವ ತೃತೀಯ ಲಿಂಗಿಯ ಕಥೆ. ಇಲ್ಲಿ ನಿರೂಪಿಸಿದ ತೃತೀಯ ಲಿಂಗಿಯ ಸಾಮಾಜಿಕ ಹಾಗೂ ಭಾವನಾತ್ಮಕ ಹೋರಾಟದ ಮಜಲುಗಳು ಮನವನ್ನು ಆರ್ದಗೊಳಿಸುವವು. ಸ್ವಂತ ತಂದೆಯಿಂದಲೇ ಹೊರದೂಡಲ್ಪಟ್ಟ ಮಾದೇವಿ ಅನಿವಾರ್ಯವಾಗಿ  ಭಿಕ್ಷೆ ಬೇಡುವ ಹಿಜಡಾ ಗುಂಪಿಗೆ ಸೇರುವಳು. ಮಾದೇವಿ ದುಡಿದು ಉಣ್ಣಬೇಕೆಂಬ ಛಲದಿಂದ ಹೋಟೆಲ್ ಶುರು ಮಾಡಿ ಬದುಕನ್ನು ಹಳಿಗೆ ತರುತ್ತಿರುವಾಗ ಕೋವಿಡ್ ಮಾರಿಯ ಲಾಕ್ ಡೌನ್ ದಿಂದ ಅಸ್ತವ್ಯಸ್ತಗೊಳ್ಳುವ ಬದುಕಿನ ಗತಿಗೆ ಬೆದರದೆ, ಹಳ್ಳಿಗೆ ಹೋಗುವಳು. ಅಲ್ಲಿ  ಅಪ್ಪ ಬಿಟ್ಟ ಸ್ವಂತ ಭೂಮಿಯಲ್ಲಿ ಕೃಷಿ ಮಾಡಿ ಸಮಾಜಕ್ಕೂ ಸಹಾಯದ ಹಸ್ತ ಚಾಚಿ ಸೈ ಎನಿಸಿಕೊಳ್ಳುವಳು. ಮಾದೇವಿಯ ಕಥೆ ಲೇಖಕಿಯ ಲೇಖನಿಯಿಂದ ಹೃದಯಸ್ಪರ್ಶಿ ಯಾಗಿ ಮೂಡಿಬಂದಿದೆ. “ಬೇಡೋ ಕೈಗಳು ಎಂಜಲು ಮುಸುರಿ ತೆಗೆಯೋ ಕೈಗಳು ಮಣ್ಣಮುಟ್ಟಿ ಕೆಲಸ ಮಾಡೋಹಂಗ ಆದ್ವು” ಎಂದು ಹೇಳುವ ಜೊತೆಗಾತಿ ಪಾರುವಿನ ಮಾತು ಮಣ್ಣಿನ ಆಶ್ರಯದ ಮಹತ್ವ ಹಾಗೂ ಸ್ವಾಭಿಮಾನಿ ಬದುಕಿಗೆ  ಕನ್ನಡಿ ಹಿಡಿದಂತಿದೆ.

“ಚೌಕಟ್ಟಿನಾಚೆಯ ಚಿತ್ತಾರ” ದಲ್ಲಿ ಕುರುಡುತನವನ್ನು ಮೀರಿ ಬೆಳೆದು, ತಂದೆಯಿಂದಲೇ ತಿರಸ್ಕರಿಸಲ್ಪಟ್ಟರೂ ತನ್ನ ಮನೋಬಲದಿಂದ ಬದುಕು ಕಟ್ಟಿಕೊಳ್ಳುವ ನಳಿನಿಯ ಪಾತ್ರ, ಅವಳು ಮಾಡದ ತಪ್ಪಿಗೆ ಅನುಭವಿಸುವ ನೋವು, ಸಾಮಾಜಿಕ ದೃಷ್ಟಿ ಎಲ್ಲವೂ ಹೃದಯಂಗಮ.
“ಪಯಣ” ಕಥೆಯು ಶೀರ್ಷಿಕೆಯೇ ಹೇಳುವಂತೆ ಕುರುಬರ ಅಲೆಮಾರಿ ಬದುಕಿನ ತಲ್ಲಣಗಳನ್ನು ಬಿಂಬಿಸುವದು. ಬದುಕಿನ ಪ್ರಾಥಮಿಕ ಸವಲತ್ತುಗಳಾದ ನೀರು, ಮನೆ, ಅನ್ನ, ಶಿಕ್ಷಣ ಏನೂ ಇಲ್ಲದೆ ಪ್ರಾಣಿಗಳಂತೆ ಬದುಕುವ  ಕಷ್ಟಪರಂಪರೆಗೆ ಕಥಾನಾಯಕಿ ಮಂಗಳ ಹಾಡುವಳು.   ಮತ್ತೆ ಮಣ್ಣಿನ ಆಶ್ರಯಕ್ಕೆ ಮೊರೆ ಹೋಗಿ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುವ ಕಥಾವಸ್ತು ಸಮಾಜಕ್ಕೂ ಒಂದು ಮೆಸೇಜ್ ಕೊಡುವದು.  
“ಕಣ್ಣಾಮುಚ್ಚೆ ಕಾಡೆಗೂಡೆ” ಕಥೆ ಮಲತಾಯಿಯಿಂದ,ಪತಿಯಿಂದ ಎಲ್ಲರಿಂದಲೂ ದೌರ್ಜನ್ಯ ವನ್ನು ಅನುಭವಿಸಿ ಹೊರ ಹೋಗಿ  ಅಲ್ಲಿ ಮೋಸ ಹೋಗಿ ವೇಶ್ಯಾವಾಟಿಕೆಗೆ ದೂಡಲ್ಪಡುವಳು ರೂಪ ಎಂಬ ಮಹಿಳೆ.  ಹೀಗೆಯೆ ಕಷ್ಟಗಳ ಕೋಟಲೆಯಲ್ಲಿ ಬೆಂದು ನೋವುಂಡವರಿಗಾಗಿ ದುಡಿವ ಸಂಸ್ಥೆಗೆ ಸೇರಿ ತನ್ನ ಬದುಕಿನ ಸಾರ್ಥಕತೆಯನ್ನು ಕಾಣುವಳು. ಸಮಾಜದ ಕರಾಳಮುಖದ ನೋಟವನ್ನು ಲೇಖಕಿಯು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

“ಬೇಡವೆಂದರೂ ಕರೆವ ಹಸಿರು” ಕಥೆಯಲ್ಲಿ ತಮ್ಮ ಮನದ ಹಸಿರಿನ ಪ್ರೀತಿಯನ್ನು ಈ ಪಾತ್ರದಲ್ಲಿ ಬಿಚ್ಚಿಟ್ಟಿದ್ದಾರೆ ಮಾಲತಿ. ಪತಿ ಇರುವಾಗಲೂ, ಇಲ್ಲದಾಗಲೂ ಕೈತೋಟದ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಕಾಣುವಳು ಕಥಾನಾಯಕಿ. ಪ್ರಕೃತಿಯ ಸೊಬಗಿಗೆ ಚುಂಬಕ ಶಕ್ತಿ ಇದೆ,  ಎಂಥ ನೋವನ್ನು ಮರೆಸುವ ಶಕ್ತಿ ಇದೆ ಎಂಬ ಮಾತು ಮನಮುಟ್ಟುವಂತೆ ಕಥೆಯಲ್ಲಿ ವ್ಯಕ್ತವಾಗಿದೆ.

‌ಸೈನಿಕನ ಹೆಂಡತಿ ಆತ ವೀರಮರಣ ಹೊಂದಿದ ನಂತರದ  ಹೋರಾಟದ ಬದುಕನ್ನು ಬಿಂಬಿಸುವ ಕಥೆಯೇ “ಸಾವಿನಾಚೆಯ ಬದುಕು”.  ಪತಿಯನ್ನು ಕಳೆದುಕೊಂಡರೂ ಮತ್ತೆ ಮಗಳಿಗೂ ಕೂಡ ಮಿಲಿಟರಿಗೆ ಸೇರಿಸಿ ತನ್ನ ಕೊನೆಯ ದಿನಗಳನ್ನು ಗ್ರಂಥಾಲಯ ನಿರ್ಮಿಸಿ ಸ್ವಂತದ ಹಾಗೂ ಸಾಮಾಜಿಕ ಬದುಕಿಗೆ ತೋರಣ ಕಟ್ಟುವ, ತನ್ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಕಥಾನಾಯಕಿಯು ಇಲ್ಲಿ ಮಾದರಿ ಆಗಿ  ನಿಲ್ಲುವಳು.

“ಮುಗುದೆ” ಬಾಲ್ಯದಲ್ಲಿನ ಕೆಟ್ಟಘಟನೆ ವೈವಾಹಿಕ ಬದುಕಿನಲ್ಲಿ ಮುಳ್ಳಾಗಿ ಕಾಡುವದನ್ನು ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಿ ಹೊಸ ಬದುಕು ನೀಡುವ ಕಥಾಹಂದರ ಹೊಂದಿದೆ. ಇಂದಿನ ಎಷ್ಟೊಂದು ಮಹಿಳೆಯರ ವೇದನೆ ಇದಾಗಿದೆ. ಅದೇ ವಾಸ್ತವತೆಯನ್ನೆ ಇಲ್ಲಿ ಚಿತ್ರಿಸಿದಂತಿದೆ. 

ಸಂಶಯವು ಒಂದು ಮನೋವ್ಯಾಧಿಯಂತೆ. ಇದಕ್ಕೆ ಯಾವ ಔಷಧಿಯೂ ಇಲ್ಲ. ವೈದ್ಯ ಪತಿಯ ಕಾಯಕದ ರೂಪವರಿಯದೆ ಸಂಶಯದಿಂದ ಬದುಕನ್ನು ಅಂತ್ಯಗೊಳಿಸಿಕೊಂಡು ಆತನ ಬದುಕನ್ನೂ ಬರಡಾಗಿ ಮಾಡುವ ಹುಡುಗಿಯ ಕಥೆಯೇ “ಅರ್ಥವಾಗದವಳು”.  
ತನ್ನ ಗಂಡ, ಮನೆ, ಮಕ್ಕಳೆಂದು ಯಾವತ್ತೂ ದುಡಿಯುವ ಮಹಿಳೆಯೊಬ್ಬಳು ಯಾವುದಕ್ಕು ಬೇಸರಿಸದೆ, ಹೇಸಿಕೊಳ್ಳದೆ ಕೆಲಸವನ್ನು ಮೌನವಾಗಿ ಮಾಡುವಳು. ಆದರೆ ಅದೇ ಬಗೆಯ ಕೆಲಸಕ್ಕೆ ಗಂಡಿನ ಸರತಿ ಬಂದಾಗ ಅಥವಾ ಮಕ್ಕಳ ಸರತಿ ಬಂದಾಗ ಅವರ ಪ್ರತಿಕ್ರಿಯೆ ತದ್ವಿರುದ್ಧವಾಗಿರುವದು ಎಂದು ಉದಾಹರಣೆಯ ಮೂಲಕ ಮಾಲತಿ  ಇಲ್ಲಿ  ಹೇಳುವರು.   

ಒಂದು ಹರಿದ ಚಪ್ಪಲಿಯನ್ನು ಕೈಲಿ ಹಿಡಿದು ಸರಿ ಮಾಡಿಸಿಕೊಂಡು ಬರುವ ಕೆಲಸವನ್ನು ಕೀಳೆಂದು ಯಾರೂ ಮಾಡದೆ ಇರುವಾಗ ಆಗುವ ನಾಯಕಿಗಾಗುವ ಮನೋವೇದನೆಯನ್ನು’ ‘ಅವರವರ ಭಾವಕ್ಕೆ’ ಕಥೆಯಲ್ಲಿ ಮಾಲತಿಯವರು ಭಾವನಾತ್ಮಕವಾಗಿ ಹೆಣೆದ ರೀತಿ ನೆನಪಿನಲ್ಲಿ ಉಳಿಯುವುದು.

ಬಡತನದ ಬೇಗೆಯಲ್ಲೂ ಮಗುವಿಗಾಗಿ ಜೋಲಿಗೆ ಬದಲಾಗಿ ತೊಟ್ಟಿಲು ಬೇಕೆಂದು ಹಂಬಲಿಸುತ್ತಾಳೆ ಕಥಾ ನಾಯಕಿ.  ಹೆಚ್ಚುವರಿ ದುಡಿಮೆಗೆ ಹೋದ ಪತಿಗೆ ಹಾವು ಕಡಿದು ವಿಷಮ ಸ್ಥಿತಿಯಲ್ಲಿ ಇರುವಾಗ ತಾನೇ ಈ ಸ್ಥಿತಿಗೆ ಕಾರಣವಾದನೇನೊ ಎಂದು ತೊಳಲಾಡುವ ದೃಶ್ಯ ಕೊನೆಗೆ ಎಲ್ಲ ಸರಿ ಹೋಗುವ ‘ಜೋಲಿ’ ಕಥೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ.  

“ಪ್ಲಾಸ್ಟಿಕ್ ಬಂದ ಮೇಲೆ ಕುಂಬಾರರು ತಯಾರು ಮಾಡಿದ್ದನ್ನು ಕೇಳೋರು ಯಾರದಾರ ” ಎಂದು ಕಥಾ ಪಾತ್ರದಲ್ಲಿ ಹೇಳುವ ಜನರ ಮಾತು ಪ್ರಸ್ತುತದಲ್ಲಿ ಸತ್ಯವಾಗಿದೆ.  ನಶಿಸಿ ಹೋಗುತ್ತಿರುವ ವೃತ್ತಿ ನಿರತ ಕುಲಕಸುಬುಗಳು ಹೊಸ ರೂಪದೊಂದಿಗೆ ನಿಷ್ಠೆಯಿಂದ ಮಾಡಿದಲ್ಲಿ ಅವು ಎಂದಿಗೂ  ಕೈ ಬಿಡಲಾರವು ಎಂಬ ಆಶಯ ಹೊತ್ತ ನಾಯಕಿಯ ಯಶೋಗಾಥೆ ಹೇಳುವ ಈ “ಪಲ್ಲಟ” ಎಂಬ ಕಥೆ ಪ್ರೇರಣಾದಾಯಿಯಾಗಿದೆ.  ಮಾಲತಿಯವರ ಮನೋಭಿಲಾಷೆ ಕೂಡ ಇದೇ ಆಗಿದೆ.   

ಒಂದು ಉತ್ತಮ ಸಮಾಜದ ನಿರ್ಮಾಣ, ಬತ್ತಿ ಹೋಗುವ ಬದುಕಿಗೆ ನೀರೆರೆದು ಪೋಷಿಸಿ, ಬದುಕನ್ನು ಸಾರ್ಥಕ ಗೊಳಿಸುವ ಆಶಯ ಬಿಂಬಿಸುವ ಹಾಗೂ ಕೃಷಿಯನ್ನು ಪ್ರೋತ್ಸಾಹಿಸುವ, ಪ್ರೀತಿಸುವ ಅವರ ಆಶಯ ಎಲ್ಲ ಕಥೆಗಳಲ್ಲೂ ಮೂಡಿಬಂದಿದೆ. ಹೆಣ್ಣಿನ ಮನೋ ಲೋಕದ ವಿಭಿನ್ನ ನೋಟಗಳು ಪರಿಣಾಮ ಕಾರಿಯಾಗಿ ಸಂಕಲನದ ಕಥೆಗಳಲ್ಲಿ ಬಿಂಬಿತವಾಗಿವೆ. ಸಕಾರಾತ್ಮಕ ಭಾವನೆಗಳಿಗೆ ಇಂಬು ಕೊಡುವ ಕಥೆಗಳಿವು. ಒಟ್ಟಾರೆಯಾಗಿ ಸಾರ್ಥಕ  ಬದುಕನ್ನು ಕಾಣುವ ಮತ್ತು ಎಂಥ ಪರಿಸ್ಥಿತಿಯಲ್ಲೂ ಹೋರಾಡಿ ಗೆಲ್ಲುವ ಮನೋಭಾವ ಎಲ್ಲ ಕಥೆಗಳ ತಿರುಳಾಗಿದೆ.   ಬರವಣಿಗೆಯ ಶೈಲಿ,ಪಾತ್ರಗಳ ಭಾಷಾ ಬೆಡಗಿನ ಮೂಲಕ ಓದುಗರನ್ನು ಕಥಾ ಲೋಕದಲ್ಲಿ ತೇಲುವಂತೆ ಮಾಡುವ ಕಥಾ ನಿರೂಪಣೆ ಎಲ್ಲವೂ ಅಪೂರ್ವ.  ಸಾಹಿತ್ಯ ಪ್ರಿಯರು ಪುಸ್ತಕವನ್ನೊಮ್ಮೆ ಓದಲೇಬೇಕು ಎನ್ನುವಂತಿದೆ.

‍ಲೇಖಕರು Admin

January 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: