ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಆಡುಕಳ ಹೊಸ ಕವಿತೆ-ಮಗನ ರಜೆ

ಸುಧಾ ಆಡುಕಳ


ತರಗತಿಯ ಕೊನೆಯ ಬೆಲ್ಲು ಹೊಡೆದಾಗ
ಥಟ್ಟನೆ ನೆನಪಾಗುವುದು ‘ಮಗನಿದ್ದಾನೆ ಮನೆಯಲ್ಲಿ’
ಪುಟ್ಟ ಮಗುವೇನಲ್ಲ, ಹದಿಹರೆಯದ ಕೊನೆಯ ಮೆಟ್ಟಿಲಲ್ಲಿರುವ
ಬೇರೆ ರಾಜ್ಯದ ಕೊನೆಯಿಂದ ರಜೆಗೆಂದು ಬಂದಿರುವ
ಸ್ನೇಹಿತರ ಅದೆಂಥ ಆಮಿಷಗಳ ಮೀರಿ ಬಂದಿಹನೋ
ಏನೇನು ನಿರೀಕ್ಷೆಗಳ ಮೂಟೆ ಹೊತ್ತಿಹನೋ
ಧಾವಿಸುವ ಪಾದಗಳು ನಿಲ್ಲುತ್ತವೆ, ಹಣ್ಣಿನಂಗಡಿಯೆದುರು
ಹೊಗೆಯಾಡುವ ಗೋಳಿಬಜೆಯ ಹೋಟೆಲಿನೆದುರು
ಅವನಿಗಿಷ್ಟ ಇವೆಲ್ಲವೂ ಬಾಯಿಬಿಟ್ಟು ಹೇಳದಿದ್ದರೂ
ಎಷ್ಟಂತ ತಿಂದಾನು ಬೆಳಗಿನವಸರದ ಅನ್ನ, ಸಾರು?
ಭೋರೆಂದು ಸುರಿವ ಮಳೆ ಹೊರಹೋಗಲು ಬಿಡದು
ವಾರಾಂತ್ಯದಲಿ ಕಾದಿರುವುದು ಕೆಲಸಗಳ ಸಾಲು
ಗಡಬಡಿಸುತ್ತಲೇ ಒಳಬಂದರೆ ಮನೆಯಿಡೀ ನಿಶ್ಶಬ್ದ
ಕೋಣೆಯಲ್ಲಿ ಮಲಗಿದ್ದಾನೆ ಎದೆಯ ಮೇಲಿಟ್ಟು ಪುಸ್ತಕ
ಮುಖದ ಮುಗುಳುನಗೆ ಇನ್ನೂ ಮಾಸಿಲ್ಲ
ನಮ್ಮನೆಯ ಬುದ್ಧನವ ಎಂದೂ ಯಾರನ್ನೂ ದೂರಿಲ್ಲ
ಬಿಸಿ, ಬಿಸಿ ಚಹಾದ ಘಮ ಮನೆತುಂಬ ಹರಡಿ


ಸದ್ದಿಲ್ಲದೇ ಎದ್ದು ಬಂದವನ ಮುಖದ ತುಂಬ ಖುಶಿ
ಚಹಾ ಗುಟುಕರಿಸುತ್ತಲೇ ಹೇಳುತ್ತಾನೆ ಸುದ್ದಿ
ಓದುತ್ತಿರುವೆ ಅಮ್ಮಾ ‘ವಾರ್ ಆಂಡ್ ಪೀಸ್’ ಕಾದಂಬರಿ
ಹುಬ್ಬೇರಿಸಿ ಕೇಳುತ್ತೇನೆ ಇಷ್ಟವಾಯಿತೇನು ನಿನಗೆ?
ಇಷ್ಟದ ಪ್ರಾರ್ಥನೆಯೊಂದ ನನಗಾಗಿ ಓದುವನು
“ಓ ದೇವರೇ,
ಯಾವುದನ್ನು ನನ್ನಿಂದ ಬದಲಾಯಿಸಲಾಗದೋ
ಅದನ್ನು ನಾನು ಸ್ವೀಕರಿಸುವಂತೆ ಮಾಡು
ಯಾವುದು ನನ್ನಿಂದ ಬದಲಾಗಬಲ್ಲುದೋ
ಅದನ್ನು ಬದಲಾಯಿಸುವ ಧೈರ್ಯವನು ನೀಡು
ಇವೆಲ್ಲಕ್ಕೂ ಮಿಗಿಲಾಗಿ ಬೇಡುವೆನು ನಿನ್ನ
ಇವೆರಡರ ಅಂತರವ ತಿಳಿವಂತೆ ಮಾಡು”
ರಜೆಯೊಂದು ಸಂಪನ್ನವಾಗುವುದು ಹೀಗೆ
ಹೊಸದೊಂದು ಪ್ರಾರ್ಥನೆಯು ಎದೆಗಿಳಿದ ಹಾಗೆ

             

‍ಲೇಖಕರು avadhi

29 June, 2023

2 Comments

  1. ಕುಸುಮ ಪಟೇಲ್

    ಸುಧಾ ಅವರೆ ಕವಿತೆ ತುಂಬಾ ಇಷ್ಟ ಆಯ್ತು. ದೂರದಲ್ಲಿರುವ ಮಗನ ನೆನಪು ತೇಲಿ ಬಂತು

  2. Kusuma Patel

    ಸುಧಾ ಅವರೆ ನಿಮ್ಮ ಕವಿತೆ ತುಂಬಾ ಇಷ್ಟ ಆಯಿತು. ದೂರದಲ್ಲಿರುವ ಮಗನ ನೆನಪು ತೇಲಿ ಬಂತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading