ಶ್ರೀನಿವಾಸ ಪ್ರಭು ಅಂಕಣ: ನಿಮ್ಮ ಅದೃಷ್ಟ ಚೆನ್ನಾಗಿತ್ತು..ನೀವು ಬಚಾವಾಗಿಬಿಟ್ರಿ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

102
———————
ಈ ಕಾಲಘಟ್ಟದಲ್ಲಿಯೇ ಬಿಡುವು ಸಿಕ್ಕಾಗಲೆಲ್ಲಾ ಹೊರಗಡೆ ಬೇರೆ ಬೇರೆ ನಿರ್ಮಾಪಕರಿಗೆ ಕಾರ್ಯಕ್ರಮಗಳನ್ನು ನಿರ್ದೇಶಿಸಿಕೊಡುತ್ತಿದ್ದೆ.ದೂರದರ್ಶನದಲ್ಲಿ ಕೆಲಸದಲ್ಲಿದ್ದುಕೊಂಡು ಹಾಗೆ ಮಾಡುವುದು ಕೇಂದ್ರದ ನಿಯಮಾವಳಿಗೆ ವಿರುದ್ಧವಾದುದರಿಂದ ಬೇರೆ ಹೆಸರಿಟ್ಟುಕೊಳ್ಳುತ್ತಿದ್ದೆ.

ಕೆಲವೊಮ್ಮೆ ಪ್ರಭುದೇವ..ಕೆಲವೊಮ್ಮೆ ಶ್ರೀ ಪ್ರಭಾಕರ…ಹೀಗೆ! ಆಗಷ್ಟೇ ಉದಯವಾಗಿ ಬೆಳವಣಿಗೆಯ ಪ್ರಾಥಮಿಕ ಹಂತದಲ್ಲಿದ್ದ ಉದಯ ಟಿ ವಿ ಗೂ ಸಹಾ ಹೀಗೆ ಬೇರೆ ಹೆಸರಿನಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿಕೊಟ್ಟದ್ದುಂಟು. ಹೀಗೆ ಕೆಲಸ ಮಾಡಿಕೊಟ್ಟದ್ದಕ್ಕೆ ಪ್ರತಿಸಲವೂ ಮಾತಾಡಿಕೊಂಡಷ್ಟು ಸಂಭಾವನೆ ಕೈ ಸೇರುತ್ತಿತ್ತು ಎಂದೇನಿಲ್ಲ! ಚಂದದ ಟೋಪಿಯನ್ನು ತಲೆಯ ಮೇಲೆ ಕೂರಿಸಿ ಕೈಕುಲುಕಿ ಹೋದವರೆಷ್ಟೋ ಮಂದಿ! ನಾನು ಅವರಿಗೆ ಕೆಲಸ ಮಾಡಿಕೊಟ್ಟದ್ದಕ್ಕೆ ಸಾಕ್ಷಿ—ಪುರಾವೆ—ಕರಾರು ಪತ್ರಗಳೇನೂ ಇರುತ್ತಿರಲಿಲ್ಲವಾದ್ದರಿಂದ ನಾನು ಏನನ್ನೂ ಜಬರಿಸಿ ಕೇಳುವಂತಿರಲಿಲ್ಲ! ಜತೆಗೆ ನಾನು ಕುಳಿತದ್ದೇ ಗಾಜಿನ ಮನೆಯಲ್ಲಿ! ಎದುರಿಗೆ ಕಲ್ಲು ಹಿಡಿದು ನಿಂತವರೊಂದಿಗೆ ಚಕಮಕಿ ಸಾಧ್ಯವೇ!!? “ಹೃದಯಕ್ಕೆ ಗಾಸಿಯಾದಾಗಲೆಲ್ಲಾ ಮೌನಕ್ಕೆ ಶರಣಾಗುವೆ..ಇಲ್ಲವೇ ನಸುನಕ್ಕುಬಿಡುವೆ! ಏಕೆಂದರೆ ಜನರಿಂದ ಹೀಗೆ ಮೋಸಗೊಳ್ಳುವುದು ರೂಢಿಯೇ ಆಗಿ ಹೋಗಿದೆ!” ಎಂಬ ಒಂದು ಗಜ಼ಲಿನ ಶೇರ್ ನಂತೆ ನಾನೂ ನಕ್ಕು ಸುಮ್ಮನಾಗಿಬಿಡುತ್ತಿದ್ದೆ.

ಒಬ್ಬ ನಿರ್ಮಾಪಕನಂತೂ—ರಘುವೀರ ಅಂತಿಟ್ಟುಕೊಳ್ಳಿ—ಇಪ್ಪತ್ತಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಮಾಡಿಸಿಕೊಂಡು ‘ಸಂಭಾವನೆಯ ಹಣ ಈಗ..ನಾಳೆ..ಕೊಟ್ಟುಬಿಡುತ್ತೇನೆ” ಎಂದು ಮೂಗಿಗೆ ತುಪ್ಪ ಸವರುತ್ತಲೇ ಉಂಡೆ ನಾಮ ತಿಕ್ಕಿದ್ದ! ನಾಮದಲ್ಲೇ ಕೃತವಾಗಿದ್ದರೆ ಚೆನ್ನಿರುತ್ತಿತ್ತು…ಆದರೆ ಅಲ್ಲಿಂದಾಚೆಗಿನ ಕೆಲ ಬೆಳವಣಿಗೆಗಳು ನನ್ನ ಬದುಕಿನ ದಾರಿಯನ್ನೇ ಬದಲಿಸುವುದಕ್ಕೆ ಕಾರಣೀಭೂತವಾಗಿಬಿಟ್ಟವು.ಆ ರೋಚಕ ಪ್ರಸಂಗಗಳ ವಿವರಗಳಿಗೆ ಮುಂದಿನ ಪುಟಗಳಲ್ಲಿ ಬರುತ್ತೇನೆ.

ನಾನು ದೂರದರ್ಶನಕ್ಕೆ ಸೇರಿ 14 ವರ್ಷಗಳಾಗುತ್ತಾ ಬಂದಿದ್ದವು.ಆಗಲೇ ಸಹಾಯಕ ನಿರ್ದೇಶಕರಾಗಿ ಬಡ್ತಿ ಆಗಬಹುದೆಂಬ ನಂಬಲರ್ಹ ಸುದ್ದಿ ದೆಹಲಿಯ ಮಿತ್ರರಿಂದ ಬಂದುಮುಟ್ಟಿತು.ಅಯ್ಯೋ ದೇವರೇ! ಬಡ್ತಿಯೇ?! ಅಂದರೆ ಅದರ ಬೆನ್ನಿಗೇ ವರ್ಗಾವಣೆಯೂ ಖಚಿತವೇ! ಒಮ್ಮೆ ವರ್ಗಾವಣೆಯಾಗಿ ಹೊರಟೆನೆಂದರೆ ಮತ್ತೆ ಬೆಂಗಳೂರಿನ ಮುಖ ನೋಡುವುದೆಂದಿಗೋ!! ಬೆಂಗಳೂರಿನ ನೀರು ನೆಲೆ ತಪ್ಪಿಸುವುದಾದರೆ ಈ ಬಡ್ತಿಯೇ ಬೇಡ ಎಂದು ಮನಸ್ಸಿನಲ್ಲೇ ಪ್ರಾರ್ಥನೆ ಸಲ್ಲಿಸತೊಡಗಿದೆ! “ಅದು ಬಂದ ಕಾಲಕ್ಕೆ ನೋಡಿಕೊಳ್ಳೋಣ..ಈಗಿನಿಂದಲೇ ಯಾಕೆ ಸುಮ್ಮನೆ ಒದ್ದಾಡ್ತೀರಿ?”ಎಂದು ರಂಜನಿ ಸಮಾಧಾನ ಹೇಳಿದಳು.

ಬಳ್ಳಾರಿಯಲ್ಲಿ ಹುಲಗಪ್ಪನವರ ಜೈಲುನಾಟಕದ ಚಿತ್ರೀಕರಣವನ್ನು ಮುಗಿಸಿಕೊಂಡು ಬಂದಮೇಲೆ ತೀವ್ರ ಅನಾರೋಗ್ಯವಾಗಿ ಹಾಸಿಗೆ ಹಿಡಿದುಬಿಟ್ಟೆ. ಧಾರಾವಾಹಿ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅಷ್ಟು ದಿನಗಳಿಂದ ಅನುಭವಿಸಿಕೊಂಡು ಬಂದಿದ್ದ ಒತ್ತಡಗಳು..ಕೆಲವೊಮ್ಮೆ ಭಯೋತ್ಪಾದಕರಂತಹ ಕೆಲ ನಿರ್ಮಾಪಕರ ಬೆದರಿಕೆಯ ಕರೆಗಳಿಂದಾಗಿ ಎದುರಿಸಿದ್ದ ಆತಂಕದ ಕ್ಷಣಗಳು..ಈಗ ಕಡು ಬಿಸಿಲಿನ ಬಳ್ಳಾರಿಯ ಧಗೆಯೊಟ್ಟಿಗೆ ನೀರು ಆಹಾರದಲ್ಲಾದ ವ್ಯತ್ಯಾಸ…ಕೆಂಪು ಮೆಣಸಿನ ಕಾಯಿಯ ‘ಹಾಹಾಖಾರ’ದ ಮಸಾಲೆ ಅಡುಗೆ…ಎಲ್ಲವೂ ಸೇರಿಕೊಂಡು ಗ್ಯಾಸ್ಟ್ರೋ ಎಂಟರೈಟಿಸ್ ಆಗಿ ಸಾಕಷ್ಟು ದಿನಗಳೇ ಮಲಗಿಬಿಟ್ಟೆ. ಕಟ್ಟುನಿಟ್ಟು ಪಥ್ಯದೊಂದಿಗೆ ನಿಯಮಿತ ಔಷಧೋಪಚಾರಗಳನ್ನು ಮಾಡಿಕೊಂಡರೂ ಚೇತರಿಸಿಕೊಳ್ಳಲು 15—20 ದಿನಗಳೇ ಬೇಕಾದವು.

ಹಾಗೇ ಒಂದು ದಿನ ಹಾಸಿಗೆಯಲ್ಲಿ ಮಲಗಿದ್ದಾಗ ಜನರ ಗುಣಸ್ವಭಾವಗಳ ಬಗ್ಗೆ ಹಾಗೂ ವರ್ತನೆಗಳ ಬಗ್ಗೆಯೇ ಚಿಂತಿಸುತ್ತಿದ್ದೆ.ನಾನು ಧಾರಾವಾಹಿ ಹಾಗೂ ವಾಣಿಜ್ಯ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದಾಗ ಅಕಸ್ಮಾತ್ ಒಮ್ಮೆ ಸೀನಿದರೆ ಸಾಕು,”ಸರ್ ,ಯಾಕೋ ನಿಮ್ಮ ಆರೋಗ್ಯ ಸರಿ ಇಲ್ಲ ಅಂತ ಕಾಣುತ್ತೆ..ಬನ್ನಿ ಸರ್ ,ನನ್ನ ಕಾರ್ ಇದೆ..ಡಾಕ್ಟ್ರಹತ್ರ ಹೋಗಿಬಂದುಬಿಡೋಣ” ಎಂದು ಅಪಾರ ಕಾಳಜಿ ತೋರಿಸುತ್ತಾ ನನ್ನನ್ನು ಮೆಚ್ಚಿಸಲು ಯತ್ನಿಸುತ್ತಿದ್ದ ‘ಅವಕಾಶವಾದಿ’ ಜನ, ಈಗ ನಾನು ಹೀಗೆ ದಿನಗಟ್ಟಲೆ ಮಲಗಿದ್ದರೂ ಒಮ್ಮೆ ಉಪಚಾರಕ್ಕಾಗಿಯಾದರೂ ‘ಹೇಗಿದ್ದೀರಿ’ ಎಂದು ಫೋನ್ ಮಾಡಿ ವಿಚಾರಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ! ಪ್ರಪಂಚ ಇರುವುದೇ ಹಾಗಲ್ಲವೇ?! ಅಗತ್ಯವಿಲ್ಲದ ಅಥವಾ ಉಪಯೋಗಕ್ಕೆ ಬಾರದ ಗೆಳೆಯರು..ಸಂಬಂಧಗಳು ಯಾಕೆ ಬೇಕು? ಹೊಳೆ ದಾಟಿಸಿದ ಅಂಬಿಗನಾದರೂ ಯಾಕೆ ಬೇಕು?..ಹೀಗೆಲ್ಲಾ ಯೋಚಿಸುತ್ತಾ ಮನಸ್ಸು ವ್ಯಗ್ರಗೊಳ್ಳುತ್ತಿತ್ತಾದರೂ ಇಂಥದ್ದೆಲ್ಲಾ ‘ರೂಢಿ’ಯೇ ಆಗಿದ್ದರಿಂದ ಹಾಗೇ ಸಮಾಧಾನವನ್ನೂ ಮಾಡಿಕೊಳ್ಳುತ್ತಿದ್ದೆ.

ಒಂದಷ್ಟು ದಿನ ವಿಶ್ರಾಂತಿ ತೆಗೆದುಕೊಂಡು ಸುಧಾರಿಸಿಕೊಂಡು ಆಫೀಸಿನ ಕೆಲಸಕ್ಕೆ ಮರಳಿದೆ.ಅಂದು ಸಂಜೆ ನಾನು ಹಿಂದೆ ಹೇಳಿದ ‘ಅವಕಾಶವಾದಿ’ಗಳ ತಂಡದ ಮುಂಚೂಣಿಯ ಒಬ್ಬ ನಿರ್ಮಾಪಕ—ಕಮಲೇಶ—ಎದುರಾದ.ಇವನದೊಂದು ಒಳ್ಳೆಯ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ನಾನೇ ಮಂಜೂರಾತಿ ಕೊಟ್ಟು ಆ ಕಾರ್ಯಕ್ರಮವೂ ಬಹಳ ಜನಪ್ರಿಯವಾಗಿ ಈ ಕಮಲೇಶ ದೊಡ್ಡ ನಿರ್ಮಾಪಕನಂತೆ ಪೋಸು಼ ಕೊಡತೊಡಗಿದ್ದ! ಇಂಥವರನ್ನೆಲ್ಲಾ ನೋಡಿ ನಾನೂ ನಕ್ಕು ಸುಮ್ಮನಾಗುತ್ತಿದ್ದೆ.ಅಂದು ನನಗೆ ಎದುರಾದ ಈ ಕಮಲೇಶ,”ಏನ್ಸಾರ್ ,ಹೇಗಿದೀರಿ? ಹುಷಾರಿರಲಿಲ್ವಂತೆ..ಯಾರೋ ಹೇಳಿದರು..ಈಗ ವಾಸೀನಾ”? ಎಂದು ಒಂದು ಉಡಾಫೆಯ ದನಿಯಲ್ಲಿ ಕೇಳಿದ.(ಅಥವಾ ನನ್ನ ವ್ಯಗ್ರಗೊಂಡಿದ್ದ ಮನಸ್ಸಿಗೆ ಹಾಗೆ ಭಾಸವಾಯಿತೋ ಕಾಣೆ!)

ಯಾಕೋ ಇದ್ದಕ್ಕಿದ್ದಹಾಗೆ ಸಿಟ್ಟು ಬಂದುಬಿಟ್ಟಿತು! ಕಮಲೇಶನನ್ನೂ ಅವನಂತಹ ಇತರ ಅವಕಾಶವಾದಿಗಳನ್ನೂ ಚೆನ್ನಾಗಿ ಬೈದುಬಿಟ್ಟೆ! ‘ಕೃತಘ್ನರು’..’ಮಾನವೀಯತೆ ಇಲ್ಲದವರು’…’ಚಮಚಾಗಿರಿ ಮಾಡುವವರು’..ಇತ್ಯಾದಿ ಪರಮಸತ್ಯ ಚಾಟಿ ಏಟುಗಳ ಜತೆಗೆ ಕೆಲವು ಆಕ್ಷೇಪಾರ್ಹ ಬೈಗುಳಗಳೂ ಸಿಟ್ಟಿನ ರಭಸದಲ್ಲಿ ಹೊರಧುಮುಕಿಬಿಟ್ಟವು! ಕಮಲೇಶನೂ ಏನೂ ಮಾತಾಡದೆ ನಾನು ಬೈದು ದಣಿದು ಸುಮ್ಮನಾಗುವ ತನಕ ತಾನೂ ಸುಮ್ಮನೆ ನಿಂತಿದ್ದ! ಅದೇ ವೇಳೆಗೆ ರಘುವೀರನೂ ಗ್ರಹಚಾರ ಕೆಟ್ಟು ಅಲ್ಲಿಗೆ ಬಂದ! ಅವನಿಗೂ ಒಂದಿಷ್ಟು ಬೈಗುಳ ಪ್ರಸಾದವನ್ನು ನೀಡಿ, ನನಗೆ ಸಂದಾಯವಾಗಬೇಕಾಗಿರುವ ಸಂಭಾವನೆಯನ್ನಾದರೂ ತಡಮಾಡದೇ ಕೊಡಬೇಕೆಂದು ಒತ್ತಡ ಹೇರಿ ಮಾತಾಡಿದೆ.ಕೊಂಚ ಪೆಚ್ಚಾದ ರಘು ಆದಷ್ಟು ಬೇಗ ಲೆಕ್ಕ ಚುಕ್ತ ಮಾಡ್ತೀನಿ ಅಂತ !ಭರವಸೆ ಕೊಟ್ಟ.ಅವರಿಬ್ಬರನ್ನೂ ಅಷ್ಟು ಟೀಕಿಸಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು!ಅದರಿಂದಾಗಿ ಉದರವಾಯುವಿನ ಜತೆಗೆ ಸೇರಿಕೊಂಡು ಬಾಧಿಸುತ್ತಿದ್ದ ಬೇರೆ ಎಷ್ಟೋ ಸಂಕಟಗಳಿಗೆ ಒಂದು ಹೊರದಾರಿ ಸಿಕ್ಕಂತಾಗಿ ಆ ಕ್ಷಣಕ್ಕೆ ಮನಸ್ಸು ಹಗುರಾದರೂ ದೊಡ್ಡದಾಗಿ ಬಂದೆರಗುವ ಸಮಸ್ಯೆಯೊಂದಕ್ಕೂ ಅದೇ ಬೀಜಾಂಕುರವೂ ಆಗಿಹೋಗಿತ್ತು!

ಇದಾದ ಕೆಲವು ದಿನಗಳಿಗೆ ಮನೆಯಲ್ಲಿ ಮಗ ಅನಿರುದ್ಧನ ಆರೋಗ್ಯ ಯಾಕೋ ಇದ್ದಕ್ಕಿದ್ದಹಾಗೆ ಬಿಗಡಾಯಿಸಿಬಿಟ್ಟಿತು.ಮಗುವಿಗೆ ಶೀತ ಅಮರಿಕೊಂಡು ಉಸಿರಾಡುವುದೇ ಕಷ್ಟವಾಗಿಬಿಟ್ಟಿತು.ರಂಜನಿ ಫೋನ್ ಮಾಡಿ ಮಗುವಿನ ಅನಾರೋಗ್ಯದ ಸಂಗತಿಯನ್ನು ತಿಳಿಸಿ “ಆದಷ್ಟು ಬೇಗ ಮನೆಗೆ ಬಂದುಬಿಡಿ..ಡಾಕ್ಟ್ರ ಹತ್ರ ಕರಕೊಂಡು ಹೋಗಬೇಕು” ಎಂದಳು.ನಾನೂ ತಡಮಾಡದೇ ಮನೆಗೆ ಹೋಗಿ ರಂಜನಿಯೊಂದಿಗೆ ಮಗುವನ್ನು ನವರಂಗ್ ಥಿಯೇಟರ್ ಬಳಿ ಇದ್ದ ಡಾ॥ಗೋಪಾಲಕೃಷ್ಣ ಎಂಬ ಮಕ್ಕಳತಜ್ಞರಿಗೆ ತೋರಿಸಲು ಕರೆದುಕೊಂಡು ಹೋದೆ.ವಿಷಯ ತಿಳಿಯುತ್ತಿದ್ದಂತೆ ನಳಿನಿ ಅಕ್ಕ ಹಾಗೂ ಮೂರ್ತಿ ಭಾವ ಕ್ಲಿನಿಕ್ ಗೆ ಧಾವಿಸಿ ಬಂದರು.ಮೊದಲಿನಿಂದಲೂ ಅನಿರುದ್ಧನೆಂದರೆ ಅವರಿಗೆ ವಿಶೇಷ ಪ್ರೀತಿ.ಡಾ॥ಗೋಪಾಲಕೃಷ್ಣ ಅವರನ್ನು ಪರಿಚಯ ಮಾಡಿಕೊಟ್ಟಿದ್ದೂ ಸಹಾ ಅವರೇ! ಮಗುವನ್ನು ತಪಾಸಣೆ ಮಾಡಿದ ವೈದ್ಯರು,”ಸೋಂಕು ಸ್ವಲ್ಪ ಜಾಸ್ತಿ ಅನ್ನೋ ಹಾಗೇ ತಗಲಿದೆ..ನೆಬ್ಯುಲೈಸೇಷನ್ ಆಗಬೇಕು.ಇಲ್ಲೇ ವ್ಯವಸ್ಥೆ ಮಾಡ್ತೀನಿ..ಒಂದೆರಡು ತಾಸು ಮಗು ಇಲ್ಲೇ ಇರಲಿ..ಆಮೇಲೆ ಮನೇಗೆ ಕರಕೊಂಡು ಹೋಗಿ ” ಎಂದರು.
ಒಂದೆರಡು ತಾಸು ಅಲ್ಲಿಯೇ ಚಿಕಿತ್ಸೆಯಾದ ಬಳಿಕ ಡಾ॥ಗೋಪಾಲಕೃಷ್ಣ ಅವರು,”ಈಗ ಮಗುವನ್ನು ಮನೇಗೆ ಕರೆದುಕೊಂಡು ಹೋಗಬಹುದು…ಯಾವುದಕ್ಕೂ ಬೆಳಿಗ್ಗೆ ಹತ್ತು ಗಂಟೇಗೆ ಒಂದ್ಸಲ ಮಗೂನ ನೋಡಿಬಿಡ್ತೇನೆ” ಎಂದು ಹೇಳಿ ನಮ್ಮನ್ನು ಕಳುಹಿಸಿಕೊಟ್ಟರು.ನಳಿನಿ ಅಕ್ಕನಿಗೋ ಮಗುವನ್ನು ಬಿಟ್ಟು ಹೋಗಲು ಮನಸ್ಸೇ ಇಲ್ಲ! “ಪ್ರಭು,ಇವತ್ತೊಂದು ದಿವಸ ಮಗು ನನ್ನ ಜೊತೇಲೇ ಇರಲಿ..ಇಲ್ಲದಿದ್ರೆ ನನಗೆ ತುಂಬಾ ಕಷ್ಟವಾಗುತ್ತೆ” ಎಂದಳು.ಮೂರ್ತಿಭಾವನೂ ಹಾಗೇ ಅಭಿಪ್ರಾಯಪಟ್ಟರು.ಆದರೆ ನಾವು ಮಗುವನ್ನು—ಅದೂ ಆರೋಗ್ಯ ಅಷ್ಟು ಸರಿ ಇಲ್ಲದ ಮಗುವನ್ನು— ಬಿಟ್ಟಿರುವುದಾದರೂ ಹೇಗೆ? ನಾನೇ ಅಕ್ಕನಿಗೆ ಹೇಳಿದೆ: “ಸರಿ ಅಕ್ಕ,ನಾವೂ ಇವತ್ತಿನ ಮಟ್ಟಿಗೆ ನಿಮ್ಮ ಮನೇಗೇ ಬಂದುಬಿಡ್ತೀವಿ..ಬೆಳಿಗ್ಗೆ ಈ ಕಡೆ ಬಂದರಾಯ್ತು”.

ಆಗ ರಾತ್ರಿ ಸುಮಾರು ಎಂಟು ಗಂಟೆಯ ಸಮಯ.ಅಂದು ಅಮಾವಾಸ್ಯೆ ಬೇರೆ.ಜಿಟಿ ಜಿಟಿ ಮಳೆ ಬೇರೆ ಸುರಿಯುತ್ತಲೇ ಇತ್ತು.ನಾವು ಮನೆಗೆ ಹೋಗಿ ಅಗತ್ಯ ಬಟ್ಟೆ ಬರೆಗಳನ್ನು ತೆಗೆದುಕೊಂಡು,ರಾಧಿಕಾಳನ್ನು ಪದ್ಮಿನಿ ಚಿಕ್ಕಿಯ ಸುಪರ್ದಿಗೆ ಬಿಟ್ಟು, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನ ಆವರಣದಲ್ಲಿದ್ದ ಮೂರ್ತಿಭಾವ—ನಳಿನಿ ಅಕ್ಕನ ಮನೆಗೆ ಮಗುವನ್ನೂ ಕರೆದುಕೊಂಡು ಹೊರಟುಬಿಟ್ಟೆವು.ಹೊರಟಾಗ ದಾರಿಯಲ್ಲಿ ನಿರ್ಮಾಪಕ ರಘುವಿನಿಂದ ಫೋನ್ ಕರೆ ಬಂತು: “ಸರ್ , ಇವತ್ತು ರಾತ್ರಿ ಮನೇಲಿ ಎಷ್ಟುಹೊತ್ತಿಗೆ ಸಿಕ್ತೀರಿ?” ಎಂದ ರಘು.ಓಹೋ! ಮಾತು ಕೊಟ್ಟಿದ್ದಂತೆ ಸಂಭಾವನೆಯ ಹಣ ಹೊಂದಿಸಿಕೊಂಡು ಬರುತ್ತಿದ್ದಾನೆಂದು ಅನ್ನಿಸಿ ಖುಷಿಯಾಯಿತು.”ಇವತ್ತು ಮನೇಲಿರೋಲ್ಲ ರಘು..ನಾಳೆ ಬನ್ನಿ” ಎಂದು ನುಡಿದು ಅಕ್ಕನ ಮನೆಗೆ ಹೋಗಿ ಸೇರಿದೆವು.

ರಾತ್ರಿ ಸುಮಾರು 9 ಗಂಟೆಯ ಸಮಯ.ರಂಜನಿಯ ಅಣ್ಣ ಬಾಬು ಅಕ್ಕನ ಮನೆಗೆ ಫೋನ್ ಮಾಡಿದರು:” ನಿಮ್ಮ ಫ್ರೆಂಡ್ ರಘುವೀರ ನಿಮ್ಮನ್ನ ಕೇಳಿಕೊಂಡು ಬಂದಿದ್ರು..ನೀವಿವತ್ತು ಬರೋಲ್ಲ ಅಂತ ಹೇಳಿ ಕಳಿಸಿದೆ..ಆದರೂ ಯಾಕೋ ಇಲ್ಲೇ ಸುತ್ತಮುತ್ತ ಓಡಾಡಿಕೊಂಡಿದಾರೆ..ಅವರ ಸ್ನೇಹಿತರೂ ಯಾರೋ 3—4 ಜನ ಬಂದಿರೋ ಹಾಗಿದೆ..ಮೇಲುಗಡೆ ಅಂಗಡಿ ಹತ್ರ ಒಂದು ಟಾಟಾ ಸುಮೋನಲ್ಲಿ ಕೂತುಕೊಂಡು ಮಾತಾಡ್ತಿದ್ರು..ನಾನು ಮೊಸರು ತರೋಕೇಂತ ಅಂಗಡೀಗೆ ಹೋದಾಗ ನೋಡಿದೆ..ಯಾರೋ ಪ್ರೊಡ್ಯೂಸರ್ ನ ಕರಕೊಂಡು ಬಂದಿದ್ರೋ ಏನೋ..” ಎಂದರು.
ಅರೆ! ನಾನು ಇರುವುದಿಲ್ಲ ಎಂದು ಗೊತ್ತಿದ್ದೂ ಯಾಕೆ ಮನೆಯ ಬಳಿ ಬಂದಿದ್ದಾನೆ ಎಂದು ಆಶ್ಚರ್ಯವಾದರೂ ಆ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳದೆ ‘ಸುಮ್ಮನೆ ಒಂದು ಛಾನ್ಸ್ ತೆಗೆದುಕೊಂಡಿರಬಹುದು’ಎಂದು ಭಾವಿಸಿ ಸುಮ್ಮನಾಗಿಬಿಟ್ಟೆ.

ಮರುದಿನ ಬೆಳಿಗ್ಗೆಯ ವೇಳೆಗೆ ಅನಿರುದ್ಧ ಎಷ್ಟೋ ಗೆಲುವಾಗಿದ್ದ.ಅವನನ್ನು ಅಲ್ಲಿಯೇ ನಳಿನಿ ಅತ್ತೆಯ ಉಸ್ತುವಾರಿಗೆ ಬಿಟ್ಟು ನಾನು ಹಾಗೂ ರಂಜನಿ ನಮ್ಮ ಮನೆಯತ್ತ ಹೊರಟೆವು.ನಂತರ
ರಂಜನಿಯನ್ನು ಕಾಲೇಜಿಗೆ ಬಿಟ್ಟು ನಾನು ಆಫೀಸಿಗೆ ಹೋದೆ.ಅಲ್ಲಿ ನೋಡಿದರೆ ಸಾಕಷ್ಟು ಜನ ಅಲ್ಲಲ್ಲಿ ಗುಂಪುಕಟ್ಟಿಕೊಂಡು ಮಾತಾಡುತ್ತಿದ್ದಾರೆ…ವಾತಾವರಣದಲ್ಲಿ ಒಂದು ರೀತಿಯ ಬಿಗುವು ಕಾಣುತ್ತಿದೆ..ಏನೋ ನಡೆಯಬಾರದ್ದು ನಡೆದಿರುವಂತಹ ಆತಂಕದ ಭಾವ ನನ್ನ ಕೆಲ ಸಹೋದ್ಯೋಗಿಗಳ ಮುಖದ ಮೇಲೆ ಮನೆ ಮಾಡಿದೆ! “ಯಾಕ್ರಪ್ಪಾ ಎಲ್ಲಾ ಹೀಗಿದೀರಾ? ಏನಾಯ್ತು?” ಎಂದು ನಾನೇ ಅವರನ್ನು ವಿಚಾರಿಸಿದೆ.ಅವರಲ್ಲೊಬ್ಬ,”ನಿಮಗಿನ್ನೂ ವಿಷಯ ಗೊತ್ತಾಗಿಲ್ವಾ ಸಾರ್? “ಎಂದ.”ಇಲ್ಲ ಕಣ್ರಯ್ಯಾ..ಅದೇನಾಗಿದೆ ಅಂತ ಹೇಳಬಾರದಾ?” ಎಂದೆ ನಾನು ಕೊಂಚ ಅಸಹನೆಯಿಂದ.

ಒಬ್ಬ ನಿಧಾನವಾಗಿ ಹೇಳತೊಡಗಿದ: “ನಿನ್ನೆ ರಾತ್ರಿ ಸಿ ಬಿ ಐ ನೋರು ಧಾರಾವಾಹಿ ವಿಭಾಗದ ಮುಖ್ಯಸ್ಥರನ್ನ ಹಾಗೂ ಅವರ ಸಹಾಯಕರನ್ನ ಲಂಚ ತೊಗೋತಿರೋವಾಗ ರೆಡ್ ಹ್ಯಾಂಡ್ ಆಗಿ ಹಿಡಿದುಬಿಟ್ಟಿದಾರೆ ಸರ್” . ಸುದ್ದಿ ಕೇಳುತ್ತಿದ್ದಂತೆ ತಲೆ ಗಿರ್ರೆಂದು ತಿರುಗತೊಡಗಿತು.ನಾನು ಆವರೆಗೆ ನೋಡಿಕೊಳ್ಳುತ್ತಿದ್ದ ವಿಭಾಗ ಅದು! ನನ್ನ ಹಿಂದೆ ಆ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗಲೇ ಸಿಬಿಐ ಬಲೆಗೆ ಬಿದ್ದು ಅಮಾನತುಗೊಂಡಿದ್ದರು.ನಾನು ಒಂದೂವರೆ ವರ್ಷ ಆ ವಿಭಾಗದಲ್ಲಿ ಉಸಿರು ಬಿಗಿಹಿಡಿದುಕೊಂಡು ಕೆಲಸ ಮಾಡಿ ಸ್ವಇಚ್ಛೆಯಿಂದ ಬಿಟ್ಟುಬಂದಿದ್ದೆ.ನನ್ನ ನಂತರ ಬಂದ ಅಧಿಕಾರಿ ಹಾಗೂ ಅವರ ಸಹಾಯಕ ಈಗ ಮತ್ತೆ ಸಿಬಿಐ ಖೆಡ್ಡಾಗೆ ಬಿದ್ದಿದ್ದಾರೆ!

ಯಾಕೋ ಹಿತವೆನಿಸಲಿಲ್ಲ..ಸಂಕಟವಾಗತೊಡಗಿತು. ನಿಧಾನವಾಗಿ ಆಫೀಸಿನ ಒಳಗೆ ಕಾಲಿರಿಸಿದೆ. ಇಡೀ ಆಫೀಸ್ ತುಂಬಾ ಆತಂಕದ ವಾತಾವರಣ ಹರಡಿತ್ತು.ನಾನು ಒಳಬರುತ್ತಿದ್ದಂತೆ ಯಾಕೋ ಮಾಮೂಲಿನ ಸ್ವಾಗತ ದೊರೆಯುತ್ತಿಲ್ಲವೇ ಅನ್ನಿಸಿ ಕಸಿವಿಸಿಯಾಯಿತು.ಯಾಕೋ ಎಲ್ಲರೂ ನನ್ನನ್ನೇ ದಿಟ್ಟಿಸಿ ನೋಡುತ್ತಿರುವಂತೆ,ಬೆನ್ನ ಹಿಂದಿನಿಂದಲೂ ಕಣ್ಣುಗಳು ಇರಿಯುತ್ತಿರುವಂತೆ ಭಾಸವಾಗಿ ತುಂಬಾ ಇರುಸು ಮುರುಸಾಗತೊಡಗಿತು.

ನಿಧಾನವಾಗಿ ಒಂದೊಂದೇ ವಿವರಗಳು ಬೆಳಕಿಗೆ ಬರತೊಡಗಿದವು.ನನ್ನ ಸಹೋದ್ಯೋಗಿಗಳ ಮೇಲೆ ದೂರು ಕೊಟ್ಟು ಹಿಡಿಸಿದವರು ನನಗೂ ಚೆನ್ನಾಗಿಯೇ ಪರಿಚಿತರೇ! ಬಹಳ ಪ್ರೀತಿ—ವಿಶ್ವಾಸ—ಆತ್ಮೀಯತೆಯಿಂದಲೇ ನಡೆದುಕೊಳ್ಳುತ್ತಿದ್ದವರು.ಅದಾವ ಕಾರಣಕ್ಕೆ ನನ್ನ ಸಹೋದ್ಯೋಗಿಗಳು ಅವರಿಗೆ ಶತ್ರುಗಳಾಗಿಬಿಟ್ಟರೋ ಕಾಣೆ..ಈಗ ಇದ್ದಕ್ಕಿದ್ದಹಾಗೆ ಇಂಥದೊಂದು ಅವಘಡ ಸಂಭವಿಸಿಬಿಟ್ಟಿದೆ! ಅಬ್ಬಾ! ಅವರುಗಳ ಕ್ರೂರದೃಷ್ಟಿ ಸಧ್ಯ ನನ್ನ ಮೇಲೆ ಬೀಳಲಿಲ್ಲವಲ್ಲಾ ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಂತೆಯೇ ಒಬ್ಬ ಗೆಳೆಯ ನನ್ನ ಕೋಣೆಗೆ ಬಂದು ಮೆಲುದನಿಯಲ್ಲಿ ಮಾತಾಡತೊಡಗಿದ: ಪ್ರಭುಗಳೇ,ಮೊದಲು ಹೋಗಿ ದೇವರಿಗೆ ದೀಪ ಹಚ್ಚಿ ಹಣ್ಣು ಕಾಯಿ ಮಾಡಿಸಿ..ನಿಮ್ಮ ಅದೃಷ್ಟ ದೊಡ್ಡದು…ಕೂದಲೆಳೆ ಅಂತರದಲ್ಲಿ ಬಚಾವಾಗಿದೀರಿ..ಇಲ್ಲದಿದ್ದರೆ ಇಷ್ಟುಹೊತ್ತಿಗೆ ಸಿಬಿಐ ನವರು ನಿಮ್ಮನ್ನೂ ಕೂರಿಸಿಕೊಂಡು ಅರೀತಿದ್ದಿರೋರು” ಎನ್ನುವುದೇ ಆ ಪುಣ್ಯಾತ್ಮ!

ನನಗಂತೂ ಗಾಬರಿ ಆತಂಕಗಳಿಂದ ಹೃದಯವೇ ಬಾಯಿಗೆ ಬಂದಂತಾಗಿಹೋಯಿತು. “ಏನು ಹೇಳ್ತಾ ಇದೀರಿ ನೀವು? ನನಗೆ ಯಾರಾದ್ರೂ ಏನು ಮಾಡೋಕೆ ಸಾಧ್ಯ? ಮೊದಲನೇದಾಗಿ ನನಗೂ ಆ ವಿಭಾಗಕ್ಕೂ ಯಾವ ಸಂಬಂಧಾನೂ ಇಲ್ಲ..ಅಂದಮೇಲೆ ನನಗೇನು ತೊಂದರೆ?” ಎಂದು ಧೈರ್ಯ ತುಂಬಿಕೊಂಡು ಕೇಳಿದೆ. ಆ ಗೆಳೆಯರು ನಗುತ್ತಾ ಮುಂದುವರಿಸಿದರು: “ಅಲ್ಲಿಗೆ ನಿಮಗಿನ್ನೂ ವಿಷಯ ಗೊತ್ತಾಗಿಲ್ಲ ಅಂತಾಯ್ತು..ಒಂದು ತಿಳ್ಕೊಳಿ ಸರ್…ತೊಂದರೆಗಳು ಹೇಳಿ ಕೇಳಿ ನಿಮ್ಮ ಅಪ್ಪಣೆ—ಒಪ್ಪಿಗೆ ಪಡಕೊಂಡು ಬರೋಲ್ಲ …ಎಷ್ಟೋ ಸಲ ಅವು ಬಂದಮೇಲೇ ಗೊತ್ತಾಗೋದು ಬಂದಿವೆ ಅಂತ! ಸರಿಯಾಗಿ ಕೇಳಿಸಿಕೊಳ್ಳಿ..ನಿನ್ನೆ ನಿಮ್ಮನ್ನೂ ಸಿಬಿಐ ಬಲೆಗೆ ಕೆಡವೋದಕ್ಕೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಾಗಿತ್ತು.ಅದೃಷ್ಟ ಚೆನ್ನಾಗಿತ್ತು..ನೀವು ಬಚಾವಾಗಿಬಿಟ್ರಿ..ಆ ಇಬ್ಬರು ನತದೃಷ್ಟರು ಸಿಕ್ಕಿಹಾಕಿಕೊಂಡುಬಿಟ್ಟರು..”ಎಂದಾಗ ಅಕ್ಷರಶಃ ತಲೆ ಗಿರ್ರೆಂದು ತಿರುಗತೊಡಗಿತು.ಕಣ್ಣು ಕತ್ತಲಿಟ್ಟುಕೊಂಡು ಬಂದಿತು.. ಎದ್ದುನಿಲ್ಲಲು ಹೋದವನು ಸಾಧ್ಯವಾಗದೇ ಧೊಪ್ಪೆಂದು ಹಾಗೇ ಕುರ್ಚಿಯಲ್ಲಿ ಕುಸಿದೆ!!

‍ಲೇಖಕರು avadhi

June 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: