ಸುಧಾ ಆಡುಕಳ ಅನುವಾದಿತ ಕಥೆ – ವಿನಾಶ…

ಮೂಲ: ರವೀಂದ್ರನಾಥ ಟ್ಯಾಗೋರ್

ಕನ್ನಡಕ್ಕೆ : ಸುಧಾ ಆಡುಕಳ

ಪ್ಯಾರಿಸ್ ನಗರದ ಹೊರಭಾಗದಲ್ಲೊಂದು ಪುಟ್ಟಗುಡಿಸಲಿತ್ತು. ಅಲ್ಲಿ ಪಿಯರಿ ಚೊಪಿನ್ ಎಂಬ ಮುದುಕನೊಬ್ಬ ವಾಸವಾಗಿದ್ದ. ಗುಡಿಸಲಿನ ಸುತ್ತಲೂಅವನದೊಂದು ಪುಟ್ಟತೋಟವಿತ್ತು. ಅಲ್ಲಿ ಅವನು ಅನೇಕ ಗಿಡಮರಗಳನ್ನು ಬೆಳೆಸಿದ್ದ. ಪಿಯರಿಗೆ ಒಂದು ವಿಶೇಷವಾದ ಹವ್ಯಾಸವಿತ್ತು. ಅವನು ವಿವಿಧ ಜಾತಿಯ ಸಸ್ಯಗಳನ್ನು ಕಸಿಮಾಡಿ ಹೊಸತಳಿಯನ್ನು ಕಂಡುಹಿಡಿಯುವಲ್ಲಿ ಪರಿಣಿತನಾಗಿದ್ದ. ಹಾಗೆ ಮಾಡುವುದರ ಮೂಲಕ ಅವನು ಹೂಗಳ ಬಣ್ಣವನ್ನು ಬದಲಾಯಿಸುತ್ತಿದ್ದ, ಹಣ್ಣುಗಳ ಗಾತ್ರಗಳನ್ನು ಬೇರಯಾಗಿಸುತ್ತಿದ್ದ.

ಆರು ತಿಂಗಳಿಗೆ ಬೆಳೆಯುವ ಬೆಳೆಯನ್ನು ಎರಡೇ ತಿಂಗಳುಗಳಲ್ಲಿ ಬೆಳೆಸುತ್ತಿದ್ದ. ಅವನ ತೋಟದ ಮಾವಿನ ಹಣ್ಣುಗಳು ಕೆಲವೊಮ್ಮೆ ಹಲಸಿನ ಹಣ್ಣಿನ ಗಾತ್ರಕ್ಕೆ ಬೆಳೆಯುತ್ತಿದ್ದವು. ಕೆಂಪು ಹೂಗಳು ನೀಲಿಯಾಗಿ, ಬಿಳಿಯ ಗೂಗಳು ನೇರಳೆಯಾಗಿ ಅರಳಿ ಕಣ್ಮನವನ್ನುತಣಿಸುತ್ತಿದ್ದವು. ಚಹಾದ ಎಲೆಗಳು ವಿಶೇಷ ಘಮವನ್ನು ತುಂಬಿಕೊಂಡು ನಳನಳಿಸುತ್ತಿದ್ದವು.

ಅವನ ತೋಟವನ್ನು ನೋಡಲೆಂದು ನಗರದಜನರು ಸಾಲುಸಾಲಾಗಿ ಬರುತ್ತಿದ್ದರು. ಆದರೆ ಪಿಯರಿಗೆ ವ್ಯವಹಾರಿಕ ಪ್ರಪಂಚದಅರಿವೇಇರಲಿಲ್ಲ. ತಾನು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮತ್ತು ಗಿಡಗಳನ್ನು ಅವನು ನೋಡಲು ಬಂದವರ ಒಂದೆರಡು ಮೆಚ್ಚುಗೆಯ ಮಾತುಗಳಿಗೆ ಬದಲಾಗಿ ನೀಡಿಬಿಡುತ್ತಿದ್ದ. “ನೀನು ನಿಜಕ್ಕೂಅದ್ಭುತ ಮೋಡಿಗಾರ!ಪ್ರಕೃತಿಯ ಬಣ್ಣಗಳನ್ನೇ ಬದಲಾಯಿಸುವಜಾದೂಗಾರ!” ಹೀಗೆಲ್ಲ ಹೇಳಿದರೆ ಸಾಕು, ಬಂದವರು ಕೇಳಿದ ಗಿಡಗಳನ್ನು ಮರುಮಾತಿಲ್ಲದೇಅವರಿಗೆ ನೀಡುತ್ತಿದ್ದ, ಆದರೆ ಪ್ರತಿಸಾರಿಯೂಅದರ ಬೆಲೆಯನ್ನು ಪಡೆಯಲು ಮರೆತುಬಿಡುತ್ತಿದ್ದ. ಹಾಗಾಗಿ ಅವನ ತೋಟವು ಅಭಿವೃದ್ಧಿಯಾದರೂ ಬಡತನ ಮಾತ್ರ ಅವನೊಂದಿಗೇ ಉಳಿದಿತ್ತು.

ಪಿಯರಿಗೆ ಅವನ ತೋಟವೆಂದರೆ ಸಂತೋಷದ ಸೆಲೆ. ಅಲ್ಲಿದುಡಿದಷ್ಟೂ ಅವನಿಗೆ ದಣಿವಿರಲಿಲ್ಲ. ಇವೆಲ್ಲದರೊಂದಿಗೆ ಅವನ ಬದುಕಿನಲ್ಲಿಇನ್ನೊಂದುಅತ್ಯಮೂಲ್ಯವಾದ ಪ್ರೀತಿಯಒರತೆಯಿತ್ತು. ಅದು ಅವನ ಮಗಳು ಕ್ಯಾಮಿಲಿ. ತಂದೆಯಂತೆಯೇ ಅವಳಿಗೂ ಕೃಷಿಯಲ್ಲಿತೀರದ ಆಸಕ್ತಿ. ತಂದೆಯಿಂದಎಲ್ಲ ವಿದ್ಯೆಗಳನ್ನು ಅವಳು ಕಲಿತಿದ್ದಳು. ದಿನವಿಡೀದುಡಿಯುವತಂದೆಗಾಗಿರುಚಿಯಾದಅಡುಗೆಯನ್ನು ಮಾಡುತ್ತಿದ್ದಳು. ಚಳಿಯಿಂದ ಅವನನ್ನು ರಕ್ಷಿಸಲು ಬೆಚ್ಚನೆಯ ಸ್ವೆಟರನ್ನು ಹೆಣೆಯುತ್ತಿದ್ದಳು. ಸಂಜೆ ಗಿಡಮರಗಳ ನಡುವೆ ಕುಳಿತು ಹಾಡುವತಂದೆಯೊಂದಿಗೆತಾನೂ ದನಿಯಾಗುತ್ತಿದ್ದಳು. ತಂದೆಗೆ ಬಂದ ಕಾಗದಗಳಿಗೆ ಉತ್ತರಿಸುತ್ತಿದ್ದಳು, ಮಾತ್ರವಲ್ಲ, ತನ್ನ ಪ್ರಿಯಕರನಾದ ಜಾಕ್ವಿಸ್‌ಗೆ ಸುಂದರವಾದ ಪ್ರೇಮಪತ್ರಗಳನ್ನೂ ಬರೆಯುತ್ತಿದ್ದಳು.

ಸುತ್ತಲಿನವರೆಲ್ಲ ಅವರ ಪುಟ್ಟಗುಡಿಸಲಿನ ಬಗ್ಗೆ ಅಥವಾ ಇನ್ನೂ ಒಂದು ಚಂದದ ಮನೆಯನ್ನು ಕಟ್ಟಿಕೊಳ್ಳದಿರುವ ಬಗ್ಗೆ ಆಕ್ಷೇಪಣೆಯನ್ನು ತೆಗೆದಾಗಲೆಲ್ಲ ಅವಳ ತಂದೆ ಉತ್ತರಿಸಲು ತಡವರಿಸುತ್ತಿದ್ದ. ಆದರೆ ಕ್ಯಾಮಿಲಿ, “ನಾವು ನಮ್ಮ ಮನೆಯನ್ನು ಭಂಡಾರದ ಹಣದಿಂದ ಕಟ್ಟಿಸಿಲ್ಲ, ಪ್ರೀತಿ ತುಂಬಿದ ಎರಡು ಮನಸ್ಸುಗಳಿಂದ ಕಟ್ಟಿಕೊಂಡಿದ್ದೇವೆ. ಆದ್ದರಿಂದ ಈ ಪುಟ್ಟಗುಡಿಸಲಿಗೆ ಬೆಲೆಕಟ್ಟಲಾಗದು. ಎಷ್ಟು ಹುಡುಕಿದರೂ ನಿಮಗೆ ಇಂಥ ಇನ್ನೊಂದು ಮನೆ ಸಿಗಲಾರದು!” ಎಂದು ಹೇಳಿ ಅವರ ಬಾಯಿ ಮುಚ್ಚಿಸುತ್ತಿದ್ದಳು. ಆಗಾಗ ತನ್ನನ್ನು ನೋಡಲು ಬರುವ ಪ್ರೇಮಿ ಜಾಕ್ವಿಸ್, “ಯಾವಾಗ?”ಎಂದು ಸೂಚ್ಯವಾಗಿ ಮದುವೆಯ ಬಗ್ಗೆ ಆಸೆಗಣ್ಣಿನಿಂದ ಕೇಳಿದರೆ, “ಕಾಯೋಣ” ಎಂದು ಉತ್ತರಿಸುತ್ತಿದ್ದಳು. ಜಾಕ್ವಿಸ್‌ನ ಸಾಂಗತ್ಯ ಅವಳಿಗೆ ಇಷ್ಟವಾದರೂ ತಂದೆಯನ್ನು ಮತ್ತು ತೋಟವನ್ನು ಬಿಟ್ಟುಹೋಗುವುದು ಅವಳಿಗೆ ಕಷ್ಟವೆನಿಸುತ್ತಿತ್ತು.

ಹೀಗಿರುವಾಗ ದೇಶದಲ್ಲಿ ಯುದ್ಧ ಪ್ರಾರಂಭವಾಯಿತು. ಜಾಕ್ವಿಸ್‌ಯುದ್ಧಭೂಮಿಗೆ ಹೋಗಲೇಬೇಕಿತ್ತು. ಕ್ಯಾಮಿಲಿ ತನ್ನತೋಟದಲ್ಲಿ ಹೊಸದೊಂದು ಪ್ರಯೋಗದಲ್ಲಿ ತೊಡಗಿದ್ದಳು. ಸುಗಂಧರಾಜ ಹೂವಿನ ಬಣ್ಣವನ್ನು ಹಳದಿಯಾಗಿಸಬೇಕೆಂದು ಹಠತೊಟ್ಟಿದ್ದಳು. ತಂದೆ ಪಿಯರಿ ಸುಗಂಧ ರಾಜದ ಬಣ್ಣವನ್ನು ಬದಲಾಯಿಸಲಾಗದೆಂದು ಅನುಭವದಿಂದ ಹೇಳಿದ್ದರೂ ಅವಳು ಕೇಳುತ್ತಿರಲಿಲ್ಲ.

ಯುದ್ಧಇನ್ನೂಜೋರಾಗುತ್ತ ಬಂತು. ಬಾಂಬಿನ ಸದ್ದುಗಳು ವರಗುಡಿಸಲನ್ನೂಅದುರಿಸುತ್ತಿದ್ದವು. ಸೇನೆಯ ಕೊರತೆಯಿಂದಾಗಿ ಅವಳ ತಂದೆಗೂ ಯುದ್ಧದ ಕರೆ ಬಂತು. ಈ ವಯಸ್ಸಿನಲ್ಲಿ ತಂದೆಯನ್ನು ಯುದ್ಧ ಭೂಮಿಗೆ ಕಳಿಸುವುದು ಅವಳಿಗೆ ಕಷ್ಟವೆನಿಸಿದರೂ ಪ್ರಭುತ್ವದ ಕರೆಯನ್ನು ನಿರಾಕರಿಸುವಂತಿರುಲಿಲ್ಲ. ತೋಟದ ಉಸ್ತುವಾರಿಯನ್ನು ತಾನು ನೋಡಿಕೊಳ್ಳುವುದಾಗಿ ಅವಳು ತಂದೆಗೆ ಮಾತುಕೊಟ್ಟಳು. ತಂದೆಯುದ್ಧ ರಂಗದಿಂದ ಮರಳಿದಾಗ ಅವರನ್ನು ಹಳದಿ ಸುಗಂಧರಾಜ ಹೂ ನೀಡಿ ಸ್ವಾಗತಿಸಲುತಯಾರಿ ಮಾಡತೊಡಗಿದಳು.

ಯುದ್ಧದಲ್ಲಿ ಗೆಲುವು ಅವರದಾಗುತ್ತ ಬಂದಿತ್ತು. ಪಿಯರಿಯ ಹೋರಾಟದ ಹುಮ್ಮಸ್ಸನ್ನು ನೋಡಿ ಅವನನ್ನು ಸೇನೆಯ ಕಮಾಂಡರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ಸಂತೋಷವನ್ನು ಮಗಳಿಗೆ ತಿಳಿಸಲು ತನ್ನ ಅಳಿಯ ಜಾಕ್ವಿಸ್‌ನನ್ನು ಪಿಯರಿ ಮನೆಗೆ ಕಳಿಸಿದ. ಜಾಕ್ವಸ್‌ ಗುಡಿಸಲಿರುವ ಜಾಗಕ್ಕೆ ಬಂದಾಗ ಅಲ್ಲಿ ಗುಡಿಸಲೂ ಇರಲಿಲ್ಲ, ತೋಟವೂ! ಯುದ್ಧ ಬಾಂಬ್‌ಗೆ ಇವುಗಳೆಲ್ಲದರ ಜೊತೆಗೆಕ್ಯಾಮಿಲಿ ಕೂಡ ಬಲಿಯಾಗಿದ್ದಳು. ತೋಟದ ಮೂಲೆಯಲ್ಲಿ ಅರಳಿದ ಸುಗಂಧರಾಜ ಕೆಂಪಾಗಿತ್ತು!

‍ಲೇಖಕರು Admin

April 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: