ಸುಧಾ ಅಡಕುಳ ಅನುವಾದಿತ ಕವಿತೆ – ಡೆಲ್ಲಿ…

ಮೂಲ: ಎ ಜೆ ಥೊಮಸ್
ಅನುವಾದ: ಸುಧಾ ಆಡುಕಳ

ಎ. ಜೆ. ಥೊಮಸ್ ಕೇರಳ ಮೂಲದ ಇಂಗ್ಲಿಷ್ ಕವಿ. ಅವರು ಉತ್ತಮ ಭಾಷಾಂತರಕಾರರು ಮತ್ತು ಸಂಪಾದಕರೂ ಹೌದು. ದೆಹಲಿಯ ಸಾಹಿತ್ಯ ಅಕಾಡೆಮಿಯ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಹಲವು ವರ್ಷ ಕೆಲಸ ಮಾಡಿದ್ದಾರೆ. ಹಳ್ಳಿಯಿಂದ ನಗರಕ್ಕೆ ವಲಸೆ ಹೋದವರು ಅದನ್ನು ಗ್ರಹಿಸುವ ಬಗೆ ಮತ್ತು ನಗರವು ನಿಧಾನವಾಗಿ ಅವರನ್ನು ಆವರಿಸುವ ಪ್ರಕ್ರಿಯೆಯನ್ನು ತಮ್ಮ ಡೆಲ್ಲಿ ಎನ್ನುವ ಕವನಗಳ ಮಾಲಿಕೆಯಲ್ಲಿ ಚಿತ್ರಿಸಿದ್ದಾರೆ. ಇಂಗ್ಲಿಷ್‌ನಲ್ಲಿರುವ ಈ ಮಾಲಿಕೆಯ ಕನ್ನಡಾನುವಾದ ಇಲ್ಲಿದೆ.

ಡೆಲ್ಲಿ – 1 (1995 – 2005)

ನವೆಂಬರ್ 95ರಲ್ಲಿ
ನಾ ನಿನ್ನ ಮೊದಲ ಬಾರಿಗೆ ನೋಡಿದಾಗ
ಮಂಜಿನ ಮುಳ್ಳುಗಳಿಂದ ನೀನು ಆವೃತವಾಗಿದೆ
ಬೀದಿಯ ದೀಪಗಳು ರಕ್ಕಸನ ಕಣ್ಣುಗಳಂತೆ ಹೊಳೆಯುತ್ತಿದ್ದವು
ಕತ್ತಲೆಯ ಹೊದ್ದ ಮರಗಳು ಭಯಾನಕ ಮೀಸೆಗಳಂತೆ ಚಾಚಿದ್ದವು
ಮೂಳೆ ಕೊರೆಯುವ ಚಳಿಯ ಸ್ಫೋಟ ನರಕದ ನಗುವಿನಂತಿತ್ತು
ನಿನ್ನುಸಿರು ಸೂಸುವ ಇಂಗಾಲದ ಡೈ ಆಕ್ಸೈಡ್, ಹೊಗೆ ಮತ್ತು ಎಸ್. ಪಿ. ಎಮ್.
ನನ್ನ ಪ್ರಾಣವನ್ನು ವಿಷಮಯಗೊಳಿಸಿದವು
ನಾನು ಹೇಳಿದೆ,
ಅನಿವಾರ್ಯವಲ್ಲದಿದ್ದರೆ ನಾನೆಂದಿಗೂ ನಿನ್ನ ಬಳಿಗೆ ಬರುತ್ತಿರಲಿಲ್ಲ
ನನ್ನ ಗೆಳೆಯರೆದುರೂ ಹೀಗೆಂದು ಬಡಾಯಿ ಕೊಚ್ಚಿದೆ
ಆದರೂ ನೀನು ನನ್ನನ್ನು ನಿನ್ನವನೆಂದು ಸಾರಿದೆ
ಹಿಂದಿನ ಅದೆಷ್ಟೋ ಜನ್ಮಗಳಲ್ಲಿ ನಾ ಮಾಡಿದ
ಅಪರಾಧಗಳಿಗೆ ಪ್ರಾಯಶ್ಚಿತ್ತವೆಂಬಂತೆ
ಕರ್ಮವು ನನ್ನನ್ನಿಲ್ಲಿಗೆ ಎಳೆದು ತಂದಿದೆ

ನಿಧಾನವಾಗಿ ನಾನು ನಿನ್ನೊಂದಿಗೆ ಒಂದಾಗಲು ಕಲಿತೆ
ಸಹಿಸಿಕೊಳ್ಳತೊಡಗಿದೆ ನಿನ್ನ ವೈಪರೀತ್ಯಗಳೆಲ್ಲವನ್ನೂ
ಹವಾಮಾನದಂತೆ ಕ್ಷಣಕ್ಷಣಕ್ಕೂ ಬದಲಾಗುವ ನಿನ್ನ ಸಂಸ್ಕೃತಿಯನ್ನು
ಸರ್ವದಿಕ್ಕುಗಳಿಂದ ಬದುಕನರಸಿ ನಿನ್ನೊಳಗೆ ನುಸುಳುವ ವಲಸಿಗರಿಂದ
ದಿನವೂ ಮಥಿಸಲ್ಪಡುವ ನಿನ್ನೆಲ್ಲ ಒಳಹೊರ ಚಹರೆಗಳನ್ನು
ಹಿಮಾಚಲದಲ್ಲಿ ಚಳಿಗಾಳಿ ಬೀಸಿದರೆ ಆವರಿಸುವ ನಿನ್ನ ಚಳಿಯನ್ನು
ರಜಪುಟಾಣದಲ್ಲಿ ಆಂಧಿ ಮಾರುತವೆದ್ದರೆ  ಧೂಳೆಬ್ಬಿಸುವ ನಿನ್ನ ಒಣಗಾಳಿಯನ್ನು
ಎಲ್ಲವನ್ನೂ ನಾನು ಸಹಿಸಿಕೊಂಡಿದ್ದೇನೆ
ಇದೀಗ ನೀನು ನನ್ನ ತೇವವನ್ನೆಲ್ಲ ಹೀರಿ ಶುಷ್ಕಗೊಳಿಸಿರುವೆ
ನಿನ್ನ ವೈಭವದ ಮುಲಾಮು ಸವರಿ ಇಲಾಜು ಮಾಡುತ್ತಿರುವೆ
ನಿನ್ನ ಮೆಟ್ರೋಮಾರ್ಗಗಳು, ಎತ್ತರದ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು
ವಿಶ್ವದರ್ಜೆಯ ವಸತಿ ಸಮುಚ್ಛಯಗಳು॒
ಜಾಗತಿಕ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಹಿರಿಮೆಗಳ ಎದುರಿಗಿಟ್ಟು
ವೈಭವದ ಮುಲಾಮು ಸವರಿ ಇಲಾಜು ಮಾಡುತ್ತಿರುವೆ
ಆದರೂ ನಾನು ಮರೆಯಲಾರೆ, ನೀನೊಂದು ಯುದ್ಧಭೂಮಿ!
ಸಹೋದರರು, ಬಂಧುಗಳು ಕಾದಾಡಿದ, ಕಾದುತ್ತಲೇ ಇರುವ ಯುದ್ಧಭೂಮಿ!
ನೀನು ಮಸೀದಿ, ಸ್ಮಶಾನಗಳ ನಗರ!
ನಿನ್ನ ವಿಶಾಲವಾದ ಹೂದೋಟದಲ್ಲಿ ಅರಳುವ ಹೂಗಳು
ಶರತ್ತುಗಳಿಲ್ಲದೇ ಮಕ್ಕಳನ್ನು ಆಕರ್ಷಿಸುತ್ತವೆಯೇನು?
ಗತವೈಭವಗಳ ಬಗ್ಗೆ ನೀನು ಬಣ್ಣಿಸಿ ಹೇಳುವಾಗ
ನನಗೆ ಮೂಳೆ ಮುರಿದ ಶಬ್ದಗಳು ಕೇಳುವುದೇಕೆ?
ಮಹಾಕಾಲ ನಿನ್ನನ್ನು ವಿನಾಶದ ಅಸ್ತ್ರವಾಗಿಸಿಕೊಂಡಿರುವನೆ?
ನಾನಿಲ್ಲಿರುವೆ! ಸಂಪೂರ್ಣವಾಗಿ ನಿನ್ನ ಉಪಭೋಗದಲ್ಲಿ
ನಿನ್ನ ನಗರದ ರಿಕ್ಷಾ ಚಾಲಕರ ಲೂಟಿಯನ್ನೂ
ಮೌನವಾಗಿ ಸಹಿಸಿಕೊಂಡಿರುವೆ, ನನಗೆ ತಿಳಿದಿದೆ
ನಮ್ಮ ಕರ್ಮಗಳನ್ನು ನಾವೇ ಅನುಭವಿಸಬೇಕು
ನಿಷ್ಕಳಂಕವಾಗಲು

ಡೆಲ್ಲಿ – 2 (2005 – 2008)

ಈ ಕವನದ ಮೊದಲನೇ ಭಾಗವನ್ನು
ದೆಹಲಿಯ ಹಿರಿಯ ಕವಿಗಳ ಎದುರು ವಾಚಿಸಿದೆ
ಭಾರತದ ವಿವಿಧ ಭಾಗಗಳಿಂದ ಬಂದವರಿದ್ದರು ಪ್ರೇಕ್ಷಕ ಸಮೂಹದಲ್ಲಿ
ಕೊನೆಯ ವ್ಯಕ್ತಿಯವರೆಗೆ ಎಲ್ಲರೂ ನನಗೆ ತಾಕೀತು ಮಾಡಿದರು,
ಮನವಿ ಮಾಡಿದರು, ಅನುಕಂಪ ತೋರಿದರು
ರಾಜಸಿಕ ನಗರವೊಂದನ್ನು ಅಪಾರ್ಥ ಮಾಡಿಕೊಂಡ ಬಗೆಗೆ
ನನಗೆ ಅರ್ಥಮಾಡಿಸಲು ನೋಡಿದರು,
ಡೆಲ್ಲಿಯೆಂದರೆ, ಎಲ್ಲಿ ಯಾರು ಏನು ಬೇಕಾದರೂ ಆಗಬಹುದೋ ಅದು
ಮಹಾಭಾರತ ಯುದ್ಧ ಇಲ್ಲಿ ಮಾತ್ರವೇ ನಡೆಯಲು ಸಾಧ್ಯ!

ಜೀವನವಿಲ್ಲಿ ಅಮೀತೋತ್ಸಾಹದೊಂದಿಗೆ ರೋಮಾಂಚಕವಾಗಿದೆ
ಒಮ್ಮೆ ಇಲ್ಲಿ ನೆಲೆಯಾದರೆ, ಇನ್ನೆಲ್ಲಿಯೂ ನೀವು ಸುಖವಾಗಿರಲಾರಿರಿ
ಯಾಕೆಂದರೆ ಇದೊಂದು ಶ್ರೇಷ್ಠ ತಪೋಭೂಮಿ
ಸಹಸ್ರಾರು ವರ್ಷಗಳಿಂದ ಋಷಿಮುನಿಗಳ ಸಾನಿಧ್ಯವಿರುವ ನಾಡು
ನಿಜಾಮುದ್ದೀನ ಔಲಿಯಾರಂತಹ ಸಂತರು ಸಮಾಧಿಯಾಗಿರುವ ನಗರ
ಇಲ್ಲಿ ನೆಲೆಸಲು ಬೇಕು ಹಲವು ಜನ್ಮಗಳ ಪುಣ್ಯಪ್ರಾಪ್ತಿ
ಇಲ್ಲಿ ಮನೆಮಾಡಲು ನೋಡಬೇಕಿಲ್ಲ ವಾಸ್ತುಶಾಸ್ತ್ರ
ಇಲ್ಲಿರುವ ಭೂಮಿಯ ಕಣಕಣವೂ ಪವಿತ್ರ

ಸತ್ಯ ಇವೆಲ್ಲದರ ನಡುವೆ ಎಲ್ಲೋ ಇದೆ
ನನ್ನ ಪ್ರಕಾರ, ನೀವು ಹೇಳುವುದೆಲ್ಲವೂ ನಿಜ
ಇಲ್ಲಿ ಯಾರು ಏನು ಬೇಕಾದರೂ ಆಗಬಹುದು
ಆದರೆ, ಆ ಯಾರೋ ಡೆಲ್ಲಿಯ ಹೊರಗಿನವನಾಗಿರಬಾರದು
ನಿಜಕ್ಕೂ ಡೆಲ್ಲಿಯೆಂದರೆ,
ಒಮ್ಮೊಮ್ಮೆ ತನ್ನೊಳಗೆ ಎಸೆದ ಎಲ್ಲವನ್ನೂ ಹೊರಚೆಲ್ಲುವ ಸಮುದ್ರ
ಇನ್ನೊಮ್ಮೆ ತನ್ನೊಳಗೆ ಬಂದ ಎಲ್ಲವನ್ನೂ ನುಂಗಿ ನೊಣೆವ ಜ್ವಾಲಾಮುಖಿ

ಡೆಲ್ಲಿ – 3 (2008 -2010)

ಡೆಲ್ಲಿಯಿಂದ ದೂರಾಗಿ ಋತುಗಳು ಏಳು ಕಳೆದವು
ವರ್ತಮಾನದ ಕಾಡುವ ನೆನಪಾಗಿ ಬೆಳೆಯುತ್ತಿದೆ ಡೆಲ್ಲಿ
ಡೆಲ್ಲಿ -೬ ನಂತಹ ಸಿನೇಮಾಗಳಲ್ಲಿ, ನಿತ್ಯ ಬರುವ ಸುದ್ಧಿಗಳಲ್ಲಿ
ದಕ್ಕುತ್ತಿದೆ ಡೆಲ್ಲಿ, ನಾನು ದಿನವೂ ಮಾತಾಡುತ್ತೇನೆ
ಹೆಂಡತಿ, ಮಗಳೊಂದಿಗೆ ಡೆಲ್ಲಿಯ ಆಗುಹೋಗುಗಳ ಬಗ್ಗೆ
ಡೆಲ್ಲಿಯೀಗ ನನ್ನ ಹಂಬಲ! ನಿಜಕ್ಕೂ ಇದೊಂದು ಸೋಜಿಗ!
ನನಗೀಗ ತಿಳಿದಿದೆ
ನಾನು ಮೊದಲಿನಿಂದಲೂ ಡೆಲ್ಲಿಯನ್ನು ಪ್ರೀತಿಸುತ್ತಿದ್ದೆ
ಇದೀಗ ನಾನು ಆ ಪ್ರೀತಿಯನ್ನು ಗುರುತಿಸಿದೆ

‍ಲೇಖಕರು Admin

October 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: