ಸುಧಾಮೂರ್ತಿ ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ಅವಧಿಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.ಇವರ ಮೊದಲ ಚಿತ್ರ ಹರಿವು’ ನಿರ್ಮಾಣಗೊಂಡ ಕಥನವೂ ಅವಧಿಯಲ್ಲಿಯೇ ಪ್ರಕಟವಾಗಿತ್ತು.

ಓದುಗರಲ್ಲಿ ಮೊದಲಿಗೆ ಕ್ಷಮೆ ಕೇಳುತ್ತಿದ್ದೇನೆ. ಆಕ್ಟ್ 1978 ಸಿನೆಮಾದ ಬಿಡುಗಡೆಯ ಕೆಲಸಗಳ ಒತ್ತಡದಲ್ಲಿದ್ದ ಕಾರಣದಿಂದಾಗಿ ಧೀರ್ಘಾವಧಿಗೆ ಅಂಕಣ ಬರೆಯಲಾಗಲಿಲ್ಲಾ. ಸಿನೆಮಾದ ಕೆಲಸಗಳು ಇನ್ನೂ ಮುಗಿದಿಲ್ಲವಾದರೂ ಅವಧಿಯವರ ಶಿಸ್ತಿಗೆ ಮತ್ತೆ ಮತ್ತೆ ಭಂಗತರಲು ಮನಸ್ಸಾಗದೇ ಅಂಕಣ ಮುಂದುವರೆಸುತ್ತಿದ್ದೇನೆ.

|ಕಳೆದ ಸಂಚಿಕೆಯಿಂದ|

ಆ ದಿನ ಪೂರ್ತಿ ರಮೇಶ್ ರೆಡ್ಡಿ ಸರ್ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಬಹುಶಃ ನನ್ನ ಸಿನೆಮಾ ಮಾಡಲು ಅವರಿಗೆ ಆಸಕ್ತಿ ಇಲ್ಲವೇನೋ ಎಂದು ಭಾವಿಸಿ ಸುಮ್ಮನಾದೆ. ಮರುದಿನ, ಭಾನುವಾರ. ಇದನ್ನೇ ಯೋಚಿಸುತ್ತಾ ಕುಳಿತಿದ್ದೆ. ಮುಂದೇನು, ಇನ್ಯಾರನ್ನು ಕೇಳುವುದು? ಯಾರು ಈ ಕಥೆಗೆ ನಿರ್ಮಾಣ ಮಾಡಲು ಮುಂದಾಗಬಹುದು ಎಂದೆಲ್ಲಾ ಯೋಚಿಸುತ್ತಿದ್ದೆ.

ಆಗ ಶೃತಿ ಹರಿಹರನ್ ಅವರು ಹೇಳಿದ್ದ ಮಾತು ನೆನಪಾಯಿತು, ಒಳ್ಳೆಯ ಕಥೆ ಅದೇ ತನ್ನ ನಿರ್ಮಾಪಕರನ್ನು ಹುಡುಕಿಕೊಳ್ಳುತ್ತೆ ಅಂತ. ಅದು ಹೇಗೆ ಸಾಧ್ಯ ಅಂತೆಲ್ಲ ಯೋಚಿಸುತ್ತ ಮಲಗೇ ಇದ್ದೆ. ಮಧ್ಯಾಹ್ನ ಮೊಬೈಲ್ ರಿಂಗಾಯ್ತು. ಯಾರಿರಬಹುದು ಎಂದು ಕುತೂಹಲದಿಂದ ನೋಡಿದರೆ, ರಮೇಶ್ ರೆಡ್ಡಿ ಸರ್. ಆಶ್ಚರ್ಯ ಹಾಗೂ ಸಂತೋಷ ಒಟ್ಟಿಗೆ.

ಕೂಡಲೇ ಎದ್ದು ಕೂತು ಕಾಲ್ ರಿಸೀವ್ ಮಾಡಿದೆ. ಮೊದಲಿಗೆ ಅವರೇ ಮಾತನಾಡಿ ನನ್ನ ವಿವರಗಳನ್ನು ಕೇಳಿದರು. ಅಂದರೆ ನಮ್ಮೂರು, ನಮ್ಮ ಫ್ಯಾಮಿಲಿ ಬಗ್ಗೆ ವಿಚಾರಿಸಿದರು. ಆನಂತರ ನಾಳೆ ಆಫೀಸಿಗೆ ಬರುವುದಿಕ್ಕೆ ಹೇಳಿದರು. ನನಗೆ ಒಂದು ರೀತಿಯಲ್ಲಿ ಖುಷಿ, ಸಮಾಧಾನದ ಜೊತೆಗೆ ಸಣ್ಣ ಅನುಮಾನ ಆತಂಕವೂ ಇತ್ತು. ಅದಕ್ಕೆ ಕಾರಣ ಅವರು ನಮ್ಮೂರು ಕಡೆಯವರು. ನಮ್ಮದು ಗಡಿಭಾಗದಲ್ಲಿರುವ ಹಳ್ಳಿ.

ನಮ್ಮ ಹಾಗೂ ರಮೇಶ್ ರೆಡ್ಡಿಯವರ ಹಳ್ಳಿಯಿಂದ ಆಂಧ್ರದ ಗಡಿಗೆ ಕೇವಲ ಎರಡು ಕಿಲೋಮೀಟರುಗಳಷ್ಟೇ ದೂರ. ಅಲ್ಲಿ ತೆಲುಗು ಜನಪ್ರಿಯ ಸಿನೆಮಾಗಳದ್ದೇ ದರ್ಬಾರು. ಪ್ರಯೋಗಾತ್ಮಕ ಸಿನೆಮಾಗಳಿಗೆ ಅಲ್ಲಿ ಪ್ರವೇಶವೇ ಇಲ್ಲ. ಅದು ತೆಲುಗಾಗಲೀ ಕನ್ನಡವಾಗಲಿ. ರಮೇಶ್ ರೆಡ್ಡಿಯವರು ಬೆಳೆದು ಬಂದಿರುವುದೂ ಆ ವಾತಾವರಣದಲ್ಲೇ. ಅವರಿಗೆ ಈ ಸಿನೆಮಾಗಳ ಕತೆ ಅರ್ಥವಾಗುತ್ತಾ ಎಂಬುದು ನನ್ನ ಅನುಮಾನ. ನಾನೇನೋ ಇತ್ತ ಚಿತ್ರಕಲಾ ಪರಿಷತ್ತು, ಸಾಹಿತ್ಯ, ಚಲನಚಿತ್ರೋತ್ಸವಗಳ ನಂಟು ಬೆಳೆದ ಕಾರಣ ಜಾಗತಿಕ ಸಿನೆಮಾಗಳ ಪರಿಚಯ ನನಗೆ ದೊರಕಿತ್ತು. ಆದರೆ ಅವರು ಜನಪ್ರಿಯ ಸಿನೆಮಾಗಳಾಚೆಗೆ ಬೇರೇನೂ ನೋಡಿಲ್ಲ.

ಆದರೂ ಇರಲಿ ಪ್ರಯತ್ನ ಪಡದೆ ಇರುವುದರ ಬದಲು ಒಮ್ಮೆ ಪ್ರಯತ್ನಿಸಿ ಸೋಲುವುದರಲ್ಲೂ ಒಂದು ಖುಷಿ ಸಿಗುತ್ತದೆ ಎಂಬ ಕಾರಣಕ್ಕೆ ಮರುದಿನ ಅವರನ್ನು ಭೇಟಿ ಮಾಡಲು ಸಿದ್ಧತೆ ಮಾಡಿಕೊಂಡೆ. ಸಿನೆಮಾಗೆ ಆಗಬಹುದಾದ ಒಂದು ಅಂದಾಜು ಖರ್ಚಿನ ಬಡ್ಜೆಟ್ ಸಿದ್ಧಪಡಿಸಿಕೊಂಡೆ. ಹತ್ತು ಹದಿನೈದು ಲಕ್ಷದಲ್ಲಿ ಮಾಡಬೇಕೆಂದು ಪ್ರಾರಂಭಿಸಿದ್ದ ಈ ಸಿನೆಮಾದ ಬಡ್ಜೆಟ್, ಈ ಹಂತಕ್ಕೆ ಬರುವ ವೇಳೆಗೆ 58 ಲಕ್ಷಗಳಿಗೆ ಮುಟ್ಟಿತ್ತು.

ಇಷ್ಟು ಬಡ್ಜೆಟ್ ಸಿಕ್ಕರೆ ಚೆನ್ನಾಗಿರುತ್ತೆ. ಇದರಲ್ಲಿ ಕಡಿಮೆ ಮಾಡಿದರೆ, ಆ ಸಿಗುವ ಹಣದಲ್ಲೇ ಸಿನೆಮಾ ಮಾಡೋಣ ಎಂದು ನಿರ್ಧಾರ ಮಾಡಿಕೊಂಡು ಮರುದಿನ ಅವರ ಆಫೀಸಿಗೆ ಹೋದೆ. ಅವರ ಬಗ್ಗೆ ಅಲ್ಲಿಗೆ ಹೋಗುವ ಮೊದಲೇ ಸಾಕಷ್ಟು ವಿವರಗಳನ್ನು ಸಂಗ್ರಹಿಸಿದ್ದೆ. ಅವರು ಇನ್ಫೋಸಿಸ್ ಫೌಂಡೇಷನ್ನಿಗೆ ಸಂಬಂಧಿಸಿದ ಕನ್ಸ್ ಟ್ರಕ್ಷನ್ಸ್ ಕೆಲಸಗಳನ್ನು ಮಾಡಿಸುತ್ತಾರೆ. ಆರ್ಥಿಕವಾಗಿ ಸಾಕಷ್ಟು ಸಂಪಾದಿಸಿದ್ದಾರೆ ಇತ್ಯಾದಿ ಇತ್ಯಾದಿ.

ಆದರೆ ಅವರ ಆಫೀಸಿಗೆ ಹೋದಾಗ ಆಶ್ಚರ್ಯವಾಯಿತು. ಅವರ ಬಗ್ಗೆ ಕೇಳಿದ ವಿವರಣೆಗಳಿಗೂ ಅಲ್ಲಿದ್ದ ಆಫೀಸಿಗೂ ಲಿಂಕೇ ಸಿಗಲಿಲ್ಲ. ಎರಡನೇ ಮಹಡಿಯಲ್ಲಿದ್ದ ಎರಡು ರೂಮು ಒಂದು ಹಾಲ್, ಕಿಚನ್ ಇರುವ ಹಳೆಯ ಕಾಲದ ಮನೆಯಲ್ಲೇ ಅವರ ಎಂ ಆರ್ ಕನ್ ಸ್ಟ್ರಕ್ಷನ್ಸ್ ಆಫೀಸ್ ಇದ್ದದ್ದು. ಜನ ಸುಮ್ಮನೆ ಇಲ್ಲದನ್ನೆಲ್ಲ ಹೇಳಿದ್ದಾರೆ ಎಂದು ಅನಿಸಿತು.

ಜೊತೆಗೆ ಪಾಪ ಎಂದೂ ಅನಿಸಿತು. ಯಾಕೆಂದರೆ ಆಗತಾನೇ ಬಿಡುಗಡೆಯಾಗಿದ್ದ ಉಪ್ಪು ಹುಳಿ ಖಾರ ಸಿನೆಮಾಗೆ ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿತ್ತು. ಏಳೆಂಟು ಕೋಟಿಯವರೆಗೆ ಖರ್ಚಾಗಿದೆ ಎಂಬುದು ಚಿತ್ರರಂಗದಲ್ಲಿದ್ದ ಗಾಸಿಪ್. ಆ ಸಿನೆಮಾ ನೋಡಿದ್ದ ನನಗೆ ಅಷ್ಟು ಖರ್ಚಾಗಿರುವುದು ಒಂದೋ ಡೌಟು, ಇಲ್ಲ ಮಿತಿ ಮೀರಿ ಖರ್ಚು ಮಾಡಿಸಿದ್ದಾರಲ್ಲ. ಪಾಪ ಚಿತ್ರರಂಗದ ಬಗ್ಗೆ ಏನೂ ಗೊತ್ತಿಲ್ಲದೇ ಬಂದು ಇಷ್ಟು ಹಣ ಖರ್ಚಾಗಿದೆಯಲ್ಲ. ಅದರಲ್ಲೂ ನಮ್ಮೂರಿನ ಕಡೆಯವರಿಗೆ ಹೀಗಾಗಿದೆಯಲ್ಲ ಎಂಬ ಅನುಕಂಪ ಮೂಡಿತ್ತು. (ಆದರೆ ವಾಸ್ತವದಲ್ಲಿ ಎಷ್ಟು ಖರ್ಚಾಗಿದೆ, ಎಷ್ಟು ಲಾಭಗಳಿಸಿದೆ ಎಂಬ ಅಂಕಿ ಅಂಶಗಳನ್ನು ರಮೇಶರೆಡ್ಡಿ ಸರ್ ಹಾಗೂ ಅವರ ಅಕೌಂಟೆಂಟ್ ಮುಂದೊಮ್ಮೆ ನನ್ನ ಬಳಿ ಹೇಳಿದ ಮೇಲೆ ಸಮಾಧಾನವಾಗಿತ್ತು)

ಆ ಆಫೀಸು ನೋಡಿದ ಕ್ಷಣ ಯಾಕೋ ಇವರು ಸಿನೆಮಾ ಮಾಡುವುದು ಅನುಮಾನ ವಾಪಸ್ಸು ಹೋಗಿಬಿಡಲೇ ಎಂಬ ಅನಿಸಿಕೆ ಮನಸ್ಸಲ್ಲಿ ಬಂತು. ಆದರೆ ಇಲ್ಲಿಯವರೆಗೂ ಬಂದದ್ದಾಗಿದೆ. ಒಮ್ಮೆ ಮಾತಾಡಿಸಿಕೊಂಡೇ ಹೋಗೋಣ ಎಂದು ನಿರ್ಧರಿಸಿ ಒಳ ಹೋದೆ. ಅವರು ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದರು. ನನ್ನ ಪರಿಚಯ ಮಾಡಿಕೊಂಡೆ. ನನ್ನ ಕೂರಿಸಿಕೊಂಡು ಉಭಯಕುಶಲೋಪರಿ ಮಾತುಕತೆಯ ನಂತರ ಕಥೆಯ ಬಗ್ಗೆ ವಿಚಾರಿಸಿದರು. ಸಂಕ್ಷಿಪ್ತವಾಗಿ ಕಥೆ ಹೇಳಿದೆ.

ಇವರು ಸಿನೆಮಾ ಮಾಡುವುದೇ ನನಗೆ ಅನುಮಾನವಿದ್ದುದ್ದರಿಂದ ಪೂರ್ತಿ ವಿವರವಾಗಿ ಕಥೆ ಹೇಳುವುದು ಬೇಡ ಅಂತ ಅನಿಸಿತ್ತು. ಸಂಕ್ಷಿಪ್ತವಾಗಿ ಹೇಳಿದ ಕಥೆ ಅವರಿಗೆ ಎಷ್ಟರ ಮಟ್ಟಿಗೆ ಅರ್ಥವಾಯಿತೋ ಗೊತ್ತಿಲ್ಲ. ಸರಿ ಬಡ್ಜೆಟ್ ಎಷ್ಟು ಎಂದು ಕೇಳಿದರು? ನಾನು ನನ್ನ ಬಡ್ಜೆಟ್ ಪ್ಲಾನ್ ಅವರ ಮುಂದಿರಿಸಿದೆ. ಅವರು ಆ ಬಡ್ಜೆಟ್ ನೋಡಿ. ಇಷ್ಟು ಕಡಿಮೆ ಹಣದಲ್ಲಿ ಸಿನೆಮಾ ಮಾಡಲು ಸಾಧ್ಯವಾಗುತ್ತಾ ಅಂತ ಆಶ್ಚರ್ಯ ವ್ಯಕ್ತಪಡಿಸಿದರು. ನಾನು ಮಾಡಬಹುದು ಸರ್. ನನ್ನ ಹಿಂದಿನ ಸಿನೆಮಾ ‘ಹರಿವು’ ಕೇವಲ ಇಪ್ಪತ್ತೈದು ಲಕ್ಷದಲ್ಲಿ ಮಾಡಿದ್ದೆ, ಎಂದು ಅವರಿಗೆ ವಿವರಿಸಿ, ಹರಿವು ಸಿನೆಮಾಗೆ ಖರ್ಚಾಗಿದ್ದ ಲೆಕ್ಕದ ವಿವರಗಳಿದ್ದ ಎಕ್ಸೆಲ್ ಕಾಪಿ ಅವರಿಗೆ ತೋರಿಸಿ, ಅದರ ಟ್ರೈಲರ್ ಹಾಗೂ ಹಾಡನ್ನು ತೋರಿಸಿದೆ.

ಆದರೂ ಅಷ್ಟು ಕಡಿಮೆ ಹಣದಲ್ಲಿ ಸಿನೆಮಾ ಮಾಡಬಹುದು ಎಂಬುದರ ಬಗ್ಗೆ ಅವರಿಗೆ ನಂಬಿಕೆ ಬಂದಂತೆ ಕಾಣಲಿಲ್ಲ. ಆದರೆ ಹರಿವು ಸಿನೆಮಾದ ಟ್ರೈಲರ್, ಖರ್ಚಿನ ಲೆಕ್ಕ. ಹಾಗೂ ಆ ಸಿನೆಮಾಗೆ ದೊರೆತಿದ್ದ ಪ್ರಶಸ್ತಿಯ ಫೋಟೋಗಳನ್ನೆಲ್ಲ ನೋಡಿದ ಮೇಲೆ ಅವರಿಗೆ ಒಂದು ಸಣ್ಣ ನಂಬಿಕೆ ಬಂದಿತ್ತೇನೋ. ಸರಿ ಆಯ್ತು ಅಂತ ಹೇಳಿದರು.

ಇದೆಲ್ಲಾ ಮಾತುಕತೆಗೆ ಸರಿ ಸುಮಾರು ಒಂದೂವರೆ ಘಂಟೆ ಸಮಯ ಕಳೆದಿತ್ತು. ನನ್ನೊಂದಿಗೆ ಮಾತುಕತೆ ಮಾಡುತ್ತಲೇ ಅವರ ಕೆಲಸಗಳನ್ನು ಮಾಡುತ್ತಿದ್ದರು. ಅವರ ಕೆಲಸಗಳ ಒತ್ತಡ ತುಸು ಹೆಚ್ಚೇ ಇತ್ತು. ಅದರ ಮಧ್ಯೆಯೂ ನನಗೆ ಸಮಯ ಕೊಟ್ಟಿದ್ದರು. ಎಲ್ಲಾ ಮಾತುಕತೆ ಮುಗಿದು ಸರಿ ಆಯ್ತು ಮಾಡೋಣ ನೀನು ಹೊರಡು ಎಂದರು.

ನನಗೆ ಅನುಮಾನ. ನಾನು ಕಥೆಯನ್ನು ಪೂರ್ತಿಯಾಗಿ ಹೇಳೇ ಇಲ್ಲ. ಇವರು ಆಯ್ತು ಅಂತ ಹೇಳ್ತಿದ್ದಾರೆ. ಇದನ್ನು ಹೇಗೆ ಕನ್ಫರ್ಮ್ ಅಂತ ಅಂದುಕೊಳ್ಳೋದು, ಎಂಬ ಅನುಮಾನದಿಂದಲೇ ಅವರನ್ನು ಮತ್ತೊಮ್ಮೆ ಕೇಳಿದೆ. ಸರ್, ನೀವು ಸಿನೆಮಾ ಮಾಡೋದು ನಿಜವಾಗಲೂ ಕನ್ಫರ್ಮಾ? ಅಂತ. ಅವರು ತುಸು ಕೋಪದಿಂದಲೇ, ನಾನು ನಿನಗೆ ಟೈಂ ಕೊಟ್ಟು ಇಷ್ಟೊತ್ತು ಮಾತಾಡಿದ್ದು ನನಗೇನೂ ಬೇರೆ ಕೆಲಸ ಇಲ್ಲ ಅಂತಾನ? ಅಷ್ಟು ಅನುಮಾನ ಇದ್ರೆ ನಿಮ್ ಮನೆ ಅಡ್ರೆಸ್ ಕೊಡು ನೀನು ಕೇಳಿರೋ ಅಷ್ಟು ಹಣ, ಇವತ್ತು ಸಂಜೆ ಒಳಗೆ ನಿಮ್ ಮನೆಗೆ ತಲುಪಿಸುತ್ತೇನೆ. ಅಂತಂದ್ರು.

ನನಗೆ ಗಾಬರಿಯಾಯ್ತು. ಸರ್ ನನಗೆ ಹಣ ಈಗ್ಲೇ ಬೇಡ. ನಾನು ಕೇಳಿದ್ದರ ಕಾರಣ, ಬೇರೆ ಕೆಲವರು ನಿರ್ಮಾಪಕರ ಬಳಿ ನಿರ್ಮಾಣ ಮಾಡಲು ಕೇಳಿದ್ದೇನೆ. ಅವರಿಗೆ ನಿರ್ಮಾಪಕರು ಸಿಕ್ಕಿದ್ದಾರೆ ಎಂದು ಕನ್ಫರ್ಮ್ ಮಾಡೋದಿಕ್ಕೆ ಅಷ್ಟೇ ಕೇಳಿದ್ದು. ಬೇರೆ ಉದ್ದೇಶದಿಂದಲ್ಲ ಎಂದು ಸಮಾಧಾನ ಮಾಡಿದೆ. ಅವರು ಸಮಾಧಾನ ಆದರು.

ಆನಂತರ ಅವರೇ ಸಮಾಧಾನವಾಗಿ ಹೇಳಿದರು, ನಾನು ಒಂದ್ಸರ್ತಿ ಮಾತು ಕೊಟ್ಟ ಮೇಲೆ ಮುಗೀತು ಸಿನೆಮಾ ಮಾಡ್ತೀನಿ. ನನಗೆ ಸ್ಕ್ರಿಪ್ಟ್ ಕೊಟ್ಟು ಹೋಗು. ನಾನು ಸಿನೆಮಾ ಮಾಡುವ ಮೊದಲು, ಸುಧಾಮೂರ್ತಿ ಮೇಡಂಗೆ ಇದನ್ನು ಕೊಡಬೇಕು. ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ. ಆದರೆ ಇದು ಹೆಣ್ಮಕ್ಕಳ ಕಥೆ ಆಗಿರುವುದರಿಂದ ಅವರಿಗೂ ಕಥೆ ಇಷ್ಟ ಆಗುತ್ತೆ ಅಂತ ಹೇಳಿ ಸ್ಕ್ರಿಪ್ಟ್ ತೆಗೆದಿರಿಸಿಕೊಂಡರು.

ನಾನು ಅವರಿಗೆ ಥ್ಯಾಂಕ್ಸ್ ಹೇಳಿ ಖುಷಿಯಿಂದಲೇ ಹೊರಗೆ ಬಂದೆ. ಒಳ ಹೋಗುವ ಮೊದಲು ಇದ್ದ ಅನುಮಾನ ಇಷ್ಟು ಸುಲಭವಾಗಿ ಪರಿಹಾರವಾದದ್ದು, ನನಗೆ ಇಷ್ಟು ಸುಲಭವಾಗಿ ನಿರ್ಮಾಪಕರು ಕನ್ಫರ್ಮ್ ಆದದ್ದು, ಒಂದು ರೀತಿಯಲ್ಲಿ miracle ತರಾ ಆಗಿತ್ತು. ಈ ಖುಷಿಯನ್ನ ಕೂಡಲೇ ಸಂಧ್ಯಾ ಮೇಡಂ ಹಾಗೂ ನಾಗೇಂದ್ರ ಅವ್ರಿಗೂ ತಿಳಿಸಿದೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

December 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: