ಇಂದಿಗೂ ಪ್ರಸ್ತುತವಾಗಿರುವ ಕುವೆಂಪು

ಸುಮಾವೀಣಾ

ವಿಶ್ವಪ್ರಜ್ಞೆಯ ಲೇಖಕರಾಗಿ ಕನ್ನಡದಲ್ಲಿ ವಿಶ್ವ ಸಮಸ್ತವನ್ನೂ ಅಭಿವ್ಯಕ್ತಗೊಳಿಸಬೇಕೆನ್ನುವ ಮಹಾಕನಸನ್ನು ಹೊಂದಿದ್ದವರು ಕುವೆಂಪು. ತನ್ನಿಮಿತ್ತ ಕನ್ನಡ ಭಾಷಾ ಪರಿಸರವನ್ನು ಸಂವೇದನಶೀಲಗೊಳಿಸಿ ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯನ್ನಾಗಿಸಲು ಶ್ರಮಿಸಿದ ಕುವೆಂಪು ಪ್ರಾಥಸ್ಮರಣೀಯರು. “ವಸುದೈವಕುಟುಂಬಕಂ” ಎಂಬಂತೆ ವಿಶ್ವಕುಟುಂಬಿಗಳಾಗಲು ಬೇಕಾದ ವಾತಾವರಣ ನಿರ್ಮಿತಿಗೆ ಹಂಬಲಿಸಿ “ಜಾಗತಿಕ ಪ್ರಜ್ಞೆ” ಅನ್ನುವ ತುಡಿತಕ್ಕೇ ಅಕ್ಷರದ ದುಡಿಮೆ ಮಾಡಿದವರು.  

ಸಮಕಾಲೀನ ಬದುಕಿನಲ್ಲಿ ನಮ್ಮೊಡನೆ ಇರುವ ಸಚರಾಚರ ವಸ್ತುಗಳನ್ನೂ ಪ್ರೀತಿಸುವ ತಾಯ್ನೋಟದ ಜೊತೆಗೆ ಪರಿವರ್ತನಾಶೀಲ ಮನೋಧರ್ಮದ ವಿಚಾರಧಾರೆ ಇದ್ದದ್ದರಿಂದಲೇ ಕುವೆಂಪು ನಮಗೆ ಹೆಚ್ಚು ಹತ್ತಿರವಾಗುವುದು. 20ನೆ ಶತಮಾನದಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ಪೈಪೋಟಿ ಇದ್ದಾಗ ಅಮೆರಿಕ ಮತ್ತು ಇತರ ಯೂರೋಪ್ ರಾಷ್ಟ್ರಗಳು ಕೈಗಾರಿಕಾ ಕ್ರಾಂತಿಯಲ್ಲಿ ತೊಡಗಿಸಿಕೊಂಡರೆ ರಷ್ಯಾ ಒಕ್ಕೂಟ ಹಸಿರು ಕ್ರಾಂತಿಯಲ್ಲಿ ಮೇಲುಗೈ ಸಾಧಿಸುತ್ತದೆ. ಅದೇ ಕಾಲಮಾನದಲ್ಲಿ ಕುವೆಂಪು ವಿಶ್ವಮಾನವ ಸಂದೇಶ ನೀಡುವುದರ ಮೂಲಕ ಕನ್ನಡದ ಘನತೆಯನ್ನು ಜಾಗತಿಕ ಮಟ್ಟಕ್ಕೆ ಒಯ್ದಿದ್ದಾರೆ.

ಆದರ್ಶದ ಮಾತುಗಳನ್ನು ಹೇಳಿ ಕೈಕಟ್ಟಿ ಕುಳಿತುಕೊಳ್ಳುವ ವ್ಯಕ್ತಿತ್ವದವರು ಕುವೆಂಪು ಆಗಿರಲಿಲ್ಲ. ‘ನುಡಿದಂತೆ ನಡೆ’ ಎಂಬಂತೆ ತನ್ನಾದರ್ಶದ ಮಾತುಗಳನ್ನು ತಾನೂ ಪರಿಪಾಲಿಸುತ್ತಿದ್ದರು. ‘ಶಿಕ್ಷಣದ ಪ್ರಾಮುಖ್ಯತೆ’, ‘ಮೌಢ್ಯವನ್ನು ತಿರಸ್ಕರಿಸುವುದು’, ‘ಜಾತಿ, ಮತ, ಪಂಥಗಳನ್ನು ತೊಡೆಯುವುದು’, ’ಸ್ತ್ರೀ ಸಮಾನತೆ ಎತ್ತಿ ಹಿಡಿಯುವುದು’ ಕುವೆಂಪರವರ ವೈಚಾರಿಕತೆಯ ಪ್ರಮುಖಾಂಶಗಳಾಗಿದ್ದವು. ಇವಿಷ್ಟೂ ಒಂದಕ್ಷರವೂ ಲೋಪವಿಲ್ಲದಂತೆ ಇಂದಿಗೆ ಅನೂಚಾನವಾಗಿ ಅನ್ವಯವಾಗುತ್ತವೆ.

ಬಂಗಾಳದಲ್ಲಿ ಮೌಢ್ಯ ವಿರೋಧಿ ಅಲೆ ಎಬ್ಬಿಸಿದವರು ಸ್ವಾಮಿವಿವೇಕಾನಂದರು. ಹಾಗೆ ಕನ್ನಡದಲ್ಲಿ ಮೌಢ್ಯದ ವಿರುದ್ಧ ಗಟ್ಟಿಯಾಗಿ ಮಾತನಾಡಿ ತರ್ಕಬದ್ಧ ಸಾಮಾಜಿಕತನಕ್ಕೆ ಮುನ್ನುಡಿ ಬರೆದವರು ಕುವೆಂಪುರವರು. ಅದಕ್ಕೆ ಸಾಕ್ಷಿ ಅವರ ‘ಜಲಗಾರ’ ನಾಟಕ’. ‘ಪಾಪಗಳ ಭೋಗಿಗಳ ಗೂಡಾಗಿರುವ’ ದೇವಾಲಯಗಳ ಅನ್ಯಾಯವನ್ನು ಖಂಡಿಸಿ ಸ್ವತಃ ಜಲಗಾರನೇ ಶಿವನಾಗಿಬಿಡುವ ಚೋದ್ಯವನ್ನು ಈ ನಾಟಕದಲ್ಲಿ ಹೇಳಿದ್ದಾರೆ. ಅನ್ಯಾಯ, ಅನಾಚಾರ, ಭ್ರಷ್ಟಾಚಾರದ ಗೂಡಾಗಿರುವ. ಕರ್ತವ್ಯನಿಷ್ಟತೆಗೆ ದುರಿತದ ಕಾಲ ಇದಾಗಿರುವಾಗ ಕರ್ತವ್ಯದಲ್ಲಿಯೇ ದೇವರನ್ನು ಕಾಣುವ, ದೊರೆತದ್ದರಲ್ಲಿ ಸಂತೃಪ್ತಿ ಹೊಂದುವ ಭಾವನೆ ಇಂದಿನ ಸಾಮಾಜಿಕರಲ್ಲಿ ಕಿಂಚಿತ್ ಬಂದರೂ ಸಾಲದೇ? ಎನಿಸುತ್ತದೆ. 

ಕುವೆಂಪು ಮೂಲತಃ ಆಧುನಿಕ ವೈಚಾರಿಕತೆಯ ನಿಜ ಆರಾಧಕರು. ಮಲೆನಾಡಿನ ಬದುಕಿನ ಮಧ್ಯದಿಂದ ಎದ್ದುಬಂದ ಅವರಿಗೆ ವೈಚಾರಿಕತೆಯೇ ಆಚಾರವಾಗಿತ್ತು. ವೈಚಾರಿಕತೆಯನ್ನೇ ಮಲೆನಾಡ ಜಂಜಡಗಳಿಂದ ಮಲೆನಾಡಿಗರನ್ನು, ಇತರರನ್ನು ಬಿಡುಗಡೆಗೊಳಿಸುವ ಸಾಧನವಾಗಿ ಕಂಡರು. ‘ಕುವೆಂಪುರವರ ಮಲೆನಾಡಿನ ಚಿತ್ರಗಳು’ ಕೃತಿಯ ‘ಅಣ್ಣಪ್ಪನ ರೇಶ್ಮೆ ಕಾಯಿಲೆ’ ಎಂಬ ಅಧ್ಯಾಯದಲ್ಲಿ ಅಣ್ಣಪ್ಪ ನ್ಯುಮೋನಿಯಾಗೆ ತುತ್ತಾಗಿರುತ್ತಾನೆ. ಆದರೆ ಅಲ್ಲಿಯ ಜನ ಚೌಡಿಕಾಟವೆಂದು ಹರಕೆ ಹೊರುವುದು, ಭಸ್ಮ ಹಾಕುವುದು ಮಾಡುತ್ತಿದ್ದಾಗ ಕುವೆಂಪು ಸ್ವತಃ ಹೋಗಿ ನೋಡಿ ವೈದ್ಯರಿಗೆ ಕಾಗದ ಬರೆದು ಔಷಧಿ ತರಿಸುತ್ತಾರೆ. ಮತ್ತವನಿಗೆ ಪಥ್ಯಕ್ಕೆ ಆಹಾರ ಪದರ‍್ಥಗಳನ್ನು ಕಳುಹಿಸುತ್ತಾರೆ. ಇದು ಅವರ ಮೇರುವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ನಮ್ಮನ್ನು ಅನಾದಿ ಕಾಲದಿಂದ ಹುರಿದು ಮುಕ್ಕುತ್ತಿರುವ ಮೇಲು-ಕೀಳುಗಳ ವಿರುದ್ಧ ವಿವೇಕ ಮತ್ತು ಧರ‍್ಯವನ್ನು ವೈಚಾರಿಕತೆ ಮಾತ್ರ ಕಟ್ಟಡಿಕೊಡಬಲ್ಲದು ಎಂಬುದನ್ನು ಬಲವಾಗಿ ನಂಬಿದ್ದರು.

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕನ್ನಡ ಲೇಖಕರಲ್ಲಿ ಕುವೆಂಪು ಅವರಷ್ಟು ವೈಚಾರಿಕ ಚಿಂತನೆಗಳನ್ನು ಹೇಳಿದವರು ಮತ್ತೊಬ್ಬರಿಲ್ಲ. ಹಾಗಾಗಿ ಕುವೆಂಪುರವರನ್ನು ಆಧುನಿಕ ವೈಚಾರಿಕತೆಯ ಅಧ್ವರ್ಯೂ ಎನ್ನಬಹುದು. ಇಲ್ಲಿನ ಮತಧರ್ಮಗಳು ಸೃಷ್ಡಿ,ಮಾಡಿದ್ದ ಅವಿವೇಕವನ್ನು ಬಯಲು ಮಾಡುವ ವೈಚಾರಿಕ ಸಾಹಿತ್ಯ ಸೃಷ್ಡಿ ಮಾಡಿದ ಹೆಗ್ಗಳಿಕೆ ಇವರದು. ಅವರಿಗೆ ಧಿಕ್ಕಾರವಿದ್ದದ್ದು ಹಳೇಯ ಶಾಸ್ತ್ರ, ಸ್ವಾರ್ಥ ಪುರೋಹಿತಶಾಹಿ ವರ್ಗದ ಮೇಲೆ ಹೊರತು ನಿಜವಾದ ಧರ್ಮದ ಮೇಲೆ ಆಗಿರಲಿಲ್ಲ. ಧರ್ಮದ ಮೇಲೆ ಅವರಿಗೆ ನಿಜವಾಗಿಯೂ ಅಭಿಮಾನವಿತ್ತು. ಅದನ್ನು ಪೂರ್ಣಚಂದ್ರ ತೇಜಸ್ವಿಯವರು ‘ಅಣ್ಣನ ನೆನಪು’ ಕೃತಿಯಲ್ಲಿ ಪರೋಹಿತರನ್ನು ಕರೆಸುತ್ತಿರಲಿಲ್ಲ ಆದರೆ ಪೂಜೆಗಳನ್ನು ಮಾಡುತ್ತಿದ್ದರು ಉಪನಿಷದ್‌ನ ವಾಕ್ಯಗಳನ್ನು ಹೇಳಿಕೊಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

ಕುವೆಂಪು “ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ” ಎಂದು ಕರೆಕೊಟ್ಟರೂ ಎದೆಗುಡಿಯಲ್ಲಿರುವ ದೇವರುಗಳನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಹಂಬಲವನ್ನಿರಿಸಿಕೊಂಡವರು. “ನೂರು ಮತದ ಹೊಟ್ಟನ್ನು ಗಾಳಿಯಲ್ಲಿ ತೂರಬೇಕು” ಎಂದು ಕರೆಕೊಟ್ಟರೂ ಧಾರ್ಮಿಕಮಹತಿ ಎಂಬ ತಿರುಳನ್ನು ಎಲ್ಲರಿಗೂ ತಿಳಿಸಿದ, ನಿಷ್ಟುರವಾದಿಯಾಗಿ ಪುರೋಹಿತಶಾಹಿಯನ್ನು ಖಂಡಿತವಾಗಿ ಖಂಡಿಸಿದ ಇನ್ನೊಬ್ಬ ಕವಿ ನಮ್ಮಲ್ಲಿಲ್ಲ. ‘ಕಾನೂರು ಹೆಗ್ಗಡತಿಯ’ ಹೂವಯ್ಯನ ಮುಖಾಂತರ ಜನತಯೆಯ ನಂಬುಗೆ ಲೋಕದಲ್ಲಿದ್ದ ನಯವಂಚಕತನವನ್ನು ಬಯಲಿಗೆಳೆದು ಕಡೆಗೆ ಅದೇ ಹೂವಯ್ಯ ಏರುವ ಅಧ್ಯಾತ್ಮದ ಔನ್ನತ್ಯವನ್ನು ವರ್ಣಿಸುವುದನ್ನು ಇಲ್ಲಿ ಉದಾಹರಿಸಬಹುದು.

ಕುವೆಂಪು ಮತವನ್ನು ಸಂಕುಚಿತವೆಂದು ಪರಿಭಾವಿಸಿ ಅಧ್ಯಾತ್ಮವನ್ನು ವಿಶಾಲಾರ್ಥದಲ್ಲಿ ಸಕಲ ಜೀವ ರಾಶಿಗಳ ಒಳಿತಿನಲ್ಲಿ, ಸಪ್ರೇಮ ಭಾವದಲ್ಲಿ ಕಂಡವರು ಎನ್ನಬಹುದು. ಜಗತ್ತಿನ ಕಲ್ಯಾಣವು ಪ್ರೀತಿ, ದಯಾ, ಕ್ಷಮಾ, ಅನುಕಂಪ ಎಂಬ ಶ್ರೇಷ್ಟ ಗುಣಗಳಲ್ಲಿ ಅಡಗಿದೆ ಹಾಗಾಗಿ ಮತದಿಂದ ಪಾರಾಗಿ ಅಧ್ಯಾತ್ಮಕ್ಕೆ ಶರಣಾಗಬೇಕೆಂಬ ಸಾರ್ವಕಾಲಿಕ ಕರೆಯನ್ನು ಕೊಟ್ಟವರು ಕುವೆಂಪು. ವಿಶ್ವಬಂಧುತ್ವದ ಪರಿಕಲ್ಪನೆ ಹೊಂದಿದ್ದ ಇವರು “ಶ್ರೀಸಾಮಾನ್ಯನೆ ಭಗವನ್ ಮಾನ್ಯಂ” ಎನ್ನುವುದರ ಮೂಲಕ ಶ್ರೀ ಸಾಮಾನ್ಯನೂ ಶ್ರೇಷ್ಟವೆಂದು ಭಾವಿಸಿದವರು. ಮನುಜ ಮತ ವಿಶ್ವಪಥ ಎಂಬುದನ್ನು ತಮ್ಮ ಬರವಣಿಗೆಯ ಉದ್ದಕ್ಕೂ ನಿರೂಪಿಸಿ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಿದ್ದಾರೆ. 

21ನೆ ಶತಮಾನದಲ್ಲೂ ಸಾಮಾಜಿಕ ಏರುಪೇರಿಗೆ ಕಾರಣವಾಗಿರುವುದು ‘ಜಾತಿಪದ್ಧತಿ’, ‘ಇಂಗ್ಲಿಷ್ ಭಾಷೆ’ ಮತ್ತು ‘ಆಸ್ತಿ ವ್ಯವಸ್ಥೆ’ ಇವನ್ನು ಕುವೆಂಪುರವರೂ ಬಹಳ ಹಿಂದೆಯೇ ಮನಗಂಡು “ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಯುಗಚಕ್ರಪರಿವರ್ತನೆಗೆ ಸರ್ವರೂ ಹೆಗಲು ಕೊಟ್ಟು ಒಮ್ಮನಸ್ಸು ಮಾಡಿ” ಎಂದಿದ್ದು ಕೇವಲ ಪದ್ಯದ ಸಾಲುಗಳಲ್ಲ ಈ ಕ್ಷಣಕ್ಕೂ ಅನ್ವಯಿಸುವ ಮಾತುಗಳು.

1974ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಅವರಾಡಿದ ಮಾತುಗಳು ಭೌದ್ಧಿಕ ಚಿಂತನೆಯ ಅಡಿಪಾಯದ ಪ್ರಾಮುಖ್ಯತೆಯನ್ನು ಹೇಳುತ್ತದೆ. ವಿದ್ಯಾರ್ಥಿ ಜೀವನದಿಂದ ಉತ್ತೀರ್ಣರಾಗಿ ಬದುಕಿನ ಮಜಲಿಗೆ ಕಾಲಿಡುತ್ತಿದ್ದ ಯುವಕರನ್ನು ಉದ್ದೇಶಿಸಿ ವಿಚಾರಕ್ರಾಂತಿಗೆ ಆಹ್ವಾನ ಕೊಟ್ಟಿದ್ದು ಆ ಕಾಲಕ್ಕೂ ಹೊಂದಿಕೆಯಾಗಿತ್ತು. ಹಾಗೆ ಯಾವುದೇ ಸೂಕ್ತ ನಿರ್ಧಾರಕ್ಕೆ ಬರಲಾಗದೆ, ಆತ್ಮಸ್ಥೈರ್ಯ ಕಳೆದುಕೊಂಡು, ಕೀಳರಿಮೆ ಎಂಬ ಸಾಮೂಹಿಕ ಸನ್ನಿಗೆ ಒಳಗಾಗಿರುವ, ಕೊರೊನಾ ವ್ಯಾಧಿಯಿಂದ ಶೈಕ್ಷಣಿಕ ಜೀವನದ ಏರು ಪೇರಿಗೆ ಒಳಗಾಗಿರುವ ಇಂದಿನ ವಿದ್ಯಾರ್ಥಿ ಸಮೂಹಕ್ಕೂ ಅನ್ವಯಿಸುತ್ತದೆ.

‘ಬೆರಳ್ಗೆ ಕೊರಳ್’ ನಾಟಕದಲ್ಲಿ ಬೆರಳನ್ನು ಕಳೆದುಕೊಂಡ ಮಗನಿಗೆ ಬೆಳಗಿನ ಉಣಿಸನ್ನು ನೀಡಲೆಂದು ಬಂದ ಅಬ್ಬೆ ಆಡುವ ಮಾತುಗಳೂ ಇಂದಿನ ಬಂಡವಾಳಶಾಹಿ, ಸ್ವಾರ್ಥ ಕುತ್ಸಿತ ಮನಃಸ್ಥಿತಿಯನ್ನು ಅಣಕವಾಡುವಂತಿದೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ತಿಮ್ಮಿಯನ್ನು ಅವಳಿಷ್ಟದ ಗುತ್ತಿಯೊಡನೆ ಕಳುಹಿಸಿಕೊಡುವ ಸೇಸಿ, ಹಾಗೆ ಸಾಲಮಾಡಿ ಮಗಳಮದುವೆಗೆ ಆಭರಣಗಳನ್ನು ಖರೀದಿಸಿದ ದೊಡ್ಡಬೀರ ಪಡುವ ತಲ್ಲಣಗಳು ಇಂದಿಗೂ ಇವೆ.

‘ಶೂದ್ರತಪಸ್ವಿ’ ನಾಟಕದಲ್ಲಿ ವೃಕ್ಷ ಮತ್ತು ಭೈರವ ಎಂಬೆರಡು ಹೊಸ ಪಾತ್ರಗಳನ್ನು ಸೃಷ್ಟಿಸಿ ಆ ಮೂಲಕ ಹೊಸ ಹೊಳಹನ್ನು ಆ ಮೂಲಕ ಅನ್ಯಾಯವನ್ನು ಖಂಡಿಸುವ ಯತ್ನ ಮಾಡಿದ್ದಾರೆ. ಇದಕ್ಕೆ ಉದಾಹರಣೆ ಶೂದ್ರ ತಪಸ್ವಿ ನಾಟಕದಲ್ಲಿಯೇ ಸಿಗುತ್ತದೆ. ವಾಲ್ಮೀಕಿ ರಾಮಾಯಣ, ಭವಭೂತಿಯ ಉತ್ತರಾಮಚರಿತದಲ್ಲಿ ಶಂಬೂಕ ಮಹರ್ಷಿಯ ವಧೆಯಾಗುತ್ತದೆ. ಇಲ್ಲಿ ಶೂದ್ರ ತಪಸ್ವಿ ನಾಟಕದಲ್ಲಿ ಹಾಗಾಗುವುದಿಲ್ಲ ಸತ್ತ ಬಾಲಕ ಕೂಡ ಮರಳಿ ಬದುಕುತ್ತಾನೆ. ನಾಟಕ ಸುಖಾಂತ್ಯವಾಗುತ್ತದೆ. ಕುವೆಂಪುರವರ ಹೊಸ ಪಾತ್ರಗಳನ್ನು ಅನ್ಯಾಯಕ್ಕೊಳಗಾಗುವವರ ತಲೆ ಕಾಯುವ ಪಾತ್ರಗಳು ಎನ್ನಬಹುದು. ಈ ರೀತಿ ನ್ಯಾಯದ ಪರವಾಗಿ ನಿಲ್ಲುವ ಮನಸ್ಸುಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ.

ಇವರ ವೈಚಾರಿಕತೆಯ ಇನ್ನೊಂದು ಪರಿಪ್ರೇಕ್ಷ ಎಂದರೆ ಮಂತಮಾಂಗಲ್ಯ. ಅದ್ದೂರಿತನ, ದುಂದುವೆಚ್ಚವನ್ನು ಖಂಡಿಸಿ ಸರಳವಿವಾಹದ ಕಲ್ಪನೆಯ ಅರ್ಥಪೂರ್ಣ ಚೌಕಟ್ಟು ಇವರಿಂದಲೇ ಬಂದಿರುವುದು. ಇಲ್ಲಿ ಕುವೆಂಪು ಅವರ ಭಾವನೆಗಳು ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಆಶಯಗಳು ಒಂದೇ ಆಗಿರುವುದನ್ನು ಗಮನಿಸಬಹುದು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬಂತೆ ಇವರೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ. ಇಂದಿಗೂ ಈ ರಿತಿಯ ಸರಳವಿವಾಹಗಳು ಆಗುವುದನ್ನು ನೋಡಬಹುದು.  ‘ರಾಮಾಯಣ ದರ್ಶನಂ’ನಲ್ಲಿ “ಪಾಪಿಗಳಿಗೂ ಉದ್ದರಮಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್” ಎಂದಿರುವುದು  ಪರಿವರ್ತನೆಗೆ ಎಲ್ಲರಿಗೂ ಅವಕಾಶ ಮಾಡಿಕೊಡಬೇಕೆಂದು ಇದೂ ವೈಚಾರಿಕತೆಯ ಮನ್ನೋಟವೇ ಸರಿ.

ಬೇಲೂರಿನ ಶಿಲ್ಪಗಳನ್ನು ಕಂಡು “ಶಿಲೆಯಲ್ಲ ಕಲೆಯ ಬಲೆ” ಎಂದಿರುವಲ್ಲಿ ಆ ಶಿಲ್ವನ್ನು ಮಾಡಿದ ಒಬ್ಬೊಬ್ಬಶಿಲ್ಪಿಗೂ ಧನ್ಯವಾದಗಳನ್ನು ಹೇಳುತ್ತಾರೆ ಎಂದರೆ ಸೌಂದರ್ಯದ ಮೂಲವನ್ನು ಹುಡುಕಿ ಅದಕ್ಕೆ ಕಾರಣರಾದವರಿಗೆ ತುಂಬು ಮನಸ್ಸಿನಿಂದ ಧನ್ಯವಾದಗಳನ್ನು ಹೇಳುವ ಕೃತಾರ್ಥ ಭಾವ ಮೆರೆದು ಸಾಮಾಜದ ಎಲ್ಲ ಸ್ತರದವರಿಗೂ ಅರ್ಹತೆಯಿದ್ದಲ್ಲಿ ಗೌರವ ಸಲ್ಲಲೇ ಬೇಕು ಎಂಬ ವಿಚಾರವನ್ನು ಅರುಹಿದ್ದಾರೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ರಾಜಕಾಶರಣಿಯೊಬ್ಬರಿಗೆ ಸಡ್ಡುಹೊಡೆದು ಮಂತ್ರಕಣಾ! ಶಕ್ತಿಕಣಾ! ತಾಯಿಕಣಾ! ದೇವಿಕಣಾ! ಎಂದು ಭಾಷಾಭಿಮಾನವನ್ನು ತೋರಿಸಿದ್ದರು. ಅಂದು ಅವರು ಹೇಳಿದ ಮಾತುಗಳನ್ನು ಉದ್ಘೋಷವನ್ನಾಗಿಸಿಕೊಂಡು ಇಂದಿಗೆ ಹೋರಾಟ ಮಾಡಬೇಕಾದ ಅನಿವಾರ್ಯತೆಗೆ ಪ್ರಸ್ತುತ ವಿದ್ಯಾಮಾನಗಳು ಸಾಕ್ಷಿಯಾಗುತ್ತಿರುವುದನ್ನು ನಾವು ಗಮನಿಸಬಹುದು.

ಈ ಕಾಲಘಟ್ಟದ ಜನರಲ್ಲಿ ವ್ಯಷ್ಟಿಪ್ರಜ್ಞೆ ಇದೆಯೇ ವಿನಃ ಸಮಷ್ಟಿಪ್ರಜ್ಞೆ ಇಲ್ಲ ಇದಕ್ಕೆ ತಧ್ವಿರುದ್ದರಾಗಿದ್ದವರು ಕುವೆಂಪು. ಯಾವುದೇ ಪಂಥ ಇಸಂಗಳಿಗೆ ಒಳಗಾಗದೆ “ಓ ನ್ನ ಚೇತನಾ, ಆಗು ನೀ ಅನಿಕೇತನಾ” ಎಂದು ಸಮಷ್ಟಿ ಭಾವಕ್ಕೆ ಶರಣಾಗಿ ಉದಾತ್ತರಾಗಿದ್ದಾರೆ.

ಸಾಮಾಜಿಕ ವೈರುಧ್ಯಗಳಿಗೆ ವೈಚಾರಿಕತೆಯೇ ಮದ್ದು ಎಂದವರು ಕುವೆಂಪು. ವಾಸ್ತವಸಂಗತಿಗಳನ್ನು ಹೊಸ ಪಾತ್ರಸೃಷ್ಟಿಯ ಮೂಲಕ ಅರುಹಿ ಅದೇ ನೆಲೆಯಲ್ಲಿ ಪರಿಹಾರವನ್ನೂ ಸೂಚಿಸಿದವರು. ಸಮಾನತೆಯನ್ನು ತರುವ,ದಬ್ಬಾಳಿಕೆ ಶೋಷಣೆಯನ್ನು ನಿಗ್ರಹಿಸುವ ಮೌಢ್ಯತೆಯನ್ನು ತೊಡೆದು ವೈಜ್ಞಾನಿಕವಾಗಿ ಆರೋಗ್ಯ ಪೂರ್ಣವಾಗಿ ಯೋಚಿಸುವ ವಿಚಾರಲಹರಿಗಳನ್ನು ನಿರಂತರ ಲಹರಿಸಿ ನಿತ್ಯ ವೈಚಾರಿಕನಾಗಿ ತಮ್ಮ ಕೃತಿಗಳ ಮೂಲಕ ನಮ್ಮ ನಡುವೆ ಬದುಕಿರುವ ಕುವೆಂಪು ವಿಚಾರಧಾರೆ ಇಂದಿಗೂ ಅತ್ಯಂತ ಪ್ರಸ್ತುತ.

‍ಲೇಖಕರು Avadhi

December 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: