-ಗಾಯತ್ರಿ ರಾಜ್
ಹೊರಗೆ ಜಿಟಿಜಿಟಿ ಸುರಿಯುತ್ತಿದ್ದ ಮಳೆಯ ಹನಿಗಳು, ಒಳಗೆ ಕವಿಗಳ ದನಿಯಲ್ಲಿ ಅನುರಣಿಸುತ್ತಿದ್ದ ಕವಿತೆಗಳ ಸೋನೆ… ಬಹಳ ದಿನಗಳ ನಂತರ ಇಂತಹದೊಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಹಿತ್ಯದ ಮಳೆಯಲ್ಲಿ ಸಂಪೂರ್ಣವಾಗಿ ನೆನೆದು ಬಂದ ಅನುಭವವೇ ಅನನ್ಯ. ಮನಸ್ಸಂತೂ ತಂಪು, ಪ್ರಶಾಂತ ಹಾಗೂ ಕೂಲ್ ಕೂಲ್!
ಜ್ಞಾನಪೀಠ ಪುರಸ್ಕೃತ ಮಹಾನ್ ಸಾಹಿತಿ ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ. ಗೋಕಾಕ್) ಅವರ ಜನ್ಮದಿನದ ಸವಿನೆಪಿನಲ್ಲಿ, ‘ವಿಜಯ ಕರ್ನಾಟಕ’ ಹಾಗೂ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ಮಳೆರಾಗ – ಮಳೆಯಲ್ಲಿ, ಕವಿತೆಗಳ ಜೊತೆಯಲ್ಲಿ’ ಕಾವ್ಯಪ್ರಸ್ತುತಿ ಗೋಷ್ಠಿ ನಿಜಕ್ಕೂ ಕಾವ್ಯಾಭಿಮಾನಿಗಳಿಗೆ ಕಣ್ಣುಂಬಿಕೊಳ್ಳುವ ಹಾಗೂ ಮನ ತುಂಬಿಕೊಳ್ಳುವ ಹಬ್ಬವಾಗಿತ್ತು.
ಸಾಮಾನ್ಯವಾಗಿ ಸುದ್ದಿಮನೆ ಎಂದರೆ ಕ್ಷಣಕ್ಷಣದ ವರದಿಗಳು, ಬ್ರೇಕಿಂಗ್ ನ್ಯೂಸ್‌ಗಳ ಧಾವಂತ. ಆದರೆ ಇಂತಹದೊಂದು ಸುದ್ದಿಮನೆಯ ಅಂಗಳದಲ್ಲೇ ಕಾವ್ಯದ ರಸಧಾರೆ ಹರಿದಿದ್ದು ಬಹುಶಃ ಇದೇ ಮೊದಲು ಇರಬೇಕು! ನಾನಂತೂ ನನ್ನ ಜೀವಮಾನದಲ್ಲಿ ಅನುಭವಿಸಿದ ಅತ್ಯಂತ ಸುಂದರ ಹಾಗೂ ಅಪರೂಪದ ಕಾರ್ಯಕ್ರಮವಿದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್‌ನ ಅಧ್ಯಕ್ಷರಾದ Narahalli Balasubramanya ಅವರ ಉಪಸ್ಥಿತಿ ಹಾಗೂ ಮಾತುಗಳು ಸಂಜೆಗೆ ಗಾಂಭೀರ್ಯ ತುಂಬಿದವು. ‘ವಿಜಯ ಕರ್ನಾಟಕ’ದ ಸಂಪಾದಕರಾದ Sudarshan Channangihalli ಅವರ ಪ್ರೋತ್ಸಾಹ ಈ ಸಾಹಿತ್ಯಿಕ ಸಮ್ಮಿಲನವನ್ನು ಅತ್ಯಂತ ಅರ್ಥಪೂರ್ಣಗೊಳಿಸಿತು.
Prathibha Nandakumar, Metikurke Ramaswamy Kamala , Gn Mohan, ನೂತನ ದೋಶೆಟ್ಟಿ, ಸಂಧ್ಯಾರಾಣಿ, ಚಾಂದ್ ಪಾಶಾ, ದಾದಾಪೀರ್ ಜೈಮನ್, Vinayaka Aralasurali ಹಾಗೂ ದೀಕ್ಷಿತ್ ನಾಯರ್ ಅವರಂತಹ ಕವಿಗಳು ತಮ್ಮ ಧ್ವನಿಯಲ್ಲಿ ಮಳೆಯ ವಿವಿಧ ಭಾವಗಳನ್ನು ಕವಿತೆಯಾಗಿಸಿ ವಾಚಿಸುತ್ತಿದ್ದಾಗ, ಹೊರಗಿನ ಜಗತ್ತು ಮರೆತು ಕಾವ್ಯಲೋಕದಲ್ಲೇ ಮುಳುಗಿಹೋಗುವಂತಿತ್ತು.

ಇಂತಹ ನವಿರಾದ, ಮನಸ್ಸಿಗೆ ಮುದ ನೀಡಿದ ಕಾವ್ಯ ಗೋಷ್ಠಿಯನ್ನು ಚಂದವಾಗಿ ಆಯೋಜಿಸಿದ ವಿದ್ಯಾರಶ್ಮಿ ಪೆಲತ್ತಡ್ಕ ಮೇಡಂ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಸಾಹಿತ್ಯ, ಮಳೆ ಮತ್ತು ಆತ್ಮೀಯತೆ ಬೆರೆತ ಈ ದಿನ ಮನಸ್ಸಿನಲ್ಲಿ ದೀರ್ಘಕಾಲ ಹಸಿರಾಗಿ ಉಳಿಯಲಿದೆ. ಈ ತರಹದ ಸದಾಭಿರುಚಿಯ ಕಾರ್ಯಕ್ರಮಗಳು ಮತ್ತೆ ಮತ್ತೆ ಜರುಗಲಿ.








0 Comments