ಅಣ್ಣಪ್ಪಸ್ವಾಮಿ ಜಿ ಎಂ
“ಸುಟ್ಟುಬಿಟ್ಟಿರಲ್ಲ ನನ್ನ
ಸುಳಿವು ಸಿಗದ ಹಾಗೆ
ಕತ್ತರಿಸಿದ ನಾಲಗೆ
ಪರಚಿದ ಗಾಯ ಮೈಮೇಲೆ
ಬಿರುಕು ಬಿಟ್ಟ ಬೆನ್ನ ಮೂಳೆ
ತೊಡೆಗಳ ನಡುವೆ ಹರಿದ
ನೆತ್ತರಿನ ಕಲೆ ಸಿಗದ ಹಾಗೆ
ಸುಟ್ಟುಬಿಟ್ಟಿರಲ್ಲ ನನ್ನ
ಸುಳಿವು ಸಿಗದ ಹಾಗೆ
ಸುಟ್ಟದ್ದು ನನ್ನನ್ನಷ್ಟೆ ಅಲ್ಲ
ನಿಮ್ಮೊಂದಿಗೆ ಹುಟ್ಟಿಬೆಳೆದ
ನಿಮ್ಮಕ್ಕ ತಂಗಿಯರ ಒಡಲು
ನೀವು ಹುಟ್ಟಿ ಬೆಳೆದ
ನಿಮ್ಮವ್ವನ ಮಡಿಲು
ಪ್ರತಿ ಹೆಣ್ಮಕ್ಕಳ
ಘನತೆಯ ಹಕ್ಕು
ಸುಟ್ಟದ್ದು ನನ್ನನ್ನಷ್ಟೆ ಅಲ್ಲ

ಸುಡುವಾಗ ಇದ್ದ
ರಕ್ಷಣೆಯ ಖಾತ್ರಿ
ನೀಡುವುದಿಲ್ಲವೇಕೆ
ಪ್ರತಿ ಹಗಲು ರಾತ್ರಿ
ನಿಮ್ಮ ಹಣ ಅಧಿಕಾರಕ್ಕೆ
ನನ್ನ ಶಾಶ್ವತ ಧಿಕ್ಕಾರ
ಬದುಕುವ ಹಕ್ಕನಂತೂ
ಕಿತ್ತುಕೊಂಡಿರಿ
ಕನಿಷ್ಠ ಗೌರವಯುತ
ಅಂತ್ಯ ಸಂಸ್ಕಾರ ನನ್ನ ಹಕ್ಕಲ್ಲವೇ ..?
ಹೋಗಿ ಬರುವೆ ನಾ
ನಿಮ್ಮ ಮನೀಷಾ ಹತ್ರಾಸ್”






0 Comments