ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಟ್ಟುಹೋಗಲಿ ಹಸಿವಿನ ಆರ್ತನಾದ.. 

ಕ.ನಾ.ವಿಜಯಕುಮಾರ, ಶಿಕಾರಿಪುರ

ನಾನು ಕದ್ದೆ…
ಅದಕ್ಕೆ ಅವರು ನನ್ನನ್ನು ಕೊಂದರು…
ಕದ್ದಿದ್ದಾದರೂ ಏಕೆಂದು ಕೇಳಲಿಲ್ಲ..
ಹಸಿವನ್ನು ಹುದುಗಿಡಲಾಗದು ಎಂದು ಹೇಳಹೋದೆ
ಅನ್ನದ ಪ್ರಶ್ನೆಯೊಂದನ್ನು ಬಿಟ್ಟು,
ಅದೇನೇನನ್ನೋ ಕೇಳಿದರು..
ಉತ್ತರಿಸುವ ಕೈಗಳನ್ನು ಕಟ್ಟಿಹಾಕಲಾಗಿತ್ತು…
ಹಸಿವನ್ನು ಮುಕ್ತಗೊಳಿಸುವುದಕ್ಕಿಂತ, ಹಸಿದವರನ್ನು ಮುಕ್ತಾಯಗೊಳಿಸುವ ಹಪಹಪಿಯ ಹಂಬಲದವರು..

ಹೌದು…

ನಾನು ಮಧು..

ಮಲೆಯಾಳ ದೇಶದ ಹಾಡಿಯ ಹುಡುಗ..
ಹಸಿವಿನ ಹೆಸರಿನಲ್ಲಿ ಅಮರನಾದವ..

ಅಂದು, ಹಸಿದಿತ್ತು ಹೊಟ್ಟೆ,
ದಣಿದಿತ್ತು ದರಿದ್ರ ದೇಹ..,
ಅಂಬಲಿಗಾಗಿ ಹಂಬಲಿಸಿತ್ತು ಹೃದಯ..
ಹವಣಿಸಿತ್ತು ಹುಚ್ಚು ಬುದ್ದಿ, ಹಸಿವು ನೆತ್ತಿಗೇರಿ…

ಆದಿಮ ನಾನು, ಹೊಟ್ಟೆಯನು ಕಟ್ಟಲೊಲ್ಲೆ..
ಖದೀಮರವರು, ಕೈಕಾಲು ಕಟ್ಟಿಹಾಕಿದರು,
ನನ್ನ ಹಸಿವಿನ ಸಮೇತ…

ಹಿಡಿದರು
ಹೊಡೆದರು
ಒದ್ದೊದ್ದು ಸಂಭ್ರಮಿಸಿದರು
ತಮ್ಮ ಮನೆ-ಮನಗಳ ಸಿಟ್ಟನ್ನೆಲ್ಲಾ
ನನ್ನ ಬಡಪಾಯಿ ಹೊಟ್ಟೆಯ ಮೇಲಿಟ್ಟು
ಒಟ್ಟಾಗಿ ಒಟ್ಟಿದರು ಕ್ರೌರ್ಯದ ಕಟ್ಟುಗಳನು
ಹೊಟ್ಟೆತುಂಬಿದ ಕೇರಳದ ಬುದ್ಧಿವಂತರು..

ಇವರ ದಾರಿದ್ರ್ಯ ದಾಹಕ್ಕೆ,
ನನ್ನ ಹಂಗಿನ ಹಸಿವು ಇಂಗಿ
ಹಾರಿ ಹೋಗಿತ್ತು…,

ಜೀವದ ಜೊತೆಗೆ…..

ಇನ್ನೂ ಇರುವರು ನೋಡಿ,
ಈ ದೇಶದ ತುಂಬೆಲ್ಲಾ ನನ್ನ ಅನ್ನದ ಮಿತ್ರರು..
ಅವರನ್ನೂ ಹುಡುಕಿ ಹುಡುಕಿ ಹೊಡೆಯಿರಿ.,
ಹಾಗಾದರೂ ಇಂಗಲಿ ನಿಮ್ಮದಾದರೂ ಹಸಿವು..

ಹೊಡೆಯಲಿ ಬಿಡಿ..,
ಅವರ ಕೈಕಡಿತದ ತೆವಲು ತೀರುವ ತನಕ..
ಸಾಯಿಸಲಿ ಬಿಡಿ..,
ಸೆಲ್ಫಿಗಳ ಹುಚ್ಚು ಆರುವ ತನಕ…

ಆದರೆ…,
ನಮ್ಮ ಸಾವಿನಿಂದಲಾದರೂ ಸುಟ್ಟುಹೋಗಲಿ ಹಸಿವಿನ ಆರ್ತನಾದ..
ನಮ್ಮಂಥ ಹೆಣಗಳಿಗೆ ಹೊಣೆಯಾದ ನಿಮ್ಮೆಲ್ಲರ ಮನಸ್ಸುಗಳು ಮಣಿಯಲಿ ಅನಾಥ-ನಿರ್ಗತಿಕರ ನೋವಿನ ಕೂಗಿಗೆ..

 

‍ಲೇಖಕರು Avadhi GK

3 March, 2018

3 Comments

  1. Nasrin

    ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್. ….nice

  2. Shivakumar Gowda

    ಹಸಿವು, ಆನ್ನದ ಹಸಿವು ಆನುಭವಿಸಿದವರಿಗೆ ಗೊತ್ತು. ಮನ ತಟ್ಟುವ೦ತೆ ಇದೆ ಸಾರ್.

  3. Chi na hally kirana

    hasivina lokada, durantagala saramalege mattondu hesaru serikondithe, madhu vina saavu, nagarika samaja tale taggisuva paristiyalli naviddevalla embude viparyasa…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading