ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಜಾತ ಹೆಬ್ಬಾಳದ ಕವಿತೆ – ದಕ್ಕದು ಗೆಲುವಿನ ಹಾರ…

ಸುಜಾತ ಹೆಬ್ಬಾಳದ 

ಈಗೀಗ ಕನಸುಗಳೂ ಮಾರಾಟಕ್ಕೆ ಸಿಗುತ್ತವೆ,
ಸುದ್ದಿಯಾಗದ, ಜಾಹಿರಾತಿಲ್ಲದ ಗುಪ್ತ
ಮಾರುಕಟ್ಟೆಯಲ್ಲಿ …
ಅಗ್ಗವಾಗಿ ಬಹಿರಂಗವಾಗಿ ಮಾರಾಟವಾಗುವ ಸರಕಲ್ಲವಿದು ,
ಸದ್ದಿಲ್ಲದ ವಹಿವಾಟಿದು ಗಾಳಿಗೂ ಸುಳಿವು ಸಿಗದು …
ಚೋರ್ ಬಜಾರಿನಲ್ಲಿ ಎಲ್ಲರೂ ಸಭ್ಯರೇ ಮಾರುವವರು, ಮಧ್ಯವರ್ತಿಗಳು, ಕೊಳ್ಳುವವರೂ,
ಇಲ್ಲಿ ವ್ಯವಹಾರಕ್ಕೆ ಇದ್ದರೆ ಸಾಕು ಕೊಳ್ಳುವ ಇರಾದೆ ಮತ್ತು ಗರಿಗರಿ ನೋಟಿನ ಕಂತೆ….
ಪ್ರಾಮಾಣಿಕತೆಯ ಅಡವಿಟ್ಟವರಿಗೆ
ಸಿಗುವುದಿಲ್ಲಿ ಆದ್ಯತೆ,
ಯಾರನ್ನು ಯಾರೂ ರೂಪಿಸುವುದಿಲ್ಲ
ಅಕಾರಣವಾಗಿ,
ಇಲ್ಲಿ ರ್‍ಯಾಂಕುಗಳು ಹರಾಜಾಗುತ್ತವೆ
ಮಾನಕ್ಕೂ ಮೊದಲು ನಿರಾತಂಕವಾಗಿ …
ಲಾಭದ ಪಾಲುದಾರರದು ರಂಗವಲ್ಲಿಯ ಚುಕ್ಕಿಯ ನಂಟು,
ಆದಿ ಅಂತ್ಯ ಹುಡುಕ ಹೊರಟವರಿಗೆ
ಬೇಷರತ್ ಅರಿಯಲಾಗದ ಗುಟ್ಟು …
ನವಿಲುಗರಿ ಹೊತ್ತ ಸುಂದರ ಸ್ವಪ್ನವದು
ತನ್ನದಾಗಿಸಿಕೊಳ್ಳಲು ನಡೆದಿದೆ ಹುನ್ನಾರ,
ನಿಗದಿಯಾದ ದರ ಕೈಗಿಡದದ ಹೊರತು
ದಕ್ಕದು ಗೆಲುವಿನ ಹಾರ …..


ಆನ್ಲೈನ್ ಯುಗದಲ್ಲಿ ಬಿಸಿರಕ್ತಗಳಿಗೆ ತ್ವರಿತ ರಂಗೇರುವ ಖಯಾಲಿ,
ನೊಂದು, ಬೆಂದು, ತೇಯುತ ಸರ್ವಸ್ವವನೂ ಧಾರೆಯೆರೆದು ನರನಾಡಿಯೆಲ್ಲ ಕೆಂಪಾಗುವ ಪುಳಕ ಇವರಿಗೆ ಬೇಡದ ಚಾಳಿ …
ಎಡಿಸನ್ ಎಂದೂ ಹುಡುಕಲಿಲ್ಲ ಕವಲು ದಾರಿಯ ಕತ್ತಲಲಿ ಬೆಳಕ,
ಸೋತ ತೊಂಬತ್ತೊಂಬ್ಬತ್ತು ಪ್ರಯತ್ನದ ಮೆಟ್ಟಿಲನೇ ಏರಿ ಕಂಡನು ಸಾರ್ಥಕ ಯಶಸ್ಸಿನ ನಾಕ ….
ಕನಸ ನನಸಾಗಿಸಲು ಗೆಲ್ಲಬೇಕು
ಎಷ್ಟೊ ಅಂತರ್ಕದನ,
ತೃಪ್ತಿಯ ಗೆಲುವಿನ ಹನಿ ಇಳಿಯಬೇಕು ಒಂದೊಂದಾಗಿ ಅಂತರಂಗದ ಮನ …
ಗಿಲೀಟಿನ ಒಡವೆಯಂತೆ ಕೊಂಡ ಪದವಿ ಹುದ್ದೆಯೆಲ್ಲ,
ಥಳುಕು ಕಳೆದು ಬೆತ್ತಲಾಗುವ ದೇಹಕೆ ಬೆಲೆಯೇ ಇಲ್ಲ …
ಸರಿ ತಪ್ಪುಗಳ ಕವಲುದಾರಿಗಳು ಎದುರಾಗುತ್ತಲೇ ಇರುತ್ತವೆ ಬಾಳ ಪಯಣದಿ ,
ಆಯ್ಕೆಯ ದಾರಿ ಸಂತೃಪ್ತಿಯ ನಗೆ ಚಿಮ್ಮಿಸಬೇಕು ವದನದಿ …
ಅಂತ್ಯಕಾಲದಿ ತರಗಲೆಯಂತೆ ಹಗುರಾಗಿ ಕಳಚಿ ಬೀಳಲು ಧರೆಗೆ ,
ಬದುಕಬೇಕು ಯಾವುದೇ ಅಪರಾಧಿತ್ವ ಇರದಂತೆ ಮನದೊಳಗೆ …

‍ಲೇಖಕರು Admin

9 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading