ಸುಜಾತಾ ಕಂಡ ದಸರಾ ನೋಡಿ ಬಂದ ಗಿಣಿ..

ಒಂದೂರಲ್ಲಿ ಒಂದು ಅಜ್ಜಮ್ಮ ಇತ್ತಂತೆ. ನನ್ನಂಥದು. ಅದರತ್ರ ಒಂದು ಗಿಣಿರಾಮ ಇತ್ತಂತೆ. ನಿನ್ನಂಥದು.

ಇಂಗೆ ಅವು ಎರಡೂವೆ, ಒಂದನ್ನೊಂದು ಒಂದು ಅರೆ ಗಳಿಗೇನೂ ಬುಟ್ಟಿರತಿರ್ನಿಲ್ಲವಂತೆ . ಇಂಗಿರೋವಾಗ ಆ ಗಿಣ್ರಾಮಂಗೆ ಮೈಸೂರಿಗೆ ಹೋಗಿ ಅರಮನೆ ನೋಡಕಂದು, ದಸರಾ ನೋಡಕಂದು, ಅಂಬಾರಿ ವಳಗೆ ಕುಂತ್ಕಂಡು ಮೆರವಣಿಗೆ ಹೋಗೋ ಅಂಥ ಮಹಾರಾಜರೂನು ನೋಡಿ ಬರಬೇಕು ಅಂತ ಆಸಾಯ್ತು.

parrot3ಯಾಕಂದ್ರೆ ದಸರಾ ನೋಡಕ್ಕೆ ಊರಿನ ಹುಡ್ಲೆಲ್ಲ ಒಗ್ಗಟ್ಟಾಗಿ ಹೊರ್ಟಿದ್ವು. ಇದೂವೆ ಅಜ್ಜಿಗೆ ” ಅವರ ಜೊತೆಲಿ ನಾನೂ ಹೋತೀನಿ ” ಅಂತವ ಗೋಗರಿತು. “ನಾನೂ ಊರಹುಡ್ಲು ಕುಟೆ ಮೈಸೂರಿಗೆ ಹೋಗಿಬತ್ತಿನಿ” ಅಂತವ ಚೋಡಿ ಮಾಡತು.

ಅಜ್ಜಿಗೆ ದಿಗಿಲಾತು. ಅಯ್ಯೋ ಶಿವನೆ! ನನ್ನ ಮಗ ಇಂಗ್ ಚಂಡಿ ಮಾಡ್ತಾ ಕೂತಿತಲ್ಲಾ! ಏನ್ ಮಾಡದು? ಕಳುಸುದ್ರೂ ಕಷ್ಟ. ಕಳಸದಿದ್ರೂ ಕಷ್ಟ ಅಂದಿದ್ದೆ ಅದನ್ನ ಮುಂಗೈ ಮೇಲೆ ಕೂರಸ್ಕಂದು “ಬ್ಯಾಡ ಕನಪ್ಪಾ,ಇಲ್ಲೋಡು. ನೀನು… ಹಸುರೊಳಗೆ ಕಾಣದಂಗೆ ಬಾಳ್ಮೆ ಮಾಡೊನು. ನಿಂಗೆ, ಜಾತ್ರೆ ಮೆರವಣಿಗೆ ಆಗಿ ಬರಕುಲ್ಲಾ ಕಣೊ ಗಿಣರಾಮಾ, ಊರಿನ್ ಹುಡ್ಲು ಇದವಲ್ಲಾ… ಅವೂ ಚತಾಮ್(ಕಿಲಾಡಿ) ನನ್ ಮಕ್ಕಳು. ಅವು ಬೂಮಿ ಮೇಗಡೇ ಇರೊ ಎಲ್ಲಾ ಉಪಾಯನೂ ಕಲ್ತವೆ. ಇಲ್ಲೇನೋ ನಾನ್ ಇದೀನಿ ನಿಂಜೊತಿಗೆ. ಸರಿ. ನಂಗೆ ಹೆದ್ರುಕೊಂಡು ನಿನ್ನ ಅವ್ರು ಸುಧಾರುಸ್ಕತರೆ. ನಾನು ಕಣ್ಣಿಗೆ ಮರೆ ಆದ್ರೆ ನಿನ್ ಕಥೆ. ಬ್ಯಾಡಾ ಕಣಪ್ಪಾ ಹೊಗದು”. ಅಂತು.

ಹಂಗಂದದ್ದಿಕ್ಕೆ,ಇದೇನ್ ಮಾಡ್ತು? ಹಠ ಹಿಡದು ಊಟ ಬುಟ್ಟಬುಡ್ತು. ಗಿಣಿರಾಮಾ ಚೋಡಿ(ಹಠ) ಮಾಡದ ನೋಡಿದ್ದೆ ಅಜ್ಜಿ ಏನು ಮಾಡತು? ಸರಿ ಹೋಗ್ಬರೋಗು ಅತ್ಲಾಗಿ ಅಂತವ ಹೊರುಡುಸ್ತು. ಎಂಗೇ? ಊರಿನ ಹುಡ್ಲು ಬಟ್ಟೆ ಬರೆ, ರೊಟ್ಟಿ ಗಂಟ ಕೈಲಿ ಹಿಡಕಂಡು ಹೊಂಟ್ರೇ…. ಇದಕ್ಕೆ ಕೈ ಇಲ್ವಲ್ಲಾ… ಅಜ್ಜಿ ಏನು ಮಾಡತು? ಇದಕ್ಕೆ ಬಟ್ಟೆ ಬರೆ ಗೋಜಿಲ್ಲ ತೆಗಿ ಅಂದು ತಿನ್ನಕ್ಕೆ ಅಂತ ಕಾಳುಕಡ್ಡಿ ಸ್ಯಾಮೇಯ ಹಾಕಿ ದೊಡ್ಡದೊಂದು ಕೋಡುಬಳೆ ಮಾಡಿದ್ದೆ ಕತ್ತಿಗೆ ನೇತು ಹಾಕತು. ಹೊರಡಕ್ ಮುಂಚೆ ತನ್ನ ಮಗಿಗೆ ಗಿಣಿಗೆ ಹೇಳದಂಗೆ ಬುದ್ದಿ ಹೇಳತು.

“ಮಗಾ, ಯಾರ ಮಾತಾಡುಸುದ್ರೂ ನೀನು ಮಾತಾಡಕ್ಕ್ ಮಾತ್ರ ಹೋಗಬೇಡ. ಪುರ್ರನೆ ಹಾರ್ ಹೋಗಿ ಸಿಕ್ಸಿಕ್ಕದ್ದ ತಿನ್ಬೇಡ. ಅಲ್ಲಿ ಇಲ್ಲಿ ಆಳವಾಗಿರೊ ಗುಂಡಿ ಕಡಿಕೆ ಹೋಗಿ ನೀರು ಕುಡಿಬೇಡ. ಏನಿದ್ರೂ ಇಲ್ಲಿಗೆ ಬಂದ ಮೇಲೆ ಮೈ ತೊಳಕಳುವಂತೆ. ಹೊಸ ನೀರಿಗೆ ನೆಗಡಿ ಆದ್ರೆ ಜಡ ಬತ್ತದೆ. ಅಲ್ಲೀ… ನಿನ್ ನೋಡಕಳಕೆ ಯಾರು ಇರ್ತಾರಪ್ಪ ಕಂದ. ನೀ ಬರೊವರ್ಗೂ ನಿನಗೆ ತಿನ್ನಕೆ ಈ ಕೊಡುಬಳೇನೆ ಸಾಕು. ಅದೇ ಹೆಚ್ಚಾಗಿ ಹ್ಯಾಗರಿತೀತೆ. ಇದನ್ನೇ ಸುತ್ತಲೂ ಕುರಿಕ್ಕಂಡು ತಿನ್ನು. ಬಳೆ ಮಾತ್ರ ಮುರಕಬೇಡ. ತಲೆ ಬಗ್ಗಸ್ಬೇಡ. ಬಿದ್ದೋಯ್ತಿತೆ. ” ಅಂತವಾ, ಕಣ್ಣಲ್ಲಿ ನೀರ ಕಚ್ಕಂದು ಅಜ್ಜಿ ಹೆಗಲ ಮೇಲೆ ಕುಂತಿದ್ದ ಗಿಣಿರಾಮನ್ನ ಕೈಮ್ಯಾಲೆ ತಗಂದು ಒಂದು ಮುತ್ತಿಟ್ಟು, ಹುಡುಗರ ಜತೆಲಿ ಹಾರುಬುಟ್ಟು ಕಳುಸ್ತು.

ಅದು ದೂರ ಆಗ್ತಾ ಆಗ್ತಾ ಒಂದು ಚಿಕ್ಕಿ ಆಗಿ ಬೆಳಕರದಾಗ ಆ ಚಿಕ್ಕಿ ಬೆಳಕಲ್ಲಿ ಕರಗ ಹೋದಂಗೆ ಕಣ್ಣಿಗೆ ಮರೆ ಆಗೋವರಗೂವೆ ಅಜ್ಜಿ ನೋಡತಲೇ ನಿಂತಿತ್ತು.

ಎರಡು ಹಗಲು ಒಂದು ರಾತ್ರಿ ಪಯಣ ಅನ್ನು, ಒಳ ಹಾದೀಲಿ ಮೈಸೂರು ತಲುಪಕೆ. ಸರಿ, ಹುಡ್ಲು ಜತಿಗೆ ಎಂಗೋ ಹಾರಾಡಕಂದು, ಗಿಣಿಗಿಣಿಯಂಗೆ ಗಿಣಮಾತಾಡಕಂದು, ಅಜ್ಜಿಯ ನೆನಸ್ಕಂದು, ಅದು ಕೊಟ್ಟ ಕೋಡುಬಳೆಯ ವಸವಸಿನೆ ತಿನ್ಕಂದು, ಹುಡುಗ್ರು ನೀರ ಕುಡಿಯ ಕಡೆಲೆ ತಾನೂ ನೀರ ಕುಡಕಂದು, ರಾತ್ರಿ ಅವರ ಜತೀಲೆ ಮಲಕ್ಕತು.

ಬೆಳಿಗ್ಗೆ ಎದ್ದು ಯಾಕೋ ಇದಕ್ಕೆ ಬೇಜಾರಾತು. ಆವಾಗ ಇದು ಏನ್ ಯೋಚ್ನೆ ಮಾಡತು? ಅಯ್ಯೋ…  ಅವ್ರಗೇನು ರೆಕ್ಕೆ ಇದವ? ಪುಕ್ಕ ಇದವಾ? ನನ್ ಜತೆಲಿ ಪುರ್ರನೆ ಹಾರ್ಕಬರಕೆ. ಈಟಂದೊಡ್ಡಿ ಜನ ದಾರೀಲಿ ಹೋಯ್ತಾವರೆ. ದಸರಕ್ಕೆ ದಂಡು ಕಟ್ಕಂದು. ನಾನು ಇದೇ ದಾರಿ ಹಿಡಕಂದು ಮುಂಚೆಲೆ ಹೋಗಿ ಮೈಸೂರ ತಲಪಿಬಿಡನ. ಅಲ್ಲಿ ಚಾಮುಂಡಿ ಬೆಟ್ಟದಲ್ಲಿರೊ ಚಾಮುಂಡಮ್ಮನ ಗುಡಿಯ ಕಳಸ ಹತ್ತಿ ಕೂತ್ರೆ ಜನಾನು ನೋಡಬೈದು. ನಮ್ಮೂರರು ಮೈಸೂರ ಬಂದು ತಲುಪಿದ ಮೇಲೆ parrot5ನಾನೂ ಇವರ ಜೊತಿಗೆ ಸೇರ್ಕಂದ್ರಾತು. ಅಂದಿದ್ದೆ, ಇವ್ರಿಗೇನು ಹೇಳತಪ್ಪಾ ಅಂದ್ರೆ “ನೋಡ್ರಪ್ಪಾ, ನಿಮ್ಮಂಗೆ ನಿಧಾನಕ್ಕೆ ಬಂದ್ರೆ ನಂಗೆ ಮೈ ನೋಯ್ತಿತೆ. ಕತ್ತು ಬೇರೆ ಭಾರಾಗಿತೆ” ಅಂತ ನೆವ ಹೇಳತು. ಇವ್ರು “ನಿಮ್ಮ ಅಜ್ಜಿ ಬುಡತಳೆನೊ ನಮ್ಮ. ಒಬ್ಬನ್ನೆ ಕಳುಸುದ್ರೆ. ಕೊಡು ಇಲ್ಲಿ. ಕೋಡುಬಳೆಯ ನಾವೆ ಹಿಡಕಬತ್ತೀವಿ” ಅಂತಂದ್ರು.

ಅಜ್ಜಿ ಕಿವಿಮಾತನ್ನ ಇದು ನೆನಕಂದು ಇದು “ಬ್ಯಾಡಾ,ಬ್ಯಾಡ. ಇದನ್ನ ಕೊಟ್ರೆ ಹಸಿವಾದಾಗ ನನ್ನ ಹೊಟ್ಟಿಗೆ ಬೇಕಲ್ಲಾ” ಅಮ್ತ ಗಿಣಿ ಪಾಠ ಒಪ್ಸಿ, ಜನ ಹೋಯ್ತಿರ ಜಾಡ ಹಿಡ್ದು ಪುರ್ರನೆ ಒಂದು ಗಂಟೆ ವಳಗೆ ಮೈಸೂರು ಅನ್ನ ಊರ ಸೇರಕತು .

ಹೇಳೋರು ಕೇಳೊರು ಯಾರು ಇಲ್ಲ. ಅಲ್ಲೆ ದಾರಿಲಿ ಜನಕ್ಕೆ ಅಂತ ಗುಡಾಣದಲ್ಲಿ ನೀರ ಒದಗ್ಸಿದ್ದರಲ್ಲಾ, ಆ ನೀರನ್ನೆ ಕುಡಕಂದು, ವಸಿ ಹೊತ್ತು ಆ ಮರದ ಮೇಲೆ ಇನ್ನೊಸಿ ಹೊತ್ತು ಈ ಮರದ ಮೇಲೆ ಕುಂತ್ಕಂದು ದಣಿವಾರ್ಸಕತು. ಎಲ್ಲಿ ನೋಡುದ್ರೂ ಜನ.ಜನ. ಎತ್ತಿನ ಗಾಡಿ. ಕುದುರೆ ಗಾಡಿ. ಕುದುರೆ ಸವಾರಿ ಸಾಲು, ಆನೆ ಸಾಲು, ತಾಲೀಮು ಮಾಡೋರು. ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಆಡೋರು, ಕಾಲಿಗೆ ಗೆಜ್ಜೆ ಕಟ್ಟಕಂದು ಕುಣಯೋರು, ಕಿಲಕಿಲಾಂತ ಹೊಸಬಟ್ಟೆ ಹಾಕ್ಕಂದು ಓಡಾಡರು. ಹಿಂಗೆ… ರಾಗಾ ಹಾಡೋರು, ತಮಟೆ ಬಾರಸೋರು, ಮೇಳ ನುಡಸೋರು ಒಬ್ರಾ… ಇಬ್ಬರಾ…..ಹತ್ತೂರ ಜನರೆಲ್ಲಾ ಸೇರ್ಕಂದು ದಸರ ಹಬ್ಬವ ಮಾಡತಿರರು.

ಎತ್ಲಾಗಿ ತಿರಗುದ್ರೂವೆ, ಅರಮನೆ ಸುತ್ತಲೂ ಸುತ್ತು ಹಾಕುದ್ರೂವೆ ಹಸ್ರು ಚಪ್ಪರ, ಹೂವು, ಏನು? ತಗ, ಕಾಡಿನ ಹಸ್ರುನೆಲ್ಲ ಹೊತ್ಕಬಂದು, ಕಾಡಲ್ಲಿ ಬುಟ್ಟ ಹೂವೆಲ್ಲನೂ ತಂದು ಈ ಮೈಸೂರ ಅನ್ನ ಊರನೆ ಸಿಂಗಾರ ಮಾಡವ್ರೆ. ಅದಕ್ಕೆ ಇದ ನಾಡು ಅಂತಾರೆ ಕನಪ್ಪ. ಹೋಗ್ ಅತ್ಲಾಗಿ…. ನೋಡಿ, ನೋಡಿ ಕಣ್ಣು ಸೋತು ಕತ್ಲು ಬಂತೆ ಹೊರ್ತು ಮುಗೀನೆ ಒಲ್ಲದು. ದಣಿಯದು. ನೋಡದು. ಮತ್ತೆ ನೋಡದು. ದಣಿಯದು.

ಗಿಣರಾಮಾ ಚಾಮುಂಡಿ ಬೆಟ್ಟ ಸುತ್ತು ಬಂತು. ದೇವರ ಅಡ್ಡೆ ನೋಡಬಂತು. ಊರೆಲ್ಲ ತಿರಿಕಬಂತು. ಕಿಟಕಿಲಿ ಕುಂತು ಇದೇನು ಇಂಗೆ ಸದ್ದು ಮಾಡ್ತವಲ್ಲ! ಕಾಳೆಕೊಂಬು…. ಅಂತ ಬಗ್ಗಿ ನೋಡತು. “ಬೋ ಪರಾಕು” ಅಂತ ಸಾರಕಂದು ನರಿ ಅಂಗೆ ಜನ ಬಗ್ಗಿ ಬಾಲ ಮುದುರಿ ಸಲಾಮು ಹೇಳತಾವರೆ. ಎದ್ರುಗಡೆಯಿಂದ ತಲೆ ಮ್ಯಾಲೆ ಕಿರೀಟ ಹಾಕಂದು ಸಿಂಹ ಕಾಡಲ್ಲಿ ಬತ್ತಿತಲ್ಲ ಅಂಗೆ ಒಬ್ಬ ಬತ್ತಾ ಇದಾನೆ. ಆಮೇಲೆ ಇದಕ್ಕೆ ಗೊತ್ತಾಯ್ತು. ಅವನೆ ಮಾರಾಜ ಅಂತವ. ಅವನೂ… ಹೆಂಗೆ…. ಹೋಗಿ ಸಿಂಹಾಸನದ ಮೇಲೇ ಕುಂತ್ಕಂದ ಅಂದ್ರೆ, ಸಿಂಹ ಬಂಡೆ ಏರಿ ಠೀವಿಲಿ ಕುಂತಂಗೆ .

ಮಹಾರ್ರಾಜರ ದರ್ಬಾರೂ ಶುರುವಾತು. ಎದ್ರುಗೆ ವಸಿ ಜನ ಇದ್ರಾ? ಅಯ್ಯಪ್ಪಣ್ಣಿ! ಅಷ್ಟೂ ಜನೂವೆ ಎಲ್ಲಾ ನಿಂತ್ಕಂದೆಯ ಅದೂವೆ ನಡುಬಗ್ಗುಸ್ಕಂದೇಯ, ರಾಜನ ಹತ್ರ ಮಾತಾಡೋರು. ಅವರೂ ಒಳ್ಳೆ ಬುದ್ದವಂತ್ರಂಗೇ ಕಾಣರಪ್ಪ! ಇಂಥ ದರ್ಬಾರನೂ ಗಿಣಿ ನೋಡತು. ಆ ಕಡೆ ಈ ಕಡೆ ನವುಲುಗರಿ ಕುಛ್ಛ ಕಟ್ಕಂದು ಗಾಳಿ ಬೀಸರು ಬೇರೆ ಬೀಸುತಿದ್ರು ರಾಜಂಗೆ.

ಇನ್ನೊಂದು ಮಾತು… ಅಂಗೆ, ಬಟ್ಟೆಬರೆ ವಡವೇಯಾ ಹೇರಕಂದವರಲ್ಲಾ… ಇವ್ರಗೆಲ್ಲಾ ಸೆಕೆ ಆಗುಕುಲ್ವಾ? ರಾಣೀರೂ, ಅರಮನೆ ಹೆಣ್ಣಮಕ್ಳು ಹುಶ್! ನಮ್ಮಪ್ಪ, ಕೆಲಸದೋರು ಸೈತ ಮೈಮೇಲೆ ಅಷ್ಟು ಬಟ್ಟೆ ಹೇರಕಂದು, ಸಾಲದು ಅಂತ ಚಿನ್ನ ಬಣ್ಣವ ಹಾಕ್ಕಂದು, ನಾಡಲ್ಲಿ ಬ್ಯಾರೇ ಕಡೆ ಇರೊ ಯಾರಗೂ ಏನೂ ಬುಡದಂಗೆ ಎಲ್ಲಾನೂ ಅವರೇ ಹೇರಕಂದು, ಮಣಭಾರ ಹೊತ್ಕಂದು ಹೆಂಗೆ ತಿರುಗತಾವರೆ ಅಂತವ… ಗಂಡು ನವುಲು ಅನ್ನದು ಹೆಣ್ಣ ಒಪ್ಸಾಕೆ ಅಂತ ಯಾವುದೋ ಕಾಲದಲ್ಲಿ ಪರಮಾತ್ಮನ್ನ ನನಗೆ ಇಂಥದೇ ಸಿಂಗಾರದ ವರ ಕೊಡು ಅಂತ ಕೇಳಕಂಡಿತ್ತಂತೆ.

ದೇವ್ರು ಇರದೆ ಅದಿಕ್ಕಲ್ವಾ? ಮತ್ತೆ. ಭಾರ ಹೊರ್ಸಕೆ! “ಆಯ್ತು, ತಗ ನೀನು ದುರಾಸೆ ಮುಕ್ಕ” ಅಂದಿದ್ದೆ ಮಾರುದ್ದದ ಒಂದು ಹೊರೆ ಗರಿಯ ಕೊಟ್ಟ. ಈಸ್ಕಳದ ಈಸ್ಕಂಬುಟ್ಟು ಹೊರಲಾರದ ಹೊರೆ ಹೊತ್ಕಂಡು ಈಗ ಹೆಂಗೆ ಒದ್ದಾಡತೀತೆ ನೋಡು ನವ್ಲು. ಈ ಥರಕ್ಕೆ ಆಕಾಶದಲ್ಲಿ ಹಾರದನ್ನೆ ಕಳಕಂತಲ್ಲಾ ನವಲೂ ಅನ್ನದು ಅಂಗಾಯ್ತು ಇದೂವೆ…..

ಇಂಥ ಡೌಲ ಅದು ಇಲ್ಲೆ ಕಣಪ್ಪಾ ನಾ ಕಂಡಿದ್ದು. ನಮ್ಮೂರಲ್ಲಿ ಇಂಗಿಲ್ಲ ಕನವ್ವಾ….ನಮ್ಮಜ್ಜಮ್ಮಂತೂ ನನ್ನಂಗೆ ಹಗೂರಾಗಿ ತಿರಗತಾಳೆ. ಇವ್ರ ಮಕಕ್ಕಷ್ಟು ಸುಣ್ಣ ಹುಯ್ಯಾ…ಬಾ. ನರಮನುಷ್ಯರಂಗೆ ಒಬ್ಬರೂ ಕಾಣಲ್ರು ಈ ಅರಮನ್ಯೋರು. ಅಂಗೆ, ಸ್ವರ್ಗದಲ್ಲಿರೋ ದೇವರಂಗೆ ವೇಶವ ಧರುಸ್ಕಂದು ಯಂಗೆ ಓಡಾಡತಾರೋ ಇವ್ರು…ಕಾಣಪ್ಪ ನಾನು! ಅದುಕ್ಕೆ ಮತ್ತೆ, ಅಷ್ಟಿಟ್ಟು ಗಾತ್ರ ಅವ್ರೆ. ಕುಂತ ಕಡೆಲೆ ಕುಂತ್ಕಂದು ಅಂಡು ದಪ್ಪ ಮಾಡಕಂಡು.

parrot2ಅಷ್ಟೊತ್ತಿಗೆ, ಅಲ್ಲಿ ಏನೋ ಜೋರಾಗಿ ಸದ್ದಾತು. ನೋಡುದ್ರೆ ದೊಂಬರು, ಹುಲಿವೇಶದೋರು ಕುಣ್ದು ಕೆಡುವತಿದ್ರು. ಹಳ್ಳಿ ಜನಲ್ವೇ…ನೋಡಬೇಕು. ತೆಳ್ಳಗೆ ಮಯ್ಯ ಎಂಗೆ ಮುರಿತಾರೆ ಅವ್ರು, ಅಂತವ. ಹೊಟ್ಟೆ ಅನ್ನದು ಅಂಗೆ ಮೈಗೆ ಹತ್ತಕಂಡೀತೆ ಇವರಿಗೆ.

ಅದೇನಪ್ಪಾ! ಅದು ಆಚೆ ಕಡೇಲಿ ಇರದು. ಅರಮನೆ ವಳಗಿರೊ ಗುಡಿ ಮುಂದಿನ ಗರುಡಗಂಬ ಆ ಪಾಟಿ ಎತ್ರ. ಇದು ಅಷ್ಟುದ್ದಕ್ಕೂ ತಲೆ ಏ……ತ್ತಿ ನೋಡುತು. ಮ್ಯಾಲೇರಬೇಕು ಅನ್ನ ಆಸೆ ಆಗೋಯ್ತು. ಪಟಪಟ ಅಂತ ರೆಕ್ಕೆ ಬಡೀತಾ ಅದರ ಮೇಲೆ ಬಂದು ಕುಂತ್ಕಂತು. ಕತ್ಲು ಆ ಕಡಿಂದ ಬೆಟ್ಟದ ಕಡಿಂದ ಕಣ್ಣಿನ ಬೆಳಕ ಸುತ್ಕತಾ, ಇತ್ಲಾಕಡಿಕೆ ಬತ್ತಿತ್ತು. ಆಗ…. ಊರ ಕಡಿಂದ ಕತ್ಲು ಜತೆಲೆ ನಮ್ಮೂರ ಹುಡ್ಲು ಬರದು ಗಿಣ್ರಾಮಂಗೆ ಕಾಣುಸ್ತು.

ಇದು ಪುರ್ರನೆ ಹಾರಕಂದು ಹೋಗಿ, ಅವರ ತಲೆ ಮೇಲೆ ದುಂಡೂರಕ್ಕೆ ಸುತ್ತು ಹೊಡಿತು. ಅವರು ಓಹೋಹೋ…..ಅಂದ್ರು. ಇದು ರಾಮ್ಮಾ…. ರಾಮ್ಮಾ….ಅಂತು. ನಡಕಂದು ಬಂದೋರು ಸುಧಾರ್ಸ್ಕಳ ಹೊತ್ಗೆ……ಧಿಗ್ಗನೆ ಸುತ್ತಮುತ್ತ ಒಂದೇ ದಪಕ್ಕೆ ದೀಪಗಳ ಎಲ್ಲೆಲ್ಲೂ ಹಚ್ಚತಿದ್ರು. ಅದೆಷ್ಟು ಜನ ಹಚ್ಚುತಿದ್ರೋ ಕಾಣೆ. ಊರಾನು ಊರಿಗೆ ದೀಪದ ಬೆಳಕ ಹೊತ್ಸಿ, ಕತ್ಲಾಗದ್ರಲ್ಲಿ ಅಂಗೇ ಊರ ಮಿನುಗುಡಸ್ ಬುಟ್ರು. ಕಾಡಲ್ಲಿ ದಂಡು ಕಟ್ಟಕಂಡು ಬರೊ ಅಂಥ ಮಿಣಕು ಹುಳದ ಜಾತ್ರೆಯ ಸರಿಸಮಕ್ಕೆ ಇದು ಕಣ್ಣಿಗೆ ಬೆರಗು ಹುಟ್ಟುಸ್ತಿತ್ತು. ಅಷ್ಟು ಚೆನ್ನಗಿರೋದು ನೋಡಕ್ಕೆ…

ಪಾಪ! ಗಿಣ್ರಾಮ, ಆಚಿಗೆ ಹೋದ್ರೆ ಎಲ್ಲಿ ರೆಕ್ಕೆ ಪುಕ್ಕ ಸುಟ್ಟದೋ ಅನ್ನ ಭಯ. ಅದಕ್ಕೇ ಹೆದ್ರಕಂದು ಹುಡುಗರು ತಂಗಿದ್ದ ಛತ್ರದ ತಲೆಮೇಲಗಡೆ ಸೂರಿನ ತಲೆ ಮೇಲೆ ತಲೆ ಇಟ್ಟಕಂದು ಮಲಕ್ಕತು. ಆಚೆ ಕಡೆ ತಂಬೂರಿ ಮೀಟಕಂದು ಹಾಡರು ಹಾಡತಲೆ ಇದ್ರು. ಕೇಳೋರು ಕೇಳತಾಲೆ ಇದ್ರು. ಆ ಹಾಡಲ್ಲಿ, ಚಾಮುಂಡವ್ವನ್ನ ಪಕ್ಕದ ಚಿಕ್ಕ ಬೆಟ್ಟದಲ್ಲೆ ಇರೊ ತಂಗಿ ಉತ್ತನಳ್ಳಿ ಮಾರಮ್ಮ ಭಾವ ನಂಜುಂಡನ್ನ ವಸಿ ಬೈನಿಲ್ಲ ಕನೋ. ಅಕ್ಕನ್ನ ನೋಯಸಿ ಯಾವಳನ್ನೋ ಮಡುಕ್ಕಂಡವನೆ ಅಂತವ, ಅವನ ಕುಲ ನೀರಿಗೆ ಹಾಕಿ ಇವಳು ತೆಗುದ್ಲು. ವಿಷ ನುಂಗದೋನಿಗೆ ಈ ಬೈಗುಳ ನುಂಗೋದು ಯಾವ ಮಹಾ? ತೆಗ, ನಮ್ಮೂರಲ್ಲೂವೆ ಇಂಥ ಕಥೆಗೆ ಬರವಾ! “ವಯಸಿದ್ದಾಗ ಮೆರಿತರೆ. ಕೊನಿಗೆ ಹಳೆ ಗಂಡನ ಪಾದವೇ ಗತಿ . ನಿಂತಕೆ ಬತ್ತನೆ ಬಾ ನೊಯ್ಯಬೇಡ” ಅಂತ ನಮ್ಮಜ್ಜಿ ಅತ್ತಕಂದು ಬಂದು ದೂರು ಹೇಳೋ ನಮ್ಮೂರಿನ ಹೆಣ್ಣಮಕ್ಕಳಿಗೆ ಹಿಂಗೆ ಸಮಧಾನ ಹೇಳತೀತೆ ಕನಪ್ಪಾ…ಇಂಥ ಕಥೆನೆಯೆ ಹೆಂಗೆ ಇವ್ರು ರಾಗವಾಗಿ ಹೇಳುತಾವರೆ. ನೋಡೂ….

ನಮ್ಮ ಕಡೆ ತಂಬೂರಿಯವ್ರು ಗಂಗೆ ಗೌರಿ ಕಥೆ ಹೇಳುತಾರಲ್ಲಾ ಅಂಗೆ… ಒಂದೊಂದು ಕಡಿಕೆ ಒಂದೊಂದು ಕಥೆ! ಎಲ್ಲು ಹೋದ್ರೂವೆ…ಇಂಥ ಪಾಡೆ ನೋಡು, ಹೆಣ್ಣೆಂಗುಸ್ರುದು ಅಂತವ ಹಾಡ ಕೇಳ್ತಲೆ ಸೋತು ನಿದ್ದೆ ಮಾಡಬುಡತು. ಬೆಳುಗ್ಗೆ ಎಲ್ರುಗಿಂತ ಮುಂದಲೆ ಎದ್ದು ಇದು ಮಕತಿಕ ತೊಳಕಂತು. ತೊಳಿತ್ತಿದ್ದಂಗೆ ಇವರಿನ್ನೂ ಮಲಗವ್ರೆ. ತಡಿ ಓಂದು ಸಲ ಮೈಸೂರ ಸು…ತ್ತಿ ಬರನ ಅಂತ ಹೋದ್ರೆ ಆನೆ ಲಾಯದಲ್ಲಿ, ಕುದುರೆ ಲಾಯದಲ್ಲಿ ಕಸ ತೆಗದು ಅದರ ರುಂಡಿಕುಂಡಿಯ ತಿಕ್ಕಿ ಅವುಗಳನ ಸಿಂಗಾರ ಮಾಡತಾವರೆ. ಸೊಂಡಲು ಬಾಲಕ್ಕೆಲ್ಲ ಚಿತ್ರ ಬರಿತಾವರೆ.

ಇದೇನಿದು? ಸಂಜೆ ಮುಂದೆ ದಿನಾ ಆಕಾಶ ತನ್ನ ಮೈಗೆ ತಾನು ರಂಗ ಬಳಕಂದು ನಲಿತಿತಲ್ಲಾ ಅಂಗೆ, ಈ ಮೈಸೂರು ತನಗೆ ಸಿಕ್ಕಸಿಕ್ಕದ್ ಕಡೆಯೆಲ್ಲ ಚಿತ್ರ ಬುಡಸ್ಕತದಲ್ಲ. ನಮ್ಮ ಕಡೆ ಮದುವೆ ಮನೆಲಿ ಗೋಡೆ ಮೇಲೆ ಹಸೆ ಚಿತ್ರ ಬಿಟ್ಟಂಗೆ. ಈ ಐಚಿತ್ರಕ್ಕೆ ಮತ್ತೆ ತಗಾ… ದಸರಾ ದಸರಾ ಅಂತ ನಾಡೆ ಕುಣಿಯಾದು. ಊರು ಅಂದ್ರೆ ಇದೆ ಕನಪ್ಪಾ! ಸೀಮೆಲ್ಲಿಲ್ಲದ ಊರು. ಮೈಸೂರು. ಮಯ್ಯೂ ಚೂರು. ದೇವೇಂದ್ರನ ಅಮರಾವತಿ ಪಟ್ನಕ್ಕಿಂತ ಏನು ಕಡಿಮೆ ಈತೆ. ಇನ್ನೂ ವಸಿ ಮೇಲೆ ಅಲ್ವಾ?

ಈ ಥರಕ್ಕೆ ಅದು ತಲೆ ಕೆಡುಸ್ಕಂದು ಅಲ್ಲಿರೊ ಗುಡಿತಕೆ ಹೋಗಿ, ಮೂರು ಸುತ್ತು ತಿರಗಿ, ದೇವರ ಒಲುಸ್ಕಂದು ಬಂತು. ಅಡ್ಡ ಉದ್ದ ನಮಸ್ಕಾರನೂ ಹಾಕತು. ದೇವರಗಂತೂ ಹೂವಿನ ಬಣ್ಣ ಎಲ್ಲನೂ ತಂದಿದ್ದೇ ಸಿಂಗಾರ ಮಾಡುಬುಟ್ಟವ್ರೆ. ಕಾಮದೇವ ಬಂದು, ಮರಗಿಡದ ಮೇಲೆ ಹೂ ಬಾಣ ಬುಟ್ಟಂಗೆ ಈ ಊರು ಅನ್ನದು, ಕಾಣಸತಿರದು. ಇಂಥ ಊರ ತಿರಗಾಡಕಂದು ನೋಡಕ್ಕೆ ಎರಡು ಕಣ್ಣು ಸಾಲದೇಯಾ ಹುಡ್ಲಿರತಕೆ ಇದು ಮತ್ತೆ ವಾಪಾಸ್ ಬಂತು. ಹುಡ್ಲು ಹಲ್ಲ ಇನ್ನೂ ತಿಕ್ಕತಿದ್ರು. ಮುಖ ತೊಳಕಂದು ಮೂಡಗಡೇ ದೇವಂಗೆ ( ಸೂರ್ಯಂಗೆ) ಕೈ ಮುಗದು ಬಂದ್ರು. ಇದನ್ನ ಕೇಳುದ್ರು.

“ಎಲ್ಲಿಗೋಗಿದ್ಲಾ ಗಿಣ್ರಾಮ”
“ಊರ ತಿರಗಾಕೆ” ಇದು ಕತ್ತನ್ನ ಮ್ಯಾಕೆ ಎತ್ಕಂದು ಉತ್ರ ಹೇಳತು. ಅಜ್ಜಿ ಬೇರೆ ಸಾರಿ ಸಾರಿ ಹೇಳ್ ಕಳಿಸಿದ್ಲಲ್ಲಾ..ತಲೆ ಬಗ್ಗುಸ್ಬೇಡ ಕನಪ್ಪಾ ಅನಕಂದು.
“ಅರಮನೆ ನೋಡದಾ”
“ಹೋ”
“ದೇವಸ್ಥಾನ ನೋಡದಾ?”
“ಹೋ”
“ದೇವರ ಮುಂದಿನ ಗರುಡಗಂಬ ನೋಡದಾ?”
“ಹೋ”
“ಬೆಟ್ಟ ನೋಡದಾ”?
“ಹೋ”
“ಅರಮನೆ ನೋಡದಾ?”
“ಹೋ”
parrot4“ಅದರ ಮೇಲಿನ ಅಟ್ಟಾ ನೋಡದಾ?”
“ಹೋ”
“ಅರಮನೆ ಸುತ್ತಲೂ ಕಳಸ ಎಸ್ಟವೆ ನೋಡದಾ..ಆಂ…?”
“ಹೋ…..”

ಇದರ ಮೇಕ(ಜಂಭ) ಕಂಡು, ತಲೆ ಎತ್ಕಂದೆ ಮಾತಾಡೊ ಗಿಳಿ ಕಂಡು ಇವ್ರಿಗೆ ಈಗ ಸಿಟ್ಟು ಬಂತು. ಚೋಟುದ್ದ ಈತೆ. ನಮ್ಮುಂದಲೆ ತಿರಕೆ ಜಂಭ ಮಾಡತೀತಲ್ಲಾ? ಇದರ ಜಂಭದ ಕೊಟ್ಟ ಎಂಗಾರ ಮಾಡಿ ಮುರಿಯಾನ ತಡಿ ಅಂದಿದ್ದೆ, ಕಾಣದರಂಗೆ ಹುಡುಗ್ರು ಒಬ್ಬೊಬ್ಬರು ಒಂದೊಂದು ಮಾತ ಕೇಳಕೆ ಶುರುವಾದರು. ಅಂಗೇಯ…
” ಅರಮನೆ ಕಳಸದ ಮೇಲೆ ಕುಂತ್ರೆ ಮೈಸೂರೆ ಕಾಣುಸ್ತೀತೆ ಅಲ್ವಾ?” ಅಂಗಂದಾಗ ಇದು ಅವರಿಗೆ ಕಾಣಸುದೇ ಇರೊದು ನನಗೆ ಎಲ್ಲಾ ಕಾಣಸುತಾ… ಈತೆ ಅನ್ನಕಂತು. ಜಂಭ ನಿಜವಾಗಲೂವೆ ಈಗ ನೆತ್ತಿಗೇರ್ತಾ ಹೋಯ್ತು.
“ಹೋ..”.
“ಆಕ್ಕಾಶ ಭೂಮಿಗೆ ಇಳೆಬಿದ್ದೀತಲ್ಲಾ ಅಲ್ಲಿವರ್ಗೂ ನೆಲ ಕಾಣುಸ್ತೀತಾ ನಿಂಗೆ?”
“ಹೋ… ನಾನು ಹಕ್ಕಿ ಅಲ್ವಾ? ಆಕಾಶದ ಮೇಲಿಂದ ನೋಡುದ್ರೆ ನೆಲದ ಮೇಲಿನ ಒಂದಿನುಕು ಕಾಳೂ ಕಾಣುಸ್ತಿತೆ ನನ್ನ ಕಣ್ಣಿಗೆ.” ಇದು ಜಂಭದಲ್ಲಿ ನೆಗಾಡತು.
“ಮತ್ತೇ, ಮತ್ತೆ ಅಗ…. ನೋಡು, ಅಲ್ಲೀ…. ಸೂರ್ಯ ಬೆಟ್ಟದ ಕಡಿಂದ ಎಂಗೆ ಕೆಂಡುಡಂಡೆಯ ಹೊತ್ಕ ಬತ್ತಾವನೆ. ಅದು ಕಾಣುಸ್ತಾ?”
ಅದಕ್ಕೇನು? ಇದು ಹೊಸತಾ? ಆ ಕಡಿಕೆ ನೋಡತು.ನೋಡಿದ್ದೆ ತಗಳಪ್ಪಾ, ಆ ಚಂದಕ್ಕೆ ಮರುಳಾಗಿ ಆಕಾಶಕ್ಕೆ ಹಾರೋಗ್ ಬುಡನ ಅನ್ನಂಗೆ ಮನಸಾತು. ಅದು ಏನೇ ಆದ್ರೂ….ಭೂಮತಾಯಿ ಮಡಿಲೊಳಗೆ ಆಡಕೊಳ ಅಂಥ ಹಕ್ಕಿ ಮರಿ. ಅತ್ಲಾಗೆ ನೋಡತಾ ಗಿಣಿ ಕುಂತಿತ್ತು.
ಇವರು ಕೆಣುಕುದ್ರು.
“ನಮಗ್ಗೊತ್ತು ಕಣೋ ಗಿಣ್ರಾಮಾ… ನಿಂಗೇ…ಅಲ್ಲಿಗೆ… ಹಾರಿ ಹೋಗನಾ ಅನ್ನಸ್ತಾ ಈತೆ. ಅಲ್ವಾ?”
ಹೂಂ….. ತಲೆ ಬಗ್ಗುಸೇಬುಡ್ತು.

ಹಾರೋ ಆಸೆಲಿ ಮರೆತು ಹೂಮ್ಕತಾ ಅಂಗೆ ತಲೆ ಬಗ್ಗುಸಬುಡುತು. ಕೋಡುಬಳೆ ಕೆಳುಗೆ ಬಿದ್ದೋಯ್ತು. ಇದನ್ನೇ ಕಾಯ್ತಿದ್ದ ಊರಿನ ಹುಡ್ಲು …. ಕೋಡುಬಳೆ ಕೈಗೆ ಬೀಳದನ್ನೆ ಕಾಯತಿದ್ದೋರು, ಅದನ್ನ ತಗಂದು ಅವ್ರು ತಿನ್ನಕಂದ್ರು.
ಇದಕ್ಕೆ ಅಂಗೆ ದುಃಖ ಅನ್ನದು ಒದ್ದಕಂದು ಬಂದುಬುಡತು. ಅತ್ತೂ ಅತ್ತೂ ಸಾಕಾಯ್ತು.

ಅಜ್ಜಮ್ಮ ಅದ್ರ ಹೊಟ್ಟಿಗೆ ಆಗೊ ಅಂಥ ಬೇಕಾದ ಕಾಳುಕಡ್ಡಿಯ ಹಾಕಿ ತಿಂಡಿ ಮಾಡಿ ಕೊಟ್ಟಿತ್ತು. ಅದೂ ಅಲ್ದೇಯ ಊರ್ಗೆ ಹೋಗೋವರ್ಗೂ ಈಗ ಏನ ತಿನ್ನದು? ಈಗಲೇ ಈ ಪರಿ ಹೊಟ್ಟೆ ಹಸಿವಾಗೈತಲ್ಲ! ದುಃಖ ಉಕ್ಕುಕ್ಕಿ ಬಂತು. ಗಿಣರಾಮ ಸಪ್ಪಗೆ ಕುಂತಕಂತು. ಅಶ್ಟೊತ್ತಿಗೆ ವಾಲಗಾ, ಡೊಳ್ಳು, ದೌಲು ಶುರುವಾದದ್ದೆ ಅಂಬಾರಿ ಬಂದೇಬುಡತು. ಆನೆ, ಒಂಟೆ,ಕುದುರೆ, ಪಲ್ಲಕ್ಕಿ, ಅಂಬಾರಿ, ಅಂಬಾರಿ ವಳಗೆ ಕುಂತಿದ್ದ ರಾಜ,ರಾಜನ ಮಗ ಇಬ್ರೂವೆ, ಊರ ಜನಕ್ಕೆ ಕೈ ಮುಗ್ದೂ ಮುಗ್ದೂ ಮುಂದಕ್ಕೆ ಹೋತಿರೋರು.

ಕೆಳಗೆ ಇರುವೆ ಸೀಪದಾರ್ಥಕ್ಕೆ ಮುತ್ಕಂದಂಗೆ ಮುತ್ತಿದ್ರಲ್ಲ ಮೆರವಣಿಗೆ ನೋಡಕ್ಕೆ ಎಲ್ಲರೂವೆ ದೇವ್ರಿಗೆ ಕೈ ಮುಗ್ದಂಗೆ ಅಂಬಾರಿಲಿ ಕುಂತ ರಾಜಂಗೆ ಕೈಎತ್ತಿ ಮುಗಿತಿರೋರು. ನೋಡಪ್ಪಾ? ಆ ದೊರೆ ಮಕ್ಕಳ ಪಾಡಾ, ಕೈಸೋತು ಬಿದ್ದೋಗುಕಲ್ವಾ? ಸೇರಿರ ಜನಕ್ಕೆಲ್ಲಾ ಕೈ ಮುಗ್ಯೋದು ಅಂದ್ರೆ ಏನು ಹುಡುಗಾಟವಾ?…ಅವ್ರ ಹಿಂದೆನೆ ಅಂದಚಂದದ ಗಾಡಿಗಳು, ವಾಲಗದೋರು, ಪಾರಾ(ಪಹರೆ) ಕಾಯೋರು, ಎಲ್ಲಾ ದಂಡು ದಂಡೆ ಹೋಯ್ತಾವರೆ.

ಇದು ಬುಟ್ಟಕಣ್ಣ ಬುಟ್ಟಂಗೆಯ ನೋಡತಿತ್ತು. ರೆಪ್ಪೆ ಮುಚ್ಚಕೆ ಪುರುಸೊತ್ತು ಇಲ್ಲದಂಗೆ. ಇಂಥ ಮೆರವಣಿಗೆ ಅನ್ನದ ಇದು ಊರಲ್ಲಿ ಈ ಜನ್ಮದಲ್ಲಿ ಯಾವತ್ತೂ ಕಂಡೇ ಇರನಿಲ್ಲ. ಇರುವೆ ಸಾಲು ಅನ್ನದು ನೆಲದೊಳಗಿನ ಗೂಡಿಂದ ಬುದಬುದನೆ ಈಚಿಗೆ ಹೊಂಟ್ರೆ…. ನೋಡಿ ನೋಡಿ ದಣಿಬೇಕೆ ಹೊರತು ಮುಗಿಯುತ್ತಾ? ಹಂಗಾಯ್ತು. ಇದೂವೆ.

ಅದ್ಸರೀ…..ಇವರೆಲ್ಲಾ ಅರಮನೆಯಿಂದ ಬುಳಬುಳನೆ ಇಂಗೆ ಬರತಾಕೂತವರಲ್ಲಾ…. ಅದುಕ್ಕೆ ಮತ್ತೆ…ರಾಜನ ಅರಮನೆಯ ಊರಗಲಕ್ಕೂವೆ ಕಟ್ಟವರೆ. ಎಲ್ಲಾರನ್ನೂ ಸಾಕಬೇಕಲ್ಲ ಪುಕ್ಸಟ್ಟೇಯ! ಇದುಕ್ಕೆ ಮತ್ತೆ ರಾಜನ ಮುಂದೆ ಯಾರೂ ಉಸುರೆತ್ತದೆ ನಡ ಬಗ್ಗುಸಿ ಸಲಾಮು ಹೊಡಿತಾರೆ. ಎಂಗಾರ ಮಾಡಕಳ್ಳಲಿ ಬಾ. ನಮಗೇನು? ನಮ್ಮೂರಲ್ಲಿ ನಾವೆ ರಾಜಾ, ನಾವೆ ಆಳು. ನಮ್ಮ ಗೂಡು ಇರದು ನಾವು ಮಲಿಕ್ಕಳ ಅಷ್ಟೇ ಅಗಲ. ಸಾಕು ಕನಪ್ಪಾ ನಮಗೆ! ನಾವೇನು ಇವ್ರಂಗೆ ದರ್ಭಾರ ಮಾಡಬೇಕ? ಮರದ ಹಣ್ಣು, ಬಯಲ ಕಾಳು ಬೇಕಾದಷ್ಟಿರ್ತಾವೆ. ತಿನ್ನಕದು. ಕೆರೆ ಹೊಳೆ ನೀರ ಕುಡ್ಕದು. ನಿಸೂರಾಗಿ ಗೂಡಿಗೆ ಬಂದು ಬೆಚ್ಚಗೆ ಮಲಗದು. ನಂಗೇನೋ ನಮ್ಮದೆ ಚಂದ. ಇವ್ರದು ಯಾವೂರ ತಿವಾಸು ತಗ…..

parrot6ಮೆರವಣಿಗೆ ಮುಗಿಯೊ ಹೊತ್ಗೆ ಇಳಿ ಬಿಸಲು ನೆಲಕ್ಕೆ ತಾಗಕ್ಕೆ ಹೊರಟಿತ್ತಾ? ಇದಕ್ಕೆ ಬೆಳಗಿಂದ ಏನೂ ತಿನ್ನದೇಯ ಹೊಟ್ಟೆ ಕರುಳು ಹಸಿವೇಲಿ ಹೂತೋಗಿತ್ತು ಬಡವರ ಕರುಳಂಗೆ. ಕಣ್ಣಿನ ಸಿರಿ ಮುಗ್ದ ಮೇಲೆ ಈಗ ಅಜ್ಜಿ ನೆಪ್ಪಾಯ್ತು . ಅಜ್ಜಿ ಇದನ್ನ ಒಂದಿನಕ್ಕೂ ಇಂಗೆ ಉಪಾಸಾ ಕೆಡವಿರಲಿಲ್ಲ. ಗಿಣ್ರಾಮನ್ನ. ಅದ ನೆನಕಂದು ಕಣ್ಣಲ್ಲಿ ನೀರ ತುಂಬಕಂದು ಹೊರಟೆಬುಡತು ಊರ ಕಡೀಕೆ. ಹಾರತು. ಹಾರತು. ದಣಿವಾತು ಅಂದಾಗ ಸಿಕ್ಕ ಸಿಕ್ಕ ಕಡೆ ನೀರ ಕುಡ್ಯೋಕೆ ಹೋಗಿ ಮೈ ಗಾಯ ಮಾಡಕಂತು. ವಾಪ್ಸು ಊರಿಗೆ ಬರೊ ಹೊತ್ಗೆ ಪುಕ್ಕ ರೆಕ್ಕೆಲ್ಲಾ ಚಿದ್ರಾಗಿ ಹೋಗಿದ್ವು.

ಸಂಜೆ ಹೊತ್ತಲ್ಲಿ ಗಿಡುಗ ಕಾಗೆ ಹೊಂಚ ಹಾಕಂದು ಹಿಂದ್ಗುಟ್ಟೆ ಬರವು ಅಟ್ಟಸ್ಕಂದು. ಇದು ಒಂಟಿ ಬೇರೆ ಆಗೋಗಿತ್ತಾ… ಏಂಗೋ ತಪ್ಪುಸ್ಕಂದು, ಏಳು ಹನ್ನೊಂದು ಪರಿಪಾಟಲು ಬಿದ್ದು ಎದ್ದು ಕೊನಿಗೂ ಊರು ಅನ್ನದ ಕಂಡು ಅಜ್ಜಿ ಸೀರೆ ಸೆರಗಿಗೆ ಬಂದು ಬಿದ್ದುಬಿಡತು. “ನಿನ್ನ ಮಾತ ಕೇಳಬೇಕಾಗಿತ್ತು ಕನಜ್ಜಿ” ಅಂತು. ಆಗ ಕತ್ಲಾಗಿ ಹೋಗಿತ್ತು. ಇದು ಸುಸ್ತಾಗಿ ಕಣ್ಣ ಮುಚ್ಚಕಂತು. ಅಜ್ಜಿ ಆರೈಕೇಲಿ ಅದು ಹುಶಾರಾಗಿ ಮೇಲಕ್ಕೆ ಎದ್ದೇಳಕ್ಕೆ ಹದಿನೈದು ದಿಸ ಬೇಕಾತು. ಮೂರು ದಿಸ ಆ ಕೋಡುಬಳೆ ತೂಗು ಹಾಕ್ಕಂಡಿದ್ದ ಗುರುತೇ ಕನವ್ವಾ ಮಗ… ಈಗಲೂವೆ ಗಿಣಿರಾಮನ ಕತ್ತ ಸುತ್ಲೂ ಗೆರೆ ಹೊಡದಿರೋದು. ಈಗಲೂ ಉಳಕಂದೀತೆ ನೋಡು ಬೇಕಾರೆ… ನೀನೂವೆ, ಅಜ್ಜಿ ಆಸಿಂದ ತೂಗು ಹಾಕಿದ ಕೋಡುಬಳೆ ಗುರುತು ಅನ್ನದು.

ನನ್ನಜ್ಜಮ್ಮ ಹೇಳತಿದ್ದ ಈ ಕಥೆ ಮುಗಿಯೋ ಹೊತ್ತಿಗೆ ನಿದ್ದೆಕಣ್ಣಲ್ಲಿ ಮೈಸೂರು ಅನ್ನೋದು ನಾನು ಬೆಳೆಯೋವರೆಗೂ ಬೆಳೆದು ನನ್ನ ಕನಸಿನ ನಗರಿಯೇ ಆಗಿತ್ತು.

ಆದರೆ ಈ ನಗರಗಳ ಮೋಹ ಕಳೆದು ಈಗ, ನಮ್ಮೂರ ಹಸಿರಲ್ಲಿ ಕಾಣಿಸೋ ಆರೋಗ್ಯವಂಥ ಗಿಣಿಯ ರೆಕ್ಕೆ ಪುಕ್ಕಗಳು ಎಂಥ ಉದ್ದವಾಗಿ ಚಂದಕ್ಕೆ ಇರ್ತಾವೆ ಅಂತಂದ್ರೆ, ನಿಂತು ನೋಡು ಹಂಗಾಗುತ್ತೆ. ಗಿಣಿ ದಸರಾ ನೋಡಿ ಬಂದ ಕಥೆ ನಿಮ್ಮೊಡನೆ ಹಂಚ್ಕೋಬೇಕು ಅಂಥ ಅನ್ನುಸ್ತು. ನನ್ನ ಅಜ್ಜಮ್ಮನ ಕಥೆ ನನ್ನ ತಲೆಯಲ್ಲಿ ವಿಸ್ತರಣೆಯಾಗಿ ಬರವಣಿಗೆ ಆಗಿ ಇಳಿದಿದೆ. ಓದುವವರ ತಲೆಯಲ್ಲಿ ಇನ್ನೂ ವಿಸ್ತರಣೆ ಪಡೆದುಕೊಳ್ಳುತ್ತೆ ಅಂತಲೂ ನನಗನ್ನಿಸುತ್ತೆ.

ಕಥಾರೂಪಕಗಳು ಎಂದೂ ಒಂದು ಹಿಡಿಯ ಚೌಕಟ್ಟಿನಲ್ಲಿ ಕೂರದೇ ಇರುವಂಥವು. ವಾಸ್ತವ ಹಾಗೂ ಕಲ್ಪನೆಯ ನಡುವಿನ ಸೇತುವೆ ಈ ಜಗತ್ತಿನ ಕಥೆಯ ಧಾರೆ ಅನ್ನೋ ಅಂಥದು. ಕಾಲಾನುಕಾಲಕ್ಕೆ ಈ ಚೇತನದ ಸ್ವರೂಪ ಮಾತ್ರ ಬದಲಾಗುತ್ತಲೇ ಇರುತ್ತೆ. ವಿಶ್ವ ಮಾನವರ ಕಲ್ಪನೆಯ ನೆನಪು ಇದರೊಂದಿಗೆ…. ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ…. ಓ ನನ್ನ ಚೇತನ ಆಗು ನೀ ಅನಿಕೇತನ.

‍ಲೇಖಕರು Admin

October 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. .ಮಹೇಶ್ವರಿ.ಯು

    ಗಿಣಿರಾಮನ ಕತೆ ಓದುತ್ತ ನನಗೆದೇವನೂರರ ಕುಸುಮಬಾಲೆಯಲ್ಲಿನ ಜೋತಮ್ಮದಿರ ನೆನಪಾಯ್ತು.ಭಾಷೆಯಲ್ಲಿ ,ನಿರೂಪಣೆಯಲ್ಲಿ ಹಾಗೊಂದು ಸಾಮ್ಯವಿದೆ.ನಾನು ನೋಡದೇ ಇರುವ ದಸರವನ್ನುಗಿಣಿರಾಮನ ಕತೆಯಮೂಲಕ ಮುದ್ದಾಗಿ ಪರಿಚಯಿಸಿದಕ್ಕೆ ಥ್ಯಾಂಕ್ಸ್.

    ಪ್ರತಿಕ್ರಿಯೆ
  2. Gopi Tumkur

    It was a wonderful journey to Mysore and Dasara. Beautiful narration thank you for the beautiful journey

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: