ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಚಿತ್ರಾ ಹೆಗಡೆ ಕವಿತೆ- ಮಾ ವಿಷಾದ!

ಸುಚಿತ್ರಾ ಹೆಗಡೆ

ಆತ್ಮೀಯ ಸಂಗಾತಿಯಾಗಿದ್ದ ವಿಷಾದ,
ಇಂದಿನಿಂದ ವಿಧಿಸಿದ್ದೇನೆ ನಿನಗೆ ನಿಷೇಧ

ಏಳೇಳು ಜನ್ಮಗಳ ನಂಟಾಗಿದ್ದೆ
ಬೆನ್ನು ಬಿಡದ ಗಂಟಾಗಿದ್ದೆ

ಅಂತೂ ನಿನಗಿದೋ ವಿದಾಯ
ಬಿಟ್ಟು ಬಿಡು ನನ್ನ ಮಾರಾಯ

ಆದರೆ ನನಗೀಗ ಚೆನ್ನಾಗಿ ಗೊತ್ತು
ನೀನೇನು ಬೇಕಾಗಿ ತಂದಿದ್ದಲ್ಲ ಆಪತ್ತು

ಉಭಯಸಂಕಟದಲಿದ್ದ ವೆಂಕಟರಮಣ
ಲೆಕ್ಕದಾಟಕ್ಕೆ ಬಳಿದ ಸುಣ್ಣ ಬಣ್ಣ

ಹೌದು ಅನ್ನಲು ಬಾಯಿ ತೆರೆದಾಗಲೆಲ್ಲ
ಇಲ್ಲಗಳ ಭೀತಿಯ ಎಲೆಯಡಿಕೆ ಮಡಿಸಿಟ್ಟೆಯಲ್ಲ

ಖುಷಿಗಳ ಕೊಚ್ಚಿದ ಈಳಿಗೆಮಣೆಯಲ್ಲೂ
ಎಲ್ಲ ನಿನ್ನ ಒಳ್ಳೆಯದಕ್ಕೇ ಎಂಬ ಲೇಬಲ್ಲು

ಒಂದು ಎರಡು ಮೂರು ನಾಲ್ಕು
ಸರಿ ತಪ್ಪುಗಳ ಎಣಿಕೆ ಸಾಕಾಯ್ತು

ನಿನ್ನ ಹಳಹಳಿಕೆಯಲಿ ನನ್ನ ಪಾಡು
ಸೋಗೆ ಸರಿದು ಸೋರುವ ಮಾಡು

ಆಗಬೇಕಿತ್ತು ಹಾಗಿದ್ದರೆ ಮಾಡಿದ್ದರೆ
ನೋಡಿದರೆ ಏನೆನ್ನುವರು ನೆರೆಹೊರೆ

ಮಿಂಚಿದ ಮೇಲೆ ಚಿಂತಿಸುವ ಭ್ರಾಂತಿ
ಕೂಡಿಟ್ಟಂತೆ ಕಳೆದದ್ದು ಮನದ ಶಾಂತಿ

ತಗ್ಗಿದ ತಲೆಯ ಕಣ್ಣುಗಳಲಿ ಸ್ವೀಕೃತಿಯ ಭಿಕ್ಷೆ
ಕೊಟ್ಟು ಸಾಕಾಗಿದೆ ನನಗೆ ಸ್ವಯಂ ಶಿಕ್ಷೆ

ಸದಾ ಭವಿಷ್ಯದಾಗಸದೆಡೆ ನೆಟ್ಟ ಕಣ್ಣು
ವರ್ತಮಾನದ ಬಾಯೊಳಗೆ ಹಿಡಿಮಣ್ಣು

ಹೆಗಲೇರಿದ ಗುಮ್ಮನ ಮಣಭಾರ ಹೊತ್ತು
ಸಾಗಿದ ಪಯಣವದು ಬರಿಯ ಕಸರತ್ತು

ನನ್ನಿಷ್ಟಗಳ ರೆಕ್ಕೆಗಳು ಸ್ವಚ್ಛಂದ ನೀಲಿ
ಹಂಗಿನ ನೆಲ ಬಿಟ್ಟಾಗ ಎಲ್ಲಿದೆ ಬೇಲಿ

ಇನ್ನು ‘ರೆೇ’ ಗಳ ಗುಮ್ಮನಿಗಿಲ್ಲ ಜಾಗ
ಕುಳಿತ ತಕ್ಕಡಿ ವಾಲಿದ’ರೆೇ’ನೀಗ

ಮರಳಿ ದಕ್ಕಲಿ ಜೋಕಾಲಿ ಭಾಗ್ಯ
ಅರಳು ಕಂಗಳಲಿ ಮತ್ತೆ ಜೀವಲಾಸ್ಯ

ಶುಭವಾಗಲಿ ನಿನ್ನ ಪಯಣ
ಇರಲಿ ಜೊತೆಗೆ ಬದುಕಿದ ಸ್ಮರಣ

ಶುರುವಾಗಿದೆ ತಪ್ಪು ಒಪ್ಪುಗಳ ಹರಣ
ದೈನ್ಯ ಬೇಡದ ಜೀವಕೆ ಧನ್ಯತೆಯ ಕ್ಷಣ

ಕಷ್ಟಕಂಬಗಳ ನಡುವೆ ಸುಖದ ಇಟ್ಟಿಗೆಯಿಟ್ಟು
ಹೆಮ್ಮೆಗಾರೆಯ ಮೇಲೆ ಹೊಯ್ದು ಬಿಟ್ಟು

ಹೊಸದಾಗಿ ಕಟ್ಟುವೆ
ಮರುಗದೇ ಬದುಕುವೆ

‍ಲೇಖಕರು Admin

22 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading