ಕಾಂತಾರ ನೆನಪಿಸಿದ ಚಿನುವ ಅಚಿಬೆಯ ಕಥೆ ‘ಸತ್ತವರ ಹಾದಿ’

ಗೊರೂರು ಶಿವೇಶ್

ನಿರೀಕ್ಷೆಯಂತೆ ಕಾಂತಾರ ಚಿತ್ರ ದೊಡ್ಡ ಮಟ್ಟದ ಸದ್ದನ್ನೇ ಮಾಡುತ್ತಿದೆ .ಬಿಡುಗಡೆಯಾದ 15 ದಿನಗಳ ನಂತರ ಭಾರತದ ಪ್ರಮುಖ ಭಾಷೆಗಳಲ್ಲಿ ಡಬ್ಬಿಂಗ್ ಆಗಿ ಹಿಂದಿ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಕೂಡ ದೊಡ್ಡ ಮಟ್ಟದ ಪ್ರೇಕ್ಷಕರನ್ನೇ ಸೆಳೆಯುತ್ತಿದ್ದು ಕೆಜಿಎಫ್ -2 ಚಿತ್ರದ ನಂತರ ಕನ್ನಡದ ಅತಿ ಹೆಚ್ಚಿನ ಹಣ ಗಳಿಸಿದ ಚಿತ್ರವಾಗುವ ಎಲ್ಲ ಸಾಧ್ಯತೆಗಳು ಗೋಚರವಾಗುತ್ತಿವೆ .ಅಷ್ಟೇ ಅಲ್ಲದೆ ವಿದೇಶಗಳಲ್ಲೂ  ಚಿತ್ರಸಾಕ್ತರ ಗಮನವನ್ನು ಸೆಳೆಯುತ್ತಿದೆ . ಆದರೆ ಕೆಜಿಎಫ್ ಚಿತ್ರಕ್ಕೆ ನೂರಾರು ಕೋಟಿಗಳ ಬಂಡವಾಳ ಹೂಡಿದ್ದರೆ ಕಾಂತಾರ ಕೇವಲ 10 ರಿಂದ 12 ಕೋಟಿಗಳ ಬಂಡವಾಳದಿಂದ ತಯಾರಾದ ಚಿತ್ರ. ಕೆಜಿಎಫ್ ಮೂಲದಲ್ಲಿಯೇ ಪ್ಯಾನ್ ಇಂಡಿಯಾ ಯೋಜನೆ ಹೊಂದಿದ್ದರೆ ಕಾಂತಾರಾ ಚಿತ್ರ ಬಿಡುಗಡೆಯ ನಂತರ ಪ್ಯಾನ್ ಇಂಡಿಯಾ ಆಗುವಂತೆ ಹೊರಟಿದೆ. ಇದಕ್ಕೆ ಕಾರಣ ಚಿತ್ರದ ಕಥೆ.

ಚಿತ್ರದ ಮುಕ್ಕಾಲಷ್ಟು ಕಥೆ ಕಾಡು, ಕಾಡಿನ ಮೂಲವನ್ನು ಹೊಂದಿರುವ ಅಲ್ಲಿನ ನೆಲ ಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಾಂಗ. ಆ ಕಾಡು ಅಲ್ಲಿನ ಪರಿಸರ ಸಂರಕ್ಷಿಸಲು ಬರುವ ಅಧಿಕಾರಿ ಇವರಿಬ್ಬರ ನಡುವಿನ   ಸಂಘರ್ಷದ ಸುತ್ತ ಸುತ್ತುತ್ತದೆ . ಕಾಡಿನ  ಪರಿಸರದೊಳಗೆ ಬದುಕುತ್ತಿರುವ ಒಂದು ಸಮುದಾಯ ಅವರ ನಂಬಿಕೆಗಳು ಅವರುಗಳ ದೈವದ ಕಲ್ಪನೆ ಎಲ್ಲ ಜಾತಿ, ಧರ್ಮಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಮನೆ ಮಾಡಿರುವಂತದ್ದೆ. ಪ್ರತಿ ಜನಾಂಗದಲ್ಲೂ ಸೇರಿ ಹೋಗಿರುವ ಆಚರಣೆಗಳು ಮತ್ತು ನಂಬಿಕೆಗಳು ಅವುಗಳ ವಿರೋಧಬಾಸ ಏನೇ ಇದ್ದರೂ ಅದನ್ನು ಅವರಿಗೆ ಮನವರಿಕೆ ಮಾಡದೆ ಅಧಿಕಾರದ ಮೂಲಕ ಬಗ್ಗು ಪಡೆಯಲು ಹೊರಟರೆ ಎದುರಿಸಬೇಕಾದ ಅನಾಹುತಗಳ ಚಿತ್ರಣ ಚಿತ್ರವನ್ನು ನೋಡುತ್ತಿರುವಂತೆ ನಾನು ಈ ಕೆಲ ವರ್ಷಗಳ ಹಿಂದೆ ಪಿಯುಸಿ ತರಗತಿಗಳಿಗೆ ಬೋಧಿಸಿದ ನೈಜೀರಿಯಾದ ಪ್ರಖ್ಯಾತ ಕಥೆಗಾರ ಚಿನ್ ಅ ಅಚಿಬೆ ಅವರ ಸತ್ತವರ ಹಾದಿ (ಡೆಡ್ ಮೆನ್ಸ್ ಪಾತ್) ಕಥೆಯನ್ನು ನೆನಪಿಸಿತು. ಕಥೆಯ ಛಾಯಾನು ವಾದ ಇಲ್ಲಿದೆ. 

1949 ರ ಜನವರಿ ತಿಂಗಳಿನಲ್ಲಿ ಮೈಕೆಲ್ ಓಬಿಯನ್ನು ಎನ್ ಡೂಮೆ ಕೇಂದ್ರಿಯ ಶಾಲೆಗೆ ಮುಖ್ಯೋ ಪಾಧ್ಯಾಯನಾಗಿ ಮಿಷನ್ ಅಧಿಕಾರಿಗಳು ನೇಮಕ ಮಾಡಿದಾಗ ಓಬಿಯ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಎಷ್ಟೆಲ್ಲಾ ಪ್ರಯತ್ನಗಳ ನಡುವೆಯೂ ಅತ್ಯಂತ ಹಿಂದುಳಿದ ಶಾಲೆಯೆಂದು ಹೆಸರಾಗಿದ್ದ ಆ ಶಾಲೆಗೆ ಉತ್ಸಾಹಿ ಹಾಗೂ ಯುವಕ ನಾಗಿದ್ದು, ಶಾಲೆಯ ದಾಖಲೆಗಳಲ್ಲಿ ‘ಪ್ರತಿಭಾನ್ವಿತ ಶಿಕ್ಷಕ’ ನೆಂದು ದಾಖಲಾಗಿದ್ದ ಓಬಿಗೆ, ಈ ಶಾಲೆಗೆ ಹೊಸ ಕಾಯಕಲ್ಪ ನೀಡಬೇಕೆಂದು ಅನ್ನಿಸಿತು. ಇವನಿಗಿಂತ ಹಿರಿಯರಾದ ಹಾಗೂ ಕಡಿಮೆ ಓದಿದ ಶಿಕ್ಷಕರ ‘ಸಂಕುಚಿತ’ ವಿಚಾರಗಳನ್ನು ಆತ ಖಂಡಿಸುತ್ತಿದ್ದ. ಶಾಲಾ ಸುಧಾರಣೆಗೆ ಸಂಬಂಧಿಸಿದಂತೆ ಅವನಿಗೆ ತನ್ನದೆ ಆದ ಯೋಜನೆ ಗಳಿದ್ದವು.

ಅವನಿಗೆ ಅನುರೂಪಳಾದ ಪತ್ನಿ ನಾನ್ಸಿ. ಮದುವೆಯಾದ ಎರಡು ವರ್ಷಗಳಲ್ಲಿ ಆಕೆ ಗಂಡನ ಹೊಸ ವಿಚಾರಗಳಿಂದ ಪ್ರಭಾವಿತಳಾಗಿದ್ದಳು. ಓಬಿ “ನಿವೃತ್ತಿಯ ಅಂಚಿಗೆ ಬಂದಿರುವ ಈ ವ್ಯಕ್ತಿಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಬದಲು ಓನಿಟಾ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವುದು ಒಳ್ಳೆಯದು” ಎಂದು ವ್ಯಂಗ್ಯವಾಡುತ್ತಿದ್ದ.

 ಹೊಸ ಊರು, ಹೊಸ ಶಾಲೆಯಲ್ಲಿ ತನ್ನ ಗಂಡನ ಮನದನ್ನೆಯಾಗಿ, ಆ ಶಾಲೆಯ ರಾಣಿಯಂತಿರಬಹುದು ಎಂದು ಭಾವಿಸಿದ್ದ ಆಕೆಗೆ ಅಲ್ಲಿ ಯಾವುದೇ ಶಿಕ್ಷಕರ ಹೆಂಡತಿಯರು ಕಾಣದಿದ್ದಾಗ ಆಕೆ ಗಂಡನನ್ನು ಕುತೂಹಲದಿಂದ ಈ ಕುರಿತು ಪ್ರಶ್ನಿಸಿದಳು. ಅದಕ್ಕೆ ಓಬಿ ನನ್ನ ಸಹೋದ್ಯೋಗಿಗಳೆಲ್ಲ ಯುವಕರು ಮತ್ತು ಅವಿವಾಹಿತರು. ಒಂದು ರೀತಿಯಲ್ಲಿ ಇದರಿಂದ ನನಗೆ ಒಳ್ಳೆಯದೆ ಆಗಿದೆ”   ಏಕೆ ?” ಪ್ರಶ್ನಿಸಿದಳು ಆಕೆ “ಏಕೆ೦ದರೆ ಅವರು ತಮ್ಮ ಶಕ್ತಿ ಹಾಗೂ ಸಮಯವನ್ನೆಲ್ಲಾ ಶಾಲೆಗೆ ನೀಡಬಹುದಾಗಿದೆ.”

ಅಲ್ಲಿ ಹೆಂಗಸರಿಲ್ಲದ ವಿಷಯ ಕೇಳಿ ನಾನ್ಸಿಗೆ ಕ್ಷಣಕಾಲ ನಿರಾಶೆಯಾಯಿತು. ಆದರೆ ಅದು ಕ್ಷಣಕಾಲ ಮಾತ್ರ. ತನಗಾದ ಒಂದು ಚಿಕ್ಕ ವೈಯುಕ್ತಿಕ ದುರಾದೃಷ್ಟವು ಗಂಡನ ಸಂತೋಷದ ಹಾದಿಗೆ ಭಂಗ ತರುವುದಿಲ್ಲವೆಂದು ಅವಳು ನಿರ್ಧರಿಸಿದ್ದಳು. 

ಕುರ್ಚಿಯಲ್ಲಿ ಕುಳಿತಿದ ಹಾಗೆಯೇ ಗಂಡನನ್ನು ಗಮನಿಸಿದಳು. ಆತನಿಗೆ ಕೇವಲ ಇಪ್ಪತ್ತಾರು ವರ್ಷಗಳಾಗಿದ್ದರೂ ಮೂವತ್ತು ವರ್ಷಕ್ಕಿಂತ ಹೆಚ್ಚಾಗಿರುವಂತೆ ಕಾಣುತ್ತಿದ್ದನು. ನೋಡಲು ದುರ್ಬಲ ದೇಹಿಯಾಗಿದ್ದರೂ ಅದ್ಭುತ ಮನೋಬಲವನ್ನು ಹೊಂದಿದ್ದ ಅವನನ್ನೇ ನೋಡುತ್ತಾ “ನಿನ್ನ ಯೋಚನೆಗೆ ಎಷ್ಟು ಕೊಟ್ಟರೂ ಸಾಲದು” ಎಂದಳು. ಅದಕ್ಕೆ ಆತ “ಒಂದು ಶಾಲೆಯನ್ನು ಹೇಗೆ ನಡೆಸಬೇಕು ಎನ್ನುವುದನ್ನು ನಾನು ಇವರಿಗೆ ಸಿದ್ಧ ಮಾಡಿ ತೋರಿಸುತ್ತೇನೆ” ಎಂದ. 

ಎನ್‌ ಡೂಮೆ ಶಾಲೆ ಅಕ್ಷರಶಃ ಹಿಂದುಳಿದ ಶಾಲೆಯಾಗಿತ್ತು. ಓಬಿ ಮತ್ತು ಅವನ ಹೆಂಡತಿ ಶಾಲೆಯ ಉದ್ದಾರಕ್ಕಾಗಿ ನಿರಂತರವಾಗಿ ಶ್ರಮವಹಿಸುತ್ತಿದ್ದರು.  ಒಂದು ಶಾಲೆಯ ಔನ್ಯತ್ಯಕ್ಕೆ ಕಾರಣವಾಗುವ ಅತ್ಯುತ್ತಮ ಮಟ್ಟದ ಶಿಕ್ಷಣದ ಜೊತೆಗೆ ಶಾಲೆಯ ಆವರಣವು ಒಂದು ಸುಂದರ ಸ್ಥಳವನ್ನಾಗಿಸಲು ಸಾಕಷ್ಟು ಶ್ರಮ ವಹಿಸಿದರು.

ನಾನ್ಸಿಯ ಕನಸಾಗಿದ್ದ ಸುಂದರ ಉದ್ಯಾನವನವು ಉತ್ತಮ ಮಳೆಯಿಂದಾಗಿ ಸಾಕಾರಗೊಳ್ಳುತ್ತಿತ್ತು. ಶಾಲೆಯ ಸುತ್ತ ಅಲ್ಲಾಮಾಂಡ ಹಾಗೂ ದಾಸವಾಳದ ಪೊದೆಗಳು ಕೆಂಪು ಮತ್ತು ಹಳದಿ ಹೂಗಳಿಂದ ಕಂಗೊಳಿಸಿ ಶಾಲೆಯ ಆಕರ್ಷಣೆ ಯನ್ನು ಹೆಚ್ಚಿಸಿದವು.

ಒಂದು ಸಂಜೆ ತಾನು ಮಾಡಿದ ಕೆಲಸದ ಫಲಶೃತಿಯನ್ನು ಹೆಮ್ಮೆಯಿಂದ ನೋಡುತ್ತಾ ನಿಂತಿದ್ದಾಗ ಒಬ್ಬ ಮುದುಕಿ ತೂರಾಡುತ್ತಾ ಶಾಲಾ ಆವರಣದ ಚೆಂಡು ಹೂವಿನ ಪೊದೆಯನ್ನು ಹಾದು ಹೋದದನ್ನು ಓಬಿ ಕಂಡನು. ಅವನಿಗೆ ದಿಗ್ದಾಂತಿಯಾಯಿತು. ಅಲ್ಲಿ ಹೋಗಿ ನೋಡಿದಾಗಿ ಹೆಚ್ಚುಕಡಿಮೆ ಬಳಕೆಯಲ್ಲಿ ಇಲ್ಲದ ಅತಿ ಕ್ಷೀಣವಾದ ದಾರಿಯೊಂದು ಈ ಬದಿಯಿಂದ ಆ ಬದಿಗೆ ಹಾದು ಹೋದದ್ದು ಕಾಣಿಸಿತು.

ಆ ಶಾಲೆಯಲ್ಲಿ ಮೂರು ವರ್ಷದಿಂದ ಕೆಲಸ ನಿರ್ವ ಹಿಸುತ್ತಿದ್ದ ಸಹೋದ್ಯೋಗಿಯನ್ನು ಕರೆದು ‘ನೀವೆಲ್ಲಾ ಇದ್ದು ಊರಿನವರು ಶಾಲೆಯ ಆವರಣವನ್ನು ಪುಟ್ ಪಾತ್ ನಂತೆ ಬಳಸುವುದನ್ನು ನಿಲ್ಲಿಸಲು ಆಗಲಿಲ್ಲವೇ’ ಎಂದು ಪ್ರಶ್ನಿಸಿದ. “ಆ ದಾರಿ “ಸಹೋದ್ಯೋಗಿ ಕ್ಷಮೆ ಯಾಚಿಸಿದ ರೀತಿಯಲ್ಲಿ ಉತ್ತರಿಸಿದ “ಊರಿನ ಜನಗಳಿಗೆ ಬಹಳ ಮುಖ್ಯವಾದದ್ದು. ಬಹಳ ಅಪರೂಪ ಕ್ಕೊಮ್ಮೆ ಅದನ್ನು ಬಳಸುತ್ತಾರೆ. ಆ ದಾರಿ ಊರಿನ ಸ್ಮಶಾನಕ್ಕೂ ಹಾಗೂ ಊರ ಒಳಗಿನ ದೇವಸ್ಥಾನಕ್ಕೂ ಸಂಪರ್ಕ ಕಲ್ಪಿಸುತ್ತದೆ.”

“ಅದಕ್ಕೂ ಶಾಲೆಗೂ ಏನು ಸಂಬಂಧ ?”

“ನನಗೆ ಅದು ಗೊತ್ತಿಲ್ಲ” ತನ್ನ ಭುಜವನ್ನು ಆತ ಮೇಲ್ಮುಖವಾಗಿ ತಳ್ಳಿ ಹೇಳಿದ’ “ಆದರೆ ನನಗೆ ಗೊತ್ತಿರುವಂತೆ ಒಮ್ಮೆ ನಾವು ಮುಚ್ಚಲು ಪ್ರಯತ್ನಿಸಿದಾಗ ಒಂದು ದೊಡ್ಡ ಗಲಾಟೆಯೇ ಆಯಿತು.”

“ಅದು ಸ್ವಲ್ಪ ದಿನ ಹಿಂದಕ್ಕೆ ಈಗಲ್ಲ.’ ಅಲ್ಲಿಂದ ಹೊರಡುತ್ತಾ ಹೇಳಿದ. ಓಬಿ “ಮುಂದಿನವಾರ ಶಾಲಾ ತಪಾಸಣೆಗಾಗಿ ಬರುವ ಶಿಕ್ಷಣಾಧಿಕಾರಿ ಏನೆಂದು ಕೊಂಡಾರು? ಶಾಲಾ ಕೊಠಡಿ ಗಳನ್ನ ಹೀಗೆ ಆದರೆ ಅವರು ತಮ್ಮ  ಎಲ್ಲಾ ಆಚರಣೆ ಗಳಿಗೆ ಬಳಸಿಕೊಳ್ಳುತ್ತಾರೆ.”

ಬರುವ ಹಾಗೂ ಹೋಗುವ ಜಾಗಗಳಿಗೆ ಅಡ್ಡಲಾಗಿ ದಪ್ಪ ದಪ್ಪ ದಡಿಗಳನ್ನು ನೆಡಲಾಯಿತು. ಜೊತೆಗೆ ಮುಳ್ಳಿನ ತಂತಿಗಳನ್ನು ಬಿಗಿದು ಬಲಪಡಿಸಲಾಯಿತು.

ಮೂರು ದಿನಗಳು ಕಳೆದ ನಂತರ ‘ ಅನಿ’ ಹಳ್ಳಿಯ ಪೂಜಾರಿ ಮುಖ್ಯ ಶಿಕ್ಷಕನನ್ನು ಭೇಟಿ ಮಾಡಲು ಬಂದ. ವಯಸ್ಸಾದ ಮುದುಕನ ಬೆನ್ನು ಸ್ವಲ್ಪ ಬಾಗಿತ್ತು. ಅವನ ಕೈಯಲ್ಲಿದ್ದ ಊರುಗೋಲನ್ನು ಮಾತನಾಡುವ ಸಂದರ್ಭದಲ್ಲಿ ಹೊಸ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಾಗ ಬಡಿಯುತ್ತಿದ್ದ. ಪರಸ್ಪರ ಪರಿಚಯ ಮತ್ತು ಸೌಜನ್ಯದ ಮಾತುಕತೆಯ ನಂತರ ಹೇಳಿದ’ ನಮ್ಮ ಪೂರ್ವಿಕರ ಕಾಲು ಹಾದಿಯನ್ನು ನೀವು ಮುಚ್ಚಿದರಿ ಎಂದು  ಕೇಳಲ್ಪಟ್ಟೆ’.

“ಹೌದು” ಉತ್ತರಿಸಿದ ಓಬಿ ಶಾಲಾವರಣವನ್ನು ಹೆದ್ದಾರಿ ಮಾಡಿಕೊಳ್ಳಲು ಜನರಿಗೆ ಬಿಡುವುದಿಲ್ಲ’. “ನೋಡು ಮಗಾ” ಪೂಜಾರಿ ಊರು ಗೋಲನ್ನು ನೆಲಕ್ಕೆ ಇಟ್ಟು ಹೇಳಿದ. “ಈ ದಾರಿಯು ನೀನು ಹುಟ್ಟುವುದಕ್ಕಿಂತ ಮುಂಚೆ, ನಿಮ್ಮಪ್ಪ ಹುಟ್ಟುವುದಕ್ಕೆ ಮುಂಚಿನಿಂದಲೂ ಇದೆ. ನಮ್ಮ ಹಳ್ಳಿಯ ಇಡೀ ಜೀವನವೇ ಈ ಹಾದಿಯ ಮೇಲಿದೆ. ನಮ್ಮ ಸತ್ತ ಸಂಬಂಧಿಗಳು ಈ ಹಾದಿಯ ಮೂಲಕ ಹೋಗುತ್ತಾರೆ. ನಮ್ಮ ಪೂರ್ವಿಕರು ಈ ಹಾದಿಯ ಮೂಲಕ ನಮ್ಮನ್ನು ಭೇಟಿಯಾಗಲು ಬರುತ್ತಾರೆ. ತುಂಬಾ ಮುಖ್ಯವಾದ ವಿಷಯವೆಂದರೆ ಇದೇ ಹಾದಿಯ ಮೂಲಕ ಹುಟ್ಟಲಿರುವ ಹಸುಳೆಗಳು ಬರುತ್ತವೆ….”

ಓಬಿಯ ಮೊಗದಲ್ಲಿ ತೃಪ್ತಿಯ ನಗೆ ಕಾಣಿಸಿತು. “ನಮ್ಮ ಶಾಲೆಯ ಪ್ರಮುಖ ಉದ್ದೇಶ” ಓಬಿ ಹೇಳಿದ “ಈ ರೀತಿಯ ನಂಬಿಕೆಗಳನ್ನು ಹೋಗಲಾಡಿಸುವುದು. ಸತ್ತವರಿಗೆ ಕಾಲುಹಾದಿಗಳು ಬೇಕಿಲ್ಲ. ನಿಮ್ಮ ಯೋಚನೆ ಅದ್ಭುತವಾಗಿದೆ. ನಮ್ಮ ಕೆಲಸವೆಂದರೆ ಇಂತಹ ಯೋಚನೆಗಳ ಬಗ್ಗೆ ಮಕ್ಕಳು ನಗುವಂತೆ ಮಾಡುವುದು.”

“ನೀನು ಹೇಳಿದ್ದು ಸರಿ ಇರಬಹುದು” ಉತ್ತರಿಸಿದ ಮುದುಕ “ಆದರೆ ನಾವು ನಮ್ಮ ತಂದೆ ಕಾಲದ  ಆಚರಣೆಗಳನ್ನು ಅನುಸರಿಸುತ್ತೇವೆ. ನೀನು ಮುಚ್ಚಿರುವ ಹಾದಿಯನ್ನು ತೆರವು ಮಾಡಿದರೆ ಜಗಳಕ್ಕೆ ಅವಕಾಶವಿಲ್ಲ. ನಾನು ಯಾವಾಗಲು ಹೇಳುವುದು ಇಷ್ಟೆ . ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆ ತರುವ ಸಾಹಸ ಬೇಡ. ಹದ್ದು ಮತ್ತು ಗಿಡುಗಗಳು ಅವುಗಳ ಕೊಂಬೆಗಳ ಮೇಲೆ ಇರಲಿ.”

‘ನನ್ನನ್ನು ಕ್ಷಮಿಸಿ’ ಮುಖ್ಯ ಶಿಕ್ಷಕ ಹೇಳಿದ ”ಶಾಲೆಯ ಆವರಣವನ್ನು ಕಾಲು ಹಾದಿಯನ್ನು ಮಾಡಲು ಬಿಡಲಾಗುವುದಿಲ್ಲ. ಇದು ನನ್ನ ನಿಯಮಾವಳಿಗಳಿಗೆ ವಿರೋಧ, ಶಾಲೆಯ ಆವರಣದಾಚೆ ನೀವು ಇನ್ನೊಂದು ದಾರಿಯನ್ನು ನಿರ್ಮಾಣ ಮಾಡಿ ಕೊಳ್ಳಬಹುದು. ಇದಕ್ಕೆ ನಮ್ಮ ಶಾಲೆಯ ಹುಡುಗರ ನೆರವನ್ನು ನೀಡುತ್ತೇನೆ. ನಿಮ್ಮ ಪೂರ್ವಿಕರು ಸ್ವಲ್ಪ ಬಳಸಿ ಬರಲು ಅಷ್ಟೇನೂ ಹೊರೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ.” “ನಾನು ಹೇಳುವುದು ಏನು ಉಳಿದಿಲ್ಲ” ಅಲ್ಲಿಂದ ತೆರಳುತ್ತಾ ಮುದುಕ ಪೂಜಾರಿ ಹೇಳಿದ.

ಎರಡು ದಿನಗಳ ನಂತರ ಆ ಊರಿನ  ಯುವತಿ ಒಬ್ಬಳು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಮರಣ ಹೊಂದಿದ್ದಳು . ತಕ್ಷಣ ಶಾಸ್ತ್ರ ಹೇಳುವವನನ್ನು ಸಂಪರ್ಕಿಸಲಾಯಿತು. ಆತ’ ಬೇಲಿ ಹಾಕಿರುವುದರಿಂದ ಹಿರಿಯರು  ಅವಹೇಳನಗೊಂಡು ಕೋಪಗೊಂಡಿ ದ್ದಾರೆ.ಅವರು ಇನ್ನೂ ಹೆಚ್ಚಿನ ಬಲಿ ತೆಗೆದು ಕೊಳ್ಳಲಿದ್ದಾರೆ’ಎಂದು ತಿಳಿಸಿದನು.

ಮಾರನೇ ದಿನ  ಓಬಿ ಬೆಳಿಗ್ಗೆ ಎದ್ದು ನೋಡಿದಾಗ ಅವನ ಸಂಪೂರ್ಣ ಕೆಲಸ ನಾಶ ಹೊಂದಿರುವುದನ್ನು ಕಂಡನು. ಹಾದಿಯ ಸಮೀಪ ಹಾಕಿದ್ದ ಸುಂದರ ಪೊದೆಗಳಲ್ಲದೆ ಇಡೀ ಆವರಣದ ಸುತ್ತ ಇದ್ದ ಪೊದೆಗಳೆಲ್ಲವೂ ನಾಶವಾಗಿದ್ದವು. ಹೂವಿನ ಗಿಡಗಳನ್ನು ಕಿತ್ತು ಎಸೆದುದಲ್ಲದೆ ಶಾಲೆಯ ಒಂದು ಬದಿಯ ಕಟ್ಟಡವನ್ನು ಕೆಡವಲಾಗಿತ್ತು. ಅದೇ ದಿನ ಶಾಲೆಗೆ ಭೇಟಿ ನೀಡಿದ ತಪಾಸಣಾಧಿಕಾರಿ ಶಾಲೆ ಮತ್ತು ಶಾಲೆಯ ಆವರಣದ ನಾಶವನ್ನು ಗಂಭೀರವಾಗಿ ಪರಿಗಣಿಸಿ ತನ್ನ ವರದಿಯಲ್ಲಿ ‘ಹೊಸ ಮುಖ್ಯ ಶಿಕ್ಷಕನ ಗುರಿಯಿಲ್ಲದ, ಅತಿ ಉತ್ಸಾಹ ಹಾಗೂ ಆವೇಶದ ಪರಿಣಾಮವಾಗಿ ಶಾಲೆ ಮತ್ತು ಹಳ್ಳಿಯ ನಡುವೆ ಬುಡಕಟ್ಟು ಯುದ್ಧದ ಸನ್ನಿವೇಶ ಏರ್ಪಟ್ಟಿದೆ” ಎಂದು ಬರೆದ.

‍ಲೇಖಕರು Admin

October 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: