‘ಕಾಂತಾರ’ ಪಕ್ಕಾ ಕಮರ್ಷಿಯಲ್ ಸಿನಿಮಾ…

ಶಾಂತಾಕುಮಾರಿ

“ಕಾಂತಾರ” ಸಿನಿಮಾ ಪಕ್ಕಾ ಕಮರ್ಷಿಯಲ್ ಸಿನಿಮಾ…ಇದುವರೆಗೂ ಮಾರುಕಟ್ಟೆಗೆ ಹೆಚ್ಚಾಗಿ ಬಾರದ ತುಳುನಾಡಿನ ಭೂತಕೋಲ ಸಂಸ್ಕೃತಿಯನ್ನು ಅಲ್ಲಿನ ಕಾಡಿನ ಮೂಲನಿವಾಸಿಗಳ ಸಮಸ್ಯೆಗೆ “ತಾಗಿಸಿ”  ಮಾರುಕಟ್ಟೆ ಯಶಸ್ವಿಗೆ ಬೇಕಾದ ತಂತ್ರಕ್ಕೆ ತಕ್ಕ ಬದಲಾವಣೆ ಮಾಡಿಕೊಂಡ  ಚಿತ್ರ!! ಇದನ್ನು ಕಂಡುಂಡವರಿಗೆ ನಮ್ಮ ಸಂಸ್ಕೃತಿಯೊಂದು ಸಿನಿಮಾವಾಯಿತಲ್ಲ ಇದು ನಮ್ಮದು ಎನಿಸುವ ಅಭಿಮಾನ! ನೋಡದವರಿಗೆ ಇದೊಂದು ಬೆರಗು!! ಇವು ಪ್ರೇಕ್ಷಕರನ್ನು ಥಿಯೇಟರಿನವರೆಗೆ ಎಳೆದು ತಂದಿದೆ..

ಒಂದು ಸಿನಿಮಾ ನೋಡಬೇಕು ಎನ್ನುವ ಆಸಕ್ತಿಯನ್ನು ಹುಟ್ಟಿಸುವಲ್ಲಿ ಇಡೀ ತಂಡ ಯಶಸ್ವಿಯಾಗಿದೆ. ಇಡೀ ಸಿನಿಮಾದ ಯಶಸ್ಸು ಅದ್ಭುತ ಸಿನಿಮಾಟೋಗ್ರಫಿ , ದೈವದ ಆಚರಣೆ ಮತ್ತು ರಿಷಬ್ ಶೆಟ್ಟಿಯ ನಟನೆ ಮೇಲೆ ನಿಂತಿದ್ದರೂ ನಟನೆಯಲ್ಲಿ ಎಲ್ಲರೂ ಗಮನಸೆಳೆಯುತ್ತಾರೆ. ಹೊಂಬಾಳೆ ನಿರ್ಮಾಣದ ಚಿತ್ರಗಳೇ ಹಾಗೆ ವಿಪರೀತ ಹೈಪ್ ಸೃಷ್ಠಿ ಮಾಡುತ್ತಾರೆ. ಕೆ.ಜಿ.ಎಫ್.ಗಂತೂ ಸಿನಿಮಾ ನಿರ್ಮಾಣ ಶುರುವಿಗೂ ಮೊದಲೇ ಹೈಪ್ ಶುರುವಾಗಿತ್ತು…ಇದೊಂದು ಮಾರುಕಟ್ಟೆ ತಂತ್ರಗಾರಿಕೆ!! ಇವತ್ತಿನ  ವಾತಾವರಣದಿಂದಾಗಿ ಭಾರತೀಯ ಮನಸು  ಹಲವು ಗೊಂದಲಗಳ ಗೂಡಾಗಿದೆ..ಕಲೆಯನ್ನು ಕಲೆಯಾಗಿ ನೋಡಬೇಕೆ ಅಥವಾ ಕಲೆಗೊಂದು ಉದ್ದೇಶ ಸಾಧನೆ ಇದೆಯೇ ಎಂಬುದೇ ದೊಡ್ಡ ಗೊಂದಲ.

ಪ್ರತಿಯೊಂದು ಯುಗದಲ್ಲೂ ತನ್ನ ಆಂತರಿಕ ಆಶಯ ಮತ್ತು ಸಾಮಾಜಿಕ ಅಗತ್ಯಗಳಿಗನುಗುಣವಾಗಿ ಸಾಹಿತ್ಯ , ಸಿನಿಮಾ ಮುಂತಾದ ಕಲೆಗಳು ಜನ್ಮ ತಾಳುತ್ತವೆ.  ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಗತಿಗಳಿಂದ ಪ್ರಭಾವಿತಗೊಂಡು ಒಂದು ಸಮಷ್ಠಿ ಪ್ರಜ್ಙೆ ಜಾಗೃತಗೊಳ್ಳುತ್ತದೆಯಾದ್ದರಿಂದ ಕಲೆಯನ್ನು ಕೇವಲ ಕಲೆಯಾಗಿ ನೋಡಲು ಸಾಧ್ಯವಾಗುವುದಿಲ್ಲ. ಕಾಲಕಾಲಕ್ಕೆ ಬದಲಾಗುವ ಸಂವೇದನೆಗಳಿಗೆ ತಕ್ಕಂತೆ ನಮ್ಮ ಗ್ರಹಿಕೆಯ ನೆಲೆಗಳೂ ಬದಲಾಗಬೇಕಾದ್ದು ಅನಿವಾರ್ಯ ಮತ್ತು ಅಗತ್ಯ.

ಈ ನೆಲೆಯಲ್ಲಿ “ಕಾಂತಾರ” ಸಿನಿಮಾ ನೋಡುವಾಗ ಬಹುಶಃ “ನಾಯಗನ್” ಸಿನಿಮಾದಿಂದ ಹಿಡಿದು ವೀರಪ್ಪನ್, ಪುಷ್ಪ ಇಂದಿನ ಕಾಂತಾರ ಇನ್ನೂ  ಸಾಕಷ್ಟು ಸಿನಿಮಾಗಳು ವಿಲನ್ ನನ್ನೇ ವೈಭವೀಕರಿಸಿ ಹೀರೊ ಮಾಡುವಂತಹ ಪಾತ್ರ ಸೃಷ್ಠಿ ನಡೆದಿದೆ.  ಸಮಾಜದ ಈ ನೋಟವೇ ದೋಷಪೂರಿತವಾದುದು. “ಕಾಂತಾರ” ತುಳು ನಾಡಿನ ದೈವ ಸಂಸ್ಕೃತಿಯನ್ನು ವಸ್ತುವನ್ನಾಗಿ ಮಾಡಿಕೊಂಡಿದೆಯೇ ಅಂದರೆ ಅಲ್ಲ.. ಅದನ್ನು ಜಗತ್ತಿಗೆ ಪರಿಚಯಿಸಿದೆ ಅಷ್ಟೇ… ಅದು ಹೇಗೆ ಕರಾವಳಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದರ ತಿಳುವಳಿಕೆಯನ್ನು ಎಲ್ಲಿಯೂ ನಮಗೆ ಮನಗಾಣಿಸುವುದಿಲ್ಲ. ಉದಾಹರಣೆಗೆ ನಮ್ಮ ಮಲೆನಾಡ ಬದಿಯಲ್ಲೂ ದೈವರಾಧನೆ ಉಂಟು. ಜಟಗ ಮತ್ತು ಕಲ್ಕುಡ್ಕ ಎಂಬ ಭೂತಗಳು ತಮ್ಮ ತೋಟ ಬ್ಯಾಣ ಮತ್ತು ಜನರನ್ನು ರಕ್ಷಣೆ ಮಾಡುತ್ತವೆ ಎಂಬ ನಂಬಿಕೆ ಜನರಲ್ಲಿ ಗಟ್ಟಿಯಾಗಿ ಬೇರೂರಿದೆ.

ಒಂದಷ್ಟು ಕಾಡನ್ನು ಭೂತದ ಬ್ಯಾಣ ಚೌಡಿಯ ಬ್ಯಾಣ ಅಂತಲೇ ಬಿಟ್ಟಿರುತ್ತಾರೆ…ನಾನು ಒಮ್ಮೆ ಚಿಕ್ಕವಳಿರುವಾಗ ಗೊತ್ತಿಲ್ಲದೆ ಭೂತದ ಬ್ಯಾಣದಲ್ಲಿ ಮೂತ್ರಕ್ಕೆ ಹೋಗಿದ್ದೆ..ಆಗ ಮಾವನ ಮಕ್ಕಳೆಲ್ಲ ಬಹಳ ಹೆದರಿಸಿದ್ದರು. ಭೂತದ ಬ್ಯಾಣದ ಯಾವ ಮರಗಳಿಗೂ ಯಾರೂ ಕತ್ತಿ ತಾಗಿಸುವಂತಿರಲಿಲ್ಲ. ಹಾಗೆ ಆ ಕಾಡನ್ನು ಶುದ್ದವಾಗಿರಿಸಿ ಪ್ರಕೃತಿಯನ್ನು ಸಂರಕ್ಷಿಸುವ ಉಪಾಯವೂ ಆಗಿರಲಿಕ್ಕೆ ಸಾಕು…ಕಾನೂನು ಆಳ್ವಿಕೆಗೆ ಬರದ ಕಾಲದಲ್ಲಿ!!! ಮನೆಯಲ್ಲಿನ ಇರುವೆ ಕಾಟಕ್ಕೂ ಮೊಸರು ವಾಸನೆ ಬಂದರೂ ಕೊಟ್ಟಿಗೆಯಲ್ಲಿನ ದನಕರುಗಳು ಸತ್ತರೂ ಮನೆಯಲ್ಲಿ ಯಾರಿಗೇ ಹುಷಾರು ತಪ್ಪಿದರೂ ಭೂತ ಚೌಡಿಗಳಿಗೆ ಹರಕೆ ಹೊರುತ್ತಾರೆ.

ದೀಪಾವಳಿ ಹಬ್ಬಕ್ಕೆ ಈ ಭೂತಗಳಿಗೆ ಒಂದೊಂದು ಮನೆಯಿಂದಲೇ ಒಡೆಯುವ ಹರಕೆ ಕಾಯಿಗಳು ನೂರಕ್ಕೂ ಮೀರಿ!!! “ಕಾಂತಾರ” ಹಾಗಾದರೆ ಕಾಡಿನ ಜನರ ಭೂಮಿಯನ್ನು ಉಳ್ಳವರು ಕಿತ್ತುಕೊಳ್ಳುವ ದೌರ್ಜನ್ಯ ಕುರಿತ ಅಥವಾ ದಲಿತರ ಮೇಲಿನ ದೌರ್ಜನ್ಯ ಕುರಿತ ಸಿನಿಮಾವೇ ? ಖಂಡಿತಾ ಅಲ್ಲ. ಕಾಡು ಮತ್ತು ಮೂಲನಿವಾಸಿಗಳ ಅವಿನಾಭಾವ ಸಂಬಂಧವನ್ನು ಎಲ್ಲಿಯೂ ಮನಮುಟ್ಟುವಂತೆ ಒಂದೇ ಒಂದು ಘಟನೆಯನ್ನೂಕೂಡಾ ತೋರಿಸುವುದಿಲ್ಲ. ಅಷ್ಟೇ ಅಲ್ಲ ಅನಗತ್ಯವಾಗಿ ಕಾಡಿನ ಜನರೇ ಕಾಡಿನ ದೊಡ್ಡ ದೊಡ್ಡ ಮರಗಳನ್ನು ಕಡಿಯುತ್ತಾರೆ.ಫಾರೆಸ್ಟ್ ಆಫೀಸರ್ ಗೆ ಈ ಜನರ ಬಗ್ಗೆ ಶುರುವಿನಲ್ಲೇ ಕಾರಣವೇ ಇಲ್ಲದೆ ಆಕ್ರೋಶ…ಕಾನೂನಿನ ಪರಿಪಾಲನೆಗೆ ಬಂದವನು ಕಾಡಿನ ಜನರನ್ನು ಒಲಿಸಿ ಅವರಿಗೆ ಸರ್ಕಾರದಿಂದ ಸಿಗುವ ಪರಿಹಾರವನ್ನು ಮನಗಾಣಿಸಿ ಅವರಿಗೆ ಬದಲೀ ವ್ಯವಸ್ಥೆಯ ಬಗ್ಗೆ ಮನಸೆಳೆಯಬೇಕು. ಆದರೆ  ಅವನು ಒಮ್ಮೆ ಕೂಡಾ ಈ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ…ಒಂದಿಷ್ಟು ಹಿಡಿಯಲ್ಲಿ ಸೊಪ್ಪು ಕಿತ್ತಿದ್ದಕ್ಕೂ ಉರಿಗಣ್ಣಾಗುತ್ತಾನೆ. ಕ್ಲೈಮಾಕ್ಸ್ ನಲ್ಲಿ ಧಣಿ ಭೂಮಿಯನ್ನು ಇವರಿಗೆ ಮೋಸ ಮಾಡಿ ಕಿತ್ತುಕೊಳ್ಳುತ್ತಿದ್ದಾನೆ ಎಂದ ಕೂಡಲೇ ಈ ಕಾಡುಜನರ ಬಗ್ಗೆ ಅಪಾರಪ್ರೀತಿ ಉಕ್ಕುತ್ತದೆ. ಇದಕ್ಕೊಂದು ಸರಿಯಾದ ಪ್ಲಾಟ್ ಸಿನಿಮಾದಲ್ಲಿ ಸಿಗುವುದಿಲ್ಲ..ಸನ್ನಿವೇಶ ಪೋಷಣೆ ಈ ಅರ್ಥದಲ್ಲಿ ಆಗಿಲ್ಲ. ಇದ್ದಕ್ಕಿದ್ದ ಹಾಗೆ ಆಕ್ರೋಶ ತಣ್ಣಗಾಗಿಬಿಡುವ ಆತನ ಪಾತ್ರ ಒಂತರಾ ಹಿನ್ನಡೆ ಪಡೆದ ಹಾಗೆ. 

ಇನ್ನು ಕಮಲಕ್ಕನ ಪಾತ್ರ ಆಕೆ ಚೆಂದ ಅಭಿನಯಿಸಿದ್ದಾರೆ ಎನ್ನುವುದನ್ನು ಬಿಟ್ಟರೆ ಸದಾ ಹುಚ್ಚು ಆವೇಶದಲ್ಲೇ ನಾಯಿ ನಾಯಿ ಬೊಜ್ಜ ಎಂದು ಬೈಯ್ಯತ್ತಾ ಬೆಳೆದ ಮಗನಿಗೆ ಅವನ ಸ್ನೇಹಿತರಿಗೆ ಕೂಡಾ ಕೋಲಿನಿಂದ ರಪರಪನೆ ಬಾರಿಸುತ್ತಾಳೆ!! ತುಂಬಾ ‘ಓವರ್’ ಎನಿಸುವ ಹಾಗೆ.  ಸಿನಿಮಾ ನಂತರ ಆಕೆಯ ಒಂದು ಡೈಲಾಗ್ ಅಥವಾ ಘಟನೆ ಮನಸಿನಲ್ಲಿ ಉಳಿಯುವುದಿಲ್ಲ. ನಾಯಕಿಗೆ ಇನ್ನಷ್ಟು ಪ್ರಾಮುಖ್ಯತೆ ಸಿಗಬಹುದಿತ್ತು. ಆಕೆಯ ನಿಲುವು ರೂಪ ನಾಯಕನನ್ನು ಒಮ್ಮೆಗೆ ಸೆಳೆದು ತಕ್ಷಣವೇ ಆಕೆಯ ಸೊಂಟ ಚಿಗುಟುವವರೆಗೆ ನಾಯಕನ ಧಾಷ್ಟ್ರ್ಯ!!! “ಈ ಸನ್ನಿವೇಶದಲ್ಲಿ ನನಗೆ ಪುಷ್ಪ ಸಿನಿಮಾ ನೆನಪಾಯ್ತು. ಅಲ್ಲಿ ಅವರಿಬ್ಬರ ಆಕರ್ಷಣೆ ಪ್ರೀತಿ ಹುಟ್ಟಿಸುವ ಭಾವ ಇಲ್ಲಿ ಕಾಣಲಿಲ್ಲ. ಇಲ್ಲಿ ಕೂಡಾ ಪ್ರೀತಿಯ ಪೋಷಣೆ ಮಾಡುವಲ್ಲಿ ಸಿನಿಮಾ ಸೋತಿದೆ. ಸಪ್ತಮಿ ಗೌಡರವರ ನಟನೆ ಪರವಾಗಿಲ್ಲ ಅನ್ನುವಷ್ಟೇ…ಇನ್ನು ಧಣಿಯಾಗಿ ಅಚ್ಚುತರಾವ್ ಅಭಿನಯ ಚೆನ್ನಾಗಿದೆ. ಆದರೆ ಈ ಧಣಿಯ ವಿಶೇಷತೆ ಗತ್ತು ಗಮ್ಮತ್ತಿಗಿಂತ ಒಳಗೊಳಗೇ ಹುನ್ನಾರ ಹೆಣೆಯುವ ಡಿಪ್ಲೋಮ್ಯಾಟಿಕ್ ಪಾತ್ರ.  ಅವರ ಎಂದಿನ ಶೈಲಿಯ ಪ್ರಭಾವದಿಂದ ಹೊರಬಂದೇನೂ ಅಭಿನಯಿಸದೆ ಅಥವಾ ಅದಕ್ಕೆ ಅವಕಾಶವಿಲ್ಲದೆ ಪಾತ್ರ ಸೊರಗಿದೆ ಅಂತಲೇ ಅನಿಸುತ್ತದೆ. ಆ ಪಾತ್ರ ಇನ್ನಷ್ಟು ಗಟ್ಟಿಗೊಳ್ಳಬಹುದಿತ್ತು. ಅವರ ಪತ್ನಿಗಂತೂ ಏನೂ ರೋಲ್ ಇಲ್ಲ. ಆಗಾಗ್ಗೆ ಕಾಣಿಸುವ ಮುಖದಲ್ಲಿ ಏನೊ ನಿರೀಕ್ಷೆ ಹುಟ್ಟಿಸಿ ಅಲ್ಲಿಗೇ ಮೌನವಾಗುತ್ತದೆ. ಗುರುವನ ಪಾತ್ರ ಸ್ವಲ್ಪವೇ ಆದರೂ  ಅಭಿನಯ ಮನದಲ್ಲಿ ಉಳಿಯುತ್ತದೆ. ಇಡೀ ಸಿನಿಮಾದಲ್ಲಿ ರಾರಾಜಿಸುವ ಕ್ರೌರ್ಯ ಅದರಲ್ಲೂ ಕೊನೆಯ ಕ್ಲೈಮಾಕ್ಸ್ ನಲ್ಲಿ ಬರುವ ಕ್ರೌರ್ಯ ತೀರಾ ಅನಗತ್ಯವಾದುದು ಅಷ್ಟೇ ಅಲ್ಲ ಅಕಾರಣವಾದುದು.  ಒಬ್ಬ ದಲಿತ ತನ್ನ ಪರಾಕ್ರಮದಿಂದ ಧಣಿಗಳ ಮನೆ ಒಳಗೆ ಹೋಗಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟಮಾಡಿಬಂದರೆ ಅದು ಬದಲಾವಣೆಯಲ್ಲ!! ಧಣಿ” ಏಯ್ ಪಂಚಗವ್ಯ ಹಾಕಿದ್ಯನಾ” ಅಂದ. ಅವ ಒಳಬಂದದ್ದಕ್ಕೆ ಶುದ್ದವಾಯಿತು.

ಸಾಮುದಾಯಿಕವಾಗಿ ಒಂದು ಹೋರಾಟ ಶುರುವಾಗಿ ಸಾಮಾಜಿಕ ಬದಲಾವಣೆಯಾಗಬೇಕು. ಕಾನೂನಾತ್ಮಕವಾಗಿ ಕಾಡಿನ ಮೂಲನಿವಾಸಿಗಳಿಗೆ ಭೂಮಿ ಸಿಗುವ ಕೆಲಸವಾಗಬೇಕು. ಅದು ದೈವದಿಂದ ಹೆದರಿಸಿ ಆಗುವುದಲ್ಲ. ಈ ನಿಟ್ಟಿನಲ್ಲೇ ಸಿನಿಮಾ ಹಾದಿ ತಪ್ಪುತ್ತದೆ.  ದೈವದ ಬಗೆಗಿನ ನಂಬುಗೆ ಆಚರಣೆ  ಇವತ್ತು ಸಮಾಜವನ್ನು ಯಾವುದೇ ಹದ್ದುಬಸ್ತಿನಲ್ಲಿಡಲು ಸಹಕಾರಿಯಾಗಿಲ್ಲ…ಬದಲಿಗೆ ಅನ್ಯಾಯ ಮಾಡಿಬಂದವನು ದೇವರಿಗೆ ಕಾಣಿಕೆ ಹಾಕಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮನೋಭಾವನೆ ಹೊಂದಿದ್ದಾನೆ.  ಇದೊಂದು ಮಾನಸಿಕ ಶರಣಾಗತಿ ಬೇರೆಯದೇ ಚರ್ಚೆ. 

ಇನ್ನು ಕೊನೆಯಲ್ಲಿ ಅಚ್ಚುತರಾವ್ ಒಂದು ಕುರ್ಚಿ ಹಾಕಿ ಕುಳಿತು ನಗುತ್ತಾ ಕೊಲೆಗಳನ್ನು ಹೊಡೆದಾಟವನ್ನು ಎಂಜಾಯ್ ಮಾಡುವಷ್ಟುಮಟ್ಟದ ಕ್ರೌರ್ಯ ಬೇಕಿರಲಿಲ್ಲ. ಮಗುವನ್ನು ಗುಂಡಿಟ್ಟು ಹೊಡೆದು ಮುಂದೆ ಅವಳೂ ಬರಬಹುದು ಭೂಮಿ  ಕೇಳಲು ಎನ್ನುವ ಕ್ರೌರ್ಯ ಕೂಡಾ ಅನಗತ್ಯ. ಅದೊಂದು ವಿಕೃತ ತೃಪ್ತಿ ಸೇಡು ಎನಿಸುತ್ತದೆ. ಮೇಲ್ವರ್ಗದ ಜನರು ಹುನ್ನಾರಗಳ ಹೆಣೆಯುವುದು ತಣ್ಣಗಿನ ಕ್ರೌರ್ಯ ಮೆರೆಯುವುದು ಸಾಮಾನ್ಯಸಂಗತಿ.. ಕಾನೂನಿಗೆ ಸಿಕ್ಕಿಹಾಕಿಕೊಳ್ಳುವ ಸಂಗತಿಯನ್ನೂ ಮೀರಿ ಇಷ್ಟು ಹಾರ್ಡ್ ಕೋರ್ ಕ್ರೌರ್ಯ ನನ್ನ ಗಮನಕ್ಕೆ ಬಂದಿಲ್ಲ!!  ಮೇಲ್ವರ್ಗದ ಜನರು ಈ ಮಟ್ಟದ ಕ್ರೂರಿಗಳು ಎಂದು ತೋರಿಸುವುದು ನಿರ್ದೇಶಕರ ಉದ್ದೇಶ ಅಲ್ಲವೇ ಅಲ್ಲ ಕ್ಲೈಮಾಕ್ಸ್ ರೋಚಕವಾಗಿರಲಿ ಎನ್ನುವುದೇ ಅವರ ಉದ್ದೇಶ.. ಇದ್ಯಾಕೊ ಮೇಲ್ವರ್ಗದ ಜನರನ್ನು ತಟ್ಟಿದ ಹಾಗೆ ಕಾಣಲಿಲ್ಲ!!! ಮನಸು ಮಾಡಿದ್ದರೆ ಅವನ ಕೈಯ್ಯಲ್ಲಿ ಬಂದೂಕು ಇತ್ತು ಶಿವನಿಗೆ ಹೊಡೆಯುವುದು ಕಷ್ಟವೇ ಇರಲಿಲ್ಲ.. ಇದನ್ನೊಂದು ಯುದ್ಧದ ಮಾದರಿಯಲ್ಲಿ ಎರಡೂ ಕಡೆಯ ದಂಡು ಬಂದು ಕೊಚ್ಚಿ ಕೊಚ್ಚಿ ಹಾಕುವ ಸನ್ನಿವೇಶ ಸ್ವಲ್ಪ ಕೃತಕವೇ ಎನಿಸುತ್ತದೆ.

ಪುಪ್ಪ ಸಿನಿಮಾದಲ್ಲಿ ಅದರ ಪ್ಲಾಟೇ ಕಳ್ಳತನ! ಸ್ಮಗ್ಲಿಂಗ್ ನಲ್ಲಿ ಹಿಂಸೆ ಅನಿವಾರ್ಯ. ಇಲ್ಲಿ ಫಾರೆಸ್ಟ್ ಆಫೀಸರ್ ಪೋಲಿಸ್ ಸಹಾಯ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಯೂ ಇತ್ತು.  ಅವನು ಕ್ಷಣ ಮಾತ್ರದಲ್ಲಿ ಶಿವನ ಪರವಾಗಿ ನಿಲ್ಲುವ ಸನ್ನಿವೇಶ ಕೂಡಾ ಕೃತಕವಾಗಿ ಬಿಡುತ್ತದೆ. ಶುರೂನಲ್ಲಿ ಶಿವ ಮರಕಡಿದು ಬೀಳಿಸಿ ಫಾರೆಸ್ಟ್ ಆಫೀಸರನನ್ನು ಸಾಯಿಸುವ ಸಂಚೂ ಕೂಡಾ ಅನಗತ್ಯವೇ..ಮತ್ತೆ ದೈವ ಮನಸು ಮಾಡಿದರೆ ಧಣಿಯನ್ನು ರಕ್ತಕಾರಿ ಸಾಯಿಸುವ ಅವಕಾಶವಿರುವಾಗ ಇಷ್ಟೆಲ್ಲ ಹೊಡೆದಾಟ ಅಗತ್ಯವಿದೆಯಾ? ಅಲ್ಲಿಗೆ ಇಲ್ಲಿ ದೈವದ ನಿರ್ಣಯ ಕೂಡಾ ಮ್ಯಾನ್ ಮೇಕಿಂಗ್ ಆಗಿಬಿಡತ್ತೆ. ರಕ್ತವನ್ನು ನಾಲಿಗೆಗೆ ಸವರಿಕೊಳ್ಳುವ ದೈವದ ರೋಚಕ ಗಳಿಗೆಯನ್ನು ನೋಡಿದಾಗ ನಿರ್ದೇಶಕರು ಒಂದು ತಿಂಗಳು ಮಾಂಸಾಹಾರ ತ್ಯಜಿಸಿದ್ದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದು ನೆನಪಿಗೆ ಬಂತು. ದೈವವೇ ರಕ್ತ ಚೆಲ್ಲಬೇಕು ಎಂದು ಬಯಸುತ್ತದೆ…ದುಷ್ಟಶಕ್ತಿಗಳ ಸಂಹಾರ ಮಾಡಲು ರಕ್ತಾಭಿಷೇಕ ಮಾಡುವ ಆಚರಣೆಯೂ ಇದೆ.. ಇಷ್ಟೆಲ್ಲಾ ರಣಭೀಕರ ರೋಚಕ ಕೊನೆಯ ನಂತರ ವರಾಹ ರೂಪಂ ಹಾಡು ಬರತ್ತೆ…ಅದು ನನಗೆ ಅನ್ ಟೈಮಿಂಗ್ ಅನಿಸಿ ಅದು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಬಹುದಾದ ಸನ್ನಿವೇಶದಲ್ಲಿ ಬಳಸಿಕೊಳ್ಳಬಹುದಿತ್ತು ಅನಿಸಿತು. ಕೊನೆಯ ಕ್ಷಣದಲ್ಲಿ ದೈವ ಎಲ್ಲರನ್ನೂ ಸ್ಪರ್ಶಿಸಿ ತನ್ನಡೆಗೆ ಎಳೆದುಕೊಳ್ಳುವ ದೃಶ್ಯ ನನಗೆ ಬಹುವಾಗಿ ತಟ್ಟಿತು. 

ಬಹು ಮುಖ್ಯವಾಗಿ ಇಲ್ಲಿ ಪಾಡ್ದನಗಳ ಬಳಮೆಯಾಗಬೇಕು ಎಂದು ಅಲ್ಲಿಯ ಸಂಸ್ಕೃತಿ ಬಲ್ಲವರು ಹೇಳುವ ಮಾತು. ಆದರೆ ನಿರ್ದೇಶಕರು ವೈದೀಕ ಸಂಸ್ಕ್ರತಿಯನ್ನು ಬಳಸಿಕೊಳ್ಳುವ ಮೂಲಕ ಕಮರ್ಷಿಯಲ್ ಜಾಣ್ಮೆ ಮೆರೆದಿದ್ದಾರೆ!! ಕಂಬಳದ ದೃಶ್ಯಗಳು ಬಹಳ ಚೆನ್ನಾಗಿವೆ. ಇಡೀ ಸಿನಿಮಾ ಬಹಳ ಗದ್ದಲವೆನಿಸುವಷ್ಟು ಹಿನ್ನೆಲೆ ಸಂಗೀತ. ಡೈಲಾಗ್ ಡೆಲಿವರಿ ಬಹಳ ಸ್ಪೀಡ್ ಕುಂದಾಪ್ರ ಭಾಷೆ ಅಷ್ಟಿಷ್ಟು ಗೊತ್ತಿರುವ ನಮಗೇ ತಕ್ಷಣ ಗೊತ್ತಾಗುವುದಿಲ್ಲ…ಇನ್ನು ಗೊತ್ತಿರದವರಿಗೆ ಕಷ್ಟ. ಅದರ ಕಡೆ ನಿಜಕ್ಕೂ ಗಮನ ನೀಡಬೇಕಿತ್ತು.  ರಿಷಬ್ ಶೆಟ್ಟಿಯವರ ನಟನೆ ಪರಿಶ್ರಮ ಎರಡೂ ಅಪಾರ..ಕೊನೆಯ ಇಪ್ಪತ್ತು ನಿಮಿಷ ಅಂತ ಎಲ್ಲರೂ ಬಹಳ ಹೈಪ್ ಮಾಡಿದ್ದರಿಂದ ನಿರೀಕ್ಷೆ ಇನ್ನಷ್ಟಿತ್ತು…

ಕೊನೆಯ ಐದು ನಿಮಿಷಗಳು ರೋಚಕವಾದ ಅಭಿನಯವಿದೆ. ಸಿನಿಮಾ ಎಲ್ಲೂ ಬೋರ್ ಹೊಡೆಸುವುದಿಲ್ಲ.. ಹೊರಬಂದ ಮೇಲೆ ದೈವದ ಮೇಕಪ್ ನರ್ತನ ರಿಷಬ್ ಶೆಟ್ಟಿಯ ಪ್ರಾದೇಶಿಕ ಮಾತು ನಟನೆ ಕೊನೆಯಲ್ಲಿ ದೈವದ ಆವಾಹನೆ ಇಷ್ಟು ಬಿಟ್ಟರೆ ಮನ ಕಲಕುವ ಅಥವಾ ನಾಟುವ ಒಂದೇ ಒಂದು ಸನ್ನಿವೇಶ ಅಥವಾ ಡೈಲಾಗು ನೆನಪಿಗೆ ಬರುವುದಿಲ್ಲ. ದೈವದ ಕೂಗು ಮಾತ್ರಾ ಅದ್ಭುತವಾಗಿದೆ..ಕಾಂತಾರ ಎಂದಾಗ ಕೇಳಿಸುವುದು ಅದೇ…

‍ಲೇಖಕರು Admin

October 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: