ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಗ್ಗಿ ಮತ್ತು ಕಾತಗಿ

ಸುಧಾ ಆಡುಕಳ

ಅಮ್ಮನಿಗೂ ಇತ್ತು
ಸುಗ್ಗಿ ಮಾಡುವ ಬಯಕೆ

ನಮ್ಮೂರ ಗದ್ದೆಯಲ್ಲಿ ಎರಡು ಬೆಳೆ
ಸುಗ್ಗಿ, ಕಾತಗೆ
ಹದವಾಗಿ ನೀರ ಹರಿಸಿ, ಅಗೆಹಾಕಿ,
ನೆಟ್ಟಿ ಮಾಡಿ ಬೆಳೆವ ಬೆಳೆ ಸುಗ್ಗಿ
ಕಾಟಾಚಾರಕೊಂದಿಷ್ಟು ಕಾಳನೆರಚಿ
ನೆಗಸಲ್ಲಿ ಮುಳುಗದೇ ಉಳಿದಷ್ಟ
ಮೊಗೆವ ಬೆಳೆ ಕಾತಗಿ

ಉತ್ತು, ಬಿತ್ತುವುದಕ್ಕೆ ಅಪ್ಪನೇ ಸೈ
ಪ್ರತಿಬೀಜವೂ ಮೊಳಕೆ, ಪಳಗಿದ ಕೈ
ನೆಟ್ಟಿ ಮಾಡಲು ಸಾಲು, ಸಾಲು ಚದುರಂಗಿಯರು
ಸುವ್ವೀ ಹಾಡಿನ ಫಲುಕಿಗೆ ಹಕ್ಕಿಗಳೇ ದಿಗಿಲು!
ಅಷ್ಟೂ ಜನರ ಹೊಟ್ಟೆ ಕಾಯುವ ಅಮ್ಮನಿಗೆ
ಬಯಲಿಗಿಳಿಯಲೂ ಇಲ್ಲ ಬಿಡುವು

ನೆಟ್ಟಿಯಾದ ಮರುದಿನ ಬಿತ್ತುವಾಸೆ ಬಲಗೊಂಡು
ಬೀಜ ತೂರುತ್ತಾಳೆ ಅಮ್ಮ
ಕಳೆಯ ತೆಗೆದು ಕಾಪಿಡುತ್ತಾಳೆ, ಕೆಂಪು ಹರಿವೆ
ಹಸಿರ ನಡುವೆ ಹೂವಂತೆ ಅರಳಿಕೊಳ್ಳುವುದು
ಹರಿವೆ ಬೆಳೆಯುವುದು ಸುಗ್ಗಿಯ
ಬೆರಗಿನೊಳಗಿಂದ ಹೊರಗು
ಹೀಗೆ ……..
ಬೆಳೆಯುವುದು ಅಮ್ಮನ ಕೊರಗು

ಬೆಳೆದ ಭತ್ತವ ಕೊಯ್ದು, ಅರಿಮಾಡಿ, ಹೊರೆಮಾಡಿ
ಹಡಿಮಂಚಕ್ಕೆ ಹೊಡೆವ ಭರದಲ್ಲಿ
“ಹೋಯ್ ಹೊಲಿ, ಬಾ ಹೊಲಿ”
ಊರ ತುಂಬುವ ಖುಶಿಯ ಕೂಗಿಗೆ
ಕಡುಬು, ಪಾಯಸದೂಟವೇ ಬೇಕು
ಅಮ್ಮನೊಲೆಯಲ್ಲಿ ಬೇಯಬೇಕು

ಅಗಾ! ರಾಶಿಯಾಗಿದೆ ಭತ್ತ!
ಚೀಲ ತುಂಬುವ ಮುನ್ನ ಬರೆಯಬೇಕಿದೆ
ಬೂದಿಯೆಳೆಯ ಚಿತ್ತಾರ
ಸೋಸಿದ ಬಿಳಿಬೂದಿ ಹಿಡಿದು ಬರುವ
ಅಮ್ಮನೆತ್ತರಕೆ ಸುಗ್ಗಿಯ ರಾಶಿಯೆಂದೂ ಎಟಕದು
ಎತ್ತರದವರ ಕೈಬಳೆಯ ನಾದಕ್ಕೆ ಚಿತ್ತಾರಗೊಳ್ಳುವುದು

ಪ್ರತಿ ಸುಗ್ಗಿಯೂ ಸರಿದು ಹೋಗುವುದು ಹೀಗೆ
ಅಮ್ಮನೆದೆಯಲ್ಲಿ ಉಳಿಸಿ ಕಾತಗಿಯ ಬೇಗೆ

‍ಲೇಖಕರು Avadhi

4 November, 2020

3 Comments

  1. Smitha Amrithraj.

    ಚೆಂದದ ಕವಿತೆ ಸುಧಾ

  2. T S SHRAVANA KUMARI

    ಚಂದದ ಕವಿತೆ

  3. SUDHA SHIVARAMA HEGDE

    ಧನ್ಯವಾದಗಳು ಇಬ್ಬರಿಗೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading