ಮಬ್ಬು ಬೆಳಕಿನಲ್ಲಿ ತೌಸಂಡ್ ವೋಲ್ಟ್ ವ್ಯಾಪಾರ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆಹುಡುಕುತ್ತಿದ್ದಾರಂತೆಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ಆಫ್ ದಿ ರೆಕಾರ್ಡ್ನಲ್ಲಿ.


ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ 2 ಅಡಿ ಎತ್ತರದ ಸ್ಟೀಲ್ ಕೊಳಗ. ಅದರ  ತುಂಬಾ ಕಲಸಿದ ಅನ್ನಸಾರು.  ಅದನ್ನು ಕಲಿಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ ಮೇಲೊಂದು ಕೆನೆಗಟ್ಟಿದ ಲೇಯರ್‌.  ಪಕ್ಕದಲ್ಲೊಂದು ಸೌಟು. ಅದಕ್ಕೆ ತಾಗಿಯೇ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿಟ್ಟ ನೀರು.  ಅದಕ್ಕೊಂದು ಪ್ಲಾಸ್ಟಿಕ್ ನದ್ದೇ ಚೊಂಬು.  ಆ ಕೊಠಡಿಯಲ್ಲಿ ಹಾಕಿದ್ದ ನೆಲಹಾಸು ಅಂಟಿಕ್ ಪೀಸ್ ಇದ್ದಂಗೆ.  ಅದನ್ನೇನಾದರೂ ಕೊಡವಿದ್ರೆ ಕೊಡವಿದವರು ಮೂರು ದಿನವಾದ್ರೂ ಸುಧಾರಿಸ್ಕೊಳ್ಬೇಕು.

ಹೊರಗೆ ಕಣ್ಣು ಕುಕ್ಕುವ ಬಣ್ಣಬಣ್ಣದ ಬೆಳಕು. ಆ ಬೆಳಕಿನ ಕಿರಣಗಳ ಪ್ರತಿಬಿಂಬಿಸಿ ಕಾಮನಬಿಲ್ಲು ಸೃಷ್ಟಿಸುವ ಮಿಂಚಿನ ಬಾಡಿಗೆಯ ಬಿಗಿ ಉಡುಪು. ಮೇಕಪ್ಪಿನ ಮುಖ. ಅಸಲಿ ಕೂದಲನ್ನು ಒಳಗೆ ಮುಡಿಕಟ್ಟಿ , ಗುಂಗುರು ಭ್ರಮೆ ಹುಟ್ಟಿಸುವ, ತಲೆಯನ್ನು ಬಿಗಿಯಾಗಿ ಹಿಡಿದು ಹಿಂಡುವ  ಟೋಪನ್.          

ಏದುಸಿರು ಬಿಟ್ಟುಕೊಂಡು  ಕೋರೈಸುವ ಬೆಳಕಿನಿಂದ ಒಳಬಂದ ಸ್ವಾತಿಗೆ ಕಣ್ಣು ಕತ್ತಲಿಟ್ಟಂತಾಗಿತ್ತು. ಹಸಿವು ಚುರುಗುಟ್ಟುತ್ತಿತ್ತು. ಕಾಲುಗಳ ನರನರವೂ ಕೀಳುತ್ತಿದ್ವು. ಮಬ್ಬು ಬೆಳಕಿನ ಒಳರೂಮಿಗೆ ಓಡಿಬಂದವಳೇ, ತಟ್ಟೆ ಹಿಡಿದು ಮೇಲೆ ಕೆನೆಕಟ್ಟಿದ್ದನ್ನು  ಸರಿಸಿದ್ಳು. ಒಂದೆರಡು ಸೌಟು ಸಾರನ್ನವನ್ನು ಹಾಕ್ಕೊಂಡ್ಳು.  ಗಬಗಬಾಂತ ಬಾಯಿಗೆ ತುಂಬಿಕೊಂಡಳು. ಹೊಟ್ಟೆ ಹಸಿದು ತಲೆ ಸುತ್ತುವಂತಾಗಿತ್ತು.  ಏನು ತಿಂತಾ ಇದ್ದೀನಿ, ಅದರ ರುಚಿ ಏನು ಯಾವುದರ  ಪರಿವೆಯೇ ಅವಳಿಗಿರಲಿಲ್ಲ.

ಮಧ್ಯೆ ಮಧ್ಯೆ ಗ್ಯಾಪ್ ನಲ್ಲಿ ಬಂದು ಏನಾದ್ರೂ ತಿನ್ನದಿದ್ರೆ   ಹಸಿವಿನ  ಸಂಕಟದಲ್ಲಿ ಕುಸಿದರೂ ಅದೂ ಒಂದು ಸ್ಟೆಪ್ ಇರಬಹುದೇನೋ ಅನ್ನೋವಷ್ಟು ಪರಿಸ್ಥಿತಿ ಅಮಾನವೀಯವಾಗಿರುತ್ತೆ. ಅಷ್ಟರಲ್ಲಿ ಹುಡುಗನೊಬ್ಬ ಬಂದವನೇ, ಸ್ವಾತಿ ಬೇಗ ಹೋಗಬೇಕಂತೆ ಅಂತ ಅವಳನ್ನು ಅವಸರಿಸಿದ.  ಚೊಂಬು ನೀರು ಗಟಗಟನೆ ಕುಡಿದು ಹೊರಗೆ ಓಡಿದಳು.  ಹಾಕಿದ್ದ ಸಾಂಗ್ ಕೇಳುವವರನ್ನು ನಿಂತಲ್ಲೇ ಕುಣಿಸೋಂಗಿತ್ತು.  ಸ್ವಾತಿ ಹೆಜ್ಜೆಗಳು ಸ್ಟೆಪ್ ಆಗ್ತಾ ಆಗ್ತಾ ಮತ್ತೆ ಸ್ಪೀಡ್ ಜಾಸ್ತಿ ಮಾಡಿಕೊಂಡ್ವು. 

ಎಲ್ಲಾ ಟೇಬಲ್ಗಳನ್ನು ಟಚ್ ಮಾಡ್ತಾ, ಮಾಡ್ತಾ ಅಲ್ಲಿ ಕುಂತೋರಿಗೆ ಅಮಲು ಏರಿಸ್ತಾ,  ಕೈಗೆ ಸಿಕ್ಕರೂ ಸಿಗದಂತೆ ಜಾರಿ ಕೊಳ್ಳುತ್ತಾ ನಿರ್ಭಾವುಕವಾದ ಹೃದಯವನ್ನು ಅದುಮಿಡಿದು ನಕಲಿ ಭಾವನೆಗಳ ಪ್ರದರ್ಶಿಸುತ್ತಾ ಬಳುಕುತ್ತಲೇ ಇದ್ದಳು ಸ್ವಾತಿ…..ತಡರಾತ್ರಿಯಾಗಿತ್ತು. ಸ್ವಾತಿಯ ಜೊತೆಗಿನ ಐದಾರು ಹುಡುಗಿಯರನ್ನು ಗಿರಾಕಿಗಳು ಬುಕ್ ಮಾಡ್ಕೊಂಡಿದ್ರು. ಯಜಮಾನನ ಆಣತಿಯಂತೆ ಆ ಬೆತ್ತಲು-ಬೆಳಕಿನಾಟದ ಅಮಲಲ್ಲಿ ಸುರಿದಿದ್ದ ನೋಟುಗಳ ಜೋಡಿಸಿ, ಎಣಿಸೋಕೆ ಕುಳಿತಳು ಸ್ವಾತಿ. ಹತ್ತು ರೂಪಾಯಿಗಳ ಚಿಲ್ಲರೆ ಮಾಡಿಸಿಕೊಂಡೇ ಬಂದವರ ಅಮಲಿನ ದವಲತ್ತನ್ನು ಜೋಡಿಸುವ ಹೊತ್ತಿಗೆ ಗಂಟೆ ಎರಡಾಗಿತ್ತು.

ಇದೊಂದು ಲೋ ಮಿಡಲ್ ಕ್ಲಾಸ್ ಲೈವ್ ಬ್ಯಾಂಡ್ ಗೆ ಉದಾಹರಣೆ ಕೊಟ್ಟೆ ಅಷ್ಟೇ.  ಲೈವ್ ಬ್ಯಾಂಡ್ ಅಥವಾ ಡ್ಯಾನ್ಸ್ ಬಾರ್ ಅನ್ನೋದೇ ಒಂದು ದೊಡ್ಡ ಲೋಕ! ಅಲ್ಲಿರುವ ವೈವಿಧ್ಯತೆಗಳು, ಅದರೊಂದಿಗೆ ತಳುಕು ಹಾಕಿಕೊಂಡಿರುವ ಸೆಕ್ಸ್ ಉದ್ಯಮ, ಮನರಂಜನೆ, ಮತ್ತಿನ ಗಮ್ಮತ್ತು, ಕಾಂಚಾಣದ ಝಲಕು……. ವೇಶ್ಯಾವಾಟಿಕೆಯ ಒಂದು ಉಪ ಅಧ್ಯಾಯವಾಗಿ ನಾನು ಲೈವ್/ ಡ್ಯಾನ್ಸ್  ಬಾರ್ ಗಳನ್ನು ನೋಡಿದೆ. ಅದೇ ಸೆಕ್ಸ್,  ಅದೇ ದುಡ್ಡು,  ಅದೇ ತಲೆಹಿಡುಕತನ,  ಅದೇ ಹೆಣ್ಣು, ಅದೇ ಸರಕು…..!!ಗೋಲ್ಡನ್ ಲೈಬ್ಯಾಂಡ್ ನ   ಸ್ವಾತಿಯಂತಹ ಲಕ್ಷಾಂತರ ಹೆಣ್ಣುಗಳು ಇವುಗಳಿಗಾಗಿಯೇ ಸಾಗಾಟ ಮಾರಾಟವಾಗುತ್ತಾರೆ…., ಅಥವಾ ಅವರೇ ಸ್ವಯಂ ಬಂದು ಸೇರುತ್ತಾರೆ.

ಮತ್ತದೇ ಬಡತನ, ನಿರುದ್ಯೋಗ, ಅನಕ್ಷರತೆ ಹೆಚ್ಚಿರುವ ಹುಡುಗಿಯರು ನೃತ್ಯವನ್ನು ಕರಗತಮಾಡಿಕೊಳ್ಳುತ್ತಾರೆ. ಇಲ್ಲಿಯೂ ವಂಚನೆ, ದೌರ್ಜನ್ಯ, ಲೈಂಗಿಕ ಕಿರುಕುಳಗಳಿಗೇನೂ ಕಡಿಮೆ ಇಲ್ಲ.  ಸುಮಾರು 12 ರಿಂದ 25 ವಯೋಮಾನದ ಬಳುಕುವ ತರುಣಿಯರು ಸ್ಪರ್ಶಿಸಿದ ಮದ್ಯ ಹೀರುತ್ತಾ,  ಕಣ್ಣುಗಳಿಗೂ ಸುಖ ನೀಡುತ್ತಾ ಹಣದೆರೆಚಾಟದ ನಡುವೆ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಪ್ರಾಧಾನ್ಯತೆಗೆ ಈ ಹೆಣ್ಣುಗಳು ಸರಕಾಗುತ್ತಾರೆ.

ಹಾಗೆಯೇ  ಸಾಮಾನ್ಯ, ತೀರಾ ಸಾಮಾನ್ಯ, ಶ್ರೀಮಂತ, ಪಂಚತಾರಾ, ಐಷಾರಾಮಿ ಹೀಗೇ ಈ ಸಮಾಜದ ಎಲ್ಲಾ ಸ್ಥರಗಳೂ ಇಲ್ಲಿಯೂ ಇವೆ. ಅಂತಹ ಐಷಾರಾಮಿಗೊಂದು ಉದಾಹರಣೆ…… ಅದೊಂದು ಪುಷ್ಪಾಕೃತಿಯ ತಾಣ.  ಹೊರಗಿನಿಂದ ನೋಡೋಕೆ ಹೂವಿನ ಪಕಳೆಗಳಂತೆ ಕಂಗೊಳಿಸುತ್ತವೆ.  ಒಳ ಹೊಕ್ಕರೆ ಮೆತ್ತನೆಯ ಹಾಸು.  ಮಲ್ಲಿಗೆಯ ಸಿಂಪರಣೆ. ಕೈಹಿಡಿದಪ್ಪುವ  ಮಂದಹಾಸಿನಿಯರು.  ಆಗಾಗ್ಗೆ ಮೆಲ್ಲಗೆ ತೂಗುತ್ತಾ ತೆರೆದು ಮುಚ್ಚುವ ಪಕಳೆಗಳ, ಇಂಪಾದ ಸಂಗೀತದ ಕಂಪನದೊಂದಿಗೆ ತೇಲಾಡುವ ಆ  ಹಂಸತೂಲಿಕಾ ಸ್ವರ್ಗಕ್ಕೆ ಕಿಚ್ಚುಹಚ್ಚುವ ಎಲ್ಲಾ ತಾಕತ್ತನ್ನು ಹೊಂದಿರುತ್ವೆ.

ಅದರೊಳಗೆ ಹೊಕ್ಕವನು ಈ ಪ್ರಪಂಚವನ್ನೇ ಮರೆತು ತನಗಿಂತ ಸುಖಿಯಿಲ್ಲ ಅಂತಲೇ ತೇಲಾಡ್ತಾನೆ. ಈ ಹಂಸತೂಲಿಕ ಸ್ಪೆಷಲ್ ಪ್ಯಾಕೇಜ್! ಇದಕ್ಕೆ ಸರದಿಯಿರುತ್ತದೆ. ಈ ಭಾವನಾತ್ಮಕ ಸ್ವರ್ಗದ ಬಾಗಿಲು ತೆರೆದು ಎಲ್ಲ ಸುಖಗಳನ್ನು ಅಪ್ಪಲು ಕಾಯಬೇಕಾಗುತ್ತದೆ. ಇದಕ್ಕಾಗಿ ಕ್ಯೂ ನಿಲ್ಲುವವರು ಸಾಮಾನ್ಯರೇನಲ್ಲ…. ಹಾಗೂ ಇಲ್ಲಿಗೆ  ಎಣಿಸದೇ ಸುರಿಯುವ ಕಾಂಚಾಣ ದಣಿವ ಧಾರೆಯೆರೆದು ದುಡಿದದ್ದೂ ಅಲ್ಲ…. 

ಜೊಲ್ಲು ಸುರಿಸಿ ಸರದಿಯಲ್ಲಿ ಚಡಪಡಿಸುವವರು  ಸಮಾಜದ ಗಣ್ಯಾತಿಗಣ್ಯರು, ರಾಜಕಾರಣಿಗಳು, ಉನ್ನತಅಧಿಕಾರಿಗಳು,  ಖ್ಯಾತ ವಕೀಲರುಗಳು, ವೈದ್ಯರುಗಳು, ಕೈಗಾರಿಕೋದ್ಯಮಿಗಳು, ಸೆಲೆಬ್ರೆಟಿಗಳ ದಂಡೇ ಇಲ್ಲಿರುತ್ತದೆ. ಈ ತಾಣಗಳು ಯಾವ ನಿಷೇಧ ನಿಯಂತ್ರಣಗಳಿಗೆ ಸಾಮಾನ್ಯವಾಗಿ ಒಳಪಡುವುದಿಲ್ಲ. ಯಾಕೆಂದರೆ ಇಲ್ಲಿ ಸುಖಿಸೋರೆಲ್ಲ ಕಾನೂನು ಪಾಲಕರು, ಇಲ್ಲಾಂದ್ರೆ ಶಾಸನಗಳ ಸೃಷ್ಟಿಕರ್ತರು, ಅಥವಾ ಎಲ್ಲವನ್ನೂ ಹದ್ದುಬಸ್ತಿನಲ್ಲಿಡಲು ತಾಕತ್ತಿರುವವರು…

ಸುಮಾರು 16 ರಿಂದ 30 ರೊಳಗಿನ ಲಲನೆಯರು ಈ  ಸೆಲೆಬ್ರಿಟಿಸ್ ಗಳಿಗಾಗಿ ಸೇವೆಗೈಯ್ಯಲು ಸಿದ್ಧರಿರುತ್ತಾರೆ. ಬೇರೆ ಬೇರೆ ಭಾಷೆಗಳು ಸಾಮಾನ್ಯವಾಗಿ ಇವರಿಗೆ ಗೊತ್ತಿರುತ್ತದೆ.  ರೂಪವಂತೂ ಆಯ್ಕೆಯಲ್ಲಿಯೇ ಸಾಬೀತಾಗುತ್ತದೆ.  ಇಂಗ್ಲೀಷ್ಗೆ ಆದ್ಯತೆ.  ಬಂದ ಗಿರಾಕಿಗಳು ಕೊಡೋ ಪರ್ಸನಲ್ ಟಿಪ್ಸ್ … ಅಂದರೆ ಅವರ ಎದೆಯೊಳಗೆ ತುರುಕುವ ನೋಟುಗಳು ಅವರದ್ದೇ.  ಉಳಿದಂತೆ ಮಾಲೀಕರೊಂದಿಗೆ ಆದ ಒಪ್ಪಂದದಂತೆ ಸಂದಾಯ. ಅದರಲ್ಲೂ ಖೋತಾ ಆಗೋದೇ ಹೆಚ್ಚು, ನುಡಿದಂತೆ ನಡೆಯುವ ಮಾಲೀಕರುಗಳು ಈ ಕ್ಷೇತ್ರದಲ್ಲಿ ಕಡಿಮೆ ಎನ್ನುತ್ತಾರೆ ಅಲ್ಲಿಯ ಹುಡುಗಿಯರು.

ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳೆದುಕೊಂಡರೆ ಲೈಂಗಿಕವೃತ್ತಿಗೆ  ರೂಪಾಂತರಗೊಂಡವರೇ ಅಧಿಕ.  ಉದಾಹರಣೆಗೆ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್ ಗಳನ್ನು ನಿಷೇಧಿಸಿದ ನಂತರ ಸಾವಿರಾರು ಯುವತಿಯರು ಲೈಂಗಿಕವೃತ್ತಿಗೆ ಇಳಿದ್ರು.  ವ್ಯಾಪಾರಿಗಳ ಒಡನಾಡಿಗಳಾಗಿ, ಬಾಡಿಗೆ ಹೆಂಡತಿಯರಾಗಿ ಬದುಕ ಬದಲಾಯಿಸಿಕೊಂಡರು.  

ಯೌವ್ವನೆಯರಾಗಿದ್ದು, ಸ್ವಲ್ಪ ವಿದ್ಯೆಯೂ ಇದ್ದು ,  ಬೇರೆ ಬೇರೆ ಭಾಷೆ ಗೊತ್ತಿದ್ದರೆ ಸಾಕು ಅವರ ದುಡಿಮೆಯ ಜಾಡು ಏರುತ್ತಲೇ ಇರುತ್ತದೆ.  ಶ್ರೀಮಂತ ಉದ್ಯಮಿಗಳಿಗೆ, ಉನ್ನತ ಅಧಿಕಾರಿಗಳಿಗೆ, ಗಣ್ಯಾತಿಗಣ್ಯರಿಗೆ ಇವರು ಜೊತೆಗಾರ್ತಿಯರಾಗಿ, ಬಾಡಿಗೆ ಹೆಂಡತಿಯರಾಗಿ ಹೋಗ್ತಾರೆ.  ಸಾಮಾನ್ಯವಾಗಿ ಇವರ ಪ್ರವಾಸದ ಸಂದರ್ಭಗಳನ್ನು ಹೆಚ್ಚು ಬಳಸಿಕೊಳ್ಳುತ್ತಾರೆ.

ಹೋದಲ್ಲೆಲ್ಲಾ ತನ್ನ ಹೆಂಡತಿ ಎಂದೇ ಪರಿಚಯಿಸಿ ಕೊಳ್ಳುವುದರಿಂದ ರಿಸ್ಕ್ ಕಡಿಮೆ.  ಬ್ಯಾಂಕರುಗಳು, ಉದ್ಯಮಪತಿಗಳು, ವೈದ್ಯರು, ಕ್ರೀಡಾಪಟುಗಳು, ಉನ್ನತ ಅಧಿಕಾರಿಗಳು, ಶ್ರೀಮಂತರುಗಳು ಇವರನ್ನು ‘ಹೊರಗುತ್ತಿಗೆ’ಯಾಗಿ ಕರೆದೊಯ್ಯುತ್ತಾರೆ.  ಇಂಗ್ಲಿಷ್ ಗೊತ್ತಿದ್ದರಂತೂ ಎಲ್ಲಿಲ್ಲದ ಬೇಡಿಕೆ.  ಸಾಮಾನ್ಯವಾಗಿ ಈ ಯುವತಿಯರು ಸೇವಾ ಶುಲ್ಕ ಪಡೆಯುತ್ತಾರೆ.  ಜೊತೆಗೆ ಸೀರೆ, ಚಿನ್ನ-ಬೆಳ್ಳಿ, ಒಡವೆಗಳು, ಐಷಾರಾಮಿ ವಸ್ತುಗಳನ್ನು ಗಿಫ್ಟ್ ಗಳಾಗಿ ಪಡೆಯುತ್ತಾರೆ. 

ಇತ್ತೀಚೆಗೆ ಹಣಕ್ಕಾಗಿ ಇಂಥಾ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ಬಿರುಸಾಗಿ ನಡೆಯುತ್ತಿದೆ. ಈ  ದಂಧೆಯ ತಲೆಹಿಡುಕರು ಇದನ್ನು ಲಾಭದಾಯಕ ಉದ್ಯೋಗವಾಗಿಸಿ ಕೊಂಡಿದ್ದಾರೆ.  ಜಾಗತೀಕರಣ, ಆಧುನಿಕತೆ, ತಂತ್ರಜ್ಞಾನಗಳು ಈ ದಂಧೆಯನ್ನು ಗಟ್ಟಿಗೊಳಿಸುವಲ್ಲಿ, ಹೆಣ್ಣನ್ನು ಸರಕಾಗಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.

‍ಲೇಖಕರು ಲೀಲಾ ಸಂಪಿಗೆ

November 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: