ಸುಗತ ಬರೆಯುತ್ತಾರೆ: ಕಲಾಕೃತಿಗಳು ಮತ್ತು ಅರ್ಥ ಹುಡುಕುವ ಹಠ

ಸುಗತ ಶ್ರೀನಿವಾಸರಾಜು

ಅರ್ಥಕ್ಕಿರುವ ಸಂದರ್ಭ ಮತ್ತು ಸಾಮಾಜಿಕ ಪರಿಸರ ನಮ್ಮ ಇಂದಿನ ಅನೇಕ ರಾಜಕೀಯ ಸಂಘರ್ಷಗಳಿಗೆ ಮೂಲ
ಕೆಲವು ವಾರಗಳ ಹಿಂದೆ, ‘ನೀವು ಇನ್ನೂ ಆ ಸಿನಿಮಾ ನೋಡಿ ಲ್ಲವೇ?’ ಎಂಬ ಪ್ರಶ್ನೆಯನ್ನು ಸ್ನೇಹಿತರು ನನ್ನ ಮುಂದಿಟ್ಟಾಗ ನನ್ನಲ್ಲಿ ಅಪರಾಧಿ ಪ್ರಜ್ಞೆ ಜಾಗೃತವಾಯಿತು. ನಮ್ಮ ಸುತ್ತ ಅನಾವರಣ ಗೊಳ್ಳುತ್ತಿರುವ ಏನೋ ಮಹತ್ವವಾದುದನ್ನು ಗುರುತಿಸಲಾಗದಷ್ಟು ಅಸೂಕ್ಷ್ಮನಾದೆನೇ, ಸಂವೇದನಾರಹಿತನಾ ದೆನೇ ಎಂದು ಕೊಂಚ ಮೌನಕ್ಕೆ, ತಳಮಳಕ್ಕೆ ಬಿದ್ದೆ. ಕೆಲಸದ ಒತ್ತಡದ ನಡುವೆ ಹೀಗಾಗಿರ ಬಹು ದೆಂದು ಸಮಜಾಯಿಷಿ ಕೊಟ್ಟುಕೊಂಡು, ಯಾವುದು ಆ ಸಿನಿಮಾ ಎಂದು ಕೇಳಿದೆ. ‘ಶಿಪ್ ಆಫ್ ಥೀಸಿಯಸ್’ ಎಂಬ ಉತ್ತರ ಬಂತು.
ಸ್ನೇಹಿತರು ಈ ಸಿನಿಮಾ ಕುರಿತಂತೆ ಅಲ್ಲಿಗೇ, ಅಂದರೆ ಅದನ್ನು ‘ನೋಡಲೇಬೇಕು’ ಎಂಬ ಹಂತದಲ್ಲಿ ನಿಲ್ಲಿಸಿದ್ದರೆ ಸಾಕಿತ್ತು, ನಾನು ಅದನ್ನು ನೋಡಿ ನೆಮ್ಮದಿಯಾಗಿರುತ್ತಿದ್ದೆ. ಆದರೆ, ಅವರು ಹಾಗೆ ಮಾಡದೆ, ಕೆಲವು ಸ್ವದೇಶಿ ಮತ್ತು ವಿದೇಶಿ ಪತ್ರಿಕೆಗಳ ವಿಮರ್ಶೆಗಳನ್ನು ಉಲ್ಲೇಖಿಸಿ, ಅದು ‘ನಮ್ಮ ಬದುಕನ್ನು ಬದಲಿಸ ಬಹು ದಾದಂತಹ (life altering) ಸಿನಿಮಾ,’ ಎಂದು ಹೇಳಿ ಪ್ರಚೋದಿಸಿದರು. ‘ಬದುಕನ್ನು ಬದಲಿಸಬಹುದು’ ಎಂದು ಒಂದು ವಿಚಾರದ ಬಗೆಗೋ, ಒಂದು ಘಟನೆಯ ಬಗೆಗೋ, ಪುಸ್ತಕ ಅಥವಾ ಸಿನಿಮಾದ ಕುರಿತಂತೆಯೋ ಯಾರಾದರೂ ಹೇಳಿದರೆ, ಅದು ವಿಶ್ವಾಸ ಮೂಡಿಸುವ ಬದಲು, ಅನುಮಾನವನ್ನು ಹುಟ್ಟಿಸು ತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಗ್ರಹಿಕೆಯ ಮತ್ತು ಅನುಭವದ ತೀವ್ರತೆಗಳಲ್ಲಿ, ಸೂಕ್ಷ್ಮಗಳಲ್ಲಿ ವ್ಯತ್ಯಾಸಗಳಿರುವುದರಿಂದ ಒಬ್ಬರ ಮೇಲಿನ ಪರಿಣಾಮ, ಮತ್ತೊಬ್ಬರಿಗೂ ಸತ್ಯ ಎಂದು ಸರಳವಾಗಿ ಹೇಳಲು ಬರುವುದಿಲ್ಲ. ಈ ಗುಮಾನಿ, ಎಚ್ಚರ ಇರಿಸಿಕೊಂಡೇ ಆ ಸಿನಿಮಾ ನೋಡಿದೆ.

ಥೀಸಿಯಸ್‌ನ ವಿರೋಧಾಭಾಸವನ್ನು (paradox), ಪುರಾಣ ವನ್ನು ಆಧಾರವಾಗಿರಿಸಿಕೊಂಡು ಈ ಸಿನಿಮಾವನ್ನು ಹೆಣೆಯ ಲಾಗಿದೆ. ಗ್ರೀಕ್ ಸಾಹಿತ್ಯದಲ್ಲಿ ಪ್ಲುಟಾರ್ಕ್ ತನ್ನ ‘ಲೈಫ್ ಆಫ್ ಥೀಸಿಯಸ್’ ಪುಸ್ತಕದಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ: ‘ಒಂದು ಹಡಗು ತನ್ನ ಕೆಟ್ಟು ಹೋದ ಬೇರೆ ಬೇರೆ ಭಾಗಗಳನ್ನು ಕಳಚಿ, ಅದರ ಜಾಗದಲ್ಲಿ ಹೊಸ ಭಾಗಗಳನ್ನು ಇರಿಸಿಕೊಂಡಾಗ, ಅದು ಅದೇ ಹಡಗಾಗಿ ಉಳಿಯುತ್ತದೆಯೇ ಅಥವಾ ಅದನ್ನು ನಾವು ಹೊಸ ಹಡಗೆಂದು ಕರೆಯಬೇಕೇ?’. ನಮ್ಮ ಹಳೆಯ ಸ್ಕೂಟರ್ ಅಥವಾ ಕಾರಿನ ವಿಚಾರದಲ್ಲೂ ನಮಗೆ ಇಂತಹುದೇ ಪ್ರಶ್ನೆ ಎದುರಾಗುವ ಸಾಧ್ಯತೆ ಇದೆ. ಹಳತಾದ ಎಲ್ಲ ಭಾಗಗಳನ್ನು ಬದಲಾಯಿಸಿ, ಹೊಸ ಆಸನಗಳನ್ನು ಇರಿಸಿ, ಹೊಚ್ಚ ಹೊಸತಾಗಿ ಬಣ್ಣ ಬಳಿದ ಮೇಲೂ, ಅದು ನಿಮ್ಮ ಹಳೆಯ ಸ್ಕೂಟರ್ ಅಥವಾ ಕಾರಾಗಿಯೇ ಉಳಿಯುತ್ತ ದೆಯೇ? ಇದು ತತ್ತ್ವಶಾಸ್ತ್ರದ ಕ್ಲಿಷ್ಟ ಪ್ರಶ್ನೆ. ಈ ಪ್ರಶ್ನೆಯನ್ನು ಮನುಷ್ಯನ ದೇಹದ ವಿಚಾರಕ್ಕೆ ಎಳೆತಂದು, ಆನಂದ್ ಗಾಂಧಿಯವರು ಮಾಡಿರುವ ಈ ಸಿನಿಮಾ ಮೂರು ಅಂಕಗಳಲ್ಲಿ ಅನಾವರ ಣ ಗೊಳ್ಳುತ್ತದೆ. ಈ ಸಿನಿಮಾ ಮೂರು ಸ್ವತಂತ್ರ ವ್ಯಕ್ತಿಗಳ ಸುತ್ತ ಬೆಳೆಯುತ್ತಾ ಹೋಗಿ, ಕೊನೆಗೆ ಅವರನ್ನು ಒಗ್ಗೂಡಿಸುವ ಒಂದು ಆವರಣವನ್ನು ಸೃಷ್ಟಿ ಮಾಡುತ್ತದೆ. ಮೊದಲನೆಯ ವ್ಯಕ್ತಿ ಒಬ್ಬ ಅಂಧ ಛಾಯಾಚಿತ್ರಗಾತಿ, ಎರಡನೆಯ ವ್ಯಕ್ತಿ ಒಬ್ಬ ಜೈನ ಮುನಿ ಮತ್ತು ಮೂರನೆಯ ವ್ಯಕ್ತಿ ಒಬ್ಬ ವ್ಯಾಪಾರಿ.

ಅಂಧ ಛಾಯಾಚಿತ್ರಗಾತಿ ತನ್ನ ಸ್ಪರ್ಶ ಮತ್ತು ಶ್ರವಣ ಗ್ರಹಿಕೆ ಗಳಿಂದ ವಿಶಿಷ್ಟ ಚಿತ್ರಗಳನ್ನು ತೆಗೆಯುತ್ತಿರುತ್ತಾಳೆ. ಆದರೆ, ಕಾರ್ನಿಯಾ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆಯಿಂದಾಗಿ ಆಕೆ ಬೆಳಕು ಕಂಡ ಮೇಲೆ ಆಕೆಯ ಚಿತ್ರಗಳಲ್ಲಿ ಆ ಜಾದೂ ಮಾಯವಾದಂತೆ ಗೋಚರಿಸುತ್ತದೆ. ಶಸ್ತ್ರಚಿಕಿತ್ಸೆಯ ನಂತರ ತಾನು ತಾನಾಗಿಯೇ ಉಳಿದೆನೇ ಎಂಬ ಪ್ರಶ್ನೆ ಆಕೆಗೆ ಬರುತ್ತದೆ. ಹಾಗೆಯೇ, ಪಿತ್ತಜನ ಕಾಂಗದ ಬಾಧೆಯಿಂದ ಬಳಲುತ್ತಿರುವ ಜೈನ ಮುನಿಯೊಬ್ಬ, ಊಟ, ನೀರು ಬಿಟ್ಟು ತನ್ನ ಧರ್ಮದ ಸಲ್ಲೇಖನ ವ್ರತವನ್ನು ಸ್ವೀಕರಿಸುತ್ತಾನೆ. ಆದರೆ, ಒಬ್ಬ ಬುದ್ಧಿವಂತ ಯುವ ವಕೀಲನ ಚಾರ್ವಾಕ ವಾಗ್ವಾದಗಳಿಗೆ ಮಣಿದು ಬೇರೊಂದು ಪಿತ್ತಜನಕಾಂಗ ಅಳವಡಿಸಿಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾನೆ. ಬೇರೊಬ್ಬರ ಪಿತ್ತಜನಕಾಂಗವನ್ನು ಸ್ವೀಕರಿಸಿದ ಅವನು, ತಾನಾಗಿಯೇ ಉಳಿದನೇ ಅಥವಾ ಬೇರೆಯವರ ಒಂದಂಶ ಮೈಗೂಡಿಸಿಕೊಂಡು ಬೇರೆಯಾ ದನೇ? ಮೂರನೆಯ ವ್ಯಕ್ತಿ, ಒಬ್ಬ ವ್ಯಾಪಾರಿಯ ವಿಚಾರದಲ್ಲೂ ಇದೇ ತರ್ಕವನ್ನು ಸಿನಿಮಾ ಮುಂದುವರಿಸುತ್ತದೆ. ಆತ ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿರುತ್ತಾನೆ. ಬೇರೊಬ್ಬರ ಮೂತ್ರಪಿಂಡವನ್ನು ಪಡೆದು ಕಸಿ ಮಾಡಿಸಿಕೊಳ್ಳುತ್ತಾನೆ. ಇದರಿಂದ ಅವನ ಆರೋಗ್ಯ ಮಾತ್ರ ಸುಧಾರಿಸಿತೇ ಅಥವಾ ಅವನ ಗುಣವೂ, ಸ್ವಭಾವವೂ ಬದಲಾಯಿತೇ ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ.
ಸಿನಿಮಾದ ಕಥಾನಕವನ್ನು, ನಿರೂಪಣೆಯನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ವ್ಯಕ್ತಿಗಳು ಬದಲಾದರು ಎಂಬ ಸಂದೇಶವನ್ನು ಅದು ಹೊರಡಿಸುತ್ತದೆ. ಹಾಗೆ ಮಾಡುವುದರ ಮೂಲಕ ಅದು ಥೀಸಿಯಸ್‌ನ ವಿರೋಧಾಭಾಸವನ್ನು ಬಿಡಿಸಲು ಪ್ರಯತ್ನಿಸುತ್ತದೆ ಮತ್ತು ಶತಮಾನಗಳ ತತ್ತ್ವಶಾಸ್ತ್ರದ ಕ್ಲಿಷ್ಟ ಪ್ರಶ್ನೆಗೆ ಉತ್ತರ ಕೊಡುವ ಹವಣಿಕೆಯನ್ನು ತೋರಿಸುತ್ತದೆ. ಹೀಗೆ ಒಂದು ವಿರೋಧಾಭಾಸವನ್ನು ಬಿಡಿಸುವುದು ಮತ್ತು ಉತ್ತರ ಕಂಡು ಕೊಳ್ಳುವುದು ಸರಿಯೋ, ತಪ್ಪೋ ಎಂಬ ನಿರ್ಧಾ ರಕ್ಕೆ ಬರಲು ನಾನು ಇಷ್ಟಪಡುವು ದಿಲ್ಲ. ಆದರೆ, ಒಂದು ಕಲಾಕೃತಿ (ಇಲ್ಲಿ ಸಿನಿಮಾ) ಅರ್ಥದ ಬೆನ್ನು ಬಿಳುವುದು, ಉತ್ತ ರದ ಸ್ಪಷ್ಟ ಕುರುಹುಗಳಿಗಾಗಿ ಹಠ ತೊಡು ವುದು ನನಗೆ ಅಷ್ಟಾಗಿ ಸಂತಸ ತರುವುದಿಲ್ಲ. ಇದು ಅರ್ಥದ ಭಾರವನ್ನು ಹೊತ್ತ ಸಿನಿಮಾ. ಈ ಭಾರ ಯಾವುದೇ ಕಲಾಕೃತಿಯು ಓದುಗನ ಮನಸ್ಸಿನಲ್ಲಿ ಉಂಟುಮಾಡುವ ಸಹಜ ಜಿಗಿತವನ್ನು, ಹೊಳಹನ್ನು ಕುಗ್ಗಿಸುತ್ತದೆ.
ಈ ಸಿನಿಮಾವನ್ನು ನೋಡಿ ಬಂದ ಮರು ಗಳಿಗೆಯೇ ಈ ಅರ್ಥದ ಭಾರವನ್ನು ನನ್ನ ಮನಸ್ಸಿನಲ್ಲಿ ಇಳಿಸಲು ನಾನು ಸತ್ಯಜಿತ್ ರೇ ಅವರ ‘ತೀನ್ ಕನ್ಯಾ’ (ರವೀಂದ್ರನಾಥ್ ಠಾಕೂರರ ಮೂರು ಕಥೆಗಳನ್ನು ಆಧರಿಸಿದ ಸಂಗಮ) ನೋಡಿದೆ. ‘ಪೋಸ್ಟ್ ಮಾಸ್ಟರ್’ ಎಂಬ ಮೊದಲ ಕಥೆಯಲ್ಲಿ ಬರುವ ಆ ಪುಟ್ಟ ಹುಡುಗಿಯ ಓಡಾಟ, ಅವಳ ಹಾದಿಯ ಹಾಡಿನ ಗುನುಗು, ಅವಳ ಕಾಳಜಿ, ನಿರಾಶೆ, ಉತ್ಸಾಹ ಮನಸ್ಸನ್ನು ಹಗುರ ಮಾಡಿತು. ರೇ ಅವರ ಇತರ ಕಲಾಕೃತಿಗಳನ್ನು ನೆನಪಿಗೆ ತಂದಿತು.

ಬಹುಶಃ , ಎರಡು ರೀತಿಯ ಕಲಾಕತಿಗಳು ಅಥವಾ ಎರಡು ರೀತಿಯ ಅರ್ಥಗ್ರಹಿಕೆಗಳು ನಮ್ಮ ಮುಂದೆ ಇರುತ್ತವೆ. ಒಂದು ಬಗೆಯ ಕಲಾಕತಿ ಅರ್ಥದ ಒಡ್ಡನ್ನು ಕಟ್ಟಿ ‘ಇದರ ಅರ್ಥ ಇದೇ’ ಎಂಬ ರೀತಿಯಲ್ಲಿ ನಿಮ್ಮ ಮುಂದೆ ಪ್ರಸ್ತುತಗೊಳ್ಳುತ್ತದೆ. ಕಲಾವಿದನ ಕೌಶಲ್ಯ ಹೆಚ್ಚಿದ್ದ ಸಂದರ್ಭದಲ್ಲಿ ಅವನು ಅರ್ಥವನ್ನು ನಿಮ್ಮ ಮೇಲೆ ಹೇರುವುದಿಲ್ಲ. ಆದರೆ, ಅವನು ತಿಳಿದ ಅರ್ಥದ ಗರ್ಭಕ್ಕೆ ನಿಮ್ಮನ್ನು ಕರೆದೊಯ್ಯುವ ಹಾದಿಗಳನ್ನು ಸುಗಮವಾಗಿರಿಸುತ್ತಾನೆ. ಬೇರೆಲ್ಲ ಹಾದಿಗಳು ಕಲ್ಲು-ಮುಳ್ಳುಗಳಿಂದ ಕೂಡಿವೆ ಎಂದು ಸೂಚಿಸುತ್ತಿರು ತ್ತಾನೆ. ಓದುಗ ಅಥವಾ ನೋಡುಗ ಸುಲಭದ ಹಾದಿಯನ್ನೇ ಹೆಚ್ಚಾಗಿ ಹಿಡಿಯುತ್ತಾನೆ.
ಮತ್ತೊಂದು ರೀತಿಯ ಕಲಾಕೃತಿಯಲ್ಲಿ ಓದುಗನಿಗೆ ಸಾಗಬೇಕಾದ ಮಾರ್ಗದ ಪೂರ್ವ ಸೂಚನೆಗಳು ಇರುವುದಿಲ್ಲ. ಕಲಾಕೃತಿ ಬೆಳೆಯುತ್ತಾ, ಬೆಳೆಯುತ್ತಾ, ಅರ್ಥ ತಾನೇ ಹಾದಿ ಮಾಡಿಕೊಳ್ಳು ತ್ತದೆ. ಇಲ್ಲಿ ಓದುಗ ಮತ್ತು ಕಲಾವಿದ ತಮ್ಮ ತಮ್ಮ ಅನುಭವಾನುಸಾರ ಅರ್ಥವನ್ನು ಕಟ್ಟುತ್ತಿರುತ್ತಾರೆ ಅಥವಾ ಬೆಳೆಸುತ್ತಿರುತ್ತಾರೆ. ನಿಮ್ಮೊಂದಿಗೆ ಈ ಒಡನಾಟವನ್ನು ಆ ಕಲಾಕೃತಿ ಸದಾ ಇರಿಸಿಕೊಳ್ಳು ವುದರಿಂದ ಅದು ಅನಂತ ಕಾಲವಲ್ಲದಿದ್ದರೂ, ಕೊಂಚ ಹೆಚ್ಚು ಕಾಲ ನಮ್ಮ ನಡುವೆ ಇರುತ್ತದೆ. ಮೂರು, ನಾಲ್ಕು ತಲೆಮಾರುಗಳಾದರೂ ಅದು ನಮ್ಮನ್ನು ಕಾಡುವ ವಸ್ತುವಾಗಿರುತ್ತದೆ.
‘ಶಿಪ್ ಆಫ್ ಥೀಸಿಯಸ್’ ಸಿನಿಮಾ ಒಂದು ಕಲಾಕೃತಿ ಮತ್ತು ಅದರ ಅರ್ಥ ನಿರ್ವಹಣೆಯ ವಿಚಾರದಲ್ಲಿ ಸೋತಿದ್ದರೂ, ಗ್ರೀಕ್ ಥೀಸಿಯಸ್‌ನ ವಿರೋಧಾಭಾಸವನ್ನೂ, ಪುರಾಣವನ್ನೂ ನಮ್ಮ ಇಂದಿನ ಬದುಕಿನ ಸಂದರ್ಭಕ್ಕೆ ಎಳೆತರುವ ಧೈರ್ಯ ಮಾಡುತ್ತದೆ. ಥೀಸಿಯಸ್‌ನ ಪುರಾಣವನ್ನು ನಮ್ಮ ಸಮಕಾಲೀನ ಚರಿತ್ರೆ, ಗ್ರಹಿಕೆ ಮತ್ತು ಅಸ್ತಿತ್ವಕ್ಕೆ ವಿಸ್ತರಿಸಿದರೆ ಅನೇಕ ವಿಸ್ಮಯಕಾರಿ ಹೊಳಹುಗಳು, ಹೊಳಹುಗಳಿಗಿಂತಲೂ ಪ್ರಶ್ನೆಗಳು ನಮ್ಮ ಮುಂದೆ ಸುಳಿಯುತ್ತವೆ. ದೇಶವೊಂದು ಅಸ್ತಿತ್ವಕ್ಕೆ ಬಂದು ಹತ್ತಾರು, ನೂರಾರು ವರ್ಷಗಳ ನಂತರ, ಹಲವಾರು ತಲೆಮಾರುಗಳ ನಂತರ ಅದು ಬದಲಾಗುತ್ತಾ ಬರುತ್ತದೆ. ಅದರ ಮೂಲ ಸ್ವರೂಪದಿಂದ, ಮೂಲ ಆಶಯದಿಂದ ದೂರ ಸಾಗಿರುತ್ತದೆ. ಹಾಗಾದರೆ, ನಮ್ಮ ಕಲ್ಪನೆಯ ದೇಶ ಇದೇ ಎಂದು ಹೇಳಲು ಸಾಧ್ಯವೇ? ಬದಲಾಗುತ್ತಿ ರುವ ‘ಭಾರತ’ ಎಂಬ ಕಲ್ಪನೆ, ‘ಇಂಡಿಯಾ’ ಎಂಬ ಕಲ್ಪನೆ ಮತ್ತು ಹತ್ತು ಹಲವು ಗುಂಪು ಗ ಳಿಗೆ, ಸಮುದಾಯಗಳಿಗೆ ಇದು ಭಿನ್ನ ಭಿನ್ನವಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಥೀಸಿಯಸ್‌ನ ವಿರೋಧಾ ಭಾಸ ಮುಂದಾಗುತ್ತದೆ. ಹಲವು ಸಂದರ್ಭ ಗಳಲ್ಲಿ ಯಾವುದು ನಿಜವಾದ ಭಾರತ ಎಂದು ನಾವು ಹೇಳುವುದು ಕಷ್ಟ ವಾಗುತ್ತದೆ. ಈ ಭಿನ್ನ ಗ್ರಹಿಕೆಗಳು ಇರುವು ದ ರಿಂದಲೇ ಅರ್ಥದ ಮತ್ತು ವಿಶ್ಲೇಷ ಣೆಯ ಭಿನ್ನಮತ ಸದಾ ಇದ್ದೇ ಇರುತ್ತದೆ. ನಮ್ಮ ಇಂದಿನ ಎಲ್ಲ ರಾಜಕೀಯ ಸಂಘರ್ಷಗಳಿಗೂ ಇದು ಮೂಲ.
ಅರ್ಥವನ್ನು ಗಂಭೀರವಾಗಿ ತೆಗೆದುಕೊಂಡರೆ ಬಹಳ ಸಮಸ್ಯೆ ಗಳಾಗುತ್ತವೆ. ಇದರರ್ಥ, ಅರ್ಥವನ್ನು ಬಿಟ್ಟು ಅನರ್ಥವನ್ನು ಅಪ್ಪಿಕೊಳ್ಳಬೇಕೆಂದಲ್ಲ. ಅರ್ಥದ ಹಲವು ಮುಖಗಳನ್ನು, ಮಗ್ಗುಲುಗಳನ್ನು ಅರಿಯಬೇಕು ಎಂಬುದಷ್ಟೆ. ಈ ಕಾರಣ ಕ್ಕಾ ಗಿಯೇ ಕುವೆಂಪು ಅವರ ‘ಪಕ್ಷಿಕಾಶಿ’ ಸಂಕಲನದಲ್ಲಿರುವ ‘ಗಗನ ಗುರು’ ಪದ್ಯದ ಈ ಸಾಲುಗಳು ನನಗೆ ಬಹಳ ಇಷ್ಟ:
ಮಾತಿಗೊಂದು ಅರ್ಥವೇಕೇ?
ಅರ್ಥವಿದ್ದರರ್ಥ ಸಾಕೆ?
ಮೋಡಗಳನು ನೋಡಿ ಕಲಿ;
ಅರ್ಥ ಅಲ್ಪ ಎಂದು ತಿಳಿ!
ಮಾತು ಅರ್ಥ ಎರಡೂ ವ್ಯರ್ಥ ಸ್ವ-ಅರ್ಥವಿರದಿರೆ!
ನೋಡುತಿರೆಯಿರೆ,
ದೂರವಾಗುತರ್ಥಗಿರ್ಥವೆಂಬ ವ್ಯಾಧಿಗೆ
ಸಯ್ತೆನಾಂ ಸಮಾಧಿಗೆ:
ತಟ್ಟಿಚ್ಚರಣದಗ್ನಿ ಹಂಸಕೃಪಾಂಭೋಧಿಗೆ!
ಅರ್ಥಕ್ಕೂ ಒಂದು ಸಂದರ್ಭ, ಸಂದರ್ಭದ ಜೊತೆಜೊತೆಗೆ ಒಂದು ಸಾಮಾಜಿಕ ಪರಿಸರವೂ ಇರುತ್ತದೆ. ಈ ಸಂದರ್ಭ ಮತ್ತು ಪರಿಸರದ ಹೊರಗೆ ಅದು ಅನರ್ಥ. ಹೀಗೆ ನೋಡಿದಾಗ ಅರ್ಥ ಒಂದು ರೂಪಕ ಮಾತ್ರ.

ವಿಜಯ ಕರ್ನಾಟಕದಲ್ಲಿ ಪ್ರಕಟಿತ

‍ಲೇಖಕರು G

September 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. narayanaswamy kempaiah

    Sugatha avare, jagattu niranthara badalavanege olpaduvudarind hagu nive helida hage vyaktiyinda VYAKTIGE artha ennvudu kuda sandrbhikavagi badalaguttale iruttadennvudu ella anubhavakke bandirabahudada vishaya. neevu vimarshakana patravannu illi vahisiddeeri ashte.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: