ಮೋಡಗಳ ಸಾಮ್ರಾಜ್ಯ ಆಳಿ ಬಂದೆ!..

ವಿಮಾನಯಾನದ ಮೊದಲ ಅನುಭವ ಹಾಡಾಗಿದ್ದು ಹೀಗೆ..

ಯಮುನಾ ಗಾಂವ್ಕರ್

ನನ್ನ ಯಾನದಲ್ಲಿ ಮೋಡಗಳ ಸಾಮ್ರಾಜ್ಯ ಆಳಿ ಬಂದೆ!
ಹೇಗೆಂದರೆ. . . ..
ಯಾವಾಗಲೂ ನನಗಿಂತ ಮೇಲೆ ಹಾರುವುದು
ನನ್ನ ಮನಸ್ಸೇ!
ಮನದ ಯಾನ ಭಾವಯಾನ
ಜಗದಗಲ ಕಾಂಬ ಬಯಕೆಯ ಕಟ್ಟೆ ಒಡೆದ ನನಸು
ಆಕಾಶದ ಉಯ್ಯಾಲೆಯಾಟಕ್ಕೆ ಮುನ್ನುಡಿಯ ಕನ್ನಡಿ

ಭೂಲೋಕದ ಮನೆಗಳೆಲ್ಲ ಮಾಯ
ಭುಮ್ಯಾಕಾಶದ ಸೇತುಬಂಧವೀ ಯಾನ
ಎತ್ತರೆತ್ತರ ಊಹಿಸದ ಎತ್ತರಕೆ ಹಾರಿ
ಅಲ್ಲೇ ನಿಂತಂತಿತ್ತು ತುಸು ಸಮಯ!
ನನ್ನ ಸ್ವಗತ-
‘ಆ ಬೆಳ್ಳಿ ಉಂಡೆಗೆ ಅಲ್ಲಲ್ಲಿ ಕಪ್ಪು ಬಡಿದವರಾರು?
ಕಪ್ಪುಮೋಡಗಳ ಮಧ್ಯೆ ನೀಲಿ ಪಟ್ಟಿ ಕಟ್ಟಿದವರಾರು?
ಈ ಬಣ್ಣಗಳಾಟದ ಕಾಮನ ಬಿಲ್ಲು ಹೇಗೆ ಕಟ್ಟಿತು?
ಪ್ರಶ್ನೆ ಹುಟ್ಟವುದರೊಳಗೆ ತಿಳಿನೀಲಿ, ಹಸಿರ ಮಧ್ಯೆ ಕೆಂಪು ಹಿಡಿಸಿದವರಾರು?’
ಅಲ್ಲಿ ಆಕಾಶ ಮೋಡ ಬಿತ್ತಿತ್ತು; ಹತ್ತಿ ಬಿಡಿಸಿದಂತಿತ್ತು.
ಜಗದಗಲ ಬೆಳೆದ ಹತ್ತಿಗದ್ದೆ ಇಲ್ಲೆ ಖರ್ಚಾಗಿತ್ತು
ಹೊದಿಕೆ ಹೊದ್ದ ಭೂಮಿಯ ಕಿವಿಗೆ ಸಪ್ಪಳ ಅಪ್ಪಳಿಸದಂತೆ
‘ಹತ್ತಿ ಎಸಳು ಹಾಕಿಕೋ’ ಎಂದು
ಊಫ್ ಅಂತ ಹಾರಿ ಬರುತ್ತಿದೆ. . ..
ಎರೆಹುಳುವಿನಂತೆ ಕಂಡ ರಸ್ತೆಗಳು, ನದಿಗಳು. .
ಇದು ಅತ್ಯದ್ಭುತ ಸೌಂದರ್ಯದ ಸೌಂದರ್ಯ!
ಅಲ್ಲಿ, ಸಾಗಿಬಂದ ದಾರಿಗೆ ಮೈಲಿಕಲ್ಲು ನೆಟ್ಟಿರಲಿಲ್ಲ
ಹಿಂತಿರುಗಿದೆ, ನಾನಲ್ಲೇ ನಿಂತಂತೆನಿಸಿತು.
ಆದರೆ ಸೂರ್ಯ ಬಿಟ್ಟಿರಲಿಲ್ಲ,
ಸುನೇರಿ ರಂಗನ್ನು ಮೋಡದ ಗುಡ್ಡೆಗೆ ಬಡಿದಿದ್ದ
ಅದರಾಚೆ ಆಕಾಶ, ಬ್ರಷ್ ಹಿಡಿದು ‘ವಾಟರ್ ಕಲರ್, ಒಯ್ಲ ಪೇಂಟ್’ ಶುರುಮಾಡಿತ್ತು.
ಮೋಡಗಳ ಗುಡ್ಡೆ ಖಾಲಿಯಾಗದಂತೆ
ಮತ್ತೊಂದು ಗುಡ್ಡೆ ಕಳಿಸುತ್ತಿದೆ ತನ್ನ ಊರಾಚೆ!
ಪಶ್ಚಿಮದ ಸೂರ್ಯನಿಗೆ ಮೈಯೊಡ್ಡಿದ ರಾಶಿಮೋಡ
ಪೂರ್ವಕ್ಕೆ ತನ್ನ ನೆರಳ ಸಾಗಿಸಿತ್ತು
ಆನೆರಳ ಮೇಲೆ ನಾನಿದ್ದೆ
ನನ್ನ ಮೇಲೆ ಮತ್ತೊಂದು ಮೋಡಗಳ ಸಾಮ್ರಾಜ್ಯವಿತ್ತು!
ಮೋಡಗಳ ಪರ್ವತ ರಾಶಿರಾಶಿ
ಇದರ ಕೆಳಗೇನಿರಬಹುದು ಯೋಚಿಸುತ್ತಿದ್ದೆ. ಥಟ್ಟನೆ ನೆನಪಾಯ್ತು
ಅಲ್ಲಿಂದಲೇ ನಾನು ಬಂದೆ ಎಂದು.
2 ತಾಸು ಮೋಡಗಳ ಸಾಮ್ರಾಜ್ಯ ಆಳಿ ಬಂದೆ!
ಮೋಡಗಳ ಮೇಲ್ಮೈಲಿ ನಾನುಳಿದೆ
ಇನ್ನೂ ಉಳಿದರೆ ನಾನಳಿವೆ!
ಮೋಡಗಳ ತೆರೆಗಳಪ್ಪಳಿಸಿತು
ಅದನ್ನು ಛೇದಿಸಿದ ಈ ಮಾಯಾವಿ(ಮಾನ)
ಪಿಚಕಾರಿಯಲ್ಲಿ ಹಾಲು ಸಿಂಪಡಿಸಿತ್ತು
ಮರ ಹತ್ತಿ
ಗದ್ದೆ ನೆಟ್ಟಿ ಹಾಕುವವರನ್ನು ಕಂಡರೆ ಹೇಗಾಗುತ್ತದೆ?
ಹಾಗನಿಸಿತ್ತು ಇಲ್ಲಿಯ ನೆಟ್ಟಿ ಹಾಕಿದ ಮೋಡ
ಮತ್ತೆ ಮೇಲಕ್ಕೆ ಹೋಗಿ ನೋಡಿದರೆ
ಬಿಳಿಕುರಿಗಳು -ಹಿಮ ಕರಡಿಗಳು
ಹಿಂಡಿನಲ್ಲಿ ಹೋದಂತೆ ಕಂಡಿತು ಅಲ್ಲಲ್ಲಿ
ದಂಡೆಯಲಿ ನಿಂತವರಿಗೆ ಸಮುದ್ರ ತುದಿಯಲ್ಲಿ ಆಕಾಶ ಸಂಧಿಸಿದಂತೆ
ಮೋಡಗಳ ಬೆಟ್ಟ ಆಕಾಶದ ತುದಿ ಸಂಧಿಸಿತ್ತು
ಕಪ್ಪು-ಬಿಳಿ-ನೀಲಿ-ಕೆಂಪು ಮೋಡಗಳ ಸಮುದ್ರ
ಸಂಧಿಸಿದ್ದು ಎಲ್ಲ ಬಣ್ಣಗಳ ಅಂಚನ್ನು
ಆ ಬಣ್ಣಗಳ ಅಂಚಿನ ಸೀರೆಯನ್ನೇ
ನನ್ನಬ್ಬೆಗೆ ಕೊಡಿಸಬೇಕಿತ್ತು!
ಅಷ್ಟು ಚೆಂದ!
(ಯಾರಾದರೂ ಓದಿದವರು ಇದನ್ನು ಕವನವಾಗಿಸಿ ಕೊಡಿ!
ಯಮುನಾ ಗಾಂವ್ಕರ್, ದೆಹಲಿಯಿಂದ. . . )

‍ಲೇಖಕರು G

September 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. ಹನುಮಂತ ಹಾಲಿಗೇರಿ

    ಹೀಗೆಲ್ಲ ನಿಮಗೆ ನೀವೇ ತಿರ್ಮಾನಕ್ಕೆ ಬರಬೇಡಿ ಮೇಡಂ, ಈ ಕವನಯಾನ ಮುಗಿಲ ಚುಂಬಿಸುವಂತಿದೆ. ಅರ್ಥವಾಗುವ ಕವನಗಳನ್ನು ಬರೆಯಬೇಕಿದೆ. ಇದು ಅರ್ಥವಾಗುತ್ತೆ ಅಷ್ಟೆ ಸಾಕು.

    ಪ್ರತಿಕ್ರಿಯೆ
    • Anonymous

      ಧನ್ಯವಾದಗಳು, ಇಂದು ನಿಮ್ಮ ಕಮೆಂಟ್ ಓದಿದೆ.

      ಪ್ರತಿಕ್ರಿಯೆ
    • Anonymous

      ಕವಿ ರವೀಂದ್ರನಾಥರು ವಿಮಾನದಲ್ಲಿ ಹೋದಾಗ ಕವನ ಬರೆದಿದ್ರಂತೆ. ಸಿಕ್ಕರೆ ಕೊಡಿ, ಓದಬೇಕು.

      ಪ್ರತಿಕ್ರಿಯೆ
  2. ಗುರುಶಾಂತ್ ಎಸ್.ವೈ

    ಕಪ್ಪು-ಬಿಳಿ-ನೀಲಿ-ಕೆಂಪು ಮೋಡಗಳ ಸಮುದ್ರ
    ಸಂಧಿಸಿದ್ದು ಎಲ್ಲ ಬಣ್ಣಗಳ ಅಂಚನ್ನು
    ಆ ಬಣ್ಣಗಳ ಅಂಚಿನ ಸೀರೆಯನ್ನೇ
    ನನ್ನಬ್ಬೆಗೆ ಕೊಡಿಸಬೇಕಿತ್ತು!
    ಅಷ್ಟು ಚೆಂದ!
    -ಸಾಕಿಷ್ಟು ಸಾಲುಗಳು ನಿಮ್ಮ ಕವಿತಾಶಕ್ತಿ ಸಾರಲು

    ಪ್ರತಿಕ್ರಿಯೆ
    • Anonymous

      ನಿಮ್ಮ ಅಭಿಪ್ರಾಯ ಇಷ್ಟು ದಿನ ಓದಿರಲಿಲ್ಲ. ಅವಧಿಯಲ್ಲಿ ಹಾಕಿದ್ದಾರೆಂದು ಕೇಳಿದ್ದೆ. ಅವರಿಗೂ, ನಿಮಗೂ ಧನ್ಯವಾದ!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: