ಸುಂದರಿಗಿದ್ದ ಶಾಪ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ಮಾವಲಿ ರಿಟರ್ನ್ಸ್ನಲ್ಲಿ ಅವರುಂಟು ನೀವುಂಟು.

ರಾಜಾ ಬಹುಪತ್ನೀವಲ್ಲಭ’ ಎಂಬ ಮಾತನ್ನು ಹುಸಿಗೊಳಿಸಿದ ರಾಜರು ತೀರ ವಿರಳ. ಈ ರಾಜನೂ ವಿರಳರ ಗುಂಪಿಗೆ ಸೇರದೆ ಸರಳರ ಗುಂಪನ್ನೇ ಸೇರಿದ ರಾಜನಾಗಿದ್ದ. ವಿಹಾರಕ್ಕೆ ಹೋದಾಗಲೋ, ಯದ್ಧಕ್ಕೆ ಹೋದಾಗಲೋ ,ಭೇಟೆಯಾಡಲು ಹೋದಾಗಲೋ ಸುಂದರ ಹೆಣ್ಣೊಂದು ಕಣ್ಣಿಗೆ ಬಿದ್ದರೆ ಆಯ್ತು, ಅವಳನ್ನು ತನ್ನ ಅರಮನೆಗೆ ಕರೆತರುವುದು ಸಾಮಾನ್ಯ ಸಂಗತಿಯಾಗಿತ್ತು.

ಹಾಗೆ ಕರೆತಂದವರಲ್ಲಿ ಎಲ್ಲರಿಗೂ ರಾಣಿ ವಾಸದ ಸವಲತ್ತುಗಳೇನು ಸಿಗುತ್ತಿರಲಿಲ್ಲ. ಕ್ಷಣದ ಮೋಹಕ್ಕೆ ಸಿಕ್ಕು ತೊತ್ತಾಗಿ ಜೀವನ ನಡೆಸಬೇಕಾದ ಸ್ಥಿತಿ ಹಲವಾರು ಹೆಣ್ಣುಗಳದ್ದಾದರೂ ಆ ಒಬ್ಬಳು ‘ಸುಂದರಿ’ ಮಾತ್ರ ವಿಶೇಷ ಸ್ಥಾನಮಾನ ಪಡೆದಿದ್ದಳು. ಅದಕ್ಕೆ ಕಾರಣ ಅವಳ ಅಪ್ರತಿಮ ಸೌಂದರ್ಯ ಮಾತ್ರವಲ್ಲ ಅವಳಿಗಿದ್ದ ಶಾಪವೂ ಆಗಿತ್ತು . 
                                                     
ಒಮ್ಮೆ ವಿಹಾರಕ್ಕೆಂದು ಹೋಗಿದ್ದಾಗ ಅವಳನ್ನು ನದಿ ದಡದಲ್ಲಿ ನೋಡಿದ ರಾಜ ಅವಳ ಅಪ್ರತಿಮ ಸೌಂದರ್ಯಕ್ಕೆ ಮನಸೋತು ಅವಳ ಹಿಂದುಮುಂದೆ ಏನನ್ನೂ ವಿಚಾರಿಸದೆ ತನ್ನೊಡನೆ ಕರೆತಂದ. ಸುಂದರವಾದದ್ದೆಲ್ಲ ರಾಜರ ಅನುಭೋಗೀ ಸರಕು ಎಂಬ ಅಲಿಖಿತ ನಿಯಮವೊಂದು ಜಾರಿಯಲ್ಲಿತ್ತೇನೋ ಅನ್ನುವಷ್ಟರಮಟ್ಟಿಗೆ ಸೌಂದರ್ಯೋಪಾಸಕನಾಗಿದ್ದ ಆ ರಾಜನಿಗೆ ಈ ಸುಂದರಿಯ ಮೇಲೆ ವಿಶೇಷವಾದ ಮೋಹ.

‌ಹಾಗಾಗಿಯೇ ಅವಳನ್ನು ಖಾಸಾ ವಾಸದ ಸವಲತ್ತುಗಳೊಂದಿಗೆ ಅರಮನೆಯಲ್ಲಿಟ್ಟಿದ್ದ. ಅವಳ ಆಗಮನದ ತರುವಾಯ ಹೆಚ್ಚಿನ ಸಮಯವನ್ನು ಅವಳ ಸಹವಾಸದಲ್ಲಿಯೇ ಕಳೆಯುತ್ತಿದ್ದ. ಇದು ಸಹಜವಾಗಿ ರಾಜನ ಪಟ್ಟದರಾಣಿಯ ಮನೋವ್ಯಾಕುಲತೆಗೆ ಕಾರಣವಾಯಿತು. ಹೊಸದಾಗಿ ಖರೀದಿಸಿದ ಬಟ್ಟೆಯನ್ನು ಪದೇ ಪದೇ ತೊಡುವಂತೆ ಈ ಹೊಸ ಹೆಣ್ಣಿನ ಆಕರ್ಷಣೆಯಿಂದಾಗಿ ಅವಳ ಮಗ್ಗಲು ಬಿಟ್ಟು ಹೊರಬರುತ್ತಿರಲಿಲ್ಲ ಆ ರಾಜ.

ಇದರಿಂದ ನೊಂದ ಪಟ್ಟದರಾಣಿ ಒಮ್ಮೆ ರಾಜನನ್ನು ತಡೆದು ಕೇಳಿದಳು ; ‘ ನನ್ನ ನೆನಪಿದೆಯೆ ನಿಮಗೆ ? ‘ ಅದಕ್ಕಾತ ಹೇಳಿದ , ‘ ಪಟ್ಟದರಾಣಿಯನ್ನು ಯಾವ ರಾಜನಾದರೂ ಮರೆಯುತ್ತಾನೆಯೆ ? ‘ ‘ಮರೆತಿಲ್ಲ ಎನ್ನುವುದು ಖುಷಿ ಪಡುವ ವಿಷಯವೇನೋ ಸರಿ. ಆದರೆ ನೆನಪಿಸಿಕೊಳ್ಳುತ್ತಿಲ್ಲ ಎಂಬುದು ದುಃಖ ತರಿಸುವ ವಿಷಯವಲ್ಲವೆ ?’ ರಾಜನ ಬಳಿ ಉತ್ತರವಿರಲಿಲ್ಲ…ಏನೋ ಯೋಚಿಸಿ ಹೇಳಿದ ,

‘ರಾಜನಾದವನಿಗಿರುವ ಕರ್ತವ್ಯ ಮತ್ತು ಜವಾಬ್ದಾರಿಗಳ ಹೊರೆ ಎಂಥದ್ದು ಎಂಬುದು ನಿನಗೆ ತಿಳಿಯದೆ ಮಹಾರಾಣಿ ?’ ‘ ತಿಳಿದಿದೆ ಮಹಾಸ್ವಾಮಿ.‌ ಕರ್ತವ್ಯಗಳ ಹೊರೆ ಹೆಚ್ಚಾಗಿ‌ ರಾಣಿಯ ಹತ್ತಿರವೂ ಬರಲಾಗದಷ್ಟು ಸಮಯದ ಬರ ನಿಮಗೆ ಎದುರಾಗಿದೆ ಅಂದ ಹಾಗಾಯಿತು ಅಲ್ಲವೆ ?’  ‘ ನಿಮ್ಮ ಯೋಚನೆಗಳನ್ನು ಹೇಗಾದರೂ ಹರಿಬಿಡಲು ನೀವು ಸ್ವತಂತ್ರರು’ ಎಂದ ರಾಜ ತನ್ನ ಅಸಹನೆಯನ್ನು ತೋರಿಸಿದ. 

‘ಸ್ವತಂತ್ರ ? ರಾಣಿವಾಸದ ಸವಲತ್ತುಗಳ ಸಂಭ್ರಮದಲ್ಲಿಯೇ ಮುಗಿದು ಹೋಗುತ್ತದೆ ನಮ್ಮ ಸ್ವತಂತ್ರ ‘  ‘ ಈಗ ನನ್ನಿಂದೇನು ಆಗಬೇಕು ?’ ದೃಢವಾಗಿ ಪ್ರಶ್ನಿಸಿದ ರಾಜ. 
‘ನನ್ನ ಅಃತಪುರದೆಡೆಗೆ ತಮ್ಮ ಹೆಜ್ಜೆಮೂಡಲು ಇನ್ನೆಷ್ಟು‌ ದಿನಗಳು ಕಾಯಬೇಕು ? ನನಗೆ ನಿಖರ ಉತ್ತರ ಬೇಕು’

‘ಯಾವಾಗ ಎತ್ತ ಹೆಜ್ಜೆ ಹರಿಬಿಡಬೇಕೆಂಬುದು ರಾಜರಿಗೆ ತಿಳಿದಿದೆ. ತಮ್ಮ ಕುಂದು ಕೊರತೆಗಳೇನಾದರೂ ಇದ್ದರೆ ಹೇಳಿಕೊಳ್ಳಬಹುದು ‘ 
‘ತಮ್ಮ ಕೃಪೆಯಲ್ಲಿ ಕೊರತೆ ಎಲ್ಲಿಂದ ಬಂದೀತು ? ತಮ್ಮ‌ ಸನಿಹ ಸಿಕ್ಕು ಎಷ್ಟೋ ದಿನಗಳಾಯಿತು ಎಂಬುದೊಂದೇ ಕೊರತೆ . ಆ ಕೊರತೆಯನ್ನು ನೀವಲ್ಲದೆ ನಿಮ್ಮ ಅರಮನೆ ಮತ್ತದರ ಸವಲತ್ತುಗಳು ನೀಗಲಾರವು. ಯಾವಾಗ ನೀಗುವುದು ಆ ಕೊರತೆ ?’
‘ನಮಗೆ ಆ ಮನಸ್ಸು ಬಂದಾಗ ನಾವಾಗಿಯೇ ಬರುತ್ತೇವೆ’ ಎಂದು ಬಿರುಸಾಗಿ ಹೇಳಿದ ರಾಜ, ಅಲ್ಲಿಂದ ಹೊರಟು ಹೋದ’ 
                     
‘ಆ ಮನಸ್ಸು ಅವರಿಗೆ ಬರುವುದರ ಬಗ್ಗೆ ಸಂಶಯಪಟ್ಟ ರಾಣಿಗೆ ತನ್ನಿಂದ ಕೈ ತಪ್ಪಿ ಹೋದ ರಾಜನನ್ನು ಮರುವಶ ಮಾಡಿಕೊಳ್ಳಬೇಕೆಂದು ಹಠ ಹುಟ್ಟಿತು’  ಅಲ್ಲಿಯವರೆಗೂ ತನ್ನ ರಾಜನ ಬರುವಿಕೆಗೆ ಮಾತ್ರ ಕಾಯುತ್ತಿದ್ದ ಆಕೆಗೆ ಮೊದಲ ಬಾರಿ ಅವನನ್ನು ಹಾಗೆ ಕಟ್ಟಿ ಹಾಕಿರುವ ಹೆಣ್ಣಿನ ಮೇಲೆ ದ್ವೇಷ ಹುಟ್ಟಿತು. ಅವಳಿಂದ ಹೇಗಾದರೂ ಮಾಡಿ ರಾಜ ವಿಮುಖನಾಗುವಂತೆ ಮಾಡಬೇಕೆಂಬ ಕಾರಣಕ್ಕೆ ರಾಜಗುರುಗಳನ್ನು ಖಾಸಗಿಯಾಗಿ ಭೇಟಿ ಮಾಡಿ ತಾನೊಂದು ವಿಶಿಷ್ಟ ಶಾಪ ನೀಡುವಂಥ ವರವನ್ನು ಪಡೆಯಬೇಕೆಂದು ಹೇಳಿ ಅದಕ್ಕೇನು ಮಾಡಬೇಕೆಂದು ಸಲಹೆ ಪಡೆದಳು.

ಇಷ್ಟದೈವವನ್ನು ಒಲಿಸಿಕೊಳ್ಳುವ ಕಠಿಣ ತಪಸ್ಸಿನಲ್ಲಿ ಕೂತಳು. ತನ್ನ ದೀರ್ಘ ತಪಸ್ಸಿನ ಅವಧಿಯಲ್ಲೂ ತನ್ನ ಬಗ್ಗೆ ಒಮ್ಮೆಯೂ ವಿಚಾರಿಸದ ಮತ್ತು ಭೇಟಿ ಮಾಡದ ರಾಜನ ಬಗ್ಗೆ ನೆನೆದು ನೊಂದಕೊಂಡಳು. ಅವಳ ತಪಸ್ಸಿನ ಮುಕ್ತಾಯದ ಹಂತದಲ್ಲಿ ಇಷ್ಟದೈವದ ಕೃಪೆಯೂ ಅವಳ ಮೇಲಾಯಿತು ಮತ್ತು ಅವಳ ಇಚ್ಛೆಯಂತೆ ಒಂದು ಶಾಪ ನೀಡಬಹುದಾದ ವರವೂ ಅವಳಿಗೆ ಪ್ರಾಪ್ತಿಯಾಯಿತು. 

ಈ ವರವನ್ನು ಉಪಯೋಗಿಸಿಕೊಂಡ ಆಕೆ, ‘ಯಾವ ಹೆಣ್ಣಿನ ಸೌಂದರ್ಯದಿಂದಾಗಿ ರಾಜ ತನ್ನ ಕೈತಪ್ಪಿರುವನೋ ಆಕೆಯ ಸೌಂದರ್ಯವು ಹಗಲಿನಲ್ಲಿ ಸಂಪೂರ್ಣ ಮಾಯವಾಗಿ ಆಕೆ ವಿಕಾರವಾಗಿ ಕಾಣಿಸಿಕೊಳ್ಳಬೇಕೆಂದು ಮತ್ತೆ ರಾತ್ರಿಯಲ್ಲಿ ಆಕೆ ತನ್ನ ನೈಜ ಸೌಂದರ್ಯಕ್ಕೆ ಮರಳಬಹುದೆಂದು’ ಶಾಪವಿತ್ತಳು. ರಾತ್ರಿ ಹೊತ್ತು ಅವಳ ಸೌಂದರ್ಯದ ಅಡಿಯಾಳಾದ ರಾಜ ಬೆಳಿಗ್ಗೆ ಎದ್ದು ಅವಳ ವಿಕಾರತೆಯನ್ನು ಕಂಡು ಬೆಚ್ಚಿಹೋದ. ಅಸಹ್ಯಪಟ್ಟುಕೊಂಡ. ರಾತ್ರಿ ತಾನು ಬಳಸಿ , ರಮಿಸಿದ ಕೋಮಲ ದೇಹ ಇದೇನಾ ಎಂದು ನೆನೆದು ಕಳವಳಗೊಂಡ. ಆಕೆಯ ಬಳಿ ಅದನ್ನು ಹೇಳಿಕೊಂಡ.

ಆಕೆಯೂ ತನನ್ನು ನಿಲುವುಗನ್ನಡಿಯಲ್ಲಿ ನೋಡಿಕೊಂಡು ಜೋರಾಗಿ ಚೀರಿಕೊಂಡಳು. ಸುಕ್ಕುಗಟ್ಟಿದ ಮುಖ, ಬಾಯಿಂದ ಹೊರಗೆ ಚಾಚಿದ ಹಲ್ಲುಗಳು , ಕೆದರಿದ ಬಿಳಿ ಕೂದಲು, ಕತ್ತರಿಸದ ಉಗುರುಗಳು ಹೀಗೆ ವಿಕಾರವಾಗಿ ಕಾಣುತ್ತಿದ್ದ ಅವಳ ಬಗ್ಗೆ ಚಿಂತಿಸುತ್ತ ಕುಳಿತ ರಾಜನಿಗೆ ಕತ್ತಲಾಗುತ್ತಿದ್ದಂತೆ ಅವಳ ಸೌಂದರ್ಯ ಮರಳಿ ಬರುತ್ತಿರುವುದು ಕಾಣಿಸಿತು. ನಿಧಾನವಾಗಿ ತನ್ನ ಸಹಜ ಸೌಂದರ್ಯಕ್ಕೆ ಮರಳಿದ ಆಕೆ ಮೊದಲಿಗಿಂತಲೂ ತುಸು ಹೆಚ್ಚು ಕಂಗೊಳಿಸುತ್ತಿದ್ದಳು. ಈ ಬಗ್ಗೆ ರಾಜನಿಗೆ ಗೊಂದಲವಾಯಿತು.

ಇದು ಹೇಗೆ ಸಾಧ್ಯ ? ಎಂಬ ಅನುಮಾನ ಬಂತಾದರೂ ತನ್ನ ಜ್ಯೋತಿಷಿಗಳನ್ನಾಗಲೀ , ರಾಜಗುರುಗಳನ್ನಾಗಲೀ ಕರೆದು ಕೇಳಲಿಕ್ಕೆ ಹೋಗಲಿಲ್ಲ. ಅದೊಂದು ಹಗಲು ತನ್ನ ಜೀವನದಲ್ಲಿ ಬಂದೇ ಇರಲಿಲ್ಲ ಎಂಬಂತೆ ಭಾವಿಸಿದರಾಯ್ತು ಎಂದುಕೊಂಡ.  ಪ್ರತಿ ರಾತ್ರಿಯಂತೆ ಆ ರಾತ್ರಿಯನ್ನೂ ಕಳೆದ. ಬೆಳಗಾದರೆ ಮತ್ತೆ ಆಶ್ಚರ್ಯ ಕಾದಿತ್ತು. ತನ್ನ ಅಪ್ರತಿಮ ಸುಂದರಿ ವಿಕಾರವಾಗಿ ಹಾಸಿಗೆಯ ಮೇಲೆ ಮಲಗಿದ್ದನ್ನು ಕಂಡ ರಾಜ. ಆ ದಿನವೂ ಕೊಠಡಿಯಿಂದ ಹೊರ ಬರದೆ ಅವಳನ್ನು ನೋಡಿಕೊಂಡ. ಆನಂತರ ಅವನಿಗೆ ತಿಳಿಯಿತು ಇದು ನಿತ್ಯದ ಗೋಳಾಗಲಿದೆ ಎಂಬುದು.

ಅಂದಿನಿಂದ ರಾಜ ಆ ಕೊಠಡಿಯನ್ನು ಬಿಟ್ಟು ಹೊರಗೆ ಬರಲೇ ಇಲ್ಲ. ರಾತ್ರಿಯಾದರೆ ಸೌಂದರ್ಯೋಪಾಸಕನಾಗಿಯೂ, ಹಗಲಿನಲ್ಲಿ ಅವಳ ಚಾಕರಿ ಮಾಡುತ್ತ ಅವಳು ಒಂದು ಹೆಜ್ಜೆ ಹೊರಗಿಡದಂತೆ ನೋಡಿಕೊಳ್ಳುವ ಕಾವಲುಗಾರನಾಗಿಯೂ ಬದಲಾದ. ಇಡೀ ಅರಮೆನಯಲ್ಲಿ ಈ ಬಗ್ಗೆ ಬೇರೆಯದೇ ರೀತಿ ಮಾತಾಡಿಕೊಂಡರು. ‘ಮೊದಲೆಲ್ಲ ಮಹಾರಾಜರು ಹಗಲಿನಲ್ಲಾದರೂ ಅವಳ ತೋಳಿಂದ ಬಿಡಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದರು‌.

ಈಗೀಗ ಹಗಲಲ್ಲೂ ಏಕಾಂತ ಬಿಟ್ಟು ಹೊರ ಬರದ ಹಾಗೆ  ಕಟ್ಟಿ ಹಾಕಿರುವ ಆ ಸುಂದರಿ ಅದೆಂಥ ಮಾಯಾಂಗನೆ ಇರಬಹುದು!’ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ‘ಸ್ವತಃ ಪಂಡಿತರೂ ಆಗಿರುವ ರಾಜರು ಸೌಂದರ್ಯಮೀಮಾಂಸೆಯ ಬೃಹತ್‌ ಗ್ರಂಥವೊಂದರ ರಚನೆಯಲ್ಲಿ ತೊಡಗಿದ್ದಾರೆ’ ಎಂದು ವಿಷಯ ಹಬ್ಬಿಸಿದರು. ಎರಡೂ ಸುದ್ದಿಗಳೂ ಅವರವರ ಯೋಚನಾಶಕ್ತಿಗನುಗುಣವಾಗಿ ಜನರ ಕಿವಿ ತಟ್ಟಿದವು. 
                            
ಪಟ್ಟದ ರಾಣಿಗೆ ತನ್ನ ಶಾಪ ನಿಜವಾಗಿಯೂ ಪರಿಣಾಮ ಬೀರಿದೆಯೋ ಇಲ್ಲವೋ ಎಂಬ ಗೊಂದಲ ಶುರುವಾಯಿತು. ಮೊದಲಿಗಿಂತ ಈಗ ತನ್ನ ರಾಜ ಅವಳಿಗೆ ಹೆಚ್ಚು ಸಮಯ ಅಂಟಿಕೊಂಡುಬಿಟ್ಟನಲ್ಲ , ಹಾಗಿದ್ದರೆ ಅವಳು ಹಗಲಿನಲ್ಲಿ ವಿಕಾರ ಹೊಂದುವುದರ ಬದಲು ಮತ್ತಷ್ಟು ಸೌಂದರ್ಯವತಿಯಾಗಿ ಮಾರ್ಪಾಡಾದಳೆ ? ತನ್ನ ತಪಸ್ಸು , ವರ -ಶಾಪ ಇವೆಲ್ಲ ಸುಳ್ಳಾದವೆ ? ಎಂದು ಚಿಂತಿಸತೊಡಗಿದಳು.

ಒಂದೇ ಅರಮನೆಯಲ್ಲಿ ರಹಸ್ಯಗಳನ್ನು ಹೇಗೆ ಕಾಪಾಡಬಹುದಲ್ಲ ಎಂಬುದರ ಬಗ್ಗೆ ಅವಳಿಗೆ ಕೋಪ ಬಂತು. ಗಟ್ಟಿಮುಟ್ಟಾಗಿದ್ದ ರಾಜನೊಬ್ಬ ಹೆಣ್ಣಿನ ಸೌಂದರ್ಯದ ದಾಸನಾಗಿ ಕೊಠಡಿ ಬಿಟ್ಟು ಹೊರಬರಲಾಗದ ಕಾರಣಕ್ಕೆ ಆಡಳಿತದ ಜವಾಬ್ದಾರಿಯನ್ನೆಲ್ಲ ಪ್ರಧಾನ ಮಂತ್ರಿಗಳ ಹೆಗಲಗೆ ಹಾಕಿ ಎಲ್ಲವೂ ಸುಭೀಕ್ಷೆಯಿಂದ ನಡೆದುಕೊಂಡು ಹೋಗುವಂತೆ ನೋಡಿಕೊಂಡದ್ದನ್ನು ಕಂಡಮೇಲೂ ಅವನು ನನ್ನೆಡೆಗೆ ಹಿಂದಿರುಗಿತ್ತಾನೆ ಎಂಬ ಆಸೆ ನಾನು ಇಟ್ಟುಕೊಳ್ಳುವುದು ಮೂರ್ಖತನವೇ ಸರಿ ಎಂದುಕೊಂಡ ಪಟ್ಟದ ರಾಣಿ , ಆ ಬಗ್ಗೆ ಏನೊಂದನ್ನೂ ವಿಚಾರಿಸದೆ ತಟಸ್ಥಳಾಗಿರಲು ನಿರ್ಧರಿಸಿದಳು. ಆದರೂ ತನ್ನ ಶಾಪ ಕಾರ್ಯರೂಪದಲ್ಲಿದೆಯೋ, ಇಲ್ಲವೋ ಎಂದು ತಿಳಿಯಲು‌ ಉತ್ಸುಕಳಾಗಿದ್ದಳು. 
                           
ಹೀಗಿರುವಾಗ ಒಂದು ರಾತ್ರಿ‌ ತನ್ನ ಸೌಂದರ್ಯ‌ವು‌ ತನ್ನ ಮೈಗೆ ಮರಳುತ್ತಿರುವುದನ್ನು ಗಮನಿಸುತ್ತಿರುವ ಆ ರೂಪವತಿ ಇದ್ದಕ್ಕಿದ್ದಂತೆ ಜೋರಾಗಿ ಅಳಲಾರಂಭಿಸಿದಳು. ಇಷ್ಟು ದಿನಗಳಲ್ಲಿ ಒಮ್ಮೆಯೂ ತನ್ನ ಈ ವಿಚಿತ್ರ ಬದಲಾವಣೆಯ ಬಗ್ಗೆ ಕೊರಗದ ಆಕೆ ಆ ದಿನ ಅಳಲಾರಂಭಿಸಿದಾಗ ಅವಳ ಮತ್ತು ರಾಜನ ನಡುವೆ ಹೀಗೊಂದು ಮಾತುಕತೆ ನಡೆಯಿತು‌ : 

‘ ನಾನೆಂದರೆ ನಿಮಗೆ ಏಕಿಷ್ಟು ಪ್ರೀತಿ ?’ 
‘ ಇಲ್ಲ… ಅದನ್ನು ಪದಗಳಲ್ಲಿ ಹೇಳುವಷ್ಟು ಬುದ್ದಿವಂತ ನಾನಲ್ಲ ‘
‘ ಅದನ್ನು ಅರ್ಥ ಮಾಡಿಕೊಳ್ಳದಿರುವಷ್ಟು ದಡ್ಡಳೂ ನಾನಲ್ಲ’ 
‘ ಅಂದರೆ ? ಏನು ನಿನ್ನ ಮಾತಿನ ಅರ್ಥ ?’ 
‘ ನೀವು ನನ್ನ ನಂಬಿಕೆಯನ್ನು  ಸುಳ್ಳು ಮಾಡಿದಿರಿ ‘ 
‘ ಯಾವ ನಂಬಿಕೆಯನ್ನು ? ‘ 
‘ ಕೇವಲ ನನ್ನ ಸೌಂದರ್ಯಕ್ಕಾಗಿ ಮಾತ್ರ ನೀವು ನನ್ನನ್ನು ಇಷ್ಟ ಪಡುತ್ತಿರುವುದು ಮತ್ತು ಹೀಗೆ ನನ್ನನ್ನು ಬಿಟ್ಟು ಅಲುಗಾಡದೆ ಇರುವುದು ಅಂದುಕೊಂಡ ನಂಬಿಕೆಯನ್ನು ಸುಳ್ಳು ಮಾಡಿದಿರಿ ನೀವು ‘ 
‘ ಹಾಗಾದರೆ ಅದು ಸುಳ್ಳಾಯಿತೆ ? ಸತ್ಯ ಏನು ? ‘ 
‘ ನೀವು ಕೇವಲ ನನ್ನ ಸೌಂದರ್ಯಕ್ಕಾಗಿ ಮಾತ್ರ ನನ್ನ ಸಹವಾಸ ಮಾಡಿದ್ದೀರಿ. ಅದು ಇಲ್ಲವಾದ ದಿನ ನನ್ನನ್ನು ಕಣ್ಣೆತ್ತಿಯೂ ನೋಡದೆ ತ್ಯಜಿಸಿ ಹೋಗುತ್ತೀರಿ ಎಂದೇ ನಾನು ಭಾವಿಸಿದ್ದೆ . ನೀವು ಅದನ್ನು ಸುಳ್ಳು ಮಾಡಿದಿರಿ.

‌ನನಗೆ ಬಂದಿರುವ ಈ ಖಾಯಿಲೆ ಎಂಥದ್ದೆಂದೇ ನನಗೆ ಅರ್ಥವಾಗುತ್ತಿಲ್ಲ . ಹಗಲಲ್ಲಿ ವಿಕಾರವಾಗಿ ಕಾಣುವ ನಾನು, ರಾತ್ರಿ ಮತ್ತೆ ನನ್ನ ಸೌಂದರ್ಯವನ್ನು ಹಿಂಪಡೆಯುತ್ತೇನೆ. ಆದರೆ ನೀವು ಇದರಿಂದ ಸ್ವಲ್ಪವೂ ವಿಚಲಿತರಾಗದೆ ನನ್ನನ್ನು ಕಾಪಾಡುತ್ತಿದ್ದೀರಿ. ನೀವೊಬ್ಬ ರಾಜನೆಂಬುದನ್ನೂ ಮರೆತು ಹಗಲಿಡೀ ನನ್ನ ಬಳಿಯೇ ಉಳಿದು ನನ್ನ ಸೇವೆ ಮಾಡುತ್ತಿದ್ದೀರಿ. ಒಮ್ಮೆಯೂ ನನ್ನ ಮೇಲೆ ರೇಗಾಡಿಲ್ಲ ಅಥವಾ ಅಸಹ್ಯಪಟ್ಟುಕೊಂಡು ನನ್ನನ್ನು ನೋಡಿಲ್ಲ. ನೀವು ಮನಸ್ಸು ಮಾಡಿದರೆ ಹಗಲಲ್ಲಿ ನನ್ನ ಯೋಗಕ್ಷೇಮ ವಿಚಾರಿಸಲು ಅರಮನೆಯ ಕೆಲಸದಾಳುಗಳನ್ನೋ , ಸಖಿಯರನ್ನೋ ನೇಮಿಸಬಹುದಾಗಿತ್ತು .

ಆದರೆ ಎಲ್ಲಿ ನನ್ನ ವಿಕಾರತೆ ಅವರಲ್ಲಿ ಯಾರಿಗಾದರೂ ತಿಳಿದುಬಿಡುತ್ತದೆಯೋ ಎಂಬ ಕಾರಣಕ್ಕೆ ಖುದ್ದು ನೀವೇ ನನ್ನ ಬಳಿ ಇರಲಾರಂಭಿಸಿದಿರಿ. ನಿಮ್ಮದು ಕೇವಲ ಸೌಂದರ್ಯದ ಹಿಂದೆ ಬಿದ್ದ ಪ್ರೇಮವಲ್ಲ ಬದಲಾಗಿ ನಿಜವಾದ ಪ್ರೀತಿಯೆಂಬುದು ಈ ದಿನಗಳಲ್ಲಿ ನನಗೆ ಅರ್ಥವಾಯಿತು. ನಿಮ್ಮ ಈ ಪ್ರಾಮಾಣಿಕ ಮತ್ತು ನಿಸ್ವಾರ್ಥ ಪ್ರೇಮಕ್ಕಾಗಿ ನಾನು ಋಣಿಯಾಗಿದ್ದೇನೆ’ ಎಂದು ತನ್ನ ಮನದ ಮಾತುಗಳನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತಳು. 

ರಾಜನೂ ಬಿಕ್ಕಿ ಬಿಕ್ಕಿ ಅತ್ತ … ಏನೊಂದೂ ಮಾತಾಡದೆ ಆ ರಾತ್ರಿ ಅವಳ ಅಪ್ಪುಗೆಯಲ್ಲಿ ಸುಖ ನಿದ್ರೆಗೆ ಜಾರಿದ. ಮರುದಿನ ಬೆಳಗ್ಗೆ ಅವನಿಗೊಂದು ಆಶ್ಚರ್ಯ ಕಾದಿತ್ತು. ಪಕ್ಕದಲ್ಲಿದ್ದ ಸುಂದರಿಯಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಹಗಲಿನಲ್ಲಿ ವಿಕಾರವಾಗಿ ಬದಲಾಗುತ್ತಿದ್ದ ಅವಳು, ಆ ದಿನ ಸಹಜವಾಗಿಯೇ ಇದ್ದಳು. ಅವಳನ್ನು ನೋಡಿದ ರಾಜ ಖುಷಿಯಿಂದ ಕುಪ್ಪಳಿಸಿದ. ಅನೇಕ ದಿನಗಳ ನಂತರ ಮೊದಲ ಬಾರಿಗೆ ಆ ಕೊಠಡಿಯಿಂದ ಹೊರ ಬಂದ ರಾಜನು ದರ್ಬಾರು ನಡೆಸಿ ರಾಜ್ಯಭಾರದ ಎಲ್ಲಾ ವಿಷಯಗಳ ಬಗ್ಗೆ ಸಭೆ ನಡೆಸಿದ. 

ಆ ದಿನದಲ್ಲಿ  ಪ್ರಮುಖ ಮೂರು ಘಟನೆಗಳು ಜರುಗಿದವು.

ಇನ್ನು ತನ್ನೆಡೆಗೆ ಮಹಾರಾಜ ಎಂದೂ ಮರಳಿ ಬರಲಾರ ಎಂದು ತೀರ್ಮಾನಿಸಿದ ಪಟ್ಟದ ರಾಣಿ ಅವನ ಸುಖವನ್ನು ಹಾಳು ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದು ಸೂರ್ಯೋದಯಕ್ಕೂ ಮೊದಲು ಎದ್ದು ಪ್ರಾರ್ಥನೆ ಸಲ್ಲಿಸಿ ತನ್ನ ಶಾಪವನ್ನು ಹಿಂಪಡೆದಳು.

ದರ್ಬಾರು ಮುಗಿಸಿದ ರಾಜ ನೇರವಾಗಿ ಪಟ್ಟದರಾಣಿಯ ಬಳಿ ಹೋಗಿ ಅವಳ ಬಳಿ ಔಪಚಾರಿಕ ಮಾತುಕತೆಯನ್ನು ನಡೆಸಿ , ಆ ರಾತ್ರಿ ಅಲ್ಲಿಯೇ ಕಳೆದನು. ತಾನು ಇಷ್ಟು ದಿನ ಬರದುದ್ದಕ್ಕೆ ಕಾರಣ ತನ್ನ ಸುಂದರಿಗೆ ಬಂದಿದ್ದ ವಿಚಿತ್ರ ರೋಗವೇ ಕಾರಣವೆಂದು ಹೇಳಿದನು. ಅವಳು ಅದನ್ನು ಕೇಳಿ ಹೌದೌದೆಂಬಂತೆ ತಲೆದೂಗಿದಳು.
ತನಗಿದ್ದ ವಿಚಿತ್ರ ಖಾಯಿಲೆಯೊಂದು ಯಾವ ಔಷಧಿಯೂ ಇಲ್ಲದೆ ವಾಸಿಯಾದುದರ ಬಗ್ಗೆ ದೀರ್ಘವಾಗಿ ಆಲೋಚಿಸಿದ ಆ ಸುಂದರಿ ಮಾತ್ರ ರಾಜನ ಕಿವಿಯಲ್ಲಿ ಹೇಳಿದಳು ;

ನನ್ನ ಈ ಖಾಯಿಲೆ ವಾಸಿಯಾಗಿದ್ದು ಹೇಗೆ ಗೊತ್ತಾ? ಅದು ನಿಮ್ಮ ಅದಮ್ಯವಾದ ಪ್ರೀತಿಯಿಂದ. ನಿಮ್ಮ ಆರೈಕೆ ಮತ್ತು ನನ್ನೆಡಿಗಿನ ಹಂಬಲವೇ ನನ್ನನ್ನು ರೋಗಮುಕ್ತಳನ್ನಾಗಿಸಿತು. ನಿಮ್ಮ ಈ ಪ್ರೀತಿ ಅನುಭವಿಸಿದ ಮೇಲೆ ನಾಳೆಯೇ ನನಗೆ ಸಾವು ಬಂದರೂ ಸರಿ ಎನ್ನಿಸುತ್ತಿದೆ. ಆದರೆ ನಾನು ನಿಮ್ಮೊಂದಿಗೆ ಇನ್ನೂ ಬಹಳ ದಿನಗಳ ಕಾಲ ಬದುಕಿರಬೇಕು… ಇರುತ್ತೇನೆ … ಎನ್ನುತ್ತಾ ಅವನನ್ನು ತಬ್ಬಿದಳು…

‘ಹಗಲಿನಲ್ಲಿ ನೀನು ವಿಕಾರವಾಗುತ್ತಿದ್ದ ದಿನಗಳಲ್ಲಿ ನಾನು ಈ ಕೊಠಡಿಯಿಂದ ಹೊರ ಹೋಗದಂತೆ ಕಾದದ್ದು ನಿನ್ನ ಮೇಲಿನ ಪ್ರೀತಿಯಿಂದಲ್ಲ. ಇಂಥ ವಿಕಾರ ಹೆಣ್ಣಿನೊಂದಿಗೆ ಮಹಾರಾಜರು ದಿನ ಕಳೆಯುತ್ತಿದ್ದಾರೆ ಎಂಬುದು ಅರಮನೆಯ ಯಾರೊಬ್ಬರ ಕಣ್ಣಿಗೆ ಬಿದ್ದಿದ್ದರೂ ವಿಷಯ ಎಲ್ಲರ ಬಾಯಿಗೆ ಆಹಾರವಾಗಿಬಿಡುತ್ತಿತ್ತು. ರಾಜನ ರಸಿಕತೆಯ ಬಗ್ಗೆ ಜನ ಕಿಮ್ಮತ್ತಿಲ್ಲದ ಮಾತನಾಡಲು ಶುರು ಮಾಡುತ್ತಿದ್ದರು.

ಅದು ನನಗೆ ಬೇಕಿರಲಿಲ್ಲ ಮತ್ತು ಹಗಲು ಕಳೆದ ಬರುವ ಪ್ರತೀ ರಾತ್ರಿಯಲ್ಲೂ ನಿನ್ನ ಸೌಂದರ್ಯ ವರ್ಧನೆಯಾಗಿರುತ್ತಿತ್ತು.‌ ಆ ರಾತ್ರಿಗಳಿಗಾಗಿ ಹಗಲುಗಳನ್ನು ಸಹಿಸಿಕೊಂಡೆನೇ ಹೊರತು ನಿನ್ನ ಮೇಲಿನ ಅದಮ್ಯ ಪ್ರೀತಿಯಿಂದೇನಲ್ಲ ‘ ಎಂದು ತನ್ನನ್ನು ತಬ್ಬಿ ಮಲಗಿದ್ದ ಆ ಸುಂದರಿಯ ಕಿವಿಯಲ್ಲಿ ತನ್ನ ಮನದ ಮಾತುಗಳನ್ನು ಹೇಳುವಷ್ಟು ಪ್ರಾಮಾಣಿಕತೆ ಆ ರಾಜನಲ್ಲಿ ಇರಲಿಲ್ಲ. ಅರಮನೆಯ ರಹಸ್ಯಗಳನ್ನು ಜಗಜ್ಜಾಹೀರು ಮಾಡುವ ಧೈರ್ಯವಾದರೂ ಯಾರಿಗಿದ್ದೀತು ?

September 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ದೇವ್ರೇ….
    ಮಾವಲಿಯವರ ಕಥೆಯಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಲ್ಲವೂ ಮರೆತೋಯ್ತು

    ಪ್ರತಿಕ್ರಿಯೆ
  2. T S SHRAVANA KUMARI

    ಆ… ಹೀಗೂ ಒಂದು ಕತೆಯೇ… ಕಡೆಗೆ ನಿಜ ಯಾವುದಪ್ಪಾ…

    ಪ್ರತಿಕ್ರಿಯೆ
  3. ಗೀತಾ ಎನ್ ಸ್ವಾಮಿ

    ಅಬ್ಬಾ! ಎಲ್ಲಿಂದ ಎಲ್ಲಿಗೆ, ಯಾಕೆ, ಏನು ಅಂತೆಲ್ಲಾ ತಡಕಾಡುವಾಗ ಮಾಯೆಯ ಮಧ್ಯದ ಬಿಂದುವಿನಲ್ಲಿ ನಿಲ್ಲಲೂ ಹಾಗೆ ಆ ಜಾಗದಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದ? ಗೊತ್ತಿಲ್ಲಾ……..
    ಮಾವಲಿ ಸರ್ ಎಲ್ಲಾ ಅಸ್ಪಷ್ಟ ರಂಪ… ಅನ್ನಿಸಿಬಿಡ್ತು ಕಡೆಗೆ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: