ʼಪಿಪಿ ನಗರʼ ಎಂಬ ಪಾತಕಗಳ ಕೂಪ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ಆಫ್ ದಿ ರೆಕಾರ್ಡ್’ ನಲ್ಲಿ.

ವೇಶ್ಯಾವಾಟಿಕೆ, ಪ್ರವಾಸೋದ್ಯಮ, ಸೆಕ್ಸ್ ಉದ್ಯಮಗಳಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸಾಗಾಟ ,ಮಾರಾಟ ಗಡಿಗಳ ಎಲ್ಲೆ ಮೀರಿದ್ದಾಗಿದೆ. ಶೋಷಣೆಯ ಭಾಗವಾಗಿ ವಿಕ್ರಯವಾದವರು ಒಂದು ಸರಕಾಗಿ.. ಮಾರಾಟವಾಗಿ ಬಿಡ್ತಾರೆ. ಮಹಿಳೆಯರ, ಮಕ್ಕಳ ಅಸಹಾಯಕತೆಯ, ಅಮಾಯಕತೆಯ ನಿರಂತರ ದುರುಪಯೋಗವಾಗುತ್ತದೆ. ವ್ಯಕ್ತಿಯ ಹಕ್ಕು ಮತ್ತು ಗೌರವವನ್ನೇ ಉಲ್ಲಂಘನೆ ಮಾಡುವ ಈ ದಂಧೆಯ ರಕ್ಷಕರು ಇವರ ಬದುಕುಗಳನ್ನು ಕಸಿದುಬಿಡುತ್ತಾರೆ. 

ಇಂತಹ ಅವಕಾಶ ವಂಚಿತರ ಬಹುದೊಡ್ಡ ಸಮುದಾಯ, ರಕ್ಷಣೆ, ಸ್ವಾಭಿಮಾನ, ಖಾಸಗೀತನ, ಆರೋಗ್ಯ,  ಶಿಕ್ಷಣ, ಕಾನೂನು ರಕ್ಷಣೆ ಎಲ್ಲದರಿಂದಲೂ ವಂಚಿತವಾಗಿಬಿಡುತ್ತದೆ. ಮನುಷ್ಯ ಕಾಳಜಿಯೇ ಇಲ್ಲದ ಈ ವ್ಯವಸ್ಥೆ ಇಂತಹ ಶೋಷಣೆಗೆ ಶಾಮೀಲಾಗಿಯೇ ಇರುತ್ತದೆ. ಆದ್ದರಿಂದಲೇ ಇಂತಹ ಅಮಾನವೀಯ  , ಕಾನೂನು ಬಾಹಿರದ ದಂಧೆ ಜೀವಂತವಾಗಿರುವುದು… ʼಒಂದೊಮ್ಮೆ ಇಚ್ಛಾಶಕ್ತಿಯಿದ್ದಲ್ಲಿ ಇಂತಹ ಘಾತುಕತನವನ್ನು ಈ ವ್ಯವಸ್ಥೆ ಹೇಗೆ ಮಟ್ಟಹಾಕಲು ಸಾಧ್ಯ ಎನ್ನುವುದಕ್ಕೆ ನಾನೊಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆʼ.

ಇಡೀ ಏರಿಯಾಕ್ಕೆ ಬೆಂಕಿ ಬಿದ್ದಿತ್ತು.  ಉರಿ, ಹೊಗೆ ಇರಲಿಲ್ಲ ಅಷ್ಟೇ.  ಪೊಲೀಸರ ಬೂಟುಗಳು ಒಂದೊಂದು ತಡಿಕೆಗಳನ್ನೂ, ಬಾಗಿಲುಗಳನ್ನೂ ಒದ್ದು ಎಲ್ಲವನ್ನೂ ಬಟಾಬಯಲು ಮಾಡುತ್ತಿದ್ದವು.  ಪೊಲೀಸರ  ಯೂನಿಫಾರ್ಮ್ ಗೆ ಸಿಟ್ಟು ನೆತ್ತಿಗೇರಿತ್ತು.  ಅಲ್ಲಿದ್ದ ನೂರಾರು ಗುಡಿಸಲುಗಳು,  ಆಫ್ ಮನೆಗಳು, ಮಲ್ಟಿ ಸ್ಟೋರ್, ಸೆಮಿ ಸ್ಟೋರ್ಡ್ ಬಿಲ್ಡಿಂಗ್ ಗಳು, ಮಹಡಿಯ ಪೋಸ್ ಕೊಟ್ಟಿದ್ದ ಅಟ್ಟಣಿಗೆಗಳು….. ಎಲ್ಲವೂ ಏಕಾಏಕಿಯಾಗಿ ಮಗುಚಿ ಬಿದ್ವು. ಮುರಿದು ಹೋದ ನೆಲೆಗಳಿಂದ ಹೊರಟ ಆರ್ತನಾದದಲ್ಲಿ ವೈರುಧ್ಯತೆಯಿತ್ತು.

ಗಿರಾಕಿಗಳೊಂದಿಗೆ ಸಂಧಾನಕ್ಕೆ ಇಳಿದಿದ್ದ ಮಾಲೀಕರುಗಳು ಶಾಖ್ ಆದರು.  ಬೆತ್ತಲಾಗಿದ್ದ ದೇಹಗಳು ದಿಕ್ಕಾಪಾಲಾದ್ವು.  ಎಲ್ಲೆಲ್ಲಿಂದಲೋ ವ್ಯಾಪಾರ ಕುದುರಿಸಿ ಗಿರಾಕಿಗಳನ್ನು ಕರೆತರುತ್ತಿದ್ದ ಪಿಂಪ್ ಗಳು  ಓಟಕಿತ್ತರು.  ಹೇಗೋ ಹೋರಾಡಿ ಜಾಗ ಹಿಡಿದು ಅಲ್ಲಿಂದ ಇಲ್ಲಿಂದ ಹೊಂಚಿ ಒಂದು ಗೂಡು ಕಟ್ಟಿ ಬಾಡಿಗೆಗೋ,  ಲೀಸ್  ಗೋ ಕೊಟ್ಟಿದ್ದವರೆಲ್ಲ ಲಬೋಲಬೋ ಅಂದ್ರು.   ಗಂಟೆ ಬಾಡಿಗೆಗೆ ಕೊಡುತ್ತಿದ್ದವರು ಕೈಕೈ ಹಿಸುಕಿಕೊಂಡರು.  ಏನಾದರೂ ಸರಿ ಈ  ಘಟನೆ ತಪ್ಪಿಸಬೇಕೆಂದು ಪುಡಾರಿಗಳೆಲ್ಲ ಪತ್ರುಗುಟ್ಟುತ್ತಿದ್ರು.

ನಾನು ಮೇರಿ. ನನ್ನ ಊರು, ನನ್ನವರು ಯಾರೂ ನನಗೆ ಗೊತ್ತಿಲ್ಲ. ಇಲ್ಲಿ ವೃತ್ತಿ ಮಾಡೋ ಮಣಿಯಮ್ಮನಿಗೆ ಆಗತಾನೇ ಹುಟ್ಟಿದ್ದ ನಾನು ಸಿಕ್ಕಿದ್ದೆನಂತೆ. ಮಣಿಯಮ್ಮನ ಕರುಳು ಚುರುಕ್ಕಂದು ನನ್ನನ್ನು ತಂದು ಸಾಕಿದಳಂತೆ. ನನ್ನನ್ನು ಸಾಕಲು ಅವಳು ಪಟ್ಟ ಕಷ್ಟಗಳ ವರ್ಣನೆ ಮಾಡ್ತಾನೇ ಇರ್ತಾಳೆ. ಅದನ್ನೆಲ್ಲ ಹೇಳೋಕೆ ಒಂದು ಕಾದಂಬರೀನೇ ಆಗ್ಬೇಕು ಬಿಡಿ. ಒಂದಂತೂ ಸತ್ಯ, ಈ ವೃತ್ತಿ ಮಾಡ್ಕೊಂಡು ಬಿರುಗಾಳಿಗೆ ಬದುಕು ಒಡ್ಡಿಕೊಂಡು ನನ್ನನ್ನು ಸಾಕಿರೋದು ಒಂದು ಸಾಹಸವೇ ಸರಿ.

ನನ್ನ ಮೈಕಟ್ಟು, ನನ್ನ ಸೌಂದರ್ಯ ನೋಡಿ, ನೀನ್ಯಾರೋ ಮಹಾ ಸುಂದರಿಯ ಮಗಳೇ ಇರ್ಬೇಕು ಅನ್ತಿರ್ತಾಳೆ. ಸಿಟ್ಟು ಬಂದಾಗ, ನಿನ್ನನ್ನೂ ಯಾರೋ ನಮ್ಮಂಗೆ ದಂಧೆ ಮಾಡೋಳೇ ಹೆತ್ತು ಬಿಸಾಡಿರ್ಬೇಕು ಅನ್ತಾಳೆ, ಆಗೆಲ್ಲಾ ಸಂಕಟ ಆಗುತ್ತೆ. ನಾನು ಇವಳ ಕೈಗೆ ಸಿಗದೇ ಯಾರಾದ್ರೂ ಬದುಕು ನಡೆಸೋರಿಗೆ ಸಿಗಬಾರದಿತ್ತಾ ಅನ್ಸುತ್ತೆ. ಆದರೂ ಬಿಸುಡಿ ಹೋದ ಅವಳಿಗಿಂತ ಎಂದಾದರೊಮ್ಮೆ ಅಪ್ಪುವ , ಜೀವವನ್ನು ಕಾಪಾಡಿದ ಇವಳೇ ಮೇಲು ಅಂದ್ಕೊಂಡು ಸುಮ್ಮನಾಗ್ತೀನಿ.

ಮಣಿಯಮ್ಮ ಅವಳ ಮನೆದೇವತೆ ಮಾರಮ್ಮನ ಹೆಸರನ್ನೇ ನನಗೆ ಇಟ್ಟಿದ್ದಳು. ಅವರಿವರು ಮರಿ ಮರಿ ಅಂತ ಕರೀತಾನೇ ಅದು ಮೇರಿಯಾಯ್ತು. ಇಲ್ಲಿ ಅವೆಲ್ಲಾ ಯಾವ ವ್ಯತ್ಯಾಸಗಳನ್ನೂ ಮಾಡೋಲ್ಲ…….

ಹೀಗೆ ಮುರಿದು ಹೋದ ಪಾತಕದ ಸೂರುಗಳಲ್ಲಿ ನಮ್ನದೂ ಒಂದು. ಇಲ್ಲಿಯೂ ಐದಾರು ಹುಡುಗೀರು ಇದ್ರು. ನಾನೊಂಥರಾ ಎರಡನೇ ಬಾಸ್ ಈ ಮನೆಗೆ. ಹುಡುಗಿಯರೇನಾದ್ರೂ ಕೈಕೊಟ್ಟು ಇನ್ನೊಂದ್ಕಡೆ ಹೋದ್ರೂ , ನಾನಿರೋದ್ರಿಂದ ಮಣಿಯಮ್ಮನಿಗೆ ಆತಂಕಾನೇ ಇರ್ತಿರ್ಲಿಲ್ಲ. ಇವಳೂ ಇಲ್ಲಿಯೇ ಯಾರದ್ದೋ ಮನೆಯಲ್ಲಿ ವೃತ್ತಿ ಮಾಡ್ತಿದ್ದವಳು ಬರ್ತಾ ಬರ್ತಾ ಇವಳೂ ಘರ್ ವಾಲಿಯಾಗಿಬಿಟ್ಳು. ಅವಳ ಆ ಕನಸು ನನಸಾಗಿತ್ತು. ಸಂಪಾದನೆಯೂ ಶುರುವಾಗಿ ಒಂದು ಸೂರನ್ನೂ ಮಾಡ್ಕೊಂಡಿದ್ಲು.

ಹೋ ಆ ದಿನದ ಘಟನೆ ನೆನೆದರೇ…….. ಒಳಗೆ ತಣ್ಣನೆಯ ಚೂಪುಗತ್ತಿಯೊಂದು ಚಲಿಸಿದಂತೆ ಭಾಸವಾಗುತ್ತದೆ.

ಅದೊಂದು ದುರ್ದಿನ!!  ಪಿಪಿ ನಗರದಲ್ಲಿಯ ಎಲ್ಲಾ ದಂಧೆಗಳು ರೇಡ್ ಆಗಿದ್ವು.  ಇಡೀ ಏರಿಯಾನೇ ಕರ್ಫ್ಯೂ ಹಾಕಿದಂಗೆ ಆಗಿತ್ತು.  ಹತ್ತಿ ಉರಿದಂತೆ, ಸುನಾಮಿ ಬಂದಂತೆ, ಎಲ್ಲವೂ ಧ್ವಂಸವಾದಂಗೆ ಆಗಿಹೋಯಿತು.  ಎಲ್ಲಾ ಮಾಮೂಲಿ ಗಳೊಂದಿಗೆ…. ನಿರಾಳವಾಗಿ ದಂಧೆ ನಡೆಸುತ್ತಿದ್ದ ಪಿಪಿ ನಗರಕ್ಕೊಂದು ಇಂತಹ ಬರಸಿಡಿಲು ಬಡಿಯಲು  ಬಲವಾದ ಒಂದು ಕಾರಣವಿತ್ತು.

ನೆರೆ ರಾಜ್ಯದ ಅತಿಗಣ್ಯರ ಮಗಳೊಬ್ಬಳು ಕಾಣೆಯಾಗಿದ್ದಳು.  ಅವಳ ಹಿನ್ನೆಲೆ ಗೊತ್ತಿರದ ದಂಧೆಕೋರನೊಬ್ಬ  ಅಪಹರಿಸಿದ್ದ ಆ ಹುಡುಗಿಯನ್ನು ಈ ಪಿಪಿ ನಗರಕ್ಕೆ ಮಾರಿಬಿಟ್ಟ.   ಹುಡುಗಿಯನ್ನು ಪತ್ತೆ ಹಚ್ಚುವ ಕೆಲಸ ಬಹಳ ಬಿರುಸಾಯಿತು. ಮುಗ್ಧ ಅಮಾಯಕ ಹುಡುಗಿಯರನ್ನು ಸಾಗಿಸುವ ತಲೆಹಿಡುಕರ ದಂಧೆಯ ಜಾಲವನ್ನು ಇಡೀ ದೇಶದಲ್ಲೆಲ್ಲಾ ಜಾಲಾಡಿದರು.  ಕಡೆಗೆ ಆ  ಹುಡುಗಿ ಕರ್ನಾಟಕದ ಮಂಡ್ಯದ ಪಿಪಿ ನಗರದಲ್ಲಿ ಇರೋದು ಗೊತ್ತಾಯಿತು.  ಕೂಡಲೇ ಆ ಹುಡುಗಿಯನ್ನು ಪಾರುಮಾಡುವ ಜವಾಬ್ದಾರಿಯನ್ನು ಇಲ್ಲಿಯ ಅಧಿಕಾರಿಗಳಿಗೆ ಒಪ್ಪಿಸಿದರು. ದೇಶದಲ್ಲೆಲ್ಲಾ ಈ ಸುದ್ದಿ ತಲೆಬರಹ ವಾಯಿತು.  ಪಿಪಿ ನಗರ ಏಕಾಏಕಿ ಬೆಳಕಿಗೆ ಬಂತು.

ಸ್ಥಳೀಯ ಪೊಲೀಸ್ ಇಲಾಖೆ, ಜಿಲ್ಲಾ ಆಡಳಿತಗಳ ಮೇಲೆ ಎಲ್ಲರ ಕಣ್ಣು ಬಿತ್ತು. ಅಧಿಕಾರಿಗಳ ಮೇಲೆ ಒತ್ತಡ ಹೇರಲಾಯಿತು. ಇದರಿಂದ ಕುಪಿತಗೊಂಡ ಅಧಿಕಾರಿಗಳು ಪಿಪಿ ನಗರವನ್ನು ಬುಡಸಮೇತ ನಾಶ ಮಾಡಲು ತೀರ್ಮಾನಿಸಿದರು.  ಪಿಪಿ ನಗರಕ್ಕೆ ಬುಲ್ಡೋಜರ್ ಬಂತು!!  ಗಾಢವಾದ ನಿದ್ರೆಯ ಹೊತ್ತು.  ಬೆತ್ತಲಾಟಗಳೆಲ್ಲಾ ಬೋರಲಾಗಿ ಅಂದಿನ ಬದುಕು ಅಸ್ತವ್ಯಸ್ತವಾಗಿತ್ತು.  ಅಷ್ಟೊತ್ತಿಗೆ ತಡಿಕೆ, ಬಾಗಿಲುಗಳು ತಳ್ಳಾಡಿದ್ವು…

‘ಏಯ್, ಪ್ರಾಣದ ಮೇಲೆ ಆಸೆ ಇದ್ದರೆ ಎಲ್ಲಾ ಆಚೆ ಬನ್ನಿ, ಹತ್ತು ನಿಮಿಷ ಟೈಮ್ ಕೊಡ್ತೀವಿ ಅಷ್ಟೇ’ ಮೆಗಾ ಫೋನ್ ನಲ್ಲಿ ಅನೌನ್ಸ್ ಮಾಡಿದ್ರು.  ಏನು ನಡೆದಿದೆ ಅನ್ನೋವಷ್ಟರಲ್ಲಿ ಬುಲ್ಡೋಜರ್ ಸ್ಟಾರ್ಟ್ ಆಗೇಬಿಡ್ತು.  ಬೆಳಗಿನ ಜಾವ ಕೋಳಿ ಕೂಗೋ ಹೊತ್ತಿಗೆ ಇಡೀ ಪಿಪಿ ನಗರ ಮುರಿದು ಬಿದ್ದಿತ್ತು.

ಪೇದೆಯೊಬ್ಬ ಮಧುಮತಿಯ ಮನೆಯಿಂದ ಒಂದು ಹುಡುಗಿಯನ್ನು ಹೊರಗೆ ಕರ್ಕೊಂಡು ಬಂದ. ಹುಡುಗಿಯನ್ನು ಕಂಡಕೂಡಲೇ ಯುದ್ಧದಲ್ಲಿ ಗೆದ್ದ ಉತ್ಸಾಹದಿಂದ ಆಫೀಸರ್ ಓಡಿಬಂದ. ಅವಳಿಗೆ ಹೊದ್ದುಕೊಳ್ಳಲು ತನ್ನ ಜಾಕೆಟನ್ನೇ ಬಿಚ್ಚಿಕೊಟ್ಟ. ಆ ಹುಡುಗಿ ಗಾಬರಿಯಿಂದ ನಡುಗಿ,ನಲುಗಿ ಹೋಗಿದ್ದಳು. ಮಧುಮತಿಯನ್ನು ಜುಟ್ಟು ಹಿಡಿದು ಎಳ್ಕೊಂಡು ಬಂದ್ರು. ಅವಳನ್ನು  ನೋಡಿದ ಕೂಡಲೇ ಇನ್ಸ್ಪೆಕ್ಟರ್ ಝಾಡಿಸಿ ಝಾಡಿಸಿ ಒದ್ದ. ಅವಳು ನಿಸ್ತೇಜಳಾದ್ಲು.

ʼಪಿಪಿ ನಗರʼ ಅದೊಂದು ಪಾತಕಗಳ ಕೂಪ.  ಕಳ್ಳಭಟ್ಟಿಯ ಗಡಂಗುಗಳು, ಜೂಜಾಟದ ಅಡ್ಡೆಗಳು ಅಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಇನ್ನೊಂದಷ್ಟು ಬಲ ಕೊಟ್ಟಿದ್ವು.  ವೇಶ್ಯಾವಾಟಿಕೆಯ ಇತಿಹಾಸದಲ್ಲಿ ಪಿಪಿ ನಗರದ ಕಥೆಯೂ ಒಂದು.  ಇಂಡಿಯಾದ ಅತ್ಯಂತ ಸುಂದರಿಯರನ್ನು ದಂಧೆಗಿಳಿಸಿದ್ದ ಸ್ಥಳವಿದು.  ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಮಾರಾಟ, ಸಾಗಾಟ ಮಾಡಿ ದಂಧೆ ನಡೆಸುತ್ತಿದ್ದ ಒಂದು ದೊಡ್ಡ ಜಾಲದ ಅಖಾಡವೇ  ಇಲ್ಲಿತ್ತು. 

ನೂರಾರು ಗುಡಿಸಲುಗಳಲ್ಲಿ ಸಾವಿರಾರು ಹೆಣ್ಣುಗಳ ದೇಹಗಳು ಇಲ್ಲಿ ಸೇವೆಗೆ ಸರಕಾಗಿ ಈ ಸ್ಥಳವು ದಂಧೆಗೆ ಹೆಸರುವಾಸಿಯಾಗಿತ್ತು.  ಮೊದಮೊದಲು ಗುಡಿಸಲುಗಳಲ್ಲಿ ಆರಂಭವಾದ ದಂಧೆ, ಲಾಭ ಹೆಚ್ಚಾದಂತೆಲ್ಲ ಗೋಡೆಗಳು, ಮಾಡುಗಳು, ತಾರಸಿಗಳು ಬಂದವು. ಇಲ್ಲಿ ಮಾಮೂಲಿಗಳೊಂದಿಗೆ, ಬೇಕೆಂದಾಗ ಗಣ್ಯರ, ಅಧಿಕಾರಿಗಳ ಆದರಾತಿಥ್ಯದೊಂದಿಗೆ ನಿರ್ವಾಹತವಾಗಿ , ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇತ್ತು.

ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು….. ಅದೊಂದು ಘಟನೆ ಆ ದಿನ ನಡೆಯದಿದ್ದಲ್ಲಿ ಇಂದಿಗೂ ಪಿಪಿ ನಗರ ಹೆಣ್ಣುಗಳ ಮಾರುಕಟ್ಟೆ ಕೇಂದ್ರವಾಗಿಯೇ ಇರುತ್ತಿತ್ತೇನೋ! ಅವಳ್ಯಾರೋ ಗಣ್ಯರ ಮಗಳಾಗಿದ್ದರಿಂದಲೋ,  ಹುಡುಕಿಸುವ ತಾಕತ್ತಿದ್ದರಿಂದಲೋ ಮಾರಾಟವಾದ ಮಗಳು ಮನೆಗೆ ಹಿಂತಿರುಗಿದ್ಲು.  ಆದರೆ ಹಾಗೆಯೇ ಇಲ್ಲಿಗೆ ಸಾಗಾಟವಾಗಿ ಬಂದ ನೂರಾರು ಹೆಣ್ಣುಮಕ್ಕಳು ಅನಾಮಿಕರಾಗಿ ಶೂನ್ಯವಾಗಿಯೇ ಸರಕಾಗಿ ಬದುಕುತ್ತಿದ್ರು.

ಪಿಪಿ ನಗರವನ್ನು ಸ್ವಚ್ಛ ಮಾಡಿಬಿಟ್ರು. ಅಲ್ಲಿದ್ದ ಪಂಜರದ ಹಕ್ಕಿಗಳು ದಿಕ್ಕಾಪಾಲಾಗಿ ಓಡಿದ್ವು…ಕೆಲವರು ಪಿಂಪ್ ಗಳು, ಘರ್ ವಾಲಿಗಳು, ಜಂಕ್ ಗಳು, ಓಡಲಾರದವರು ಪೋಲೀಸರ ಕೈಗೆ ಸಿಕ್ಕಿಕೊಂಡ್ರು… ಇನ್ನೂ ಕೆಲವರು ತಲೆಮರೆಸ್ಕೊಂಡ್ರು…..

ನನ್ನ ಮಣಿಯಮ್ಮ ಓಡಲಾರದೇ ಸಿಕ್ಕಿಬಿದ್ಲು….. ಅವಳ ಮುಖದಲ್ಲಿ ಹೆಣದ ಕಳೆಯಿತ್ತು, ತಾನು ಸಂಪಾದಿಸಿದ ಎಲ್ಲವೂ ಮಣ್ಣುಪಾಲಾಗಿತ್ತು. ಪಿಪಿ ನಗರದ ಘರ್ ವಾಲಿಗಳ ನಾಯಕಿಯಾಗಲು ಮಾಡಿದ್ದ ಹೋರಾಟವೆಲ್ಲವೂ ಕನಸಿನ ಗಂಟಿನಂತಾಗಿತ್ತು….

ನನ್ನನ್ನು ಕರೆದು, ‘ಎಲ್ಲಾದ್ರೂ ಹೋಗಿ ಬದುಕಿಕೋ’ ಅಂದ್ಲು. ಅಯ್ಯೋ , ಬದುಕನ್ನೇ ಕಲಿಸದೆ ಸೂತ್ರದಾರಳಾಗಿದ್ದ ನೀನು ಈಗ ಹೇಳಿದ್ರೆ…. ಎಲ್ಲಿಗೆ ಹೋಗಲಿ, ʼ ಆ ಹುಡುಗಿಯಂತೆ ಕರೆದುಕೊಂಡು ಹೋಗಲು ಈ ಪ್ರಪಂಚದಲ್ಲಿ ನನಗೆ ಯಾರಿದ್ದಾರೆ ????ʼ

‍ಲೇಖಕರು ಲೀಲಾ ಸಂಪಿಗೆ

September 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. T S SHRAVANA KUMARI

    ಕರುಳನಿರಿಯುವ ಬರಹ. ಈ ದಂಧೆಗೆ ಕೊನೆಯೇ ಇಲ್ಲವೇ!

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಶ್ರವಣ ಮೇಡಂ ಹೇಳಿದ ಹಾಗೆ ತುಂಬಾ ಸಂಕಟ ಆಯ್ತು ಲೀಲಕ್ಕ ಓದಿ….

    ಪ್ರತಿಕ್ರಿಯೆ
  3. Vidya gadagkar

    KaraaLa satyada mEle beLaku chelluva nimma lEkhanagaLu karuLu hinDuttave.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: