ಸಿದ್ದೇಮಣ್ಣಿನ ಸರದಿಂದ ರಂಗಾಲೆ ಪುಡಿಯವರೆಗೆ..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಮಣ್ಣು ಉಸಿರುಗಳ ಬೇರಿಗೆ ಬೆಳಕು ಈ ಬೆಳಕು ನನ್ನ ಊರಿನ ಎಲ್ಲಾ ಹೆಂಗಸರ ಅಡುಗೆ ಮನೆಯ ಪಾತ್ರೆ ಪಗಡಿನ ಜೊತೆಗೆ ಸ್ನೇಹ ಮಾಡಿದ್ದೆ ಮಹಾ ವಿಸ್ಮಯ. ಮಣ್ಣಿನ ಮಹಿಮೆಗಳೆ ಹೀಗೆ. ಕೆಲವರ ಕಡೆಗೆ ಅಪಾಯಗಳನ್ನು ಒತ್ಲುಸಿದರೆ; ಕೆಲವರ ಕಡೆಗೆ ಸಹಜ ಬದುಕಿನ ಲೀಲೆಗಳಿಗೆ ಪೂರಕವಾದ ಕುತೂಹಲಗಳನ್ನು ಬಾಳಿನ ಸುತ್ತಲೂ ಓಡಾಡಿಸಿಕೊಂಡೆ ಇರುತ್ತದೆ ಈ ಮಣ್ಣು. ನನ್ನ ಊರನ್ನು ಮಗುವಿನಂತೆ ಪೊರೆದ  ದೊಡ್ಡಳ್ಳದ ಮಗ್ಗುಲಲ್ಲೆ ಈ ಸಿದ್ದೇಮಣ್ಣಿನ ಸರಗಳಿವೆ. ಯಾವ ಆಧುನಿಕತೆ ಜಾಹಿರಾತುಗಳಿಗೂ, ಈ ಮಣ್ಣಿನ ಮಹತ್ತನ್ನು ಒಣಗಿಸಲು ಆಗದಿರುವುದೇ ನಮಗೆಲ್ಲಾ ಅನಂತದಷ್ಟು ಸಂತಸ.

ಸಿದ್ದೇಮಣ್ಣಿನ ಸರ (ಆಳಕ್ಕೆ ತಗ್ಗು ಬಿದ್ದ ಗುಂಡಿ) ನಮ್ಮ ಊರಿಗೆ ಒಂದು ಅರ್ಥದಲ್ಲಿ ಫಲವತ್ತಾದ ಕಸುವು. ತಿಂಗಳಿಗೊಮ್ಮೆ ಊರಿನ ಅನೇಕ ಮನೆಯ ಹೆಂಗಸರು ಮಣ್ಣಿಗೋಗ್ಬೇಕು ಇವತ್ತು ಬಿಡುವು ಮಾಡ್ಕೊಂಡು ಅಂತ ದಬದಬ ಬದುಕನ್ನು ಮುಗಿಸಿ ತಲಾಕ್ತಟ್ಟಿ ಒಂದೊಂದು ಚೀಲ ತಗಂಡು ಹೊತ್ತಿಮುಂಚೆ ಹೊರಡ್ತಾರೆ. ಮಣ್ಣಿಗೋಗದು ಅಂದ್ರೆ ಸಿದ್ದೇಮಣ್ಣನ್ನು ಅಗ್ದು ಒತ್ಕಂಡು ಬರಕೆ ಹೋಗುವುದು. ಈ ಸರದ ಮಣ್ಣು ನನ್ನ ಊರಿನಲ್ಲಿ ಪ್ರಸಿದ್ದಿಗೆ ಬಂದು ಅದೆಷ್ಟು ವರ್ಷಗಳು ಕಳೆದವೊ? ಕಂದು ಬೆರಕೆಯ ನುಣುಪಾದ ಬೆಳ್ಳನೆಯ ಮಣ್ಣು ಇದು.

ಊರಿನಿಂದ ಒಂದು ಫರ್ಲಾಂಗು ದೂರದಲ್ಲಿರುವ ‘ಗೊಂದಿ’ ಎನ್ನುವ ಜಾಗದಲ್ಲಿ ಈ ಮಣ್ಣು ಸಿಗುವ ಸರಗಳಿವೆ. ದಿನವಿಡೀ ಸರ್ತಿ ಮೇಲೆ ಮಹಿಳೆಯರೇ ಮಣ್ಣು ಅಗೆಯುವುದು. ಒಂದು ಸಲ ಮಣ್ಣು ದೊಗ್ದು ತುಂಬ್ಕೊಂಡು ತಂದ್ರೆ ಸುಮಾರು ದಿನಗಳಿಗೆ ಆಗುತ್ತದೆ. ತಂದ ಸಿದ್ದೇಮಣ್ಣನ್ನು ಪಸ್ಮೆ ಆರುವಂತೆ ಒಣಗಿಸಿ ಜಲ್ಡೆ ತರವಿ‍ ಕಟ್ಟಿ ಮಡಗುತ್ತಾರೆ. ಇದನ್ನು ಪಾತ್ರೆ ಬೆಳಗಲು ಮಾತ್ರವೇ ಬಳಸುವುದು. ಈ ಸಿದ್ದೇಮಣ್ಣು ಮುಸ್ರೆ ಮುಟ್ತು ಅಂದ್ರೆ ಮಾತ್ರ ಮಡಿ ಆಗೋದು ಅನ್ನುವ ದಿವ್ಯಪ್ರಜ್ಞೆ ನನ್ನೂರಿನ ಎಲ್ಲಾ ಅಮ್ಮಂದಿರಿಗೆ.

ಇದೇ ಸಿದ್ದೇಮಣ್ಣು ಕೆಲವು ಮನೆಗಳಲ್ಲಿ ಮುಗಿದರೆ ಮಗ್ಗುಲ ಮನೆಯಲ್ಲಿ ತಂದಾಗ ಹಿಂದಕ್ಕೆ ಕೊಡುತ್ತೇನೆ ಎಂದು ಮಣ್ಣು ಸಾಲ ಮಾಡುವ ಪದ್ಧತಿ ಕೂಡ ಇದೆ. ನನ್ನ ಊರಿನಲ್ಲಿ ಮನೆ ಮನೆಗಳ ಮುಂದು ಡಬ್ಬಗಳಲ್ಲಿ ಈ ಸಿದ್ದೇಮಣ್ಣು ಕುಳಿತಿರುತ್ತದೆ. ನೆರೆಯೂರಿನ ಜನರು ನಮ್ಮ ಸರಕ್ಕೆ ಮಣ್ಣನ್ನು ಅಗೆಯಲು ಬಂದು ಸಣ್ಣ ಜಗಳಗಳಾಗುವುದುಂಟು. ಜೊತೆಗೆ ದನ ಕುರಿಯವರಿಗೆ ಅತ್ಕಡಿಕೋದ್ರೆ ಸರ ಕಾಯ್ರಿ ಎಂದು ಹೇಳಿ ಕಳುಹಿಸುವ ರೂಢಿಯು ಇದೆ.

ಲಗ್ನ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು  ತವರಿನಿಂದ ಕಳುಹಿಸುವಾಗ ಹಣ್ಣಿನಷ್ಟೇ ಮುತುವರ್ಜಿಯಿಂದ ಈ ಸಿದ್ದೇಮಣ್ಣನ್ನು ಕಳುಹಿಸುತ್ತಿದ್ದ ದಿನಗಳಿಗೇನು ಕಮ್ಮಿ ಇಲ್ಲ. ಮಳೆಗಾಲ ಆರಂಭವಾಗುವ ಮುನ್ನ ಇಡೀ ಊರಿನ ಅಮ್ಮಂದಿರು ಮೂರ್ನಾಲ್ಕು ತಿಂಗಳಿಗೆ ಆಗುವಷ್ಟು ಸಿದ್ದೇಮಣ್ಣನ್ನು ಮೊದಲೇ ಕೂಡಿಟ್ಟುಕೊಳ್ಳುತ್ತಾರೆ. ಮಳೆ ನೀರು ಸರಕ್ಕೆ ತುಂಬಿಕೊಂಡು ಕೊರೆತವಾಗಿ ಕೆಲವೊಮ್ಮೆ ಗಡ್ಡೆಯು ಕುಸಿದಿರುತ್ತದೆ. ಮಳೆ ದಿನಗಳು ಕೊನೆಯಾದ ಮೇಲೆ ಕುಸಿದ ಗಡ್ಡೆಯ ಮಣ್ಣನ್ನು ತೋಡಿ ಹೊರಗೆಸೆದು ಹೊಳಪಿನ ನುಣ್ಣನೆಯ ಬಿಳಿಯ ಮಣ್ಣಿನ ದರ್ಶನ ಮಾಡದೇ ಬಿಡೊಲ್ಲ.

ಈ ಸಿದ್ದೇಮಣ್ಣಿನ ಮಾಯೆ ಅದೆಷ್ಟು ಮನಕ್ಕತ್ತಿದೆ ಎಂದರೆ ಮಣ್ಣು ಮುಗಿದರೆ ಅಮ್ಮಂದಿರಿಗೆ ನಿದ್ದೆಯೇ ಬರಲ್ಲ. ಬೀದಿ ಬೀದಿಯಲ್ಲೂ ಮಣ್ಣಿಗೋಗುವ ಸುದ್ದಿ ಸಭೆ ನಡೆಯುತ್ತದೆ. ಮರೆತು ಯಾವ ಮನೆಯವರನ್ನಾದರೂ ಬಿಟ್ಟು ಹೋದ್ರೆ ಹೇಳ್ದಂಗೆ ಹೋಗಿದೀರಲ್ರೆ ಇರ್ದಿದ್ರೆ ನಿಮ್‌ನಾಲ್ಗಿಗೆ  ಉಳ್‌ಬೀಳ್ತಿದ್ವಾ ಅಂತ ದೊಡ್ಡ ಸಂಗ್ರಾಮವೇ ನಡೆದುಬಿಡುತ್ತೆ. ಮನೆಯಲ್ಲಿರುವ ಹಿರಿಯರು ಹೊತ್ತಿಮುಂಚೆ ಹೋಗಿ ಬೈಗಾಗಕೆ ಮದ್ಲೆ ಬರ್ರೆ , ಗಡ್ಡೆ ಕುಸ್ದು ಗುದ್ರುದಗೆ ಯಾವಾಳನ ಊಣ್ಕಂಡಿರ ಆಮೇಲೆ ಅಂತ ಎಚ್ಚರ ಹೇಳಿ ಕಳಿಸದೆ ಬಿಡಲ್ಲ.

ಹಳ್ಳಿಯ ಪರಂಪರೆಗಳೇ ಹೀಗೆ. ಆಸು ಪಾಸಲ್ಲಿ ಒದಗುವ ನೈಜ ನಿಕ್ಷೇಪವನ್ನು ಬಾಳಿಗೆ ಬೆಸೆದುಕೊಂಡು ಮುದಗೊಳ್ಳುವುದು. ಮಣ್ಣು ತಂದು ಅಂಗಳದಲ್ಲಿ ಕೆದರಿದರೆ ಸುತ್ತ ಮುತ್ಲಿನ ಜನ ಎಲ್ಲಾ ನಿಂತ್ಕೊಂಡು ನೋಡರೆ. ಅಗಳ್ರೆ ಜೋರಾಗೆ ತಂದಿದಿರಾ ಸಿದ್ದೇಮಣ್ಣಾ, ಇನ್ನೋಸ್ದಿನಾ ಮುಸ್ರೆ ತಿಕ್ಕಕ್ಕೆ ಸಿಂತಿಲ್ಲ ಬಿಡ್ರಿ ಅಂದು ಮಣ್ಣು ಮುಟ್ಟಿ ಮೂಡಿ ಕೈಯಾಡಿಯೇ ಹೋಗುವುದು.

ಅಡುಗೆ ಮನೆಯ ಪಾತ್ರೆಗಳ ಕೂಟ ಮಾಡಿ ಜೈ ಎನಿಸಿಕೊಂಡ ಸಿದ್ದೇಮಣ್ಣಿನಂತೆ ತಲೆಗಳ ಎಣ್ಣೇ ಜಿಡ್ಡು ಬಿಡಿಸಿ ಹೊಗಳಿಸಿಕೊಂಡ ಇನ್ನೊಂದು ಮಣ್ಣಿನ ಸಖ್ಯ ನಮ್ಮೂರಿನ ಜನಕ್ಕಿದೆ. ಇದು ಸೌಳು ಮಣ್ಣು ಮನೆ ಮನೆಯ ಗಂಡಸರು ಹೆಂಗಸರೆಲ್ಲಾ ಜೊತೆಗೂಡಿ ಎತ್ತಿನ ಗಾಡಿಗಳಲ್ಲಿ ಈ ಸೌಳು ಮಣ್ಣಿಗೆ ಹೋಗುವುದು. ನಮ್ಮೂರಿನ ಎಲ್ಲಾ ಮನೆಯ ಮೈಲಿಗೆ ಬಟ್ಟೆಗಳ ಕರೆ ಬಿಡಿಸುವುದು ಇದೇ ಸೌಳು ಮಣ್ಣು.

ಊರಿನ ಕಣ್ಣಿನಂತಿದ್ದ ದೊಡ್ಡಳ್ಳ ಗಂಡೀಕೆರೆಯನ್ನು ದಾಟಿ ಕುರಳ್ಳಿ ಕೆರೆ ಮುಟ್ಟುವವರೆಗೆ ಅದೆಷ್ಟೋ ಅಗಲ ಎಡಬಲದ ನೆಲಗಳ ಬಾಯಾರಿಕೆ ತೀರಿಸಿದೆಯೋ ಲೆಕ್ಕವಿಲ್ಲ. ಹಳ್ಳದ ಬದಿಯಲ್ಲಿ, ಕೆರೆಯ ದಡದಲ್ಲಿ ಜೋಪು ನೀರು ನಿಂತಂತೆ ಕಾಣುವ ಕಡೆಯಲೆಲ್ಲಾ ಅಲ್ಲಲ್ಲಿ ಬೆಳ್ಳಗೆ ಉಪ್ಪು ಮಿಶ್ರಿತ ರಾಳಿನಂತೆ ಸೌಳು ಉಕ್ಕಿರುತ್ತದೆ.

 ಒಂದು ಕಡೆ ಗಾಡಿ ನಿಲ್ಲಿಸಿ ಉಕ್ಕಿದ ಸೌಳು ಮಣ್ಣನ್ನೆಲ್ಲಾ ಬಾಚಿ ಒಂದೊಂದು ಕಡೆ ಗುಡ್ಡೆ ಹಾಕಿ ಮುಂದಕ್ಕೆ ಹೋಗುವುದು. ತಂದ ಬುತ್ತಿ ಉಂಡು ಹೊತ್ತು ಇಳಿಯುವವರೆಗೆ ಸೌಳು ಬಾಚುವುದು ಬಾಚಿದ್ದೆಲ್ಲವನ್ನು ಚೀಲಗಳಿಗೆ ತುಂಬಿ ಗಾಡಿಯಲ್ಲಿಟ್ಟು ಸಂಜೆ ಮುಂದೆ ಊರಿಗೆ ಹಿಂತಿರುಗುವುದು. ಊರು ತಲುಪಿದ ಮೇಲೆ ಎಲ್ಲರೂ ಕೇಳುವವರೆ ಏಸ್ ಮೂಟೆ ಬಾಸಿರಿ? ಈ ವರ್ಷ ತುಂಬತಕ ಆಗುತ್ತೆ ಹೆಚ್ಚಾಗೇ ಬಾಸಿದಿರಾ ಅನ್ನೋ ಮಾತುಕತೆ ಗಂಟೆಗಟ್ಟಲೇ ನಡೆಯುತ್ತೆ.

ಈ ಸೌಳನ್ನು ತಲೆ ಸ್ನಾನಕ್ಕೆ ಬಟ್ಟೆ ನೆನೆಸಲು ಬಳಸುತ್ತಾರೆ. ಗೀರ್ ಸೋಪು, ಸೌಳು ಇಲ್ದೇ ಹೋದ್ರೆ ಒಕ್ಕುಲ್ತನ್ವೆ ನಡ್ಯಲ್ಲ ಇಲ್ಲಿ. ಅಗುಸ್ರು  ಸಿದ್ದಣ್ಣ ಪುಟ್ಟಕ್ಕ ಮೈಲಿಗೆ ಬಟ್ಟೆ ಒಕ್ಕೊಡಕೆ ಬಂದ್ರೆ ಅವರಿಗೆ ಅಳತೆಯ ಲೆಕ್ಕದಲ್ಲಿ ಸೌಳು ತುಂಬಿ ಕೊಡುವುದು. ಒಟ್ಟು ಈ ಮಣ್ಣು ಕೂಡ ಸಿದ್ದೇಮಣ್ಣಿನ ಜೊತೆ ಮನೆಗಳಲ್ಲಿ ಜಾಗ ಮಾಡಿಕೊಂಡು ನೆಲೆಸಿಬಿಡುತ್ತದೆ. ಬಟ್ಟೆ ಪಾತ್ರೆ ಎಲ್ಲವೂ ಈ ಮಣ್ಣಿನ ಜೊತೆಬಿದ್ದು ತಮಗಿಡಿದ ಮಸಿ ಕರೆಯನ್ನು ಕಳೆದುಕೊಂಡು ಮಡಿಯಾಗುತ್ತವೆ.

ಔಡ್ಲೆಣ್ಣೆ ಬಳಿದ ತಲೆಗಳು ಸೌಳು ಮಣ್ಣು ಕದರಿ ಉಜ್ಜಿದರೆ ಜಿಡ್ಡಿಳಿದು ಕೂದಲಿಗೆ ಮೆರುಗು ಬರದೇ ಇರೊಲ್ಲ. ಅಗುಸ್ರು ಈ ಮಣ್ಣು ಬೆರಸಿಯೇ ಬಟ್ಟೆಗಳನ್ನು ಉಬ್ಗಾಕೋದು. ನಮ್ಮೂರಿನ ಎಲ್ಲಾ ಮನೆಗಳವರು ದವಸವನ್ನು ಬೆಳೆದು ಒಟ್ಟಿಕೊಳ್ಳುವಂತೆ ಪ್ರತಿವರ್ಷವೂ ಈ ಮಣ್ಣುಗಳನ್ನು ಶೇಖರಿಸಿಡುತ್ತಾರೆ. ಮಣ್ಣಿನ ಪ್ರೇಮ ಪಾತ್ರೆ ಪಗಡುಗಳನ್ನು ಮುಟ್ಟಿ, ಸೌಳಿನ ಪ್ರೇಮ ಬಟ್ಟೆ ತಲೆಗಳನ್ನು ತೊಳೆದು ನಮಗೆ ನೆರವಾದ ನೆನಪುಗಳು ಜೀವದ ಮನೆಯಲ್ಲಿ ಮುಗಿಯದೆ ಜಾಗವಿಡಿದು ಕುಳಿತಿವೆ. ಇವೆರಡರ ಜೊತೆಗೆ ಕಲ್ಲನ್ನು ತರುವ ಚರಿತ್ರೆಯೊಂದು ನಮ್ಮೂರಿನಲ್ಲಿದೆ.

ಊರಿಂದ ಹೊರಗೆ ಹಿಪ್ಪೇಮರದ ತೋಪು. ಪಕ್ಕದಲ್ಲಿ ಕೊಂಡ್ರು ಸಿಕ್ಕಿನ ತಗ್ಗು ಎಂಬ ಇನ್ನೊಂದು ವಿಶೇಷ ಜಾಗವಿದೆ. ಇವೆರಡರ ನಡುವೆ ಪದರ ಪದರದಂತೆ ಕಾಣುವ ಮೆದುವಾದ ರಂಗಾಲೆ ಗುಂಡಿಯಿದೆ. ಈ ಕಲ್ಲನ್ನು ಹೆಣ್ಣುಮಕ್ಕಳೇ ಜೊತೆಗೂಡಿ ಎಬ್ಬಿಕೊಂಡು ಸಿಬ್ಬಲಲ್ಲಿಟ್ಟು ತರುವುದು. ತಂದ ಕಲ್ಲನ್ನೆಲ್ಲಾ ಒಳ್ಳಿಗೆ ತುಂಬಿ ಕಡೀ ಇಟ್ಟು ಒನಕೆಯಲ್ಲಿ ಜಜ್ಜಿದರೆ ನುಣ್ಣಗಿನ ಬೆಳ್ಳನೆಯ ಪುಡಿ ಸಿಗುತ್ತದೆ. ಇದನ್ನು ಜಲ್ಡೆ ಹಿಡಿದು ಡಬ್ಬಗಳಿಗೆ ತುಂಬಿಟ್ಟುಕೊಳ್ಳುತ್ತೇವೆ. ಒಮ್ಮೆ ತಂದರೆ ಎರಡು ಮೂರು ತಿಂಗಳು ಸಗಣಿ ಬಗ್ಗಡ ಬಳಿದ ಪ್ರತಿ ಮನೆಯ ಮುಂದೆ ಎಳೆ ರಂಗಾಲೆಗಳು ಬೆಳಗಿನಲ್ಲಿ ಬೆಳ್ಳಗೆ ಸ್ವಾಗತಿಸುತ್ತವೆ.

ರಂಗಾಲೆ ಪುಡಿಯನ್ನು ಕೂಡ ನೆಂಟರ ಮನೆಗೆ ಕಳಿಸುವುದು ಮಾಮೂಲಿ ಸಂಗತಿ. ಈ ಮಣ್ಣುಗಳ ಧ್ಯಾನ ಮಾಡುವುದೇ ನಮ್ಮೂರಿನ ಹೆಣ್ಣು ಮಕ್ಕಳಿಗೆ ಪರಮಸಿರಿ. ಎಷ್ಟೆ ಆಧುನಿಕತೆಗೆ ಊರು ಒಡ್ಡಿಕೊಂಡರೂ ಕೂಡ ಈ ಮಣ್ಣುಗಳ ಮೇಲಿನ ಪ್ರೇಮ ಮಾತ್ರ ಹಿಂಗಿಲ್ಲ. ಹಬ್ಬ ಹುಣ್ಣಿಮೆಗಳು ಬಂದವೆಂದರೆ ಬೇಕಾದದ್ದನ್ನೆಲ್ಲಾ ಹೊಂಚಿಕೊಳ್ಳುವ ಪಟ್ಟಿಯಲ್ಲಿ ಮುಖ್ಯವಾಗಿ ಈ ಮಣ್ಣುಗಳು ಕುಳಿತಿರುತ್ತವೆ.

ಬದುಕಿನಲ್ಲಿ ಬಂದು ಹೋಗುವ ಎಲ್ಲಾ ಏರಿಳಿತಗಳನ್ನು ಅಮ್ಮಂದಿರು ಈ ಮಣ್ಣುಗಳಿರುವ ಜಾಗದಲ್ಲಿಯೇ ನಿವೇಧಿಸಿಕೊಳ್ಳುವುದು. ಮನೆ ಮನೆಯಲ್ಲೂ ನಡೆಯುವ ಎಲ್ಲಾ ವರ್ತಮಾನಗಳನ್ನು ಸಿದ್ದೇಮಣ್ಣಿನ ಸರವೂ, ಸೌಳು ನೆಲವೂ, ರಂಗಾಲೆ ಗುಂಡಿಯೂ ಕೇಳಿಕೊಂಡು ಎಲ್ಲರಿಗೂ ಜಾಗ ಒದಗಿಸಿದೆ.

ಮಣ್ಣಿನ ಮಮತೆ ನನ್ನೂರಿನ ಬಾಳಿನ ನೆಲಕ್ಕೆ ಬಿದ್ದು ಕೊಟ್ಟ ಸಂತಸದ ಫಸಲು ಕಡಿಮೆಯೇನಲ್ಲ.

September 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ವಿದ್ಯಾಧರೆ

    ಗೀತಾ ಗುರುಗಳು….
    ಇವರ ತರಗತಿಗೆ ಹಾಜರಾಗಲು ಅದೇನೋ ಸಿರಿ… ನಂಗೆ ಕನ್ನಡ ಅಂದ್ರೆ ಇಷ್ಟ, ಇವರ ಕನ್ನಡ ಪಠ ಅಂದ್ರೆ ಇಷ್ಟ.
    ಸುಮಾರು 18 ವರ್ಷಗಳು ಕಳೆದರೂ ಇವರ ಪಾಠ ಕಿವಿ ಅಲ್ಲಿ ಹಾಗೆ ಇದೆ.
    ಇನ್ನೂ ಮೇಲೆ ಬರೆದ ಅಂಕಣ ಅಂತು, ಆಹಾ ಆಡು ಭಾಷೆ ಕನ್ನಡ ಅದೆಷ್ಟು ಚಂದಾ.
    ಈ ತರಹದ ಮಣ್ಣು ಗಳ ಬಗ್ಗೆ ನಮ್ಮ ವಯಸ್ಸಿನವರಿಗೆ ಅರಿವೇ ಇಲ್ಲ, ಇಲ್ಲ ಬರೆದಿರುವುದು ಅದೆಷ್ಟೋ ಕನ್ನಡ ಪದಗಳು ಕಳೆದೇ ಹೋಗಿವೆ, ನೀವು ಹೀಗೆ ಇನ್ನೂ ಹೆಚ್ಚಿನ ಅಂಕಣ ಬರಹಗಳು ಬರೆದ, ಕನ್ನಡ ಮೇಲೆ ಆಂಗ್ಲ ಭಾಷೆಯ ಪದಗಳ ಆಕ್ರಮಣ ತಡೆದು ಮುಂದಿನ ಮಕ್ಕಳ ಓದಲು ಒಳ್ಳೇ ಕನ್ನಡ ಉಳಿಸಿ ಕೊಡಿ.

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಪಾತ್ರೆ ತಿಕ್ಕಲು ಮಣ್ಣು ಬೂದಿ ಬಳಸೋದು ಗೊತ್ತಿತ್ತು..ತಲೆಗೂ ಬಟ್ಟೆಗೂ ಮಣ್ಣು ಬಳಸೋದು ಗೊತ್ತಿರಲಿಲ್ಲ..ಒಳ್ಳೆಯ ಬರಹ ಮೇಡಂ

    ಪ್ರತಿಕ್ರಿಯೆ
  3. ಗೀತಾ ಎನ್ ಸ್ವಾಮಿ

    ನಮ್ಮ ಊರಿನಲ್ಲಿ ಉಗಾದಿಗಿಂತಲೂ ಹೆಚ್ಚು ಈ ಮಣ್ಣನ್ನು ಗೌರವಿಸುತ್ತಾರೆ ರೇಣುಕಾ ಮೇಡಂ.
    ಧನ್ಯವಾದಗಳು ಮೇಡಂ.

    ಪ್ರತಿಕ್ರಿಯೆ
  4. N.Ravikumar telex

    ನೆಲ ಮೂಲದೊಂದಿಗಿನ ಬದುಕಿನ ನಂಟನ್ನು ಉತ್ಕನನಗೊಳಿಸಿದಂತಿದೆ ಬರಹ….
    ಮಣ್ಣೆ ಬದುಕಾಗಿ ಮಣ್ಣಿನಿಂದಲೆ ಬದುಕ ಬೆಳಗಾಗುವ ಪರಿಯಿದು. ಭಾಷೆಯ ಸೊಗಡಂತೂ ವಿಶಿಷ್ಟ ಮೇಡಂ

    ಪ್ರತಿಕ್ರಿಯೆ
  5. Kavishree

    ಸೌಳು ತರಲು ಹೊರಟು ಮೋಟು ಪರಕೆ ಹುಡುಕುತ್ತಿದ್ದ ಕಾಲ ನೆನಪಾಯಿತು. ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  6. Vishwas

    #ಮಣ್ಣು ಬಾಳಿಗೆ ಹೊನ್ನು.
    ಅಕ್ಕನ ಲೇಖನದ ಪದಗಳು, ಒಂದೊಂದಾಗಿ ಸಾಗುತಿರಲು, ತನ್ನೂರಿನ ಮಣ್ಣಿನ ಸೊಗಡನ್ನು ಮನಸಾರೆ ಸವಿದಂತೆ, ಕಣ್ಣಾರೆ ಕಂಡಂತೆ, ಕೈಯಾರೆ ಸ್ಪರ್ಶಿಸಿದಂತನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

    ನಾನು, ಅಕ್ಕನ ಈ ಪದಬುತ್ತಿಯಲ್ಲಿ ಉಂಡ ಸಾರಾಂಶದ ಹಿಟ್ಟಿದು.

    “ಮಣ್ಣು ತಾಯಿಯ ಸ್ವರೂಪ” . ನಮಗೆ ಎಷ್ಟೇ ವಯಸ್ಸಾದರೂ, ನಮ್ಮನ್ನು ಮಗುವಿನಂತೆ ಪಾಲನೆ, ಪೋಷಣೆ ಮಾಡುವುದು ಮಣ್ಣು ಮಾತ್ರ.

    * ಕೃಷಿಯು ತಂದೆಯಾದರೆ, ಮಣ್ಣು ತಾಯಿಯಾಗಿ ಹಸಿದ ಹೊಟ್ಟೆಗಳಿಗಾಸರೆಯಾಗುತ್ತಾಳೆ, ನಮ್ಮನ್ನು ಸಾಕುತ್ತಾಳೆ, ಸಲಹುತ್ತಾಳೆ.

    * ತಾಯಿಯು, ನಾವು ಬೇಯಿಸಿ, ಕರೆದು, ತಿನ್ನಲು ಬಳಸುವ ಪಾತ್ರೆ ಪಗಡೆಗಳನ್ನು ಸಿದ್ದೇಮಣ್ಣಾಗಿ ಬೆಳಗುತ್ತಾಳೆ.

    * ನಮ್ಮ ತಲೆ, ಕೂದಲು, ದೇಹಗಳನ್ನು, ಬಟ್ಟೆ ಬರೆಗಳನ್ನು ಆ ತಾಯಿಯು ಸೌಳು ಮಣ್ಣಾಗಿ ಶುಚಿಸುತ್ತಾಳೆ.

    * ಸ್ವತಹ ಸೂರ್ಯ ದೇವರನ್ನೇ, ನೆಂಟನನ್ನಾಗಿಸಿ, ಮನೆಗಾಗಮಿಸುವ ರಂಗವಲ್ಲಿಯಾಗುತ್ತಾಳೆ.

    #ಮಣ್ಣು ದೇವರು‌. ಮಣ್ಣೇ ದೇವರು.

    ಪ್ರತಿಕ್ರಿಯೆ
  7. ಮೇಘನಾ

    ತುಂಬಾ ಸೊಗಸಾಗಿ ಮೂಡಿಬಂದಿದೆ ನಿಮ್ಮ ಈ ಅಂಕಣ ಓದುತ್ತಾ ಓದುತ್ತಾ ಅನಾಯಾಸವಾಗಿ ನಿಮ್ಮೂರನ್ನು ಒಂದು ಸುತ್ತು ಹಾಕಿ ಬಂದ ಅನುಭವ , ಮಣ್ಣಿನ ಕಂಪನ್ನು ಪಸರಿಸಿದ ನಿಮಗೆ ಅನಂತ ಅನಂತ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: