ಸಿಹಿಸಿಹಿ, ಉಪ್ಪುಪ್ಪು ಪಾನಕದಂಥ ಅಮ್ಮ!

ರತ್ನಾ ಪಾಠಕ್ ಶಾ

ಅಮ್ಮನ ಕುರಿತಾದ ಎಲ್ಲ ನೆನಪುಗಳಲ್ಲಿ ಒಂದು ಮಾತ್ರ ಯಾವಾಗಲೂ ಕಣ್ಮುಂದೆ ಬರುತ್ತಿರುತ್ತದೆ.

ಒಮ್ಮೆ, ಮುಂಬಯಿಯಲ್ಲಿ ಕೇವಲ 15 ಟಿಕೆಟುಗಳನ್ನು ಬುಕ್ ಮಾಡಿಕೊಂಡ 30 ಯುವನಟರ ತಂಡವೊಂದು ರೈಲು ಹತ್ತಲು ಪ್ರಯತ್ನಿಸುತ್ತಿತ್ತು. ಗಮ್ಯಸ್ಥಾನ – ಅಹಮದಾಬಾದ್. ತಂಡ ‘ಮಿಥ್ಯ ಅಭಿಮಾನ್’ ನಾಟಕವನ್ನು ಪ್ರದರ್ಶಿಸಲು ಹೋಗುತ್ತಿತ್ತು; ಟಿಕೆಟ್ ಸಿಗದಿರಲಿ, ಟ್ರೈನ್ ಬಂದ್ ಆಗಲಿ… ಶೋ ಮಸ್ಟ್ ಗೋ ಆನ್ ಅಲ್ವ? ಹೇ, ನಮ್ಮ ತಂಡಕ್ಕೆ ಇದೇನು ಕಷ್ಟದ ವಿಚಾರ ಅಲ್ಲವೇ ಅಲ್ಲ, ಸೀಟು ಸಿಗುತ್ತದೆ, ಟ್ರೈನ್ ಹತ್ತಿ ಹತ್ತಿ ಎಂದು ನಮ್ಮನ್ನು ಪುಸಲಾಯಿಸಿದ ಅಮ್ಮನನ್ನು ಬಿಟ್ಟು ಉಳಿದವರೆಲ್ಲ ಕಂಗಾಲಾಗಿದ್ದರು. ಆ ಕ್ಷಣ ಪರಿಸ್ಥಿತಿಯನ್ನು ತಂಡವೇನು ಲೀಲಾಜಾಲವಾಗಿ ನಿರ್ವಹಿಸಲಿಲ್ಲ, ನಿಭಾಯಿಸಿದ್ದೆಲ್ಲ ಅಮ್ಮನೇ.

ನಾವಿನ್ನೂ ಬೊರಿವಿಲಿ ದಾಟಿರಲಿಲ್ಲ, “ಟ್ರೈನಿನಲ್ಲಿ ಇದ್ದವರೆಲ್ಲರ ಬಾಯಿಯಲ್ಲಿ… ಅಮ್ಮನ ಹೆಸರು…” ಅಲ್ಲಿದ್ದವರ ಪಿಸುಮಾತು ಬಾಯಿಯಿಂದ ಕಿವಿಗೆ ಹರಡಿ, ಇಡೀ ಬೋಗಿಯಲ್ಲೆಲ್ಲ ಅನುರಣಿಸಿತು. ಅಮ್ಮ ಇಡೀ ಕಂಪಾರ್ಟ್ಮೆಂಟಿಗೆ ತನ್ನ ನಗುವನ್ನು ಹಂಚಿದಳು. ಅದೇ ಕ್ಷಣದಲ್ಲಿ ನಮ್ಮ ಸಹ-ಪ್ರಯಾಣಿಕರು ಮೋಡಿಗೆ ಒಳಗಾದವರಂತೆ ನಮ್ಮನ್ನೆಲ್ಲ ಅಚ್ಛಚ್ಛೇ ಮಾಡುತ್ತ, ಸೀಟುಗಳನ್ನು ಬಿಟ್ಟುಕೊಟ್ಟರು. ಅಲ್ಲಿದ್ದ ಪ್ರಯಾಣಿಕರಲ್ಲಿ ಅನೇಕರು ಅಮ್ಮನ ನಾಟಕಗಳನ್ನು ನೋಡಿದ್ದರು. ‘Mena Gurjari’ ಅತ್ಯಂತ ಜನಪ್ರಿಯವಾಗಿತ್ತು. ಕೆಲವರು ಚಲನಚಿತ್ರಗಳನ್ನು ನೋಡಿದ್ದರು. ‘ಜಲ ಬಿನ್ ಮಚ್ಲಿ ನೃತ್ಯ ಬಿನ್ ಬಿಜಲಿ’ ಅಲ್ಲಿದ್ದವರಲ್ಲಿ ಅನೇಕರ ನೆಚ್ಚಿನ ಚಿತ್ರವಾಗಿತ್ತು (‘ಗೋಲ್ ಮಾಲ್’ ಸಿನಿಮಾ ಇನ್ನೂ ಬಂದಿರಲಿಲ್ಲ)! ಕೆಲವರಿಗೆ ಜುನಾಗಢ/ ಅಹಮದಾಬಾದ್/ ಪುಣೆ/ಮುಂಬಯಿಯಲ್ಲಿ ಅಮ್ಮನ ಪರಿಚಯವಿರುವ ಅಂಕಲ್-ಆಂಟಿಗಳಿದ್ದರು.

ಅಲ್ಲಿದ್ದವರೆಲ್ಲ: ಗುಜರಾತಿಯ ಮೂರು ಭಿನ್ನ ಉಪಭಾಷೆ, ಶುದ್ಧ ಮರಾಠಿ, ಬಂಗಾಲಿಯಲ್ಲಿ ಗಲಗಲ ಎಂದು ಬಾಯ್ತುಂಬ ಮಾತನಾಡುತ್ತ. ತಾವು ತಂದಿದ್ದ ನಾನಾ ಬಗೆಯ ತಿಂಡಿ-ತಿನಿಸು-ನಾಷ್ಟಾವನ್ನು ಹಂಚಿಕೊಳ್ಳುತ್ತ, ಅಮ್ಮ ನಟಿಸಿದ ಪಾತ್ರಗಳ ಬಗ್ಗೆ ಬ್ರಹ್ಮಾಂಡವಾಗಿ ಮಾತನಾಡುತ್ತ… ಕಂಪ ಬಿಡುವ ದಳಗಳಂತೆ ಸುತ್ತಲರಳಿಕೊಂಡರು.

ನಾವು ದಹಾನುವನ್ನು ತಲುಪುವ ಮೊದಲೇ, ನಮ್ಮ ತಂಡದ ಟಿಕೆಟ್ ಇಲ್ಲದ 15 ಮಂದಿ ಕಂಪಾರ್ಟ್‌ಮೆಂಟ್‌ನಲ್ಲಿ ಸುರಕ್ಷಿತವಾಗಿ ತಳವೂರಿದ್ದರು; ಟಿಕೆಟ್ ಕಲೆಕ್ಟರ್ ಕೂಡ ಮೋಡಿಗೆ ಒಳಗಾದಂತಿದ್ದ. ನಾವು ಅಲ್ಲೊಬ್ಬರು-ಇಲ್ಲೊಬ್ಬರು ಎಂದು ಇಡೀ ಬೋಗಿ ತುಂಬ ಹಂಚಿಹೋಗಿದ್ದೆವು. ಒಂದೆರಡು ಕಡೆಯಂತೂ ಬರ್ತ್‌ಗಳ ನಿಜವಾದ ಮಾಲೀಕರು ಸೀಟು ತಮ್ಮದಲ್ಲ ಎನ್ನವಂತೆ ಒಂದು ಮೂಲೆಯಲ್ಲಿ ಕೂತಿದ್ದರೆ, ಇನ್ನೊಂದು ಭಾಗದಲ್ಲಿ ನಾವು ಅವರ ಮಕ್ಕಳಂತೆ ಬೀಡುಬೀಸಾಗಿ ಕೈಕಾಲು ಚಾಚಿ ಮಲಗಿದ್ದೆವು.

ಜನರೇ ಅಮ್ಮನ ರಂಗಶಾಲೆ’

ಇದು ನನ್ನ ಅಮ್ಮ. ಅಥವಾ ಅಮ್ಮನೊಳಗಿನ ಒಂದು ಪ್ರಮುಖ ಭಾಗ. ಅವಳಿಗೆ ಜನರನ್ನು ಕಂಡರೆ ಬೆಲ್ಲ ಕಂಡಷ್ಟು ಅಕ್ಕರೆ. ಜನರೇ ಅವಳ ಅಭಿನಯ, ರಂಗ ತರಬೇತಿ ಶಾಲೆ, ಕಲ್ಪನೆಗಳ ವಿಶ್ವವಿದ್ಯಾಲಯ. ಕವಿಗಳು, ಬರಹಗಾರರು, ಸಂಗೀತಗಾರರು, ನರ್ತಕರು, ವಿದ್ವಾಂಸರು, ವಿಜ್ಞಾನಿಗಳು, ರಾಜಕಾರಣಿಗಳು, ಟ್ರೇಡ್ ಯೂನಿಯನ್‌ಗಳು, ರೈತರು, ಅಂಗಡಿಯವರು, ಕೇಶ ವಿನ್ಯಾಸಕರು, ಪತ್ರಕರ್ತರ ಜೊತೆ ತುಂಬಾ ಸರಳವಾಗಿ ಸಂವಹನ ಸಾಧ್ಯವಿತ್ತು ಅಮ್ಮನಿಗೆ. ಇದಕ್ಕೆ ಪೂರಕವಾಗುವಂತೆ ಅವಳು ಹೆಚ್ಚು ಓದಿದ್ದಾಳೆ, ಸಂಶೋಧನೆ ಮಾಡಿದ್ದಾಳೆ ಎಂದು ನಾನು ಭಾವಿಸುವುದಿಲ್ಲ. ಅವಳು ತಿಳಿದಿರುವುದೆಲ್ಲ ಈ ಎಲ್ಲರಿಂದ ಹೀರಿಕೊಂಡದ್ದು ಎನ್ನುವುದು ಮಾತ್ರ ಸತ್ಯ.

ಸ್ಪಂಜಿನಂತೆ ಅವಳು ಎಲ್ಲರ ಆಲೋಚನೆಗಳನ್ನು ಹೀರಿಕೊಂಡು ಅದನ್ನು ಜೀವನಕ್ಕೆ, ನಟನೆಗೆ ಬಳಸುತ್ತಿದ್ದಳು. ಪರಮಾಣು ವಿಜ್ಞಾನಿಗಳಿಂದ ದಾದಿಯರವರೆಗೆ ಎಲ್ಲ ರೀತಿಯ ಜನರನ್ನು ಅಮ್ಮ ಹತ್ತಿರದಿಂದ ಬಲ್ಲವಳಾಗಿದ್ದಳು. ಅವರೆಲ್ಲರ ಉಪಸ್ಥಿತಿಯನ್ನು ಆನಂದಿಸುತ್ತಿದ್ದಳು. ಉರ್ದು ಕಾವ್ಯದ ಕುರಿತಾದ ತನ್ನ ಮಿತಿ ಅಥವಾ ದಾಲ್ಧೋಕ್ಲಿ (ಅವಳು ಮಹಾನ್ ಆಹಾರಪ್ರಿಯೆ. ಆದರೆ, ಒಳ್ಳೇ ಕುಕ್ ಆಗಿರಲಿಲ್ಲ) ಅಂತಹ ವಿಷಯಗಳಲ್ಲಿ ತನ್ನ ಜ್ಞಾನದ ಕೊರತೆಯನ್ನು ಒಪ್ಪಿಕೊಳ್ಳಲು ಅವಳಿಗೆ ಯಾವುದೇ ಮುಜುಗರ ಇರಲಿಲ್ಲ. ಸಂತೋಷದಿಂದ ತನ್ನ ಓರೆಕೋರೆ ಒಪ್ಪಿಕೊಳ್ಳುತ್ತಿದ್ದ ಕಾರಣಕ್ಕೇ ಇವುಗಳಲ್ಲಿ ಯಾವುದೂ ಅವಳನ್ನು ನರಳುವಂತೆ ಮಾಡಲಿಲ್ಲ. ಅಮ್ಮನ ಇನ್ನೊಂದು ಅದ್ಭುತ ಗುಣ ಜೊತೆಗಿದ್ದವರನ್ನ ಆರಾಮವಾಗಿ ಇರಲು ಬಿಟ್ಟು, ಅವರಲ್ಲಿ ಇರಬಹುದಾದ ಅತ್ಯತ್ತಮವಾದುದನ್ನು ಹೊರಗೆಳೆಯುತ್ತಿದ್ದ ಗುಣ.

ಇದು ಅವಳು ಜನರನ್ನು ತನಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾಳೆ ಎನ್ನುವಂತೆ ಧ್ವನಿಸಿದರೂ, ಅದೇನು ತಪ್ಪಾದ ಚಿತ್ರಣವಲ್ಲ. ಅವಳು ತನ್ನ ಸ್ವಂತ ಅಗತ್ಯಗಳಿಗಾಗಿ ಜನರನ್ನು ಬಳಸಿಕೊಂಡಳು. ಅದರ ಹತ್ತುಪಟ್ಟು ಅವರಿಗೆ ಹಿಂದಿರುಗಿಸಿದಳು.

ಹಳೆಯ, ಹೊಸ ಎಲ್ಲ ರೀತಿಯ ಸ್ನೇಹಕ್ಕೆ ಅಮ್ಮ ಸಮಯ, ಪ್ರೀತಿ ಕೊಟ್ಟಳು. ಅವರೆಲ್ಲರ ಕುಟುಂಬದ ಬಗ್ಗೆ ಅವಳಿಗೆ ನಿಜವಾದ ಅಕ್ಕರೆ ಇತ್ತು. ಅಮ್ಮ ದೇಶದಾದ್ಯಂತ ಆತ್ಮೀಯ, ದೀರ್ಘಕಾಲದ ಸ್ನೇಹ ಬಳಗ ಹೊಂದಿದ್ದಳು. ವಾಸ್ತವವಾಗಿ, ನಾನು-ನನ್ನ ಸಹೋದರಿ ಸುಪ್ರಿಯಾ ಭಾರತದಲ್ಲಿ ಅಮ್ಮನನ್ನು ಪ್ರೀತಿಯಿಂದ ಸ್ವಾಗತಿಸುವ ಮನೆಯನ್ನು ಹೊಂದಿರದ ಯಾವುದೇ ನಗರವಿಲ್ಲ ಎಂದು ತಮಾಷೆ ಮಾಡುತ್ತಿದ್ದೆವು.

ಅವಳೊಂದಿಗೆ ಕೆಲಸ ಮಾಡಿದವರಿಗೆಲ್ಲ ಗೊತ್ತಿದೆ: ಕೆಲಸದೆಡೆಗಿನ ಅವಳ ಬದ್ಧತೆ, ಕುತೂಹಲ, ಚೆನ್ನಾಗಿ ಮಾಡಬೇಕೆಂಬ ಅವಳ ಅಪಾರ ಉತ್ಸಾಹ, ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಸಹಜ-ಮಾನವೀಯ ತಿಳಿವಳಿಕೆ. ಜನರಲ್ಲಿ ಅವಳಿಗೆ ನಿಜವಾದ ಆಸಕ್ತಿ ಇತ್ತು. ಅದೇ ಅವಳನ್ನು ಜನರೊಂದಿಗೆ ಬೆಸೆದ ಬಂಧ. ಅವಳ ಕೇಶ ವಿನ್ಯಾಸಕಿಯಿಂದ ಹಿಡಿದು ನಿರ್ದೇಶಕರವರೆಗೆ ಅವಳ ಮಾತು-ನಡೆ-ನುಡಿ ಒಂದೇ ರೀತಿ ಇರುತ್ತಿತ್ತು. ರೈಲಿನಲ್ಲಿ, ರೋಟರಿ ಸಭೆಯಲ್ಲಿ ಯಾರ ಜೊತೆಗಾದಾರೂ ಒಂದು ಸಣ್ಣ ಭೇಟಿ-ಮಾತುಕತೆಯಲ್ಲಿ ತಮಾಷೆ ಮಾಡುತ್ತ, ಕತೆ ಹೇಳುತ್ತ ಎದುರಿನವರ ಪೂರ್ವಾಪರವನೆಲ್ಲ ಗಮನವಿಟ್ಟು ಕೇಳಿ ತಿಳಿದುಕೊಳ್ಳುತ್ತಿದ್ದಳು. 

ನಟನೆ ಅವಳ ಅಸ್ತಿತ್ವದ ಭಾಗ

ಅಮ್ಮ ಒಮ್ಮೆ ಶಿರಡಿ ಪ್ರಯಾಣ ಮಾಡುತ್ತಿದ್ದಾಗ ಅಲ್ಲಿ ಅವಳಿಗೆ ಒಬ್ಬ ತಾಯಿ- ಅವಳ ಮೂರು ಹೆಣ್ಣುಮಕ್ಕಳ ಪರಿಚಯವಾಯಿತು. ಆನಂತರ ಎಷ್ಟೋ ವರ್ಷಗಳವರೆಗೆ ಅಮ್ಮ, ಥಾಣೆಯಲ್ಲಿರುವ ಅವರ ಮನೆಯಲ್ಲಿ ದಕ್ಷಿಣ ಭಾರತದ ರುಚಿಕರವಾದ ಊಟವನ್ನು ಮಾಡುತ್ತಿದ್ದಳು (ಅವರನ್ನು ಭೇಟಿಯಾಗಲು ಅಷ್ಟು ದೂರ ಪ್ರಯಾಣಿಸುತ್ತಿದ್ದಳು). ಆ ಹೆಣ್ಣುಮಕ್ಕಳಿಗೆ ಸೂಕ್ತ ವರರನ್ನು ಹುಡುಕಲು ಪ್ರಯತ್ನಪಟ್ಟಳು, ಮುಖ್ಯವಾಗಿ ಅವರ ಏಕಮಾತ್ರ ಪುತ್ರನಿಗೆ ಸೂಕ್ತ ವಧುವನ್ನು ಹುಡುಕಿ ಮದುವೆಗಳಲ್ಲಿ ಭಾಗವಹಿಸಿದಳು. ಅತಿಥಿಗಳು ಹೆಚ್ಚು ಮೆಚ್ಚಿದ-ಆನಂದಿಸಿದ ಚಲನಚಿತ್ರಗಳ ಪಾತ್ರಗಳನ್ನು ನಿಜ ಜೀವನದಲ್ಲಿ ಮತ್ತೆ ಮತ್ತೆ ನಿರ್ವಹಿಸಿದಳು. ಆ ಕುಟುಂಬಗಳ ಸದಸ್ಯಳಾದಳು; ಅಜ್ಜಿ, ಮಾಸಿ, ತಾಯಿ… ಎಲ್ಲರೂ ತಮ್ಮ ಕುಟುಂಬಕ್ಕೆ ಬಯಸಿ ಬಯಸಿ ಹೊಂದುವಂತಹ ಒಂದು ಪಾತ್ರದಂತೆ ಬದುಕಿದಳು.

ನಾನು ಅಥವಾ ಸುಪ್ರಿಯಾ ಅಮ್ಮನ ಬಗ್ಗೆ ಎಂದಿಗೂ ಅಸಮಾಧಾನಗೊಂಡಿಲ್ಲ ಎಂಬುದು ಅವಳು ತಾಯಿಯಾಗಿ ನಮ್ಮೊಂದಿಗೆ ಎಷ್ಟು ಬದ್ಧತೆಯಿಂದ ನಡೆದುಕೊಂಡಳು ಎಂಬುದಕ್ಕೆ ಸಾಕ್ಷಿ. ಇದಕ್ಕೆ ತದ್ವಿರುದ್ಧವಾಗಿ, ಅವಳು ಇತರರಿಗೆ ಏನನ್ನು ಅರ್ಥೈಸಿದಳು ಎಂಬುದರ ಬಗ್ಗೆ ನಾವು ಯಾವಾಗಲೂ ಹೆಮ್ಮೆಪಡುತ್ತೇವೆ. ಹೊಂದಾಣಿಕೆ ಅವಳ ಬದುಕಿನ ಏಕಮಾತ್ರ ಸೂತ್ರವಾಗಿತ್ತು. ಅಮ್ಮನ ಮಾಮಿ ಆಗಾಗ ಹೇಳುತ್ತಿದ್ದಳು, “ಅವಳು ನಿಂಬೆ ರಸದಂತೆ… ಸಿಹಿಸಿಹಿ ಪಾನಕವೂ ಆಗುತ್ತಾಳೆ, ಉಪ್ಪುಪ್ಪು ಸೋಡಾ ಕೂಡ ಆಗುತ್ತಾಳೆ!”

ಅವಳ ಮಾಮಿ ನಿಸ್ಸಂಶಯವಾಗಿ ಅಮ್ಮನಿಗೆ ಇದನ್ನು ಪದೇ-ಪದೇ, ಜೀವನದಲ್ಲಿ ಬಹಳ ಮುಂಚೆಯೇ ಹೇಳಿದ್ದಳೆಂದು ಕಾಣುತ್ತದೆ. ಏಕೆಂದರೆ ಅಮ್ಮ ಈ ಮಾತನ್ನು ರಕ್ತಗತವೇ ಮಾಡಿಕೊಂಡ ಹಾಗೆ ಕಾಣುತ್ತದೆ. ಅವಳು ಇದ್ದ ಪರಿಸ್ಥಿತಿಗೆ ಸರಿಹೊಂದುವಂತೆ ತನ್ನ ಜೀವನದ ಬಹುಪಾಲನ್ನು ರೂಪಾಂತರದಲ್ಲೇ ಕಳೆದಿದ್ದಾಳೆ. ಸೌರಾಷ್ಟ್ರದ ಸಿವಿಲ್ ಎಂಜನಿಯರ್‌ನ ಮಗಳು, ತನ್ನ ಅಸ್ತಿತ್ವದ ಮೂಲಾಧಾರವಾದ ನಟಿಯನ್ನು ತನ್ನಲ್ಲಿಯೇ ಕಂಡುಕೊಳ್ಳುವವರೆಗೂ ರೂಪಾಂತರಗೊಳ್ಳುತ್ತಲೇ ಇದ್ದಳು.

ಅಮ್ಮ ಆಕರ್ಷಕ, ಉತ್ಸಾಹಭರಿತ, ಬಹು-ಪ್ರತಿಭಾನ್ವಿತ ಅಭಿನೇತ್ರಿಯಾಗಿ, ರಂಗಭೂಮಿಗೆ ತನ್ನನ್ನೇ ತೆತ್ತುಕೊಂಡು ದೃಢವಾಗಿ ಬೆಳೆದಳು. ಒಂದು ಸಮಯದಲ್ಲಿ (1940ರ ದಶಕದ ಅಂತ್ಯ, 1950ರ ದಶಕದ ಆರಂಭದಲ್ಲಿ) ಭಾರತದಾದ್ಯಂತ ರಂಗಭೂಮಿಯ ಜನರು ಆಧುನಿಕತೆಯ ಗುರುತನ್ನು ಹುಡುಕುತ್ತಿದ್ದಾಗ, ಅಮ್ಮ ಅಹಮದಾಬಾದ್‌ನಲ್ಲಿ ತಾನು ಸ್ಥಾಪಿಸಿದ ನಾಟಕ ಕಂಪನಿಯಾದ ‘ನಟ್ ಮಂಡಲ್‌’ನಲ್ಲಿ ತನ್ನದೇ ಆದ ಹುಡುಕಾಟವನ್ನು ಪ್ರಾರಂಭಿಸಿದಳು. ಅಲ್ಲಿ ನಾನಾ ನಾಟಕಗಳನ್ನು ನಿರ್ಮಿಸಿದಳು. ಭಾವೈನಂತಹ (Mena Gurjari) ಜಾನಪದ ರೂಪಗಳಿಂದ ಹಿಡಿದು ಯುರೋಪಿಯನ್ ನಾಟಕಗಳಾದ ಹೆನ್ರಿಕ್ ಇಬ್ಸೆನ್ನ ಡಾಲ್ಸ್ ಹೌಸ್ ವರೆಗೆ (ಧಿಂಗ್ಲಿ ಘರ್).

ಅಮ್ಮ ದೇಶದ ಕೆಲವೇ ಕೆಲವು ಮಹಿಳಾ ನಟ(ಟಿ) ನಿರ್ವಾಹಕರಲ್ಲಿ ಒಬ್ಬಳಾಗಿದ್ದಳು. ತನ್ನ ತಂಡಕ್ಕೆ ತರಬೇತಿ ನೀಡುವ, ವೃತ್ತಿಪರ ಗುಜರಾತಿ ನಾಟಕ ಕಂಪನಿಯನ್ನು ನಡೆಸುವ ಕನಸನ್ನು ಉತ್ತಿ ಬೆಳೆದಿದ್ದಳು. ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್‌ನೊಂದಿಗೆ ಅವಳು ಕಲಿತ ಕೌಶಲಗಳು, ನೃತ್ಯ ಪ್ರದರ್ಶನಗಳೊಂದಿಗೆ ದೇಶದಾದ್ಯಂತ ಪ್ರಯಾಣಿಸಿ, ಬಂಗಾಲದಲ್ಲಿ ತಲೆದೋರಿದ್ದ ಕ್ಷಾಮಕ್ಕೆ ಹಣವನ್ನು ಸಂಗ್ರಹಿಸಿದಳು.

ಇದು ಅವಳನ್ನು ಬದಲಿಸಿದ, ಉಳಿದ ಜೀವನ ಸಾಗಬೇಕಾದ ದಾರಿ ತೋರಿದ ಅನುಭವ; ಎಂದಿಗೂ ಅವಳು ಬೇರೆಯವರು ಆಡಿಸುವ ಗೊಂಬೆಯಾಟಕ್ಕೆ ದಾರವಾಗಲಿಲ್ಲ. ತಾನೇ ಸೂತ್ರದಾರಳಾದಳು. ಸಮಾನ ಸಮಾಜದ ಕಲ್ಪನೆಯ ಜೊತೆಗೆ ಸಾಗಿದಳು, ಕೊನೆಯವರೆಗೂ ಕಾರ್ಮಿಕ ವರ್ಗದ ಆಂದೋಲನಗಳ ಜೊತೆ ಹೆಜ್ಜೆ ಹಾಕಿದಳು.

ಅಮ್ಮನ ಹಲವು ಮುಖಗಳು

ನಂತರ ಅಮ್ಮನ ಜೀವನ ಸಿನಿಮಾ-ಮನೆಗೆಲಸ-ಮಕ್ಕಳ ಪೋಷಣೆಯ ಮೂಲಕ ಪ್ರಮುಖ ತಿರುವು ಪಡೆಯಿತು (ಕೆಲವರು ಇದನ್ನು ಅವಳನ್ನು ಅವಳು ಮಾರಾಟ ಮಾಡಿಕೊಂಡಳು ಎಂದು ಕರೆಯುತ್ತಾರೆ). ಈ ಎಲ್ಲಾ ಹಂತಗಳಲ್ಲಿ ಹೊಂದಿಕೊಳ್ಳಲು ವ್ಯಕ್ತಿತ್ವದಲ್ಲಿ ನಿರ್ಣಾಯಕ, ಕೆಲವೊಮ್ಮೆ ಮೂಲಭೂತ ಬದಲಾವಣೆ ಮಾಡಿಕೊಂಡಳು ಎನ್ನುವುದನ್ನು ನಾನು ಸಮರ್ಥಿಸುತ್ತೇನೆ. ವುಡಿ ಅಲೆನ್‌ ಅವರ ‘ಝೆಲಿಗ್’ ಚಿತ್ರದ ಪಾತ್ರದಂತೆ ಪ್ರತಿ ಬಾರಿಯೂ ಅವಳು ಸ್ವಲ್ಪ ವಿಭಿನ್ನ ವ್ಯಕ್ತಿಯಾಗುತ್ತಿದ್ದಳು – ಆ ಸಮಯದಲ್ಲಿ ಅವಳನ್ನು ಸುತ್ತುವರೆದಿರುವ ಜನರಂತೆ.

ಈ ಕತೆಯ ನಿಜವಾದ ವಿಜಯವು ಅವಳು ಯಾವಾಗಲೂ ತಾನು ಆದ ಪಾತ್ರಕ್ಕೆ ತನ್ನ ಶಕ್ತಿಮೀರಿ ಒದಗಿಸುತ್ತಿದ್ದ ನ್ಯಾಯದಲ್ಲಿದೆ; ಈ ಎಲ್ಲಾ ಪಾತ್ರಗಳು ಒಟ್ಟಿಗೆ ವಾಸಿಸುತ್ತಿದ್ದರೂ, ಎಲ್ಲವೂ ಪರಸ್ಪರ ಅವಳ ವಿವಿಧ ಅಸ್ತಿತ್ವಗಳನ್ನು ರೂಪಿಸಿದ ಜನರೊಂದಿಗೆ ಸಂಪರ್ಕದಲ್ಲಿದ್ದವು. ಅವಳ ಗರಗಸದಂತಹ ಜೀವನದ ಪ್ರತಿಯೊಂದು ಹಂತದಲ್ಲಿ ಅವಳು ಅದ್ಭುತ ಸ್ನೇಹ ಬಳಗವನ್ನು ಹೊಂದಿದ್ದಳು. ಎಲ್ಲಾ ನೋವು, ಈಡೇರದ ಭರವಸೆಗಳ ಜೊತೆಗೇ ಅವಳು ತನ್ನೊಂದಿಗೆ, ಪ್ರಪಂಚದೊಂದಿಗೆ ಶಾಂತಿ-ನೆಮ್ಮದಿಯಿಂದ ಇದ್ದಳು.

ಮತ್ತೊಂದು ನೆನಪು: ಅಮ್ಮನ ವಿಶಾಲವಾದ ಮಂಚದ ಮೇಲೆ ತಡರಾತ್ರಿಯಲ್ಲಿ ಒಂದೇ ಒಂದು ಮಂದ ದೀಪ ಉರಿಯುತ್ತಿದೆ. ಹಾಸಿಗೆ ಮೇಲೆ ಜಪನೀಸ್ ರಮ್ಮಿ ಕಾರ್ಡ್‌ಗಳು ಹರಡಿವೆ. ಎರಡೂ ಆಟಗಳನ್ನು ತಾನೇ ಆಡುತ್ತಿದ್ದಾಳೆ. ಇಬ್ಬರಿಗೂ ಮೋಸ ಮಾಡುತ್ತಾಳೆ, ಒಂದಕ್ಕೆ ಸಂತೋಷಪಡುತ್ತಾಳೆ, ಇನ್ನೊಂದಕ್ಕೆ ಹತಾಶಳಾಗುತ್ತಾಳೆ!

ಅಮ್ಮನ ಕಾರ್ಯಕಾರಣ ರೂಪಾಂತರ ಕೊನೆಯವರೆಗೆ ನಿಲ್ಲಲೇ ಇಲ್ಲ. ಕೊನೆಯ (ನನ್ನ ಗಂಡನ ಪ್ರಕಾರ, ಅತ್ಯಂತ ಯಶಸ್ವಿ) ಅವತಾರ ಅಜ್ಜಿಯದು. ನಮ್ಮ ಮಕ್ಕಳೊಂದಿಗೆ ಅದ್ಭುತವಾಗಿ ಬೆರೆತಳು. ಅವರ ಪಾಲಿಗೆ ನಿಜವಾದ ಸ್ನೇಹಿತೆಯಾದಳು. ಅವರ ಜೊತೆಗಿನ ಸಮಯವನ್ನು ಸಂಪೂರ್ಣವಾಗಿ ಆನಂದಿಸಿದಳು ಆ ಆನಂದ ನಮ್ಮ ಮಕ್ಕಳನ್ನು ಪರಿಪೂರ್ಣರನ್ನಾಗಿ ಮಾಡಿತು. He-Man, GI Joe, ಕ್ರಿಕೆಟ್, WWF, ಸ್ಟೀರಿಯೋ ನೇಷನ್, ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದಳು ಇದಕ್ಕೆ ನೆರವಾದ ಹುಡುಗರಿಗೆ ಧನ್ಯವಾದಗಳು. ಕುಛ್ ಕುಛ್ ಹೋತಾ ಹೈ, ಬಾರ್ಬಿ ಡಾಲ್ಸ್, ರಿಬ್ಬನ್‌-ಲೇಸ್ ಉಡುಪು, ಚನಿಯಾ ಚೋಲಿಗಳ ಬಗ್ಗೆ ತಿಳಿಸಿಕೊಟ್ಟ ಹುಡುಗಿಯರಿಗೆ ಬೆಚ್ಚನೆ ಅಪ್ಪುಗೆಗಳು.

ಅವಳು ಅವರ ಕತೆಗಳನ್ನು ಕೇಳಿದಳು, ತನ್ನ ಕತೆಯನ್ನು ಹೇಳಿದಳು. ನನ್ನ ಮಗ ಹೇಳಿದಂತೆ, “ಅಜ್ಜಿ ಇದ್ದಲ್ಲಿ ಯಾವುದೂ ಮಂಕಾಗಿರಲು ಸಾಧ್ಯವಿಲ್ಲ; ಅವಳು ಎಲ್ಲವನ್ನೂ, ಎಲ್ಲರನ್ನೂ ಹುರಿದುಂಬಿಸುತ್ತಾಳೆ.”

ಇದರಲ್ಲಿ ನಮಗೆ ಪಾಠವಿದೆ. ವಯಸ್ಸಾಗುವುದು ಹೇಗೆ ಘನತೆ-ಅನುಗ್ರಹದ ವಿಷಯ; ತಕರಾರುಗಳಿಲ್ಲದೆ ಒಂಟಿತನವನ್ನು ಹೇಗೆ ಸ್ವೀಕರಿಸುವುದು; ಇತರರು ಅವರ ಜೀವನದಲ್ಲಿ, ಅವರ ಭವಿಷ್ಯವನ್ನು ಸಹನೀಯಗೊಳಿಸುವುದನ್ನು ಪೋಷಿಸಲು-ಪ್ರೋತ್ಸಾಹಿಸಲು-ಗುರುತಿಸಲು ಏನನ್ನಾದರೂ ಹೇಗೆ ಕಂಡುಹಿಡಿಯುವುದು ಎನ್ನುವುದರ ಪಾಠ. ಅಮ್ಮ ನಾಲ್ಕು ತಲೆಮಾರುಗಳೊಂದಿಗೆ ಸಂಪರ್ಕ ಹೊಂದಿದ್ದಳು – ಅವಳ ಹೆತ್ತವರಿಂದ ನಮ್ಮ ಮಕ್ಕಳು – ಅವರ ಸ್ನೇಹಿತರವರೆಗೆ. ಅವಳು ನಮ್ಮ ಜೀವನದಲ್ಲಿ ಭಾಗವಹಿಸಲು ಬಯಸಿದ್ದಳು, ನಮ್ಮ ಉತ್ಸಾಹಗಳನ್ನು ಹಂಚಿಕೊಳ್ಳಲು; ಹಾಗೆ ಮಾಡಲು ಅವಳು ತನ್ನನ್ನು ನಿರಂತರವಾಗಿ ಮರುಶೋಧಿಸಿಕೊಂಡಳು.

ಒಬ್ಬ ವ್ಯಕ್ತಿಗೆ ಕುಟುಂಬ; ವಿಶೇಷವಾಗಿ ಮಕ್ಕಳು ಏನು ಮಾಡಬಹುದು ಎಂಬುದನ್ನು ಅಮ್ಮ ನನಗೆ ಸ್ಪಷ್ಟಪಡಿಸಿದಳು. ಇದು ಸಾಧ್ಯವಾದಷ್ಟು ಸ್ವಾಭಾವಿಕ ರೀತಿಯಲ್ಲಿ ತನ್ನನ್ನು ಮೀರಿ ನೋಡುವಂತೆ ಮಾಡುತ್ತದೆ. ನನಗೆ ತಿಳಿದಿರುವ ಕನಿಷ್ಠ ಸ್ವಾರ್ಥಿ ವ್ಯಕ್ತಿಗಳಲ್ಲಿ ಅಮ್ಮ ಒಬ್ಬಳು. ಅನುಕರಿಸುವ ಒಂದು ಮಾದರಿಯಾಗಿ, ನಾನು ಇದಕ್ಕಿಂತ ಉತ್ತಮವಾದದ್ದನ್ನು ಹೇಳಲು ಸಾಧ್ಯವಿಲ್ಲ.

ಆದ್ದರಿಂದಲೇ 100 ವರ್ಷಗಳ ಅತ್ಯಂತ ಘಟನಾತ್ಮಕ ಜೀವನವನ್ನು ಪೂರ್ಣಗೊಳಿಸಿದ ನಂತರ, ಅವಳು ತನಗಾಗಿ ಏನು ತೋರಿಸಬೇಕು? ನಿಯಮ ಕಟ್ಟಳೆಗಳನ್ನು ಮುರಿದು ಸಾಗಿದ ಕೆಲಸದ ನೆನಪುಗಳು – ದುರದೃಷ್ಟವಶಾತ್ ಯಾವುದೇ ದಾಖಲೆಯಿಲ್ಲ; ಕೆಲವು ಉತ್ತಮವಾದ ಆದರೆ, ಬಹುಮಟ್ಟಿಗೆ ಸಾಧಾರಣ ಚಲನಚಿತ್ರಗಳಲ್ಲಿ ಕಾಣುವ ಅಮ್ಮನ ಶರೀರ – ದುರದೃಷ್ಟವಶಾತ್ ದಾಖಲೆಯಲ್ಲಿದೆ; ರಂಗಭೂಮಿಗೆ ಅವಳ ಕೊಡುಗೆಗೆ ಸಾಕ್ಷಿಯಾಗಬಲ್ಲ ಜನರ ಗುಂಪು ವೇಗವಾಗಿ ಕ್ಷೀಣಿಸುತ್ತಿದೆ. ಪ್ರಶಸ್ತಿಗಳು, ಕೆಲಸವನ್ನು ಮುಂದುವರಿಸಲು ಯಾವುದೇ ಥಿಯೇಟರ್ ಗುಂಪು ಇಲ್ಲ (ಇದು ಅವಳ ಪಾಲಿನ ನಷ್ಟವೇ); ಅವಳ ಪರಾಕ್ರಮದ ಬಗ್ಗೆ ಯಾವುದೇ ಪುರಾಣಗಳಿಲ್ಲ, ದಂತಕಥೆಗಳಿಲ್ಲ (ಇದಕ್ಕಾಗಿ ಅವಳಿಗೆ ಯಾವುದೇ ವಿಷಾದವಿರಲಿಲ್ಲ); ಅವಳ ಬಗ್ಗೆ ಪ್ರೀತಿ-ಅಭಿಮಾನದಿಂದ ಯೋಚಿಸುವ ದೊಡ್ಡ ಸಂಖ್ಯೆಯ ಜನರು (ಅವರು ತಮ್ಮ ಸ್ವಂತ ಸಂತಾಪ ಸಭೆಯಲ್ಲಿ ಹಾಜರಾಗುವುದನ್ನು ಆನಂದಿಸುತ್ತಾರೆ) ಜೊತೆಗೆ ಸುಪ್ರಿಯಾ, ನಾನು.

ಆ ಕೊನೆಯ ಚಣ ನನಗೆ ಮಹತ್ವದ್ದಾಗಿದೆ. ಅಮ್ಮ ನಮ್ಮ ಬಗ್ಗೆ ಹೆಮ್ಮೆ ಪಡುವಂತೆ ನಾವು ಏನನ್ನು ನಮ್ಮದಾಗಿಸಿಕೊಂಡಿದ್ದೇವೆ? ನಟಿಯರಾಗಿ ನಾವು ಅವಳಿಗಿಂತ ತುಂಬಾ ಭಿನ್ನವಾಗಿರಬಹುದು. ನಾಗರಿಕರಾಗಿ ನಾವು ಅವಳಿಗೆ ಧನ್ಯವಾದ ಹೇಳಲು ಸಾಕಷ್ಟು ಪಡೆದುಕೊಂಡಿದ್ದೇವೆ. ಅವಳಿಂದಲೇ ನಾವು ಜನರು ಒಳ್ಳೆಯವರು ಎಂದು ಕಲಿತಿದ್ದೇವೆ; ಅದು ಆಸಕ್ತಿ ಹುಟ್ಟಿಸುವಂತಿದ್ದಾಗಿದ್ದು ಇದೇ ಜೀವನದ ಮುಖ್ಯ ಆಧಾರವಾಗಿದೆ. 

ಆಲದ ಮರದ ನೆರಳಿನಲ್ಲಿ ಬೇರೆ ಯಾವುದೇ ಮರ ಶಕ್ತಿಯುತವಾಗಿ ಬೆಳೆಯುವುದಿಲ್ಲ ಎನ್ನುವ ಮಾತಿದೆ. ನನ್ನ ಅಮ್ಮ ಒಂದು ಆಲದ ಮರ. ನೆಲಕ್ಕೆ ಇಳಿದ ಬಿಳಲೇ ಅದರ ಬೇರಿಗೆ ಆಸರಾಗಿ ಹೆಮ್ಮರವಾಗಲು ಕಾರಣವಾದಂತೆ ನಾನು ಬಯಸಿದ ಎಲ್ಲವನ್ನೂ ಸಾಧಿಸಲು ನನಗೆ ಸಹಾಯ ಮಾಡಿತು. ಅವಳು ನನ್ನನ್ನು ಬೆಂಬಲಿಸಿದಳು, ಪ್ರೋತ್ಸಾಹಿಸಿದಳು. ಬದುಕಿಗೆ ಸರಿಯಾದ ದಾರಿ ತೋರಿಸಿದಳು, ಟೀಕಿಸಿದಳು. ನಾನು ಕೈಗೊಂಡ ಪ್ರತಿಯೊಂದು ಉದ್ಯಮದಲ್ಲೂ ನನ್ನೊಂದಿಗಿದ್ದಳು. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಮುಕ್ತವಾಗಿ ಬಿಟ್ಟಳು. ಎಲ್ಲರಿಗಿಂತ ಹೆಚ್ಚು ಪ್ರೀತಿಸಿದಳು, ನನ್ನಲ್ಲಿ ನಂಬಿಕೆ ಇಟ್ಟಳು. ಒಂದೇ ಒಂದು ಸೆಕೆಂಡ್‌ ಕೂಡ ಅನುಮಾನಿಸಲಿಲ್ಲ.

ನಾನು ಇದನ್ನೆಲ್ಲ ಅವಳಿಗೆ ಮರುಪಾವತಿ ಮಾಡುವ ಏಕೈಕ ಮಾರ್ಗವೆಂದರೆ ಇದನ್ನು ನನ್ನ ಮಕ್ಕಳಿಗೆ ರವಾನಿಸುವುದು. ಅವರ ಪಾಲಿನ ನಿಂಬೆ ರಸವಾಗುವುದು. ಮಕ್ಕಳು ಅವರ ಜೀವನವನ್ನು ಸವಿಯಲು ಈ ನಿಂಬೆ ರಸವನ್ನು ಸಿಹಿಸಿಹಿ ಪಾನಕವನ್ನಾದರೂ ಮಾಡಿಕೊಳ್ಳಲಿ, ಉಪ್ಪುಪ್ಪು ಸೋಡಾ ಆದರೂ ಮಾಡಿಕೊಳ್ಳಲಿ… ಒಟ್ಟು ಬದುಕಿನ ಸವಿಯನ್ನು ಸವಿಯುತ್ತಿರಲಿ!!

ರಂಗ, ಚಲನಚಿತ್ರ ಕ್ಷೇತ್ರದ ಹೆಸರಾಂತ ನಟಿ ದಿನಾ ಪಾಠಕ್ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಮಗಳು ರತ್ನಾ ಪಾಠಕ್ ಶಾ ಬರೆದ ಪ್ರಬಂಧದ ಕನ್ನಡ ಅನುವಾದ.

ಅನುವಾದಕರ ಮಾತು

ಹೇಮಾ ಖುರ್ಸಾಪೂರ

90ರ ದಶಕದಲ್ಲಿ ನನ್ನೂರಿನ ಅನಕೂಲಸ್ಥ ಮಧ್ಯಮ ವರ್ಗದ, ನಡುವಯಸ್ಸಿನ ಮಹಿಳೆಯರು ಬೆಳಗ್ಗೆ ವಾಕಿಂಗ್ ಹೋಗುವಾಗ, ಸಂಜೆ ಮಕ್ಕಳೊಂದಿಗೆ ಬಜಾರಿಗೆ ಬರುವಾಗ; ಮಟ್ಟಸವಾಗಿ ತಲೆಬಾಚಿ ತುರುಬು ಕಟ್ಟಿ ಹೂ ಮುಡಿದು, ಕಣ್ಕಪ್ಪಿಟ್ಟು, ಕಂಪಿನೆಣ್ಣೆ ಪೂಸಿಕೊಂಡು, ತಿದ್ದಿ ತೀಡಿದ ಚಿಮ್ಮುವ ನೀರಿಗೆಯ, ಅಗಲ ಅಂಚಿನ ತಿಳಿಬಣ್ಣದ ಸೀರೆಯುಟ್ಟು, ಎರಡೂ ಭುಜ ಬಳಸುವಂತೆ ಶಾಲ್ ಹಾಕಿಕೊಂಡು ಬರುತ್ತಿದ್ದ ದೃಶ್ಯ ನೋಡುತ್ತಿದ್ದಾಗ, ದಾರಿಯಲ್ಲಿ ಸಿಕ್ಕ ನಮ್ಮಂಥ ಪರಿಚಿತ ಚಿಲ್ಟಾರಿಗಳಿಗೆ ನಿಮ್ಮ ತಂದೆ-ತಾಯಿಯರಿಗೆ ನನ್ನ ನಮಸ್ಕಾರ ತಿಳಿಸು ಎನ್ನುವಂತಹ ಮಾತುಗಳನ್ನು ಕೇಳುತ್ತಿದ್ದಾಗ ಚೌಕಟ್ಟಿನಾಚೆಯ ಚಿತ್ರವನ್ನು ನೋಡಿದಂತೆ ಭಾಸವಾಗುತ್ತಿತ್ತು (ನಮ್ಮ ಊರಿನಲ್ಲಿ, ಅಕ್ಕಪಕ್ಕದ ಊರುಗಳಲ್ಲಿ ಇದ್ದಿದ್ದು ರೈತಾಪಿ ಮನೆಗಳೇ… ಅಲ್ಲಿ ನಾವು ಕಂಡ ಅಮ್ಮಂದಿರ ಚಿತ್ರಣಗಳೇ ಬೇರೆ!). ಡಿಗ್ರಿ ಪಿಜಿ ಮುಗಿಸಿ ಭಾರತೀಯ ಹಿಂದಿ ಸಿನಿಮಾಗಳನ್ನು ನೋಡುವ ‘ಮ್ಯಾರಾಥಾನ್’ ಮುಗಿಸಿದಾಗಲೇ ನನಗೆ ಗೊತ್ತಾಗಿದ್ದು; ಮೇಲೆ ಹೇಳಿದ ಮಹಿಳೆಯರ ಜೀವನ ಪ್ರೀತಿ, ಅಭಿರುಚಿ ಹೆಚ್ಚುಸುವಲ್ಲಿ ದಿನಾ ಪಾಠಕ್ ನಂತಹ ನಟಿಯರ ಪಾತ್ರ ಬಹುದೊಡ್ಡದು ಎಂದು! 

ಪ್ರಬಂಧದ ಕೊನೆಯಲ್ಲಿ ರತ್ನಾ ಪಾಠಕ್ ಶಾ ‘ನಾನು, ನನ್ನ ಅಮ್ಮನಂತಾಗುವುದರಲ್ಲಿಯೇ’ ಬದುಕಿನ ಸಾರ್ಥಕತೆ ಅಡಗಿದೆ ಎನ್ನುವ ಮಾತುಗಳನ್ನು ಕೇಳಿದಾಗ ಅನಿಸಿದ್ದು (ನನ್ನ ಹಿಂದಿನ ಮತ್ತು ನನ್ನ ಪೀಳಿಗೆಯ ಬಹುತೇಕರ ಅನಿಸಿಕೆಯೂ ಹೌದು) – ಅಮ್ಮನ ಅಕ್ಕರೆಯಲ್ಲಿ ಬೆಳೆಯುವಷ್ಟು ಕಾಲ ಅದೇ ಆದರ್ಶ. ಹರೆಯದಲ್ಲಿ ಅಮ್ಮನ ಕಾಳಜಿ ಒಗರಿನಂತೆ. ಯಾಕೆ ಎಲ್ಲಕ್ಕೂ ಇಷ್ಟು ಕಟ್ಟಳೆ? ಈ ಅಂಕೆಯನ್ನು ಮೀರಬೇಕು ಎನ್ನುವ ಚಡಪಡಿಕೆ. ತಿಳಿವಳಿಕೆ ಬಂದ ವಯಸ್ಸಿನಲ್ಲಿ ಎಲ್ಲವನ್ನ ಒಳಗೇ ಹತ್ತಿಕ್ಕಿಕೊಂಡು ನಗುತ್ತ, ಕೆಲಸ ಮಾಡುತ್ತಲೇ ಸವೆಯುವ ಅಮ್ಮನನ್ನ ನೋಡುವಾಗ ಇಲ್ಲ ಇಲ್ಲ ‘ನಾ ಅಮ್ಮನಂತೆ  ಆಗಬಾರದು ಎನ್ನುವ ಪ್ರತಿಭಟನೆ!!’ ವಯಸ್ಸು ಇಳೀತಾ, ತಿಳಿತ ಬಂದಂತೆ – ಅಮ್ಮ ಇದನ್ನ ಹೀಗೇ ಮಾಡ್ತಿದ್ದಳು, ಹೀಗೆ ಹೇಳ್ತಿದ್ದಳು ಹಾಗೇ ಮಾಡೋಣ. ಈ ಭಾವವೇ ಹೆಚ್ಚು ಕಾಲ ಉಳಿಯೋದು. ಅಷ್ಟರಲ್ಲಿ ನಮ್ಮ ಅರ್ಧ ಆಯಸ್ಸು ಕಳೆದಿರುತ್ತದೆ. ನಮ್ಮ ಮಕ್ಕಳು ನಾವು ಸಾಗಿ ಬಂದ ಇದೇ ಹಾದಿಯಲ್ಲೇ ಸಾಗುತ್ತಿರುತ್ತಾರೆ. ನಂಗಿದು ಅರ್ಥವಾದಾಗ ಬದುಕಿನ ಈ ಪರಿಯ ಬಗ್ಗೆ ಮುದ್ದು ಜೊತೆಗೆ ಅಚ್ಚರಿ.

‍ಲೇಖಕರು Admin

October 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: