ಕಲ್ಲೇಶ್ ಕುಂಬಾರ್ ಓದಿದ ‘ಪೆಟ್ರಿಕೋರ್’

ಕಲ್ಲೇಶ್ ಕುಂಬಾರ್

ಕಾವ್ಯದ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಯಾವತ್ತಿಗೂ ಕೂಡ ಅನುಭವದ ಮೂಲಕವೇ ಅನಾವರಣವಾಗಬೇಕು ವಿನಃ ಅರ್ಥದ ಮೂಲಕ ಅಲ್ಲ! ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿ ಮಾತ್ರ. ಹೀಗಾಗಿ, ಕವಿತೆಗೆ ಖಚಿತವಾದ ಅರ್ಥವೆಂಬುದು ಇರುವುದಿಲ್ಲ. ಕವಿತೆಯ ಹಲವು ಓದುಗಳಲ್ಲಿ ಹಲವು ಅನುಭವಗಳು ದಕ್ಕುತ್ತವೆ. ಈ ಕಾರಣವಾಗಿಯೇ ಕವಿತೆ ಎಂಬುದು ಸುಲಭದ ಅರ್ಥಕ್ಕೆ ಸಿಕ್ಕದ ‘ಮಂತ್ರ’ವೇ ಸರಿ ಎನ್ನಬೇಕು. ಈ ಮಾತಿಗೆ ಪೂರಕವಾಗಿ ಎಂಬಂತೆ ಕಾವ್ಯವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡ ಸಮಕಾಲೀನ ಸಂದರ್ಭದ ಯುವಕವಿಗಳಲ್ಲಿ ಒಬ್ಬರಾದ ಚೈತ್ರಾ ಶಿವಯೋಗಿಮಠ ಅವರ ‘ಪೆಟ್ರಿಕೋರ್’ ಕವನಸಂಕಲನದ ಕವಿತೆಗಳು ಇವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಪಾರವಾದ ತಾಳ್ಮೆ, ಎಚ್ಚರ ಮತ್ತು ಸಂಯಮದಿಂದ ರಚಿಸಿರಬಹುದಾದ ಕವಿತೆಗಳು ಇವಾಗಿದ್ದು, ಸುಲಭದ ಅರ್ಥಕ್ಕೆ ಸಿಕ್ಕದ ಕವಿತೆಗಳಿದರೂ, ಅವುಗಳ ಆಳಕ್ಕಿಳಿದಂತೆ ಅನೂಹ್ಯವಾದ ಅರ್ಥವನ್ನು ಧ್ವನಿಸುತ್ತವೆ. ಇನ್ನೂ ಒಂದು ಮಾತೆಂದರೆ, ಈ ಕವಿತೆಗಳ ಮೂಲಕ ಚೈತ್ರಾ ಅವರು ತನ್ನದೇ ಆದ ಆಕೃತಿಯನ್ನು ಕಟ್ಟಿಕೊಂಡು ತಾವಿರುವ ಪರಿಸರದಲ್ಲಿನ ವರ್ತಮಾನಕ್ಕೆ ಮುಖಾಮುಖಿಯಾಗಲು ಪ್ರಯತ್ನಿಸುತ್ತಾರೆ. ಹಾಗೆಯೇ, ಬದುಕು, ಮನುಷ್ಯನ ಸ್ವಭಾವ ಮತ್ತು ಗಂಡು- ಹೆಣ್ಣಿನ ನಡುವಿನ ಸಂಬಂಧದ ಸೆಳೆತದ ಬಗೆಯನ್ನು ಹೊಸದಾದ ರೂಪಿಕೆಗಳಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಈ ಮಾತಿಗೆ ಸಾಕ್ಷಿಯಾಗಿ ಈ ಸಂಕಲನದಲ್ಲಿನ ‘ಅದೃಷ್ಟ ರೇಖೆ’ ಕವಿತೆಯನ್ನು ನೋಡಬಹುದು. ಕೆಲವೇ ಸಾಲುಗಳಲ್ಲಿ ಅಗಾಧವಾದ ಅರ್ಥವನ್ನು ಧ್ವನಿಸುವ ಈ ಕವಿತೆ, ಪ್ರೀತಿ- ಪ್ರೇಮದಂಥ ವಿಚಾರದಲ್ಲಿ ನಮ್ಮ ವ್ಯವಸ್ಥೆ ಹೊಂದಿರಬಹುದಾದ ಧೋರಣೆಯನ್ನು ‘ದೇಹ’ ಮತ್ತು ‘ಆತ್ಮ’ ಸಂಬಂಧಗಳ ಹಿನ್ನೆಲೆಯಲ್ಲಿ ಶೋಧಿಸಲು ಪ್ರಯತ್ನಿಸುತ್ತದೆ:

ಅವರು
ನಮ್ಮಿಬ್ಬರ ನಡುವೆ
ಗೆರೆ ಕೊರೆದರು
ನಮ್ಮ ಅಗಲಿಕೆಯನು
ನಿರೀಕ್ಷಿಸಿದರು
ನಾವು
ಕೋನವಾಗಿ
ನೆಲೆ ನಿಂತೆವು

ಈ ಮೇಲಿನ ಸಾಲುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನೈತಿಕತೆಯ ಪಾತಳಿಯ ಮೇಲೆ ಗಂಡು ಹೆಣ್ಣಿನ ನಡುವೆ ಬೆಸೆದುಕೊಂಡಿರುವ ‘ಆತ್ಮ ಸಂಬಂಧ’ವನ್ನು ಅನೈತಿಕ ಪಾತಳಿಯ ಮೇಲಿನ ‘ದೇಹ ಸೌಬಂಧ’ಕ್ಕೆ ಕೀಲಿಸಿ ಕ್ರೌರ್ಯವನ್ನು ಮೆರೆಯುವ ವ್ಯವಸ್ಥೆಯ ಧೋರಣೆಗೆ ಧಿಕ್ಕಾರ ಕೂಗುವಂತಿದೆ, ಈ ಕವಿತೆ. ಇಡಿಯಾಗಿ ಕವಿತೆಯನ್ನು ಓದಿದಾಗ ಪ್ರೀತಿಯೆಂಬುದು ದೇವರ ದಯೆಯೇ ಸರಿ. ಅದು ಖಂಡಿತವಾಗಿಯೂ ದೇಹಕ್ಕೆ ಸಂಬಂಧಿಸಿದ ವಿಚಾರವಲ್ಲ! ಅದೇನಿದ್ದರೂ ಗಂಡು- ಹೆಣ್ಣಿನ ಎರಡು ಆತ್ಮಗಳಿಗೆ ಸಂಬಂಧಿಸಿದ ವಿಚಾರವಾಗಿದೆ ಎಂಬುದು ವೇದ್ಯವಾಗುತ್ತದೆ.

ಇನ್ನು, ಈ ಕವಿತೆಯ ಆಶಯಕ್ಕೆ ಪೂರಕವಾಗಿರುವಂತೆಯೇ, ‘ಈ ಮರ್ತ್ಯದೊಳಗೆ’ ಎಂಬ ಇನ್ನೊಂದು ಕವಿತೆಯಿದೆ. ಒಂದೊಮ್ಮೆ ನಿನ್ನೊಳಗೆ ನಾನೋ, ನನ್ನೊಳಗೆ ನೀನೋ ಎಂಬಂತೆ ಬೆರೆತು ಹೋದ’ಆತ್ಮ’ಗಳಿಗೆ ‘ಲಿಂಗ ಭೇದ’ದ ಹಂಗಿಲ್ಲ ಎಂಬ ಮಾತನ್ನು ಈ ಕವಿತೆ ಸಾಕ್ಷೀಕರಿಸಿದಂತಿದೆ. ಒಂದು ತೆರದಲಿ ಲೋಕದ ನಿಂದನೆಗೆ ಬೇಸತ್ತು ಹೋದ ಕವಿಯು, ಬಾಹ್ಯದ ಜೈವಿಕ ಜಗತ್ತಿಗೆ ಕಾಣದಂತೆ ಆತ್ಮದೊಂದಿಗೆ ಆತ್ಮವಾಗಿ ತಾನು ಬೆರೆತು ಹೋಗಬೇಕು ಎಂದು ತನ್ನ ಇನಿಯನಲ್ಲಿ ನಿವೇದಿಸಿಕೊಂಡಂತಿದೆ. ಅಷ್ಟಕ್ಕೂ ಇಲ್ಲಿ ಆತ ಬೇರಾರೂ ಆಗಿರದೆ’ಶಿವ’ನೇ ಆಗಿರುವುದು ವಿಶೇಷ. ಈ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ:

ಪ್ರಭುವೆ,
ಸಾಕಿನ್ನು
ಈ ಜಂಜಡಗಳಿಂದ
ಮುಕ್ತಿ ನೀಡು
ನಿನ್ನ ಮೈಗಂಧವಾಗಿಸಿ
ನಿನ್ನೊಳಗೆ ಕರಗಿಸಿಕೊಂಡು
ನಿನ್ನ ಜೊತೆ ಹೊತ್ತು ತಿರುಗು

ಕವಿಯಾಗಿ ಚೈತ್ರಾ ಅವರು, ತನ್ನೊಳಗೆ ಅಕ್ಕನನ್ನು ಆಹ್ವಾಯಿಸಿಕೊಂಡು ಈ ಮಾತುಗಳನ್ನು ಹೇಳಿರುವುದು ವಿಶೇಷ. ಅಂತೆಯೇ, ಅಕ್ಕನಿಗೆ ಒಲಿದ ಚೆನ್ನಮಲ್ಲಿಕಾರ್ಜುನನಂತೆ ತಾನೂ ಸಹ ತನ್ನ ಇನಿಯನೊಳಗೆ ಕರಗಬೇಕು; ಆತನ ಕೇಶರಾಶಿ, ಗಡ್ಡ ಮೀಸೆಯೊಳಗೆ ಬೆವರ ತೇರಾಗಿ ಹರಿಯಬೇಕು! ಸಾಲದೆಂಬಂತೆ ಹಣೆಯ ವಿಭೂತಿ, ಎದೆಯ ಬಯಲಿನ ರುದ್ರಾಕ್ಷಿ ಎಲ್ಲವೂ ಆಗಬೇಕು- ಎಂದು ಬೇಡಿಕೊಳ್ಳುವುದು ಹೆಣ್ಣಿನ ಆಂತರ್ಯದ ಭಾವಗಳು ಅದೆಷ್ಟು ಪ್ರಾಮಾಣಿಕವಾಗಿರುತ್ತವೆ ಎಂಬುದನ್ನು ಸಾಬೀತುಪಡಿಸುತ್ತದೆ.

ಇಲ್ಲಿ, ಇನ್ನೊಂದು ವಿಶೇಷವೆಂದರೆ ಈ ಕವಿತೆಯ ಮುಂದುವರೆದ ಭಾಗದಂತಿರುವ, ‘ನೀನಲ್ಲದೇ ಮತ್ತಾರಿಲ್ಲವಯ್ಯ’ ಎಂಬ ಕವಿತೆಯಿದ್ದು, ಓದುಗನನ್ನು ಇನ್ನಿಲ್ಲದಂಗೆ ಚಿಂತನೆಗೀಡುಮಾಡುತ್ತದೆ. ಲೋಕದ ನಿಂದನೆಗೆ ಬೇಸತ್ತು ಹೋದ, ಮತ್ತ್ಯಾರಿಗೂ ಒಲಿಯಲೊಲ್ಲದ ಕವಿಯು, ತನ್ನ ಸ್ಫಟಿಕ ಶುದ್ಧ ಆತ್ಮವನ್ನು ನಿರಾಕಾರದಲ್ಲೊಂದು ಮಾಡಬಯಸುತ್ತಾಳೆ!:

ಛಕ್ಕನೆ
ಜಿಗಿದು ಬಾ,
ಅಮೃತವೋ ವಿಷವೋ
ಕುಡಿಸಿಬಿಡು
ದೇವಾ, 
ನಿನ್ನ ಬಿಟ್ಟು ಯಾರಿಹರು
ಈ ಲೋಕದಲಿ?

ಹೆಣ್ಣನ್ನು ಹೆಣ್ಣಾಗಿರಲು ಬಿಡದ, ಹೆಣ್ಣಿನ ಸಹಜ ಬಯಕೆಗಳನ್ನು ಈಡೇರಿಸಿಕೊಳ್ಳಲು ಅಡ್ಡಿಯಾದ ವ್ಯವಸ್ಥೆ ರೂಪಿಸಿದ ಕಟ್ಟಳೆಗಳ ಪರೀಧಿಗೆ ಸಿಲುಕಲಾಗದೇ ಭಕ್ತಿಯ ನೆಲೆಯಲ್ಲಿ ಆ ವ್ಯವಸ್ಥೆಯ ಧೋರಣೆಯನ್ನು ಈ ತೆರದಲಿ ಕವಿಯಾಗಿ ಚೈತ್ರಾ ವಿರೋಧಿಸುತ್ತಾರೆ! ಆ ಮನಸ್ಥಿತಿಯಲ್ಲಿಯೇ ಅದು ಅಮೃತವಿರಲಿ ವಿಷವಿರಲಿ ತನಗೆ ಕುಡಿಸಿ, ನಿನ್ನೊಳೊಂದಾಗಿಸಿಕೊಂಡುಬಿಡು ಎಂದು ವಿನಂತಿಸಿಕೊಳ್ಳುತ್ತಾಳೆ. ಹೀಗೆ, ಇನ್ನೊಂದು ನೆಲೆಯಲ್ಲಿ ಆಲೋಚಿಸಿದಾಗ ಗಂಡು ಹೆಣ್ಣಿನ ನಡುವಿನ ಸಹಜ ಸಂಬಂಧವನ್ನು ಸಂಶಯಿಸುವ ಲೋಕದ ಧೋರಣೆಗೆ ಧಿಕ್ಕಾರ ಕೂಗುವಂತಿದೆ, ಈ ಕವಿತೆ!

ಕವಿಯಾಗಿ ಚೈತ್ರಾ ಅವರಿಗೆ ಹೆಣ್ಣಿನ ವಿಚಾರದಲ್ಲಿನ ಲೋಕದ ದಂದುಗಗಳ ವಿರುದ್ಧ ದನಿಯೆತ್ತುವ ಗುಣವಿದೆ. ಸ್ವಯಂ ತಾವೂ ಒಂದು ಹೆಣ್ಣಾಗಿ ಅನುಭವಿಸಿರಬಹುದಾದ ನೋವು, ಸಂಕಟ, ಹತಾಶೆಗಳಿಗೆ ಈ ವ್ಯವಸ್ಥೆ ರೂಪಿಸಿದ ಸ್ತ್ರೀ ವಿರೋಧಿ ಧೋರಣೆಗಳೇ ಕಾರಣ ಎಂಬುದರ ಅರಿವಿದೆ. ಈ ಮಾತಿಗೆ ಪೂರಕವಾಗಿ, ‘ಒಂಟಿಗಣ್ಣಿನ ಮಾಯಾವಿ’ ಕವಿತೆಯನ್ನು ನೋಡಬಹುದು.

ಹೆಣ್ಣನ್ನು ಭೋಗದ ವಸ್ತುವೆಂದೇ ಪರಿಗಣಿಸಲ್ಪಟ್ಟಿರುವ ಪುರುಷಪ್ರಧಾನವಾದ ಈ ವ್ಯವಸ್ಥೆಯ ಧೋರಣೆಯನ್ನು ವಿರೋಧಿಸುವ ನಿಟ್ಟಿನಲ್ಲಿರುವ ಈ ಕವಿತೆ, ಅದರ ಆಂತರ್ಯದಲ್ಲಿ ಕಾಮ ಮತ್ತು ಹೊಟ್ಟೆಯ ಹಸಿವಿನ ಕುರಿತಾಗಿ ಮಾತನಾಡುತ್ತದೆ. ಇಡಿಯಾಗಿ ಕವಿತೆ, ಏನಕೇನ ಕಾರಣವಾಗಿ ಮೈಮಾರಿಕೊಂಡು ಹೊಟ್ಟೆ ಹೊರೆದುಕೊಳ್ಳುವ ಅಸಹಾಯಕ ಹೆಣ್ಣಿನ ಆ ಕ್ಷಣದ ಮನೋಸಂಕಟವನ್ನು ಅರಿವಿಗೆ ತರುತ್ತದೆ. ಮಟಮಟ ಮಧ್ಯಾಹ್ನವೋ, ಇಲ್ಲ ಇಳಿಸಂಜೆಯೋ ರಾಜಬೀದಿಯ ಅರೆಮರೆಯ-ಅರೆಗತ್ತಲ ಅಂಚಿನಲ್ಲಿ ’ಚೌಕಾಸಿ ವ್ಯಾಪಾರ’ಕ್ಕೆ ಆ ಒಂಟಿಗಣ್ಣಿನ ಮಾಯಾವಿ ಹೆಣ್ಣು ಕಾಯುತ್ತ ನಿಂತಿರುವುದಕ್ಕೆ ಹೊಟ್ಟೆಯ ಹಸಿವೇ ಕಾರಣವಾಗಿದೆ ವಿನಃ ಬೇರೇನೂ ಅಲ್ಲ!:

ಹೊಟ್ಟೆಕಿಚ್ಚು ಹೆಚ್ಚುತ್ತಲೇ
ರಂಗೇರಿಸಿಕೊಂಡ ಕುಡಿನೋಟ
ಮರಗುತ್ತಾನೆ ಪಾಪದ ಹುಡುಗ

ಆಕೆಯ ಹೊಟ್ಟೆಯ ಹಸಿವು ಹೆಚ್ಚಿದಂತೆ ರಂಗೇರುವ ಕುಡಿನೋಟಕ್ಕೆ ಮರುಳಾಗಿ ಬಂದವನೂ ಸಹ ಮರಗುತ್ತಾನೆ ಎನ್ನುವಲ್ಲಿಗೆ ಆಕೆಯ ಆ ಗಳಿಗೆಯಲ್ಲಿನ ದೇಹಸಂಬಂಧವನ್ನು ಇಡಿಯಾಗಿ ಕವಿತೆ ಪಾವಿತ್ರ್ಯದ ಪರೀಧಿಗೆ ತಂದು ನಿಲ್ಲಿಸುತ್ತದೆ! ಇಲ್ಲಿ ಸಿಗ್ಗಿಲ್ಲದೆ ಕೊರಳ ಇಳಿಜಾರಿನಲ್ಲಿ ಜಾರುವ ಹೊಂಬಣ್ಣದ ಕೇಶರಾಶಿ ಮತ್ತು ಕಿರುಬೆರಳು ಕೇವಲ ನಿಮಿತ್ತ ಮಾತ್ರದ ಯಾಂತ್ರಿಕ ಕ್ರಿಯೆಗಳೆನಿಸಿಬಿಡುತ್ತವೆ! ಕವಿತೆ ಮುಗಿದ ಮೇಲೂ ‘ಹಸಿವು’ ಎಂಬ ಶಬ್ದದ ಬಗ್ಗೆ ಎಲ್ಲ ಆಯಾಮಗಳಲ್ಲೂ ಅರ್ಥ ಹುಡುಕುವಂತೆ ಮಾಡುತ್ತದೆ.

ಹಾಗೆಯೇ, ‘ಎದೆ ಮುಗಿಲ ಸೂರ್ಯ’ ಕವಿತೆ, ಒಲವು ಎಂಬ ಕೊಡು ಕೊಳ್ಳುವಿಕೆಯ ವ್ಯಾಪಾರದಲ್ಲಿ ತೊಡಗಿದ ಆತ್ಮವೊಂದರ ಆ ಕ್ಷಣದ ಅನುಭವವನ್ನು ಆರ್ದ್ರವಾಗಿ ಕಟ್ಟಿಕೊಡುತ್ತದೆ. ಇಲ್ಲಿ, ಕೊಟ್ಟು ಖಾಲೀಯಾಗುವುದು, ಪಡೆದು ಇಮ್ಮಡಿಯಾಗುವುದು ಇದೆಲ್ಲ ದೇಹಭಾಷೆಗೆ ಸಂಬಂಧಿಸಿದ ವಿಚಾರವಾಗಿದ್ದು, ಸದರಿ ವಿಚಾರವನ್ನು ಲೌಕಿಕದ ಗೆರೆಯನ್ನು ಮೀರಿ ಅಲೌಕಿಕದ ಹಿನ್ನೆಲೆಯಲ್ಲಿ ಪರಾಮರ್ಶಿಸಿದಂತೆನಿಸುತ್ತದೆ! ಈ ಮಾತಿಗೆ ಪೂರಕವೆಂಬಂತೆ ಒಲವನುಂಡ ಆತ್ಮಗಳೆರಡು ಪರಸ್ಪರ ಕೊಟ್ಟು ಪಡೆದ ಆ ಒಲವಿನಿಂದ ದಕ್ಕಿದ ಅನುಭವವನ್ನು ಅಲೌಕಿಕದ ನೆಲೆಯಲ್ಲಿ ಮುಖಾಮುಖಿಯಾದ ಬಗೆಯನ್ನು ವಿವರಿಸುತ್ತದೆ. ಕವಿತೆ ಅರ್ಥವನ್ನು ಬಿಟ್ಟುಕೊಡದಷ್ಟು ಗಾಢವಾಗಿದೆ. ಆದರೆ, ಇಲ್ಲಿ ಸೃಷ್ಟಿಯೊಳಗಿನ ನೀರ್ಗಲ್ಲು-ಸೂರ್ಯರೊಂದಿಗೆ ಒಲವನು ಸಮೀಕರಿಸಿ ಹೇಳಿದ ಪರಿ ಮಾತ್ರ ಅನನ್ಯವಾಗಿದೆ.

ಅಲ್ಲದೇ, ‘ಬಯಲಾಗಿಸುವ ಪರಿ’ ಎಂಬ ಕವಿತೆ ‘ಪ್ರೀತಿ’ ಎಂದರೆ ಪರಸ್ಪರ ತಮಗೆ ತಾವೇ ಬಯಲಾಗುವುದು

ಎಂಬ ಅರ್ಥವನ್ನು ಧ್ವನಿಸುತ್ತದೆ. ಪ್ರೇಮಿಗಳ ವಿಚಾರದಲ್ಲಿ ಬಯಲಾಗುವುದು ಮತ್ತು ಬಯಲಾಗಿಸುವುದು-ಎಂಬ ಎರಡು ಕ್ರಿಯೆಗಳು ಆತ್ಮಾನುಸಂಧಾನಕ್ಕೆ ಸಂಬಂಧಪಟ್ಟಿವೆ! ಹಾಗೆ ನೋಡಿದರೆ ‘ಪ್ರೀತಿ’ ಎಂಬುದು ಸಹ ಆತ್ಮಕ್ಕೆ ಸಂಬಂಧಿಸಿದ ವಿಚಾರವಾಗಿದ್ದು ಪಾರದರ್ಶಕವಾಗಿರಬೇಕಾಗಿರುವುದು ಅನಿವಾರ್ಯ. ಹೀಗಾಗಿ ಪರಸ್ಪರ ತಮ್ಮ ಆಂತರ್ಯದೊಳಗೆ ಒಡಮೂಡಿದ ಮನೋಜನ್ಯ ಬಯಕೆಗಳನ್ನು ಬಯಲಿಗೆ ತೆರೆದಿಟ್ಟು, ನಿರಾಳವಾಗಿ ಬಯಲೊಳಗೆ ಬಯಲಾಗುವುದರಲ್ಲಿ ಇರಬಹುದಾದ ಸುಖದ ಪರಿಯ ಬಗ್ಗೆ ಕವಿಯು ತನ್ನ ಇನಿಯನಲ್ಲಿ ನಿವೇದಿಸಿಕೊಂಡಂತಿದೆ! ಆತ್ಮಗಳೆರಡು ಒಂದರೊಳಗೊಂದು ಬೆರೆತಾಗ ಹೊಮ್ಮುವ ಅನುಗತದ ಆಲಾಪದ ಸುಖವೇ ಪ್ರೀತಿಗೆ ಬುನಾದಿ ಎಂದು ಕವಿತೆ ವಿವರಿಸುತ್ತದೆ. 

ಇನ್ನು, ಕವಿ ಚೈತ್ರಾ ಅವರು ಈ ಕವನಸಂಕಲನಕ್ಕೆ ‘ಪೆಟ್ರಿಕೋರ್’ ಎಂಬ ವಿಶಿಷ್ಟವಾದ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಓದುಗನನ್ನು ಕುತೂಹಲಕ್ಕೀಡುಮಾಡುವ ಈ ಶೀರ್ಷಿಕೆಯ ಕವಿತೆಯೂ ಸಹ ಈ ಸಂಕಲನದಲ್ಲಿದೆ. ‘ಪೆಟ್ರಿಕೋರ್’ ಎಂದರೆ ಮೊದಲ ಮಳೆಗೆ ನೆನೆದ ಒಣಮಣ್ಣಿನ ವಾಸನೆಯ ಘಮ ಎಂದರ್ಥ. ಈ ಅರ್ಥಕ್ಕೆ ಮೆರುಗು ತರುವಂಥ ಸಾಕಷ್ಟು ಕವಿತೆಗಳು ಈ ಸಂಕಲನದಲ್ಲಿವೆ. ಅವುಗಳಲ್ಲಿ ಕೆಲವು ಕವಿತೆಗಳು ಸಡನ್ನಾಗಿ ಓದುಗನನ್ನು ಒಳಬಿಟ್ಟುಕೊಂಡು, ಆಪ್ತವಾಗಿ ಸಂವಾದಕ್ಕಿಳಿದರೆ, ಇನ್ನು ಕೆಲವು ಕವಿತೆಗಳು ಸಹಜವಾಗಿ ಒಳಬಿಟ್ಟುಕೊಳ್ಳದೆ ಬಾಗಿಲಲ್ಲೇ ನಿಲ್ಲಿಸಿ ಓದುಗನ ತಾಳ್ಮೆಯನ್ನು ಪರೀಕ್ಷಿಸುತ್ತವೆ. ಇದು ಕವಿತೆಯ ಮಿತಿಯೂ ಹೌದು, ಅಹಂಮಿಕೆಯೂ ಹೌದು ಎನ್ನಬೇಕು. ಆದರೂ, ಕವಿ ಚೈತ್ರಾ ಅವರಿಂದ ಇಂಥ ಕವಿತೆಗಳು ಬರೆಯಿಸಿಕೊಂಡಿವೆಯೆಂದರೆ ಅವರಲ್ಲಿ ಕವಿಗೆ ಇರಬಹುದಾದ ಮುಗ್ಧತೆ, ಲಜ್ಜೆ ಮತ್ತು ಧೈರ್ಯ- ಈ ಮೂರೂ ಗುಣಗಳು ಧಾರಾಳವಾಗಿ ಇರಲೇಬೇಕು. ಅಂತೆಯೇ, ಅವರು ದೇಹ ಸಂಬಂಧವನ್ನು ಆತ್ಮಕ್ಕೆ ಸಮೀಕರಿಸಿದರೆ, ಹೊಟ್ಟೆಯ ಹಸಿವನ್ನು ಕಾಮದೊಂದಿಗೆ ಸಮೀಕರಿಸುವುದರ ಮೂಲಕ ಆ ಕಾಮವನ್ನು ಪಾವಿತ್ರ್ಯದ ಪರೀಧಿಗೆ ತಂದು ನಿಲ್ಲಿಸುತ್ತಾರೆ. ಅದಕ್ಕೇ, ಮೊದಲ ಸಂಕಲನವೆಂಬ ರಿಯಾಯಿತಿಯನ್ನು ಪಕ್ಕಕ್ಕಿಟ್ಟು ಗಂಭೀರವಾಗಿ ಪರಿಗಣಿಸಬಹುದಾದ ಸಂಕಲನವು ಇದಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

‍ಲೇಖಕರು Admin

October 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: