ನನ್ನ ಬಾಲ್ಯದ ದಿನಗಳ ಮೊದಲ ಹೀರೋ…

ಎನ್ ಎಸ್ ಶ್ರೀಧರ ಮೂರ್ತಿ

ಅದು 1977ನೆಯ ಇಸವಿ, ನಾನು ಆಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ನಮ್ಮ ಶಾಲೆಯಲ್ಲಿ ಇದ್ದಕಿದ್ದ ಹಾಗೆ ‘ನಾಳೆಯಿಂದ ಮೂರು ದಿನ ಶಾಲೆಗೆ ರಜೆ’ ಎಂದರು. ಅದಕ್ಕೆ ನೀಡಿದ ಕಾರಣ ಚಿಕ್ಕಮಗಳೂರಿನಲ್ಲಿ ರಣಜಿ ಟ್ರೋಫಿ ಪಂದ್ಯ ನಡೆಯುತ್ತಾ ಇದ್ದಿದ್ದು. ನಾನು ಆಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಹರಿಹರಪುರ ಎಂಬ ಊರಿನಲ್ಲಿ ಓದುತ್ತಾ ಇದ್ದೆ. ಇಡೀ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಆಗ ರಜೆ ನೀಡಲಾಗಿತ್ತು. ಕ್ರಿಕೆಟ್ ಎಂದರೆ ಏನು ಎಂದೇ ಗೊತ್ತಿಲ್ಲದ ನಾವು ಮನೆಗೆ ಬಂದು ನಮ್ಮ ತಂದೆಯವರನ್ನು ಕೇಳಿದೆವು. ಅವರು ವಿವರಿಸಿದ್ದು ಮಾತ್ರವಲ್ಲದೆ ಮರುದಿನ ರೇಡಿಯೋದಲ್ಲಿ ಕಾಮೆಂಟ್ರಿ ಬರುವುದಾಗಿಯೂ ಅದನ್ನು ಕೇಳುತ್ತಾ ವಿವರಿಸುವುದಾಗಿಯೂ ತಿಳಿಸಿದರು.

ಮರುದಿನ ಸ್ವಚ್ಚ ಕನ್ನಡದಲ್ಲಿ ವೀಕ್ಷಕ ವಿವರಣೆ ಬಂದಿತು. ತಂದೆಯವರ ವಿವರಣೆ ಕೂಡ ಸೇರಿದ್ದರಿಂದ ಅರ್ಥವಾಗುವುದು ಕಷ್ಟವಾಗಲಿಲ್ಲ. ಅದು ಕೇರಳ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 451 ರನ್ ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಕೇರಳದ ಎರಡೂ ಇನ್ನಿಂಗ್ಸಗಳೂ ಒಂದೇ ದಿನದಲ್ಲಿ ಮುಕ್ತಾಯವಾಗಿದ್ದರಿಂದ ಎರಡೇ ದಿನಕ್ಕೆ ಆಟ ಮುಕ್ತಾಯವಾಯಿತು. ಅದು ನಾನು ಕೇಳಿದ ಮೊದಲ ಕ್ರಿಕೆಟ್ ಪಂದ್ಯ. ನನ್ನ ಕ್ರಿಕೆಟ್ ಹುಚ್ಚಿನ ಆರಂಭಿಕ ಬಿಂದು. ಈ ಪಂದ್ಯದ ಹೀರೋ ರೋಜರ್ ಬಿನ್ನಿ. ಅವರು ಆರಂಭಿಕ ಆಟಗಾರರಾಗಿ ಸಂಜಯ್ ದೇಸಾಯಿಯವರ ಜೊತೆ ಬ್ಯಾಟಿಂಗ್ ಗೆ ಇಳಿದು ಅಜೇಯ 211 ರನ್ ಗಳನ್ನು ಗಳಿಸಿದ್ದರು. ಹೀಗಾಗಿ ರೋಜರ್ ಬಿನ್ನಿ ನನ್ನ ಬಾಲ್ಯದ ದಿನಗಳ ಮೊದಲ ಹೀರೋ.

ಆಗ ಭಾರತ ತಂಡದಲ್ಲಿ ಕರ್ನಾಟಕದ ಚಂದ್ರಶೇಖರ್, ಪ್ರಸನ್ನ, ವಿಶ್ವನಾಥ್, ಕೀರ್ಮಾನಿ, ಬ್ರಿಜೇಶ್ ಪಟೇಲ್ ಎಲ್ಲರೂ ಇದ್ದರು. ಬಿನ್ನಿ ಕೂಡ ಭಾರತವನ್ನು ಪ್ರತಿನಿಧಿಸ ಬಲ್ಲರು ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇತ್ತು. ಭಾರತೀಯ ಕ್ರಿಕೆಟ್ ನಲ್ಲಿ ಸ್ಪಿನ್ನಿನ ಸುವರ್ಣ ಯುಗ ಮುಗಿದು ಕಪಿಲ್ ದೇವ್ ಮೂಲಕ ಹೊಸತನದ ಗಾಳಿ ಬೀಸಿದಾಗ ಬಿನ್ನಿ ಅವರಿಗೂ ಅವಕಾಶ ಸಿಕ್ಕಿತು. ತಮ್ಮ ತವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ 1979ರಲ್ಲಿ ಪಾಕಿಸ್ತಾನದ ವಿರುದ್ಧ ಅವರು ಟೆಸ್ಟ್ ಗೆ ಪಾದಾರ್ಪಣ ಮಾಡಿದರು.

ಬೌಲಿಂಗ್ ನಲ್ಲಿ ಅಷ್ಟು ಪರಿಣಾಮಕಾರಿ ಎನ್ನಿಸದಿದ್ದರೂ ಬ್ಯಾಟಿಂಗ್ ನಲ್ಲಿ ಪಾಕಿಸ್ತಾನದ ಘಟಾನುಘಟಿ ಬೌಲರ್ ಗಳನ್ನು ಎದುರಿಸಿ 46 ರನ್ ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿ ಕೊಂಡರು. ಬಿನ್ನಿ ಹೆಸರು ಮಾಡಿದ್ದು 1983ರ ವಿಶ್ವಕಪ್ ವಿಜಯದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಜೊತೆಗೆ ಹಲವು ಸ್ಮರಣೀಯ ವಿಜಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಉಪಯುಕ್ತ ಕಾಣಿಕೆ ನೀಡಿದ್ದರು.

1987ರ ಬೆನ್ಸನ್ ಹೆಡ್ಜಸ್ ಗೆಲುವಿನಲ್ಲಿ ಕೂಡ ಅವರದು ಮುಖ್ಯ ಪಾತ್ರ. ಹಾಗೆ ನೋಡಿದರೆ ಅದು ಹಲವು ಪ್ರಮುಖ ಆಟಗಾರರು ಇದ್ದ ಕಾಲ ಬಿನ್ನಿಗೆ ಸಿಗಬೇಕಾದಷ್ಟು ಅವಕಾಶಗಳು ಸಿಗಲಿಲ್ಲ. ಬಿನ್ನಿಯವರ ಹೆಸರಿನ ಜೊತೆಗೆ ನನಗೆ ನೆನಪಾಗುವುದು ಎರಡು ಟೆಸ್ಟ್ ಪಂದ್ಯಗಳು. 1986ರ ಹೆಡ್ಡಿಗ್ಲೆ ಟೆಸ್ಟ್ ನಲ್ಲಿ ಅವರು ಇಂಗ್ಲೇಡಿನ ಘಟಾನುಘಟಿ ಆಟಗಾರರನ್ನು ನಡುಗಿಸಿ ಏಳು ವಿಕೆಟ್ ಪಡೆದು ಭಾರತದ ಸ್ಮರಣೀಯ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಅದೇ ವರ್ಷದ ಪಾಕಿಸ್ತಾನದ ವಿರುದ್ಧ ಕೊಲ್ಕತ್ತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ಒಂಬತ್ತು ರನ್ ಗೆ ನಾಲ್ಕು ವಿಕೆಟ್ ಉರುಳಿಸಿ ತಮ್ಮ ಮಹತ್ವ ತೋರಿದ್ದರು. ಆಗ ತಾನೆ ದೂರದರ್ಶನದಲ್ಲಿ ಕ್ರಿಕೆಟ್ ಪ್ರಸಾರ ಆರಂಭವಾದ ಕಾಲವದು. ಕೊಲ್ಕತ್ತಾ ಬೃಹತ್ ಪ್ರೇಕ್ಷಕ ಸ್ತೋಮ ‘ಬಿನ್ನಿ ಬಿನ್ನಿ’ ಎಂದು ಒಕ್ಕೊರಲಿನಿಂದ ಕೂಗುತ್ತಾ ಇದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ.

1983ರಲ್ಲಿ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಎಂಟನೇ ವಿಕೆಟ್ ಗೆ ಅವರು ಪಾಕಿಸ್ತಾನದ ವಿರುದ್ಧ ಮದನ್ ಲಾಲ್ ಅವರ ಜೊತೆಗೂಡಿ ಸೇರಿಸಿದ್ದ 155 ರನ್ ಇನ್ನೊಂದು ಮಧುರವಾದ ನೆನಪು. ಎಂಟು ವರ್ಷಗಳ ಕಾಲ ಭಾರತ ತಂಡಕ್ಕೆ ಬಿನ್ನಿ ಆಡಿದ್ದರೂ ಕೂಡ ಅವರಿಗೆ ಅವಕಾಶವಾಗಿದ್ದು 27 ಟೆಸ್ಟ್ ಮತ್ತು 72 ಒನ್ ಡೇ ಪಂದ್ಯಗಳಲ್ಲಿ ಮಾತ್ರ.

ಒಂದು ರೀತಿಯಲ್ಲಿ ಅವರು ಅವಕಾಶವಂಚಿತರೇ. ಆದರೆ ರಣಜಿ ಪಂದ್ಯಗಳ ಮಟ್ಟಿಗೆ ಬಿನ್ನಿ ಸದಾ ಹೀರೋ. ಅನೇಕ ಸ್ಮರಣೀಯ ಗೆಲುವುಗಳಲ್ಲಿ ಅವರದು ಬೌಲಿಂಗ್, ಬ್ಯಾಟಿಂಗ್ ಮಾತ್ರವಲ್ಲ ಫೀಲ್ಡಂಗ್ ನಲ್ಲಿ ಕೂಡ ಅಪಾರ ಕೊಡುಗೆ. ತಮ್ಮ ವೃತ್ತಿ ಜೀವನದ ಕೊನೆಯ ದಿನಗಳಲ್ಲಿ ಬಿನ್ನಿ ಕರ್ನಾಟಕ ಬಿಟ್ಟು ಗೋವಾಕ್ಕೆ ಆಡಿದಾಗ ನಮಗೆಲ್ಲಾ ಒಪ್ಪಿ ಕೊಳ್ಳಲು ಆಗಿಯೇ ಇರಲಿಲ್ಲ.

ನಾನು ಬಿನ್ನಿಯವರನ್ನು ನೋಡಿದ್ದು ಒಂದೇ ಸಲ, ಅದೂ ಕ್ರಿಕೆಟೇತರ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತರಾಗಿದ್ದ ಆರ್.ಎನ್.ಜಯಗೋಪಾಲ್ ಅವರ ಜೊತೆಯಲ್ಲಿ. ಅವತ್ತು ಬಾಲಿವುಡ್ ಪ್ರೇಮಿಯಾಗಿದ್ದ ಬಿನ್ನಿ ಕ್ರಿಕೆಟ್ ಕುರಿತು ಮಾತನಾಡದೆ ತಮಗೆ ಪ್ರಿಯವಾದ ಮುಕೇಶ್ ಗೀತೆಗಳ ಕುರಿತು ಮಾತನಾಡಿದ್ದರು. ಅವರ ಈ ಮುಖ ಕೂಡ ನನಗೆ ಅಪ್ಯಾಯಮಾನವೇ.

1985ರಲ್ಲಿ ಇರಬೇಕು ಆಗಿನ ಜನಪ್ರಿಯ ವಾರಪತ್ರಿಕೆ ಸುಧಾದಲ್ಲಿ ಮುಖಪುಟ ಲೇಖನ ಬಂದಿತ್ತು. ಅದರ ಶೀರ್ಷಿಕೆ ‘ಬಿನ್ನಿ ನಾಳಿನ ನಾಯಕ’ ಅದರಲ್ಲಿ ‘ಬಿನ್ನಿ ಕರ್ನಾಟಕ ತಂಡಕ್ಕೆ ಮಾತ್ರವಲ್ಲ ಭಾರತ ತಂಡಕ್ಕೂ ಕೂಡ ನಾಯಕರಾಗ ಬಲ್ಲ ಅರ್ಹತೆ ಉಳ್ಳವರು’ ಎನ್ನುವ ವಾಕ್ಯವಿತ್ತು. ಇದನ್ನು ನಾವೆಲ್ಲ ಮತ್ತೆ ಮತ್ತೆ ಓದಿ ಕನಸು ಕಾಣುತ್ತಿದ್ದವು. ಬಿನ್ನಿ ಭಾರತ ತಂಡದಲ್ಲಿ ಆಡವ ಅವಕಾಶವನ್ನೇ ಹೆಚ್ಚು ಪಡೆಯಲಿಲ್ಲ ಇನ್ನು ನಾಯಕರಾಗುವ ಮಾತು ದೂರದ್ದೇ ಆಯಿತು. ಕರ್ನಾಟಕ ತಂಡಕ್ಕೆ ನಾಯಕರಾದರೂ ದೊಡ್ಡ ಪ್ರಮಾಣದ ಯಶಸ್ಸನ್ನು ಕಾಣಲಿಲ್ಲ. ಈಗ ಸುಮಾರು ನಲವತ್ತು ವರ್ಷಗಳ ನಂತರ ಬಿನ್ನಿ ಬಿ.ಸಿ.ಸಿ.ಐ ನಾಯಕತ್ವ ವಹಿಸಿದ್ದಾರೆ. ಹಿಂದಿನ ಅಧ್ಯಕ್ಷ ಗಂಗೂಲಿಗಿಂತಲೂ ಪೂರ್ತಿ ಭಿನ್ನವಾದ ವ್ಯಕ್ತಿತ್ವ ಹೊಂದಿರುವ ನಿಜವಾದ ಜಂಟಲ್ ಮ್ಯಾನ್ ಬಿನ್ನಿ ಎಲ್ಲಾ ರೀತಿಯಿಂದಲೂ ಅರ್ಹರು.

ನನ್ನ ಬಾಲ್ಯದ ಮೊದಲ ಹೀರೋ ಬಿನ್ನಿ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ನಾಯಕರಾಗಿದ್ದಾರೆ, ಕ್ರಿಕೆಟ್ ಎನ್ನುವುದು ವ್ಯಾಪಾರವಾಗಿರುವ ಇಂದಿನ ಕಾಲದಲ್ಲಿ ಕ್ರಿಕೆಟ್ ನ ಅರ್ಥಪೂರ್ಣ ಕಾಲಘಟ್ಟದಲ್ಲಿ ಮಿಂಚಿದ್ದ ಅವರು ವಹಿಸ ಬಹುದಾದ ಪಾತ್ರದ ಕುರಿತು ಸಹಜವಾಗಿಯೇ ಅಪಾರ ನಿರೀಕ್ಷೆ ಮತ್ತು ಕುತೂಹಲ ಎರಡೂ ಇದೆ.

‍ಲೇಖಕರು Admin

October 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: