ಸಿಪ್-ಗಾಸಿಪ್ ಎರಡೂ ಡೇಂಜರ್ರು ಕಣ್ರೀ

ಎಚ್ ಜಿ ಮಳಗಿ

ಸಿಪ್ ಹಾಗೂ ಗಾಸಿಪ್ ಎರಡೂ ಡೇಂಜರಸ್ ಜೆಂಡರ್ ಡಿಫಾಲ್ಟ್ ವಿಷಯಗಳು. ಒಬ್ಬ ಸಿಪ್ಪಣ್ಣ ಇನ್ನೊಬ್ಬಳು ಗಾಸಿಪ್ಪಮ್ಮ! ಇಬ್ಬರಿಗೂ ಅವಿನಾಭಾವ ಸಂಬಂಧ. ಬೆಳಿಗ್ಗೆ ಹತ್ತರಿಂದ ಸಾಯಂಕಾಲ ಆರು ಗಂಟೆ ಗಾಸಿಪ್ ಸೂಪರ್ ಪ್ರೈಮ್ ಟೈಮ್. ಸಾಯಂಕಾಲ ಆರರಿಂದ ರಾತ್ರಿ ಹನ್ನೆರಡರ ವರೆಗೆ ಸಿಪ್ ಪ್ರೈಮ್ ಟೈಂ. ಗಾಸಿಪ್ಗೆ ಕೆಲವು ಲೇಡೀಜ್ ಪೇಟೆಂಟ್ ಪಡೆದಿದ್ದಾರೆ(ವಲ್ಡ ವೈಡ್). ಇನ್ನು ಸಿಪ್ಗೆ ಹೆಚ್ಚಿನ ಜೆೆಂಟಲ್ಮೆನ್ ಕಾಪಿರೈಟ್ ಹೋಲ್ಡರ್ಸ್. ಸಿಪ್ ಸ್ವರ್ಗದಿಂದಲೇ ಇಳಿದು ಬಂದ್ದರೆ, ಗಾಸಿಪ್ ಪುರಾಣ ಕಾಲದಿಂದಲೂ ಕುಖ್ಯಾತಿ ಪಡೆದ ಬಗ್ಗೆ ಅನೇಕ ಆಖ್ಯಾಯಿಕೆಗಳಿವೆ. ನಮ್ಮ ಹೆಚ್ಚಿನ ದೇವಾನುದೇವತೆಗಳು ಗಾಸಿಪ್ ಪ್ರಿಯರೇ. ನಾರದರಂತೂ ಗಾಸಿಪ್ ಜನಕ! ಮಂಥರೆಯ ಮಾತನ್ನು ಕೇಳಿದ ಕೈಕೇಯಿ ರಾಮಾಯಣದ ಓಟಕ್ಕೆ ಕಾರಣಳಾದರೂ, ಗಂಡನ ಸಾವಿಗೂ, ಮಗ ಭರತದ ಕೋಪಕ್ಕೂ ನಲುಗಿ ಹೋಗುತ್ತಾಳೆ. ಅದೇ ರೀತಿ ಅಗಸನ ಮಾತು ಕೇಳಿದ ಶ್ರೀರಾಮನು ಪತ್ನಿಯನ್ನೇ ಕಾಡಿಗೆ ಕಳುಹಿಸಿ ಬಿಡುತ್ತಾನೆ. ಜಾನಪದ ಕಥೆಗಳಂತೂ ಗಾಸಿಪ್ಪಿನಿಂದ ತುಂಬಿ ಸಿಪ್ನ ಗ್ಲಾಸಿನಲ್ಲಿ ತುಳುಕಿವೆ. ಗಾಸಿಪ್ಪಿನ ದುಷ್ಪರಿಣಾಮವನ್ನು ದಶಕಗಳ ಹಿಂದೆ ಬಂದ ಗಾಳಿಮಾತು ಎನ್ನುವ ಕನ್ನಡ ಚಲನಚಿತ್ರವು ಹೃದಯಂಗಮವಾಗಿ ಹೇಳಿದೆ. ಗಾಸಿಪ್ಗೆ ನಮ್ಮ ಕಡೆ ‘ಆಡಿಕೊಳ್ಳುವುದು’ ಎಂಬ ಸಾಮಾನ್ಯ ಅರ್ಥವೂ ಇದೆ. ‘ರ್ಯೂಮರ್’ ಎಂಬ ರಕ್ಷಾ ಕವಚದ ಶಬ್ದವೂ ಇದ್ದು ಇದು ಗಾಸಿಪ್ ಪ್ರಿಯರನ್ನು ಅಪಾಯದಿಂದ ರಕ್ಷಿಸುತ್ತಿದೆ. ‘ಏನೋ ನಂಗೊತ್ತಿಲ್ಲಪ್ಪಾ. ಮಂದಿ ಮಾತಾಡ್ತಾರ’ ಎಂದು ಗಾಸಿಪ್ ವೈರಸ್ ಹರಡಿದವರು ಜಾರಿಕೊಳ್ಳುತ್ತಾರೆ!
‘ಔರು ಹಂಗಂತ, ಇವ್ರು ಹಿಂಗಂತ, ಅಕೀ ಓಡಿ ಹೋದಳಂತ, ಇಂವಾ ಯಾರ್ನೋ ಇಟ್ಗೊಂಡಾನಂತ!’ ಇವುಗಳ ಸುತ್ತಲೇ ಗಾಸಿಪ್ ಗಿರ್ಕಿ ಹೋಡೀತಿರ್ತದೆ. ಸಿನಿಮಾ ತಾರೆಯರು ಗಾಸಿಪ್ಪಿನ ರಾಜ-ರಾಣಿಯರು. ಹಗರಣಗಳಿಂದಾಗಿ ಇತ್ತೀಚೆಗೆ ಗಾಸಿಪ್ಪು ರಾಜಕಾರಣಿಗಳನ್ನೂ ಸುತ್ತಿಕೊಂಡಿದೆ. ಗಾಸಿಪ್ಪಿಗೆ ಒಳಗಾದವರು ಬಹು ಬೇಗ ಪ್ರಸಿದ್ಧರಾಗಿ ಬಿಡುತ್ತಾರೆ. ಗಾಸಿಪ್ಪುಗಳನ್ನು ಹರಿಯಬಿಡುವುದೂ ಇತ್ತೀಚೆಗೆ ಪ್ರಚಾರದ ತಂತ್ರವಾಗಿದೆ. ಗಾಸಿಪ್ ಸಾಮ್ರಾಜ್ಯವು ಕಸದ ತೊಟ್ಟಿಯೊಂದರಿಂದ ಹಿಡಿದು ಮಂಗಳಯಾನದವರೆಗೂ ಭಿಕ್ಷುಕನಿಂದ ಹಿಡಿದು ಬರಾಕ್ವರೆಗೂ ಆವರಿಸಿಕೊಂಡಿದೆ. ಗಾಸಿಪ್ಪಿನ ಬಗ್ಗೆ ಒಂದು ಸುಂದರವಾದ ಕಥೆಯಿದೆ. ಬೆಳಿಗ್ಗೆ ಎದ್ದು ರಾಜನೊಬ್ಬ ತನ್ನ ಅರಮನೆಯ ಮಾಳಿಗೆ ಮೇಲೆ ಕಾಗೆಯೊಂದನ್ನು ನೋಡಿದನಂತೆ. ಹೀಗೆ ಅವನು ಕಾಗೆ ಕಂಡ ವಿಷಯ ಅವರಿವರ ಬಾಯಿಗೆ ಸಿಕ್ಕು ಸಾಯಂಕಾಲ ಆಗುವುದರಲ್ಲಿ ‘ಮಹಾರಾಜರು ಬೆಳಿಗ್ಗೆ ನವಿಲು ಕಂಡರಂತೆ’ ಅನ್ನುವಷ್ಟರ ಮಟ್ಟಿಗೆ ಬದಲಾವಣೆಯಾಗಿರುತ್ತದೆ. ವಿವಿಧತೆಯೇ ಗಾಸಿಪ್ಪಿನ ಘೋಷವಾಕ್ಯ! ಕೇವಲ ಕಣ್ಣು ಮೈಮುಖ ಭಾಷೆಯಿಂದಲೇ ಹತ್ತಾರು ಗಾಸಿಪ್ ಹರಡುವ ಕಲೆ ಭಗವಂತ ಕೆಲವರಿಗೆ ನೀಡಿದ್ದಾನೆ ಎನ್ನುವುದು ಹೀಗೆ ಸುಮ್ಮನೇ ಅಲ್ಲ!

ಗಾಸಿಪ್ ಸಿಂಡ್ರೋಮ್ಗೊಳಗಾದ ಮಹಿಳೆಯರು, ಗಂಡ ಮಕ್ಕಳು ಕಛೇರಿ ಶಾಲೆಗಳಿಗೆ ಹೋದ ನಂತರ ಪಟ್ಟಾಗಿ ಟಿಫಿನ್ ಕಟೆದು, ತುರುಬು ಬಿಗಿದು, ಸೀರೆಯನ್ನು(ನೈಟಿ ಇದ್ದರೆ ಅದರ ಮೇಲೊಂದು ಟವೆಲ್ ಹಾಕಿಕೊಂಡು) ಎತ್ತಿ ಕಟ್ಟಿ, ಕಸ ಚೆಲ್ಲುವ ನೆಪದಿಂದಲೋ, ತಂಗಳನ್ನು ಹಸು, ನಾಯಿ ಹಂದಿಗಳಿಗೆ ಹಾಕುವ ನೆವದಿಂದಲೋ, ಮೋಡದ ಮರೆಯಿಂದ ಇಣುಕುವ ಆಷಾಢದ ರವಿಯಂತೆ ಹೊರಗೆ ಇಣುಕಿ ತಮ್ಮ ಹಾಜರಾತಿಯನ್ನು ಹಾಕುತ್ತಾರೆ. ಅವರು ‘ಛುಛೂ..ಛೂ’ ಅಂತ ಕರೆಯುವುದು ನಾಯಿಯನ್ನಲ್ಲ, ಬದಲಿಗೆ ಅಕ್ಕಪಕ್ಕದ ಮನೆಯ ಗೆಳತಿಯರನ್ನು! ಇವಳ ಸಂಜ್ಞೆಯನ್ನು ಕೇಳಿದ ಗೆಳತಿಯರು ಎಲ್ಲ ಕೆಲಸಗಳನ್ನೂ ಬೀದಿಗೆ ಚೆಲ್ಲಿ…ಅಲ್ಲಲ್ಲ ಬದಿಗೆ ಚೆಲ್ಲಿ, ತಾವೂ ಕೈಯ್ಯಲ್ಲೊಂದು ಪೊರಕೆಯನ್ನೋ ಕಸದ ಡಬ್ಬಿಯನ್ನೋ ಹಿಡಿದುಕೊಂಡು ಬಿಲದಿಂದ ಹೊರಬರುವ ಹಾವುಗಳಂತೆ ನಾಲ್ಕು ನಾಲಗೆ ಎಂಟು ಕಿವಿಗಳೊಂದಿಗೆ ಅವರವರ ಮನೆಯ ಕಂಪೌಂಡಿನ ಗೋಡೆ ಬದಿ ಪ್ರತ್ಯಕ್ಷರಾಗುತ್ತಾರೆ. ‘ಕೆಲಸ ಆತೇನ್ರಿ!’ ಅಂತ ಸಣ್ಣಗೆ ಬೆಳಗಿನ ಕೆಲಸಗಳ ವಿಷಯದಿಂದ ಪ್ರಾರಂಭವಾಗುವ ಇವರ ಹರಟೆ, ನಂತರ ‘ಸುದ್ದಿ ಗೊತ್ತಾತಿಲ್ಲೋ!’ ಅನ್ನುವ ಪೀಠಿಕೆಯೊಂದಿಗೆ ಅಕ್ಕಪಕ್ಕದವರ ಮನೆಯ ಖಾಸಗೀ ವಿಷಯಗಳತ್ತ ತಿರುಗುತ್ತದೆ. ‘ನಮ್ಮನಿ ಬೆಡ್ರೂಮು ಔರ ಮನಿ ಬೆಡ್ರೂಂ ಮಗ್ಗಲ ಮಗ್ಗಲನ ಅವರೆವಾ! ಹಿಂಗಾಗಿ ಅಕಿ ರಾತ್ರಿ ಅತ್ತದ್ದ ಕೇಳಸ್ತು. ನಾನೂ ಸ್ವಲ್ಪ ಹೊತ್ತು ಯಾಕ್ ಔರ ಮನೀ ಉಸಾಬರಿ ಅಂತ ಸುಮ್ನ ಮಲಗಿದ್ದೆ. ಆದ್ರ ಯಾಕೋ ಇದ್ದಕ್ಕಿದ್ದದ್ಧಾಂಗ ಅಕಿ ಅಳೋದು ಜೋರಾತ್ರ್ಯವಾ! ಅಕಿ ಗಂಡನೂ ಜೋರಾಗಿ ಬೈದ್ನೋ ಏನ್ ಹೊಡದ್ನೋ’ ಇನ್ನೊಬ್ಬಳೊಂದಿಗೆ ಪಿಸಿ ಪಿಸಿ! ‘ಹೌದ್ನೋಡ! ನಂಗೂ ಯಾಕೋ ಇತ್ತಿತ್ಲಾಗ ಅಕಿ ಮಾರಿ ಸಪ್ಪಗಿದ್ದ ನೋಡಿ ಡೌಟ್ ಬಂದಿತ್ತು!’ ಅಂತ ಉಳಿದವರ ಉತ್ಸಾಹಕ್ಕೆ ಪೆಟ್ರೋಲ್ ಸುರಿದು ಇನ್ನಷ್ಟು ಕಂಪೌಂಡ್ಗೆ ಜರುಗಿ ಮತ್ತೂ ಮೆತ್ತಗಿನ ಧ್ವನಿಯಲ್ಲಿ, ‘ಅದು ಹಂಗಲ್ಲಾ…ಅಕೀ ಗಂಡಂದು ಆಪೀಸ್ನ್ಯಾಗ ಯಾವಾಕಿ ಜತೀಗೋ ಅಫೇರ್ ಅದ ಅಂತ! ಅದು ಇಕೀಗ ಗೊತ್ತಾಗಿರಬೇಕು. ಅದ್ಕ ಜಟಾಪಟಿ ಸುರು ಆಗ್ಯದ.’ ‘ಅಲ್ಲ! ಅಂವಾ ರಾತ್ರಿ ಕುಡದ ಬಂದ ಅಕೀಗ ದಿನಾ ಹೊಡೀತಾನಂತ!’ ಅಂತ ಮಾತು ಮುಗಿಸಿ ಅವಳು ಹೋಗುವುದನ್ನೇ ಕಿಡಕಿಯಲ್ಲಿ ಕಳ್ಳಗಣ್ಣಿನಿಂದ ನೋಡುತ್ತಿದ್ದ ಎದುರು ಮನೆಯವಳು ಕಸ ಚೆಲ್ಲುವ ನೆವದಿಂದ ಹೊರಗೆ ಬಂದು ಇವಳ ಮನೆಯ ಪಕ್ಕದ ಖಾಲಿ ಸೈಟಿನಲ್ಲಿ ಕಸ ಝಾಡಿಸಿ ಇವಳ ಮನೆ ಗೇಟಿಗೆ ಬಂದು, ಈಗ ಒಳಗೆ ಹೋದವಳ ಮನೆಯತ್ತ ನೋಡುತ್ತ,
‘ನಿನ್ನೆ ನಾ ಹೇಳಿರ್ಲಿಲ್ಲಾ, ಅಕಿ ನಿನ್ನ ಮನಿ ಮಗ್ಗಲದೌಳ ಗಂಡನ ಅಫೇರ್ ಹೇಳ್ತಾಳಂತ..’ ಅಂತ ಕಣ್ಣು ಮಿಟುಕಿಸಿ ಕುಲುಕುಲು ನಕ್ಕು, ‘ತಂದೇನೂ ಯಾರ್ಗೂ ಗೊತ್ತಿಲ್ಲಂತ ಮಾಡ್ಯಾಳ ಗೌರವ್ವ..!’ ಅನ್ನುವಳು ಈ ಇಬ್ಬರೂ ತಮ್ಮ ಧಡೂತಿ ದೇಹಗಳನ್ನು ಕುಣಿಸುತ್ತ ನಗುವುದನ್ನು ಇನ್ನೆರಡು ಮನೆಯೊಳಗಿನ ಕಣ್ಣು ಗಮನಿಸುವುದನ್ನು ಕಂಡೂ ಕಾಣದಂತೆ ನಟಿಸಿ ಮೋರೆ ಸೊಟ್ಟ ಮಾಡುವರು.
ಗಾಸಿಪ್ಪಿನ ವಿಷಯ ಹೆಚ್ಚು ಹೆಚ್ಚು ರೋಚಕವಾದಂತೇ, ಅಲ್ಲಿ ನಿಂತಿದ್ದವರು, ಒಬ್ಬರನ್ನೊಬ್ಬರು ಅಂತರಂಗದಲ್ಲಿ ದ್ವೇಷಿಸುತ್ತಿದ್ದರೂ, ಹತ್ತಿರ ಹತ್ತಿರವಾಗುತ್ತ….! ಹೇಳುವವರ ಬಾಯಿಯೊಳಗೇ ಕೇಳುಗರ ಕಿವಿಗಳು ತೂರಿಕೊಂಡು ಬಿಡುತ್ತವೆ. ಕೈಯ್ಯಲ್ಲಿಯ ಪೊರಕೆ, ಕಸದ ಡಬ್ಬಿ ತಂಗಳ ಪಾತ್ರೆಗಳು ಒಣಗಿ ಅವಕ್ಕೆ ನಾಯಿಗಳು ನೊಣಗಳು ಮುತ್ತುತ್ತಿದ್ದರೂ, ‘ಹುಶ್..ಹಚಾ!’ ಅಂತ ಓಡಿಸುತ್ತಾರೆಯೇ ಹೊರತು ಒಳಗೆ ಹೋಗುವುದಿಲ್ಲ. ಮಾತು ಮುಗಿಸುತ್ತಿರುವುದರ ಸೂಚನೆಯೆಂದರೆ ಒಳಗಿನಿಂದ ಬೇನೆಯಿಂದ ನರಳುತ್ತಿರುವ ಅತ್ತೆಯೋ ಮಾವನೋ ಕೂಗಿದಾಗಲೇ!
‘ಸುಡ್ಲಿ ಇದೊಂದು ಯಾವಾಗ ಹೋಗ್ತದೋ!’ ಅಂತ ಒಳಗಿರುವವರನ್ನು ಎಲ್ಲರೆದುರು ಶಪಿಸಿ,
‘ಹೊತ್ತಾತ ಹೋಗ್ತೀನ್ರೆವಾ! ಇವ್ರು ಮಧ್ಯಾನ್ನ ಊಟಕ್ಕ ಮನೀಗೆ ಬರ್ತೀನಂತ ಬ್ಯಾರೆ ಹೇಳಿ ಹೋಗ್ಯಾರ. ಔರ್ಗೊಂದಿಷ್ಟ ಬಿಸಿದೇನಾರಾ ಮಾಡ್ಬೇಕಲ್ಲಾ!’ ಅಂತ ಒಬ್ಬಳೆಂದರೆ,
‘ಅಯ್ಯ ಆಗಲೇ ಒಂದ ಹೊಡೀತು ನೋಡ್ರಿ! ನಂದೂ ಇನ್ನಾ ಸಾನ ಇಲ್ಲಾ ಸುಡಗಾಡ ಇಲ್ಲಾ!’ (ಸುಡ’ರಠಜ’ ಎಂದರೆ ಇವರರ್ಥದಲ್ಲಿ ಪೂಜೆ) ಅಂತ ಹೇಳಿ, ಕಣ್ಣು ಮಿಟುಕಿಸಿ, ‘ಇನ್ನೊಂದ್ ಬ್ರೇಕಿಂಗ್ ನ್ಯೂಜ್ ಅದ. ಸಂಜೀಗ ವಾಕಿಂಗ್ ಹೋದಾಗ… ತಪ್ಪಸ್ಬ್ಯಾಡ್ರಾ ಮತ್ತ!’ ಅಂತ ಕೆಣಕುವುದನ್ನು ಮರೆಯುವುದಿಲ್ಲ. ಪ್ರತಿ ಗಾಸಿಪ್ ಸಷೆನ್ ಮುಗಿಯುವುದು, ‘ಹೋಗ್ಲಿ ಬಿಡ್ರೆವಾ ನಮಗ್ಯಾಕ ಔರ ಮನಿ ಉಸಾಬರಿ!’ ಅನ್ನುವ ಮಂಗಲಾಚರಣೆಯೊಂದಿಗೇನೆ! ಸಾಯಂಕಾಲದ ಬ್ರೇಕಿಂಗ್ ಗಾಸಿಪ್ಪಿನ ಒತ್ತಡವನ್ನು ಅದು ಹೇಗೋ ನಿಯಂತ್ರಿಸಿಕೊಂಡು ಎಲ್ಲರೂ ಮನೆಯೊಳಗೆ ಸೇರುವರು. ಅಲ್ಲಿಗೆ ಬೆಳಗಿನ ಗಾಸಿಪ್ಪು ಸಷೆನ್ ಮುಗೀತು.
‘ಔರಿವ್ರ ಮನೀ ಸುದ್ದಿ ನಿಂಗ್ಯಾಕ! ತಮ್ಮೆಲ್ಯಾ ಕತ್ತಿ ಸತ್ತ ಬಿದ್ದದ್ದ ಕಾಣೂದಿಲ್ಲೇನು?’ ಅಂತ ಗೊಣಗುವ ಅತ್ತೆ ಮಾವಂದಿರನ್ನು ಕೆಕ್ಕರಿಸಿ, ಬೇಗ ಬೇಗನೇ ಸ್ನಾನ ಊಟ ಮುಗಿಸಿ ಟಿವಿ ಸೀರಿಯಲ್(ಕಿಲ್ಲರ್) ನೋಡ್ತಾ ಚಿಪ್ಸ್, ಪಕೋಡಾ ಮೆಲ್ಲುತ್ತಾ (ಧಡೂತಿಯಾಗದೇ ಇನ್ನೇನಾಗಬೇಕು) ಕೂತರಾಯಿತು. ಸಂಜೆ ಬಂದದ್ದೇ ತಿಳಿಯದು. ಸಾಯಂಕಾಲ ಶಾಲೆಯಿಂದ ಬಂದ ಮಕ್ಕಳಿಗೆ ಒಂದಿಷ್ಟು ಮ್ಯಾಗಿ ನೂಡಲ್ಸ್ ಮಾಡಿ ಕೊಟ್ಟು ಟ್ಯೂಷನ್ಗೋ ಹೋಮ್ವರ್ಕಗೋ ದೂಡಿ, ವಾಕಿಂಗ್ ನೆಪದಲ್ಲಿ ಮತ್ತೆ ಸಾಯಂಕಾಲದ ಗಾಸಿಪ್ಪಿಗೆ ರೆಡಿ!
ಇನ್ನೂ ಕೆಲವು ಮಹಿಳಾಮಣಿಗಳಂತೂ ಗಂಡನ ಆಪೀಸಿನವರು ಫ್ರೀಯಾಗಿ ಕೊಟ್ಟ ಲ್ಯಾಂಡ್ಲೈನ್ನಿಂದ ಬೆಳಿಗ್ಗಿನ ಗಾಸಿಪ್ಪನ್ನು ಕ್ಷಣಾರ್ಧದಲ್ಲಿ ರಾಜ್ಯಾದ್ಯಂತ ಪ್ರಸಾರ ಮಾಡಿ ಬಿಡುತ್ತಾರೆ. ಕೆಲವರು ಟಿವಿ ಸೀರಿಯಲ್ ಕಥೆಗಳ ವಿಷಯಗಳಲ್ಲೂ ಗಾಸಿಪ್ ಹರಡುತ್ತಾರೆಂದರೆ ಇವರ ಪ್ರತಿಭೆಗೆ ಹ್ಯಾಟ್ಸ್ ಆಫ್! ತಮ್ಮ ಮನೆ ಮಕ್ಕಳು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದಿದ್ದರೂ ಇನ್ನೊಬ್ಬರ ಮಕ್ಕಳ ರಿಸಲ್ಟ್ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಾರೆ. ‘ಪಾಪ ಹೆಂತಾ ಶ್ಯಾಣ್ಯಾ ಇದ್ದನ್ರೆವಾ. ಈ ಸಲ ಏನಾತೋ ಏನೋ ಮೂರ್ ಪೇಪರ್ನ್ಯಾಗ ಡುಮ್ಕಿ ಹೊಡ್ದಾನ ನೋಡ್ರಿ!’ ಅಂತ ಅವನು ಫೇಲಾದದ್ದಕ್ಕೆ ತಮ್ಮ ಮಗಳು ಫೇಲಾದ ಕಾರಣಕ್ಕಿಂತ ಬೇರೆ ಏನೋ ಗಹನವಾದ ವಿಷಯವಿದೆ ಅನ್ನುವ ಗಾಸಿಪ್ಪನ್ನು ಹರಿಯಬಿಡುತ್ತಾರೆ. ತಮ್ಮ ಗಾಸಿಪ್ ಬೇರೆಯವರ ಮೇಲೆ ಯಾವ ದುಷ್ಪರಿಣಾಮ ಬೀರುತ್ತದೆ ಎನ್ನುವ ವಿವೇಚನೆ ಸ್ವಲ್ಪವೂ ಇರುವುದಿಲ್ಲ. ಪರರ ವಿಷಯಗಳನ್ನು ಹುಡುಕುವುದರಲ್ಲಿ ಇವರು ಯಾವ ಜೇಮ್ಸ್ ಬಾಂಡ್ಗಿಂತಲೂ ಕಡಿಮೆಯಿಲ್ಲ. ಹರಿಯ ಬಿಡುವುದರಲ್ಲಿ ಬಿಬಿಸಿಯನ್ನೂ ಮೀರಿಸಿ ಬಿಡುತ್ತಾರೆ. ಇನ್ನು ಕೆಲವರಿರುತ್ತಾರೆ. ಬೆಳಿಗ್ಗೆ ಆರಕ್ಕೆ ಅಂಗಳಕ್ಕೆ ನೀರು ಹಾಕುವ ಕೆಲಸಕ್ಕೆ ನಿಂತರೆ ಮುಗಿಸುವುದು ಹತ್ತು ಗಂಟೆಯವರೆಗೆ. ಅಷ್ಟೂ ಸಮಯ ಬಂದು ಹೋಗುವವರನ್ನು ನೋಡುತ್ತಲೋ ಮಾತಾಡಿಸುವ ನೆಪದಲ್ಲಿ ಗಾಸಿಪ್ ವೈರಸ್ಸನ್ನು ಹರಡುತ್ತಲೋ ಇರುತ್ತಾರೆ.
ಇನ್ನು ಸಿಪ್ ವಿಷಯಕ್ಕೆ ಬಂದರೆ ಅದೊಂದು ಕೋಲಾಹಲ ತುಂಬಿದ ಹಾಲಾಹಲ! ಹೆಚ್ಚಿನ ಗಂಡಸರು ಸಿಪ್ ಪ್ರಿಯರು. ಕೆಲವು ಸಲ ಗಂಡಸರೂ ಗಾಸಿಪ್ಪಿನಲ್ಲಿ ಹೆಂಗಸರನ್ನೂ ಹಿಂದೆ ಹಾಕಿ ಬಿಡುತ್ತಾರೆ. ಆಫೀಸಿನಲ್ಲಿ ಕಡೆದು ಹಾಕಿದ್ದು ಏನೂ ಇಲ್ಲದಿದ್ದರೂ, ‘ಈ ಪೆಂಡಿಂಗ್ ಕೆಲ್ಸಾ ಮಾಡಿ ಮುಗ್ಸೋದ್ರಾಗ ಕುರಿಕ್ವಾಣಾ ಬಿದ್ದೂ ನೋಡ್ರಿ. ಈ ಸಾಹೇಬ ಒಬ್ಬಾಂವಾ ಹುಚ್ನಾಯಿ ಹಂಗ್ ಆಡ್ತಾನ. ತಾ ಏನ್ ಸತ್ಯರಿಚ್ಚಂದ್ರ ಅಂತ ಮಾಡ್ಯಾನ!’ ಅಂತ ತಮ್ಮ ಅಸಾಮಥ್ರ್ಯವನ್ನು ಅಪ್ರಾಮಾಣಿಕತೆಯನ್ನು ಸಾಹೇಬರ ಮೇಲೆ ಹಾಕಿ, ‘ಯಾಕೋ ಭಾಳ ಮೈಕೈ ನೂಸಾಕತ್ತೈತಿ! ಹಂಗ ಒಂದಧರ್ಾ ತಾಸ ಅರಾಮ್ ಎಲ್ಲಾದ್ರೂ ಕುಂತ ಬರೂಣಂತ ಅನ್ಸಾಕತ್ತೈತಿ!’ ಅಂತ ಯಾವನೋ ಗೊಣಗುತ್ತಿದ್ದಂತೆಯೇ ಅವನ ಅಕ್ಕಪಕ್ಕದ ಸಮಾನ ಮನಸ್ಕರಿಗೂ ವಾಸನೆ ಹೊಡೆದು ಅವರಿಗೂ ಇದ್ದಕ್ಕಿಂದಂತೆ ‘ಸಿಪ್ ವೈರಲ್’ ಜ್ವರ ಬಂದು, ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಅಭ್ಯಾಸ ಇಲ್ಲದವರನ್ನೂ ‘ಏಯ್ ಬರ್ರೀ ಸರ ಒಂದ ಸಿಪ್ ಎಳ್ಯಾಕ್ರೆ!’ ಅಂತ ಸಿಪ್ ವೈರಸ್ಸನ್ನು ಅವರಲ್ಲೂ ಹರಡಿಬಿಡುತ್ತಾರೆ. ಸಂಜೆ ಆರಕ್ಕೆ ಬಾರ್ ಒಳಗೆ ಹೊಕ್ಕರೆ ಮುಗೀತು ಬಾರಿನವರೇ ಇವರನ್ನೆತ್ತಿ ಹೊರಗೆ ಎಸೆಯುವವರೆಗೂ ತೀರ್ಥಸಮಾರಾಧನೆ, ಜೊತೆಜೊತೆಗೇ ನೆಂಜಿಕೊಳ್ಳೋಕೆ 65, ಬ್ರಾಯ್ಲರ್, ಬನ್ನೂರು! ಸಾಹೇಬನ ಪಿಯೇ, ಪ್ರಿಯೆಯಿಂದ ಮೊದಲ್ಗೊಂಡು ಪಕ್ಕದ ಮನೆಯವಳು ಎಲ್ಲರೂ ಇವರ ಬಕಾಸುರನ ಬಾಯಿಯ ಬಯಲು ಮಂದಿರದಲ್ಲಿ ಬತ್ತಲೆಯಾಗಿ ಬಿಡುತ್ತಾರೆ. ಎಲ್ಲವೂ ಮನೆಮುರುಕ ಮಾತುಗಳೇ!
ಬಾರೊಂದು ಹರಟೆ ಕಟ್ಟೆ. ಯೋಗರಾಜ್ ಭಟ್ಟರು ಹೇಳಿದಂತೆ, ನಿಜವಾಗ್ಲೂ ಬಾರು ಗಂಡಸ್ರ ತೌರ್ಮನೆಯೇ ಸರಿ! ಎಣ್ಣೆಯ ಪ್ರಭಾವಕ್ಕೊಳಗಾಗಿ ಮಾತುಗಳು ಅಂಕೆ ಮೀರಿ ವಿಕೋಪಕ್ಕೆ ಹೋಗಿ ಮರ್ಡರ್ ಕೂಡಾ ಆಗುತ್ತವೆ. ಇಡಿ ಬಾರನ್ನೇ ಹೊಟ್ಟೆಯೊಳಗಿಟ್ಟುಕೊಂಡ ಕೆಲವರು ಸುಮ್ಮನೇ ದೇವರಂತೆ ಮನೆಗೆ ಬಂದು ಮಲಗುತ್ತಾರೆ. ಪರಮಾತ್ಮ ಒಳಗೆ ಪ್ರತ್ಯಕ್ಷನಾಗುತ್ತಿದ್ದಂತೆಯೇ ಹಲವರು ಇಂಗ್ಲೆಂಡಿನಲ್ಲಿಯೇ ಹುಟ್ಟಿ ಬೆಳೆದವರಂತೆ ಸರಾಗವಾಗಿ ಇಂಗ್ಲಿಷ್ನಲ್ಲಿ ಲೆಕ್ಚರ್ ಕೊಡುವುದಕ್ಕೆ ಪ್ರಾರಂಭಿಸುತ್ತಾರೆ. ಹುದುಗಿರುವ ಅನೇಕ ಪ್ರತಿಭೆಗಳ ಅನಾವರಣವಾಗುತ್ತದೆ. ಎಲ್ಲಾ ಸಿಪ್ಪಿನ ಮಹಿಮೆ. ಸಿಪ್ ಪ್ರಭಾವದಿಂದಾಗಿ ನಿಲ್ಲಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ಇವರನ್ನು, ಸ್ವಲ್ಪ ಎದ್ದು ನಿಲ್ಲುವ ಸ್ಥಿತಿಯಲ್ಲಿರುವ ಸಹೋದ್ಯೋಗಿ ಅಟೋದಲ್ಲಿ ಹಾಕಿಕೊಂಡು ಇವರ ಮನೆ ಮುಂದೆ ಎಸೆದು, ಆಫೀಸಿನಲ್ಲಿ ಸಾಹೇಬರಿಂದ ಮಂಗಳಾರತಿ ಮಾಡಿಸಿಕೊಂಡದ್ದನ್ನು ಸ್ವಲ್ಪ ತಿದ್ದುಪಡಿಯೊಂದಿಗೆ, ‘ಆಫೀಸ್ನ್ಯಾಗ ಸಾ..ಹೇಬ್ರ ಜ..ಜತಿ ನುಗ್ಗ ಜಗಳಾ…ಮಾಡಿ…ಸಂಜೆ ಒಂದ ಸಿ..ಸಿ..ಪ್ ಜಾಸ್ತೀ ಆಗ್ಯದ ಅಷ್ಟರೀ!’ ಅಂತ ಸಿಪ್ಪಿನ ಪ್ರಭಾವದಿಂದ ನಾಲಿಗೆ ಸ್ಲಿಪ್ ಆಗಿ ತೊದಲುವುದನ್ನು ಅಕ್ಕ ಪಕ್ಕದ ಮನೆಯ ಕಿವಿಗಳು(ಅಂಟೆನ್ನಾಗಳು) ಗ್ರಹಿಸಿ ಮರುದಿನದ ಗಾಸಿಪ್ಗೆ ವಿಷಯ ಸಿಕ್ಕ ಥ್ರಿಲ್ನಲ್ಲಿ ನಿದ್ದೆಯನ್ನೇ ಮರೆಯುತ್ತವೆ! ಇಲ್ಲಿ ಮನೆಯೊಳಗೆ ಎಳೆಯ ಮಕ್ಕಳು ಗೊಂದಲದಿಂದ ಅಪ್ಪನ ಪರಿಸ್ಥಿತಿಗೆ ಭೀತಿ ಪಟ್ಟುಕೊಂಡಿದ್ದರೆ ವೃದ್ಧ ಮಾತಾಪಿತರು ಅಸಹಾಯಕತೆಯಿಂದ ಗೊಣಗುತ್ತಾರೆ. ಪತ್ನಿಯ ಸಹಸ್ರ ನಾಮಾವಳಿ ಮನೆಯವರನ್ನಲ್ಲದೇ ಅಕ್ಕಪಕ್ಕದವರನ್ನೂ ಎಬ್ಬಿಸುತ್ತವೆ. ಮಕ್ಕಳ ಹಾಲಿಗೆ ಕತ್ತರಿ ಹಾಕಿ ಅಲ್ಕೋಹಾಲ್ ಏರಿಸುತ್ತಾರೆಂದರೆ ಈ ಸಿಪ್ ಪ್ರಿಯರಿಗೆ ಏನನ್ನಬೇಕು.
ಸಿಪ್-ಗಾಸಿಪ್ ಎನ್ನುವುದನ್ನು ನಿಯಂತ್ರಿಸದಿದ್ದರೆ ಅದು ಬಹುಬೇಗನೆ ಸಿಂಡ್ರೋಮ್ ಅಥವಾ ವ್ಯಸನವಾಗಿ ಆಗಿ ತೊಂದರೆ ಕೊಡಬಹುದು. ಸಮಾಜದಲ್ಲಿ ಎಲ್ಲರೆದುರು ಅಂಥವರು ಹಗುರವಾಗಿ ತಾವೇ ಗಾಸಿಪ್ಪಿಗೆ ಆಹಾರವಾಗಬಹುದು. ಬೇರೆಯವರ ಬೆನ್ನು ನಮಗೆ ಕಾಣುತ್ತದಾದರೆ ನಮ್ಮ ಬೆನ್ನೂ ಬೇರೆಯವರಿಗೆ ಕಾಣುತ್ತದೆಂಬ ಪರಿಜ್ಞಾನವಿಟ್ಟುಕೊಂಡಿರಬೇಕು. ವ್ಯಕ್ತಿಗತ ಸ್ವಭಾವವೇ ಈ ಸಿಂಡ್ರೋಮ್ಗೆ ಮೂಲ ಕಾರಣವಾದರೂ ಮನೆಯ ಪರಿಸರ, ಕೆಲಸವಿಲ್ಲದಿರುವುದು, ಸಿಟ್ಟು, ಅಸಹನೆ, ಅಹಂಕಾರ, ಕಷ್ಟವಿಲ್ಲದೇ ಗಳಿಸಿದ ಸಂಪತ್ತು, ನಿರಾಶೆ, ಹತಾಶೆ, ವಿಫಲತೆ ಇತ್ಯಾದಿಗಳು ಈ ಸಿಂಡ್ರೋಮ್ ಉಲ್ಬಣಕ್ಕೆ ಪೂರಕವಾಗುತ್ತವೆ. ಇದೂ ಒಂಥರ ಮಾನಸಿಕ ಕಾಯಿಲೆಯೇ ಆಗಿರುವುದರಿಂದ ತಜ್ಞರಿಂದ ಸೂಕ್ತ ಸಮಾಲೋಚನೆ ಮೂಲಕ ನಿಯಂತ್ರಿಸಬಹುದು. ಯೋಗ, ಧ್ಯಾನ, ಉತ್ತಮ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಭಜನೆ ಮಾಡುವುದು ಜ್ಞಾನಿಗಳ ಪ್ರವಚನ ಮುಂತಾದವುಗಳತ್ತ ಮನಸ್ಸನ್ನು ತಿರುಗಿಸುವುದರಿಂದ ಈ ಎರಡೂ ಪಿಡುಗುಗಳಿಂದ ಹೊರಬರಬಹುದು.
ಎಚ್ಚರವಿರಲಿ ಸಿಪ್ ಸಂಸಾರ ಕೆಡಿಸಿದರೆ ಗಾಸಿಪ್ ಸಂಬಂಧಗಳನ್ನು ಹಾಳುಗೆಡವುತ್ತದೆ.
 

‍ಲೇಖಕರು G

September 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. Sippanna

    ಯೋಗ, ಧ್ಯಾನ ಹೊರತುಪಡಿಸಿ ಉತ್ತಮ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಭಜನೆ ಮಾಡುವುದು, ಜ್ಞಾನಿಗಳ ಪ್ರವಚನ – ಇವೆಲ್ಲವನ್ನೂ ಸಿಪ್ಪಿನೊಂದಿಗೆ ಆಸ್ವಾದಿಸೋದು ನಾನು. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: