'ಭೂಮಿ' ನಾಟಕಕ್ಕೆ ಒಂದು ಪ್ರತಿಕ್ರಿಯೆ

ಕಾಲ ಬದಲಾದರೂ, ಆಶಯಗಳು ಬದಲಾಗಲಿಲ್ಲ

–  ವೆಂಕಟೇಶ ಜಿ

ಬೇಲೂರು ರಘುನಂದನ ಅವರ ಆಧುನಿಕ ವಚನಗಳೆಂಬ ಕಟ್ಟು ಪದಗಳ ಆಧರಿಸಿದ “ಭೂಮಿ” ನಾಟಕಕ್ಕೆ ಒಂದು ಸಣ್ಣ ಪ್ರತಿಕ್ರಿಯೆ.
ರಂಗ ಪ್ರಯೋಗಗಳ ಇತಿಹಾಸದಲ್ಲಿ, ಅದೂ ಹವ್ಯಾಸಿ ರಂಗಪ್ರಯೋಗಗಳಲ್ಲಿ ಕಥೆ, ಕಾದಂಬರಿಗಳ ಆಧರಿಸಿದ ನಾಟಕಗಳಾದ, ಮಲೆಗಳಲ್ಲಿ ಮದುಮಗಳು, ಕಿರುಗೂರಿನ ಗಯ್ಯಾಳಿಗಳು, ಗಾಂಧಿ ಬಂದ, ಮಾಯಾಮೃಗ ಇತ್ಯಾದಿ, ಹಾಗೂ ಕವನಗಳನ್ನು ಆಧರಿಸಿದ ನಾಟಕ ಮೈಸೂರು ಮಲ್ಲಿಗೆ, ಮುಂತಾದುವುಗಳು ಈಗಾಗಲೇ ಯಶಸ್ವೀ ಪ್ರಯೋಗಗಳನ್ನು ಕಂಡಿವೆ. ಇದೇ ರೀತಿ ರಾಜಗುರು ಹೊಸಕೋಟೆ ಸಾರತ್ಯದ ರಂಗ ಪಯಣ ತಂಡವು ಬೇಲೂರು ರಘುನಂದನ್ರವರ ಆಧುನಿ ಕವಚನಗಳೆಂಬ ಕಟ್ಟು ಪದಗಳನ್ನಾಧರಿಸಿದ ನಾಟಕವನ್ನು ದಿನಾಂಕ 14.09.2014 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತಪಡಿಸಿದೆ. ನಾಟಕದ ಶೀರ್ಷಿಕೆ “ಭೂಮಿ”. ಅಡಿಬರಹ ‘ಜಗತ್ತೇ ಇವಳ ಮೇಲೆ ನಿಂತಿದೆ’.
ಈ ನಾಟಕದ ಕಥೆ, ಒಂದು ಮಧ್ಯಮ ವರ್ಗದ ಹೆಣ್ಣು ಪಾರಿಜಾತ (ನಾಟಕಕಾರರಂತೆ ಪಾರಿಜಾತ ಒಂದು ಅಂಗಳದಲ್ಲಿ ಗಿಡ ಹುಟ್ಟಿ ನೆರೆಯ ಅಂಗಳದಲ್ಲಿ ಹೂ ಬಿಡುವ, ಒಂದು ಅಂಗಳದಲ್ಲಿ ಅರಳಿ ನೆರೆಯ ಅಂಗಳದಲ್ಲಿ ಪರಿಮಳ ಸೂಸುವ ಹೂ). ಅವಳು ಹೆಣ್ಣಾಗಿ ಹುಟ್ಟಿದ್ದೆ ಸಮಸ್ಯೆ. ಅವಳ ಅಪ್ಪನಿಗೆ ಹೆಣ್ಣುಮಗುವಾಗಿದ್ದು ಅವನ ಘನತೆಗೆ ಕುಂದು. ಗಂಡು ಮಗು ಅವನಿಗೆ ಪ್ರತಿಷ್ಟೆ. ಹೀಗಾಗಿ ಅವಳ ಅಮ್ಮನಿಗೆ ಗೋಳಾಟ. ಅಪ್ಪ ಜೊತೆಗೆ ಕುಡುಕ. ಅವನ ಈ ಸ್ವಭಾವ ಮನೆಯಲ್ಲಿರುವ ಪ್ರತಿಯೊಂದು ಬೆಲೆ ಬಾಳುವ ವಸ್ತುಗಳ ಕಣ್ಮರೆ. ಅಮ್ಮ ಮಗಳಲ್ಲಿ ಅಪ್ಪನ ನಿರಾಸಕ್ತಿ. ಇವರ ಬದುಕು ನರಕ ಸದೃಶ. ನೆರೆ ಹೊರೆಯವರ ಬುದ್ದಿ ಮಾತಿಗೂ ಬಗ್ಗದ ಅಪ್ಪ. ಮಗಳು ಹದಿ ವಯಸ್ಸಿಗೆ ಬಂದರೂ, ಬದಲಾಗದ ಅಪ್ಪ. ಇವನ ನಿಕೃಷ್ಟದ ಫಲವಾಗಿ ನೆರೆಮನೆಯ ಮುಸಲ್ಮಾನ್ಕುಟುಂಬದ ನೆರವಿನಿಂದ ಮುಂಬೈ ಸೇರುವ ಅಮ್ಮ ಮತ್ತು ಪಾರಿಜಾತ.
ಮುಂಬೈನಲ್ಲಿ ನರ್ತನಗಾರದ ಒಡತಿ ಮುಮ್ತಾಜ್ ಎಂಬವಳ ಆಶ್ರಯ. ಮುಮ್ತಾಜ್ ನರ್ತನಗಾರದ ಒಡತಿಯೇ ವಿನಹ ವೇಶ್ಯಾವಾಟಿಕೆ ನಡೆಸುವ ಘರ್ವಾಲಿಯಲ್ಲ. ಮುಮ್ತಾಜ್ಳ ಮಮತೆ ಪಾರಿಜಾತಳಲ್ಲಿ ಬೆಳಕಿನ ಕಿರಣ. ಚಾಂದ್ಬೀಬಿ ಎಂಬ ತೃತಿಯ ಲಿಂಗಿಯ ಒಡನಾಟ. ನಡುವೆ ಅಮ್ಮನ ಅಗಲಿಕೆಯ ಆಘಾತ. ಮುಮ್ತಾಜಳ ಹಾರೈಕೆ. ಅಲ್ಲಿ ಸಿದ್ದಾರ್ಥನ ಪರಿಚಯ, ಸ್ನೇಹ,ಪ್ರೇಮ, ಮದುವೆ, ಗಂಡು ಮಗುವಿನ ಜನನ. ಆನಂದಮಯ ಜೀವನ. ಮಧ್ಯೆ ಮುಮ್ತಾಜ್ಳ ದುರಂತ ಬದುಕಿನ ಅನಾವರಣ. ನಂತರ ಮುಂಬೈನ ಕರಾಳ ರಾತ್ರಿಗಳಿಗೆ ಬಲಿಯಾಗಿ ಸಿದ್ದಾರ್ಥನ ಮರಣ. ಮತ್ತೆ ಇವಳ ಬದುಕಲ್ಲಿ ಕತ್ತಲು. ಮಗ ವಿಜಯ ಬೆಳೆದಂತೆ ಹಣ್ಣಾಗುವ ಹೆಣ್ಣು ಪಾರಿಜಾತ. ಮಗ ಕಾಲೇಜು ಮೆಟ್ಟಲತ್ತುವ ವೇಳೆಗೆ ಮುಮ್ತಾಜಳ ಮರಣ. ನರ್ತನಗಾರವು ಪಾರಿಜಾತಳ ಸುಪರ್ದಿಗೆ. ಇತ್ತ ಕಾಲೇಜಿಗೆ ಸೇರುವ ಮಗ ನಾಪತ್ತೆ. ಇವಳ ಹುಡುಕಾಟ. ಆಕಸ್ಮಿಕವಾಗಿ ರೈಲ್ವೆ ಸ್ಟೇಷನ್ನಲ್ಲಿ ಮಗನ ಭೇಟಿ ತೃತೀಯ ಲಿಂಗಿಯ ರೂಪದಲ್ಲಿ. ಮತ್ತೆ ಇವಳ ತೊಳಲಾಟ. ಚಾಂದ್ಬೀಬಿಯ ನೆನೆದು ವಿಷಾದದಲ್ಲಿ ಮಗನನ್ನು ಒಪ್ಪಿಕೊಳ್ಳುವ ಪಾರಿಜಾತ. ಮಗನನ್ನು ತನ್ನ ಪರಿವಾರದಲ್ಲಿ ಸೇರಿಸಿಕೊಳ್ಳುವಲ್ಲಿ ನಾಟಕದ ಅಂತ್ಯ.
ಈ ಕಥೆಯನ್ನು, ಕಷ್ಟಗಳನ್ನು ಒಡಲಲ್ಲಿರಿಸಿಕೊಂಡು ಎಲ್ಲರನ್ನೂ ಪೊರೆಯುವ ಭೂಮಿಗೆ ರೂಪಕವಾಗಿ, ಕಟ್ಟುಪದಗಳೊಂದಿಗೆ ವಿಷಾದ ಛಾಯೆಯಲ್ಲಿ ಕಟ್ಟಿರುವ ನಾಟಕವಿದು.
ಬೇಲೂರರ ಕಟ್ಟುಪದಗಳ ಸಮಂಜಸವಾದ ಅಳವಡಿಕೆ ಅಲ್ಲಲ್ಲಿ ಚಪ್ಪಾಳೆ ಗಿಟ್ಟಿಸಿ, ಅದರ ಯಶಸ್ಸನ್ನು ತೋರಿಸುತ್ತದೆ. ಮುಸಲ್ಮಾನ ಕುಟುಂಬದ ನೆರವು, ಹಿಂದೂ ಮುಸಲ್ಮಾನರ ಬಾಂಧವ್ಯದ ಸಂಕೇತವಾಗಿ, ಇಂದಿಗೆ ಬೇಕಾಗುವ ನಿಜವಾದ ಸೌಹಾರ್ದವನ್ನು ಎತ್ತಿ ಹಿಡಿಯತ್ತದೆ. ತನ್ನ ಬದುಕು ದುರಂತವಾದರೂ, ಮುಂಬೈನಂತಹ ನಗರದಲ್ಲಿ ವೇಶ್ಯಾವಾಟಿಕೆಯನ್ನು ಬಿಟ್ಟು ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತ ಗೊಂಡು ಅಬಲೆಯರನ್ನು ಸಲಹುವ ಮುಮ್ತಾಜ್ಳ ಮಮತೆ, ಕಾಳಜಿ ನಿಜವಾಗಿಯೂ ಒಂದು ಧನಾತ್ಮಕ ಆಶಯ. ಹಾಗೆಯೆ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಸಮ ಕಾಲೀನ ಸಮಸ್ಯೆಗೆ ನೀಡುವ ಉತ್ತರವಾಗಿದೆ.
ಇಲ್ಲಿ ಬೇಲೂರರ ಕಟ್ಟು ಪದಗಳು ಗೆದ್ದಿವೆ. ಬಾಲೆ ಪಾರುವಿನಿಂದ ಹಿಡಿದು, ಪ್ರೌಢ ಪಾರಿಜಾತಳ, ಮುಮ್ತಾಜ್ಳ ಪಾತ್ರದಾರಿಗಳು, ಕುಡುಕ ತಂದೆ, ಕಟ್ಟು ಪದಗಳ ಒಪ್ಪಿಸುವ ನರ್ತಕರು, ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಶಶಿಧರ ಅಡಪರವರ ರಂಗಸಜ್ಜಿಕೆ, ನವೀನ್ ಸಂಗಡಿಗರ ಬೆಳಕಿನ ವಿನ್ಯಾಸ, ನಿರೂಪಣೆಯಲ್ಲಿ ನೆರಳು ಬೆಳಕಿನ ತಾಂತ್ರಿಕತೆ, ಅಚ್ಚುಕಟ್ಟಾದ ದೃಶ್ಯ ರೂಪವನ್ನು ಕಟ್ಟಿ ಕೊಟ್ಟಿದೆ. ಇವೆಲ್ಲವೂ ಬಿಡಿ ಬಿಡಿಯಾಗಿ ಗೆದ್ದಿವೆ. ಆದರೆ, ಒಟ್ಟಾರೆ ನಾಟಕದ ಆಶಯವಾಗಿ ಕಥೆಗಾರ ಮತ್ತು ನಿರ್ದೇಶಕ ಸೋತಿದ್ದಾನೆನ್ನುವುದು ನನ್ನ ವೈಯಕ್ತಿಕ ನಿಲುವು.
ಏಕೆಂದರೆ, ನನ್ನಲ್ಲಿ ಕೆಲವು ಪ್ರಶ್ನೆ ಅಥವಾ ಸಂದೇಹಗಳಿವೆ.

ಮೊದಲನೆಯದಾಗಿ, ಭೂಮಿ/ಹೆಣ್ಣೆಂದರೆ ಕಷ್ಟಗಳ ಸರಮಾಲೆಯನ್ನು ತನ್ನೊಡಲಲ್ಲೋತ್ತವಳು ಮಾತ್ರವೇ? ಅವಳ ಬದುಕು ಯಾವಾಗಲೂ ವಿಷಾದಮಯವಾಗಿರಬೇಕೆ?ಬಯಕೆ, ಬವಣೆಗಳ ಬದುಕಿನ ಹೊರತಾದ ಬೆಳಕು ಅವಳಿಗಿಲ್ಲವೇ?
ಎರಡನೆಯದಾಗಿ, ಶೀರ್ಷಿಕೆಯ ಅಡಿಬರಹ ‘ಜಗತ್ತೇ ಅವಳ ಮೇಲೆ ನಿಂತಿದೆ’ ಎನ್ನುವುದನ್ನು ನಾಟಕದಲ್ಲಿ ಎಲ್ಲಿಯೂ ಸಮಂಜಸವಾಗಿ ನಿರೂಪಿಸಿಲ್ಲ. ಮೂರನೆಯದಾಗಿ,  ಪಾರಿಜಾತದ ರೂಪಕ- ಇಲ್ಲಿ ಹುಟ್ಟುವುದು, ಅಲ್ಲಿ ಅರಳುವುದು. ಇಲ್ಲಿ ಅರಳುವುದು ಅಲ್ಲಿ ಪರಿಮಳ ಬೀರುವುದು ಎನ್ನುವುದಕ್ಕೂ ನಾಟಕದಲ್ಲಿ ಉತ್ತರವಿಲ್ಲ. ಏಕೆಂದರೆ, ನಾಟಕದುದ್ದಕ್ಕೂ ವಿಷಾದವೆ. ಮತ್ತೆ  ತಾಂತ್ರಿಕವಾಗಿ, ಕೆಲವೊಂದು ಸನ್ನಿವೇಶಗಳನ್ನು ನೆರಳು ಬೆಳಕಿನಲ್ಲಿ ನಿರೂಪಿಸಿರುವುದು. ಅಪ್ಪನ ಕ್ರೌರ್ಯಗಳನ್ನೆಲ್ಲಾ ಬೆಳಕಿನಲ್ಲಿ ತೋರಿಸಿ, ಅಮ್ಮನ ಪ್ರೀತಿ, ಮಮತೆಯನ್ನು, ಮಗುವಿಗೆ ಮುದ್ದಿಸುವುದು, ಊಟಮಾಡಿಸುವುದು, ಆಟವಾಡುವುದೆಲ್ಲವನ್ನೂ, ನೆರಳಿನಲ್ಲಿ ಕಟ್ಟಿಕೊಡುವುದು ಸರಿಯೇ? ಏಕೆಂದರೆ ನೆರಳೆಂದರೆ ಕಪ್ಪು, ನಿರಾಸೆ ಕೆಟ್ಟದ್ದಕ್ಕೆ ರೂಪಕವಲ್ಲವೇ? ಬೆಳಕೆಂದರೆ ಸುಖ, ಸೌಹಾರ್ದ, ಒಳ್ಳೆಯದಕ್ಕೆ ರೂಪಕವಲ್ಲವೇ?
ಈ ಕಾಲ ಘಟ್ಟದಲ್ಲಿ, ಅಂದರೆ 21 ನೆಯ ಶತಮಾನದಲ್ಲೂ, ಬರಿ ವಿಷಾದದ ಕಥೆ ಕಟ್ಟಿ ,ಹೆಣ್ನಿಗೆ ನಿನ್ನ ಬದುಕು ಇದೇ ಎಂದು ಹೊರಿಸುವುದು ಎಷ್ಟು ಸರಿ?
ಬೇಲೂರರು ಹೆಣ್ಣಿನ ಬಗ್ಗೆ ಬರೆದಿರುವ 200 ಕಟ್ಟು ಪದಗಳಲ್ಲಿ ವಿಷಾದದ ಹೊರತಾಗಿ ಕಥೆ ಕಟ್ಟುವ ವಚನಗಳ ಕೊರತೆಯೇ? ಅಥವಾ ಕಥೆಗಳ ಕೊರತೆಯೆ? ಇಲ್ಲಾ ಸ್ಫೂರ್ತಿಯ ಕೊರತೆಯೆ?
ಏಕೆಂದರೆ, ನಾಟಕ ನೋಡಿ ಮನೆಗೆ ಬಂದು, ಶ್ರೀಮತಿಯವರಲ್ಲಿ ನಾಟಕದ ಆಶಯದ ಬಗ್ಗೆ ಚರ್ಚಿಸುವಾಗ, ಆಗ ತಾನೇ ಅವರಕ್ಕನೊಂದಿಗೆ ಚರ್ಚಿಸಿದ “Moll Flanders” ಸಿನೆಮಾದ ಬಗ್ಗೆ ಹೇಳಿದರು. 1722 ರಲ್ಲಿ  Daniel Defoe ಬರೆದ ಕಾದಂಬರಿ ಆಧರಿಸಿದ ಚಿತ್ರವಿದು. ಇಲ್ಲಿಯೂ ಸಹ ಕಥಾನಾಯಕಿ, ಶೋಷಣೆಗೆ ಒಳಗಾದ ಹೆಣ್ಣು. ಕಾಲನ ಹೊಡೆತಕ್ಕೆ ಸಿಕ್ಕಿ, ಅನಿವಾರ್ಯವಾಗಿ ನಾಲ್ಕೈದು ಮದುವೆಯಾಗಿ ನಾನಾ ರೀತಿ ಬವಣೆಗಳ ಅನುಭವಿಸಿ, ಕೊನೆಗೆ ಅತಿ ಶ್ರೀಮಂತದ, ಸುಖದ ಜೀವನವನ್ನು ರೂಪಿಸಿ ಕೊಳ್ಳುತ್ತಾಳೆ. ಆ ಕಾಲದಲ್ಲಿಯೇ ಅಬಲೆಯ ಸಬಲೀಕರಣದ ಬಗ್ಗೆ ತಿಳಿಸುವ ಕಾದಂಬರಿ ಮತ್ತು ಚಿತ್ರ. ಇದು ಈಗ ಪದವಿ ತರಗತಿಗಳಿಗೆ ಪಠ್ಯ ಸಹ ಹೌದು.
ಇದೇ ರೀತಿ ಸೂಪರ್ಮಾ ಡೆಲ್ಡೇರಿ ಸ್ವಾರಿಸ್ಳ ಆತ್ಮಕಥೆ Desert Flower, ಮರುಭೂಮಿಯ ಹೂ ಸಹ, ಸೊಮಾಲಿಯಾದಂತ ದೇಶದಲ್ಲಿ ಶೋಷಣೆಗೊಳಗಾಗಿ, ಕಷ್ಟಗಳ ಸರಮಾಲೆಯಲ್ಲಿ ಬೆಳೆದು, ಹೊರ ಬಂದು ಬದುಕು ಕಟ್ಟಿಕೊಳ್ಳುವ ಕಥೆ ಈ ಕಾಲದ ಅಬಲೆಯರಿಗೆ ಸ್ಫೂರ್ತಿದಾಯಕವಲ್ಲವೇ??
ಆಷ್ಟೆಲ್ಲಾ ಹೊರಗೆ ನೋಡುವುದೇಕೆ, ಇತ್ತೀಚೆಗೆ, ನಮ್ಮ ದೇಶದ ವಾಲಿಬಾಲ್ ಆಟಗಾರ್ತಿ ಅರುಣಿಮಾ, ರೈಲಿನಲ್ಲಿ ಪ್ರಯಾಣಿಸುವಾಗ, ದರೋಡೆಕೋರರ ದಾಳಿಗೆ ಸಿಲುಕಿ, ಚಲಿಸುವ ರೈಲಿನಿಂದ ಹೊರದೂಡಲ್ಪಟ್ಟು ಕಾಲು ಕಳೆದುಕೊಳ್ಳುತ್ತಾಳೆ.  ತನ್ನ ಕ್ರೀಡಾ ಬದುಕು, ಭವಿಷ್ಯ ಮಸುಕಾದಾಗ ಸ್ವಲ್ಪ ಸಮಯ ಎದೆ ಗುಂದಿದರೂ, ಇನ್ನೊಬ್ಬರ ಭರವಸೆಯಿಂದ ಎಚ್ಚೆತ್ತು, ಸತತ ಪರಿಶ್ರಮದಿಂದ ಕೃತಕ ಕಾಲಿನಲ್ಲೇ ಎವೆರೆಸ್ಟ್ ಏರಿದ್ದು ಎಲ್ಲರಿಗೂ ಸ್ಫೂರ್ತಿಯಲ್ಲವೇ???
ಇಷ್ಟೆಲ್ಲಾ ಸ್ಫೂರ್ತಿ ದಾಯಕ ವಿಷಯಗಳಿರುವಾಗ, ಆದೇ ಹೆಣ್ಣುಮಗು, ಅದೇ ಕುಡುಕ ಅಪ್ಪ, ಲೈಂಗಿಕ ಶೋಷಣೆ, ಕಷ್ಟಗಳ ಸರಮಾಲೆ ಹೊತ್ತ ನಾರಿಯಾಗಿ(ಯರಾಗಿ) ಭೂಮಿಯನ್ನು ರೂಪಿಸಿದ ಔಚಿತ್ಯ ಮತ್ತು ಆಶಯಗಳೇನು?
ನಾಟಕ ಮುಗಿದ ಬಳಿಕ ಮುಖ್ಯ ಪಾತ್ರಧಾರಿ ನಯನಸೂಡರವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ,ವಾರದ ಕೊನೆಯಲ್ಲಿ, ಎಲ್ಲಾ ಕೆಲಸಗಳನ್ನು ಬದಿಗೊತ್ತಿ, ಟಿ.ವಿ. ಧಾರಾವಾಹಿಗಳನ್ನು ನೋಡದೆ ಬಿಟ್ಟು ನಾಟಕವನ್ನು ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಆದರೆ ಈ ನಾಟಕದಲ್ಲಿ ರಂಗ ಸಜ್ಜಿಕೆಯೊಂದನ್ನು ಬಿಟ್ಟು ಕಥೆಯ ವಿಷಯದಲ್ಲಿ ಪ್ರೇಕ್ಷಕರಿಗೆ ಟಿ.ವಿ. ಧಾರಾವಾಹಿಗಳಿಗೆ ಹೊರತಾದ ಹೊಸದೇನನ್ನೂ ಕೊಟ್ಟ ಅನುಭವವಾಗಲಿಲ್ಲ.
ಮತ್ತೆ ನಯನರವರು ಮಾತನ್ನಾಡುತ್ತಾ, ಈ ನಾಟಕ ಹತ್ತೇ ದಿನಗಳಲ್ಲಿ ರೂಪುಗೊಂಡು ಪ್ರದರ್ಶಿತವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು. ಅವರ ಕಲೆಯ ಬಗ್ಗೆ, ಪರಿಶ್ರಮದ ಬಗ್ಗೆ, ಬದ್ದತೆ ಬಗ್ಗೆ ನನಗೆ ಗೌರವವಿದೆ. ಆದರೆ ಒಂದು ನಾಟಕ ಕಟ್ಟುವಲ್ಲಿ ಈ ಅವಸರ, ಧಾವಂತ ಏಕೆ? ಇದು ವೈಯಕ್ತಿಕ ಪ್ರತಿಭೆಗಳ ಅನಾವರಣದ ಧಾವಂತವೇ?ಇಲ್ಲಾ ಕಲಾಕ್ಷೇತ್ರ ನಿಗಧಿಯಾಗಿದೆ. ಅಷ್ಟರಲ್ಲಿ ಏನಾದರೂ ಪ್ರಸ್ತುತ ಪಡಿಸಬೇಕೆಂಬ ಧಾವಂತವೇ? ಅಥವಾ ನಮ್ಮ ಐಡಿಯಾ/ಐಡಿಯಾಲಜಿಗಳನ್ನು ಯಾರಾದರು ಕದ್ದು ನಾಟಕ ಪ್ರಸ್ತುತ ಪಡಿಸಿಯಾರು ಎಂಬ ಆತಂಕದ ಧಾವಂತವೇ?
ಒಂದು ಉತ್ತಮ ಕಲಾಕೃತಿ ರೂಪುಗೊಳ್ಳಲು ಎಷ್ಟೋ ದಿವಸಗಳ, ತಿಂಗಳುಗಳ, ವರುಷಗಳ, ಕೆಲವೊಮ್ಮೆ ದಶಕಗಳ ಪರಿಶ್ರಮ ಬೇಡುತ್ತದೆ. ಉದಾಹರಣೆಗೆ ಆಗ್ರಾದ ತಾಜ್ಮಹಲ್, ಮೈಸೂರಿನ ಕನ್ನಂಬಾಡಿಕಟ್ಟೆ, ಬೇಲೂರು ಶಿಲ್ಪ ಕಲೆಗಳು ರೂಪುಗೊಳ್ಳಲು ದಶಕಗಳೇ ಹಿಡಿದೆಲ್ಲವೇ? ಶತಮಾನಗಳೇ ಕಳೆದರೂ ಅವುಗಳು ಕಾಲಾತೀತವಾಗಿ ಉತ್ತಮ ಕಲಾಕೃತಿಗಳಾಗಿ ಉಳಿದಿಲ್ಲವೇ?
ಅದೂ ಅಲ್ಲದೇ, ‘ಗಾಂಧಿ’ ಚಲನ ಚಿತ್ರರೂಪುಗೊಳ್ಳುವಲ್ಲಿ ರಿಚರ್ಡ್ಅಟೆನ್ಬರೋರವರ 20 ವರುಷಗಳ ಪರಿಶ್ರಮವಿದೆ. ಅದು ಸಿನೆಮಾ ಜಗತ್ತಿನಲ್ಲಿ ಶ್ರೇಷ್ಠಕಲಾಕೃತಿಯಾಗಿ, ಎಲ್ಲಾ ಕಾಲಕ್ಕೂ ಮಾದರಿಯಾಗಿ ರೂಪಿತವಾಗಿಲ್ಲವೇ?
ಇದೇ ರೀತಿಯ ನಿದರ್ಶನಗಳು ರಂಗ ಪ್ರಯೋಗಗಳಲ್ಲೂ ಇದೆಯಲ್ಲವೇ?
ಆದ್ದರಿಂದ ಹತ್ತು ಹದಿನೈದು ದಿನಗಳಲ್ಲಿ ಕಥೆ ಪೋಣಿಸಿ, ಧಾವಂತದಲ್ಲಿ ಪ್ರದರ್ಶಿಸುವ ಬದಲು, ಉತ್ತಮವಾದ, ಕಾಲಾತೀತವಾದ ಆಶಯದ ಕಥೆ ಸೃಜಿಸಿ ನಿಧಾನವಾದರೂ ಪ್ರಧಾನವಾಗುವಂತೆ ಪ್ರಸ್ತುತ ಪಡಿಸುವುದು ಸಮಂಜಸವೆನ್ನುವುದು ನನ್ನ ಭಾವನೆ.
ಇಷ್ಟೆಲ್ಲಾ ಹೇಳಿದರೂ, ರಂಗ ಪಯಣದ ತಂಡದ ಮೇಲೆ ನನಗೆ ಗೌರವವಿದೆ. ಆವರದು ಯುವಪಡೆ. ತುಂಬಾ ಉತ್ಸಾಹದಿಂದ ಕೂಡಿದ ತಂಡ. ಅವರಿಗೆ ಬೇಲೂರು ರಘುನಂದನ್ರಂತವರ ಉತ್ಸಾಹಿ ಮತ್ತು ಇನ್ನಷ್ಟು ಉತ್ತಮ ವಿದ್ವಾಂಸರ ಮಾರ್ಗದರ್ಶನ, ಹೆಚ್ಚಿನ ಓದಿನ ಹಾಗೂ ಅನುಭವದ ಅಗತ್ಯವಿದೆ. ಅವರಿಗೆ ಶುಭ ಕೋರುತ್ತೇನೆ. ಹಾಗೂ ನನ್ನ ಅನಿಸಿಕೆಗಳು ತಪ್ಪಿದಲ್ಲಿ, ಹೊಸಹೊಳಹುಗಳನ್ನು ನಿರೀಕ್ಷಿಸುತ್ತಾ ಮುಗಿಸುತ್ತೇನೆ.
 

‍ಲೇಖಕರು G

September 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: