ಸಿನೆಮಾಗಳು ತಯಾರಾಗುವುದೇ ಹೀಗೆ…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ಸಂಪತ್ ಅವರು ಬೇಕೆಂದೇ ಸಮಸ್ಯೆಯನ್ನು ತಂದಿಡಲಿಲ್ಲ. ಅದು ಅವರ ಅಸಹಾಯಕತೆ. ಅದರ ಜೊತೆಗೆ ಮೆಚ್ಚ ಬೇಕಾದ ಅಂಶ ಕೆಲಸದ ಬಗ್ಗೆ ಅವರಿಗಿದ್ದ ಬದ್ಧತೆ. ಇನ್ನೂ ಪ್ರಾರಂಭವಾಗದ ಮುಂದಿನ ಸಿನೆಮಾಗಿಂತ, ಹಿಂದೆ ಈಗಾಗಲೇ ಒಪ್ಪಿಕೊಂಡು ಅಪೂರ್ಣವಾಗಿರುವ ಸಿನೆಮಾ ಮುಗಿಸಿ ಕೊಡುವುದು ಕೆಲಸದ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ತೋರಿಸುತ್ತದೆ. ಇದೆಲ್ಲ ಅರ್ಥವಾಗಲು ನನಗೆ ಎರಡು ದಿನ ಬೇಕಾಯಿತು.

ಅವರ ಪ್ರಕಾರ ಅವರು ಮಾಡಿದ್ದು ಸರಿ, ಆದರೆ ನನ್ನ ಪರಿಸ್ಥಿತಿ? ಅದು ಬೇರೆ ಯಾವುದೋ ಪೋಷಕ ಪಾತ್ರವಲ್ಲ. ಇನ್ನೊಬ್ಬರನ್ನು ಹುಡುಕಿ ತಂದು ಕೂರಿಸಲು. ಸಿನೆಮಾದ ಬಹು ಮುಖ್ಯ ಪಾತ್ರ. ಗೌರಿಯ ಜೊತೆ ನಡೆಯ ಬೇಕಿರುವ ಪಾತ್ರ. ಯಾರನ್ನೋ ತಂದು ಕೂರಿಸಿದರೆ ಅವರೊಂದಿಗೆ ಶೃತಿ ನಟಿಸಲು ಸರಿ ಹೊಂದಬೇಕು.

ನಮ್ಮ ಸಿನೆಮಾ ಭಾಷೆಯಲ್ಲಿ ಹೇಳುವುದಾದರೆ ‘ಕೆಮಿಸ್ಟ್ರಿ ವರ್ಕೌಟ್’ ಆಗಬೇಕು. ಮುಂದೇನು ಮಾಡುವುದು? ಚಿತ್ರೀಕರಣ ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿವೆ. ಸಂಪತ್ ಅವರಿಗೆ ಆ ಕಡಿಮೆ ಅವಧಿಯಲ್ಲಿ ಎಷ್ಟು ಕೂದಲು ಬೆಳೆಯಬಹುದು. ಬೆಳೆದರೂ ಅವರ ಮುಖಭಾವ ಹೇಗೆ ಕಾಣಬಹುದು? ಎಂದೆಲ್ಲ ಕಲ್ಪಿಸಿಕೊಂಡು, ಯೋಚಿಸಿ ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಗಟ್ಟಿಯಾದ ನಿರ್ಧಾರ ತೆಗೆದುಕೊಂಡೆ. ಸಂಪತ್ ಅವರನ್ನು ಬಿಟ್ಟು ಬೇರೆ ಯಾರನ್ನಾದರು ಹುಡುಕೋಣ ಎಂದು.

ಆ ಬೇರೆ ವ್ಯಕ್ತಿ ಯಾರು?

ನಾನಿದ್ದ ಪರಿಸ್ಥಿತಿಯಲ್ಲಿ ಯಾರೋ ಹೊಸ ಮುಖವನ್ನು, ನನಗೆ ಪರಿಚಯ, ನಾನು ಅರ್ಥ ಮಾಡಿಕೊಂಡಿರದ ನಟನನ್ನು ಕರೆದುಕೊಂಡು ಬಂದು ನಟನೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ತೊಳಲಾಟದಲ್ಲೇ ಮೂರು ದಿನ ಕಳೆದು ಹೋಯಿತು. ಮೂರನೇ ದಿನ ಇದರ ಬಗ್ಗೆಯೇ ಯೋಚಿಸುತ್ತ ಕೂತಿರುವಾಗ ಟೀ ಕೊಡಲು ಬಂದ ನಮ್ಮ ಸರವಣ, ಮಂಜಣ್ಣಾ ನೀವು ಯಾಕೆ ವಿಜಯ್ ಅವರನ್ನೇ ಕೇಳಬಾರದು ಅಂತ ಕೇಳಿದ. ಸಂಚಾರಿ ವಿಜಯ್ ಅವರ ಬಗ್ಗೆ ಆ ಮೂರು ದಿನದಲ್ಲಿ ಯೋಚನೆ ಬಂದು ಹೋಗಿತ್ತು. ಅದರ ಜೊತೆಗೆ ಶೃತಿ ಅವರು ಒಮ್ಮೆ ಕೇಳಿದ್ದರು, ವಿಜಯ್ ಅಂತಹ ಅದ್ಭುತ ನಟ ಅಲ್ವಾ, ಅವರು ಯಾಕೆ ಈ ಪಾತ್ರಕ್ಕೆ ಆಯ್ಕೆ ಆಗ್ಲಿಲ್ಲ? ಅಂತ.

ನಾನು ಆ ಸಮಯದಲ್ಲಿ ಈ ಹೆಸರು ಮಾಡಿರುವ ನಟಿಯರೇ ಹೀಗಾ? ಹೊಸ ಮುಖಗಳೊಂದಿಗೆ ನಟಿಸಲು ಇವರಿಗೆ ನಾಚಿಕೇನಾ? ಎಂದೆಲ್ಲ ಮನಸ್ಸಲ್ಲಿ ಬೈದುಕೊಂಡರೂ, ಅದನ್ನು ಅವರಿಗೆ ನೇರವಾಗಿ ಹೇಳುವ ಎದೆಗಾರಿಕೆ ಇಲ್ಲದೆ, ಏನೇನೊ ನೆಪ ಹೇಳಿ ಅವರು ಈ ಪಾತ್ರಕ್ಕೆ ಹೊಂದುವುದಿಲ್ಲ ಎಂದು ಅವರಿಗೆ ವಿವರಿಸಿದ್ದೆ. ಅಷ್ಟೇ ಅಲ್ಲದೇ, ಅವರು ಎಷ್ಟೇ ನನಗೆ ಆಪ್ತರಾಗಿದ್ದರು, ಬೇರೆ ಯಾರೋ ಬಿಟ್ಟು ಹೋದ ಪಾತ್ರಕ್ಕೆ ಅವರನ್ನು ಕರೆಯುವುದು ಸಮಂಜಸವಲ್ಲ ಎಂಬ ನಿಲುವಿನಲ್ಲಿ ನಾನಿದ್ದೆ. ಹಾಗೇ ಕೇಳುವುದು ತಪ್ಪಾಗುತ್ತದೆ. ಅವರ ಪ್ರತಿಭೆಗೆ ಅವಮಾನ ಮಾಡಿದ ಹಾಗೇ ಎಂದು ನನ್ನ ಅಳುಕಾಗಿತ್ತು.

ಸರವಣ ಬಂದು ಹೇಳಿದಾಗಲೂ ಅವನಿಗೆ ಈ ಆಯಾಮಗಳನ್ನೆಲ್ಲ ವಿವರಿಸಿದ್ದೆ. ಆದರೂ ಕೊನೆಯಲ್ಲಿ ಅವನು, ಸದ್ಯಕ್ಕೆ ಅವರನ್ನು ಬಿಟ್ಟು ನೀವು ಸಂಪೂರ್ಣವಾಗಿ ನಂಬಬಹುದಾದ ಇನ್ನೊಬ್ಬ ನಟ, ಅದರಲ್ಲೂ ನಮಗಿರುವ ಬಡ್ಜೆಟ್ ಲಿಮಿಟೇಷನ್ ಅಲ್ಲಿ? ಯಾವುದಕ್ಕೂ ಇನ್ನೊಂದು ಸಲ ಯೋಚಿಸಿ ಎಂದು ಹೇಳಿ ಹೋದ.

ಮುಹೂರ್ತಕ್ಕೆ ಇನ್ನು ಮೂರುದಿನ ಇದೆ, ಚಿತ್ರೀಕರಣ ಆರಂಭಕ್ಕೆ ಇನ್ನು 9 ದಿನಗಳಿವೆ, ಈ ಸಮಯದಲ್ಲಿ, ನಾನು ನಟನೆಯ ವಿಷಯದಲ್ಲಿ ಇರುವ ಕಡಿಮೆ ಸಮಯದಲ್ಲಿ ಪೂರ್ಣವಾಗಿ ಆ ಪಾತ್ರಕ್ಕೆ ಬೇಕಾದ ಡೆಡಿಕೇಷನ್ ವಿಜಯ್ ಮಾತ್ರ ಕೊಡಲು ಸಾಧ್ಯ, ಅವರನ್ನು ಹೊರತು ಪಡಿಸಿ ಬೇರೆಯವರನ್ನು ನಂಬಿ ಸಮಯ ಹಣವನ್ನು ಇನ್ವೆಸ್ಟ್ ಮಾಡಲು ನನಗೆ ಧೈರ್ಯವಿರಲಿಲ್ಲ. ಕೊನೆಗೆ ಅಂತೂ ಇಂತೂ ಯೋಚನೆ ಮಾಡಿ, ಸಂಚಾರಿ ವಿಜಯ್ ಸರ್ ಅವರನ್ನೇ ಕೇಳೋಣ. ಅವರು ಒಪ್ಪಲಿಲ್ಲ ಎಂದರೆ ಆಮೇಲೆ ಅದರ ಬಗ್ಗೆ  ಯೋಚಿಸಿದರಾಯ್ತು ಎಂದು ನಿರ್ಧರಿಸಿದೆ.

ಎಷ್ಟೇ ನಿರ್ಧಾರ ಮಾಡಿದ್ರೂ ಸಹ ಕೇಳೋದಿಕ್ಕೆ ಸ್ವಲ್ಪ ಧೈರ್ಯ ಬೇಕಿತ್ತು. ಆಗ ಸಂಚಾರಿ ವಿಜಯ್ ಅವರು ಮಲಯಾಳಂ ಸಿನೆಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳದಲ್ಲಿದ್ದರು. ಹಗಲೊತ್ತು ಅವರು ರೆಸ್ಟ್ ಮಾಡಿ ರಾತ್ರಿ ಹೊತ್ತು ಚಿತ್ರೀಕರಣ ನಡೆಯುತ್ತಿರುವುದು ನನಗೆ ತಿಳಿದಿತ್ತು. ಸರಿ ಸಂಜೆ ಸ್ವಲ್ಪ ‘ಧೈರ್ಯ’ ತೆಗೆದುಕೊಂಡು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕಾಲ್ ಮಾಡಿದೆ.

ಚಿತ್ರೀಕರಣದ ಮಧ್ಯೆ ಗ್ಯಾಪ್ ತೆಗೆದುಕೊಂಡು ಮಾತನಾಡಿದರು, ಸಾಕಷ್ಟು ಹೊತ್ತು ಅದೂ ಇದೂ ಪೀಠಿಕೆ ಹಾಕುತ್ತಲೇ ಇದ್ದೆ, ಅವರಿಗೆ ಏನೋ ಇದೆ ವಿಷಯ, ಎಂಬ ಅನುಮಾನದಿಂದಲೇ ನೇರವಾಗಿ ಹೇಳಿ ಅಂತಂದ್ರು. ಸರಿ ‘ಧೈರ್ಯ’ದ ಪ್ರಭಾವದಿಂದಲೇ ಅವರಿಗೆ ಕೇಳಿದೆ, ‘ಸಾರ್ ಕತ್ತಿನವರೆಗೂ ಮುಳುಗೋಗಿರುವಾಗ, ನನ್ನ ಮೇಲೆತ್ತಲು ನಿಮ್ಮಿಂದ ಮಾತ್ರ ಸಾಧ್ಯ ಇರೋ ಸಂದರ್ಭದಲ್ಲಿ ನನ್ನ ಸಹಾಯಕ್ಕೆ ನೀವು ಬರ್ತೀರಾ ಇಲ್ವ?’ ಎಂದೆ.

ಅವರು ‘ಏನು ವಿಷಯ ನೇರವಾಗಿ ಹೇಳಿ ನನ್ನಿಂದ ಸಾಧ್ಯ ಇದ್ದರೆ ಮಾಡ್ತೀನಿ, ಸುತ್ತು ಬಳಸಿ ಮಾತನಾಡೋದು ಬಿಟ್ಟು ನೇರವಾಗಿ ವಿಷಯ ಹೇಳಿ ಅಂತ ಲೈಟಾಗಿ ಗದರುವ ದನಿಯಲ್ಲಿ ಕೇಳಿದರು.’ ನಾನು ‘ಸರ್ ನಮ್ಮ ಸಿನೆಮಾದಲ್ಲಿ ನೀವು ನಟಿಸಬೇಕು, ಈಗ ನನಗೆ ನೀವು ಬಿಟ್ಟರೆ ಬೇರೆ ದಾರಿ ಇಲ್ಲ, ಇಂತಹ ಕೊನೆಯ ಹಂತದಲ್ಲಿ ಕೇಳುತ್ತಿರುವುದು ತಪ್ಪು ಎಂಬುದು ಗೊತ್ತಿದೆ, ಆದರೆ ಕೇಳದೆ ವಿಧಿ ಇಲ್ಲ, ದಯವಿಟ್ಟು ಇಲ್ಲ ಅಂತ ಹೇಳಬೇಡಿ ಅಂತಂದೆ.

ಆ ಸಮಯದಲ್ಲಿ ಶೃತಿ ಹರಿಹರನ್ ಅವರಷ್ಟೇ ವಿಜಯ್ ಕೂಡ ಬ್ಯುಸಿಯಾಗಿದ್ದವರು. ಅವರ ಡೇಟ್ಸ್ ಸಿಗುವುದು ಕಷ್ಟ. ನಾನು ಅಷ್ಟು ಪರಿಪರಿಯಾಗಿ ಕೇಳಿಕೊಂಡಿದ್ದಕ್ಕೆ ಇಲ್ಲ ಅಂತ ಹೇಳಲು ಸಾಧ್ಯವಾಗದೇ ನನಗೆ ಸ್ಕ್ರಿಪ್ಟ್ ಕಳಿಸಿ ಎರಡು ದಿನದಲ್ಲಿ ಹೇಳ್ತೀನಿ ಅಂತಂದ್ರು. ಸರಿ ಇನ್ನಷ್ಟು ಒತ್ತಡ ಹೇರುವುದು ಬೇಡ, ಅಂತ ಅಂದುಕೊಂಡು ಸರಿ ಸರ್ ಈಗ್ಲೇ ಕಳಿಸ್ತೀನಿ ಎಂದು ಕಾಲ್ ಕಟ್ ಮಾಡಿ, ಕೂಡಲೇ ಸ್ಕ್ರಿಪ್ಟ್ ಮೈಲ್ ಮಾಡಿದೆ. ಉಳಿದೆರೆಡು ದಿನದಲ್ಲಿ ನಾನು ಮುಹೂರ್ತದ ಕೆಲಸಗಳು ಬಾಕಿ ನಟರ ಆಯ್ಕೆ, ಲೊಕೇಷನ್ ಹುಡುಕಾಟ ಇತ್ಯಾದಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ.

ಈ ಯಾವ ವಿಷಯಗಳನ್ನು ನಮ್ಮ ನಿರ್ಮಾಪಕರಿಗೆ ತಿಳಿಸಿರಲಿಲ್ಲ. ಎರಡು ದಿನಗಳ ನಂತರ ಮತ್ತೆ ಕಾಲ್ ಮಾಡಿದೆ ಅವರು ಶೂಟಿಂಗ್ ಡೇಟ್ಸ್ ಕಳಿಸಿ ಅಂತಂದ್ರು, ಅದನ್ನು ಕಳಿಸಿದೆ. ಆಮೇಲೆ ಅವರು ನಾನು ಭಾನುವಾರ ಬರ್ತಿದೀನಿ, ಮಾತಾಡ್ತೀನಿ ಅಂತಂದ್ರು. ಇವರು ಇಲ್ಲ ಅಂತಲೂ ಹೇಳ್ತಿಲ್ಲ… ಹೂಂ ಅಂತ ಒಪ್ಪಿಗೇನೂ ಕೊಡ್ತಿಲ್ಲ ಏನ್ ಮಾಡೋದು ಅಂತ ನನಗೆ ಚಿಂತೆ. ಆದರೆ ಎಲ್ಲೋ ಒಂದು ನಂಬಿಕೆ, ಇವರು ಹೇಗೋ ಡೇಟ್ಸ್ ಹೊಂದಿಸಿಕೊಂಡು ಬರ್ತಾರೆ, ಅನ್ನೋ ನಂಬಿಕೆ ಮನಸ್ಸಲ್ಲಿ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿತ್ತು.

ಸೋಮವಾರ 26 ಫೆಬ್ರವರಿ ಮುಹೂರ್ತದ ದಿನ ವಿಜಯ್ ಸರ್ ನೇರವಾಗಿ ಮುಹೂರ್ತಕ್ಕೆ ಬಂದರು, ನಾನು ಅವರು ಕನ್ಫರ್ಮ್ ಮಾಡದೆ ಪತ್ರಿಕೆಯವರಿಗೂ ಹೇಳುವ ಹಾಗಿರಲಿಲ್ಲ, ಶೃತಿ ಅವರಿಗೆ ಮಾತ್ರ ಪರೋಕ್ಷವಾಗಿ ಸೂಚನೆ ಕೊಟ್ಟಿದ್ದೆ. ಅವರಿಗೆ ತುಂಬಾ ಖುಷಿಯಾಗಿತ್ತು. ಕಾರಣ ಶೃತಿ ಅವರಿಗೂ ವಿಜಯ ರವರಿಗೂ ಈ ಮೊದಲೇ ಸಾಕಷ್ಟು ಪರಿಚಯ ಇತ್ತು, ಜೊತೆಗೆ ಎರಡು ಸಿನೆಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು, ಸಿಪಾಯಿ ಅನ್ನೋ ಸಿನೆಮಾದಲ್ಲಿ ಹೀರೋ ಹಾಗೋ ಹೀರೋಯಿನ್ ಗೆ ಕ್ಲೋಸ್ ಫ್ರೆಂಡ್, ಅದರಲ್ಲಿ ಹೀರೋಯಿನ್ ಶೃತಿ, ಇನ್ನೊಂದು ಪ್ಯಾರೆಲಲ್ ಸಿನೆಮಾದಲ್ಲಿ ಗಂಡ ಹೆಂಡತಿಯಾಗಿ ನಟಿಸಿದ್ದರಿಂದ ಇಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ಇತ್ತು, ಜೊತೆಗೆ ವಿಜಯ್ ಅವರ ಮೇಲೆ ಶೃತಿ ಅವರಿಗೆ ಅಪಾರವಾದ ಗೌರವ ಕೂಡ ಇತ್ತು ಕೂಡ.

ನಮ್ಮ ಸಿನೆಮಾದ ಕೊನೆಯ ಭಾಗದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಶೃತಿ ಅವರಿಗೆ ಸಂಪತ್ ಜೊತೆ ನಟಿಸುವುದರ ಬಗ್ಗೆ ಸ್ವಲ್ಪ ಅನ್ ಕಂಫರ್ಟ್ ಇತ್ತು. ಆದರೆ ವಿಜಯ್ ಆ ಜಾಗಕ್ಕೆ ಬರ್ತಾರೆ ಎಂದ ಕೂಡಲೇ ಅವರಿಗೆ ಸಾಕಷ್ಟು ಖುಷಿಯಾಗಿತ್ತು. ಸಿನೆಮಾ ಮುಹೂರ್ತದ ದಿನ ಅದು ಅವರ ಮುಖದಲ್ಲೂ ಕಾಣುತ್ತಿತ್ತು. ಪತ್ರಕರ್ತರಿಗೆ ಸಂಚಾರಿ ವಿಜಯ್ ಅವರು ನನ್ನ ಆಪ್ತ ಗೆಳೆಯರಾಗಿರುವುದರಿಂದ ಸಿನೆಮಾಗೆ ಹಾರೈಸಲು ಬಂದಿದ್ದಾರೆ ಎಂದಷ್ಟೇ ಹೇಳಿದ್ದರೂ ಕೂಡ ಕೆಲವರು ವಿಜಯ ನಟಿಸುತ್ತಿದ್ದಾರೆ ಎಂದೇ ಬರೆದಿದ್ದರು.

ವಿಜಯ ಅವರಿಗೆ ಇದ್ದ ಆತಂಕವೇನೆಂದರೆ, ನಟಿಸುತ್ತಿರುವುದು ಕನ್ಫರ್ಮ್ ಮಾಡಿದರೆ, ಅದು ಸುದ್ದಿಯಾದರೆ ಈಗಾಗಲೇ ಒಪ್ಪಿಕೊಂಡಿರುವ ಸಿನೆಮಾದವರು ಬೇಸರ ಮಾಡಿಕೊಳ್ಳಬಹುದು, ಡೇಟ್ಸ್ ವಿಷಯದಲ್ಲಿ ಸಮಸ್ಯೆ ಎದುರಾಗಬಹುದು ಅನ್ನೋ ಆತಂಕ ಅವರದು. ಕೊನೆಗೆ ಎರಡು ದಿನಗಳ ನಂತರ ಅವರು ಸಿನೆಮಾದಲ್ಲಿ ನಟಿಸುವ ಬಗ್ಗೆ ಕನ್ಫರ್ಮ್ ಮಾಡಿದರು, ಜೊತೆಗೆ ಚಿತ್ರೀಕರಣ ಮುಗಿಯುವವರೆಗೆ ಎಲ್ಲೂ ಹೇಳುವ ಹಾಗಿಲ್ಲ ಎಂದು ಕಂಡೀಷನ್ ಹಾಕಿದರು. ನಾನು ಕೂಡಲೇ ಒಪ್ಪಿಕೊಂಡೆ.

ನನಗಿದ್ದ ಆತಂಕ ಆ ಕ್ಷಣಕ್ಕೆ ಮುಗಿದರೂ ಸಹ, ಮತ್ತೊಂದು ಸಮಸ್ಯೆ ಎದುರಾಗಿತ್ತು. ಅದು ಕ್ಯಾರೆಕ್ಟರ್ ಡಿಸೈನಿಂಗ್. ಸುರೇಶನ ಪಾತ್ರವನ್ನು ಸಂಪೂರ್ಣವಾಗಿ ವಿನ್ಯಾಸ ಮಾಡಿದ್ದಿದ್ದು ಸಂಪತ್ ಅವರ ದೇಹ ಭಾಷೆಯನ್ನು ಗಮನಿಸಿಕೊಂಡೇ ತಿದ್ದಿ ತೀಡಿ ಮಾಡಿದ್ದಿದ್ದು, ಸಂಧ್ಯಾ ಮೇಡಂಗೂ ಅವರೇ ರೆಫೆರೆನ್ಸ್ ಇದ್ದದ್ದು. ಈಗ ವಿಜಯ್ ಬಂದಿದ್ದಾರೆ. ಅವರ ದೇಹ ಭಾಷೆ, ಮಾತನಾಡುವ ರೀತಿ ಎಲ್ಲವೂ ಬೇರೆ. ಕಲ್ಪನೆಯೊಳಗೆ ಬರ್ತಿಲ್ಲ. ಹೇಗಪ್ಪಾ ಇವರಲ್ಲಿ ಸುರೇಶನನ್ನು ಹುಡುಕೋದು? ತಲೆ ಪೂರ್ತಿ ಕೆಟ್ಟಿತ್ತು. ಮತ್ತೆ ಇಡೀ ದಿನ ರಾತ್ರಿಯೆಲ್ಲ ತಲೆ ಕೆಡಿಸಿಕೊಂಡು ಕೂತಿದ್ದು, ಮರುದಿನ ಮತ್ತೆ ಸ್ವಲ್ಪ ‘ಧೈರ್ಯ’ ತೆಗೆದುಕೊಂಡು ರೂಮಿನಲ್ಲಿ ಒಬ್ಬನೇ ಕೂತು ಇಡೀ ದಿನ ಸ್ಕ್ರಿಪ್ಟ್ ತಿದ್ದುತ್ತಾ ಕೂತೆ.

ವಿಜಯ ಅವರನ್ನೇ ಮನಸ್ಸಲ್ಲಿ ತುಂಬಿಸಿಕೊಂಡು, ಸಂಭಾಷಣೆ, ಅವರು ಸುರೇಶ ಆದರೆ ಹೇಗೆ ಕಾಣಬೇಕು ಎಂದೆಲ್ಲ ಕಲ್ಪಿಸಿಕೊಳ್ಳುತ್ತ ಸುರೇಶನ ಮೂಲ ಗುಣ ಲಕ್ಷಣಗಳನ್ನು ಉಳಿಸ್ಕೊಂಡೇ, ಸಂಪೂರ್ಣವಾಗಿ ವಿನ್ಯಾಸವನ್ನೇ ಬದಲಿಸಿಕೊಳ್ಳುತ್ತಾ ಹೋದೆ, ಮಧ್ಯರಾತ್ರಿಯ ವೇಳೆಗೆ ಒಂದು ಹಂತಕ್ಕೆ ಸಮಾಧಾನವಾಗುವ ಹಂತಕ್ಕೆ ಸುರೇಶನ ಪಾತ್ರ ಬಂದು ನಿಂತಿತು. ಈ ವಿವರಗಳನ್ನು ಕಾಸ್ಟ್ಯೂಮ್ ಡಿಸೈನರ್ ಮಾನಸ ಅವರಿಗೂ ಅಪ್ಡೇಟ್ ಮಾಡಿ, ಅದಕ್ಕೆ ತಕ್ಕಂತೆ ಬಟ್ಟೆಗಳನ್ನು ಸಿದ್ಧಪಡಿಸಲು ಹೇಳಿದೆ.

ಈ ನಮ್ಮ ಸಿನೆಮಾದಲ್ಲಿ ನಟರು ಬದಲಾಗಿದ್ದು ಇದೊಂದೇ ಅಲ್ಲಾ, ಇನ್ನೂ ಕೆಲವು ಪಾತ್ರಗಳು ಕೊನೆ ಕ್ಷಣದಲ್ಲಿ ಬದಲಾವಣೆ ಆಗಿದೆ. ಯಾರೋ ಮಾಡಬೇಕಿದ್ದ ಪಾತ್ರವನ್ನು ಇನ್ಯಾರೋ ಮಾಡುವಂತಾಯಿತು. ಸಿನೆಮಾಗಳು ತಯಾರಾಗುವುದೇ ಹೀಗೆ.

‍ಲೇಖಕರು ಮಂಸೋರೆ

January 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: